• Home
 • »
 • News
 • »
 • explained
 • »
 • Siddeshwar Swamiji: ಬಿಳಿ ಬಟ್ಟೆಯೇ ಶೃಂಗಾರ, ಜೇಬು ಇಲ್ಲದ ಫಕೀರ! 'ಜ್ಞಾನಯೋಗಿ' ಸಿದ್ದೇಶ್ವರರ ಹೆಜ್ಜೆ ಗುರುತು ಇಲ್ಲಿವೆ

Siddeshwar Swamiji: ಬಿಳಿ ಬಟ್ಟೆಯೇ ಶೃಂಗಾರ, ಜೇಬು ಇಲ್ಲದ ಫಕೀರ! 'ಜ್ಞಾನಯೋಗಿ' ಸಿದ್ದೇಶ್ವರರ ಹೆಜ್ಜೆ ಗುರುತು ಇಲ್ಲಿವೆ

ಸಿದ್ದೇಶ್ವರ ಸ್ವಾಮೀಜಿ

ಸಿದ್ದೇಶ್ವರ ಸ್ವಾಮೀಜಿ

ಸಿದ್ದೇಶ್ವರ ಶ್ರೀಗಳು ಹೇಗಿದ್ದರು? ಅವರು ಬಿಳಿ ಬಟ್ಟೆಯನ್ನೇ ಯಾಕೆ ತೊಡುತ್ತಿದ್ದರು? ಮಗುವಿನಂತೆ ಕಾಣುತ್ತಿದ್ದ ಸರಳ ಸಂತ ಕೋಪ ಮಾಡಿಕೊಳ್ಳುತ್ತಿದ್ದರಾ? ಅವರ ಕೋಪ ಯಾರ ಮೇಲೆ? ಜ್ಞಾನಯೋಗಾಶ್ರಮ ಸರ್ವಧರ್ಮ ಸಮನ್ವಯದ ಕೇಂದ್ರವಾಗಿದ್ದು ಹೇಗೆ? ಈ ಬಗ್ಗೆ ಆಶ್ರಮದ ಭಕ್ತರೂ, ಸ್ವಾಮೀಜಿಗಳನ್ನು ಹತ್ತಿರದಿಂದ ನೋಡಿದವರೂ ಆದ ಕಾಲೇಜ್ ಉಪನ್ಯಾಸಕ ಪ್ರಭುಲಿಂಗ ಗುಂಜೆಟ್ಟಿ ಎಂಬುವರು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Karnataka, India
 • Share this:

ವಿಜಯಪುರ: ‘ಶರಣರ ಗುಣ ಮರಣದಲ್ಲಿ ನೋಡು’ ಅಂತಾರೆ. ಜ್ಞಾನಯೋಗಾಶ್ರಮದ (Jnana Yogashrama) ಶ್ರೀ ಸಿದ್ದೇಶ್ವರ ಸ್ವಾಮೀಜಿ (Sri Siddeshwar Swamiji) ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಕೊನೆಯ ಬಾರಿಯಾದರೂ ಅವರನ್ನು ಕಣ್ತುಂಬಿಕೊಳ್ಳಬೇಕು ಅಂತ ಬರೀ ವಿಜಯಪುರ (Vijayapur) ಜಿಲ್ಲೆಯಿಂದ ಒಂದೇ ಅಲ್ಲ, ರಾಜ್ಯದ ಹಲವು ಜಿಲ್ಲೆಗಳಿಂದ ಭಕ್ತರು (Devotees) ಆಶ್ರಮಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ ಪಕ್ಕದ ಮಹಾರಾಷ್ಟ್ರ (Maharashtra) ಸೇರಿದಂತೆ ಬೇರೆ ರಾಜ್ಯದಿಂದಲೂ ಭಕ್ತರು ಆಗಮಿಸಿದ್ದಾರೆ. ಸರಳವಾಗಿ ನುಡಿದ, ನುಡಿದಂತೆ ಸರಳವಾಗಿ ನಡೆದ ‘ಸರಳ ಸಂತ’ ಎಂದೇ ಕರೆಸಿಕೊಂಡ ಸಿದ್ದೇಶ್ವರ ಸ್ವಾಮೀಜಿ ಅದೆಷ್ಟೋ ಜನರ ಬದುಕಲ್ಲಿ ಸ್ಫೂರ್ತಿ ತುಂಬಿದವರು. ತಮ್ಮ ಪ್ರವಚನಗಳ ಮೂಲಕ ಜ್ಞಾನದ ಯೋಗ ಹೇಳಿ ಕೊಟ್ಟವರು. ಇತ್ತೀಚಿನ ಕೆಲವು ಘಟನೆಗಳನ್ನು ನೋಡಿ ಮಠಾಧೀಶರು ಅಂತ ಅನಿಸಿಕೊಂಡವರು ಇಷ್ಟೆಲ್ಲಾ ಭೋಗ ಜೀವನ ನಡೆಸುತ್ತಾರಾ ಅಂತ ಜನರೇ ಆಶ್ಚರ್ಯಗೊಂಡಿದ್ದರು, ಆಘಾತಕ್ಕೆ ಒಳಗಾಗಿದ್ದರು. ಆದರೆ ಸಿದ್ದೇಶ್ವರ ಶ್ರೀಗಳನ್ನು ನೋಡಿದರೆ ಖ್ಯಾತ ವ್ಯಕ್ತಿಯೊಬ್ಬರು ಇಷ್ಟೊಂದು ಸರಳವಾಗಿ ಬದುಕಬಹುದಾ ಅಂತ ಆಶ್ಚರ್ಯವಾಗುತ್ತದೆ! ಸಿದ್ದೇಶ್ವರ ಶ್ರೀಗಳು ಕಾವಿ ತೊಡಲಿಲ್ಲ, ಐಶಾರಾಮಿ ಕಾರು ಇಟ್ಟುಕೊಳ್ಳಲಿಲ್ಲ, ಸಹಾಯ ಮಾಡುವ ನೆಪದಲ್ಲಿ ಕ್ಯಾಮೆರಾಗಳ ಎದುರು ಪೋಸ್ ಕೊಡಲಿಲ್ಲ! ಸರ್ಕಾರದಿಂದ ಕೋಟಿ ಕೋಟಿ ಅನುದಾನ ಪಡೆಯಲಿಲ್ಲ. ಅಸಲಿಗೆ ಅವರ ಸಾದಾ ಸೀದಾ ಬಿಳಿ ಬಣ್ಣದ ಬಟ್ಟೆಗೆ ಜೇಬುಗಳೇ ಇರಲಿಲ್ಲ! ಸರಳತೆ ಬಗ್ಗೆ ಪ್ರವಚನ ಕೊಟ್ಟ, ಸರಳವಾಗಿಯೇ ಬದುಕಿದ 'ಸರಳ ಸಂತ' ಸಿದ್ದೇಶ್ವರರ ಜೀವನವೇ ನಮ್ಮೆಲ್ಲರಿಗೂ ಪಾಠ!


ಕಾವಿ ತೊಡಲಿಲ್ಲ, ಬಿಳಿ ಬಟ್ಟೆ ಮರೆಯಲಿಲ್ಲ


ಸಾಮಾನ್ಯವಾಗಿ ಸ್ವಾಮೀಜಿಗಳು, ಮಠಾಧೀಶರು ಅಂದರೆ ಕಾವಿ ಬಟ್ಟೆ ತೊಡುತ್ತಾರೆ. ಕೊರಳ ತುಂಬಾ ರುದ್ರಾಕ್ಷಿ ಮಾಲೆ ಧರಿಸುತ್ತಾರೆ. ಕಾಲಿಗೆ ಮರದ ಪಾದುಕೆ ಧರಿಸುತ್ತಾರೆ. ಆದರೆ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಅವು ಎಲ್ಲವುಗಳಿಂದ ದೂರ! ಸಿದ್ದೇಶ್ವರ ಸ್ವಾಮೀಜಿ ಎಂದೂ ಕಾವಿ ತೊಡಲಿಲ್ಲ. ಆದರೆ ಅವರು ಪ್ರಾರಂಭದಿಂದ ಜೀವನದುದ್ದಕ್ಕೂ ಬಿಳಿ ಬಟ್ಟೆಯನ್ನು ತೊಡುವುದನ್ನು ಮರೆಯಲೇ ಇಲ್ಲ!
ಕಾವಿ ಬದಲು ಬಿಳಿ ಬಟ್ಟೆಯೇ ಏಕೆ?


ಹೌದು, ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಉಳಿದ ಮಠಾಧೀಶರು, ಸ್ವಾಮೀಜಿಗಳಂತೆ ಸಿದ್ದೇಶ್ವರ ಸ್ವಾಮೀಜಿ ಕಾವಿ ಬಟ್ಟೆಯನ್ನು ಯಾಕೆ ತೊಡಲಿಲ್ಲ, ಬಿಳಿ ಬಟ್ಟೆಯನ್ನು ಯಾಕೆ ತೊಡುತ್ತಿದ್ದರು ಎಂದು. ಆದರೆ ಬಿಳಿ ಎನ್ನುವುದು ಶುದ್ಧತೆ, ಪ್ರಾಮಾಣಿಕತೆ, ಸತ್ಯದ ಸಂಕೇತ, ಸರಳತೆಯ ಸಂಕೇತ. ನಮ್ಮ ನಡೆ ನುಡಿ, ಮನಸ್ಸು, ರೀತಿ, ನೀತಿ, ಆಚಾರ ವಿಚಾರ ಎಲ್ಲವೂ ಸರಳವಾಗಿ ಇರಬೇಕು, ಶುದ್ಧವಾಗಿ ಇರಬೇಕು ಅಂತ ಸಿದ್ದೇಶ್ವರರು ಬಯಸಿದ್ದರು. ಹೀಗಾಗಿ ಕಾವಿ ಬದಲು ಬಿಳಿ ಬಟ್ಟೆಗೆ ಪ್ರಾಶಸ್ತ್ಯ ಕೊಟ್ಟ ಸ್ವಾಮೀಜಿ, ಪ್ರಾರಂಭದಿಂದ ಬದುಕಿನುದ್ದಕ್ಕೂ ಬಿಳಿ ಬಟ್ಟೆಯನ್ನೇ ತೊಟ್ಟು, ಸರಳತೆ, ಶುದ್ಧತೆಗೆ ಮಾದರಿಯಾದರು.


ಇದನ್ನೂ ಓದಿ: Siddeshwar Swamiji: 'ಸರಳ ಸಂತ' ಸಿದ್ದೇಶ್ವರ ಸ್ವಾಮೀಜಿ ಹೇಗಿದ್ದರು? 'ಜ್ಞಾನಯೋಗಿ'ಯ ಜೀವನಗಾಥೆ ಇಲ್ಲಿದೆ ಓದಿ


ಅವರ ಅಂಗಿಗೆ ಜೇಬುಗಳೇ ಇರಲಿಲ್ಲ!


ಹೌದು, ಇದು ನಿಜಕ್ಕೂ ನೀವು ನಂಬಲೇ ಬೇಕು. ಮಠಾಧೀಶರ ಮುಖವಾಡ ತೊಟ್ಟ ಅದೆಷ್ಟೋ ಜನರು ರಾಜಕಾರಣಿಗಳಿಂದ, ಉದ್ಯಮಿಗಳು, ಚಿತ್ರನಟರಿಂದ, ಸರ್ಕಾರದಿಂದ ಕೋಟಿ ಕೋಟಿ ಅನುದಾನ ಪಡೆಯುತ್ತಾರೆ. ಆದರೆ ಸಿದ್ದೇಶ್ವರ ಶ್ರೀಗಳು ಸಹಾಯಕ್ಕೆ, ಹಣಕ್ಕೆ, ಸರ್ಕಾರದ ಅನುದಾನಕ್ಕೆ ಎಂದೂ ಕೈ ಚಾಚಲಿಲ್ಲ. ಜೇಬು ಇದ್ದರೆ ತಾನೇ ಹಣ ತುಂಬಿಕೊಳ್ಳುವ ಆಸೆ ಬರುವುದು? ಹೀಗಾಗಿ ನನಗೆ ಆ ಹಣದ ಆಸೆಯೇ ಬೇಡ ಅಂತ ತಮ್ಮ ಬಿಳಿ ಅಂಗಿಗೆ ಜೇಬೇ ಇಟ್ಟುಕೊಂಡಿಲ್ಲವಂತೆ!
ಸಿದ್ದೇಶ್ವರ ಸ್ವಾಮೀಜಿಗೆ ಸಿಟ್ಟೇ ಬರುತ್ತಿರಲಿಲ್ಲವಂತೆ!


ಸಿದ್ದೇಶ್ವರ ಸ್ವಾಮೀಜಿ ನೋಡುವುದಕ್ಕೆ ಮಗುವಿನಂತೆ ಕಾಣುತ್ತಿದ್ದರು. ಅವರ ಮನಸ್ಸೂ ಕೂಡ ಮಗುವಿನಂತೆ ಎನ್ನುವುದು ಅವರನ್ನು ಹತ್ತಿರದಿಂದ ನೋಡಿದ, ಅವರ ಭಕ್ತರೂ ಆದ ಕಾಲೇಜ್ ಉಪನ್ಯಾಸಕ ಪ್ರಭುಲಿಂಗ ಗುಂಜಟ್ಟಿ ಎಂಬುವರು ಹೇಳುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು ಸಿಟ್ಟು ಮಾಡಿಕೊಂಡಿದ್ದೇ ಇದುವರೆಗೆ ಯಾರೂ ನೋಡಿಲ್ಲವಂತೆ!


ಸಿಟ್ಟು ಮಾಡಿಕೊಂಡ ದಿನ ಊಟವನ್ನೇ ಮಾಡುತ್ತಿರಲಿಲ್ಲ!


ಹೀಗಂತ ಪ್ರಭುಲಿಂಗ ಗುಂಜಟ್ಟಿ ಹೇಳುತ್ತಾರೆ. ಸಿದ್ದೇಶ್ವರ ಸ್ವಾಮೀಜಿಗೆ ಸಿಟ್ಟೇ ಬರುತ್ತಿರಲಿಲ್ಲ. ಆದರೂ ಅವರಿಗೆ ಇಷ್ಟವಾಗದ ವಿಚಾರಕ್ಕೆ ಭಕ್ತರು ಒತ್ತಾಯ ಮಾಡಿದಾಗ ಮನಸ್ಸಿನೊಳಗೇ ಅವರಿಗೆ ಕಸಿವಿಸಿ ಆಗುತ್ತಿತ್ತಂತೆ. ಈ ವೇಳೆ ತಮ್ಮ ಕೋಣೆಗೆ ತೆರಳಿ ಮೌನ ತಾಳುತ್ತಿದ್ದರು. ಅಷ್ಟೇ ಅಲ್ಲ ಆ ದಿನ ಊಟ ತ್ಯಜಿಸಿ, ತಮ್ಮ ಸಿಟ್ಟಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದರಂತೆ ಆ ಮಹಾನ್ ಪುರುಷ!
ಪದ್ಮಶ್ರೀ ತಿರಸ್ಕರಿಸಿದ್ದ ಸರಳ ಸಂತ!


ಸಿದ್ದೇಶ್ವರ ಸ್ವಾಮೀಜಿ ಪ್ರಶಸ್ತಿಗಾಗಿ ಎಂದೂ ಅರ್ಜಿ ಹಾಕಿದವರಲ್ಲ, ಪ್ರಶಸ್ತಿ ಕೊಡಿ ಅಂತ ರಾಜಕಾರಣಿಗಳ ಬಳಿ ಲಾಬಿ ಮಾಡಿದವರೂ ಅಲ್ಲ. ಆದರೂ ಅವರ ಸಾಧನೆ, ಸಮಾಜಸೇವೆ, ಶಿಕ್ಷಣದಲ್ಲಿ ಮಾಡಿದ ಸಾಧನೆ ಗುರುತಿಸಿ ಪದ್ಮ ಪ್ರಶಸ್ತಿಯಂತ ಭಾರತ ಸರ್ಕಾರದ ಶ್ರೇಷ್ಠ ನಾಗರಿಕ ಪುರಸ್ಕಾರವೇ ಅವರನ್ನು ಅರಸಿ ಬಂದಿತ್ತು. ಆದರೆ ಪದ್ಮಶ್ರೀ ಪುರಸ್ಕಾರವನ್ನು ಶ್ರೀಗಳು ಸ್ವೀಕರಿಸಿಲ್ಲ.


ಪ್ರಧಾನಿಗಳಿಗೆ ಪತ್ರ ಬರೆದು, ಪದ್ಮಶ್ರೀ ನಿರಾಕರಣೆ


2018ರಲ್ಲಿ ಭಾರತ ಸರಕಾರ ಸಿದ್ದೇಶ್ವರ ಶ್ರೀಗಳಿಗೆ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಘೋಷಿಸಿತ್ತು. ಆದರೆ ಶ್ರೀಗಳು ಗೌರವಪೂರ್ವಕವಾಗಿಯೇ ಆ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. “ಪ್ರಶಸ್ತಿಗೆ ನಾನು ಅರ್ಹನಲ್ಲ. ನನಗಿಂತ ಹೆಚ್ಚಿನ ಸಾಧನೆ ಮಾಡಿದವರು ಸಾಕಷ್ಟಿದ್ದಾರೆ. ಅವರಿಗೆ ನೀಡಿ. ನಮ್ಮ ಮೇಲಿನ ಪ್ರೀತಿ, ಗೌರವಕ್ಕೆ ಧನ್ಯವಾದಗಳು” ಹೀಗಂತ ಪ್ರಧಾನಿಗೆ ಪತ್ರ ಬರೆದು ಪ್ರಶಸ್ತಿ ನಿರಾಕರಿಸಿದ್ದರು.
ಡಾಕ್ಟರೇಟ್ ಸ್ವೀಕರಿಸಲು ನಕಾರ, ಅನುದಾನ ತಿರಸ್ಕಾರ


90ರ ದಶಕದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆಗಲೂ ಸಿದ್ದೇಶ್ವರ ಸ್ವಾಮೀಜಿ ಆ ಗೌರವ ನಯವಾಗಿ ತಿರಸ್ಕರಿಸಿದ್ದರು. ಜಗದ್ವಿಖ್ಯಾತ ಮೈಸೂರು ದಸರೆ ಉದ್ಘಾಟನೆಗೆ ಸರಕಾರ ಶ್ರೀಗಳನ್ನು ಆಯ್ಕೆ ಮಾಡಿದಾಗ ಅದಕ್ಕೂ ನಿರಾಕರಿಸಿದ್ದರು. ಎಲ್ಲಿಯೂ ಪ್ರಚಾರ ಬಯಸದೇ ತಮ್ಮ ಕಾಯಕದಲ್ಲೇ ಈ ಕಾಯಕಯೋಗಿ ಮಗ್ನರಾಗಿದ್ದರು. ಕರ್ನಾಟಕ ಸರ್ಕಾರ ಜ್ಞಾನ ಯೋಗಾಶ್ರಮಕ್ಕೆ ಬಜೆಟ್‌ನಲ್ಲಿ 50 ಲಕ್ಷ ರೂ. ಮಂಜೂರು ಮಾಡಿತ್ತು. ಆದರೆ ಆಶ್ರಮದವರು ಅದನ್ನೂ ಸಹ ಸ್ವೀಕರಿಸದೇ ಸರಕಾರಕ್ಕೆ ಮರಳಿಸಿದ್ದರು. ಜ್ಞಾನ ಪ್ರಸಾರಕ್ಕೆ ಮೀಸಲಿರುವ ಆಶ್ರಮಕ್ಕೆ ಸರಕಾರದ ಅನುದಾನದ ಅವಶ್ಯಕತೆಯಿಲ್ಲ. ಈ ಹಣವನ್ನು ಬೇರೆ ಒಳ್ಳೆಯ ಕಾರ್ಯಕ್ಕೆ ಬಳಕೆ ಮಾಡಿ ಎಂದು ಸರಕಾರಕ್ಕೆ ಕೃತಜ್ಞತಾ ಪೂರ್ವಕ ಪತ್ರ ಬರೆದು, ಅನುದಾನವನ್ನು ಮರಳಿಸಿದ್ದರು.


ಇದನ್ನೂ ಓದಿ: Siddeshwara Swamiji: ಪದ್ಮಶ್ರೀ ತಿರಸ್ಕಾರ, ಡಾಕ್ಟರೇಟ್ ಸ್ವೀಕರಿಸಲು ನಕಾರ! ಪ್ರವಚನಗಳ ಮೂಲಕ ಬದುಕಲು ಕಲಿಸಿದ ಸಿದ್ದೇಶ್ವರ ಶ್ರೀಗಳು


ಸಾವಿನಲ್ಲೂ ಸರಳತೆ ಮೆರೆದ ಯೋಗಿ


ಇದೀಗ ಮರಣದಲ್ಲೂ ಶ್ರೀಗಳು ಸರಳತೆ ಮೆರೆದಿದ್ದಾರೆ. ನನ್ನನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಶ ಮಾಡಬೇಕು, ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ, ಶ್ರಾದ್ಧೀಯ ಕರ್ಮಗಳನ್ನು ಮಾಡುವಂತಿಲ್ಲ ಅಂತ 2014ರಲ್ಲಿಯೇ ವಿಲ್ ಬರೆದಿದ್ದಾರಂತೆ. ಅಲ್ಲದೇ ಯಾವುದೇ ರೀತಿಯ ಸ್ಮಾರಕಗಳನ್ನು ನಿರ್ಮಿಸಬೇಡಿ ಅಂತ ಹೇಳಿದ್ದರಂತೆ.

Published by:Annappa Achari
First published: