• Home
  • »
  • News
  • »
  • explained
  • »
  • Explained: 'ದಿ ಕಾಶ್ಮೀರ್‌ ಫೈಲ್ಸ್‌' ಅಸಭ್ಯ ಸಿನಿಮಾ ಎಂದ ನಾದವ್ ಲ್ಯಾಪಿಡ್ ಯಾರು?

Explained: 'ದಿ ಕಾಶ್ಮೀರ್‌ ಫೈಲ್ಸ್‌' ಅಸಭ್ಯ ಸಿನಿಮಾ ಎಂದ ನಾದವ್ ಲ್ಯಾಪಿಡ್ ಯಾರು?

ನಾದವ್ ಲ್ಯಾಪಿಡ್

ನಾದವ್ ಲ್ಯಾಪಿಡ್

ಕಾಶ್ಮೀರ್ ಫೈಲ್ಸ್ ಸಿನಿಮಾ ಕಟುವಾಗಿ ಟೀಕಿಸಿದ ನಾದವ್ ಯಾರು? ಅವರ ಹೇಳಿಕೆ ಇಷ್ಟು ಚರ್ಚೆಯಾಗಿದೆ? ಯಾರವರು? ಅವರೇಕೆ ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿದ್ರು?

  • Share this:

ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರ ಮಂಡಳಿಯ ಮುಖ್ಯಸ್ಥ, ಇಸ್ರೇಲಿ ಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ (Nadav Lapid) ಅವರು ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಹಿಂದಿ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' (The kashmir Files) ಅನ್ನು ಟೀಕೆ ಮಾಡಿದ್ದಾರೆ. ʼದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು ನಾದವ್ ಲ್ಯಾಪಿಡ್ ಚಿತ್ರದ ಬಗ್ಗೆ ಹೇಳಿದ್ದಾರೆ. 1990ರಲ್ಲಿ ಕಾಶ್ಮೀರ ಕಣಿವೆಯಿಂದ ಪಂಡಿತರ ವಲಸೆಯನ್ನು ಆಧರಿಸಿ ನಿರ್ಮಾಣವಾದ ‘ದಿ ಕಾಶ್ಮೀರ್ ಫೈಲ್ಸ್’ ಈ ವರ್ಷ ಹೆಚ್ಚು ಸದ್ದು ಮಾಡಿದ ಚಿತ್ರ. ದೇಶದ ರಾಜಕೀಯ ಸೇರಿ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಈ ಸಿನಿಮಾ (Cinema). ಹಲವು ಟೀಕೆ, ಟಿಪ್ಪಣಿ, ಶ್ಲಾಘನೆಯನ್ನು ಪಡೆದುಕೊಂಡಿದೆ. ಅನೇಕ ವಿಮರ್ಶಕರು ಇದನ್ನು ಹಿಂಸಾಚಾರದ ಪರಮಾವಧಿಯ ಚಿತ್ರ ಎಂದು ಟೀಕಿಸಿದ್ದಾರೆ. ಸದ್ಯ ಇಸ್ರೇಲ್‌ ಚಿತ್ರ ನಿರ್ದೇಶಕ ಲ್ಯಾಪಿಡ್‌ ಕೂಡ ಇದೇ ಹೇಳಿಕೆಯೊಂದಿಗೆ ನಿಂತಿದ್ದಾರೆ ಎನ್ನಬಹುದು.


ಗೋವಾದಲ್ಲಿ ನಡೆದ 53ನೇ ಭಾರತೀಯ ಚಲನಚಿತ್ರೋತ್ಸವದಲ್ಲಿ(ಐಎಫ್‌ಎಫ್ಐ) 15 ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. 15ನೇ ಮತ್ತು ಕೊನೆಯ ಸಿನಿಮಾವನ್ನಾಗಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹಿಂದಿ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಅನ್ನು ಪ್ರಸಾರ ಮಾಡಲಾಯಿತು.
'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ ಚಿತ್ರ ಎಂದ ನಾದವ್ ಲ್ಯಾಪಿಡ್


ಚಿತ್ರವೀಕ್ಷಿಸಿದ ನಂತರ ಐಎಫ್‌ಎಫ್‌ಐ 2022ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಲ್ಯಾಪಿಡ್ ಅವರು, "ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ನೋಡಿ ವಿಚಲಿತನಾಗಿದ್ದು, ಆಘಾತಕ್ಕೊಳಗಾಗಿದ್ದೇನೆ" ಎಂದು ಹೇಳಿದ್ದಾರೆ. ಈ ಅಭಿಪ್ರಾಯವನ್ನು ನಿಮ್ಮೊಂದಿಗೆ ಬಹಿರಂಗವಾಗಿ ಹಂಚಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ಏಕೆಂದರೆ, ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಈ ವೇದಿಕೆ ಸ್ವೀಕರಿಸುತ್ತದೆ ಎಂದು ಲ್ಯಾಪಿಡ್ ಹೇಳಿದರು.


‘ಕಾಶ್ಮೀರ್‌ ಫೈಲ್ಸ್‌’ ಒಂದು ಅಸಭ್ಯ, ಕೀಳು ಅಭಿರುಚಿಯ ಚಿತ್ರ. ಪ್ರಚಾರದ ಉದ್ದೇಶದ ಈ ಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ’ ಎಂದು ಐಎಫ್‌ಎಫ್‌ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರಾದ ನಾಡವ್ ಲ್ಯಾಪಿಡ್‌ ನೇರವಾಗಿ ಹೇಳಿದ್ದಾರೆ.


ನಾದವ್ ಲ್ಯಾಪಿಡ್‌ ಅವರ ಈ ನೇರ ಹೇಳಿಕೆ ಸದ್ಯ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಭಾರತೀಯ ಗಣ್ಯರು ಉಪಸ್ಥಿತರಿದ್ದರು. ಕೆಲವರು ಲ್ಯಾಪಿಡ್‌ ಅವರ ಧೈರ್ಯದ ಹೇಳಿಕೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಕಾಶ್ಮೀರದಲ್ಲಿ ಹಿಂದೂಗಳ ದುಃಸ್ಥಿತಿಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ


ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ಖಂಡನೆ


ಇನ್ನೂ ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ನಾರ್ ಗಿಲೋನ್ ಅವರು ಲ್ಯಾಪಿಡ್ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ. “ಐಎಫ್‌ಎಫ್‌ಐನಲ್ಲಿ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಲು ನೀಡಿದ ಭಾರತೀಯ ಆಹ್ವಾನವನ್ನು ನೀವು ಅತ್ಯಂತ ಕೆಟ್ಟ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದ್ದೀರಿ, ಜೊತೆಗೆ ಅವರು ನಿಮಗೆ ನೀಡಿದ ನಂಬಿಕೆ, ಗೌರವ ಮತ್ತು ಆತ್ಮೀಯ ಆತಿಥ್ಯವನ್ನು ಅವಮಾನಿಸಿದ್ದೀರಿ. ಭಾರತ-ಇಸ್ರೇಲ್ ಬಾಂಧವ್ಯಕ್ಕೆ ನಿಜವಾದ ನೋವುಂಟಾಗಿದೆ ಎಂದು" ನಾರ್ ಗಿಲೋನ್ ಕಟುವಾಗಿ ಹೇಳಿದ್ದಾರೆ.


'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರವು ಸಿದ್ದಾಂತವೊಂದನ್ನು ಪ್ರಚಾರ ಮಾಡುವ ಸರಕಾಗಿದೆ ಎಂದು ಹೇಳುವ ಮೂಲಕ ಸುದ್ದಿಯಲ್ಲಿರುವ ಈ ನಾದವ್‌ ಲ್ಯಾಪಿಡ್‌ ಯಾರು? ಚಿತ್ರರಂಗದಲ್ಲಿ ಅವರ ಕೆಲಸಗಳೇನು ಎಂಬುದನ್ನು ನಾವಿಲ್ಲಿ ನೋಡೋಣ.


ನಾದವ್ ಲ್ಯಾಪಿಡ್ ಯಾರು?


ಇಸ್ರೇಲ್‌ನ ಚಲನಚಿತ್ರೋದ್ಯಮ ಕುಟುಂಬದಿಂದ ಬಂದ ನಾದವ್ ಲ್ಯಾಪಿಡ್ ಏಪ್ರಿಲ್ 8, 1975 ರಂದು ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಬರಹಗಾರ ಹೈಮ್ ಲ್ಯಾಪಿಡ್ ಮತ್ತು ಚಲನಚಿತ್ರ ಸಂಪಾದಕಿ ಎರಾ ಲ್ಯಾಪಿಡ್‌ ಮಗನಾಗಿ ಯಹೂದಿ ಕುಟುಂಬದಲ್ಲಿ ಜನಿಸಿದರು. ನಾದವ್ ಲ್ಯಾಪಿಡ್ ಟೆಲ್ ಅವಿವ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿ, ಇಸ್ರೇಲಿ ರಕ್ಷಣಾ ಪಡೆಗಳೊಂದಿಗೆ ತಮ್ಮ ಸೇವೆಯನ್ನು ಪೂರ್ಣಗೊಳಿಸಿ ನಂತರ ಪ್ಯಾರಿಸ್‌ಗೆ ತೆರಳಿದರು. ನಂತರ ಸಿನಿಮಾದ ಮೇಲಿನ ಪ್ರೀತಿ ಜೆರುಸಲೆಮ್‌ನ ಸ್ಯಾಮ್ ಸ್ಪೀಗೆಲ್ ಫಿಲ್ಮ್ ಮತ್ತು ಟೆಲಿವಿಷನ್ ಸ್ಕೂಲ್‌ನಲ್ಲಿ ಪದವಿ ಪಡೆಯಲು ಕರೆದೊಯ್ಯಿತು. ಲ್ಯಾಪಿಡ್‌ ಮತ್ತೆ ಪ್ಯಾರಿಸ್‌ನಿಂದ ಇಸ್ರೇಲ್‌ಗೆ ಮರಳಿ ಬಂದು ಫಿಲ್ಮ್ ಮತ್ತು ಟೆಲಿವಿಷನ್ ಸ್ಕೂಲ್‌ನಲ್ಲಿ ಪದವಿ ಅಭ್ಯಾಸ ಮಾಡಲು ಸೇರಿಕೊಂಡರು.


ಪೊಲೀಸ್‌ಮ್ಯಾನ್‌ ಚಿತ್ರದ ಮೂಲಕ ಸಿನಿಮಾ ನಿರ್ದೇಶಕರಾಗಿ ಎಂಟ್ರಿ


ಫಿಲಾಸಫಿಯಲ್ಲಿ ಅಧ್ಯಯನ ಮಾಡಿರುವ ಲ್ಯಾಪಿಡ್‌ ಸಿನಿಮಾಗಳಲ್ಲೂ ಸಹ ಈ ಅಂಶ ಕಂಡುಬರುವುದನ್ನು ನಾವು ಕಾಣಬಹುದಾಗಿದೆ. ಯಾವುದೇ ವಿಷಯವನ್ನು ಸಹ ಲ್ಯಾಪಿಡ್‌ ತಮ್ಮದೇ ಶೈಲಿಯಲ್ಲಿ ಪ್ರಸ್ತುತ ಪಡಿಸುವ ನಿರ್ಮಾಪಕರಾಗಿದ್ದಾರೆ. 2011 ರಲ್ಲಿ ಪೊಲೀಸ್‌ ಮ್ಯಾನ್‌ ಚಿತ್ರದ ಮೂಲಕ ಸಿನಿಮಾ ನಿರ್ದೇಶಕರಾಗಿ ಲ್ಯಾಪಿಡ್‌ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರ ಲೊಕಾರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲೊಕಾರ್ನೊ ಉತ್ಸವದ ವಿಶೇಷ ತೀರ್ಪುಗಾರರ ಪ್ರಶಸ್ತಿಗೆ ಭಾಜನವಾಯಿತು.


ಕಲಾ ಕ್ಷೇತ್ರದಲ್ಲಿನ ಕೊಡುಗೆಯನ್ನು ಗುರುತಿಸುವ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಚೆವಲಿಯರ್ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ ಪ್ರಶಸ್ತಿಗೂ ಲ್ಯಾಪಿಡ್‌ ಭಾಜನರಾಗಿದ್ದಾರೆ.


ಪ್ರತಿಷ್ಠಿತ ಪ್ರಶಸ್ತಿ ಮತ್ತು ಮೆಚ್ಚುಗೆಗೆ ಪಾತ್ರವಾದ ಲ್ಯಾಪಿಡ್‌ ಸಿನಿಮಾಗಳು
ಸುಮಾರು ಎರಡು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ಲ್ಯಾಪಿಡ್ ಫೀಚರ್‌ ಮತ್ತು ಶಾರ್ಟ್‌ಫಿಲ್ಮ್‌ ಸೇರಿದಂತೆ ಒಟ್ಟು 13 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲ್ಯಾಪಿಡ್‌ ಒಬ್ಬ ಉತ್ತಮ ಸಿನಿಮಾ ನಿರ್ದೇಶಕರಾಗಿದ್ದು, ಇವರ ಸಿನಿಮಾಗಳು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿವೆ. ಈ ಮೊದಲೇ ಹೇಳಿದಂತೆ 2011 ರಲ್ಲಿ ತೆರೆಕಂಡ ಇವರ ಮೊದಲ ಸಿನಿಮಾ ಪೊಲೀಸ್‌ ಮ್ಯಾನ್‌ ಲೊಕಾರ್ನೊ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಲೊಕಾರ್ನೊ ಫೆಸ್ಟಿವಲ್ ಸ್ಪೆಷಲ್ ಜ್ಯೂರಿ ಪ್ರಶಸ್ತಿ ಮತ್ತು ಜೆರುಸಲೆಮ್ ಚಲನಚಿತ್ರೋತ್ಸವದಲ್ಲೂ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.


The Kashmir files movie banned in Singapore why take decision
ದಿ ಕಾಶ್ಮೀರ್ ಫೈಲ್ಸ್


2014ರ ಚಲನಚಿತ್ರ ದಿ ಕಿಂಡರ್‌ಗಾರ್ಟನ್ ಟೀಚರ್, 2014 ರ ಅಂತರರಾಷ್ಟ್ರೀಯ ವಿಮರ್ಶಕರ ವಾರದಲ್ಲಿ ಕಾಣಿಸಿಕೊಂಡಿತು ಮತ್ತು ಮ್ಯಾಗಿ ಗಿಲೆನ್‌ಹಾಲ್ ಅವರು ಇಂಗ್ಲಿಷ್‌ನಲ್ಲಿ ಈ ಚಿತ್ರವನ್ನು ಮರುನಿರ್ಮಾಣ ಮಾಡಿದರು.
ನಾಡವ್‌ ಲ್ಯಾಪಿಡ್‌ ತಮ್ಮದೇ ಶೈಲಿಯಲ್ಲಿ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ಬಿಂಬಿಸುವ ನಿಸ್ಸೀಮರಾಗಿದ್ದು, ಇವರ ಕೆಲಸದಿಂದಲೇ ಸಾಷಕಷ್ಟು ಹೆಸರು ಮಾಡಿದ್ದಾರೆ. ಚಿತ್ರರಂಗದಲ್ಲಿನ ಇವರ ಸಾಧನೆಗಾಗಿಯೇ 36 ವರ್ಷದ ಈ ಚಲನಚಿತ್ರ ನಿರ್ಮಾಪಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಬಹುದು.


'Synonymsʼ ಗೆ ಗೋಲ್ಡನ್ ಬೇರ್ ಪ್ರಶಸ್ತಿ
ಲ್ಯಾಪಿಡ್‌ ಅವರ ಮತ್ತೊಂದು ಚಿತ್ರ 'Synonymsʼ ಸಾಕಷ್ಟು ಹೆಸರನ್ನು ಇವರಿಗೆ ತಂದುಕೊಟ್ಟಿದೆ. ಫೆಬ್ರವರಿ 2019 ರಲ್ಲಿ ನಡೆದ 69 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿಯನ್ನು ಸಹ ಈ ಸಿನಿಮಾ ಗೆದ್ದುಕೊಂಡಿದೆ.
ಇನ್ನೂ ಕಳೆದ ವರ್ಷವಷ್ಟೇ ಬಿಡುಗಡೆ ಕಂಡ ಅವರ ʼಅಹೆಡ್ಸ್ ನೀʼ ಸಿನಿಮಾ ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಗಳಿಸಿತು. ಇದು ಕೇನ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು, ಅಲ್ಲಿ ಈ ಸಿನಿಮಾ ತೀರ್ಪುಗಾರರ ಬಹುಮಾನಕ್ಕೂ ಸಹ ಭಾಜನವಾಯಿತು.


ಇದನ್ನೂ ಓದಿ: Nadav Lapid: 'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ ಚಿತ್ರ ಎಂದ ನಾದವ್ ಲ್ಯಾಪಿಡ್​ಗೆ ಸಂಕಷ್ಟ!


ಲ್ಯಾಪಿಡ್‌ ಸಿನಿಮಾಗಳಿಗೆ ಅಂತರಾರಾಷ್ಟ್ರೀಯ ಮನ್ನಣೆ ಸಿಗುತ್ತಿದ್ದು, ಲ್ಯಾಪಿಡ್ ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016 ರ ಕ್ಯಾನೆಸ್ ಚಲನಚಿತ್ರೋತ್ಸವದ ಇಂಟರ್ನ್ಯಾಷನಲ್ ಕ್ರಿಟಿಕ್ಸ್ ವೀಕ್ ವಿಭಾಗದ ತೀರ್ಪುಗಾರರ ಸದಸ್ಯರಾಗಿ, 2021 ರಲ್ಲಿ 71ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯ ತೀರ್ಪುಗಾರರ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.
ಇನ್ನೂ ಕಳೆದ ವಾರ ಚಿತ್ರೋತ್ಸವದಲ್ಲಿ ದಿ ಕಾಶ್ಮೀರ್‌ ಫೈಲ್ಸ್‌ ಅನ್ನು ಪ್ರದರ್ಶಿಸಲಾಯಿತು. ಕಾಶ್ಮೀರ್ ಫೈಲ್ಸ್ ಅನ್ನು ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಮಾರ್ಚ್ 11 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರವು 1990 ರಲ್ಲಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ಹತ್ಯೆಗಳು ಮತ್ತು ವಲಸೆಯ ಸುತ್ತಲಿನ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ನಟರಾದ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Published by:Divya D
First published: