Explained: ದಿಢೀರ್ ಆಗಿ ಕ್ರಿಪ್ಟೋ ಮಾರುಕಟ್ಟೆ ಕುಸಿಯುತ್ತಿರುವುದೇಕೆ ಗೊತ್ತೇ? ಇಲ್ಲಿದೆ ಕಾರಣ

ಇತ್ತೀಚಿನ ನಾಲ್ಕೈದು ವರ್ಷಗಳಿಂದ ಜಗತ್ತಿನಾದ್ಯಂತ ಎಲ್ಲರ ಗಮನ ಸೆಳೆದಿದ್ದ ಕ್ರಿಪ್ಟೋ ಮಾರುಕಟ್ಟೆಯು ಈಗ ಮತ್ತೆ ಕುಸಿಯುವ ಲಕ್ಷಣಗಳನ್ನು ತೋರಿಸುತ್ತಿದೆ ಎಂದರೂ ತಪ್ಪಾಗಲಾರದು. ಕಳೆದ ಕೆಲ ಸಮಯದಿಂದ ಕ್ರಿಪ್ಟೋ ಮಾರುಕಟ್ಟೆ ಕುಸಿತದ ಮೆಟ್ಟಿಲುಗಳ ಮೂಲಕ ಇಳಿಯುತ್ತಲೇ ಇದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚಿನ ನಾಲ್ಕೈದು ವರ್ಷಗಳಿಂದ ಜಗತ್ತಿನಾದ್ಯಂತ ಎಲ್ಲರ ಗಮನ ಸೆಳೆದಿದ್ದ ಕ್ರಿಪ್ಟೋ ಮಾರುಕಟ್ಟೆಯು (Crypto market) ಈಗ ಮತ್ತೆ ಕುಸಿಯುವ ಲಕ್ಷಣಗಳನ್ನು ತೋರಿಸುತ್ತಿದೆ ಎಂದರೂ ತಪ್ಪಾಗಲಾರದು. ಕಳೆದ ಕೆಲ ಸಮಯದಿಂದ ಕ್ರಿಪ್ಟೋ ಮಾರುಕಟ್ಟೆ ಕುಸಿತದ ಮೆಟ್ಟಿಲುಗಳ ಮೂಲಕ ಇಳಿಯುತ್ತಲೇ ಇದೆ. ಅದೀಗ ಮತ್ತೆ ಮುಂದುವರೆದಿದ್ದು ಬಿಟ್ ಕಾಯಿನ್ (Bitcoin) ಹಾಗೂ ಇಥರ್ (Ether) ಕಳೆದ 18 ತಿಂಗಳುಗಳಲ್ಲೇ ಹೆಚ್ಚಿನ ಕುಸಿತವನ್ನು ಕಳೆದ ಮಂಗಳವಾರದಂದು ಕಂಡಿತು. ಕ್ರಿಪ್ಟೋಕರೆನ್ಸಿ (Crypto currency) ಕ್ಷೇತ್ರದಲ್ಲಿ ಬಿಟ್ ಕಾಯಿನ್ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದ್ದರೆ ಅದರ ನಂತರದ ಎರಡನೇ ಸ್ಥಾನವನ್ನು ಇಥರ್ ಆಕ್ರಮಿಸಿಕೊಂಡಿದೆ.

ಆದರೆ, ಕಳೆದ ಕೆಲ ಸಮಯದಿಂದ ಜಗತ್ತಿನ ಈ ಮೊದಲ ಎರಡು ಟೋಕನ್ ಗಳನ್ನು ಹೊರತುಪಡಿಸಿದರೆ ಇತರೇ ಬಗೆಯ ಟೋಕನ್ ಗಳು ಸಹ ಗಮನಾರ್ಹವಾಗಿ ಕುಸಿತ ಕಾಣುತ್ತಲೇ ಇದ್ದು ಅದೀಗ ದೀರ್ಘಾವಧಿಯ ಹೂಡಿಕೆದಾರರಲ್ಲಿ ಆತಂಕ ಮೂಡುವಂತೆ ಮಾಡಿದೆ ಎಂದರೂ ಅಚ್ಚರಿ ಪಡಬೇಕಾಗಿಲ್ಲ. ಹಾಗಾದರೆ ಇತ್ತೀಚಿನ ಈ ದಿಢೀರ್ ಕ್ರಿಪ್ಟೋ ಕುಸಿತಕ್ಕೆ ಏನು ಕಾರಣ? ಹೂಡಿಕೆದಾರರಿಗೆ ಮುಂದಿನ ದಿನಗಳು ಹೇಗಿರಲಿದೆ ಎಂಬೆಲ್ಲ ಪ್ರಶ್ನೆಗಳು ಈಗ ಉದ್ಭವಿಸಿವೆ.

ದಿಢೀರ್ ಕುಸಿತಕ್ಕೇನು ಕಾರಣ?
ಈಗ ಎಲ್ಲೆಡೆ ಹಣದುಬ್ಬರ ಎಂಬುದು ಮುನ್ನೆಲೆಗೆ ಬರುತ್ತಿದೆ. ಇದು ಅಮೆರಿಕವನ್ನು ಹೊರತುಪಡಿಸಿಲ್ಲ. ಕಳೆದ ವಾರ ಅಮೆರಿಕದಲ್ಲುಂಟಾದ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಾದ ಹಣದುಬ್ಬರ ಹಾಗೂ ಇದನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಯುಎಸ್ ಫೆಡೆರಲ್ ರಿಸರ್ವ್ ಗಳಿಂದ ಬಡ್ಡಿದರಗಳಲ್ಲಿ ಹೆಚ್ಚಿನ ತ್ವರಿತ ಏರಿಕೆಗಳಾಗಬಹುದೆಂಬ ಆತಂಕದಿಂದಾಗಿ ಕಳೆದ ಶುಕ್ರವಾರದಿಂದಲೇ ಕ್ರಿಪ್ಟೋ ಮಾರುಕಟ್ಟೆ ದಿಢೀರ್ ಕುಸಿತ ಕಾಣಲು ಪ್ರಾರಂಭಿಸಿತು ಎಂದು ಸದ್ಯದ ಸ್ಥಿತಿಗತಿಗಳಿಂದ ತಿಳಿದುಬಂದಿದೆ.

ಹಾಗೇ ನೋಡಿದರೆ ಕ್ರಿಪ್ಟೋ ಮಾರುಕಟ್ಟೆ ಸಾಂಪ್ರದಾಯಿಕ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಿನ್ನವಾಗಿದ್ದು ಸ್ವತಂತ್ರವಾಗಿ ನಡೆಯುತ್ತವೆ. ಈ ಹಿಂದೆಯೂ ಸಾಂಪ್ರದಾಯಿಕ ಮಾರುಕಟ್ಟೆಗಳಿಂದ ಭಿನ್ನವಾಗಿಯೇ ನಡೆದುಕೊಂಡು ಬಂದಿವೆ ಮತ್ತು ಹಾಗೆ ಅವು ನಡೆಯಬೇಕು ಕೂಡ. ಆದಾಗ್ಯೂ, ವಾಸ್ತವ ಜಗತ್ತಿನ ಸಂಪ್ರದಾಯಿಕ ಮಾರುಕಟ್ಟೆಯಲ್ಲಿನ ಚಂಚಲತೆಯು ಜಾಗತಿಕ ಆರ್ಥಿಕ ವಹಿವಾಟುಗಳ ಮೇಲೆ ಪರಿಣಾಮ ಬೀರಿದ್ದು ಇದಕ್ಕೆ ಸಂವೇದನಾಶೀಲತೆಯನ್ನು ವ್ಯಕ್ತಪಡಿಸುವ ಕ್ರಿಪ್ಟೋ ಮಾರುಕಟ್ಟೆಯೂ ಅದರ ಪ್ರಭಾವಕ್ಕೆ ಒಳಗಾಗಿರಬಹುದೆಂಬ ಲೆಕ್ಕಾಚಾರ ಮಾಡಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ವಿಪರೀತ ಸ್ಥಿತಿಗತಿಗಳೇ ಕಾರಣ
ಆದರೆ, ಕಳೆದ ಸೋಮವಾರ ಕ್ರಿಪ್ಟೋಗೆ ಸಂಬಂಧಿಸಿದಂತೆ ಕೆಟ್ಟ ಪ್ರಸಂಗವೊಂದು ನಡೆಯಿತು. ಕ್ರಿಪ್ಟೋ ಕರೆನ್ಸಿಯ ಲೀಡಿಂಗ್ ಫರ್ಮ್ ಆಗಿರುವ ಸೆಲ್ಸಿಯಸ್ ನೆಟ್ವರ್ಕ್ ತನ್ನ ವಿತ್ ಡ್ರಾವಲ್ ಗಳನ್ನು ಘನೀಕರಿಸಿತು (ಫ್ರೀಜ್ ಮಾಡಿತು). ಈ ಬಗ್ಗೆ ಸಂಸ್ಥೆಯು ತನ್ನ ಬ್ಲಾಗ್ ಪೋಸ್ಟಿನಲ್ಲಿ ವಿವರಣೆ ನೀಡಿದೆ. ತನ್ನ ಬ್ಲಾಗ್ ಪೋಸ್ಟಿನಲ್ಲಿ ಅದು "ಲಿಕ್ವಿಡಿಟಿ ಮತ್ತು ಕಾರ್ಯನಿರ್ವಹಣೆ ಸ್ಥಿರವಾಗಿರಿಸುವ ದೃಷ್ಟಿಯಿಂದ ಹಾಗೂ ನಮ್ಮ ಸಂಪತ್ತು/ಆಸ್ತಿಗಳನ್ನು ಸಂರಕ್ಷಿಸುವ ಉಪಕ್ರಮಗಳಾಗಿ ನಾವು ಖಾತೆಗಳ ಮಧ್ಯೆ ವ್ಯವಹಾರಗಳು ನಡೆಯುವುದನ್ನು ಈಗ ಮುಚ್ಚುತ್ತಿದ್ದೇವೆ" ಎಂದು ಬರೆದುಕೊಂಡಿದೆ. ಮುಂದುವರೆಯುತ್ತ ಅದು ಈ ಸ್ಥಿತಿಗೆ ಸದ್ಯ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ವಿಪರೀತ ಸ್ಥಿತಿಗತಿಗಳೇ ಕಾರಣ ಎಂದು ದೂಷಿಸಿದ್ದು ಸೆಲ್ಸಿಯಸ್ ಅನ್ನು ಮುಂಬರುವ ದಿನಗಳಲ್ಲಿ ಉತ್ತಮ ಸ್ಥಾನದಲ್ಲಿರಿಸುವ ದೃಷ್ಟಿಯಿಂದ ಪ್ರಸ್ತುತ ಕ್ರಮ ಅನಿವಾರ್ಯವಾಗಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: Business Idea: ಈ 5 ಉದ್ಯಮದಲ್ಲಿ ಸೋಲೇ ಇಲ್ಲ, ಗೆಲುವೇ ಎಲ್ಲ! ನೀವೂ ಶುರು ಮಾಡಿ ಕೋಟ್ಯಾಧಿಪತಿಯಾಗಿ

ಅಷ್ಟಕ್ಕೂ ಕಳೆದ ಬಾರಿಯ ಕುಸಿತ ಸಾಕಷ್ಟು ದೊಡ್ಡ ಮೊತ್ತದ್ದಾಗಿದ್ದು ಹೂಡಿಕೆದಾರರ ಏನಿಲ್ಲವೆಂದರೂ 40 ಬಿಲಿಯನ್ ಯುಎಸ್ ಡಾಲರ್ ನಿರ್ನಾಮವಾಗಿ ಹೋಗಿದೆ. ಇದು ಭಯಂಕರವಾದ ಆತಂಕದ ಅಲೆಯನ್ನೇ ಸೃಷ್ಟಿ ಮಾಡಿದ್ದು ಮಾರುಕಟ್ಟೆಯಲ್ಲಿ ಸದ್ಯದ ಪರಿಸ್ಥಿತಿ ಸ್ಥಿರವಾಗಿಲ್ಲ ಹಾಗೂ ಹೂಡಿಕೆದಾರರು ಆತಂಕದಲ್ಲೇ ಕಳೆಯುವಂತೆ ಆಗಿದೆ ಎನ್ನಲಾಗಿದೆ.

ಸೆಲ್ಸಿಯಸ್ ಏನು? ಈ ಬಗ್ಗೆ ಕೆಲ ಮಾಹಿತಿಗಳು
ಸಾಮಾನ್ಯವಾಗಿ ನಮಗೆ ಹಣ ಬೇಕೆಂದರೆ ನೀಡುವವರು ಯಾರು ಹೇಳಿ? ಹೌದು ಬ್ಯಾಂಕುಗಳಲ್ಲವೆ. ಅದರಂತೆ ಕ್ರಿಪ್ಟೋ ಜಗತ್ತಿನಲ್ಲಿ ಕ್ರಿಪ್ಟೋ ಕರೆನ್ಸಿಗಳನ್ನು ನೀಡುವಂತಹ ಬ್ಯಾಂಕ್ ಆಗಿದೆ ಸೆಲ್ಸಿಯಸ್ ನೆಟ್ವರ್ಕ್. ಬ್ಯಾಂಕುಗಳು ಹಣದ ವಿಷಯದಲ್ಲಿ ನಡೇದುಕೊಳ್ಳುವಂತೆಯೇ ಸೆಲ್ಸಿಯಸ್ ಕ್ರಿಪ್ಟೋ ವಿಷಯದಲ್ಲಿ ನಡೆದುಕೊಳ್ಳುತ್ತದೆ ಅರ್ಥಾತ್ ವ್ಯವಹರಿಸುತ್ತದೆ. ಅಂದರೆ ಗ್ರಾಹಕರು ಇಲ್ಲಿ ತಮ್ಮ ಕ್ರಿಪ್ಟೋಗಳನ್ನು ಡಿಪಾಸಿಟ್ ಮಾಡಬಹುದು ಹಾಗೂ ಅದರ ಮೇಲೆ ಬಡ್ಡಿ ಗಳಿಸಬಹುದು. ಅದರಂತೆ ತನ್ನಲ್ಲಿರುವ ಕ್ರಿಪ್ಟೋಗಳನ್ನು ಸೆಲ್ಸಿಯಸ್ ಇತರೆ ಬೇಕಾದವರಿಗೆ ಸಾಲದ ರೂಪದಲ್ಲಿಯೂ ಸಹ ನೀಡಿ ಅದರಿಂದ ಬಡ್ಡಿ ಮೂಲಕ ತಾನು ಗಳಿಸುತ್ತದೆ.

ಕ್ರಿಪ್ಟೋ ಸಾಲ ನೀಡುವಿಕೆಯ ಪ್ರಪಂಚದಲ್ಲಿ ಸೆಲ್ಸಿಯಸ್ ಒಂದು ದೊಡ್ಡ ನಾಯಕನಾಗಿ ಗುರುತಿಸಿಕೊಂಡಿದ್ದು ಹನ್ನೊಂದು ಬಿಲಿಯನ್ ಗಿಂತಲೂ ಹೆಚ್ಚಿನ ಅಸೆಟ್ ಹೊಂದಿದೆ. ಇದರಲ್ಲಿ ಕ್ರಿಪ್ಟೋ ಡಿಪಾಸಿಟ್ ಮಾಡುವವರು ಏನಿಲ್ಲವೆಂದರೂ 17% ರಿಂದ 20% ರಷ್ಟು ಬಡ್ಡಿದರಗಳನ್ನು ಗಳಿಸುತ್ತಾರೆ ಎನ್ನಲಾಗಿದೆ. ಇಂತಹ ಸೇವೆಗಳು ಆಕರ್ಷಕ ಕ್ಷೇತ್ರಗಳಾಗಿ ಕಂಡುಬಂದರೂ ಇಲ್ಲಿ ಎರಡು ಪ್ರಮುಖ ಅಂಶಗಳನ್ನು ಗುರುತಿಸಬಹುದು. ಮೊದಲನೇಯದಾಗಿ ಸಾಂಪ್ರದಾಯಿಕ ಬ್ಯಾಂಕುಗಳಂತೆ ಇದನ್ನು ಪ್ರವೇಶಿಸುವುದು ಕಷ್ಟದ ಕೆಲಸ ಖಂಡಿತವಲ್ಲ, ಇಲ್ಲಿನ ಆರ್ಥಿಕ ಸೇವೆಗಳು ಬ್ಯಾಂಕುಗಳಿಗಿಂತ ಬಲು ಸುಲಭ ಹಾಗೂ ಸರಳ. ಎರಡನೇಯದಾಗಿ ಬ್ಯಾಂಕುಗಳಿಗೆ ಇರುವಂತೆ ಇಂತಹ ಸೇವಾ ಕೇಂದ್ರಗಳಿಗೆ ಯಾವುದೇ ಗವರ್ನಿಂಗ್ ಬಾಡಿ ಇಲ್ಲದೆ ಇರುವುದು.

ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿರುವಂತೆ ಕಳೆದ ಮೇ 17 ರಂದು ಸೆಲ್ಸಿಯಸ್ ಹೊಂದಿದ್ದ ಅಸೆಟ್ಟುಗಳ ಮೌಲ್ಯ 12 ಬಿಲಿಯನ್ ಡಾಲರ್ ಗಿಂತಲೂ ಕಡಿಮೆಯಾಗಿತ್ತು ಹಾಗೂ ಇದು ಕಳೆದ ವರ್ಷ ಡಿಸೆಂಬರ್ 2021 ರಲ್ಲಿ 24 ಬಿಲಿಯನ್ ಗಳಷ್ಟಿತ್ತು ಎನ್ನಲಾಗಿದೆ.

ಈ ಕುಸಿತ ನಿಜಕ್ಕೂ ಆತಂಕಕಾರಿ ಆಗಿದೆಯೆ?
ಈ ತಿಂಗಳಿನಲ್ಲಿ ಉಂಟಾದ ಕ್ರಿಪ್ಟೋ ಕರೆನ್ಸಿಗಳ ಎರಡನೇ ಅತಿ ದೊಡ್ಡ ಕುಸಿತ ಇದಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಸದ್ಯ ಕ್ರಿಪ್ಟೋ ಜಗತ್ತಿನಲ್ಲಿ ಈಗ ಕ್ರಿಪ್ಟೋ ಕರೆನ್ಸಿಗಳ ಪ್ರದರ್ಶನದ ಬಗ್ಗೆ ಆತಂಕದ ಛಾಯೆ ಮೂಡಿದ್ದು ಇದರ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಧೋರಣೆ ಉಂಟಾಗುವಂತೆ ಮಾಡಿದೆ. ಸದ್ಯದ ಈ ನಕಾರಾತ್ಮಕತೆಯನ್ನು ಗಮನಿಸಿದರೆ ಶೀಘ್ರದಲ್ಲೇ ಮತ್ತೆ ಈ ನಿರ್ದಿಷ್ಟ ಮಾರುಕಟ್ಟೆ ತ್ವರಿತವಾಗಿ ಚೇತರಿಸಿಕೊಳ್ಳುವುದು ಅನುಮಾನವೆಂದೇ ಹೇಳಲಾಗುತ್ತಿದೆ.

ಜನವರಿ 2021 ರ ನಂತರದಲ್ಲಿ ಜಗತ್ತಿನಾದ್ಯಂತ ಈ ಕ್ರಿಪ್ಟೋ ಮಾರುಕಟ್ಟೆ ಮೌಲ್ಯ ಒಂದು ಟ್ರಿಲಿಯನ್ ಡಾಲರ್ ಗಿಂತ ಕಡಿಮೆಯಾಗಿದ್ದೇ ಇರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಈ ಕ್ಷೇತ್ರದ ಒಟ್ಟಾರೆ ಮಾರುಕಟ್ಟೆ ಮೌಲ್ಯ ಒಂದು ಟ್ರಿಲಿಯನ್ ಗಿಂತಲೂ ಕಡಿಮೆಯಾಗಿರುವುದಾಗಿ ತಿಳಿದುಬಂದಿದೆ.

ಇಥರ್ ಬೆಲೆಯಲ್ಲೂ ಕುಸಿತ
ಇನ್ನು ಬಿಟ್ಕಾಯಿನ್ ಬೆಲೆ ಬಗ್ಗೆ ಮಾತನಾಡುವುದಾದರೆ, ಕಳೆದ ವರ್ಷ ನವಂಬರ್ ಸಮಯದಲ್ಲಿ ದಾಖಲೆ ಮಟ್ಟದ 69,000 ಡಾಲರ್ ಮೌಲ್ಯವನ್ನು ಬಿಟ್ಕಾಯಿನ್ ತಲುಪಿತ್ತು. ತದನಂತರ ಅದರ ಮೌಲ್ಯದಲ್ಲಿ ಕುಸಿತ ಉಂಟಾಗುತ್ತ ಬಂದಿದ್ದು ಇಲ್ಲಿಯವರೆಗೂ ಏನಿಲವೆಂದರೂ ಅದರ ಬೆಲೆಯಲ್ಲಿ ಶೇ. 70 ರಷ್ಟು ಕುಸಿತವಾಗಿದೆ. ಮಂಗಳವಾರದಂದು ಬಿಟ್ಕಾಯಿನ್ ಟ್ರೇಡ್ ಆಗುತ್ತಿದ್ದ ಬೆಲೆ ಕೇವಲ 22,000 ಡಾಲರ್ ಆಗಿತ್ತು. ಅದೇ ಎರಡನೇ ಸ್ಥಾನದಲ್ಲಿರುವ ಇಥರ್ ಬೆಲೆಯಲ್ಲೂ ಕುಸಿತವಾಗಿದ್ದು ಅದು ಇಲ್ಲಿಯವರೆಗೆ 75% ರಷ್ಟು ಕುಸಿತ ಕಂಡಿದೆ. ಕಳೆದ ನವೆಂಬರ್ ಸಮಯದಲ್ಲಿ ಅದರ ಮೌಲ್ಯ 4,869 ಡಾಲರ್ ಗಳಷ್ಟಿತ್ತು.

ಇದನ್ನೂ ಓದಿ: Stock Market: ಈ 5 ಸಿಂಪಲ್​​ ಸೂತ್ರಗಳನ್ನು ಫಾಲೋ ಮಾಡಿ, ಆಮೇಲೆ ಸ್ಟಾಕ್​ ಮಾರ್ಕೆಟ್​ನಲ್ಲಿ ನೀವೇ ಕಿಂಗ್!

ಇತ್ತೀಚಿನ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿನ ಈ ದಿಢೀರ್ ಕುಸಿತವು ಸರ್ಕಾರದ ಮೇಲ್ವಿಚಾರಣೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಾಧ್ಯತೆಯಿದೆ. ಏತನ್ಮಧ್ಯೆ ಅಮೆರಿಕದಲ್ಲಿ ಇಬ್ಬರು ಸೆನೆಟರ್‌ಗಳು ಮಂಗಳವಾರದಂದು ಕ್ರಿಪ್ಟೋಕರೆನ್ಸಿ ಉದ್ಯಮಕ್ಕೆ ನಿಯಂತ್ರಕ ಚೌಕಟ್ಟನ್ನು ರಚಿಸಲು ಕಾನೂನನ್ನು ಪ್ರಸ್ತಾಪಿಸಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
Published by:Ashwini Prabhu
First published: