ರಾಜ್ಯ ರಾಜಕಾರಣ ರಂಗೇರುತ್ತಿದೆ. ಚುನಾವಣಾ ಜ್ವರ ಬಿಸಿಲಿಗಿಂತ ವೇಗವಾಗಿ ಜಾಸ್ತಿಯಾಗುತ್ತಲೆ ಇದೆ. ಈ ನಡುವೆ ಮಾಜಿ ಸಿಎಂ, ‘ಕರ್ನಾಟಕದ ಮಾಸ್ ಲೀಡರ್’ (mass leader of Karnataka) ಅಂತಲೆ ಕರೆಸಿಕೊಳ್ಳುವ ಸಿದ್ದರಾಮಯ್ಯ (Siddaramaiah) ಅವರ ಕ್ಷೇತ್ರದ ಬಗ್ಗೆ ಮಾತ್ರ ಕುತೂಹಲ ಮುಂದುವರೆದಿದೆ. ಚಾಮುಂಡೇಶ್ವರಿ ಕ್ಷೇತ್ರ (Chamundeshwari constituency) ತೊರೆದು ವರುಣಾದಲ್ಲಿ (Varun) ನೆಲೆಕಂಡುಕೊಂಡಿದ್ದ ಸಿದ್ದರಾಮಯ್ಯ, ಬಳಿಕ ಅಲ್ಲಿಂದ ಬಾದಾಮಿಯಲ್ಲಿ (Badami) ನಿಂತು ಗೆದ್ದಿದ್ದರು. ಈ ಬಾರಿ ಅವರಿಗೆ ಬೇರೆ ಬೇರೆ ಕಡೆಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನವೂ ಬಂದಿತ್ತು. ಬಳಿಕ ಅಳೆದು ತೂಗಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರವನ್ನು (Kolar assembly constituency) ಆಯ್ದುಕೊಂಡಿದ್ದರು. ಒಂದು ಹಂತದ ಪ್ರಚಾರವನ್ನೂ ನಡೆಸಿದ್ದರು. ಆದರೆ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಕಾಂಗ್ರೆಸ್ ಹೈಕಮಾಂಡ್ (Congress high command) ರೆಡ್ ಸಿಗ್ನಲ್ ನೀಡಿದೆ. ಹಾಗಾದ್ರೆ ಕೋಲಾರ ಕ್ಷೇತ್ರವೇನು ಸಿದ್ದರಾಮಯ್ಯಗೆ ಕಬ್ಬಿಣದ ಕಡಲೆಯೇ? ಹೈಕಮಾಂಡ್ ನಿರ್ಧಾರಕ್ಕೆ ಕಾರಣವೇನು? ಸಿದ್ದರಾಮಯ್ಯಗೆ ಬೇರೆ ಯಾವ ಕ್ಷೇತ್ರ ಸೂಕ್ತವಾಗಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…
ಕೋಲಾರದಿಂದ ಸ್ಪರ್ಧಿಸೋದಿಲ್ವಾ ಸಿದ್ದರಾಮಯ್ಯ?
ಈ ಬಾರಿ ಸಿದ್ದರಾಮಯ್ಯ ಯಾವ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಇಷ್ಟು ದಿನ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಅಂತ ಹೇಳಲಾಗಿತ್ತು. ಈ ಬಗ್ಗೆ ಅವರೇ ಹೇಳಿಕೊಂಡಿದ್ದು, ಒಂದು ಹಂತದ ಪ್ರಚಾರವನ್ನೂ ಪ್ರಾರಂಭಿಸಿದ್ದರು. ಇದೀಗ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡೋದಕ್ಕೆ ಕಾಂಗ್ರೆಸ್ ಹೈಕಮಾಂಡೇ ರೆಡ್ ಸಿಗ್ನಲ್ ನೀಡಿದೆ.
ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ
ನಿನ್ನೆ ನವದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಈ ಸಭೆ ಬಳಿಕ ರಾಹುಲ್ ಗಾಂಧಿ ಸಿದ್ದರಾಮಯ್ಯರ ಜೊತೆ ಪ್ರತ್ಯೇಕವಾಗಿ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರಂತೆ. ಈ ವೇಳೆ ಕೋಲಾರ ವಿಷಯ ಹಾಗೂ ಇತರ ಟಿಕೆಟ್ ಬಗ್ಗೆ ಮಾತುಕತೆ ನಡೆದಿದೆ. ಕೋಲಾರ ಕ್ಷೇತ್ರದ ವರದಿಗಳು ನಿಮಗೆ ಸೂಕ್ತ ಎನಿಸುತ್ತಿಲ್ಲ, ಇನ್ನೊಮ್ಮೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರಂತೆ.
ಇದನ್ನೂ ಓದಿ: Gujarat Model: ಬಿಜೆಪಿಯಲ್ಲಿ 'ಗುಜರಾತ್ ಮಾದರಿ' ಜಪ! ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲ್ವಂತೆ ಪಾಪ!
ಸಿದ್ದರಾಮಯ್ಯಗೆ ಹೈಕಮಾಂಡ್ ಹೇಳಿದ್ದೇನು?
ಕೋಲಾರ ಕಣ ಸಿದ್ದರಾಮಯ್ಯಗೆ ಸೇಫ್ ಅಲ್ವಾ, ತಮ್ಮ ಲಕ್ಕಿ ಕ್ಷೇತ್ರಕ್ಕೇ ವಾಪಾಸ್ ಆಗ್ತಿದ್ದಾರಾ ಸಿದ್ದರಾಮಯ್ಯ? ಹೀಗೊಂದು ಪ್ರಶ್ನೆ ಇದೀಗ ಕಾಂಗ್ರೆಸ್ ಅಂಗಳದಲ್ಲಿ ಓಡಾಡುತ್ತಿದೆ. ಅದಕ್ಕೆ ಕಾರಣ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಸಲಹೆ. ಕೋಲಾರದಿಂದ ಸ್ಪರ್ಧಿಸಿದ್ರೆ ನೀವು ಸೋಲುವ ಸಾಧ್ಯತೆ ಇದೆ. ನಿಮ್ಮ ವಿರುದ್ಧ ವಿರೋಧಿಗಳು ಚಕ್ರವ್ಯೂಹ ಹೆಣೆಯುತ್ತಿದ್ದಾರೆ ಅಂತ ಹೈಕಮಾಂಡ್ ಹೇಳಿದ್ಯಂತೆ. ಅಲ್ಲದೇ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರಂತೆ.
ಕೋಲಾರಕ್ಕಿಂತ ವರುಣಾ ಸೇಫ್ ಅಂತೆ!
ಕೋಲಾರಕ್ಕಿಂತ ಸಿದ್ದರಾಮಯ್ಯಗೆ ವರುಣಾ ಸೇಫ್ ಅಂತೆ. ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿದರೆ ಸಿದ್ದು ಗೆಲ್ಲೋ ಸಾಧ್ಯತೆ ಹೆಚ್ಚಂತೆ. ಹೀಗಾಗಿ ಕೋಲಾರ ಬೇಡ, ವರುಣಾದಿಂದ ಸ್ಪರ್ಧಿಸಿ ಅಂತ ಹೈಕಮಾಂಡ್ ಸಲಹೆ ನೀಡಿದೆ.
ಮನೆದೇವರಿಂದಲೂ ಇದೇ ಸಲಹೆ!
ಈ ಹಿಂದೆ ಕೋಲಾರದಲ್ಲಿ ಗೆಲುವಿನ ಬಗ್ಗೆ ಸಿದ್ದು ಮನೆದೇವರೂ ಸಮ್ಮತಿಸಿರಲಿಲ್ಲ. ಚಿಕ್ಕತಾಯಮ್ಮ ದೇವಿ ಸಿದ್ದು ಕೋಲಾರ ಸ್ಪರ್ಧೆಗೆ ಸಮ್ಮತಿಸಿರಲಿಲ್ಲ. ಕೋಲಾರದ ಜೊತೆ ಇನ್ನೊಂದು ಕಡೆ ಸ್ಪರ್ಧೆಗೆ ದೇವರು ಸೂಚಿಸಿತ್ತು ಎನ್ನಲಾಗಿದೆ.
ಸಿದ್ದುಗೆ ಕೋಲಾರ ಕಷ್ಟವೇಕೆ?
ಕೋಲಾರದಲ್ಲಿ ಕಾಂಗ್ರೆಸ್ ಒಳೇಟಿನ ಆತಂಕ ಇದ್ದೇ ಇದೆ. ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಗುದ್ದಾಟ ಎಲ್ಲರಿಗೂ ಗೊತ್ತಿರುವಂತದ್ದೇ. ಈ ರೀತಿ ಕೈ ಭಿನ್ನಮತ ಸಿದ್ದು ಗೆಲುವಿಗೆ ತೊಡಕಾಗುವ ಭಯ ಇದೆ.
ಕೈ ಗುಂಪುಗಾರಿಕೆಯಿಂದ ಆತಂಕ
ಇನ್ನು ಕೋಲಾರದಲ್ಲಿ ಕಾಂಗ್ರೆಸ್‌ನಲ್ಲಿ ಹೆಚ್ಚಿರುವ ಗುಂಪುಗಾರಿಕೆ ಗೆಲುವಿಗೆ ತೊಡಕಾಗಿದೆ. ಕೋಲಾರ ನಗರ ಭಾಗದಲ್ಲಿ ಮಾತ್ರ ಕಾಂಗ್ರೆಸ್ಗೆ ಒಲವಿದೆ. ಆದರೆ ಕೋಲಾರ ಗ್ರಾಮೀಣ ಭಾಗದಲ್ಲಿ JDS, ವರ್ತೂರು ಹವಾ ಇದೆ. ಈ ಬಾರಿ ಮುಸ್ಲಿಂ ಮತಗಳು ‘ಕೈ’ಕೊಡುವ ಆತಂಕ ಇದೆ. ಇದಕ್ಕೆ ಕಾರಣ ಕ್ಲಾಕ್‌ಟವರ್, ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಮೌನವಾಗಿದ್ದಿದ್ದು. ಇದರಿಂದ ಮುಸ್ಲಿಂ ಮತಗಳು ದೂರ ಆಗುವ ಆತಂಕ ಇದೆ.
ಸಿದ್ದರಾಮಯ್ಯಗೆ ವರುಣಾ ಕ್ಷೇತ್ರವೇ ಲಕ್ಕಿ ಏಕೆ?
ಸಿದ್ದರಾಮಯ್ಯ ಅವರಿಗೆ ವರುಣಾ ವಿಧಾನಸಭಾ ಕ್ಷೇತ್ರವೇ ಲಕ್ಕಿ ಎನ್ನಲಾಗಿದೆ. ವರುಣಾದಲ್ಲಿ ಸಿದ್ದರಾಮಯ್ಯ 2 ಬಾರಿ ಗೆದ್ದಿದ್ದಾರೆ. ಸಿದ್ದರಾಮಯ್ಯ 2008ರಲ್ಲಿ ವರುಣಾದಿಂದ ಗೆದ್ದು ಪ್ರತಿಪಕ್ಷ ನಾಯಕರಾಗಿದ್ದರು. 2008ರಲ್ಲಿ 18 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಇದಾದ ಬಳಿಕ 2013ರಲ್ಲಿ ವರುಣಾದಿಂದ ಗೆದ್ದು ಸಿಎಂ ಆಗಿದ್ದರು, ಈ ವೇಳೆ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿದ್ದರು.
ವರುಣಾದಲ್ಲಿದ್ಯಂತೆ ಸಿದ್ದರಾಮಯ್ಯ ಅಲೆ!
ವರುಣಾದಲ್ಲಿ ಸಿದ್ದರಾಮಯ್ಯ ಪರವಾದ ಅಲೆ ಇದೆ, ಇಲ್ಲಿಂದ ಸ್ಪರ್ಧೆ ಮಾಡಿದ್ರೆ ಅನಾಯಸವಾಗಿ ಗೆಲುವು ಸಾಧಿಸಬಹುದು ಅಂತ ವರದಿ ಹೇಳಿದ್ಯಂತೆ. ಈ ಬಾರಿ ಕಾಂಗ್ರೆಸ್ ಪರವಾಗಿ ಅಲೆ ಎಂಬ ವಿಶ್ಲೇಷಣೆ ಇದ್ದು, ಮತ್ತೊಮ್ಮೆ ಸಿಎಂ ಕನಸು ಕಾಣ್ತಿರುವ ಸಿದ್ದುಗೆ ಗೆಲುವು ಅನಿವಾರ್ಯವಾಗಿದೆ. ಬೇರೆ ಕಡೆ ಸ್ಪರ್ಧಿಸಿದ್ರೆ ಪಕ್ಷದವರಿಂದಲೇ ಒಳೇಟಿನ ಆತಂಕ ಹಾಗಾಗಿ, ವರುಣಾದಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ