ಕರ್ನಾಟಕ ಕುರುಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು (Congress win) ಬೀಗಿದೆ. ಆಡಳಿತಾರೂಢ ಬಿಜೆಪಿ (BJP) ಹಾಗೂ ಕಿಂಗ್ ಮೇಕರ್ ಆಗುವ ಕನಸು ಕಂಡಿದ್ದ ಜೆಡಿಎಸ್ (JDS) ಎರಡೂ ಮೈತ್ರಿ ಮಾಡಿಕೊಳ್ಳಲೂ ಸಾಧ್ಯವಾಗದಷ್ಟು ಸ್ಥಾನಗಳನ್ನು ಪಡೆದಿದೆ. ಬಿಜೆಪಿ 66, ಜೆಡಿಎಸ್ 19 ಹಾಗೂ ಇತರರು 4 ಸ್ಥಾನ ಗೆದ್ದಿದ್ರೆ, ಕಾಂಗ್ರೆಸ್ ಬರೋಬ್ಬರಿ 135 ಸ್ಥಾನಗಳನ್ನು ಪಡೆದು, ವಿಜಯದ ನಗೆ ಬೀರಿದೆ. ಕಾಂಗ್ರೆಸ್‌ನ ಈ ಭರ್ಜರಿ ಗೆಲುವಿಗೆ ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ (Bharat Jodo) ಯಾತ್ರೆ, ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಮಾಸ್ಟರ್ ಪ್ಲಾನ್, ಡಿಕೆಶಿ (DK Shivakumar) ಸಂಘಟನೆ, ಸಿದ್ದರಾಮಯ್ಯ (Siddaramaiah) ಮಾಸ್ ಲೀಡರ್ ಇಮೇಜ್, ರಂದೀಪ್ ಸುರ್ಜೇವಾಲ (Randeep Singh Surjewala) ದೂರದೃಷ್ಟಿ ಅಂತ ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲವುಗಳ ಜೊತೆಗೆ ಕಾಂಗ್ರೆಸ್ ವಿಜಯದ ಹಿಂದೆ ಇನ್ನೊಬ್ಬ ವ್ಯಕ್ತಿಯಿದ್ದಾರೆ. ಅವರ ಲೆಕ್ಕಾಚಾರ, ತಂತ್ರಗಾರಿಕೆ ಇತ್ಯಾದಿಗಳಿಂದಲೇ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಹಾಗಾದ್ರೆ ಆ ವ್ಯಕ್ತಿ ಯಾರು? ಕೈ ಗೆಲುವಲ್ಲಿ ಅವರ ಪಾತ್ರವೇನು? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ ಓದಿ…
ಕಾಂಗ್ರೆಸ್ ಗೆಲುವಿನ ಹಿಂದಿರುವ ಸುನೀಲ್ ಕುನಗೋಲು
ಈ ಬಾರಿ ಕರ್ನಾಟಕ ಕಾಂಗ್ರೆಸ್ ಗೆಲುವಿನ ಹಿಂದಿರುವ ವ್ಯಕ್ತಿ ಹೆಸರು ಸುನೀಲ್ ಕುನಗೋಲು. ಬಳ್ಳಾರಿಯಲ್ಲಿ ಹುಟ್ಟಿದ ಇವರು ಬೆಳೆದಿದ್ದು ಬೆಂಗಳೂರಲ್ಲಿ, ಬಳಿಕ ಚೆನ್ನೈಗೆ ಶಿಫ್ಟ್ ಆದರು. ಅಂದಹಾಗೆ ಇವರು ಚುನಾವಣಾ ತಂತ್ರಗಾರ. ಚುನಾವಣಾ ತಂತ್ರಗಾರ ಅಂತಾ ಈಗಾಗಲೇ ಫೇಮಸ್ ಆಗಿರುವ ಪ್ರಶಾಂತ್ ಕಿಶೋರ್ ಅವರ ಸಹವರ್ತಿ.
ಪ್ರಶಾಂತ್ ಕಿಶೋರ್ ಬಿಟ್ಟು ಸ್ವಂತದ್ದಾಗಿ ಕೆಲಸ ಆರಂಭ
ಪ್ರಶಾಂತ್ ಕಿಶೋರ್ ಹಾಗೂ ಸುನೀಲ್ ಕುನಗೋಲು ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರೂ ಇಬ್ಬರು ತದ್ವಿರುದ್ಧ ಎನ್ನುವುದು ಇವರನ್ನು ಬಲ್ಲವರ ಮಾತು. 2014ರ ಚುನಾವಣೆ ವೇಳೆ ಇಬ್ಬರೂ ಬೇರೆ ಬೇರೆ ತಂಡವಾದರು.
ಇದನ್ನೂ ಓದಿ: BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?
ನರೇಂದ್ರ ಮೋದಿ ಟೀಂನಲ್ಲಿದ್ದ ಸುನೀಲ್
2014ರಲ್ಲಿ ಪ್ರಶಾಂತ್ ಕಿಶೋರ್ ತಂಡದಿಂದ ಬೇರ್ಪಟ್ಟ ಸುನೀಲ್ ಕುನಗೋಲ್, ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ತಂತ್ರಗಾರಿಕಾ ತಂಡ ಸೇರಿಕೊಂಡರು. ಮೋದಿ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಬಳಿಕ ಬಿಜೆಪಿಯ ಬಿಲಿಯನ್ ಮೈಂಡ್ಸ್ ಅಸೋಸಿಯೇಷನ್ (ABM) ತಂಡದಲ್ಲಿದ್ದು, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಗಳಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ಇಲ್ಲೆಲ್ಲ ಗೆಲುವು ಬಂದಿದ್ದು, ಸುನೀಲ್ ಕುನಗೋಲ್‌ಗೆ ಖ್ಯಾತಿ ತಂದುಕೊಟ್ಟಿತು.
ಮೈಂಡ್ ಶೇರ್ ಅನಾಲಿಟಿಕ್ಸ್ ಹೆಸರಲ್ಲಿ ಕಂಪನಿ
ಪ್ರಶಾಂತ್ ಕಿಶೋರ್ ತಂಡದಿಂದ ಹೊರಬಂದ ಸುನೀಲ್ ಕುನಗೋಲು ತಮ್ಮದೇ ತಂಡ ಕಟ್ಟಿದರು. ಅದಕ್ಕೆ ಮೈಂಡ್ ಶೇರ್ ಅನಾಲಿಟಿಕ್ಸ್ ಅಂತ ಹೆಸರಿಟ್ಟರು. ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಇವರ ಸೇವೆಯನ್ನು ಬಳಸಿಕೊಂಡಿತು.
2016ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸುನೀಲ್ ಕೆಲಸ ಮಾಡಿದ್ರು. ಎಂಕೆ ಸ್ಟಾಲಿನ್ ಅವರ “ನಮಕ್ಕು ನಾಮೆ” ಅಭಿಯಾನವನ್ನು ವಿನ್ಯಾಸಗೊಳಿಸಿದ್ದು ಇವರೇ. ಇದು ಯಶಸ್ವಿಯಾಯಿತು ಮತ್ತು ಸ್ಟಾಲಿನ್ ಅವರ ಸಾರ್ವಜನಿಕ ಇಮೇಜ್ ಅನ್ನು ಜನಪ್ರಿಯಗೊಳಿಸಿತು. ಅಲ್ಲಿಂದ ಮುಂದೆ ಅವರು ಅಮಿತ್ ಶಾ ಟೀಂಗೆ ಸೇರಿಕೊಂಡರು. ಬಳಿಕ ಅನೇಕ ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡಿದ್ರು.
"ಭಾರತ್ ಜೋಡೋ ಯಾತ್ರೆ ಹಿಂದಿನ ರೂವಾರಿ
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿ, ಅಭೂತ ಪೂರ್ವ ಯಶಸ್ಸು ಪಡೆದಿದ್ದರು. ಹೀಗೆ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಿರ್ಣಾಯಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಜನರೊಂದಿಗೆ ಸಂಪರ್ಕ ಸಾಧಿಸಲು ಈ ಯಾತ್ರೆ ಸಹಾಯ ಮಾಡಿತು.
ಪೇ ಸಿಎಂ ಇವರದ್ದೇ ಐಡಿಯಾ!
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಪೇಸಿಎಂ ಅಭಿಯಾನ ಕೈಗೊಂಡಿದ್ದರು. ಇದು ಬಿಜೆಪಿಗೆ ಭಾರೀ ಆಘಾತ ನೀಡಿತ್ತು. ರಾಜ್ಯ ಸರ್ಕಾರದ ಕಮಿಷನ್ ಆರೋಪದ ಜನರಿಗೆ ರೀಚ್ ಮಾಡುವಲ್ಲಿ ಸೋಲುತ್ತಿದ್ದ ಕಾಂಗ್ರೆಸ್, ಪೇಸಿಎಂ ಮೂಲಕ ಸಕ್ಸಸ್ ಆಯ್ತು. ಇದರ ಜೊತೆಗೆ 40% ಸರ್ಕಾರ ಅನ್ನೋ ಕ್ಯಾಂಪೇನ್ ಅನ್ನು ಕಾಂಗ್ರೆಸ್ ಮಾಡಿತ್ತು. ಇವೆಲ್ಲವನ್ನೂ ಯೋಜಿಸಿದ್ದು ಸುನೀಲ್ ಕುನಗೋಲು
ಇದನ್ನೂ ಓದಿ: MLA’s Salary: ನಮ್ಮ ಶಾಸಕರ ಸಂಬಳವೆಷ್ಟು? ಸಚಿವರ ವೇತನದ ಬಗ್ಗೆ ನಿಮಗೆಷ್ಟು ಗೊತ್ತು?
ಸುನೀಲ್ ಕುನಗೋಲ್‌ಗಿದೆ ದೊಡ್ಡ ಟಾಸ್ಕ್
ಕರ್ನಾಟಕ ಕಾಂಗ್ರೆಸ್‌ನ ಅಭೂತಪೂರ್ವ ಯಶಸ್ಸಿನ ಬಳಿಕ ಸುನೀಲ್ ಕುನಗೋಲ್‌ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಳ್ಳುವುದು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಕೊಂಡೊಯ್ಯುವುದು ಇವರ ಜವಾಬ್ದಾರಿಯಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬಿಜೆಪಿ ವಿರುದ್ಧ ಪ್ರಬಲವಾಗುವಂತೆ ನೋಡಿಕೊಳ್ಳುವುದು ಇವರಿಗಿರುವ ಅತೀ ದೊಡ್ಡ ಟಾಸ್ಕ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ