Explained: ಪ್ರತಿಯೊಬ್ಬರೂ ಮಾಂಸಹಾರ ಬಿಟ್ಟು ಸಸ್ಯಾಹಾರಿಗಳಾದರೆ ಪರಿಣಾಮ ಏನಾಗಬಹುದು ಗೊತ್ತಾ?

ವೆಜಿಟೇರಿಯನ್ ಮತ್ತು ನಾನ್ ವೆಜಿಟೇರಿಯನ್‌ಗಳ ವಾದ-ಪ್ರತಿವಾದ ನಿಲ್ಲೋದೆ ಇಲ್ಲ. ಹಾಗಾದರೆ ಭೂಮಿಯ (Earth) ಮೇಲಿನ ಪ್ರತಿಯೊಬ್ಬ ಮನುಷ್ಯನು ಮಾಂಸಹಾರವನ್ನು (Non-Veg) ತ್ಯಜಿಸಿದರೆ ಏನಾಗಬಹುದು ಅನ್ನೋ ನಿಮ್ಮ ಕೂತೂಹಲಕ್ಕೆ ಇಲ್ಲಿದೆ ಉತ್ತರ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಊಟಕ್ಕೆ ಚಿಕನ್ (Chicken), ಮೀನು, ಮಾಂಸ ಇಲ್ಲದೇ ಕೆಲವರಿಗೆ ಗಂಟಲಲ್ಲಿ ತುತ್ತೇ ಹೋಗಲ್ಲ, ಇನ್ನೂ ಕೆಲವರಿಗೆ ಅದನ್ನು ನೋಡಿದರೂ ಆಗಲ್ಲ. ಪ್ರಾಣಿ ಹಿಂಸೆ (Animal violence) ಮಾಡ್ತೀರಾ ಅಂತಾ ಅವರು, ನೀವು ಪರಿಸರ ಹಾಳು ಮಾಡ್ತೀರಾ ಅಂತಾ ಇವರು. ಮಾಂಸವನ್ನು ತಿನ್ನುವುದರ ಮೂಲಕ ಆಹಾರ ಸರಪಳಿ ಮತ್ತು ಪರಿಸರ ವ್ಯವಸ್ಥೆಯನ್ನು (Ecosystem) ಸಮತೋಲನದಲ್ಲಿಡುತ್ತೇವೆ ಎಂಬ ಜಂಬದ ಉತ್ತರ ಬೇರೆ. ಅಯ್ಯೋ ಒಂದಾ, ಎರಡಾ ಈ ವೆಜಿಟೇರಿಯನ್ ಮತ್ತು ನಾನ್ ವೆಜಿಟೇರಿಯನ್ ಗಳ ವಾದ-ಪ್ರತಿವಾದ ನಿಲ್ಲೋದೆ ಇಲ್ಲ. ಹಾಗಾದರೆ ಭೂಮಿಯ (Earth) ಮೇಲಿನ ಪ್ರತಿಯೊಬ್ಬ ಮನುಷ್ಯನು ಮಾಂಸಹಾರವನ್ನು (Non-Veg) ತ್ಯಜಿಸಿದರೆ ಏನಾಗಬಹುದು ಅನ್ನೋ ನಿಮ್ಮ ಕೂತೂಹಲಕ್ಕೆ ಇಲ್ಲಿ ಉತ್ತರ ಕಂಡುಕೊಳ್ಳೋಣ.

ಮಾಂಸಹಾರದಿಂದ ಪರಿಸರಕ್ಕೆ ಹೆಚ್ಚು ಇಂಗಾಲದ ಡೈಆಕ್ಸೈಡ್ ಬಿಡುಗಡೆ
ಮೊದಲನೆಯದಾಗಿ ಮಾಂಸವನ್ನು ತಿನ್ನುವುದರಿಂದ ಪರಿಸರಕ್ಕೆ ಹೆಚ್ಚು ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಈ ಬಗ್ಗೆ ಸೈಂಟಿಫಿಕ್ ಅಮೇರಿಕಾ ವೆಬ್‌ಸೈಟ್‌ನ ವರದಿಯು ಹೇಳಿರುವ ಪ್ರಕಾರ, ಅರ್ಧ ಪೌಂಡ್ ಆಲೂಗಡ್ಡೆ ಅಥವಾ ಸುಮಾರು 226 ಗ್ರಾಂ ಉತ್ಪಾದನೆಯು, ಒಂದು ಕಾರು 0.2 ಕಿಲೋಮೀಟರ್ ದೂರದವರೆಗೆ ಹೋಗುವಷ್ಟು ಸಣ್ಣ ಕಾರನ್ನು ಓಡಿಸಲು ಎಷ್ಟು ಇಂಗಾಲದ ಡೈಆಕ್ಸೈಡ್ ತೆಗೆದುಕೊಳ್ಳುತ್ತದೆಯೋ ಅದೇ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ.

ಅದೇ ಸಮಯದಲ್ಲಿ, ಅದೇ ಪ್ರಮಾಣದ ಮಾಂಸ ಸೇವನೆ, ಅದೇ ಕಾರನ್ನು 12.7 ಕಿಮೀ ದೂರಕ್ಕೆ ಓಡಿಸುವಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ ಎಂದು ಕಂಡುಕೊಂಡಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಪ್ರಪಂಚದ ಹೆಚ್ಚಿನ ಜನರು ಹಣ್ಣುಗಳು ಮತ್ತು ತರಕಾರಿಗಳನ್ನು ಮಾತ್ರ ಒಳಗೊಂಡಿರುವ ಇಂತಹ ಆಹಾರವನ್ನು ಸೇವಿಸುವುದರಿಂದ, ಹಸಿರುಮನೆ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಿದೆ.

ನೀರಿನ ಬಳಕೆ
ಭೂಮಿಯ ಮೇಲಿನ ನೀರಿನ ಸಂರಕ್ಷಣೆಯ ಡೈನಾಮಿಕ್ಸ್‌ನಲ್ಲೂ ಗಮನಾರ್ಹ ಬದಲಾವಣೆಯಾಗಲಿದೆ. ಮಾಂಸವನ್ನು ಉತ್ಪಾದಿಸಲು ಹೆಚ್ಚು ನೀರು ಬೇಕಾಗುತ್ತದೆ, ಆದರೆ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸಲು ಕಡಿಮೆ ನೀರನ್ನು ಬಳಸಲಾಗುತ್ತದೆ. ಕಬ್ಬು ಉತ್ಪಾದನೆಗೆ 1-2 ಘನ ಮೀಟರ್ ನೀರನ್ನು ಬಳಸಿದರೆ, ತರಕಾರಿ ಉತ್ಪಾದನೆಗೆ ಬಹುತೇಕ ಅದೇ ಪ್ರಮಾಣದ ನೀರನ್ನು ಬಳಸಲಾಗುತ್ತದೆ. ಆದಾಗ್ಯೂ, ಮಾಂಸವನ್ನು ಉತ್ಪಾದಿಸಲು 15,000 ಕ್ಯೂಬಿಕ್ ಮೀಟರ್‌ಗಿಂತ ಹೆಚ್ಚು ನೀರು ಬೇಕಾಗುತ್ತದೆ.

ಪರಿಸರದ ಮೇಲೆ ಉತ್ತಮ ಪ್ರಭಾವ
2050ರ ವೇಳೆಗೆ ಎಲ್ಲರೂ ಸಸ್ಯಾಹಾರಿಗಳಾದರೆ, ಆಹಾರ-ಸಂಬಂಧಿತ ಹೊರಸೂಸುವಿಕೆಗಳು 60% ರಷ್ಟು ಕಡಿಮೆಯಾಗುತ್ತವೆ. ಜೊತೆಗೆ 80%ರಷ್ಟು ಹುಲ್ಲುಗಾವಲುಗಳನ್ನು, ಕಾಡುಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಹೀಗೆ ಕಾಡು ರಕ್ಷಣೆ ಇಂಗಾಲವನ್ನು ಸೆರೆಹಿಡಿಯುತ್ತದೆ ಮತ್ತು ಹವಾಮಾನ ಬದಲಾವಣೆಯಂತಹ ವೈಪರಿತ್ಯಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: Explained: ಹೆಣ್ಮಕ್ಕಳೇ, ನಿಮ್ಮಲ್ಲೂ ಅಳವಡಿಸಿಕೊಳ್ಳಿ ಸ್ತ್ರೀ ವಾದಿ ಪಾಲನೆಯ ಈ ಎಂಟು ಅಂಶಗಳು!

ಮಧ್ಯಮ ಕುಟುಂಬಕ್ಕೆ ಹೊಡೆತ
ಮಾಂಸಹಾರದ ಬದಲಿಗೆ ಸಸ್ಯಹಾರವನ್ನೇ ಸೇವಿಸುವುದರಿಂದ ಪರಿಸರದ ಜೊತೆ ಜನರ ಮೇಲೂ ಪರಿಣಾಮಗಳು ಬೀರುತ್ತವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯು ಆಹಾರ ಪೂರೈಕೆಯಲ್ಲಿನ ಒಟ್ಟು ಪೋಷಕಾಂಶಗಳಿಗೆ ಪ್ರಾಣಿ ಉತ್ಪನ್ನಗಳು ಗಣನೀಯವಾಗಿ ಕೊಡುಗೆ ನೀಡುತ್ತವೆ ಎಂದು ಹೇಳುತ್ತದೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ ಜನರು ತಮ್ಮ ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಸೇರಿಸಲು ಮಾಂಸವನ್ನು ಅವಲಂಬಿಸುತ್ತಾರೆ. ಏಕೆಂದರೆ ಸಸ್ಯಾಹಾರಿ ಮಾಂಸದ ಬದಲಿಗಳು ಮಾರುಕಟ್ಟೆಯಲ್ಲಿ ದುಬಾರಿಯಾಗಿವೆ ಮತ್ತು ಕೊಳ್ಳುವ ಅವರ ಸಾಮರ್ಥ್ಯವನ್ನು ಮೀರಿದೆ. ಉದಾಹರಣೆಗೆ ಮೊಟ್ಟೆಯ ಬದಲಿ ಉತ್ತಮ ಆಹಾರ ಪನ್ನೀರ್ ಎನ್ನಲಾಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 5 ರೂ ಅದೇ ಪನ್ನೀರ್ ಒಂದು ಸಣ್ಣ ಪ್ಯಾಕ್ 100 ರೂ ಇದೆ. ಹೀಗಿರುವಾಗ ಮಧ್ಯಮ ಕುಟುಂಬದ ಜನಕ್ಕೆ ಇದು ಹೊಡೆತ ನೀಡುತ್ತದೆ.

ಸಸ್ಯಾಹಾರವು ಆರೋಗ್ಯ ಪ್ರಯೋಜನಗಳನ್ನು ತರುತ್ತದೆ
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಸಸ್ಯಾಹಾರವು ಎಲ್ಲಾ ರೀತಿಯ ಪರಿಸರ ಮತ್ತು ಆರೋಗ್ಯ ಪ್ರಯೋಜನಗಳನ್ನು ತರುತ್ತದೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನದ ವಿಷಯದಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ.

ಇದನ್ನೂ ಓದಿ: Explained: ನಶಿಸಿ ಹೋಗಿದ್ದ ಆಮೆ ಪ್ರಭೇದ ಪತ್ತೆ; ಈ ಚೆಲೋನಾಯಿಡಿಸ್ ಫ್ಯಾಂಟಸ್ಟಿಕಸ್ ಕಾಣಸಿಕ್ಕಿದ್ದು ಎಲ್ಲಿ ಗೊತ್ತಾ?

ಪರಿಸರ ಮೇಲೆ ಉತ್ತಮ ಪರಿಣಾಮ ಬೀರುವ ಸಸ್ಯಾಹಾರ ಪದ್ಧತಿ ಜಾಗತಿಕವಾಗಿ ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ ಅಭಿವೃದ್ಧಿಶೀಲ ಜಗತ್ತಿನಲ್ಲಿ ಆರೋಗ್ಯ ಬಿಕ್ಕಟ್ಟನ್ನು ಉಂಟಾಗುವ ಸಾಧ್ಯತೆಗಳಿವೆ. ಜನರಿಲ್ಲದೇ ಪರಿಸರ ಇಲ್ಲ. ಹೀಗಾಗಿ ಎರಡೂ ಆಹಾರ ಪದ್ಧತಿಗಳು ಸಮತೋಲನದಲ್ಲಿದ್ದರೆ ಸೂಕ್ತ ಎನಿಸುತ್ತದೆ.
Published by:Ashwini Prabhu
First published: