ಟೋಕಿಯೊ ಕ್ರೀಡಾಕೂಟದಲ್ಲಿ ತನ್ನ ಕೋಚಿಂಗ್ ತಂಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸಿದ ಬೆಲರೂಸಾದ ಒಲಿಂಪಿಕ್ಸ್ ಕ್ರೀಡಾಪಟು ತನ್ನ ಸುರಕ್ಷತೆಗೆ ಹೆದರಿ ತಾಯ್ನಾಡಿಗೆ ಮರಳಲು ನಿರಾಕರಿಸಿದ್ದಾರೆ. ತಮ್ಮ ದೇಶದ ನಿರಂಕುಶ ಸರ್ಕಾರದಿಂದ ಶಿಕ್ಷೆ ಎದುರಿಸುತ್ತೇನೆ ಎಂಬ ಭೀತಿಗೆ ಒಳಗಾಗಿರುವ ಬೆಲಾರಸ್ ಸ್ಪ್ರಿಂಟರ್ (ಓಟಗಾರ್ತಿ) ಕ್ರಿಸ್ಟಿನಾ ಸಿಮನೌಸ್ಕಯಾಗೆ ಹಲವು ದೇಶಗಳು ಬೆಂಬಲ ನೀಡಿದವು. ಬೆಲಾರಸ್ ದೇಶ ತನ್ನ ವಿರುದ್ಧ ಮಾತನಾಡುವವರಿಗೆ ಕಠಿಣವಾಗಿ ಶಿಕ್ಷೆ ನೀಡುತ್ತದೆ. ಇನ್ನು, ಸಿಮಾನೌಸ್ಕಯಾ ಜಪಾನಿನಿಂದ ವಿಯೆನ್ನಾಗೆ ಹೊರಡುವ ಮುನ್ನ ಆಕೆ ಟೋಕಿಯೋದ ಪೋಲಿಷ್ ರಾಯಭಾರ ಕಚೇರಿಯಲ್ಲಿ ಒಂದೆರಡು ದಿನಗಳ ಕಾಲ ಆಶ್ರಯ ಪಡೆದರು. ಅಲ್ಲದೆ, ಆಸ್ಟ್ರಿಯಾಗೆ ಹೋದ ಬಳಿಕ ತನ್ನ ದೇಶ ಬೆಲಾರಸ್ಗೆ ಹೋಗದೆ ಒಲಿಂಪಿಕ್ಸ್ ಮಹಿಳಾ ಅಥ್ಲೀಟ್ ಪೋಲೆಂಡ್ಗೆ ಪ್ರಯಾಣ ಮಾಡುತ್ತಾರೆ ಎಂದು ತಿಳಿದುಬಂದಿದ್ದು, ಮಾನವೀಯ ಆಧಾರದ ಮೇಲೆ ಪೋಲೆಂಡ್ನ ವೀಸಾವನ್ನೂ ಪಡೆದುಕೊಂಡಿದ್ದಾರೆ.
ಬೆಲಾರಸ್ನ ದೀರ್ಘಾವಧಿಯ ಸರ್ವಾಧಿಕಾರಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಆಳ್ವಿಕೆಯಲ್ಲಿ, ಅವರ ಆಡಳಿತ ವಿರೋಧಿಸಿದ್ದಕ್ಕಾಗಿ ಈಗಾಗಲೇ ಸಾವಿರಾರು ಜನರನ್ನು ಬಂಧಿಸಲಾಗಿದೆ ಮತ್ತು ಗಡಿಪಾರು ಮಾಡಲಾಗಿದೆ. ಸರ್ಕಾರವನ್ನು ಟೀಕಿಸಿದ ಕ್ರೀಡಾಪಟುಗಳಿಗೂ ಅದೇ ರೀತಿ ಶಿಕ್ಷೆ ನೀಡಲಾಗಿದೆ. ಈ ಹಿನ್ನೆಲೆ ಸಿಮಾನೌಸ್ಕಯಾ ತನ್ನ ತಾಯ್ನಾಡಿನಲ್ಲಿ ಎದುರಿಸಿದ ಬೆದರಿಕೆಯ ಬಗ್ಗೆ ತನ್ನ ಆತಂಕ ವ್ಯಕ್ತಪಡಿಸಿದ ನಂತರ, ಹಲವಾರು ಬೆಲರೂಸಿಯನ್ ಕ್ರೀಡಾಪಟುಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಕೆಲವರು ದಮನಕಾರಿ ರಾಜಕೀಯ ವಾತಾವರಣದಿಂದಾಗಿ ದೇಶಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ.
ಕ್ರಿಸ್ಟಿನಾ ಸಿಮಾನೌಸ್ಕಯಾ ಯಾರು..? ಬೆಲಾರಸ್ನಲ್ಲಿ ತನ್ನ ಸುರಕ್ಷತೆಗಾಗಿ ಏಕೆ ಹೆದರುತ್ತಾರೆ..?
24 ವರ್ಷದ ಬೆಲರೂಸಾದ ಸ್ಪ್ರಿಂಟರ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ತನ್ನ ತಂಡದೊಂದಿಗೆ ವೈಷಮ್ಯ ಹೊಂದಿದ ನಂತರ ತನ್ನ ದೇಶಕ್ಕೆ ವಾಪಸ್ ಬಂದ ನಂತರ ಬಂಧನವಾಗಬಹುದೆಂದು ಹೆದರಿ ತನ್ನ ದೇಶಕ್ಕೆ ವಿಮಾನ ಹತ್ತಲು ನಿರಾಕರಿಸಿದರು. ಒಲಿಂಪಿಕ್ಸ್ನಲ್ಲಿ 200 ಮೀ ಓಟಕ್ಕೆ ಸಜ್ಜಾಗಿದ್ದ ಓಟಗಾರ್ತಿಯನ್ನು ಆಕೆಯ ಒಪ್ಪಿಗೆ ಪಡೆಯದೆ 4x400 ಮೀ ರಿಲೇಯಲ್ಲಿ ಭಾಗವಹಿಸಲು ಮಾಡಿದ್ದಕ್ಕೆ ಆಕೆ ಸಾರ್ವಜನಿಕವಾಗಿ ತನ್ನ ತಂಡದ ಸದಸ್ಯರ ವಿರುದ್ಧ (ಅಧಿಕಾರಿಗಳು)
ಸೋಮವಾರ ಆಕೆ ಟೋಕಿಯೊದಲ್ಲಿ ಪೋಲಿಷ್ ರಾಯಭಾರ ಕಚೇರಿಗೆ ತೆರಳಿದ್ದರು. ಪೋಲೆಂಡಿನ ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿ ಮಾರ್ಸಿನ್ ಪ್ರ್ಜಿಡಾಕ್, ಮಾನವೀಯತೆಯ ಆಧಾರದ ಮೇಲೆ ತನಗೆ ವೀಸಾ ನೀಡಲಾಗಿದೆ ಎಂದು ಟ್ವಿಟ್ಟರ್ನಲ್ಲಿ ಘೋಷಿಸಿದರು. "ಪೋಲೆಂಡ್ ತನ್ನ ಕ್ರೀಡಾ ವೃತ್ತಿಜೀವನವನ್ನು ಮುಂದುವರಿಸಲು ಅವಳಿಗೆ ಸಹಾಯ ಮಾಡಲು ಏನು ಬೇಕಾದರೂ ಮಾಡುತ್ತದೆ. ಅದು ಯಾವಾಗಲೂ ಒಗ್ಗಟ್ಟಿಗಾಗಿ ನಿಲ್ಲುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ಆಕೆಯ ಪತಿ ಈಗಾಗಲೇ ಬೆಲಾರಸ್ ಬಿಟ್ಟು ಉಕ್ರೇನ್ ಪ್ರವೇಶಿಸಿದ್ದಾರೆ. ಈ ಮಧ್ಯೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಪ್ರಕರಣದ ತನಿಖೆಯನ್ನು ಆರಂಭಿಸಿದೆ ಮತ್ತು ಬೆಲಾರಸ್ನಿಂದ ಪ್ರತಿಕ್ರಿಯೆಯನ್ನು ಕೋರಿದೆ.
ದೇಶಾದ್ಯಂತ ಜಮಾಯಿಸಿದ ಪ್ರತಿಭಟನಾಕಾರರ ಗುಂಪನ್ನು ನಿಯಂತ್ರಿಸಲು, ಬೆಲರೂಸಾದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಕಾನೂನು ಜಾರಿ ಅಧಿಕಾರಿಗಳನ್ನು ನಿಯೋಜಿಸಿದರು. ಪೊಲೀಸ್ ದೌರ್ಜನ್ಯದ ವರದಿಗಳು ಶೀಘ್ರದಲ್ಲೇ ಹೊರಹೊಮ್ಮಿದವು. ನಂತರದ ವಾರಗಳಲ್ಲಿ ಕನಿಷ್ಠ ನಾಲ್ಕು ಜನರು ಹತ್ಯೆಯಾಗಿದ್ದಾರೆ ಮತ್ತು ಸಾವಿರಾರು ಜನರನ್ನು ಬಂಧಿಸಲಾಯಿತು.
ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವಾರು ದೇಶಗಳು ಬೆಲಾರಸ್ನ ಚುನಾವಣಾ ಫಲಿತಾಂಶಗಳನ್ನು ತಿರಸ್ಕರಿಸಿವೆ. ಆದರೂ, ಎರಡು ದಶಕಗಳಿಂದ ದೇಶವನ್ನು ನಡೆಸುತ್ತಿರುವ ಲುಕಾಶೆಂಕೊ, ತನ್ನ ಟೀಕಾಕಾರರನ್ನು ವಿದೇಶಿ ದರೋಡೆಕೋರರೆಂದು ಟೀಕೆ ಮಾಡಿದ್ದಾರೆ. ಹಾಗೆ, ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ತಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು. ಪ್ರತಿಭಟನೆಗಳು ಮತ್ತು ಟೀಕಾಕಾರರ ಮೇಲಿನ ದಬ್ಬಾಳಿಕೆ ಮುಂದುವರಿದಿದ್ದು, ಮತ್ತು ಭಿನ್ನಾಭಿಪ್ರಾಯದ ಕ್ರೀಡಾಪಟುಗಳು ಕೂಡ ಲುಕಾಶೆಂಕೊ ಆಳ್ವಿಕೆಯ ಭಾರವನ್ನು ಹೊತ್ತುಕೊಂಡಿದ್ದಾರೆ.
ಪೋಲೆಂಡ್ ಮತ್ತು ಲಿಥುವೇನಿಯಾ ಸೇರಿದಂತೆ ಯುರೋಪಿಯನ್ ಒಕ್ಕೂಟದಲ್ಲಿ ಬೆಲಾರಸ್ನ ನೆರೆಹೊರೆಯ ದೇಶಗಳು ಲುಕಾಶೆಂಕೊ ಅವರ ಕ್ರೂರ ಆಡಳಿತದಿಂದ ಪಲಾಯನ ಮಾಡಿದ ಕಾರ್ಯಕರ್ತರು ಮತ್ತು ವಿಮರ್ಶಕರಿಗೆ ಬೆಂಬಲ ಹಾಗೂ ಆಶ್ರಯ ನೀಡಿದ್ದಾರೆ.
ಟೋಕಿಯೊಗೆ ತೆರಳುವ ಮುನ್ನ ಬೆಲಾರಸ್ನ ಒಲಿಂಪಿಕ್ಸ್ ತಂಡಕ್ಕೆ, ''ನೀವು ಪ್ರವಾಸಿಗರಂತೆ ಅಲ್ಲಿಗೆ ಹೋಗಿ ಏನನ್ನೂ ತರದಿದ್ದರೆ, ನೀವು ದೇಶಕ್ಕೆ ಹಿಂತಿರುಗದಿರುವುದು ಉತ್ತಮ'' ಎಂದು ಲುಕಾಶೆಂಕೊ ಅವರಿಗೆ ಸ್ಪಷ್ಟ ಆದೇಶಗಳನ್ನು ನೀಡಿದ್ದರು. ಆದರೆ ತಮ್ಮ ದೇಶದಲ್ಲಿ ಎದುರಿಸಿದ ಬೆದರಿಕೆ ಮತ್ತು ಆತಂಕಗಳ ಬಗ್ಗೆ ಕ್ರೀಡಾಪಟುಗಳು ದೂರುಗಳನ್ನು ನೀಡಿದ ಬಳಿಕ ಲುಕಾಶೆಂಕೊ ಮತ್ತು ಆತನ ಮಗ ಇಬ್ಬರನ್ನೂ ಒಲಿಂಪಿಕ್ಸ್ನಿಂದ ಐಒಸಿ ನಿಷೇಧಿಸಿದೆ.
ಬೆಲಾರಸ್ನ ಮಾಜಿ ಡಬ್ಲ್ಯುಎನ್ಬಿಎ ಬ್ಯಾಸ್ಕೆಟ್ಬಾಲ್ ಆಟಗಾರ್ತಿ ಯೆಲೆನಾ ಲುಚಂಕಾ ಅಧಿಕಾರಿಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ ನಂತರ ಅಕ್ಟೋಬರ್ನಲ್ಲಿ 15 ದಿನಗಳ ಕಾಲ ಬಂಧಿಸಲಾಗಿತ್ತು. ಬೆಲಾರಸ್ ರಾಷ್ಟ್ರೀಯ ರಗ್ಬಿ ತಂಡದ ಕ್ಯಾಪ್ಟನ್ ಮರಿಯಾ ಶಕುರೊ ಕೂಡ ಪ್ರತಿಭಟನೆ ಮಾಡಿದ್ದಕ್ಕಾಗಿ ಆಕೆಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಲಾಯಿತು. ಒಲಿಂಪಿಕ್ಸ್ ಹ್ಯಾಮರ್ ಎಸೆತಗಾರ ವಾಡಿಮ್ ದೇವ್ಯಾಟೋವ್ಸ್ಕಿ ಫೇಸ್ಬುಕ್ ಪೋಸ್ಟ್ನಲ್ಲಿ ಲುಕಾಶೆಂಕೊ ಅವರನ್ನು ಟೀಕೆ ಮಾಡಿದ್ದಕ್ಕೆ 2020ರ ಸೆಪ್ಟೆಂಬರ್ನಲ್ಲಿ ಅವರನ್ನು ದೇಶದ ಅಥ್ಲೆಟಿಕ್ಸ್ ಫೆಡರೇಶನ್ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ