ವಿಶ್ವದ ಪ್ರಭಾವಿ ನಾಯಕರಲ್ಲಿ (world's most influential leaders) ಒಬ್ಬರಾಗಿದ್ದ, ಜಪಾನ್‌ನ (Japan) ಮಾಜಿ ಪ್ರಧಾನ ಮಂತ್ರಿ (EX Prime Minister) ಶಿಂಜೋ ಅಬೆ (Shinzo Abe) ನಿಧನರಾಗಿದ್ದಾರೆ. ಭಾಷಣ ಮಾಡುತ್ತಿದ್ದಾಗಲೇ ಅಪರಿಚಿತ ವ್ಯಕ್ತಿಯೊಬ್ಬ ಶಿಂಜೋ ಅಬೆ ಮೇಲೆ ಗುಂಡು ಹಾರಿಸಿದ್ದ. ಈ ವೇಳೆ ಶಿಂಜೋ ಅಬೆ ಅವರಿಗೆ ಹೃದಯಾಘಾತವೂ (Heart Attack) ಉಂಟಾಗಿದೆ. ಬಳಿಕ ತಜ್ಞ ವೈದ್ಯರು ಚಿಕಿತ್ಸೆ ನೀಡಿ, ಅವರನ್ನು ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸಿದ್ದರು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಚಿಕಿತ್ಸೆ (Treatment) ಫಲಿಸದೇ ಶಿಂಜೋ ಅಬೆ ಮೃತಪಟ್ಟಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ, ಕಂಬನಿ ಸುರಿಸಿದೆ. ಭಾರತದ ಪ್ರಧಾನಿ (Indian Prime Minister) ನರೇಂದ್ರ ಮೋದಿ (Narendra Modi) ಅವರು ಶಿಂಜೋ ಅಬೆ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಭಾರತದ ಅತ್ಯುತ್ತಮ ಸ್ನೇಹಿ ರಾಷ್ಟ್ರದ ಮಾಜಿ ಮುಖ್ಯಸ್ಥ, ಪದ್ಮವಿಭೂಷಣ (Padma Vibhooshan) ಶಿಂಜೋ ಅಬೆ ನಿಧನಕ್ಕೆ ಭಾರತೀಯರೂ ಕೂಡ ಮರುಗಿದ್ದಾರೆ. ಹಾಗಾದರೆ ಜಪಾನ್‌ನ ನಾಯಕ ಶಿಂಜೋ ಅಬೆ ಯಾರು? ಅವರ ಹಿನ್ನೆಲೆ ಏನು? ಭಾರತದೊಂದಿಗಿನ ಅವರ ಸಂಬಂಧ ಏನು? ಮೋದಿ ಜೊತೆ ಅವರ ಸ್ನೇಹ ಹೇಗಿತ್ತು? ಇಲ್ಲಿದೆ ನೋಡಿ ಭಾರತದ ಡಿಯರ್ ಫ್ರೆಂಡ್ ಶಿಂಜೋ ಅಬೆ ಅವರ ಬಗೆಗಿನ ಮಾಹಿತಿ…
ರಾಜಕೀಯ ಕುಟುಂಬದಲ್ಲೇ ಶಿಂಜೋ ಅಬೆ ಜನನ
ಶಿಂಜೋ ಅಬೆ 2ನೇ ವಿಶ್ವ ಸಮರದ ಬಳಿಕ ಜನಿಸಿದ ಮೊದಲ ಜಪಾನಿನ ಪ್ರಧಾನಿಯಾಗಿದ್ದರು. ಅವರು ಸೆಪ್ಟೆಂಬರ್ 21, 1954 ರಂದು ಟೋಕಿಯೊದಲ್ಲಿ ಜನಿಸಿದರು. ಅಬೆ ರಾಜಕೀಯ ಕುಟುಂಬದಿಂದ ಬಂದವರು. ಅವರ ಅಜ್ಜ ಕೂಡ ಪ್ರಧಾನಿಯಾಗಿದ್ದರು ಮತ್ತು ಅವರ ತಂದೆ ಮಾಜಿ ವಿದೇಶಾಂಗ ಸಚಿವರಾಗಿದ್ದರು. ಅಕಿ ಅಬೆಯನ್ನು ವಿವಾಹವಾಗಿರುವ ಶಿಂಜೋ ಅಬೆಗೆ ಮಕ್ಕಳಿರಲಿಲ್ಲ.
ರಾಜಕೀಯದಲ್ಲೇ ಸದಾ ಆಸಕ್ತಿ
ರಾಜಕೀಯ ಕುಟುಂಬದಲ್ಲಿ ಜನಿಸಿದ ಅಬೆರಿಗೆ, ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಆಸಕ್ತಿಗಿಂತಲೂ ರಾಜಕೀಯದತ್ತ ಹೆಚ್ಚು ಒಲವು ಇತ್ತು. ಖಾಸಗಿ ಕಂಪನಿಯ ಉನ್ನತ ಹುದ್ದೆಯಲ್ಲಿ ಇದ್ದರೂ, ಅದಕ್ಕೆ ರಾಜೀನಾಮೆ ನೀಡಿದರು. 1982ರಲ್ಲಿ ವಿದೇಶಾಂಗ ಸಚಿವರಿಗೆ ಆಪ್ತ ಸಹಾಯಕನಾಗುವ ಅವಕಾಶ ಒದಗಿಬಂತು. ಆಗ ಶಿಂಜೋ ಅಬೆ ತಮ್ಮ ಕೆಲಸಕ್ಕೆ ರಾಜೀನಾಮೆಯಿತ್ತು ಪೂರ್ಣಪ್ರಮಾಣದ ರಾಜಕೀಯ ಬದುಕಿಗೆ ಹೊರಳಿದರು.
ಚಳುವಳಿಯ ಮೂಲಕ ಹೆಸರು ಮಾಡಿದ ಅಬೆ
ಬರಲ್ ಡೆಮೋಕ್ರಟಿಕ್ ಪಕ್ಷದ ನೇತಾರರಾಗಿರುವ ಅಬೆ, ಬಲಪಂಥೀಯ ವಿಚಾರಗಳ ನಿಪ್ಪೋನ್ ಕೈಗಿ ಚಳುವಳಿಯ ಮೂಲಕ ಹೆಸರಾದವರು. ಶಿಂಜೋ ಅಬೆ ಅವರ ಅಜ್ಜ ಅಂದರೆ, ತಾಯಿಯ ತಂದೆ 1957ರಿಂದ 1960ರ ಅವಧಿಗೆ ಜಪಾನ್ ಪ್ರಧಾನಿಯಾಗಿದ್ದ ನೊಬುಸುಕೆ ಕಿಷಿ. ಶಿಂಜೋ ಅಬೆ ಅವರರ ತಂದೆಯ ತಾತ ದ್ವಿತೀಯ ವಿಶ್ವಯುದ್ಧದಲಿ ಜಪಾನಿನ ಸೇನಾಧಿಪತಿಯಾಗಿದ್ದ ಯೋಷಿಮಾಸ ಒಷಿಮಾ. ಜಪಾನ್ ಯುದ್ಧ ಸೋತ ನಂತರ ಕಿಷ್ಸಿರನ್ನು ಸುಗಮೋ ಸೆರೆಮನೆಯಲ್ಲಿ ಬಂಧನದಲ್ಲಿ ಇಡಲಾಗಿತ್ತು. ಹೀಗಾಗಿ ರಾಜಕೀಯ ಮತ್ತು ಹೋರಾಟ ಶಿಂಜೋ ಅಬೆ ಅವರ ರಕ್ತದಲ್ಲೇ ಇತ್ತು.
ಇದನ್ನೂ ಓದಿ: Kichha Sudeep: ಕಿಚ್ಚ ಸುದೀಪ್ ವಿರುದ್ಧ ಯುವಕನ ವಿಡಿಯೋ! ಇದು ಆಕ್ರೋಶವೋ? ಅವಹೇಳನವೋ?
ಜಪಾನ್‌ನ ಅತೀ ದೀರ್ಘಾವಧಿಯ ಪ್ರಧಾನಿ
ಜಪಾನ್‌ನ ದೀರ್ಘಾವಧಿಯ ಯುದ್ಧಾನಂತರದ ಪ್ರಧಾನ ಮಂತ್ರಿ ಎಂಬ ಖ್ಯಾತಿ ಶಿಂಜೋ ಅಬೆ ಅವರದ್ದಾಗಿದೆ. ಅಬೆ ಅವರು 2012 ಮತ್ತು 2020 ರ ನಡುವೆ ಎಂಟು ವರ್ಷಗಳ ಕಾಲ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಅದಕ್ಕೂ ಮೊದಲು, 2006 ರಿಂದ 2007 ರವರೆಗೆ ಪ್ರಧಾನಿಯಾಗಿದ್ದರು. 2012ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರು. ಬಳಿಕ ಅನಾರೋಗ್ಯ ಕಾರಣದಿಂದ ಆಗಸ್ಟ್ 2020 ರಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ನಂತರ ಅವರು ದೀರ್ಘಕಾಲದ ಕರುಳಿನ ಕಾಯಿಲೆಯಾದ ಅಲ್ಸರೇಟಿವ್ ಕೊಲೈಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಬಹಿರಂಗಪಡಿಸಿದರು. ಅವರ ನಂತರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ನಾಯಕ ಯೋಶಿಹೈಡ್ ಸುಗಾ ಅವರು ಅಧಿಕಾರಕ್ಕೆ ಬಂದರು, ನಂತರ ಅವರ ಬಳಿಕ ಫ್ಯೂಮಿಯೊ ಕಿಶಿಡಾ ಅವರು ಸದ್ಯ ಜಪಾನ್ ಪ್ರಧಾನಿ ಆಗಿದ್ದಾರೆ.
ವಿದೇಶ ಸಂಬಂಧ ಬಲಗೊಳಿಸಲು ಪ್ರಯತ್ನ
ಶಿಂಜೋ ಅಬೆ ಭಾರತ-ಆಸ್ಟ್ರೇಲಿಯಾ-ಅಮೇರಿಕೆ-ಗಳೊಂದಿಗೆ ರಕ್ಷಣಾ ಸಂಂಬಧ ಬಲಪಡಿಸಿಕೊಳ್ಳಲು ಪ್ರಯಕ್ನಿಸಿದರು. ಆದಾಗ್ಯೂ, ಎರಡನೆಯ ಮಹಾಯುದ್ಧದ ನಂತರ ಮೊದಲ ಬಾರಿಗೆ ಸಾಗರೋತ್ತರ ಹೋರಾಡಲು ಸೈನ್ಯವನ್ನು ಕಳುಹಿಸುವಲ್ಲಿ ಅವರು ಯಶಸ್ವಿಯಾದರು. ರಕ್ಷಣಾ ವೆಚ್ಚವನ್ನು ಹೆಚ್ಚಿಸುವ ಮೂಲಕ ದೇಶದ ಮಿಲಿಟರಿಯನ್ನು ಬಲಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.
ಅಬೆ ವಿವಾದಾತ್ಮಕ ನಿರ್ಧಾರ
ಅವರ ಹೆಚ್ಚು-ವಿವಾದಾತ್ಮಕ ಗುರಿಗಳಲ್ಲಿ ಒಂದು ಸಂವಿಧಾನದ 9 ನೇ ವಿಧಿಯನ್ನು ಪರಿಷ್ಕರಿಸುವುದು . ಇದು "ಜಪಾನಿನ ಜನರು ಯುದ್ಧವನ್ನು ರಾಷ್ಟ್ರದ ಸಾರ್ವಭೌಮ ಹಕ್ಕು ಎಂದು ಶಾಶ್ವತವಾಗಿ ತ್ಯಜಿಸುತ್ತಾರೆ" ಎಂದು ಷರತ್ತು ವಿಧಿಸುತ್ತದೆ. ಎರಡನೆಯ ಮಹಾಯುದ್ಧದ ಅಂತ್ಯದ ನಂತರ ಹೊಸದಾಗಿ ಮುದ್ರಿಸಲಾದ ಜಪಾನಿನ ಸಂವಿಧಾನಕ್ಕೆ ಈ ಲೇಖನವನ್ನು ಸೇರಿಸಲಾಯಿತು. ಅಮೆರಿಕಾದ ನಿರ್ದೇಶನದ ಮೇರೆಗೆ ಸಂವಿಧಾನದಲ್ಲಿನ ಒಂದು ಷರತ್ತು ದೇಶವು ಸೈನ್ಯ, ನೌಕಾಪಡೆ ಅಥವಾ ವಾಯುಪಡೆಯನ್ನು ನಿರ್ವಹಿಸುವುದನ್ನು ನಿಷೇಧಿಸಿತು. ಇದು ಭಾರೀ ವವಿದಾಕ್ಕೆ ಕಾರಣವಾಯ್ತು.
ಭಾರತದೊಂದಿಗೆ ಅಬೆ ಸ್ನೇಹ ಸಂಬಂಧ
ಶಿಂಜೋ ಅಬೆ, ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು. ಭಾರತಕ್ಕೆ ಬುಲೆಟ್ ರೈಲು, ಜಪಾನ್ ಏಡಿಬಿಯಿಂದ ಹಲವು ಮೆಟ್ರೋ ರೈಲುಗಳಿಗೆ ಸುಲಭ ಸಾಲ, ಹೀಗೆ ಹಲವು ಬಗೆಯಿಂದ ಸಹಾಯ ಮಾಡಿದರು. 2014 ರಲ್ಲಿ ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಮೂಲಕ ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾದ ಮೊದಲ ಜಪಾನಿನ ಪ್ರಧಾನಿ ಅವರೇ ಆಗಿದ್ದರು.
ಭಾರತ-ಜಪಾನ್ ಬಾಂಧವ್ಯದಲ್ಲಿ ಪರಿವರ್ತನೆ
2006-07ರಲ್ಲಿ ತಮ್ಮ ಮೊದಲ ಅವಧಿಯಲ್ಲಿ, ಅಬೆ ಭಾರತಕ್ಕೆ ಭೇಟಿ ನೀಡಿದರು ಮತ್ತು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಅವರು ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದರು: ಜನವರಿ 2014, ಡಿಸೆಂಬರ್ 2015 ಮತ್ತು ಸೆಪ್ಟೆಂಬರ್ 2017 ರಲ್ಲಿ ಭಾರತಕ್ಕೆ ಬಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಜೊತೆ ಸ್ನೇಹ
ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಜೋ ಅಬೆ ಅತ್ಯುತ್ತಮ ಸ್ನೇಹಿತರಾಗಿದ್ದರು. ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಾಪ್ತ ಮಿತ್ರ ಶಿಂಜೋ ಅಬೆ. ಮೋದಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಶಿಂಜೋ ಅಬೆ ನೇತೃತ್ವದ ಸರ್ಕಾರ ಭಾರತದಲ್ಲಿ ಹಲವಾರು ಹೂಡಿಕೆಗಳನ್ನು ಮಾಡಿತು. ಮುಂಬೈ, ಅಹಮದಾಬಾದ್ ಬುಲೆಟ್ ಟ್ರೇನ್), ದೇಶದ ವಿವಿಧ ನಗರಗಳ ಮೆಟ್ರೋ ರೈಲುಗಳ ನಿರ್ಮಾಣದಲ್ಲಿ ಜಪಾನ್ ಭಾಗಿಯಾಗಲು ಅಬೆ ಹಾಗೂ ಮೋದಿ ಅವರ ಒಪ್ಪಂದವೇ ಕಾರಣವಾಗಿತ್ತು. 2018ರಲ್ಲಿ ಭಾರತ ಪ್ರವಾಸದ ವೇಳೆ ನರೇಂದ್ರ ಮೋದಿ ಹಾಗೂ ಶಿಂಜೋ ಅಬೆ ಗಂಗಾ ನದಿ ತೀರದಲ್ಲಿ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದ ಫೋಟೋ ಸಖತ್ ವೈರಲ್ ಆಗಿತ್ತು. ಈ ವೇಳೆ ಭಾರತದಲ್ಲಿ ಅಬೆ ಅವರ ರೋಡ್ ಶೋ ಕೂಡ ನಡೆದಿತ್ತು. ಈ ವರ್ಷದ ಮೇ 24 ರಂದು ಟೋಕಿಯೊದಲ್ಲಿ ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಅವರನ್ನು ಭೇಟಿಯಾದಾಗ ಮೋದಿಯವರ ಕೊನೆಯ ಭೇಟಿಯಾಗಿತ್ತು.
ಇದನ್ನೂ ಓದಿ: Explained: ನೂಪುರ್ ಶರ್ಮಾ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ್ದೇಕೆ?
ಭಾರತದಲ್ಲಿ ಶಿಂಜೋ ಅಬೆಗೆ ಗೌರವ
2005ರಲ್ಲಿ ದೆಹಲಿಯ ಜೆ.ಎನ್.ಯು ವಿವಿಯ ಗೌರವ ಡಾಕ್ಟರೇಟ್ ನೀಡಿ ಶಿಂಜೋ ಅಬೆಯವರನ್ನು ಗೌರವಿಸಲಾಗಿದೆ. ಇನ್ನು ಭಾರತ ಸರ್ಕಾರವು 2021 ರ ಜನವರಿಯಲ್ಲಿ ಅಬೆ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ