ಆಂಜನೇಯ (Anjaneya) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಆಸ್ತಿಕರಲ್ಲಿ ಬಹುತೇಕರು ಆಂಜನೇಯನ ಭಕ್ತರು. ಹಿಂದೂ (Hindu) ಧರ್ಮದಲ್ಲಿ ರಾಮನ (Rama) ಭಕ್ತರು ಎಷ್ಟಿದ್ದಾರೋ ಅವರಷ್ಟೇ ಹನುಮಂತನ ಭಕ್ತರೂ ಇದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಹನುಮ ಇಲ್ಲದ ರಾಮಾಯಣವನ್ನು (Ramayana) ಕಲ್ಪಿಸಿಕೊಳ್ಳುವುದೂ ಕೂಡ ಅಸಾಧ್ಯ. ರಾಮನ ಗುಡಿಯಿಲ್ಲದ ಊರಿರಬಹುದು, ಆದರೆ ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಎಷ್ಟರ ಮಟ್ಟಿಗೆ ಹನುಮಂತನ ಪ್ರಭಾವವಿದೆ ಎಂದರೆ 'ರಾಮಾಯಣ' ಎನ್ನುವ ಮಹಾಕಾವ್ಯವನ್ನು ಇನ್ನೊಂದು ಹೆಸರಿನಿಂದ ಕರೆಯಬಹುದಾಗಿದ್ದರೆ ಅದನ್ನು 'ಹನುಮಾಯಣ' ಅಂತ ಕರೆಯಬಹುದು ಎನ್ನುವುದು ದಾರ್ಶನಿಕರ ಮಾತು. ರಾಮಾಯಣದಲ್ಲಿ 'ಸುಂದರಕಾಂಡ’ದಲ್ಲಿ ಆಂಜನೇಯನ ವರ್ಣನೆ ಸುಂದರವಾಗಿ ಮೂಡಿಬಂದಿದೆ. ಹಾಗಾದರೆ ಆಂಜನೇಯ ಯಾರು? ಆತನ ಹುಟ್ಟಿನ ಬಗ್ಗೆ ಈಗ ವಿವಾದ ಎದ್ದಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಆಂಜನೇಯ ಯಾರು?
ಆಂಜನೇಯನ ವರ್ಣನೆ ಮಹಾಭಾರತದಲ್ಲಿ ಬರುತ್ತದೆ. ಆತ ದೈವಸ್ವರೂಪಿ, ಈಶ್ವರನ ಅಂಶ ಅಂತ ಪುರಾಣಗಳು ಹೇಳುತ್ತವೆ. ವಾಯು ಹಾಗೂ ಅಂಜನಾದೇವಿಯರ ಪುತ್ರನೇ ಆಂಜನೇಯ. ಮಹಾನ್ ಶಕ್ತಿಶಾಲಿ, ಮಹಾನ್ ಪರಾಕ್ರಮಿ, ನಿಜಕ್ಕೂ ಆಧುನಿಕ ಕಾಮಿಕ್ ಬುಕ್‌ಗಳಲ್ಲಿ ಬರುವ ಸೂಪರ್ ಮ್ಯಾನ್‌ಗಳಂತೇ ಸೂಪರ್ ಪವರ್ ಇರುವಂತವನು.
ಹನುಮನ ಶಕ್ತಿ, ಸಾಮರ್ಥ್ಯ, ರಾಮನ ಮೇಲಿನ ಭಕ್ತಿ ಎಲ್ಲವೂ ನಿಮಗೆ ಗೊತ್ತೇ ಇದೆ. ಆಂಜನೇಯ ಚಿರಂಜೀವಿಯಾಗಿದ್ದು, ಈಗಲೂ ಹಿಮಾಲಯದಲ್ಲಿ ತಪ್ಪಸ್ಸು ಮಾಡುತ್ತಿದ್ದಾನೆ ಎನ್ನುವುದು ನಂಬಿಕೆ.
ಹನುಮನ ಜನ್ಮಸ್ಥಳ ಯಾವುದು?
ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎನ್ನುವುದರಲ್ಲಿ ಯಾರಿಗೂ ವಿರೋಧವಿಲ್ಲ. ಕಿಷ್ಕಿಂದೆಯ ರಾಜ ಸುಗ್ರೀವನ ಮಂತ್ರಿಯಾಗಿದ್ದು ಇದೇ ಹನುಮಂತ. ಕಿಷ್ಕಿಂದೆಯಲ್ಲೇ ಇರುವ ಅಂಜನಾದ್ರಿ ಬೆಟ್ಟದಲ್ಲೇ ಹನುಮ ಹುಟ್ಟಿದ್ದು, ಬೆಳೆದಿದ್ದು ಎನ್ನುವುದು ಎಲ್ಲರ ನಂಬಿಕೆ. ಅಲ್ಲಿಗೆ ಅಂಜನಾದ್ರಿ ಆಂಜನೇಯನ ಜನ್ಮಸ್ಥಳ ಎನ್ನುವದರಲ್ಲಿ ಯಾರಿಗೂ ವಿರೋಧವಿಲ್ಲ. ಆದರೆ ಆ ಅಂಜನಾದ್ರಿ ಬೆಟ್ಟ ಎಲ್ಲಿದೆ ಅನ್ನುವ ಕುರಿತೇ ಈಗ ವಿವಾದ ಆಗಿರುವುದು.
ಇದನ್ನೂ ಓದಿ: Jamia Masjid Controversy: ಶ್ರೀರಂಗಪಟ್ಟಣದಲ್ಲಿರೋದು ಮಂದಿರವೋ, ಮಸೀದಿಯೋ? ಐತಿಹಾಸಿಕ ಸ್ಥಳ ಈಗ ವಿವಾದಿತ ಪ್ರದೇಶವಾಗಿದ್ದೇಕೆ?
ತಿರುಪತಿಯಲ್ಲೇ ಹುಟ್ಟಿದ್ದು ಎನ್ನುವುದು ಟಿಟಿಡಿ ವಾದ
ಕಳೆದ ವರ್ಷವೇ ಆಂಜನೇಯನ ಜನ್ಮಸ್ಥಳದ ಬಗ್ಗೆ ಟಿಟಿಡಿ ಅಥವಾ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಕ್ಯಾತೆ ತೆಗೆದಿದೆ. ತಿರುಪತಿಯ ಆಂಜನಾದ್ರಿಯಲ್ಲೇ ಆಂಜನೇಯನ ಜನ್ಮವಾಗಿದ್ದು ಅಂತ ಹೇಳುತ್ತಿದೆ. ಶ್ರೀರಾಮನವಮಿಯಂದೇ ಘೋಷಣೆ ಮಾಡಿದ್ದು, ಅದಕ್ಕಾಗಿ ಅಭಿವೃದ್ಧಿ ಕಾರ್ಯಕ್ಕೂ ಮುಂದಾಗಿತ್ತು. ಇದೇ ಈಗ ವಿವಾದಕ್ಕೆ ಕಾರಣವಾಗಿದೆ. ಟಿಟಿಡಿ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ.
ಟಿಟಿಡಿ ಮಾಡುತ್ತಿರುವ ವಾದಗಳೇನು?
ತಜ್ಞರ ಸಮಿತಿ ನೇಮಿಸಿದ್ದು, ಅದರ ವರದಿಯ ಆಧಾರದ ಮೇಲೆ ತಿರುಪತಿಯೇ ಆಂಜನೇಯನ ಜನ್ಮಸ್ಥಾನ ಅಂತ ಟಿಟಿಡಿ ವಾದಿಸುತ್ತಿದೆ. ಇನ್ನು ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಸಮಿತಿಯ ಸದಸ್ಯರಲ್ಲೊಬ್ಬರಾದ ಪ್ರೊ.ಮುರಳೀಧರ ಶರ್ಮಾ ಅವರು ಪೌರಾಣಿಕ, ಶಿಲಾಶಾಸನ, ವೈಜ್ಞಾನಿಕ, ಸಾಹಿತ್ಯ ಮತ್ತು ಭೂವೈಜ್ಞಾನಿಕ ಪುರಾವೆಗಳನ್ನು ಮಾಧ್ಯಮಗಳ ಮುಂದೆ ಮಂಡಿಸಿ, ಅಂಜನೇಯ ಸ್ವಾಮಿಯ ಜನ್ಮಸ್ಥಳ ಅಂಜನಾದ್ರಿ ಎಂದು ಹೇಳಿದ್ದಾರೆ.
ಪುರಾಣಗಳಲ್ಲಿ ಉಲ್ಲೇಖ
ವಾಲ್ಮೀಕಿ ರಾಮಾಯಣದಲ್ಲಿ, 35 ನೇ ಸರ್ಗದ 81-83 ರವರೆಗಿನ ಶ್ಲೋಕಗಳಲ್ಲಿ ಸುಂದರಕಾಂಡ ಪ್ರಸಂಗದಿಂದ, ಹನುಮಂತನು ತಪಸ್ಸಿನ ನಂತರ ಈ ಪವಿತ್ರ ಪರ್ವತಗಳ ಮೇಲೆ ಅಂಜನಾದೇವಿಗೆ ಜನಿಸಿದನೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅವರು ಆಂಜನೇಯ ಎಂಬ ಹೆಸರನ್ನು ಪಡೆದರು ಮತ್ತು ಬೆಟ್ಟಕ್ಕೆ "ಅಂಜನಾದ್ರಿ" ಎಂಬ ಹೆಸರು ಬಂದಿತು.
ಶಿಲಾಶಾಸನಗಳಲ್ಲೂ ಈ ಬಗ್ಗೆ ಉಲ್ಲೇಖ
1491 ಮತ್ತು 1545 ರ ಶ್ರೀವಾರಿ ದೇವಸ್ಥಾನದಲ್ಲಿನ ಶಿಲಾ ಶಾಸನಗಳು, ಎರಡೂ ಅಂಜನಾದ್ರಿಯನ್ನು ಆಂಜನೇಯನ ಜನ್ಮಸ್ಥಳವೆಂದು ಉಲ್ಲೇಖಿಸುತ್ತವೆ. ಲಂಡನ್ ಲೈಬ್ರರಿಯಲ್ಲಿ ಲಭ್ಯವಿರುವ ‘ಅಂಜನಾದ್ರಿ ಮಹಾತ್ಯಂ’ ಎಂಬ ಪುಸ್ತಕವು ಅಂಜನಾದ್ರಿಯನ್ನು ಹನುಮಂತನ ಜನ್ಮಸ್ಥಳ ಎಂದು ಸ್ಪಷ್ಟವಾಗಿ ವಿವರಿಸುತ್ತದೆ.
ಈ ಎಲ್ಲಾ ದಾಖಲೆಗಳನ್ನು ಮುಂದಿಟ್ಟಿರುವ ಟಿಟಿಡಿ ಆಂಜನಾದ್ರಿ ಆಂಜನೇಯನ ಜನ್ಮಸ್ಥಳ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಆ ಅಂಜನಾದ್ರಿ ಇರುವುದು ಕರ್ನಾಟಕದಲ್ಲಿ ಅಲ್ಲ, ತಿರುಪತಿ ತಿರುಮಲ ಬೆಟ್ಟದ ಆಕಾಶಗಂಗೆ ಎಂಬ ಸ್ಥಳದಲ್ಲಿ ಅಂತ ವಾದಿಸುತ್ತಿದೆ.
ಇತರ ಪ್ರದೇಶಗಳ ಬಗ್ಗೆಯೂ ಗೊಂದಲ
ಇತಿಹಾಸಕಾರರಲ್ಲಿ ಆಂಜನೇಯನ ಜನ್ಮಸ್ಥಳದ ಬಗ್ಗೆ ಹಲವಾರು ಅನುಮಾನಗಳಿವೆ. ಭಗವಾನ್ ಹನುಮಾನ್ ಜನಿಸಿದ ಇತರ ಐದು ಸ್ಥಳಗಳು ಸೇರಿವೆ. ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಹೆಚ್ಕ್ಯುನಿಂದ 21 ಕಿ.ಮೀ ದೂರದಲ್ಲಿರುವ ಅಂಜನ್ ಗ್ರಾಮ, ಗುಜರಾತ್‌ನ ನವಸಾರಿ ಪ್ರದೇಶದಲ್ಲಿರುವ ಅಂಜನ್ ಪರ್ವತ, ಹರಿಯಾಣದ ಕೈತಾಲ್ ಪ್ರದೇಶ ಹಾಗೂ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರದಿಂದ 7 ಕಿ.ಮೀ. ದೂರದಲ್ಲಿರುವ ಆಂಜನೇರಿ ಪ್ರದೇಶಗಳ ಮೇಲೂ ಸಂದೇಹವಿದೆ.
22 ಪುಟಗಳ ಸಾಕ್ಷಿ ಮುಂದಿಟ್ಟ ಟಿಟಿಡಿ
ಆಂಜನೇಯನ ಜನ್ಮ ಸ್ಥಳದ ಕುರಿತಂತೆ 22 ಪುಟಗಳ ವರದಿಯನ್ನು ಟಿಟಿಡಿ ಮುಂದಿಟ್ಟಿದೆ. ಇತರ ರಾಜ್ಯಗಳಾದ ಕರ್ನಾಟಕ, ಹರಿಯಾಣ, ಜಾರ್ಖಂಡ್ ಮತ್ತು ಮಹಾರಾಷ್ಟ್ರಗಳಲ್ಲಿ ಜನರು ಮಾತ್ರ ಆ ರೀತಿ ನಂಬಿಕೆ ಹೊಂದಿದ್ದಾರೆ. ಆದರೆ ಅದು ಭಗವಾನ್ ಹನುಮಂತನ ಜನ್ಮಸ್ಥಳ ಎಂದು ಸಾಬೀತುಪಡಿಸಲು ಅವರ ಬಳಿ ಯಾವುದೇ ಪುರಾವೆಗಳಿಲ್ಲ. ಆದರೆ ನಮ್ಮ ತಜ್ಞರು ಸಾಕ್ಷಿ ಸಮೇತ ಹೇಳುತ್ತಿದ್ದಾರೆ ಎನ್ನುವುದು ಟಿಟಿಡಿ ವಾದ.
ಟಿಟಿಡಿಗಿದೆಯಾ ಲಾಭ ಮಾಡುವ ಹುನ್ನಾರ?
ಹೀಗೊಂದು ಪ್ರಶ್ನೆಯೂ ಈಗ ಕನ್ನಡಿಗರಲ್ಲಿ ಉದ್ಭವವಾಗಿದೆ. ಮೊದಲೇ ತಿರುಪತಿ ಎನ್ನುವುದು ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕೇಂದ್ರವಾಗಿ ವಿಶ್ವಪ್ರಸಿದ್ಧ. ದೇಶದ ಶ್ರೀಮಂತ ದೇಗುಲಗಳಲ್ಲಿ ತಿರುಪತಿ ಒಂದು. ಅದರೊಂದಿಗೆ ಈಗ ಆಂಜನೇಯನ ಜನ್ಮಸ್ಥಳ ಎನ್ನುವ ಹಿರಿಮೆಯೂ ಸೇರಿದರೆ ತಿರುಪತಿಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತದೆ. ಇದರಿಂದ ತಿರುಪತಿಯ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ಸಹಾಯವಾಗುತ್ತದೆ ಎನ್ನುವುದು ಟಿಟಿಡಿ ಲೆಕ್ಕಾಚಾರ ಅಂತ ಕನ್ನಡಿಗರು ಚರ್ಚೆ ಮಾಡ್ತಿದ್ದಾರೆ.
ಕನ್ನಡಿಗರ ವಾದವೇನು?
ಕಿಷ್ಕಿಂದೆ ಅಂದರೆ ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಯೇ ಹನುಮನ ಜನ್ಮಸ್ಥಾನ ಎನ್ನುವುದು ಕನ್ನಡಿಗರ ವಾದ. ವಾಲಿ, ಸುಗ್ರೀವ, ಆಂಜನೇಯ ಇವರೆಲ್ಲ ವಾನರ ಸಮುದಾಯದ ವೀರರು, ಕಿಷ್ಕಂಧೆ ವಾನರರ ರಾಜ್ಯ, ಕಿಂಧೆಯಲ್ಲದೇ ಬೇರೆಲ್ಲೂ ವಾನರ ಸಮುದಾಯವಿದ್ದಿಲ್ಲ. ಹಾಗಾಗಿ ವಾನರ ವೀರನಾದ ಹನುಮಂತನು ಹುಟ್ಟಿದ್ದು, ಬೆಳೆದದ್ದು ಕಿಕ್ಕಿಂಧೆಯ ಭಾಗವಾದ ಅಂಜನಾದ್ರಿಯಲ್ಲಿ. ವೆಂಕಟಾಚಲಂ ಕಿಂಧೆಯ ಭಾಗವಾಗಿರಲಿಲ್ಲ. ಹಾಗಾಗಿ ಅಲ್ಲಿ ಹನುಮನ ಜನನವಾಯಿತೆಂಬುದು ಹಾಸ್ಯಾಸ್ಪದವೆನಿಸುತ್ತದೆ ಅಂತಿದ್ದಾರೆ ಕನ್ನಡಿಗರು.
ಪುರಾತತ್ವ ಇಲಾಖೆಯಿಂದಲೂ ದಾಖಲೆ
1961ರಲ್ಲಿ ಕರ್ನಾಟಕದ ಖ್ಯಾತ ಪುರಾತತ್ವ ಶಾಸ್ತ್ರಜ್ಞರಾದ ಡಾ.ಅ. ಸುಂದರ ಅವರು ಹಂಪಿ-ಆನೆಗೊಂದಿ ಪ್ರದೇಶದಲ್ಲಿ ಅಧ್ಯಯನ ನಡೆಸಿ ಈ ಭಾಗವೇ ರಾಮಾಯಣ ಕಾಲದ ಕಿಷಿಂಧೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಂಪಾ ಇಂದಿನ ಹಂಪಿಯಾಗಿದೆ ಎಂದಿದ್ದಾರೆ.
ಹಂಪಿ-ಆನೆಗೊಂದಿ ಪ್ರದೇಶವು ಬಹಳ ಪ್ರಾಚೀನ ಕಾಲದಿಂದಲೂ ಕಿಷ್ಕ್ರಿಂಧೆ ಎಂದೇ ಹೆಸರುವಾಸಿಯಾಗಿದೆ. ಅದರಲ್ಲಿ ಪಂಪಾ ಕ್ಷೇತ್ರವು ಒಂದು ಭಾಗವಾಗಿತ್ತು ಎಂದಿದ್ದಾರೆ. ಹೆಸರಾಂತ ಅಮೇರಿಕನ್ ವಿದ್ವಾಂಸ ಮತ್ತು ಭಾರತಶಾಸ್ತ್ರಜ್ಞ ಫಿಲಿಪ್ಸ್ ಲುಟ್‌ಗೆಂಡಾರ್ಫ್ ಅವರು ತಮ್ಮ “ಹನುಮಾನ್ಸ್ ಟೈಲ್” ಪುಸ್ತಕದಲ್ಲಿ ಹನುಮಾನ್ ಇಲ್ಲಿ ಜನಿಸಿದರು ಎಂದು ತೀರ್ಮಾನಿಸಿದ್ದಾರೆ ಎನ್ನುವುದೂ ಇಲ್ಲಿ ಮಹತ್ವ ಪಡೆದಿದೆ.
ಹಂಪಿ ಅಭಿವೃದ್ಧಿಗೆ ಮುಂದಾದ ಸರ್ಕಾರ
ಅತ್ತ ತಿರುಪತಿಯಲ್ಲಿ ಆಂಜನೇಯ ಜನ್ಮಸ್ಥಳವಿದೆ ಎಂದು ಟಿಟಿಡಿ ಅಭಿವೃದ್ಧಿಗೆ ಮುಂದಾಗಿತ್ತು. ಆದರೆ ಅಲ್ಲಿನ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ಇತ್ತ ಡಿಟಿಡಿ ವಾದದ ಬಳಿಕ ಎಚ್ಚೆತ್ತಿರುವ ಕರ್ನಾಟಕ ರಾಜ್ಯ ಸರ್ಕಾರ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಾನ ಅಂತ ಅಧಿಕೃತವಾಗಿ ಘೋಷಿಸಲು ಮುಂದಾಗಿದೆ. ಜೊತೆಗೆ ಅಲ್ಲಿನ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ. ‘ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 62 ಎಕರೆ ಜಮೀನು ಬೇಕಿದ್ದು, ಆಂಜನೇಯನ ಮೇಲಿನ ಭಕ್ತಿ, ನಂಬಿಕೆಯಿಂದ ರೈತರು ಜಮೀನು ಕೊಡಲು ಮುಂದಾಗಿದ್ದಾರೆ. 15 ದಿನದೊಳಗೆ ನೀಲನಕ್ಷೆ ಸಿದ್ಧಪಡಿಸಲಾಗುವುದು’ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: Veerendra Heggade: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯಾರು? ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡಿದ್ದು ಯಾಕೆ?
ಒಟ್ಟಾರೆ ಆಂಜನೇಯ ಜನ್ಮ ಸ್ಥಳದ ಕುರಿತಂತೆ ಸದ್ಯ ಕರ್ನಾಟಕ ಹಾಗೂ ಟಿಟಿಡಿ ನಡುವೆ ವಿವಾದವಿದೆ. ಮುಂದೆ ಇದು ಹೇಗೆ ಬಗೆಹರಿಯುತ್ತೋ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ