Explainer: ಅಡುಗೆ ಎಣ್ಣೆ ಬೆಲೆ ಏರಿಕೆಯಾಗುತ್ತಿರುವುದರ ಹಿಂದಿನ ಕಾರಣವೇನು..? ದೇಶದ ಮೇಲಿನ ಪರಿಣಾಮವೇನು..?

ಆದಾಯದಲ್ಲಿನ ಹೆಚ್ಚಳ ಹಾಗೂ ಬದಲಾಗುತ್ತಿರುವ ಆಹಾರ ಪದ್ಧತಿಯ ಕಾರಣದಿಂದಾಗಿ, ಹಲವಾರು ವರ್ಷಗಳಿಂದ ಖಾದ್ಯ ತೈಲಗಳ ಬಳಕೆಯ ಪ್ರಮಾಣ ಹೆಚ್ಚಾಗುತ್ತಲೇ ಬಂದಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಪೆಟ್ರೋಲ್​ ಬೆಲೆ ಏರಿಕೆಯಂತೆ ಅಡುಗೆ ಎಣ್ಣೆ ಕೂಡ ಗಗನಕ್ಕೆ ಏರುತ್ತಿರುದೆ. ಇದರಿಂದಾಗಿ ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ತಾರಕಕ್ಕೇರಿವೆ. ಅದಕ್ಕೆ ಕಾರಣವೇನು ಮತ್ತು ಬೆಲೆ ನಿಯಂತ್ರಣಕ್ಕೆ ಸರಕಾರದ ಮುಂದಿರುವ ಆಯ್ಕೆಗಳೇನು ಎಂಬುದರ ಕುರಿತು ಒಂದು ನೋಟ ಇಲ್ಲಿದೆ.  ಗ್ರಾಹಕ ವ್ಯವಹಾರಗಳ ವಿಭಾಗದ ವೆಬ್‍ಸೈಟ್‍ನಲ್ಲಿ ತೋರಿಸಲಾದ ದತ್ತಾಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಇಡೀ ದೇಶಾದ್ಯಂತ ಕಡಲೇಕಾಯಿ ಎಣ್ಣೆ, ಸಾಸಿವೆ ಎಣ್ಣೆ, ವನಸ್ಪತಿ, ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ತಾಳೆ ಎಣ್ಣೆ ಮುಂತಾದ ಆರು ಖಾದ್ಯ ತೈಲಗಳ ದರ 20% ದಿಂದ 50% ನಡುವೆ ಏರಿಕೆಯಾಗಿದೆ. ಸಾಸಿವೆ ಎಣ್ಣೆಯ (ಪ್ಯಾಕ್ಡ್) ಚಿಲ್ಲರೆ ದರ 44% ಹೆಚ್ಚಾಗಿದ್ದು, ಕಳೆದ ವರ್ಷ ಮೇ 28ಕ್ಕೆ ಒಂದು ಕೆಜಿಗೆ 118 ರೂ. ದರವಿದ್ದು ಈ ವರ್ಷ ಮೇ 28ಕ್ಕೆ 171 ರೂ. ಆಗಿದೆ. ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಯು ಕೂಡ ಕಳೆದ ವರ್ಷಕ್ಕಿಂತ 50% ಹೆಚ್ಚಾಗಿದೆ.

    ವಾಸ್ತವದಲ್ಲಿ, ಈ ಎಲ್ಲಾ ಆರು ಖಾದ್ಯ ತೈಲಗಳ ಸರಾಸರಿ ಚಿಲ್ಲರೆ ದರಗಳು ಮೇ 2021ರಲ್ಲಿ 11 ವರ್ಷಗಳ ಗರಿಷ್ಠ ಮಟ್ಟಕ್ಕೇರಿತು. ಕೋವಿಡ್ -19 ಕಾರಣದಿಂದ ಜನರ ಆದಾಯ ಕಡಿಮೆ ಆಗಿರುವಂತಹ ಈ ಸಂದರ್ಭದಲ್ಲಿ, ಖಾದ್ಯ ತೈಲಗಳ ಬೆಲೆ ಗಗನಕ್ಕೇರಿದೆ.



    ಭಾರತದಲ್ಲಿ ಖಾದ್ಯ ತೈಲಗಳ ಬಳಕೆಯ ಪ್ರಮಾಣ ಯಾವ ಮಟ್ಟದಲ್ಲಿದೆ?
    ಆದಾಯದಲ್ಲಿನ ಹೆಚ್ಚಳ ಹಾಗೂ ಬದಲಾಗುತ್ತಿರುವ ಆಹಾರ ಪದ್ಧತಿಯ ಕಾರಣದಿಂದಾಗಿ, ಹಲವಾರು ವರ್ಷಗಳಿಂದ ಖಾದ್ಯ ತೈಲಗಳ ಬಳಕೆಯ ಪ್ರಮಾಣ ಹೆಚ್ಚಾಗುತ್ತಲೇ ಬಂದಿದೆ. ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಬಳಸುತ್ತಾರೆ, ಸೂರ್ಯಕಾಂತಿ ಮತ್ತು ಸೋಯಾ ಎಣ್ಣೆಯಂತಹ ಸಂಸ್ಕರಿತ ಎಣ್ಣೆಗಳನ್ನು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.



    1993-94 ಮತ್ತು 2004-2005ರ ಮಧ್ಯೆ, ಖಾದ್ಯ ತೈಲಗಳ ಮಾಸಿಕ ತಲಾ ಬಳಕೆಯು ಗ್ರಾಮೀಣ ಪ್ರದೇಶಗಳಲ್ಲಿ 0.37 ಕೆಜಿಯಿಂದ 0.48 ಕೆಜಿಯವರೆಗೆ ಮತ್ತು ನಗರ ಪ್ರದೇಶಗಳಲ್ಲಿ 0.56 ಕೆಜಿ ಯಿಂದ 0.66 ಕೆಜಿಯಷ್ಟು ಹೆಚ್ಚಾಗಿದೆ. 2011-12ರ ಹೊತ್ತಿಗೆ ಗ್ರಾಮೀಣ ಪ್ರದೇಶದಲ್ಲಿ ಅದು 0.67 ಕೆಜಿ ಮತ್ತು ನಗರ ಪ್ರದೇಶಗಳಲ್ಲಿ ಅದು 0.85 ಕೆಜಿಗೆ ಏರಿಕೆ ಕಂಡಿದೆ. ಅದಕ್ಕಿಂತ ಹೆಚ್ಚಿನ ಹೋಲಿಕೆ ಮಾಡಲು ಅಂಕಿ ಅಂಶಗಳು ಲಭ್ಯವಿಲ್ಲದಿದ್ದರೂ, ದೇಶಿಯ ಮೂಲ ಮತ್ತು ಆಮದುಗಳ ಮೂಲಕ ಸಸ್ಯ ಜನ್ಯ ಎಣ್ಣೆಗಳ ತಲಾ ಲಭ್ಯತೆಯ ಸ್ಥಿರ ಏರಿಕೆ, ಆ ತೈಲಗಳ ಬೇಡಿಗೆ ಇನ್ನೂ ಹೆಚ್ಚಾಗಲಿದೆ ಎಂಬುದನ್ನು ಸೂಚಿಸುತ್ತದೆ.


    ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಸಸ್ಯ ಜನ್ಯ ತೈಲಗಳ ತಲಾ ಲಭ್ಯತೆಯು , ದೇಶದಲ್ಲಿ ವಾರ್ಷಿಕ 19.10 ಕೆಜಿಯಿಂದ 19.80 ಕೆಜಿ ವ್ಯಾಪ್ತಿಯಲ್ಲಿದೆ.



    ದೇಶಿಯ ಉತ್ಪಾದನೆ ಮತ್ತು ಆಮದು ಪ್ರಮಾಣದ ಮಟ್ಟ ಎಷ್ಟು?
    ಕೃಷಿ ಇಲಾಖೆಯ ಪ್ರಕಾರ, 2015-16 ರಿಂದ 2019-20ರ ಅವಧಿಯ ನಡುವೆ, ಸಸ್ಯಜನ್ಯ ತೈಲಗಳ ಬೇಡಿಕೆ, 23.48-25.92 ಮಿಲಿಯನ್ ಟನ್‍ಗಳ ಶ್ರೇಣಿಯಲ್ಲಿತ್ತು. ಆದರೆ ಈ ಸಮಯದಲ್ಲಿ ದೇಶಿಯ ಪೂರೈಕೆ ತುಂಬಾ ಕಡಿಮೆ ಇದ್ದು, 8.63-10.65 ಮಿಲಿಯನ್ ಟನ್ ವ್ಯಾಪ್ತಿಯಲ್ಲಿತ್ತು.



    2019-20ರ ಅವಧಿಯಲ್ಲಿ, ಖಾದ್ಯ ತೈಲದ ಬೇಡಿಕೆಯ ಪ್ರಮಾಣ 24 ಮಿಲಿಯನ್ ಟನ್‍ನಷ್ಟಿತ್ತು, ಆದರೆ ಪ್ರಾಥಮಿಕ ಮೂಲ (ಸಾಸಿವೆ ಬೀಜ, ಶೇಂಗಾ ಬೀಜ ಇತ್ಯಾದಿ) ಮತ್ತು ದ್ವಿತೀಯ ಮೂಲ (ತೆಂಗಿನ ಕಾಯಿ, ತಾಳೆ, ರೈಸ್ ಬ್ರಾನ್ ಎಣ್ಣೆ, ಹತ್ತಿ ಬೀಜ) ಎರಡರಿಂದಲೂ ಖಾದ್ಯ ತೈಲದ ದೇಶೀಯ ಲಭ್ಯತೆ ಕೇವಲ 10.65 ಮಿಲಿಯನ್ ಟನ್‍ಗಳಷ್ಟು ಮಾತ್ರ ಇತ್ತು. ಅಂದರೆ ಸುಮಾರು 13 ಮಿಲಿಯನ್ ಟನ್‍ಗಳಷ್ಟು ಅಂತರವಿತ್ತು.


    ಹಾಗಾಗಿ, ಭಾರತ ಆ ಬೇಡಿಕೆಯನ್ನು ಪೂರೈಸಲು ಆಮದನ್ನು ಅವಲಂಬಿಸಿದೆ. 2019 -20 ರಲ್ಲಿ ಭಾರತ 61.559 ಕೋಟಿ ಮೊತ್ತದ, ಸುಮಾರು 13.35 ಮಿಲಿಯನ್ ಟನ್‍ಗಳಷ್ಟು ಅಥವಾ ಬೇಡಿಕೆ 56% ಭಾಗದಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಂಡಿತು. ಇದು ಮುಖ್ಯವಾಗಿ ತಾಳೆ (7 ಮಿಲಿಯನ್ ಟನ್), ಸೋಯಾಬಿನ್ (3.5 ಮಿಲಿಯನ್ ಟನ್) ಮತ್ತು ಸೂರ್ಯಕಾಂತಿ (2.5 ಮಿಲಿಯನ್ ಟನ್) ತೈಲಗಳನ್ನು ಒಳಗೊಂಡಿತ್ತು. ಮುಖ್ಯವಾಗಿ, ಅರ್ಜೆಂಟೀನಾ ಮತ್ತು ಬ್ರೆಜಿಲ್‍ನಿಂದ ಸೋಯಾ ತೈಲ; ಇಂಡೋನೇಶಿಯಾ ಮತ್ತು ಮಲೇಶಿಯಾದಿಂದ ತಾಳೆ ಎಣ್ಣೆ, ಉಕ್ರೇನ್‌ ಮತ್ತು ಅರ್ಜೆಂಟೀನಾದಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.



    ಬೆಲೆ ಏರಿಕೆಗೆ ಕಾರಣವೇನು?
    ಸ್ಥಳೀಯ ಬೆಲೆ ಏರಿಕೆಯ ಮುಖ್ಯ ಕಾರಣ, ಅಂತರಾಷ್ಟ್ರೀಯ ಬೆಲೆಗಳಲ್ಲಿನ ಏರಿಕೆ, ಏಕೆಂದರೆ ಭಾರತ ಸ್ಥಳೀಯ ಬೇಡಿಕೆಯ 56% ಪ್ರಮಾಣವನ್ನು ಆಮದಿನ ಮೂಲಕವೇ ಪೂರೈಸುತ್ತದೆ. ಹಲವಾರು ಕಾರಣಗಳಿಂದಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಖಾದ್ಯ ತೈಲದ ಬೆಲೆ ಗಗನಕ್ಕೇರಿದೆ.


    ಮೇ 25ರಂದು, ಕಚ್ಚಾ ತಾಳೆ ಎಣ್ಣೆಯ ಬೆಲೆ (ಬುರ್ಸಾ ಮಲೇಶಿಯಾ ಉತ್ಪನ್ನಗಳ ವಿನಿಮಯ ಕೇಂದ್ರದಲ್ಲಿ ಹೆಚ್ಚು ಸಕ್ರೀಯ ವ್ಯಾಪಾರ ಮಾಡುವ ಭವಿಷ್ಯದ ಒಪ್ಪಂದಕ್ಕಾಗಿ) ಟನ್‍ಗೆ 3,890 ರಿಂಗಿಟ್ ಎಂದು ಉಲ್ಲೇಖಿಸಲಾಗಿತ್ತು, ಅದರ ಹೋದ ವರ್ಷದ ದರ 2,281 ರಿಂಗಿಟ್. ಚಿಕಾಗೋ ಬೋರ್ಡ್ ಆಫ್ ಟ್ರೇಡ್‍ನಲ್ಲಿ (CBOT), ಕಳೆದ ವರ್ಷದ ಮೇನಲ್ಲಿ 306.16 ಡಾಲರ್ ದರಕ್ಕೆ ಹೋಲಿಸಿದರೆ, ಮೇ24 ರಂದು , ಜುಲೈ ವಿತರಣೆಯ ಸೋಯಾಬಿನ್ ಮುಕ್ತಾಯದ ದರ ಟನ್‍ಗೆ 559.51 ಡಾಲರ್ ಆಗಿತ್ತು. ಚಿಕಾಗೋ ಬೋರ್ಡ್ ಆಫ್ ಟ್ರೇಡ್ ಮತ್ತು ಮಲೇಶಿಯನ್ ಪಾಮ್ ಆಯಿಲ್‍ನಲ್ಲಿನ ದರಗಳು, ಭಾರತೀಯರು ಖಾದ್ಯ ತೈಲಗಳಿಗೆ ಪಾವತಿಸುವ ದರಗಳನ್ನು ನಿರ್ಧರಿಸುತ್ತವೆ.


    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳ ಬದಲವಣೆಯ ಸೂಚಕವಾಗಿರುವ, ಸಸ್ಯ ಜನ್ಯ ತೈಲಗಳ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‍ಎಒ) ಬೆಲೆ ಸೂಚ್ಯಾಂಕ (2014-2016=100) ಸಹ ಈ ವರ್ಷದ ಏಪ್ರಿಲ್‍ನಲ್ಲಿ 162ಕ್ಕೆ ಏರಿದೆ. ಅದು ಕಳೆದ ವರ್ಷ ಏಪ್ರಿಲ್‍ನಲ್ಲಿ 81 ಆಗಿತ್ತು.


    ಆದರೆ ಅಂತರಾಷ್ಟೀಯ ಬೆಲೆ ಏರಿಕೆಗೆ ಕಾರಣವೇನು?
    ಸಾಲ್ವೆಂಟ್ ಎಕ್ಸ್ಟ್ರಾಕ್ರರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಬಿ ವಿ ಮೆಹ್ತಾ ಅವರ ಪ್ರಕಾರ, ಸಸ್ಯ ಜನ್ಯ ಎಣ್ಣೆಯಿಂದ ಜೈವಿಕ ಇಂಧನ ತಯಾರಿಸಬೇಕೆಂಬ ಒತ್ತಡ ತೈಲ ಬೆಲೆ ಏರಿಕೆಯ ಕಾರಣಗಳಲ್ಲಿ ಒಂದು ಎಂದು ಹೇಳಿದ್ದಾರೆ.


    “ಆಹಾರ ಬುಟ್ಟಿಯಿಂದ ಇಂಧನ ಬುಟ್ಟಿಗೆ ಖಾದ್ಯ ತೈಲಗಳ ವರ್ಗಾವಣೆ ಆಗುತ್ತಿದೆ” ಎಂದಿರುವ ಮೆಹ್ತಾ, ಅಮೆರಿಕಾ, ಬ್ರೆಜಿಲ್ ಮತ್ತು ಇತರ ರಾಷ್ಟ್ರಗಳಲ್ಲಿ ಸೋಯಾಬಿನ್ ತೈಲದಿಂದ ನವೀಕರಿಸಬಹುದಾದ ಇಂಧನವನ್ನು ತಯಾರಿಸಬೇಕೆಂಬ ದಾಹ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ. ಕೋವಿಡ್-19 ಹೊರತಾಗಿಯೂ ಖಾದ್ಯ ತೈಲದ ಅಂತಾರಾಷ್ಟ್ರೀಯ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಅವರು.


    ಚೀನಾದಿಂದ ಖರೀದಿ, ಮಲೇಶಿಯಾದಲ್ಲಿ ಕಾರ್ಮಿಕರ ಸಮಸ್ಯೆಗಳು, ತಾಳೆ ಮತ್ತು ಸೋಯಾ ಉತ್ಪಾದಿಸುವ ಪ್ರದೇಶಗಳ ಮೇಲೆ ಲಾ ನಿನಾದ ಪರಿಣಾಮ ಮತ್ತು ಇಂಡೋನೇಶೀಯಾ ಮತ್ತು ಮಲೇಶಿಯಾದಲ್ಲಿ ಕಚ್ಚಾ ತಾಳೆ ಎಣ್ಣೆ ಮೇಲಿನ ರಫ್ತು ಸುಂಕ ಇತ್ಯಾದಿ ಕಾರಣಗಳು ಕೂಡ ಸೇರಿವೆ.


    ಎಫ್‍ಎಒ ವರದಿಗಳ ಪ್ರಕಾರ, “ಅಮೆರಿಕದ ಸೋಯಾ ಬೆಳೆಯುವ ಮುಖ್ಯ ಪ್ರದೇಶಗಳಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಗಿಡಗಳನ್ನು ನೆಟ್ಟಿರುವುದು, ಶುಷ್ಕ ಪರಿಸ್ಥಿತಿ ಮತ್ತು ಸರಾಸರಿಗಿಂತ ಕಡಿಮೆ ತಾಪಮಾನ, 2021/22 ಅವಧಿಯ ಪೂರೈಕೆಯ ಸಂಭಾವ್ಯತೆಯ ಬಗ್ಗೆ ಅನುಮಾನಗಳನ್ನು ಮೂಡಿಸುತ್ತಿದೆ”.



    ಸರಕಾರದ ಮುಂದಿರುವ ಮಾರ್ಗಗಳೇನು?
    ಆಮದು ಸುಂಕ ಕಡಿಮೆ ಮಾಡುವುದು ತೈಲ ಬೆಲೆಯ ಇಳಿಕೆಗೆ ಇರುವ ಅಲ್ಪಾವಧಿಯ ಆಯ್ಕೆಗಳಲ್ಲಿ ಒಂದಾಗಿದೆ. ಎಸ್‍ಇಎಐ ಪ್ರಕಾರ, ಕೃಷಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕರ ಹಾಗೂ ಸಮಾಜ ಕಲ್ಯಾಣ ಕರ ಸೇರಿದಂತೆ ಆಮದು ಸುಂಕದ ಪರಿಣಾಮಕಾರಿ ದರವು ಫೆಬ್ರವರಿ 2, 2021ರಿಂದ 35.75% ರಷ್ಟಿದೆ.



    ‘ಸಂಸ್ಕರಿಸಿದ, ಬ್ಲೀಚ್ ಮಾಡಲ್ಪಟ್ಟ ಮತ್ತು ವಾಸನೆರಹಿತ ತಾಳೆ ಎಣ್ಣೆ (RBD)’ ಮೇಲಿನ ಪರಿಣಾಮಕಾರಿ ಆಮದು ಸುಂಕ 59.40% ಇದೆ. ಅಂತೆಯೇ ಕಚ್ಚಾ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆಯ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ಪರಿಣಾಮಕಾರಿ ಆಮದು ಸುಂಕವು 38.50% ದಿಂದ 49.50%ದಷ್ಟಿದೆ. ಕಚ್ಚಾ ತಾಳೆ ಎಣ್ಣೆಯ ಆಮದು ನೀತಿ “ಉಚಿತ” ಹಾಗೂ RBD ತಾಳೆ ಎಣ್ಣೆಯ ನೀತಿ “ನಿರ್ಭಂಧಿತ” ಆಗಿದೆ. ಸರಕಾರ ಸಂಸ್ಕರಿತ ತಾಳೆ ಎಣ್ಣೆಯ ಆಮದು ಸುಂಕವನ್ನು ಕಡಿಮೆ ಮಾಡಿದರೆ , ಬೆಲೆ ಕೂಡಲೇ ಇಳಿಕೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



    ಆದರೆ ಖಾದ್ಯ ತೈಲ ಉದ್ಯಮವು ತೆರಿಗೆಯನ್ನು ಕಡಿಮೆ ಮಾಡುವುದರ ಪರವಾಗಿ ಇಲ್ಲ. ಆಮದು ಸುಂಕ ಕಡಿಮೆ ಮಾಡಿದರೆ ಅಂತಾರಾಷ್ಟ್ರೀಯ ಬೆಲೆಗಳು ಹೆಚ್ಚಾಗುತ್ತವೆ, ಸರಕಾರಕ್ಕೆ ಆದಾಯವೂ ದೊರಕುವುದಿಲ್ಲ ಮತ್ತು ಗ್ರಾಹಕರಿಗೂ ಲಾಭವಾಗುವುದಿಲ್ಲ ಎಂದು ಮೆಹ್ತಾ ಅವರು ತಿಳಿಸಿದ್ದು, ಖಾದ್ಯ ತೈಲಗಳಿಗೆ ಸಬ್ಸಿಡಿ ನೀಡಬೇಕು ಮತ್ತು ಸಾರ್ವಜನಿಕ ವಿರತಣಾ ವ್ಯವಸ್ಥೆಯ ಅಡಿಯಲ್ಲಿ ಅವು ಬಡವರಿಗೆ ಲಭ್ಯ ಆಗುವಂತೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    First published: