ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು (Ram Mandir) 2024ರ ಜನವರಿ 1ರಂದು ತೆರೆಯಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತ್ರಿಪುರಾದಲ್ಲಿ ಗುರುವಾರ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಗುಡುಗಿದ್ದು, ರಾಮಮಂದಿರ ಉದ್ಘಾಟನೆ ಬಗ್ಗೆ ಮಾತನಾಡುವುದು ಅಮಿತ್ ಶಾ ಅವರ ಕೆಲಸವಲ್ಲ ಎಂದು ಗರಂ ಆಗಿದೆ. ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ಎದುರಿಸಲಿರುವ ತ್ರಿಪುರಾ ರಾಜ್ಯದಲ್ಲಿ ಬಿಜೆಪಿಯ ಮೊದಲ ಚುನಾವಣಾ ರಥ ಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ ತ್ರಿಪುರಾದಲ್ಲಿ ರಾಮ ಮಂದಿರ ಉದ್ಘಾಟನೆ ಬಗ್ಗೆ ಘೋಷಣೆ ಮಾಡಿದ್ದಾರೆ.
ಅಮಿತ್ ಶಾ ಘೋಷಣೆಗೆ ಕಾಂಗ್ರಸ್ ಹಿರಿಯ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ. ಜನರ ಕಷ್ಟಗಳನ್ನು ಆಲಿಸುವ ಬದಲು ಮಂದಿರ ಉದ್ಘಾಟನೆಯ ಚಿಂತೆ ಯಾಕೆ ಬೇಕು ಅಂತಾ ಅಮಿತ್ ಶಾ ರುಜುವಾತುಗಳನ್ನು ಪ್ರಶ್ನಿಸಿ ಟೀಕೆ ಮಾಡಿದ್ದಾರೆ.
ಮಂದಿರದ ಉಸಾಬರಿ ಇವರಿಗ್ಯಾಕೆ ಎಂದು ಕಿಡಿ ಕಾರಿದ ಖರ್ಗೆ
ಹರಿಯಾಣದ ಪಾಣಿಪತ್ನಲ್ಲಿ ಸಂಸದ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ''ರಾಮ ಮಂದಿರದ ಬಗ್ಗೆ ಮಾತನಾಡಲು ನೀವು ರಾಜಕಾರಣಿಯೋ ಅಥವಾ ಪೂಜಾರಿಯೋ? ಇಲ್ಲವೇ ದೇಗುಲದ ಅರ್ಚಕರೋ?
ಇದನ್ನೂ ಓದಿ: Sonia Gandhi : ಸೋನಿಯಾ ಗಾಂಧಿ ಸಾಕಿರೋ ನಾಯಿಗಳು ; ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕನ ತಿರುಗೇಟು
ದೇಶದ ಗೃಹ ಮಂತ್ರಿಯಾಗಿ ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸಿ. ಜನರ ಅಹವಾಲುಗಳನ್ನು ಕೇಳಿ, ಪರಿಹರಿಸಿ. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಒದಗಿಸಿ. ಅದನ್ನು ಬಿಟ್ಟು ಮಂದಿರ ಉದ್ಘಾಟನೆಯ ಬಗ್ಗೆ ಉಸ್ತುವಾರಿ ವಹಿಸಲು ನೀವ್ಯಾರು" ಎಂದು ಅಮಿತ್ ಶಾ ವಿರುದ್ಧ ಖಾರವಾಗಿಯೇ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಮೋದಿ ಅವರ ಆಡಳಿತದಲ್ಲಿ ಅಮಿತ್ ಶಾ ಅವರದ್ದು ದೊಡ್ಡ ಪಾತ್ರ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾಗಿ ಅಮಿತ್ ಶಾ ಕಾರ್ಯ ನಿರ್ವಹಿಸುತ್ತಿರಬೇಕಾದರೆ ಭಾರತದ ಮಂದಿರ, ದೇಗುಲ ಉದ್ಘಾಟನೆ ಬಗ್ಗೆ ಘೋಷಿಸಲು ಹಕ್ಕಿಲ್ಲ ಎಂದಿದ್ದಾರೆ ಖರ್ಗೆ.
ಖರ್ಗೆಯವರ ಟೀಕೆ ಮುಖ್ಯವಾಗಿ ರಾಜಕೀಯ ಸ್ವರೂಪದಲ್ಲಿದ್ದರೂ ದೇವಸ್ಥಾನದ ಬಗ್ಗೆ ಘೋಷಣೆ ಮಾಡುವುದು ತಾಂತ್ರಿಕವಾಗಿ ಯಾರ ಕೆಲಸ? ಅಯೋಧ್ಯೆ ಮಂದಿರದ ಉಸ್ತುವಾರಿ ಯಾರದು? ಯಾವ ಸಂಸ್ಥೆಯು ನಿರ್ಮಾಣದ ಉಸ್ತುವಾರಿಯನ್ನು ಹೊಂದಿದೆ ಮತ್ತು ಅದರ ಸದಸ್ಯರು ಯಾರು? ಹೀಗೆ ಹಲವು ಪ್ರಶ್ನೆಗಳಿಗೆ ಇಲ್ಲಿವೆ ವಿವರವಾದ ಉತ್ತರ ನೋಡಿ.
ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಯಾರದ್ದು?
2019 ರ ನವೆಂಬರ್ನಲ್ಲಿ ಧ್ವಂಸಗೊಂಡ ಬಾಬರಿ ಮಸೀದಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ಗೆ ಹಸ್ತಾಂತರಿಸುವಂತೆ ತೀರ್ಪು ನೀಡಿತ್ತು.
ಮೂರು ತಿಂಗಳೊಳಗೆ ಈ ಟ್ರಸ್ಟ್ ಸ್ಥಾಪನೆಯಾಗಬೇಕಿತ್ತು. ಅದರಂತೆ, ಕೇಂದ್ರ ಸರ್ಕಾರವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (SRJBTKshetra) ಅನ್ನು ಸ್ಥಾಪಿಸಿತು. ಅಲ್ಲಿಂದ ಮಂದಿರದ ಹೆಚ್ಚಿನ ಉಸ್ತುವರಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ವಹಿಸುತ್ತಾ ಬಂದಿದೆ.
ಇದನ್ನೂ ಓದಿ: Modi-Kharge: ಸಂಸತ್ ಒಳಗೆ ಕದನ, ಹೊರಗೆ ಪುಷ್ಕಳ ಭೋಜನ! ಸಿರಿಧಾನ್ಯ ಖಾದ್ಯ ಸವಿದ ಮೋದಿ-ಖರ್ಗೆ!
15 ಸದಸ್ಯರಿರುವ ಟ್ರಸ್ಟ್
ಫೆಬ್ರವರಿ 5, 2020 ರಂದು ಲೋಕಸಭೆಯಲ್ಲಿ ಟ್ರಸ್ಟ್ ರಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಈ ಟ್ರಸ್ಟ್ನಲ್ಲಿ 15 ಸದಸ್ಯರಿದ್ದು ಅದರಲ್ಲಿ 12 ಭಾರತ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ ಮತ್ತು ಮೂವರನ್ನು ಫೆಬ್ರವರಿ 19, 2020 ರಂದು ನಡೆದ ಅದರ ಮೊದಲ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರು ಯಾರು?
ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಉಪಾಧ್ಯಕ್ಷರಾದ ಚಂಪತ್ ರಾಯ್ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ಮಹಂತ್ ನೃತ್ಯ ಗೋಪಾಲ್ ದಾಸ್ ಅಧ್ಯಕ್ಷರಾಗಿದ್ದಾರೆ. ಸ್ವಾಮಿ ಗೋವಿಂದ್ ದೇವ್ ಗಿರಿ ಅವರು ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿರಿಯ ವಕೀಲ ಕೆ ಪರಾಶರನ್ ಸಂಸ್ಥಾಪಕ ಟ್ರಸ್ಟಿ ಸದಸ್ಯರಾಗಿದ್ದರೆ, ಇತರ ಸದಸ್ಯರಲ್ಲಿ ಸ್ವಾಮಿ ವಾಸುದೇವಾನಂದ ಸರಸ್ವತಿ, ಸ್ವಾಮಿ ವಿಶ್ವಪ್ರಸನ್ನತೀರ್ಥ್, ಯುಗಪುರುಷ ಪರಮಾನಂದ ಗಿರಿ, ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಅನಿಲ್ ಮಿಶ್ರಾ, ಕಾಮೇಶ್ವರ್ ಚೌಪಾಲ್ ಮತ್ತು ಮಹಂತ್ ದಿನೇಂದ್ರ ದಾಸ್ ಸೇರಿದ್ದಾರೆ.
ಪದನಿಮಿತ್ತ ಸದಸ್ಯರು
ಪದನಿಮಿತ್ತ ಸದಸ್ಯರಲ್ಲಿ ನೃಪೇಂದ್ರ ಮಿಶ್ರಾ, ಪ್ರಧಾನಿ ಮೋದಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸಲಹೆಗಾರ ಅವನೀಶ್ ಕೆ ಅವಸ್ತಿ, ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮತ್ತು ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಟ್ರಸ್ಟ್ನಲ್ಲಿ ಇದ್ದಾರೆ.
ಟ್ರಸ್ಟ್ನ ವೆಬ್ಸೈಟ್ ಪ್ರಕಾರ, ದೇವಾಲಯದ ನಿರ್ಮಾಣ ಸಮಿತಿಯು ಏಳು ಸದಸ್ಯರನ್ನು ಹೊಂದಿದ್ದು, ನೃಪೇಂದ್ರ ಮಿಶ್ರಾ ಅಧ್ಯಕ್ಷರಾಗಿದ್ದಾರೆ. ಇತರ ಆರು ಮಂದಿಯಲ್ಲಿ ಶತ್ರುಘ್ನ ಸಿಂಗ್, ಉತ್ತರಾಖಂಡದ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ; ದಿವಾಕರ್ ತ್ರಿಪಾಠಿ, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮ್ಯಾನೇಜಿಂಗ್ ಹೆಡ್: ಪ್ರೊ. ರಾಮನ್ ಸೂರಿ, ನಿವೃತ್ತ ಡೀನ್, ಸ್ಕೂಲ್ ಆಫ್ ಆರ್ಕಿಟೆಕ್ಚರ್, ದೆಹಲಿ; KK ಶರ್ಮಾ, ಮಾಜಿ DG, BSF; ಅನೂಪ್ ಮಿತ್ತಲ್, ಮಾಜಿ ಸಿಎಂಡಿ, ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ; ಮತ್ತು ಅಶುತೋಷ್ ಶರ್ಮಾ, ಕಾರ್ಯದರ್ಶಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಸೇರಿದ್ದಾರೆ.
ಇಲ್ಲಿಯವರೆಗೆ ಈ ಎಲ್ಲಾ ಸದಸ್ಯರು ಮಂದಿರ ನಿರ್ಮಾಣದ ವಿಚಾರವಾಗಿ ಹಲವು ಮಹತ್ತರ ನಿರ್ಧಾರಗಳನ್ನು ಮತ್ತು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಟ್ರಸ್ಟ್ ಅಧ್ಯಕ್ಷರು ನಿಯಮಿತವಾಗಿ ಮಂದಿರವ ವಿಚಾರಗಳನ್ನು, ನಿರ್ಮಾಣದ ಹಂತಗಳ ಬಗ್ಗೆ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾರೆ.
ದೇವಸ್ಥಾನ ತೆರೆಯುವ ಬಗ್ಗೆ ಟ್ರಸ್ಟ್ ಹೇಳಿದ್ದೇನು?
ಶ್ರೀರಾಮ ಮಂದಿರವನ್ನು 2024ರ ಜನವರಿ 1ರಂದು ತೆರೆಯಲಾಗುತ್ತದೆ ಎಂದು ಅಮಿತ್ ಶಾ ಏನೋ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ದೇವಸ್ಥಾನ ತೆರೆಯುವ ಬಗ್ಗೆ ಟ್ರಸ್ಟ್ ಬೇರೆಯದ್ದೇ ಹೇಳಿದೆ. ಟ್ರಸ್ಟ್ ರಾಮ ಮಂದಿರದ ನೆಲ ಮಹಡಿ ಡಿಸೆಂಬರ್ 2023 ರ ವೇಳೆಗೆ ಸಿದ್ಧವಾಗಲಿದೆ ಎಂದು ಹೇಳಿದೆ.
ರಾಮ ಮಂದಿರ ಉದ್ಘಾಟನೆ ವಿಳಂಬ!?
ಮಿಶ್ರಾ, ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿ, “ಡಿಸೆಂಬರ್ 2023 ರ ವೇಳೆಗೆ ಗರ್ಭಗುಡಿಯನ್ನು ಹೊಂದಿರುವ ನೆಲಮಹಡಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ 2024 ರ ವೇಳೆಗೆ ದೇವಾಲಯದ ಮೊದಲ ಮತ್ತು ಎರಡನೇ ಮಹಡಿಗಳು ಸಂಪೂರ್ಣ ಕೆತ್ತನೆ ಕಾರ್ಯವು ಪೂರ್ಣಗೊಳ್ಳಲಿದೆ.
2025 ರ ಅಂತ್ಯದ ವೇಳೆಗೆ ಸಂಪೂರ್ಣ ಕೆತ್ತನೆ ಪೂರ್ಣಗೊಳುತ್ತದೆ. ನಂತರವೇ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಹೀಗಾಗಿ ಉದ್ಘಾಟನೆ ಇನ್ನೂ ತಡವಾಗಬಹುದು" ಎಂದು ಅವರು ತಿಳಿಸಿದ್ದಾರೆ.
ಹೇಗಿರಲಿದೆ ರಾಮ ಮಂದಿರ?
ಟ್ರಸ್ಟ್ನ ವೆಬ್ಸೈಟ್ ಪ್ರಕಾರ, ದೇವಾಲಯವು 57,400 ಚದರ ಅಡಿ ವಿಸ್ತೀರ್ಣ ಮತ್ತು 161 ಅಡಿ ಎತ್ತರವನ್ನು ಹೊಂದಿರುತ್ತದೆ. ಇದು ತಲಾ 20 ಅಡಿ ಎತ್ತರದ ಮೂರು ಮಹಡಿಗಳನ್ನು ಹೊಂದಿರುತ್ತದೆ.
ಮುಖ್ಯ ಆರ್ಕಿಟೆಕ್ಟ್ ಚಂದ್ರಕಾಂತ್ ಸೋಮ್ ಪುರ ಅವರ ಪುತ್ರರಾದ ಆರ್ಕಿಟೆಕ್ಟ್ ಗಳಾದ ನಿಖಿಲ್ ಸೋಮ್ ಪುರ ಹಾಗೂ ಆಶೀಶ್ ಸೋಮ್ ಪುರ ದೇವಾಲಯದ ಪರಿಷ್ಕೃತ ವಿನ್ಯಾಸವನ್ನು ತಯಾರಿಸಿದ್ದಾರೆ. ಭಾರತದಲ್ಲಿ ಪ್ರಸಿದ್ಧವಾಗಿರುವ ನಾಗರ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ.
ರಾಜಸ್ಥಾನದ ಭರತ್ಪುರ ಜಿಲ್ಲೆಯ ಬಂಸಿ ಪಹಾರ್ಪುರದಿಂದ ಕೆತ್ತಿದ ಮರಳುಗಲ್ಲುಗಳನ್ನು ಬಳಸಿ ದೇವಾಲಯದ ಸೂಪರ್ ರಚನೆಯನ್ನು ನಿರ್ಮಿಸಲಾಗುತ್ತಿದೆ ಎಂದು ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಇತ್ತೀಚೆಗೆ ಬಿಡುಗಡೆ ಮಾಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದರು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಜಸ್ಥಾನದಲ್ಲಿ ಕಲ್ಲುಗಳನ್ನು ಕೆತ್ತಲು ಸುಮಾರು 1,200 ಕುಶಲಕರ್ಮಿಗಳನ್ನು ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು.
ಭಾರತ್ ಜೋಡೋ ಯಾತ್ರೆ ಬೆಂಬಲಿಸಿದ ಟ್ರಸ್ಟ್ ಸದಸ್ಯರು
ಟ್ರಸ್ಟ್ನ ಕೆಲವು ಸದಸ್ಯರು ಇತ್ತೀಚೆಗೆ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ಈ ವಾರದ ಆರಂಭದಲ್ಲಿ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಿ ಆಶೀರ್ವಾದ ನೀಡಿದ್ದಾರೆ.
ಇದನ್ನೂ ಓದಿ: Bharat Jodo Yatra: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದ ಆದಿತ್ಯ ಠಾಕ್ರೆ
ಇದಾದ ಬಳಿಕ ಚಂಪತ್ ರಾಯ್ ಮತ್ತು ಸ್ವಾಮಿ ಗೋವಿಂದ್ ದೇವ್ ಗಿರಿ ಇಬ್ಬರೂ ಯಾತ್ರೆಯನ್ನು ಬೆಂಬಲಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರದ ಭಕ್ತರು ರಾಹುಲ್ ಗಾಂಧಿಯವರ ಯಾತ್ರೆಯನ್ನು ಬೆಂಬಲಿಸಿದ ಬಳಿಕ ಕಾಂಗ್ರೆಸ್ ನಾಯಕನನ್ನು ಗುರಿಯಾಗಿಸಿಕೊಂಡು ಅಮಿತ್ ಶಾ ಅವರು ಅಯೋಧ್ಯೆ ಮಂದಿರವನ್ನು ಪೂರ್ಣಗೊಳಿಸುವ ದಿನಾಂಕವನ್ನು ಘೋಷಿಸಿದ್ದಾರೆ.
"ರಾಮ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯಗಳಲ್ಲಿ ಕಾಂಗ್ರೆಸ್ ಅಡ್ಡಗಾಲು ಹಾಕಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯ ನಿರ್ಮಾಣ ಕಾರ್ಯ ಆರಂಭಿಸಿದ್ದರು" ಎಂದು ಅಮಿತ್ ಶಾ ಈ ವೇಳೆ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ