ಕಾಂಗ್ರೆಸ್ ಹಾಗೂ ಬಿಜೆಪಿಯ (Congrss and BJP)ನಡುವಿನ ಸಂಘರ್ಷಗಳು ಇಂದು ನಿನ್ನೆಯದಲ್ಲ. ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಪರಸ್ಪರ ದೋಷರೋಪಣೆ ಮಾಡುತ್ತಾ ಬಂದಿರುವ ಈ ಎರಡೂ ಪಕ್ಷಗಳು ರಾಜಕೀಯ ವಿಷಯಗಳಿಗಿಂತ ವ್ಯಕ್ತಿಗತ ವಿಚಾರಗಳಿಗೆ ಕಾದಾಡಿದ್ದೇ ಹೆಚ್ಚು. ವೈಯಕ್ತಿಕ ವಿಷಯಗಳಿಗೆ ರಾಜಕೀಯದ ಬಣ್ಣ ಹಚ್ಚಿ ಪರಸ್ಪರ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ.
ನೆಹರು ಉಪನಾಮ ಏಕಿಲ್ಲವೆಂದು ಪ್ರಶ್ನಿಸಿದ ಪ್ರಧಾನಿ
ಇತ್ತೀಚೆಗೆ ನಡೆದ ಸನ್ನಿವೇಶವನ್ನೇ ಉದಾಹರಣೆಯಾಗಿ ತೆಗೆದುಕೊಂಡಾಗ ಎರಡೂ ಪಕ್ಷಗಳ ನಡುವೆ ವೈಯಕ್ತಿಕ ವಿಷಯಗಳೇ ಏಕೆ ಹೆಚ್ಚಾಗಿ ಸಂಘರ್ಷಕ್ಕೆ ಕಾರಣವಾಗುತ್ತವೆ ಎಂಬುದು ಅರಿವಾಗುತ್ತದೆ. ಇತ್ತೀಚೆಗೆ ಪ್ರಧಾನಿ ಮೋದಿಯವರು (PM Narendra Modi) ರಾಹುಲ್ ಗಾಂಧಿಯವರ (Rahul Gandhi) ಹೆಸರಿನ ಕೊನೆಯಲ್ಲಿ ನೆಹರು (Nehru) ಅವರ ಉಪನಾಮ ಏಕಿಲ್ಲ ಎಂದು ಪ್ರಶ್ನಿಸಿದ್ದರು, ಅದಕ್ಕೆ ಪ್ರತಿಯಾಗಿ ಇದೀಗ ರಾಹುಲ್ ಗಾಂಧಿ ಕೂಡ ಪ್ರತ್ಯುತ್ತರಿಸಿದ್ದಾರೆ.
ಯಾವ ಸಮಾರಂಭದಲ್ಲಾದರೂ ನೆಹರು ಹೆಸರನ್ನು ಪ್ರಸ್ತಾವಿಸದೇ ಇದ್ದರೆ ಕಾಂಗ್ರೆಸ್‌ನವರು ಅಸಮಾಧಾನಗೊಳ್ಳುತ್ತಾರೆ. ನೆಹರು ಮಹಾನ್ ವ್ಯಕ್ತಿಯಾಗಿ ಖ್ಯಾತಿ ಗಳಿಸಿದವರು. ಆದರೆ ಅವರ ಕುಟುಂಬಸ್ಥರು ಯಾರೂ ನೆಹರು ಉಪನಾಮವನ್ನು ಬಳಸುವುದಿಲ್ಲ ಅವರ ಹೆಸರನ್ನು ಸರ್‌ನೇಮ್ ಆಗಿ ಬಳಸಿಕೊಳ್ಳುವುದರಲ್ಲಿ ನಾಚಿಕೆ ಏನಿದೆ ಎಂದು ನೇರವಾಗಿ ಮೋದಿ ಪ್ರಶ್ನಿಸಿದ್ದರು.
ತಂದೆಯ ಉಪನಾಮವೇ ಮಕ್ಕಳಿಗೆ ಬರುತ್ತದೆ ರಾಹುಲ್ ಗಾಂಧಿ ಪ್ರತ್ಯುತ್ತರ
ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ರಾಹುಲ್ ಗಾಂಧಿ, ಪ್ರಧಾನಿಯವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು ಅವರು ಉತ್ತರಿಸದೇ ಮೌನವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅದಾನಿ ಹಾಗೂ ಮೋದಿಯ ನಡುವಿನ ಬಾಂಧವ್ಯದ ಬಗ್ಗೆ ನಾನು ಪ್ರಶ್ನಿಸಿದ್ದೆ. ಅದಾನಿ ಇಷ್ಟು ಬೇಗ ಹೇಗೆ ಅಭಿವೃದ್ಧಿ ಹೊಂದಿದರು ಎಂದು ಕೇಳಿದ್ದೆ, ಆದರೆ ಯಾವ ಪ್ರಶ್ನೆಗೂ ಪ್ರಧಾನಿ ಉತ್ತರಿಸಲಿಲ್ಲ ಇದಕ್ಕೆ ಬದಲಾಗಿ ನಿಮ್ಮನ್ನು ಗಾಂಧಿ ಎಂದು ಏಕೆ ಸಂಬೋಧಿಸುತ್ತಾರೆ, ನೆಹರು ಎಂದು ಏಕೆ ಸಂಬೋಧಿಸುವುದಿಲ್ಲ ಎಂಬುದು ಅವರ ಪ್ರಶ್ನೆಯಾಗಿತ್ತು. ಭಾರತದಲ್ಲಿ ಸಾಮಾನ್ಯವಾಗಿ ತಂದೆಯ ಉಪನಾಮವನ್ನೇ ಮಕ್ಕಳು ಬಳಸಿಕೊಳ್ಳುತ್ತಾರೆ ಬಹುಶಃ ಮೋದಿಯವರಿಗೆ ಇದು ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: 2024 Election Survey: ಮುಂದಿನ ಪ್ರಧಾನಿ ಯಾರು? 6 ತಿಂಗಳಲ್ಲಿ ಕುಗ್ಗಿದ ಮೋದಿ ಜನಪ್ರಿಯತೆ, ರಾಹುಲ್ ಗಾಂಧಿಗೆ ಲಾಭ!
ಹಾಗಿದ್ದರೆ ನೆಹರು ಕುಟುಂಬಸ್ಥರು ಉಪನಾಮವಾಗಿ ಗಾಂಧಿ ಎಂಬುದನ್ನು ಏಕೆ ಬಳಸಿಕೊಂಡರು? ನೆಹರು ಹೆಸರನ್ನು ಏಕೆ ಬಳಸಿಕೊಂಡಿಲ್ಲ? ಗಾಂಧಿ ಎಂಬುದು ಹೆಸರಿನ ಕೊನೆಯಲ್ಲಿ ಬಂದದ್ದಾದರೂ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ
ಫಿರೋಜ್ ಘಂಡಿಯಿಂದ ಗಾಂಧಿವರೆಗಿನ ಪ್ರಯಾಣ
ಫಿರೋಜ್ ಗಾಂಧಿ (Feroze Gandhi) ಅವರು ಸೆಪ್ಟೆಂಬರ್ 12, 1912 ರಂದು ಬಾಂಬೆಯಲ್ಲಿ ಫಿರೋಜ್ ಜಹಾಂಗೀರ್ ಘಾಂಡಿ ಆಗಿ ಜನಿಸಿದರು. ಅವರ ಪೋಷಕರು, ರತಿಮಾಯಿ (ನೀ ಕಮಿಶರಿಯಟ್) ಮತ್ತು ಜಹಾಂಗೀರ್ ಫರೆಡೂನ್ ಘಂಡಿ ಅವರು ಪಾರ್ಸಿಗಳಾಗಿದ್ದು, ಜಹಾಂಗೀರ್ ಅವರು ಮರೀನ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ತರುಣ ಫಿರೋಜ್, ತನ್ನ ತಂದೆ ತೀರಿಕೊಂಡ ನಂತರ ಅಲಹಾಬಾದ್‌ಗೆ ತೆರಳಿ, ಲೇಡಿ ಡಫರಿನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದ ತನ್ನ ಚಿಕ್ಕಮ್ಮ ಶಿರಿನ್ ಕಮಿಸ್ಸರಿಯಟ್ ಅವರೊಂದಿಗೆ ವಾಸಿಸಲಾರಂಭಿಸಿದರು.
ಫಿರೋಜ್ ಎವಿಂಗ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, 18 ನೇ ವಯಸ್ಸಿನಲ್ಲಿ, ಅವರು ತಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸುವ ಎರಡು ಶಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಒಂದು ಸ್ವಾತಂತ್ರ್ಯ ಹೋರಾಟ ಇನ್ನೊಂದು ನೆಹರು ಕುಟುಂಬ.
ನೆಹರು ಕುಟುಂಬಕ್ಕೆ ಆಪ್ತರಾದ ಫಿರೋಜ್ ಗಾಂಧಿ
ಫಿರೋಜ್, ನೆಹರು ಪತ್ನಿ ಕಮಲಾ ನೆಹರು (Kamala Nehru) ಅವರಿಗೆ ಸತ್ಯಾಗ್ರಹದ ವೇಳೆಯಲ್ಲಿ ಸಹಾಯ ಮಾಡಿದರು ಎಂಬ ಕಾರಣಕ್ಕೆ ಕಾಲೇಜಿನಿಂದ ಅವರನ್ನು ಹೊರಹಾಕಲಾಯಿತು. ಅಂದಿನಿಂದ ಫಿರೋಜ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನೆಹರು ಕುಟುಂಬದ ಮನೆ ಮತ್ತು ಪ್ರಮುಖ ರಾಜಕೀಯ ಕೇಂದ್ರವಾದ ಆನಂದ ಭವನದಲ್ಲಿ ಸಾಕಷ್ಟು ಸಮಯವನ್ನು ಕಳೆದರು.
ಇದೇ ಸಮಯದಲ್ಲಿ ಅವರು ಮಹಾತ್ಮ ಗಾಂಧಿಯವರ (Mahatma Gandhi) ಗೌರವಾರ್ಥವಾಗಿ ತಮ್ಮ ಉಪನಾಮವನ್ನು ಘಂಡಿಯಿಂದ ಗಾಂಧಿ ಎಂದು ಬದಲಾಯಿಸಿಕೊಂಡರು.
ಇಂದಿರಾ ಗಾಂಧಿಯವರೊಂದಿಗಿನ ವಿವಾಹ
ಇಂದಿರಾ 16 ವರ್ಷದವರಿದ್ದಾಗ ಫಿರೋಜ್ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದರು. ಪುತ್ರಿ ಚಿಕ್ಕವಳು ಎಂದು ಕಮಲಾ ನೆಹರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Rahul Gandhi: ಅದಾನಿ-ಮೋದಿ ಬಗ್ಗೆ ಅಸಂಸದೀಯ ಪದ ಬಳಸಿದ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ: ಪ್ರಹ್ಲಾದ್ ಜೋಶಿ
ಈ ಬಗ್ಗೆ ಪತ್ರಕರ್ತೆ ಸಾಗರಿಕಾ ಘೋಷ್ ಅವರು ತಮ್ಮ ಪುಸ್ತಕ 'ಇಂದಿರಾ: ಇಂಡಿಯಾದ ಮೋಸ್ಟ್ ಪವರ್‌ಫುಲ್ ಪ್ರೈಮ್ ಮಿನಿಸ್ಟರ್' ಪುಸಕ್ತದಲ್ಲಿ ಬರೆದುಕೊಂಡಿದ್ದು ಕಮಲಾ ನೆಹರು ಕ್ಷಯರೋಗದಿಂದ ಹಾಸಿಗೆ ಹಿಡಿದಾಗ ಫಿರೋಜ್, ನೆಹರು ಅವರಿಗೆ ಆಪ್ತರಾದರು ಹಾಗೂ ಅವರ ವಿಶ್ವಾಸವನ್ನು ಗಳಿಸಿದರು.
1937ರಲ್ಲಿ ಇಂದಿರಾ ಆಕ್ಸ್‌ಫರ್ಡ್‌ಗೆ ಸೇರಿದಾಗ ಫಿರೋಜ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದುತ್ತಿದ್ದರು. ವಿಕೆ ಕೃಷ್ಣ ಮೆನನ್ ನೇತೃತ್ವದ ಇಂಡಿಯಾ ಲೀಗ್ ಸೇರಿದಂತೆ ಫಿರೋಜ್ ಉಪಸ್ಥಿತಿ ಇದ್ದ ತೀವ್ರಗಾಮಿ ರಾಜಕೀಯ ಚಳುವಳಿಗಳಲ್ಲಿ ಇಂದಿರಾ ಭಾಗಿಯಾಗುವ ಮೂಲಕ ಅವರಿಬ್ಬರ ನಡುವೆ ಪ್ರೀತಿ ಗರಿಗೆದರಿತು ಎಂದು ಘೋಷ್ ಬರೆದಿದ್ದಾರೆ.
1941 ರಲ್ಲಿ, ಅವರು ಭಾರತಕ್ಕೆ ಮರಳಿದರು, ಇಬ್ಬರೂ ಕಾಲೇಜು ತೊರೆದರು ಮತ್ತು ಮದುವೆಯಾಗಲು ನಿರ್ಧರಿಸಿದರು. ಇಂದಿರಾ ಅವರ ಆಯ್ಕೆ ನೆಹರು ಕುಟುಂಬಕ್ಕೆ ಅಷ್ಟೊಂದು ಮಹತ್ವದ್ದು ಎಂದೆನಿಸರಲಿಲ್ಲ, ಇದಕ್ಕೆ ಕಾರಣ ಫಿರೋಜ್ ಇಂದಿರಾ ಅವರಂತೆ ಖ್ಯಾತಿ ಹಾಗೂ ಶ್ರೀಮಂತಿಕೆ ಹಿನ್ನಲೆಯ ಕುಟುಂಬದಿಂದ ಬಂದಿರಲಿಲ್ಲ.
ಆದರೆ ಮಹತ್ಮಾ ಗಾಂಧಿಯವರು ಇಬ್ಬರನ್ನೂ ಆಶೀರ್ವದಿಸಿದ ನಂತರ ದಂಪತಿ ಮಾರ್ಚ್ 26, 1942 ರಂದು ರಾಮ ನವಮಿಯಂದು ಆನಂದ ಭವನದಲ್ಲಿ ವಿವಾಹವಾದರು.
ಸಂಸದ ಹಾಗೂ ಪತ್ರಕರ್ತನಾಗಿ ಫಿರೋಜ್ ಗಾಂಧಿ
ಸ್ವಾತಂತ್ರ್ಯದ ನಂತರ ಫಿರೋಜ್ ರಾಯ್ಬರೇಲಿಯಿಂದ ಸಂಸದರಾಗಿ ಆಯ್ಕೆಯಾದರು. 1958 ರಲ್ಲಿ, ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ಸರ್ಕಾರದ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ, ಹರಿದಾಸ್ ಮುಂದ್ರಾ ಎಂಬ ದುರುಳ ಉದ್ಯಮಿ ಒಡೆತನದಲ್ಲಿ ದುರ್ಬಲ ಆರು ಕಂಪನಿಗಳಲ್ಲಿ ಭಾರೀ ಹೂಡಿಕೆ ಮಾಡಿದೆ ಎಂದು ಸಂಸತ್ತಿನಲ್ಲಿ ಫಿರೋಜ್ ಸಾಬೀತುಪಡಿಸಿದರು. ಈ ಪರಿಣಾಮವಾಗಿ ಹಣಕಾಸು ಸಚಿವ ಟಿ ಟಿ ಕೃಷ್ಣಮಾಚಾರಿ ರಾಜೀನಾಮೆ ನೀಡಬೇಕಾಯಿತು.
ವಂಚನೆಗಳನ್ನು ಬಹಿರಂಗಪಡಿಸಿದ್ದ ಫಿರೋಜ್
ಅದಕ್ಕೂ ಮೂರು ವರ್ಷಗಳ ಹಿಂದೆ, ಅವರು ದಾಲ್ಮಿಯಾ-ಜೈನ್ ಅಥವಾ ಡಿಜೆ ಗ್ರೂಪ್ ಎಂದು ಕರೆಯಲ್ಪಡುವ ಕಂಪನಿಯ ಹಣಕಾಸಿನ ವಂಚನೆಯನ್ನು ಬಹಿರಂಗಪಡಿಸಿದ್ದರು. ಅವರ ಬಹಿರಂಗಪಡಿಸುವಿಕೆಯು ದೇಶದ ಜೀವ ವಿಮಾ ಉದ್ಯಮದ ರಾಷ್ಟ್ರೀಕರಣಕ್ಕೆ ಕಾರಣವಾಯಿತು.
ಸಂಸತ್ತಿನ ಒಳಗಿನ ಕಲಾಪಗಳನ್ನು ವರದಿ ಮಾಡಲು ಪತ್ರಕರ್ತರಿಗೆ ಸಾಧ್ಯವಾಗುವಂತೆ ಖಾಸಗಿ ಸದಸ್ಯರ ಮಸೂದೆಯನ್ನು ಫಿರೋಜ್ ಮಂಡಿಸಿದರು. ಈ ಸಮಯದಲ್ಲಿ ಫಿರೋಜ್ ಹಾಗೂ ಇಂದಿರಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಫಿರೋಜ್ ವಿಶ್ವಾಸ ದ್ರೋಹಿಯಾಗಿದ್ದರು ಹಾಗೂ ಇಂದಿರಾ ತನ್ನ ತಂದೆಯ ರಾಜಕೀಯ ಮತ್ತು ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಕೊಳ್ಳುವ ಮೂಲಕ ದಂಪತಿ ನಡುವೆ ಇದ್ದ ಅಂತರ ಹೆಚ್ಚಾಯಿತು.
ದಂಪತಿ ನಡುವೆ ಭಿನ್ನಾಭಿಪ್ರಾಯ
ವೈಯಕ್ತಿಕ ಭಿನ್ನಾಭಿಪ್ರಾಯಗಳ ಹೊರತಾಗಿ, ಫಿರೋಜ್ ತಮ್ಮ ಹೆಂಡತಿಯೊಂದಿಗೆ ರಾಜಕೀಯವಾಗಿಯೂ ವೈಮನಸ್ಸು ಹೊಂದಿದ್ದರು, ಹೆಚ್ಚು ನಿರಂಕುಶವಾದಿ ಇಂದಿರಾಗಿಂತ ಪ್ರಜಾಪ್ರಭುತ್ವ ಮತ್ತು ಫೆಡರಲಿಸಂಗೆ ದೃಢವಾದ ಬದ್ಧತೆಯನ್ನು ಪ್ರದರ್ಶಿಸಿದರು. 1959 ರಲ್ಲಿ ಕೇರಳದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಕಮ್ಯುನಿಸ್ಟ್ ಸರ್ಕಾರವನ್ನು ವಜಾಗೊಳಿಸುವ ಕೇಂದ್ರದ ನಿರ್ಧಾರದ ಮೇಲೆ ದಂಪತಿ ನಡುವೆ ನಿರ್ದಿಷ್ಟವಾಗಿ ಕಹಿ ಘರ್ಷಣೆ ಸಂಭವಿಸಿತು.
ಸ್ವೀಡಿಷ್ ಪತ್ರಕರ್ತ ಬರ್ಟಿಲ್ ಫಾಕ್ ಅವರು ತಮ್ಮ ಪುಸ್ತಕ ಫಿರೋಜ್ ದಿ ಫಾರ್ಗಾಟನ್ ಗಾಂಧಿಯಲ್ಲಿ, ಇಂದಿರಾ ಗಾಂಧಿಯನ್ನು ಅವರ ಪತಿಯೇ ಮೊದಲ ಬಾರಿಗೆ ಫ್ಯಾಸಿಸ್ಟ್ ಎಂದು ಕರೆದರು ಎಂಬುದನ್ನು ಉಲ್ಲೇಖಿಸಿದ್ದಾರೆ.
ಇಂದಿರಾ ಹಾಗೂ ಫಿರೋಜ್ ನಡುವೆ ಸಾಕಷ್ಟು ಗಲಾಟೆ ನಡಿದಿತ್ತು. ನೆಹರು ಈ ವಿಷಯದಲ್ಲಿ ತುಂಬಾ ದುಃಖಿತರಾಗಿದ್ದರು. ಇಂದಿರಾ ಗಾಂಧಿಯವರ ನಡೆಯನ್ನು ಖಂಡಿಸಿದ್ದ ಫಿರೋಜ್, ನೀವು ಫ್ಯಾಸಿಸ್ಟ್ ಆಗಿ ನಡೆದುಕೊಳ್ಳುತ್ತಿದ್ದೀರಿ ಹಾಗೂ ಜನರನ್ನು ಬೆದರಿಸುತ್ತಿದ್ದೀರಿ ಎಂದು ಅವರ ಮೇಲೆ ಹರಿಹಾಯ್ದಿದ್ದರು.
ನನ್ನನ್ನು ಫ್ಯಾಸಿಸ್ಟ್ ಎಂದು ಕರೆಯಲು ಸಾಧ್ಯವಿಲ್ಲ ಹಾಗೂ ಈ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲವೆಂದು ಹೇಳಿ ಇಂದಿರಾ ಕೋಪದಿಂದ ಕೋಣೆಯಿಂದ ಹೊರನಡೆದಿದ್ದರು ಎಂದು ಬರ್ಟಿಲ್ ಫಾಕ್ ಆ ಘಟನೆಯನ್ನು ಯಥಾವತ್ತಾಗಿ ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 8, 1960 ರಂದು ಫಿರೋಜ್ ಗಾಂಧಿ ಹೃದಯಾಘಾತದಿಂದ ನಿಧನರಾದರು. ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಗೀತಾ ಮತ್ತು ರಾಮಾಯಣದ ಶ್ಲೋಕಗಳು ಅಂತೆಯೇ ಬೈಬಲ್ ಹಾಗೂ ಕುರಾನ್ ಧರ್ಮಗ್ರಂಥಗಳನ್ನು ಪಠಿಸಲಾಯಿತು. ಪಾರ್ಸಿ ಪುರೋಹಿತರಿಂದ ಅಗಲಿದ ಆತ್ಮಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಜೀವನದ ಹೊಸ ದಿಕ್ಕನ್ನು ಕಂಡುಕೊಂಡ ಅಲಹಾಬಾದ್‌ನ ಪಾರ್ಸಿ ಸ್ಮಶಾನದಲ್ಲಿ ಫಿರೋಜ್ ಸಮಾಧಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ