ನಿನ್ನೆಯಷ್ಟೇ ರಾಷ್ಟ್ರಪತಿ ಚುನಾವಣೆ (Presidential Election) ಮುಗಿದಿದೆ. ಇದೀಗ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಉಪ ರಾಷ್ಟ್ರಪತಿ ಚುನಾವಣೆಯತ್ತ (Vice Presidential Election) ದೃಷ್ಟಿ ನೆಟ್ಟಿವೆ. ಆಗಷ್ಟ್ 6ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಎನ್‌ಡಿಎ (NDA) ಹಾಗೂ ವಿಪಕ್ಷಗಳು (Opposition Parties) ತಮ್ಮ ಅಭ್ಯರ್ಥಿಯನ್ನು (Candidates) ಆಯ್ಕೆ ಮಾಡಿವೆ. ಎನ್‌ಡಿಎ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ (West Bengal Governor) ಜಗದೀಪ್ ಧನಕರ್ (Jagdeep Dhankar) ಆಯ್ಕೆಯಾಗಿದ್ದರೆ, ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಹಿರಿಯ ರಾಜಕಾರಣಿ (Senior Politician) ಮಾರ್ಗರೇಟ್ ಆಳ್ವಾ (Margaret Alva) ಆಯ್ಕೆಯಾಗಿದ್ದಾರೆ. ಹಾಗಾದರೆ ಮಾರ್ಗರೇಟ್ ಆಳ್ವಾ ಯಾರು? ರಾಜಕೀಯದಲ್ಲಿ ಅವರ ಸಾಧನೆ ಏನು? ಅವರ ಬದುಕಿನ ಕಥೆಯೇನು? ಈ ಎಲ್ಲವುಗಳ ಬಗ್ಗೆ ಮಾಹಿತಿ ಇಲ್ಲಿದೆ ಓದಿ…
ಕನ್ನಡತಿ ಮಾರ್ಗರೇಟ್ ಆಳ್ವಾ
ಹೌದು, ಮಾರ್ಗರೇಟ್ ಆಳ್ವಾ ಕನ್ನಡತಿ. ದಕ್ಷಿಣ ಕನ್ನಡ ಜಿಲ್ಲೆಯವರು. 14 ಏಪ್ರಿಲ್ 1942ರಂದು ಮಂಗಳೂರಿನ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿ ಮತ್ತು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜ್‌ನಲ್ಲಿ ಕಾನೂನು ಪದವಿ ಪಡೆದರು.
ನಿರಂಜನ್ ಆಳ್ವ ಜೊತೆ ವಿವಾಹ
ನಿರಂಜನ್ ಆಳ್ವ ಎಂಬುವರನ್ನು ಕಾನೂನು ಕಾಲೇಜ್‌ನಲ್ಲಿ ಭೇಟಿಯಾದ ಮಾರ್ಗರೇಟ್, ಮೇ 24, 1964ರಲ್ಲಿ ಅವರನ್ನು ವಿವಾಹವಾದರು. ಸದ್ಯ ಅವರ ಪತಿ ಯಶಸ್ವಿ ರಫ್ತು ಉದ್ಯಮಿಯಾಗಿದ್ದು, 2018ರಲ್ಲಿ ನಿಧನರಾದರು. ದಂಪತಿಗೆ ಓರ್ವ ಮಗಳು, ಮೂವರು ಗಂಡು ಮಕ್ಕಳು ಸೇರಿ ಒಟ್ಟು ನಾಲ್ವರು ಮಕ್ಕಳಿದ್ದಾರೆ.
ಇದನ್ನೂ ಓದಿ: Margaret Alva: ಮಾಜಿ ಕೇಂದ್ರ ಸಚಿವೆಗೆ ಮಣೆ, ವಿಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾದ ಮಾರ್ಗರೇಟ್ ಆಳ್ವಾ
ರಾಜಕೀಯ ಹಿನ್ನೆಲೆಯ ಕುಟುಂಬ ಸೇರಿದ ಮಾರ್ಗರೇಟ್
ಮಾರ್ಗರೇಟ್ ಆಳ್ವಾ ಮಾವ ಜೋಕಿಮ್ ಆಳ್ವ ಹಾಗೂ ಅವರ ಪತ್ನಿ ವೈಲೆಟ್ ಆಳ್ವ ಇಬ್ಬರೂ ರಾಜಕೀಯ ಹಿನ್ನೆಲೆ ಇದ್ದವರು. ವೈಲೆಟ್ ಆಳ್ವಾ ಕೂಡ ಕಾಂಗ್ರೆಸ್ ಸಂಸದರಾಗಿದ್ದರು. ಮತ್ತು ಆ ಸಮಯದಲ್ಲಿ ಅವರು ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರು. ಅತ್ತೆ ವೈಲೆಟ್ ಆಳ್ವಾ ಅವರು ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಆಳ್ವಾ ಅವರ ಅತ್ತೆ ಅರವತ್ತರ ದಶಕದಲ್ಲಿ ರಾಜ್ಯಸಭೆಯ ಸ್ಪೀಕರ್ ಕೂಡ ಆಗಿದ್ದರು. 1969 ರಲ್ಲಿ ಮಾರ್ಗರೇಟ್ ಆಳ್ವಾ ರಾಜಕೀಯಕ್ಕೆ ಪ್ರವೇಶಿಸಿದರು.
ನೆಹರೂ ಕುಟುಂಬದ ಆಪ್ತೆ
1969ರಲ್ಲಿ ಅತ್ತೆ ವೈಲೆಟ್ ಆಳ್ವಾ ಮರಣದ ನಂತರ ರಾಜಕೀಯ ಪ್ರವೇಶಿಸಿದ ಮಾರ್ಗರೇಟ್, ಇಂದಿರಾ ಗಾಂಧಿ ಆಪ್ತರಾಗಿ ಗುರುತಿಸಿಕೊಂಡರು. ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ಬಣ ಸೇರಿದ್ದ ಮಾರ್ಗರೆಟ್ ಆಳ್ವ, ಕರ್ನಾಟಕದಲ್ಲಿ ಕಾಂಗ್ರೆಸ್ ಐ ಬೆಳೆಸಲು ಶ್ರಮಿಸಿದರು. 1975 ಮತ್ತು 1977 ರ ನಡುವೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಮತ್ತು 1978 ಮತ್ತು 1980 ರ ನಡುವೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು,
ರಾಜಕೀಯ ಹೆಜ್ಜೆ ಗುರುತು
ಮಾರ್ಗರೇಟ್ ಆಳ್ವಾ ತುರ್ತುಪರಿಸ್ಥಿತಿ ಇದ್ದ 1975-1977ರಲ್ಲಿ ಎಐಸಿಸಿಯ ಜಂಟಿ ಕಾರ್ಯದರ್ಶಿಯಾಗಿದ್ದರು. 1978-80ರವರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮಾರ್ಗರೇಟ್ ಆಳ್ವ ಕಾರ್ಯನಿರ್ವಹಿಸಿದರು. 2004-2009ರಲ್ಲಿ ಎಐಸಿಸಿಯಲ್ಲಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
5 ಬಾರಿ ಸಂಸದೆಯಾಗಿ ಕಾರ್ಯ
ಮಾರ್ಗರೇಟ್ ಆಳ್ವ ಐದು ಬಾರಿ ಸಂಸದೆಯಾಗಿದ್ದವರು. ನಾಲ್ಕು ಬಾರಿ ರಾಜ್ಯಸಭಾ ಸದಸ್ಯೆ ಮತ್ತು ಒಮ್ಮೆ ಲೋಕಸಭಾ ಸದಸ್ಯೆಯಾಗಿದ್ದರು. 1974, 1980, 1986 ಮತ್ತು 1992ರಲ್ಲಿ ರಾಜ್ಯಸಭಾ ಸದಸ್ಯೆಯಾಗಿದ್ದರು. 1999ರಲ್ಲಿ ಉತ್ತರ ಕನ್ನಡ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರನ್ನು ಸೋಲಿಸಿ, ಸಂಸದೆಯಾದರು. ಮುಂದಿನ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಮಾರ್ಗರೇಟ್ ಆಳ್ವ ಸೋತು ಹೋದರು.
ಕೇಂದ್ರ ಸಚಿವೆಯಾಗಿ ಅಪಾರ ಅನುಭವಿ
ಮಾರ್ಗರೇಟ್ ಆಳ್ವಾ ರಾಜೀವ್ ಗಾಂಧಿ ಸರ್ಕಾರದಲ್ಲಿ 1985ರಿಂದ 1989ರವರೆಗೆ ರಾಜ್ಯ ಸಚಿವರು, ಸಂಸದೀಯ ವ್ಯವಹಾರಗಳ ಸಚಿವೆಯಾಗಿದ್ದರು. ಬಳಿಕ 1991ರಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆಯಾದರು. ಬಳಿಕ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು.
ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ
ನಾಲ್ಕು ಬಾರಿ ರಾಜ್ಯಪಾಲೆಯಾಗಿ ಸೇವೆ
ಮಾರ್ಗರೇಟ್ ಆಳ್ವ ನಾಲ್ಕು ರಾಜ್ಯಗಳಿಗೆ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದ್ಧಾರೆ. 2009ರಲ್ಲಿ ಉತ್ತರಾಖಂಡ್, 2012ರಲ್ಲಿ ರಾಜಸ್ಥಾನ, 2014ರಲ್ಲಿ ಗುಜರಾತ್ ಮತ್ತು 2014ರಲ್ಲಿ ಗೋವಾ ರಾಜ್ಯಗಳ ಗವರ್ನರ್ ಆಗಿದ್ದರು. ಉತ್ತರಾಖಂಡ್ ರಾಜ್ಯಕ್ಕೆ ರಾಜ್ಯಪಾಲರಾದ ಮೊದಲ ಮಹಿಳೆ ಎಂಬ ದಾಖಲೆ ಅವರದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ