ರಾಜ್ಯದ ಹಿರಿಯ ಐಎಎಸ್ ಅಧಿಕಾರಿ (Senior IAS officer) ರೋಹಿಣಿ ಸಿಂಧೂರಿ (Rohini Sindhuri) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ಹಲವು ವಿವಾದಗಳಿಂದ (controversy) ಸುದ್ದಿಯಾಗಿದ್ದ ರೋಹಿಣಿ ಸಿಂಧೂರಿ, ಈಗ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದಾರೆ. ಇವರ ಹೆಸರನ್ನು ವಿವಾದದಲ್ಲಿ ಎಳೆದು ತಂದವರು ಹಿರಿಯ ಐಎಎಸ್ ಅಧಿಕಾರಿ ಡಿ ರೂಪಾ (senior IAS officer D Roopa). ರೋಹಿಣಿ ಸಿಂಧೂರಿ ಬಗ್ಗೆ ಟ್ವೀಟ್ ಮಾಡಿದ್ದ ಡಿ ರೂಪಾ, 20 ಪ್ರಶ್ನೆಗಳನ್ನು ಕೇಳಿದ್ದರು. ಅಲ್ಲದೇ ಅವರ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿ, ಟಾಂಗ್ ಕೊಟ್ಟಿದ್ದರು. ಇತ್ತ ರೋಹಿಣಿ ಸಿಂಧೂರಿ ಕೂಡ ಖಾರವಾಗಿ ಪ್ರತಿಕ್ರಿಯಿಸಿ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಸದ್ಯ ಇಬ್ಬರು ಐಎಎಸ್ ಹಾಗೂ ಐಪಿಎಸ್ ಮಹಿಳಾ ಅಧಿಕಾರಿಗಳ ನಡುವಿನ ಸಮರ ತಾರಕಕ್ಕೇರಿದೆ. ಅಂದಹಾಗೆ ಈ ರೋಹಿಣಿ ಸಿಂಧೂರಿ ಯಾರು? ಅವರು ಮಾಡಿಕೊಂಡಿರುವ ವಿವಾದಗಳೇನು? ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ…
ರೋಹಿಣಿ ಸಿಂಧೂರಿ ಯಾರು?
ರೋಹಿಣಿ ಸಿಂಧೂರಿ ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ ಹಾಗೂ ಅಷ್ಟೇ ವಿವಾದಿತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಆಂಧ್ರ ಮೂಲದ ಇವರು 2009ರ ಕರ್ನಾಟಕ ಕೇಡರ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ. ಹಾಸನ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ರೋಹಿಣಿ ಸಿಂಧೂರಿ, ಪ್ರಸ್ತುತ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಾಸನದಲ್ಲಿದ್ದಾಗ ರೇವಣ್ಣ ಜೊತೆ ಸಂಘರ್ಷ
ಈ ಹಿಂದೆ ಹಾಸನದಲ್ಲಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿದ್ದರು. ಆಗ- ಅಂದಿನ ಸಚಿವ ಎಚ್‌ಡಿ ರೇವಣ್ಣ ಜೊತೆ ರೋಹಿಣಿ ಸಿಂಧೂರಿ ಸಂಘರ್ಷ ಏರ್ಪಟ್ಟಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲೇ ರೇವಣ್ಣ ಹಾಗೂ ರೋಹಿಣಿ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದನ್ನೂ ಓದಿ: 7th Pay Commission: ಏನಿದು ರಾಜ್ಯ 7ನೇ ವೇತನ ಆಯೋಗ? ಇದರಿಂದ ಸರ್ಕಾರಿ ನೌಕರರಿಗೆ ಆಗುವ ಅನುಕೂಲಗಳೇನು?
ರೇವಣ್ಣ-ರೋಹಿಣಿ ಜಟಾಪಟಿ
ಯಾವುದೇ ವಿಚಾರಕ್ಕೆ ರೋಹಿಣಿ ಸಿಂಧೂರಿ ಮೇಲೆ ಎಚ್‌ಡಿ ರೇವಣ್ಣ ರೇಗಾಡಿದ್ದರು. ಡಿಸಿ ಬರ್ತಾರೆ ಅಂದ್ರೆ ಅಧಿಕಾರಿಗಳು ನಡುಗಬೇಕು ಹಂಗಿರಬೇಕು ನಮ್ಮ ಜಿಲ್ಲೆ. ರಾಜ್ಯದ ಚೀಫ್ ಸೆಕ್ರೇಟರಿ, ಫೈನಾನ್ಸ್ ಸೆಕ್ರೇಟ್ರಿ ಎಲ್ಲಾ ನಿಮ್ಮ ಡಿಸಿ ಡೈನಾಮಿಕ್ ಹಂಗೆ ಹಿಂಗೆ ಅಂತಾರೆ. ಇಲ್ನೋಡಿದ್ರೆ ಹಿಂಗೆ ಎಂದು ಮಾತಿನಲ್ಲೇ ಕುಟುಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ರೋಹಿಣಿ ಸಿಂಧೂರಿ, ಎಲ್ಲ ಕಳ್ಳರನ್ನ ಸಸ್ಪೆಂಡ್ ಮಾಡುತ್ತಾ ಕೂತ್ರೆ ಯಾರೂ ಇರಲ್ಲ ಅಂತ ತಿರುಗೇಟು ಕೊಟ್ಟಿದ್ದರು.
ಹಾಸನ ಜಿಲ್ಲೆಯಿಂದ ರೋಹಿಣಿ ಸಿಂಧೂರಿ ವರ್ಗ
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಎ. ಮಂಜು ಒತ್ತಾಯದ ಮೇರೆಗೆ ಅವರನ್ನು ಅವಧಿಗೆ ಮುನ್ನ ಹಾಸನದಿಂದ ರೋಹಿಣಿ ಅವರನ್ನು ವರ್ಗಾವಣೆ ಮಾಡಡಿಸಲಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಿಂಧೂರಿ ಕೆಎಟಿ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ವೇಳೆ ರೇವಣ್ಣ ಸಿಂಧೂರಿ ಪರವಾಗಿ ನಿಂತಿದ್ದರು. ವರ್ಗಾವಣೆ ವಿರುದ್ಧ ತಡೆ ಆದೇಶ ನೀಡಲಾಗಿತ್ತು. ಅದಾದ ಬಳಿಕ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಉಲ್ಟಾ ಆಗಿತ್ತು. ಜಿಲ್ಲೆಯ ಅನೇಕ ಕಾರ್ಯಕ್ರಮ ಹಾಗೂ ಸಭೆಗಳಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಸಚಿವ ರೇವಣ್ಣ ಕೊನೆಗೂ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಮೈಸೂರಿನಲ್ಲೂ ರೋಹಿಣಿ ಸಿಂಧೂರಿ ವಿವಾದ
2020ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡರು. ಜೂನ್ 2021ರ ವರೆಗೆ ಹುದ್ದೆಯಲ್ಲಿ ಮುಂದುವರೆದ ಅವರು, ಮೈಸೂರು ಮಹಾನಗರ ಪಾಲಿಕೆಯ ಅಂದಿನ ಆಯುಕ್ತೆ ಶಿಲ್ಪಾ ನಾಗ್ ಅವರೊಂದಿಗಿನ ವಿವಾದದ ಬಳಿಕ ಇಬ್ಬರನ್ನೂ ಮೈಸೂರಿನಿಂದ ವರ್ಗಾವಣೆ ಮಾಡಲಾಯಿತು.
ಶಿಲ್ಪಾ ನಾಗ್ ಜೊತೆ ರೋಹಿಣಿ ವಿವಾದ
ಮೈಸೂರು ಮಹಾನಗರ ಪಾಲಿಕೆಯ ಅಂದಿನ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಸಂಘರ್ಷ ಏರ್ಪಟ್ಟಿತ್ತು. ಕೊನೆಗೆ ರೋಹಿಣಿ ಸಿಂಧೂರಿ ಎಲ್ಲದರಲ್ಲೂ ಮೂಗು ತೂರಿಸುತ್ತಿದ್ದಾರೆ ಅಂತ ಆರೋಪಿಸಿ ಶಿಲ್ಪಾ ನಾಗ್ ರಾಜೀನಾಮೆಗೆ ಮುಂದಾದ್ರು. ಕೊನೆಗೆ ಮಧ್ಯಪ್ರವೇಶಿಸಿದ ಸರ್ಕಾರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಿದ್ದರು.
ಕೊರೊನಾ ವೇಳೆಯಲ್ಲೂ ಕಾಂಟ್ರವರ್ಸಿ
ಚಾಮರಾಜನಗರದಲ್ಲಿ ಸಂಭವಿಸಿದ್ದ ಆಮ್ಲಜನಕ ಕೊರತೆಯಿಂದ 24 ಮಂದಿ ಕೊರೋನಾ ಸೋಂಕಿತರು ಮೃತಪಟ್ಟದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಕಾಲಕ್ಕೆ ಆಮ್ಲಜನಕ ನೀಡದೆ ತಡೆದಿದ್ದೇ ಕಾರಣ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಿಸಿದ್ದರು. ಕೊರೊನಾ ನಿರ್ವಹಣೆಗಾಗಿ ಮಾಡಿರುವ ಹಣದ ವೆಚ್ಚವೂ ವಿವಾದಕ್ಕೆ ಗುರಿಯಾಗಿದ್ದು, ಸಂಸದ ಪ್ರತಾಪ್‌ಸಿಂಹ ಅವರು ಜಿಲ್ಲಾಧಿಕಾರಿಗಳು ಹಣದ ಲೆಕ್ಕ ನೀಡಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಈ ವೇಳೆ ಹಣದ ಲೆಕ್ಕ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸಂಸದರಿಗೆ ತಿರುಗೇಟು ನೀಡುವ ಮೂಲಕ ವಿವಾದಕ್ಕೆ ಒಳಗಾಗಿದ್ದರು.
ಸಾರಾ ಮಹೇಶ್ ಜೊತೆ ಸಂಘರ್ಷ
ಮೈಸೂರಿನ ಕೆಆರ್ ನಗರ ಶಾಸಕ ಸಾರಾ ಮಹೇಶ್ ಜೊತೆ ರೋಹಿಣಿ ಸಿಂಧೂರಿ ಸಂಘರ್ಷ ಮಾಡಿಕೊಂಡಿದ್ದರು. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಐಶಾರಾಮಿ ಜೀವನ ನಡೆಸಿದ್ದಾರೆ. ಸರ್ಕಾರಿ ಹಣ ದುರುಪಯೋಗ, ಕೋವಿಡ್ ಸಂದರ್ಭದ ಕಾರ್ಯವೈಖರಿ ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿ ವರ್ತನೆ ಮಾಡಿದ್ದು, ಇದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಗಿದೆ. ಇದನ್ನು ಮುಚ್ಚಿ ಹಾಕಲು ಟೆಸ್ಟಿಂಗ್ ಸಂಖ್ಯೆ ಸಾವಿನ ಸಂಖ್ಯೆ ಕಡಿಮೆ ತೋರಿಸಿದ್ದರು ಅಂತ ಸಾರಾ ಮಹೇಶ್ ಆರೋಪಿಸಿದ್ರು. ಸಾರಾ ಮಹೇಶ್ ಭೂ ಅಕ್ರಮ ಮಾಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಆಡಿಯೋ ವೈರಲ್ ಆಗಿತ್ತು. ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಪ್ರತಾಪ್ ಸಿಂಹ-ರೋಹಿಣಿ ಸಿಂಧೂರಿ ವಾರ್
ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಜೊತೆಯೂ ರೋಹಿಣಿ ಸಿಂಧೂರಿ ಸಂಘರ್ಷಕ್ಕೆ ನಿಂತಿದ್ದರು. ಮೈಸೂರು ಜಿಲ್ಲೆಯಲ್ಲಿ ಕೊರೊದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಿದ್ದು, ಇದರಿಂದ ಅನೇಕರಿಗೆ ಅನ್ಯಾಯವಾಗಿದೆ ಎಂದು ಸಂಸದ ಪ್ರತಾಪ ಸಿಂಹ ಆರೋಪಿಸುವ ಮೂಲಕ ಪರೋಕ್ಷವಾಗಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ತಂದ ಆರೋಪ
ಮೈಸೂರು ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸ ಪಾರಂಪರಿಕ ಕಟ್ಟಡವಾಗಿದೆ. ಯಾವುದೇ ಹೊಸ ಕಟ್ಟಡ ಕಾಮಗಾರಿಯನ್ನು ಅಲ್ಲಿ ಮಾಡುವಂತಿಲ್ಲ. ಆದರೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಸರ್ಕಾರಕ್ಕೆ ಉತ್ತರ ನೀಡಿದ್ದ ರೋಹಿಣಿ ಸಿಂಧೂರಿ
ತಮ್ಮ ಮೇಲೆ ಬಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದರು. “ಜಿಲ್ಲಾಧಿಕಾರಿ ವಸತಿ ಕಚೇರಿ ಆವರಣದಲ್ಲಿ ಈಜುಕೊಳ ನಿರ್ಮಿಸಬೇಕೆಂಬುದು 5 ವರ್ಷಗಳ ಹಿಂದಿನ ಯೋಜನೆಯಾಗಿದೆ. ಹೊಸ ತಂತ್ರಜ್ಞಾನ ಬಳಸಿ ನಿರ್ಮಾಣ ಕಾರ್ಯ ನಡೆಸಲು ನಿರ್ಮಿತಿ ಕೇಂದ್ರ ನಿರ್ಧರಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳ ನಿರ್ಮಾಣವಾಗಿದೆ” ಎಂದು ಸ್ಪಷ್ಟನೆ ನೀಡಿದ್ದರು.
14 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ
ಕೈ ಮಗ್ಗ ನಿಗಮ ಬಿಟ್ಟು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿ ರೋಹಿಣಿ ಸಿಂಧೂರಿ ಕಿಕ್ ಬ್ಯಾಕ್ ಪಡೆದಿದ್ದಾರೆ ಅಂತ ಆರೋಪಿಸಲಾಗಿತ್ತು. ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ನೆಪದಲ್ಲಿ ಒಟ್ಟು 14 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಸಾ.ರಾ. ಮಹೇಶ್ ಆರೋಪಿಸಿ ತನಿಖೆಗೆ ಆಗ್ರಹಿಸಿದ್ದರು.
ಸಾರಾ ಮಹೇಶ್ ಕ್ಷಮೆ ಕೇಳಿದ್ದರಾ ರೋಹಿಣಿ ಸಿಂಧೂರಿ?
ಇನ್ನು ಇತ್ತೀಚಿಗಷ್ಟೇ ಸಂಘರ್ಷದ ವಿಚಾರವಾಗಿ ರೋಹಿಣಿ ಸಿಂಧೂರಿ ಶಾಸಕ ಸಾರಾ ಮಹೇಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿತ್ತು. ಸಾರಾ ಮಹೇಶ್ ಅವರನ್ನು ಭೇಟಿಯಾದ ನಂತರ ವಾಟ್ಸ್ಆ್ಯಪ್ನಲ್ಲಿ ಸುದೀರ್ಘ ಸಂದೇಶ ಕಳುಹಿಸಿದ್ದ ರೋಹಿಣಿ ಸಿಂಧೂರಿ, ನಿಮ್ಮ ಜಾಗದ ವಿಚಾರದ ಸರ್ವೆಗೆ ನಾನು ದಿಶಾ ಆಪ್ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರ ಇದರಲ್ಲಿ ವೈಯಕ್ತಿಕ ವಿಚಾರ ಏನೂ ಇಲ್ಲ ಎಂದು ಬರೆದಿದ್ದಾರೆ ಎನ್ನಲಾಗಿದೆ.
ಹಲವು ಕ್ರಾಂತಿಕಾರಿ ಬದಲಾವಣೆ ತಂದಿದ್ದ ಸಿಂಧೂರಿ
ಈ ಎಲ್ಲಾ ವಿವಾದಗಳ ಜೊತೆಗೆ ಆಡಳಿತದಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಕೀರ್ತಿಯೂ ರೋಹಿಣಿ ಸಿಂಧೂರಿಗೆ ಸಲ್ಲುತ್ತದೆ. ಸಿಂಧೂರಿಯವರು ಕೇಂದ್ರ ನಾಗರೀಕ ಸೇವೆಗೆ ಆಯ್ಕೆಯಾದ ಮೊದಲಿಗೆ ತುಮಕೂರಿನಲ್ಲಿ ಸಹಾಯಕ ಆಯುಕ್ತರಾಗಿ ಆಗಸ್ಟ್ 29, 2011ರಿಂದ ಆಗಸ್ಟ್ 31, 2012ವರೆಗೆ ಸೇವೆ ಸಲ್ಲಿಸಿದರು. ಅದೇ ಅವಧಿಯಲ್ಲಿ ತುಮಕೂರಿನ ನಗರಾಭಿವೃದ್ಧಿ ವಿಭಾಗದ ಉಸ್ತುವಾರಿ ಆಯುಕ್ತರಾಗಿದ್ದ ರೋಹಿಣಿ, ಡಿಸೆಂಬರ್ 31, 2012 ವರೆಗೆ ಈ ಹುದ್ದೆಯಲ್ಲಿ ಮುಂದುವರೆದರು. ತೆರಿಗೆ ಸಂಗ್ರಹದ ಗಣಕೀಕರಣ, ನಿಗಮ ಭೂಮಿ ಸ್ವಾಧೀನ, ಜನನಿಬಿಡ ರಸ್ತೆಗಳಲ್ಲೂ ಯಶಸ್ವಿ ರಸ್ತೆ ಕಾಮಗಾರಿ ಇತ್ಯಾದಿ ಜನಪರ ಕಾರ್ಯಗಳಿಗೆ ಇಂದಿಗೂ ತುಮಕೂರಿನ ಜನತೆ ರೋಹಿಣಿಯವರನ್ನು ಸ್ಮರಿಸುತ್ತಾರೆ.
ಶೌಚಾಲಯ ನಿರ್ಮಾಣದಲ್ಲೂ ದಾಖಲೆ
2014 ರ ಒಂದೇ ವರ್ಷದಲ್ಲಿ ರೋಹಿಣಿಯವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಅತ್ಯಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವ ದೇಶದ ಟಾಪ್ ಮೂರು ಜಿಲ್ಲೆಗಳಲ್ಲಿ ಮಂಡ್ಯ ಕೂಡ ಒಂದಾಗಿತ್ತು. ಜನರು ಶೌಚಾಲಯಗಳನ್ನು ಹೊಂದಿದ್ದಾರೋ ಇಲ್ಲವೋ ಎಂಬುವುದನ್ನು ಖಾತ್ರಿಪಡಿಸಲು, ಪ್ರತಿನಿತ್ಯ ಮುಂಜಾನೆ ಗ್ರಾಮಸ್ಥರನ್ನು ಭೇಟಿಯಾಗುತ್ತಿದ್ದರು. ಈ ಕಾರ್ಯಕ್ರಮವು 'ಮುಂಜಾನೆ' ಎಂದು ಕರೆಯಲ್ಪಟ್ಟಿದೆ ಮತ್ತು ಅದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ