ಚುನಾವಣಾ ಹೊಸ್ತಿಲಲ್ಲಿ (Karnataka Elections) ರಾಜಕೀಯ ನಾಯಕರ ಹೇಳಿಕೆಗಳು ಕೆಲವೊಂದು ಗೊಂದಲಗಳನ್ನು ಸೃಷ್ಟಿಸುತ್ತವೆ. ಕೆಲವೊಮ್ಮೆ ಸತ್ಯಾಸತ್ಯತೆ ಅರಿಯದೆ ನೀಡಿದ ಈ ಹೇಳಿಕೆಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡು ಬಿಡುತ್ತವೆ. ಈ ಮೂಲಕ ತಪ್ಪು ಮಾಹಿತಿ ಮತ್ತಷ್ಟು ವ್ಯಾಪಿಸುತ್ತದೆ. ಸದ್ಯ ಮಂಡ್ಯದ ಉರಿಗೌಡ ಮತ್ತು ನಂಜೇಗೌಡರ (Uri and Nanje Gowda) ವಿಚಾರದಲ್ಲೂ ಇಂತಹುದೇ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಬಿಜೆಪಿ ನಾಯಕರು ಇವರು ಟಿಪ್ಪುವನ್ನು ಕೊಂದ ವೀರ ಕನ್ನಡಿಗರೆಂದು ಬಿಂಬಿಸುತ್ತಿದ್ದರೆ, ಅತ್ತ ಇತಿಹಾಸ ತಜ್ಞರು ಬೇರೆಯೇ ಅಭಿಪ್ರಾಯ ನೀಡಿದ್ದಾರೆ. ಒಟ್ಟಾರೆಯಾಗಿ ಮೋದಿ ಸಕ್ಕರೆ ನಾಡಿಗೆ (Mandya) ಭೇಟಿ ನೀಡಿ ಮರಳಿದಾಗಿನಿಂದ ಈ ಇಬ್ಬರ ಹೆಸರು ಭಾರೀ ಚರ್ಚೆ ಹುಟ್ಟು ಹಾಕಿದೆ. ಹಾಗಾದ್ರೆ ಉರಿಗೌಡ ಮತ್ತು ನಂಜೇಗೌಡರು ಯಾರು? ಅವರು ನಿಜಕ್ಕೂ ಇದ್ದರಾ ಅಥವಾ ಕಾಲ್ಪನಿಕ ವ್ಯಕ್ತಿಗಳಾ? ಟಿಪ್ಪುವನ್ನು ಕೊಂದಿದ್ದು ನಿಜಾನಾ? ಇತಿಹಾಸ ತಜ್ಞರು ಹೇಳಿದ್ದೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಹೌದು ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುವ ಮಾರ್ಗದಲ್ಲಿ ಟಿಪ್ಪು ಕೊಂದವರು ಎಂದೇ ಬಿಂಬಿಸಲಾಗುತ್ತಿರುವ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಮಹಾದ್ವಾರ ಅಳವಡಿಸಿರುವುದು ಚರ್ಚೆಗೆ ಕಾರಣವಾಗಿದೆ. ಹೌದು ನಗರ ವ್ಯಾಪ್ತಿಯ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ 1.8 ಕಿ.ಮೀ ರೋಡ್ ಶೋ ಆಯೋಜಿಸಲಾಗಿತ್ತು. ಆದರೆ ಮಾರ್ಗದುದ್ದಕ್ಕೂ 4 ಮಹಾದ್ವಾರ ಅಳವಡಿಸಲಾಗಿದ್ದು ರೋಡ್ ಶೋ ಆರಂಭವಾಗುವ ಪ್ರವಾಸಿ ಮಂದಿರದ ಬಳಿ ಸರ್. ಎಂ.ವಿಶ್ವೇಶ್ವರಯ್ಯ ಮಹಾದ್ವಾರ, ಜೆಸಿ ವೃತ್ತದಲ್ಲಿ ಕೆಂಪೇಗೌಡ, ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಕಲಾಗಿತ್ತು.
ಸಾರ್ವಜನಿಕರಿಂದ ವಿರೋಧ, ಮಹಾದ್ವಾರದ ಹೆಸರೇ ಬದಲು
ಈ ಮೂರು ಮಹಾದ್ವಾರಗಳ ಬಗ್ಗೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಸಮಸ್ಯೆಯಾಗಿದ್ದೇ 4ನೇ ಮಹಾದ್ವಾರ. ಫ್ಯಾಕ್ಟರಿ ಸರ್ಕಲ್‌ನಲ್ಲಿ ಹಾಕಿದ್ದ ‘ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರ’ಕ್ಕೆ ವ್ಯಕ್ತವಾದ ಪರ, ವಿರೋಧ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಟಿಪ್ಪು ಕೊಂದಿದ್ದು ಒಕ್ಕಲಿಗರು ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ್ದು, ಇದರ ಬೆನ್ನಲ್ಲೇ ಮಂಡ್ಯ ಜಿಲ್ಲಾಡಳಿತ ಮಹಾದ್ವಾರದ ಹೆಸರು ಬದಲಾವಣೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಉರಿಗೌಡ ಮತ್ತು ದೊಡ್ಡನಂಜೇಗೌಡ ಯಾರು ಎಂಬಿತ್ಯಾದಿ ಸವಾಲುಗಳು ಎದ್ದಿವೆ.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ನಮ್ಮದೇ ಸಮಾಜದವರು, ಮತಕ್ಕಾಗಿ ಟಿಪ್ಪು ಬಗ್ಗೆ ಮಾತಾಡ್ತಾರೆ! ಕೈ ನಾಯಕರಿಗೆ ಅಶ್ವತ್ಥ್ ನಾರಾಯಣ ಟಾಂಗ್
ಉರಿಗೌಡ ಹಾಗೂ ದೊಡ್ಡ ನಂಜೇಗೌಡರು ಟಿಪ್ಪು ಸುಲ್ತಾನ್‌ನನ್ನು ಕೊಂದರು ಎಂದು ಬಿಜೆಪಿ ನಾಯಕರಷ್ಟೇ ಸಭೆ ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ, ಈವರಿಬ್ಬರು ಬದುಕಿದ್ದ ಬಗ್ಗೆ ಯಾವುದೇ ಇತಿಹಾಸದಲ್ಲಿ ದಾಖಲೆಗಳಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಹೀಗಿದ್ದರೂ ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ನನ್ನು ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಗೌಡ ಸಮುದಾಯದ ಮಹಾನಾಯಕರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡರೇ ಟಿಪ್ಪುಅನ್ನು ಕೊಂದಿದ್ದಾಗಿ ವಾದಿಸಲಾರಂಭಿಸಿದ್ದಾರೆ.
ಇತಿಹಾಸ ತಜ್ಞರು ಹೇಳಿದ್ದೇನು?
ಆಶ್ವಥ್ ನಾರಾಯಣ್, ಸಿ.ಟಿ.ರವಿ ಬಿಜೆಪಿಗೆ ಅವಮಾನ ಮಾಡಲು ಹೊರಟ್ಟಿದ್ಧಾರೆ. ಇವರು ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ. ಸಚಿವ ಅಶ್ವಥ್ ನಾರಾಯಣ್ ಒಬ್ಬ ಮೂರ್ಖ, ಬೆಂಗಳೂರಿನಲ್ಲಿ ಕೆಂಪೇಗೌಡರ ಇದ್ದರು. ಇದೀಗ ಮಂಡ್ಯ ಮೈಸೂರು ಭಾಗದಲ್ಲಿ ಮುಸ್ಲಿಂ ವಿರೋಧ ಮಾಡಿಕೊಂಡು ಟಿಪ್ಪು ಕೊಂದವರು ಉರಿಗೌಡ-ನಂಜೇಗೌಡ ಎಂದು ಬಿಂಬಿಸುತ್ತಿದ್ದಾರೆ . ಈ ಬಗ್ಗೆ ಯಾವುದೇ ದಾಖಲೆಗಳು ಇತಿಹಾಸದಲ್ಲಿ ಇಲ್ಲ. ಇವರಿಬ್ಬರು ಕೇವಲ ಕಾಲ್ಪನಿಕ ಪಾತ್ರಗಳಷ್ಟೇ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿದ್ದಾರೆ.
ಇದನ್ನೂ ಓದಿ: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ; ಡಬಲ್ ಇಂಜಿನ್ ಸಾಧನೆ ಜಪಿಸಿದ ಪ್ರಧಾನಿ
ಮುಂದುವರೆಸಿ ಮಾತನಾಡಿರುವ ಅವರು ಇಷ್ಟು ವರ್ಷ ಇತಿಹಾಸ ಓದಿದ್ದೇನೆ. ಟಿಪ್ಪುವಿನ ಚರಿತ್ರೆಯಲ್ಲಿ ಎಲ್ಲಿಯೂ ಈ ಹೆಸರುಗಳು ಬರುವುದಿಲ್ಲ. ಇದು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹುಟ್ಟಿದ ಇತಿಹಾಸ. ಬ್ರಿಟಿಷ್- ಪರ್ಷಿಯನ್ ದಾಖಲೆಗಳಲ್ಲೂ ಇವರ ಪರಿಚಯ ಇಲ್ಲ. ಕಳೆದ ಎರಡು ವರ್ಷಗಳಿಂದ ಈ ಹೆಸರುಗಳು ಮುನ್ನೆಲೆಗೆ ಬಂದಿವೆ. ಟಿಪ್ಪು ಸುಲ್ತಾನ್ ಎಲ್ಲ ಜಾತಿ, ಜನಾಂಗಕ್ಕೂ ಸಹಾಯ ಹಸ್ತ ಚಾಚಿದ್ದ. ವಿಶೇಷವಾಗಿ ರೈತ ಬರ ಬಗ್ಗೆ ಕಾಳಜಿ ತೋರಿದ್ದ, ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದ. ಉಳುಮೆಗೆ ಜಮೀನುಗಳನ್ನು ನೀಡಿದ್ದಲ್ಲದೇ, ರೇಷ್ಮೆ ಕೃಷಿಯನ್ನು ಬೆಳೆಸಿ ಮೈಸೂರು ಭಾಗದ ರೈತರಿಗೆ ನೆರವಾದ. ಆದರೀಗ ಒಕ್ಕಲಿಗ ಸಮುದಾಯವನ್ನು ಟಾರ್ಗೆಟ್ ಮಾಡಿ ಉರಿಗೌಡ, ನಂಜೇಗೌಡರ ಕಥೆಯನ್ನು ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಟಿಪ್ಪು ಸತ್ತ ದಿನ ಏನಾಗಿತ್ತು?
ಟಿಪ್ಪು ಸತ್ತ ದಿನ ಏನಾಗಿತ್ತು ಎಂಬ ಬಗ್ಗೆಯೂ ಬೆಳಕು ಚೆಲ್ಲಿರುವ ಪ್ರೊ. ನಂಜರಾಜೇ ಅರಸ್ ಅಂದು ಬ್ರಿಟಿಷರು ಅವನ ಮನೆಯಲ್ಲಿ ಹುಡುಕಾಟ ನಡೆಸುತ್ತಾರೆ. ಬಹುಶಃ ಟಿಪ್ಪು ಬದುಕಿರಬಹುದು ಎಂಬ ಅನುಮಾಣ ಇದಕ್ಕೆ ಕಾರಣವಾಗಿರಬಹುದು. ಆದರೆ ಟಿಪ್ಪು ಹತನಾಗಿದ್ದಾನೆ ಎಂಬ ಮಾಹಿತಿ ಸಿಕ್ಕ ಬಳಿಕ ಮತ್ತೆ ಹಣದ ರಾಶಿಗಳ ಮಧ್ಯೆ ಆತನ ಶರೀರಕ್ಕಾಗಿ ಹುಡುಕಾಡುತ್ತಾರೆ. ಇದು ನಡೆದಿದೆ ಎನ್ನುವುದಕ್ಕೆ ಪುರಾವೆ ಇದೆ. ಟಿಪ್ಪು ಶವ ಸಿಕ್ಕ ನಂತರ ಜನರಲ್ ಹ್ಯಾರೀಸ್- ಇಂದು ಭಾರತ ನಮ್ಮದಾಯಿತು. ನಾವು ಭಾರತವನ್ನು ಗೆದ್ದೆವು ಎಂದು ಸಂಭ್ರಮಿಸಿದ್ದರು. ಟಿಪ್ಪು ಪರ ಹಾಗೂ ವಿರೋಧ ಇದ್ದ ಎಲ್ಲಾ ಇತಿಹಾಸಕಾರರೂ ಇದನ್ನೇ ಬರೆದಿದ್ದಾರೆ.
ಆದರೆ ಇತ್ತೀಚೆಗೆ ಈ ಇತಿಹಾಸವನ್ನು ತಿರುಚಿ ಟಿಪ್ಪು ರಣರಂಗದಲ್ಲಿ ಇರುವುದು ಗೊತ್ತಾಗಿ, ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಕತ್ತಿ ಹಿಡಿದು ಹೊರಟರು. ಯುದ್ಧ ಮಾಡುತ್ತಿದ್ದ ಟಿಪ್ಪು ಇವರನ್ನು ದೂರದಿಂದ ನೋಡಿ ಓಡಿಹೋದ. ಆದರೆ ಈ ಇಬ್ಬರು ಸಹೋದರರು ಬೆನ್ನಟ್ಟಿ ಆತನನ್ನು ಕೊಂದರು ಎಂದು ವಾಟ್ಸಾಪ್ ಯೂನಿವರ್ಸಿಟಿ ಮೂಲಕ ತಪ್ಪು ಮಾಹಿತಿ ಹಂಚಲಾಗುತ್ತಿದೆ. ಹಾಗಾದರೆ ಟಿಪ್ಪುವಿನ ಸೈನಿಕರು ಏನು ಮಾಡುತ್ತಿದ್ದರು? ಕಡ್ಲೆಕಾಯಿ ತಿನ್ನುತ್ತಿದ್ದರೆ? ಈ ಸಹೋದರರು ಭಾರತೀಯರಾದ ಕಾರಣ ಕಪ್ಪು ವರ್ಣದವರು. ನಮ್ಮ ಸೈನಿಕರಲ್ಲ ಎಂದು ತಿಳಿದೂ ಬ್ರಿಟಿಷರು ಹಾಗೆಯೇ ಬಿಟ್ಟುಬಿಟ್ಟರೆ? ಎಂದು ಪ್ರೊ. ನಂಜರಾಜೇ ಅರಸ್ ಪ್ರಶ್ನಿಸಿದ್ದಾರೆ.
ವೈರಲ್ ಆಗುತ್ತಿರುವ ಚಿತ್ರಗಳಲ್ಲಿರುವ ಇಬ್ಬರು ನಾಯಕರು ಯಾರು?
ಸದ್ಯ ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಎನ್ನಲಾದ ಫೋಟೋ ಒಂದು ಭಾರೀ ವೈರಲ್ ಆಗಲಾರಂಭಿಸಿವೆ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ನೆಟ್ಟಿಗರು ಈ ಫೋಟೋಗಳ ಅಸಲಿ ಕಥೆ ಬಯಲಿಗೆಳೆದಿದ್ದಾರೆ. ಫೋಟೋದಲ್ಲಿರುವುದು ತಮಿಳು ನೆಲದ ವೀರರಾದ ಮರುದು ಪಾಂಡ್ಯರ ಚಿತ್ರಗಳು. ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದರು. ಈ ಇಬ್ಬರು ಸಹೋದರರು ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಮರುತು ಪಾಂಡ್ಯರದ್ದು ದಕ್ಷಿಣ ಭಾರತದ ವಿಮೋಚನಾ ಯುದ್ಧದ ಮೊದಲ ಹೋರಾಟವಾಗಿದೆ. ಆದರೆ ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.
ರಾಜಕೀಯ ಲಾಭ
ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಟಿಪ್ಪು ಸುಲ್ತಾನ್‌ನನ್ನು ಕೊಂದ ದೋಷವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂಬುವುದು ಈ ಹಿಂದಿನಿಂದಲೂ ಕೇಳಿ ಬಂದ ಆರೋಪವಾಗಿತ್ತು. ಆದರೀಗ ಇಷ್ಟೆಲ್ಲಾ ಬೆಳವಣಿಗಗಳಾಗಿದ್ದರೂ ಬಿಜೆಪಿ ನಾಯಕರು ಮಾತ್ರ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಟಿಪ್ಪುವಿನ ಬಗ್ಗೆ ಕಾಳಜಿ ತೋರಿಸಿ, ಉರಿಗೌಡರ ಬಗ್ಗೆ ದ್ವೇಷ ಸಾರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ