Explained: ತಾಲಿಬಾನಿಗಳಿಗೆ ಹೆದರಿ ದೇಶ ತೊರೆಯುತ್ತಿರುವ ಅಫ್ಘನ್ನರನ್ನು ಯಾವೆಲ್ಲಾ ದೇಶಗಳು ಬರಮಾಡಿಕೊಳ್ಳುತ್ತಿವೆ?

Afghan refugees: ತಮ್ಮದೇ ತಾಯ್ನಾಡಿನಲ್ಲಿ ಕಿರುಕುಳ, ಯುದ್ಧ ಹಾಗೂ ಹಿಂಸೆಯ ಕಾರಣದಿಂದ ಪಲಾಯನಗೈದವರನ್ನು ನಿರಾಶ್ರಿತರು ಎಂದು ಕರೆಯಲಾಗಿದೆ. ಇವರುಗಳು ಭಯದಿಂದ ತಮ್ಮ ತಾಯ್ನಾಡಿಗೆ ಮರಳುವ ಆಸೆಯನ್ನೇ ಕಳೆದುಕೊಂಡಿರುತ್ತಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Afghanistan Crisis: ಅಫ್ಘನ್​​ ನೆಲದ ಮೇಲೆ ತಾಲಿಬಾನಿಗಳ ಆಡಳಿತ ಮುಕ್ತವಾಗಿ ನಡೆಯುತ್ತಿದೆ. ಅಲ್ಲಿನ ಪ್ರಜೆಗಳನ್ನು ಹಿಂಸಿಸಿ ನಡುರಸ್ತೆಯಲ್ಲಿ ಹತ್ಯೆಗೈಯ್ಯುತ್ತಿರುವುದು ನೋಡಿದಾಗ ಇವರುಗಳು ಮನುಷ್ಯರೋ ರಾಕ್ಷಸರೋ ಎಂಬುದು ನಮ್ಮ ಮನದಲ್ಲಿ ಮೂಡುತ್ತದೆ. ಚಿಕ್ಕ ಪುಟ್ಟ ಕಂದಮ್ಮಗಳನ್ನು, ಸ್ತ್ರೀಯರನ್ನು ಕನಿಷ್ಠ ಪಕ್ಷ ಮಾನವೀಯ ನೆಲೆಯಲ್ಲಿ ಕೂಡ ನೋಡದೇ ಬಂದೂಕಿನಿಂದ ದಾಳಿಮಾಡುತ್ತಿದ್ದಾರೆ. ತಾಲಿಬಾನ್ ಆಡಳಿತಕ್ಕೆ ಅಫ್ಘನ್​​ ನೆಲ ಒಳಗಾಗಲಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅದೆಷ್ಟೋ ಅಫ್ಘನ್ ಪ್ರಜೆಗಳು (Afghan refugees) ಜೀವರಕ್ಷಿಸಿಕೊಳ್ಳಲು ಪಲಾಯನಗೈದಿದ್ದಾರೆ. ಸಿಕ್ಕ ವಿಮಾನಗಳನ್ನು ಹತ್ತಿ, ವಿಮಾನದ ರೆಕ್ಕೆಯ ಮೇಲೆ ಕುಳಿತುಕೊಂಡು, ಯಾವ ದೇಶಕ್ಕಾದರೂ ಸರಿ ಇಲ್ಲಿಂದ ಮೊದಲು ರಕ್ಷಿಸಿಕೊಳ್ಳಬೇಕೆಂಬ ನಿರ್ಧಾರದಲ್ಲಿ ಜೀವವನ್ನೂ ಪಣಕ್ಕಿಟ್ಟು ಪಲಾಯನಗೈದಿದ್ದಾರೆ.

  ಜನರನ್ನು ಕಾಯುವ ರಕ್ಷಕನಾದ ದೇಶದ ಅಧ್ಯಕ್ಷನೇ ಇದ್ದಬಿದ್ದ ಹಣವನ್ನು ತೆಗೆದುಕೊಂಡು ಕಾಲ್ಕಿತ್ತಾಗ ಪಾಪ ಮುಗ್ಧ ಹಾಗೂ ಅಮಾಯಕ ಪ್ರಜೆಗಳಿಗೆ ದಿಕ್ಕೇ ತೋಚದಂತಾಗಿದೆ. ತಮಗಿನ್ನಾರು ಗತಿ ಎಂದು ರೋಧಿಸುತ್ತಿರುವ ದೃಶ್ಯ ಎಂತಹವರ ಕಣ್ಣಲ್ಲಿ ಕೂಡ ನೀರು ತರಿಸುತ್ತದೆ. ಅಪ್ಘನ್ ಹಾಗೂ ತಾಲಿಬಾನಿಗಳ ನಡುವಿನ ಯುದ್ಧ ಇಂದು ನಿನ್ನೆಯದಲ್ಲ ಇದಕ್ಕೆ ಬರೋಬ್ಬರಿ 20 ವರ್ಷಗಳ ಸುದೀರ್ಘ ಇತಿಹಾಸವಿದೆ.

  ಅಮೆರಿಕಾ ಹಾಗೂ ಭಾರತದಂತಹ ಕೆಲವೊಂದಿಷ್ಟು ರಾಷ್ಟ್ರಗಳು ಅಫ್ಘಾನಿಸ್ತಾನದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತುಕೊಂಡಿದ್ದವು. ಹಾಗಾಗಿ ತಾಲಿಬಾನಿಗಳಿಗೆ ಅಪ್ಘನ್ ನೆಲವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಸಂಧಾನದ ಹೆಸರಿನಲ್ಲಿ ಯಾವಾಗ ತಾಲಿಬಾನಿ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿತೋ ಆಗ ಅಮೆರಿಕಾ ತನ್ನ ಸೇನೆಯೊಂದಿಗೆ ಅಪ್ಘಾನಿಸ್ತಾನಕ್ಕೆ ವಿದಾಯ ಕೋರಬೇಕಾಯಿತು ಹಾಗೂ ತಾಲಿಬಾನ್ ಶೀಘ್ರದಲ್ಲಿ ಅಫ್ಘನ್‌ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.

  ಅಪ್ಘಾನಿಸ್ತಾನದಿಂದ ಪಲಾಯನ ಮಾಡಿದ ಎಷ್ಟೋ ಜನರು ಸ್ವಂತ ನೆಲವನ್ನು ಬಿಟ್ಟು ನಿರಾಶ್ರಿತರಾಗಿ ಬೇರೆ ಬೇರೆ ದೇಶಗಳಲ್ಲಿ ಬದುಕುತ್ತಿದ್ದಾರೆ. ತಮ್ಮ ತಾಯ್ನಾಡನ್ನು ಬಿಟ್ಟು ಅನ್ಯದೇಶಗಳಲ್ಲಿ ಇವರುಗಳು ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಎಂದಾದರೂ ಮರಳಿ ತಮ್ಮ ದೇಶಕ್ಕೆ ಹೋಗಬಹುದೆಂಬ ಆಸೆಯಿಂದ ದಿನದೂಡುತ್ತಿದ್ದಾರೆ. ಹೀಗೆ ವಿಶ್ವದಾದ್ಯಂತ ಅಪ್ಘನ್ ನಿರಾಶ್ರಿತರು ಹರಡಿಕೊಂಡಿದ್ದಾರೆ. ಸಿರಿಯಾದಲ್ಲಿಯೇ 6.8 ಮಿಲಿಯನ್ ನಿರಾಶ್ರಿತರು ವಾಸವಾಗಿದ್ದು ಇದು ಹೆಚ್ಚು ಸಂಖ್ಯೆಯ ಅಫ್ಘನ್ ನಿರಾಶ್ರಿತರ ತಾಣ ಎಂದೆನಿಸಿಕೊಂಡಿದೆ.

  ಇದನ್ನೂ ಓದಿ: Explained: ತೈಲ ಹಾಗೂ ಅನಿಲ ಕಂಪನಿಗಳು ನೈಸರ್ಗಿಕ ಶಕ್ತಿ ಮೂಲಗಳನ್ನು ಅನ್ವೇಷಿಸುತ್ತಿರುವುದಕ್ಕೆ ಕಾರಣವೇನು?

  ತಮ್ಮದೇ ತಾಯ್ನಾಡಿನಲ್ಲಿ ಕಿರುಕುಳ, ಯುದ್ಧ ಹಾಗೂ ಹಿಂಸೆಯ ಕಾರಣದಿಂದ ಪಲಾಯನಗೈದವರನ್ನು ನಿರಾಶ್ರಿತರು ಎಂದು ಕರೆಯಲಾಗಿದೆ. ಇವರುಗಳು ಭಯದಿಂದ ತಮ್ಮ ತಾಯ್ನಾಡಿಗೆ ಮರಳುವ ಆಸೆಯನ್ನೇ ಕಳೆದುಕೊಂಡಿರುತ್ತಾರೆ. ಯುದ್ಧ ಮತ್ತು ಜನಾಂಗೀಯ, ಬುಡಕಟ್ಟು ಮತ್ತು ಧಾರ್ಮಿಕ ಹಿಂಸಾಚಾರಗಳು ನಿರಾಶ್ರಿತರು ತಮ್ಮ ದೇಶಗಳನ್ನು ತೊರೆಯಲು ಪ್ರಮುಖ ಕಾರಣ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

  ಒಟ್ಟಾರೆಯಾಗಿ, 2020 ರ ಕೊನೆಯಲ್ಲಿ, 82.4 ಮಿಲಿಯನ್ ಜನರು ಶೋಷಣೆ, ಸಂಘರ್ಷ, ಹಿಂಸೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳಿಂದಾಗಿ ವಿಶ್ವಾದ್ಯಂತ ಸ್ಥಳಾಂತರಗೊಂಡಿದ್ದಾರೆ ಎಂಬುದಾಗಿ ಮಾಹಿತಿ ದೊರಕಿದ್ದು. ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶದಲ್ಲಿ, ಟರ್ಕಿ ಅತಿ ಹೆಚ್ಚು ನಿರಾಶ್ರಿತರನ್ನು (ಹೆಚ್ಚಾಗಿ ಸಿರಿಯಾದಿಂದ) ಅಂದರೆ 4 ದಶಲಕ್ಷಕ್ಕೂ ಹೆಚ್ಚು ನಿರಾಶ್ರಿತರನ್ನು ಹೊಂದಿದೆ.

  ಅಫ್ಘನ್ ನಿರಾಶ್ರಿತರನ್ನು ಯಾವ ದೇಶಗಳು ಬರಮಾಡಿಕೊಳ್ಳುತ್ತಿವೆ?

  ಅಮೆರಿಕಾ: ಅಮೆರಿಕಾ ದೇಶವು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಆದ್ಯತೆ 2 ನೇಮಕಾತಿಯನ್ನು ಘೋಷಿಸಿದ್ದು ಈ ನೇಮಕಾತಿ ಅಡಿಯಲ್ಲಿ ಅಪ್ಘನ್ ಪ್ರಜೆಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಯುಎಸ್ ನಿರಾಶ್ರಿತ ಪ್ರವೇಶ ಕಾರ್ಯಕ್ರಮ ದೇಶದಲ್ಲಿ ವಾಸಿಸಲು ಒಪ್ಪಿಗೆಯನ್ನು ನೀಡುತ್ತದೆ. ವರದಿಗಳ ಪ್ರಕಾರ, ಯುಎಸ್ 10,000 ಕ್ಕೂ ಹೆಚ್ಚು ಅಫ್ಘನ್ ಪ್ರಜೆಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದ್ದು, ಇದರಲ್ಲಿ ಹೆಚ್ಚಾಗಿ ಸರಕಾರಕ್ಕೆ ಸಹಾಯ ಮಾಡಿದ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

  ಇಂಗ್ಲೆಂಡ್: ಆಗಸ್ಟ್ 18 ರಂದು ಇಂಗ್ಲೆಂಡ್ ಸರಕಾರವು ತಾಲಿಬಾನಿಗಳ ಕ್ರೌರ್ಯದಿಂದ ರಕ್ಷಣೆ ಪಡೆದುಕೊಳ್ಳಲು ಇಂಗ್ಲೆಂಡ್‌ಗೆ ಆಗಮಿಸುವವರಿಗೆ ಶಾಶ್ವತ ನಿವಾಸಗಳನ್ನು ಕಲ್ಪಿಸುವುದಾಗಿ ಘೋಷಿಸಿತ್ತು. ಸರಿಸುಮಾರು 5000 ಅಪ್ಘನ್ ನಿರಾಶ್ರಿತರಿಗೆ ದೇಶವು ರಕ್ಷಣೆಯನ್ನು ನೀಡಿದ್ದು ಮಹಿಳೆಯರು, ಹುಡುಗಿಯರಿಗೆ ದೇಶವು ಹೆಚ್ಚಿನ ಆದ್ಯತೆ ನೀಡಿದೆ. 20,000 ಅಪ್ಘನ್ ದೇಶವಾಸಿಗಳಿಗೆ ಆಶ್ರಯ ನೀಡುವ ಯೋಜನೆಯನ್ನು ಇಂಗ್ಲೆಂಡ್ ಹಾಕಿಕೊಂಡಿದೆ.

  ಯುರೋಪ್: 2015 ರ ವಲಸಿಗರ ಬಿಕ್ಕಟ್ಟಿನ ಪುನರಾವರ್ತನೆಯ ಭಯದ ಕಾರಣ ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳು ಅಪ್ಘನ್ ನಿರಾಶ್ರಿತರಿಗೆ ಪ್ರವೇಶ ನೀಡುವ ವಿಷಯದಲ್ಲಿ ಜಾಗರೂಕತೆಯನ್ನು ವಹಿಸಿವೆ. ಸಿರಿಯಾದ ಮೂರು ವರ್ಷದ ಹುಡುಗ ಅಲಾನ್ ಕುರ್ದಿಯ ಮೃತದೇಹವು ಟರ್ಕಿಯ ಬೋಡ್ರಮ್ ಸಮುದ್ರ ತೀರದಲ್ಲಿ ಮುಖ ಕೆಳಕ್ಕೆ ಮಾಡಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಇದು ನಿರಾಶ್ರಿತರ ಬಿಕ್ಕಟ್ಟಿನ ಸಂಕೇತವಾಗಿದ್ದು ಜಲ ಮಾರ್ಗವನ್ನು ಬಳಸಿಕೊಂಡು ಪಶ್ಚಿಮ ತೀರವನ್ನು ದಾಟುವ ಪ್ರಯತ್ನದಲ್ಲಿ ನಿರಾಶ್ರಿತರು ಎದುರಿಸುವ ಅಪಾಯವನ್ನು ಸೂಚಿಸಿತ್ತು.

  UNHCR ಅಂದಾಜು ಪ್ರಕಾರ 2015 ರಲ್ಲಿ 9 ಲಕ್ಷಕ್ಕೂ ಹೆಚ್ಚಿನ ನಿರಾಶ್ರಿತರು ಯುರೋಪಿಯನ್ ತೀರಕ್ಕೆ ಬಂದಿದ್ದು ಅಂದಾಜು 3500 ಜನರು ಪ್ರಯಾಣ ಸಮಯದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ. ಆಸ್ಟ್ರಿಯಾ, ಫ್ರಾನ್ಸ್ ಮತ್ತು ಸ್ವೀಡನ್ ಯುರೋಪಿನಲ್ಲಿರುವ ಅಫ್ಘನ್ ನಿರಾಶ್ರಿತರಿಗೆ ಇತರ ಪ್ರಮುಖ ತಾಣಗಳಾಗಿವೆ. ಒಟ್ಟಾರೆಯಾಗಿ, ಅಫ್ಘನ್ ನಿರಾಶ್ರಿತರಿಗೆ ಯುರೋಪ್ ದೇಶಗಳಲ್ಲಿ ಪ್ರವೇಶ ಪಡೆಯುವ ಅವಕಾಶ 62% ವಾಗಿದ್ದು, ಅನೇಕರಿಗೆ ಉಳಿಯಲು ತಾತ್ಕಾಲಿಕ ಹಕ್ಕನ್ನು ಮಾತ್ರ ನೀಡಲಾಗಿದೆ ಎಂಬುದು ಅಂಕಿಅಂಶಗಳಿಂದ ತಿಳಿದು ಬಂದಿದೆ.

  ಭಾರತ: ಭಾರತವು ನಿರಾಶ್ರಿತರಿಗಾಗಿ ಪ್ರತ್ಯೇಕ ಶಾಸನಗಳನ್ನು ಹೊಂದಿಲ್ಲ. ಹಾಗೂ ಇಲ್ಲಿಯವರೆಗೆ ಪ್ರಕರಣಗಳನ್ನು ಆಧರಿಸಿ ನಿರಾಶ್ರಿತರಿಗೆ ರಕ್ಷಣೆಯನ್ನು ನೀಡುತ್ತಿದೆ. 1951 ರಲ್ಲಿ ನಡೆದ ನಿರಾಶ್ರಿತರ ಸಮಾವೇಶದಲ್ಲಿ ಭಾರತವು ಯಾವುದೇ ಸಹಿಯನ್ನು ಹಾಕಿಲ್ಲ. 2011 ರಲ್ಲಿ ಕೇಂದ್ರ ಸರಕಾರವು ವಿದೇಶಿ ಪ್ರಜೆಗಳೊಂದಿಗೆ ವ್ಯವಹರಿಸಲು ಪ್ರಮಾಣಿಕ ಕಾರ್ಯಾಚರಣೆಯನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಸಾರ ಮಾಡಿತು.

  ಅಪ್ಘನ್‌ನ ಪ್ರಸ್ತುತ ಬಿಕ್ಕಟ್ಟನ್ನು ಮನ್ನಿಸಿ ಭಾರತ ಸರಕಾರವು ಭಾರತಕ್ಕೆ ಅಪ್ಘನ್ ಪ್ರಜೆಗಳ ಪ್ರವೇಶವನ್ನು ಸುಲಭಗೊಳಿಸಲು ಇ-ವೀಸಾ ಸೌಲಭ್ಯವನ್ನು ಪರಿಚಯಿಸಿದೆ. ಈ ವೀಸಾಗಳ ಮಾನ್ಯತೆ ಆರು ತಿಂಗಳ ಸಮಯವಾಗಿದೆ. ಈ ವೀಸಾವನ್ನು ಬಳಸಿಕೊಂಡು ಅಪ್ಘನ್ ಪ್ರಜೆಗಳು ಅಪ್ಲಿಕೇಶನ್ ಪ್ರಕ್ರಿಯೆಯನ್ನು ವೇಗ ಹಾಗೂ ಸುಲಭವಾಗಿ ಟ್ರ್ಯಾಕ್ ಮಾಡಬಹುದು.
  Published by:Kavya V
  First published: