ಯೂಟ್ಯೂಬ್ ಚಾನೆಲ್‌ಗಳು (Youtube Channel) ಇಂದಿನ ದಿನದಲ್ಲಿ ಹೆಚ್ಚಿನ ಜನರ ಉದ್ಯೋಗ ವೇದಿಕೆಯಾಗಿ ಸೃಷ್ಟಿಯಾಗಿದೆ. ಇದರ ಜೊತೆಗೆ ಇದನ್ನೇ ಲಾಭವಾಗಿಟ್ಟುಕೊಂಡು ಜನರನ್ನು ಮೋಸ ಮಾಡುವಂತಹ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಅದೇ ರೀತಿ ಕಾನೂನುಬಾಹಿರವಾಗಿ ಷೇರು ಬೆಲೆಗಳ ಮೇಲೆ ನಿಯಂತ್ರಣ ಸಾಧಿಸಲು ಯೂಟ್ಯೂಬ್ ಮಾಧ್ಯಮವನ್ನು ಬಳಸಿದ 55 ಘಟಕಗಳ ವಿರುದ್ಧ ಎರಡು ಮಧ್ಯಂತರ ಆದೇಶಗಳನ್ನು, ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಇತ್ತೀಚೆಗೆ ಜಾರಿಗೊಳಿಸಿದೆ. ಎರಡು ಬ್ರಾಡ್‌ಕಾಸ್ಟಿಂಗ್ ಸಂಸ್ಥೆಗಳ (Broadcasting Company) ಮೂಲಕ ಹೂಡಿಕೆದಾರರಿಗೆ ಅಮಿಷವೊಡ್ಡುವ ರೀತಿಯಲ್ಲಿ ಸುದ್ದಿಗಳನ್ನು ಪ್ರಚಾರಪಡಿಸಿ ಷೇರುಗಳ (Stock Price) ಮೇಲೆ ನಿಯಂತ್ರಣ ಸಾಧಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ನಟ ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ಸೇರಿದಂತೆ ಯೂಟ್ಯೂಬರ್ ಮನೀಶ್ ಮಿಶ್ರಾ ಹಾಗೂ ಸಾಧನಾ ಬ್ರಾಡ್‌ಕಾಸ್ಟ್ ಪ್ರಮೋಟರ್‌ಗಳಾದ ಶ್ರೇಯಾ ಗುಪ್ತಾ, ಗೌರವ್ ಗುಪ್ತಾ, ಸೌರಭ್ ಗುಪ್ತಾ ಹೀಗೆ ಹಲವಾರು ವ್ಯಕ್ತಿಗಳು ಮತ್ತು 31 ಸಂಸ್ಥೆಗಳಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಿದೆ.
ನಿಷೇಧ ಹೇರಿದ SEBI
ತಪ್ಪುದಾರಿಗೆಳೆಯುವ ಮಾಹಿತಿಯನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡುವ ಮೂಲಕ ಸ್ಟಾಕ್ ಬೆಲೆಗಳನ್ನು ಮೋಸದಿಂದ ಹೆಚ್ಚಿಸಿದ ಆರೋಪದ ಮೇಲೆ ನಟ ಅರ್ಷದ್ ವಾರ್ಸಿ ಹಾಗೂ ಆತನ ಪತ್ನಿ ಸೇರಿದಂತೆ 31 ಸಂಸ್ಥೆಗಳ ಮೇಲೆ ಸೆಬಿ ಕ್ರಮಕೈಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
ತಪ್ಪುಮಾಹಿತಿ ಪ್ರಚಾರ ಮಾಡಿದ ಬ್ರಾಡ್‌ಕಾಸ್ಟಿಂಗ್ ಸಂಸ್ಥೆಗಳು
ಷೇರು ಬೆಲೆಗಳನ್ನು ಹೆಚ್ಚಿಸುವುದಕ್ಕಾಗಿ ಎರಡು ದೆಹಲಿ ಮೂಲದ ಬ್ರಾಡ್‌ಕಾಸ್ಟಿಂಗ್ ಸಂಸ್ಥೆಗಳಾದ ಸಾಧನಾ ಬ್ರಾಡ್‌ಕಾಸ್ಟ್ ಲಿಮಿಟೆಡ್ ಹಾಗೂ ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಯೂಟ್ಯೂಬ್‌ನಲ್ಲಿ ತಪ್ಪುದಾರಿಗೆಳೆಯುವ ವಿಡಿಯೋಗಳನ್ನು ಪ್ರಚಾರ ಮಾಡಿದೆ ಎಂದು SEBI ಕಂಡುಹಿಡಿದಿದ್ದು ಈ ಹಿನ್ನಲೆಯಲ್ಲಿ ನಿಷೇಧವನ್ನು ಹೇರಲಾಗಿದೆ ಎಂಬುದು ವರದಿಯಾಗಿದೆ.
ಇದನ್ನೂ ಓದಿ: ರೇಸ್ ಕೋರ್ಸ್ ರೋಡ್‌ಗೆ ಅಂಬರೀಶ್ ಹೆಸರು ಇಟ್ಟಿದ್ದೇಕೆ? ಆ ಸ್ಥಳದ ಜೊತೆಗಿದ್ಯಾ ರೆಬೆಲ್ ಸ್ಟಾರ್ ನಂಟು?
ಸ್ಟಾಕ್ ಮಾರ್ಕೆಟ್ ಭಾಷೆಯಲ್ಲಿ 'ಪಂಪ್ ಮತ್ತು ಡಂಪ್' ಎಂದರೇನು?
ಪಂಪ್ ಮತ್ತು ಡಂಪ್ ಎನ್ನುವುದು ಸುಳ್ಳು, ತಪ್ಪುದಾರಿಗೆಳೆಯುವ ಅಥವಾ ಉತ್ಪ್ರೇಕ್ಷಿತ ಹೇಳಿಕೆಗಳ ಆಧಾರದ ಮೇಲೆ ನಕಲಿ ಮಾಹಿತಿಗಳ ಮೂಲಕ ಷೇರುಗಳ ಬೆಲೆಯನ್ನು ಹೆಚ್ಚಿಸುವ ಯೋಜನೆಯಾಗಿದೆ. ಬೆಲೆ ಏರಿದಾಗ, ನಿರ್ವಾಹಕರು ಷೇರುಗಳನ್ನು ಮಾರಾಟ ಮಾಡುತ್ತಾರೆ.
ಯೂಟ್ಯೂಬ್‌ನಲ್ಲಿನ ಹಗರಣವನ್ನು ಸೂಚಿಸುವ ಸೆಬಿ ಆದೇಶದಲ್ಲಿ ಇದನ್ನು ಹೇಗೆ ಬಳಸಲಾಗಿದೆ?
ಹೆಚ್ಚುವರಿ ರೀಚ್‌ಗಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಪಾವತಿಸಿದ ಮಾರ್ಕೆಟಿಂಗ್ ಪ್ರಚಾರದ ಬೆಂಬಲದೊಂದಿಗೆ ಹೂಡಿಕೆದಾರರಿಗೆ ಆಮಿಷವೊಡ್ಡಲು ಸುಳ್ಳು ವಿಷಯವನ್ನು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಬಿತ್ತರಿಸಲಾಗುತ್ತಿದೆ ಎಂಬ ಆರೋಪವನ್ನು ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಪರಿಶೀಲಿಸಿದೆ.
ಸಂಶಯಾಸ್ಪದ ಹೂಡಿಕೆದಾರರು ಹೆಚ್ಚಿನ ಬೆಲೆಗಳಲ್ಲಿ ಷೇರನ್ನು ಮಾರಾಟ ಮಾಡುತ್ತಾರೆ. ಇದನ್ನು ಪಂಪ್ ಏಂಡ್ ಡಂಪ್ ಎಂದು ಕರೆಯಲಾಗುತ್ತದೆ.
ಇದೊಂದು ಹಗರಣ ಹೇಗೆ?
ಪಂಪ್ ಹಾಗೂ ಡಂಪ್ ಯೋಜನೆಗಳ ಮೂಲಕ ಸಂಶಯಾಸ್ಪದ ಹೂಡಿಕೆದಾರರು ಸಾಕಷ್ಟು ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತಾರೆ ಆದರೆ ಇದರಿಂದ ತೊಂದರೆಗೀಡಾಗುವುದು ಹಾಗೂ ನೋವು ಅನುಭವಿಸುವುದು ಸಾಮಾನ್ಯ ರಿಟೇಲ್ ಹೂಡಿಕೆದಾರರಾಗಿದ್ದು, ಈ ಹೂಡಿಕೆದಾರರು ತಾವು ಕಷ್ಟಪಟ್ಟು ದುಡಿದ ಹಣವನ್ನು ಇಂತಹ ಷೇರುಗಳಲ್ಲಿ ವಿನಿಯೋಗಿಸುತ್ತಿರುತ್ತಾರೆ.
ಷೇರು ಮಾರುಕಟ್ಟೆಗಳ ಮೇಲಿನ ವಿಶ್ವಾಸವನ್ನು ನಾಶಪಡಿಸಲು ಹಾಗೂ ಹೂಡಿಕೆದಾರರನ್ನುಇಂತಹ ಹಗರಣಗಳಿಂದ ಸಂರಕ್ಷಿಸಲು SEBI ಇಂತಹ ದಬ್ಬಾಳಿಕೆಗಳ ಮೇಲೆ ಕಣ್ಣಿಟ್ಟಿದೆ.
SEBI ಯಾರನ್ನು ತನಿಖೆ ಮಾಡಿದೆ?
SEBI ಹೊರಡಿಸಿದ ಎರಡು ಆದೇಶಗಳು ಈ ಕೆಳಗಿನ ಕಂಪನಿಗಳ ಷೇರುಗಳಿಗೆ ಸಂಬಂಧಿಸಿವೆ:
ಸಾಧನಾ ಬ್ರಾಡ್‌ಕಾಸ್ಟ್ ಲಿಮಿಟೆಡ್
ದೆಹಲಿ ಮೂಲದ ಕಂಪನಿಯು "ಟೆಲಿವಿಷನ್ ಚಾನೆಲ್‌ಗಳನ್ನು ಪ್ರಾರಂಭಿಸುವ ಮತ್ತು ಟಿವಿ ಸುದ್ದಿ, ಚಲನಚಿತ್ರಗಳು, ಸಂಗೀತ, ಧಾರಾವಾಹಿಗಳು ಇತ್ಯಾದಿಗಳ ವ್ಯವಹಾರವನ್ನು ನಿರ್ವಹಿಸುವ ವ್ಯವಹಾರದಲ್ಲಿ" ತೊಡಗಿಸಿಕೊಂಡಿದೆ.
ಏಪ್ರಿಲ್ 27 ರಿಂದ ಸೆಪ್ಟೆಂಬರ್ 30, 2022 ರ ನಡುವೆ ಸಾಧನಾ ಬ್ರಾಡ್‌ಕಾಸ್ಟಿಂಗ್ ಮೋಸದ ಜಾಲದಲ್ಲಿ ಭಾಗಿಯಾಗಿದ್ದಕ್ಕಾಗಿ 31 ಘಟಕಗಳ ಮೇಲೆ SEBI ದಂಡನಾತ್ಮಕ ಕ್ರಮ ಜಾರಿಗೊಳಿಸಿದೆ.
ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ –
ದೆಹಲಿ ಮೂಲದ ಕಂಪನಿಯು ಸಾಧನಾ ರೀತಿಯಲ್ಲಿಯೇ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಏಪ್ರಿಲ್ 12, 2022 ರಿಂದ ಆಗಸ್ಟ್ 19, 2022 ರ ನಡುವೆ ಶಾರ್ಪ್‌ಲೈನ್ ಸಂಸ್ಥೆ ಹೂಡಿಕೆದಾರರನ್ನು ಮೋಸಗೊಳಿಸುವ ಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ 24 ಘಟಕಗಳಿಗೆ SEBI ದಂಡನಾತ್ಮಕ ಕ್ರಮ ಜಾರಿಗೊಳಿಸಿದೆ.
ಈ ಎರಡೂ ಪ್ರಕರಣಗಳಲ್ಲಿ ಯೂಟ್ಯೂಬ್ ವಿಡಿಯೋಗಳ ರಚನೆಕಾರರು, ಕಂಪೆನಿಯ ಪ್ರವರ್ತಕರು, ಬೆಲೆ ಕುಶಲತೆಯ ಮೊದಲು ಷೇರುಗಳನ್ನು ಹೊಂದಿದ್ದ ಕೆಲವು ಷೇರುದಾರರು, ವ್ಯಾಪಾರದ ಪ್ರಮಾಣ ಮತ್ತು ಆಸಕ್ತಿಯನ್ನು ಹೆಚ್ಚಿಸಲು ಷೇರುಗಳನ್ನು ವ್ಯಾಪಾರ ಮಾಡಿದ ಕೆಲವು ಷೇರುದಾರರ ಮೇಲೆ ಸೆಬಿ ಕ್ರಮ ಕೈಗೊಂಡಿದೆ.
ಯಾವ ಯೂಟ್ಯೂಬ್ ಚಾನೆಲ್‌ಗಳು ಸುಳ್ಳು ಮಾಹಿತಿಯನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿವೆ?
ಸಾಧನಾ ಪ್ರಕರಣದಲ್ಲಿ, ಕಂಪನಿಯನ್ನು ಉತ್ತೇಜಿಸುವ ಐದು ವಿಡಿಯೋಗಳನ್ನು ಎರಡು ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ ಅವುಗಳೆಂದರೆ:
ಇದರಿಂದ ಸಾಧನಾ ಸ್ಟಾಕ್‌ಗಳನ್ನು ಹೆಚ್ಚುವರಿ ಲಾಭಗಳಲ್ಲಿ ಹೂಡಿಕೆದಾರರು ಖರೀದಿಸಬೇಕೆಂಬ ಹಿನ್ನಲೆಯನ್ನು ಈ ವಿಡಿಯೋಗಳು ಹೊಂದಿದ್ದವು ಎಂಬುದು ವರದಿಯಲ್ಲಿ ಮೂಡಿಬಂದಿದೆ.
ಈ ಯೂಟ್ಯೂಬ್ ವಿಡಿಯೋಗಳು ಷೇರು ಬೆಲೆಗಳನ್ನು ಹೇಗೆ ಯುಕ್ತಿಯಿಂದ ಬಳಸುವಂತೆ ಮಾಡಿದವು:
ಉದಾಹರಣೆಗೆ, ವಿಡಿಯೋಗಳಲ್ಲಿ ಮಾಡಿದ ಕೆಲವು ಹೇಳಿಕೆಗಳು ಈ ರೀತಿ ಇವೆ
ಕಂಪೆನಿಯು 5G ಪರವಾನಗಿಯನ್ನು ಹೊಂದಿದೆ. SBL ಅನ್ನು ಅದಾನಿ ಸಮೂಹವು ಸ್ವಾಧೀನಪಡಿಸಿಕೊಳ್ಳಲಿದೆ. ಒಪ್ಪಂದದ ನಂತರ ಕಂಪನಿಯ ಮಾರ್ಜಿನ್‌ಗಳು ಹೆಚ್ಚಾಗುತ್ತವೆ.
ಷೇರಿನ ಪ್ರಸ್ತುತ ಬೆಲೆ ರೂ 30 ಮತ್ತು ಮುಂದಿನ 3 ತಿಂಗಳೊಳಗೆ ರೂ 240 ಮತ್ತು ಮುಂದಿನ ಒಂದು ವರ್ಷದೊಳಗೆ ರೂ 750 ಆಗುತ್ತದೆ.
ಹೀಗೆ ಹೂಡಿಕೆದಾರರಿಗೆ ಆಮಿಷವೊಡ್ಡುವ ರೀತಿಯಲ್ಲಿ ವಿಡಿಯೋಗಳು ತಪ್ಪುಮಾಹಿತಿಗಳನ್ನು ಪ್ರಚಾರಪಡಿಸಿದ್ದವು ಎಂಬುದನ್ನು ಸೆಬಿ ಕಂಡುಹಿಡಿದಿದೆ.
ಈ ಯೂಟ್ಯೂಬ್ ಚಾನೆಲ್‌ಗಳು ಲಕ್ಷಗಟ್ಟಲೆ ಚಂದಾದಾರರನ್ನು ಹೊಂದಿದ್ದವು ಮತ್ತು ತಪ್ಪುದಾರಿಗೆಳೆಯುವ ಯೂಟ್ಯೂಬ್ ವಿಡಿಯೋಗಳು ಪಾವತಿಸಿದ ಜಾಹೀರಾತು ಪ್ರಚಾರದ ಮೂಲಕ ಕೋಟಿಗಟ್ಟಲೆ ವೀಕ್ಷಕರನ್ನು ಹೊಂದಿದ್ದವು ಎಂಬುದನ್ನು ಸೆಬಿ ಕಂಡುಹಿಡಿದಿದೆ.
ವಿವಿಧ ಘಟಕಗಳು ಹೇಗೆ ಸಂಪರ್ಕ ಹೊಂದಿವೆ?
ಎರಡೂ ಸಂದರ್ಭಗಳಲ್ಲಿ, ಯೂಟ್ಯೂಬ್ ವೀಡಿಯೊಗಳನ್ನು ಮಾಡಿದ ರಚನೆಕಾರರು, ಕಂಪೆನಿಯ ಪ್ರವರ್ತಕರು ಮತ್ತು ಸ್ಟಾಕ್ ಬೆಲೆಯಿಂದ ಲಾಭ ಪಡೆದ ಇತರ ಷೇರುದಾರರು ಪರಸ್ಪರ ಸಂಪರ್ಕ ಹೊಂದಿದ್ದಾರೆಂದು ಕಂಡುಬಂದಿದೆ.
ನಟ ಅರ್ಷದ್ ವಾರ್ಸಿ ಹಾಗೂ ಪತ್ನಿ ಮಾರಿಯಾ ಗೊರೆಟ್ಟಿ ಮೇಲಿನ ಆಪಾದನೆ ಏನು?
ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ಅವರು ಈ ಯೋಜನೆಯಲ್ಲಿ ಭಾಗವಹಿಸಿ 60 ಲಕ್ಷಕ್ಕೂ ಹೆಚ್ಚು ಅಕ್ರಮ ಲಾಭ ಗಳಿಸಿದ್ದಾಗಿ ಸೆಬಿ ವರದಿ ದಾಖಲಿಸಿದೆ. ಅರ್ಷದ್ ಒಟ್ಟಾರೆ ರೂ 29.43 ಲಕ್ಷ ಲಾಭ ಗಳಿಸಿದ್ದರೆ ಆತನ ಪತ್ನಿ ಮರಿಯಾ ರೂ 37.58 ಲಕ್ಷ ಲಾಭಗಳಿಸಿದ್ದಾರೆ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಆದರೆ ವಾರ್ಸಿ ಷೇರು ಮಾರುಕಟ್ಟೆಯ ಜ್ಞಾನ ತಮಗೆ ಸ್ವಲ್ಪವೂ ಇಲ್ಲ ಹಾಗಾಗಿ ಮಾಧ್ಯಮದಲ್ಲಿ ಬಂದಿರುವ ಸುದ್ದಿಗಳನ್ನು ನಂಬದಿರಿ ನಮ್ಮಿಬ್ಬರಿಗೂ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಮನೀಶ್ ಮಿಶ್ರಾ ಪಾತ್ರವೇನು?
ದ ಅಡ್ವೈಸರ್ ಹಾಗೂ ಮನಿವೈಸ್ ಇವೆರಡನ್ನೂ ಮನೀಶ್ ಮಿಶ್ರಾ ನಿರ್ವಹಿಸುತ್ತಿದ್ದು, ಇನ್ನೊಬ್ಬ ಅಪರಾಧಿ ಮಂಜಿರಿ ತಿವಾರಿ ಈ ಮೋಸದ ಜಾಲದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಹಾಗೆಯೇ ಇನ್‌ಪ್ಲುಯೆನ್ಸರ್ ಹಾಗೂ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಈ ಸ್ಟಾಕ್‌ಗಳನ್ನು ಖರೀದಿಸುವಂತೆ ಹೂಡಿಕೆದಾರರ ಮನವೊಲಿಸುತ್ತಿದ್ದರು ಎಂಬುದು ವರದಿಯಾಗಿದೆ.
ಮನೀಶ್ ಹಾಗೂ ಆತನ ಪತ್ನಿ ಅಂಶು ಮಿಶ್ರಾ ಪರೀಕ್ಷಾ ಹಂತದಲ್ಲಿ ಪುನರಾವರ್ತಿತವಾಗಿ ಷೇರುಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡುವುದನ್ನು ಮಾಡುತ್ತಿದ್ದರು ಇದರ ನಂತರವೇ ಮೋಸದ ವಿಡಿಯೋಗಳನ್ನು ಯೂಟ್ಯೂಬ್ ಚಾನೆಲ್‌ಗಳಲ್ಲಿ ಬ್ರಾಡ್‌ಕಾಸ್ಟ್ ಮಾಡಲಾಗಿದೆ ಎಂದು ಸೆಬಿ ತಿಳಿಸಿದೆ.
ಈ ಪ್ರಕರಣ ಯಾವ ಕಾನೂನುಗಳನ್ನು ಉಲ್ಲಂಘಿಸಿದೆ?
ಈ ಪ್ರಕರಣಗಳಲ್ಲಿ ನಡೆಸಲಾದ ಹೂಡಿಕೆದಾರರನ್ನು ಮೋಸಗೊಳಿಸಿರುವುದರ ಬಗ್ಗೆ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಕಾಯಿದೆ, 1992 ರ ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿದೆ ಹಾಗೂ SEBI (ವಂಚನೆ ಮತ್ತು ಅನ್ಯಾಯದ ನಿಷೇಧ) ಸೇರಿದಂತೆ ಅದರ ಅಡಿಯಲ್ಲಿ ರಚಿಸಲಾದ ವಿವಿಧ ನಿಯಮಗಳು ಸೆಕ್ಯುರಿಟೀಸ್ ಮಾರುಕಟ್ಟೆಗೆ ಸಂಬಂಧಿಸಿದ ವ್ಯಾಪಾರದ ಅಭ್ಯಾಸಗಳು) ನಿಯಮಗಳನ್ನು ಉಲ್ಲಂಘಿಸಿದೆ ಎಂದು SEBI ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ