Basavashree Award: ಮುರುಘಾ ಮಠದಿಂದ ಕೊಡಲ್ಪಡುತ್ತಿದ್ದ ಬಸವಶ್ರೀ ಪ್ರಶಸ್ತಿಯ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಮುರುಘಾ ಮಠದಿಂದ ಕೊಡಲ್ಪಟ್ಟಿದ್ದ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಬಸವಶ್ರೀ ಪ್ರಶಸ್ತಿಯನ್ನು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಬಸವಶ್ರೀ ಪ್ರಶಸ್ತಿ ಬಗ್ಗೆಯೂ ಚರ್ಚೆ ಶುರುವಾಗಿದೆ. ಹಾಗಿದ್ರೆ ಏನಿದು ಬಸವಶ್ರೀ ಪ್ರಶಸ್ತಿ? ಇದರ ಮಹತ್ವ, ಮೌಲ್ಯಗಳೇನು? ಈವರೆಗೆ ಬಸವಶ್ರೀ ಪ್ರಶಸ್ತಿ ಪಡೆದವರು ಯಾರು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಮುರುಘಾ ಮಠದ ಬಸವಶ್ರೀ ಪ್ರಶಸ್ತಿ ವಾಪಸ್ ಮಾಡಿದ ಸಾಯಿನಾಥ್

ಮುರುಘಾ ಮಠದ ಬಸವಶ್ರೀ ಪ್ರಶಸ್ತಿ ವಾಪಸ್ ಮಾಡಿದ ಸಾಯಿನಾಥ್

  • Share this:
ಸಮಾಜ ಸೇವೆ, ಅನ್ನದಾಸೋಹ, ಶಿಕ್ಷಣ, ವೈಚಾರಿಕತೆ, ಸಾಂಸ್ಕೃತಿಕ ಕಾರ್ಯಕ್ರಮ, ಬಸವ ತತ್ವ ಪ್ರಸಾರ ಸೇರಿದಂತೆ ಹತ್ತು ಹಲವು ಅತ್ಯುತ್ತಮ ಕಾರ್ಯಗಳಿಂದ ಸದಾ ಸುದ್ದಿಯಲ್ಲಿ ಇರುತ್ತಿದ್ದ ಚಿತ್ರದುರ್ಗದ (Chitradurga) ಬೃಹನ್ ಮುರುಘಾ ಮಠ (Bruhan Murugha Math) ಈಗ ವಿವಾದದಿಂದಾಗಿ (Controversy), ಗಂಭೀರ ಆರೋಪದಿಂದಾಗಿ, ಸ್ವಾಮೀಜಿ (Swamiji) ಮೇಲೆ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳಿಂದಾಗಿ ಸುದ್ದಿಯಲ್ಲಿದೆ. ಮುರುಘಾ ಮಠಾಧೀಶ ಡಾ. ಶಿವಮೂರ್ತಿ ಸ್ವಾಮಿ (Dr. Shivamurthy Swami) ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದ್ದು, ಪೋಕ್ಸೋ ಕಾಯ್ದೆಯಡಿ (POCSO Act) ಬಂಧಿತರಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಮುರುಘಾ ಮಠದಿಂದ ಕೊಡಲ್ಪಟ್ಟಿದ್ದ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ (Award) ಒಂದಾದ ಬಸವಶ್ರೀ ಪ್ರಶಸ್ತಿಯನ್ನು (Basavashree Award) ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ (P. Sainath) ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಬಸವಶ್ರೀ ಪ್ರಶಸ್ತಿ ಬಗ್ಗೆಯೂ ಚರ್ಚೆ ಶುರುವಾಗಿದೆ. ಹಾಗಿದ್ರೆ ಏನಿದು ಬಸವಶ್ರೀ ಪ್ರಶಸ್ತಿ? ಇದರ ಮಹತ್ವ, ಮೌಲ್ಯಗಳೇನು? ಈವರೆಗೆ ಬಸವಶ್ರೀ ಪ್ರಶಸ್ತಿ ಪಡೆದವರು ಯಾರು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

 ಏನಿದು ಬಸವಶ್ರೀ ಪ್ರಶಸ್ತಿ?

 ಮಹಾನ್ ವ್ಯಕ್ತಿ, ಕಾಯಕಯೋಗಿ, ಸಮಾಜಸುಧಾರಕ ಬಸವಣ್ಣನವನ ಹೆಸರಿನಲ್ಲಿ ಕೊಡಲ್ಪಡುವ ಪ್ರತಿಷ್ಠಿತ ಪ್ರಶಸ್ತಿಯೇ ಬಸವಶ್ರೀ ಪ್ರಶಸ್ತಿ. ಬಸವೇಶ್ವರರ ತತ್ವಾದರ್ಶಗಳನ್ನು ಅನುಸರಿಸುವ ಮೂಲಕ ಆಯಾ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಜನರನ್ನು ಈ ಪ್ರಶಸ್ತಿಯು ಗೌರವಿಸುತ್ತದೆ. ಇದು ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದ ಪ್ರತಿಷ್ಠಿತ ಖಾಸಗಿ ಪ್ರಶಸ್ತಿಗಳಲ್ಲಿ ಒಂದು ಎಂಬ ಖ್ಯಾತಿ ಗಳಿಸಿದೆ.

1997ರಿಂದ ಪ್ರಶಸ್ತಿ ವಿತರಣೆ

ಚಿತ್ರದುರ್ಗದ ಬೃಹನ್ ಮುರುಘಾ ಮಠದಿಂದ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದನ್ನು 1997 ರಿಂದ ಕೊಡಲಾಗುತ್ತಿದೆ. ಈ ಪ್ರತಿಷ್ಠಿತ ಪ್ರಶಸ್ತಿಯು  5 ಲಕ್ಷ ರೂಪಾಯಿ ನಗದು ಹಣ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: POCSO Act: ಪೋಕ್ಸೋ ಕಾಯ್ದೆ ಎಷ್ಟು ಕಠಿಣವಾಗಿದೆ? ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯೇನು?

ಯಾರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ?

ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ, ಮುರುಘಾ ಮಠದಿಂದಲೇ ಬಸವಶ್ರೀ ಪ್ರಶಸ್ತಿ ನೀಡಲಾಗುತ್ತದೆ. ಸಮಾಜಸೇವೆ, ಶಿಕ್ಷಣ, ಆರೋಗ್ಯ, ಸಿನಿಮಾ, ಸಂಗೀತ, ಹಿನ್ನೆಲೆ ಗಾಯನ, ವೈದ್ಯಕೀಯ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗುತ್ತದೆ.

ಈವರೆಗೆ ಪ್ರಶಸ್ತಿ ಪಡೆದ ಸಾಧಕರು ಯಾರು?

1997 ಶ್ರೀ ಬೆಲ್ದಾಳ ಶರಣರು, 1998 ಹಿರೇಮಲ್ಲೂರ ಈಶ್ವರನ್, 1999 ಡಾ.ಎಚ್.ಸುದರ್ಶನ, 2000 ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, 2001 ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್, 2002ರಲ್ಲಿ ಬೌದ್ಧ ಧರ್ಮಗುರು ದಲಾಯಿ ಲಾಮಾ, 2003 ಕ್ರಾಂತಿಕವಿ ಗದ್ದರ್, 2004 ಡಾ.ವಂದನಾ ಶಿವ, 2005 ಕೃಷಿ ತಜ್ಞ ಸುಭಾಷ ಪಾಳೇಕಾರ, 2006 ಬಾಲಿವುಡ್ ನಟಿ ಶಬಾನಾ ಆಜ್ಞೆ, 2007 ಸುಧಾಕರ ಸ್ವಾಮಿ ಅಗ್ನಿವೇಶ, 2008 ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, 2009 ಖ್ಯಾತ ಕ್ರೀಡಾಪಟು ಪಿ.ಟಿ. ಉಷಾ, 2010 ಎ.ಟಿ. ಆರ್ಯರತ್ನ, 2011 ಪ್ರೊ.ಎಂ.ಡಿ.ನಂಜುಂಡಸ್ವಾಮಿ, 2012 ಮಾಜಿ ಐಪಿಎಸ್ ಅಧಿಕಾರಿ ಶಂಕರ ಬಿದರಿ, 2013 ಇನ್ಫೋಸಿಸ್ ನಾರಾಯಣಮೂರ್ತಿ, 2014 ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯುಸೂಫ್ ಝೈ, 2015 ಖ್ಯಾತ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, ಎಂಎಂ ಕಲಬುರ್ಗಿ, 2016 ಖ್ಯಾತ ಪತ್ರಕರ್ತ ಪಿ.ಸಾಯಿನಾಥ, 2017 ಕಾಮೇಗೌಡ, 2018 ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ್, 2019ರ ಸಾಲಿನಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020ರ ಸಾಲಿನಲ್ಲಿ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್ ಸೇರಿದಂತೆ ಅನೇಕ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಗೌರವ

ಇನ್ನು ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿತ್ತು. ಕಳೆದ ಮೇ ತಿಂಗಳಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದ್ದು, ಪುನೀತ್ ಪರವಾಗಿ ಅವರ ಪತ್ನಿ, ನಿರ್ಮಾಪಕಿ ಅಶ್ವಿನಿ ಅವರು ಪ್ರಶಸ್ತಿ ಸ್ವೀಕರಿಸಿದ್ದರು.

ಪ್ರಶಸ್ತಿ ವಾಪಸ್ ಮಾಡುವುದಾಗಿ ಘೋಷಿಸಿದ ಪಿ. ಸಾಯಿನಾಥ್

ಹಿರಿಯ ಪತ್ರಕರ್ತರಾದ ಪಿ ಸಾಯಿನಾಥ್‌ ಅವರು ಮುರುಘಾ ಮಠ ನೀಡಿದ್ದ ಬಸವಶ್ರೀ ಪ್ರಶಸ್ತಿ ಹಾಗೂ  5 ಲಕ್ಷ ರೂ. ಹಣವನ್ನು ವಾಪಸ್‌ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಸಾಯಿನಾಥ್‌ ಅವರಿಗೆ 2017 ರಲ್ಲಿ ಮುರುಘಾ ಮಠ ಬಸವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಸ್ವಾಮೀಜಿ ಮೇಲಿನ ಆರೋಪದಿಂದ ಮುಜುಗರಕ್ಕೆ ಒಳಗಾಗಿರುವ ಸಾಯಿನಾಥ್, ಪ್ರಶಸ್ತಿ ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: P Sainath: ಮುರುಘಾ ಸ್ವಾಮೀಜಿ ಪ್ರಕರಣದಿಂದ ಮುಜುಗರ, ಪ್ರಶಸ್ತಿ ಹಿಂದಿರುಗಿಸಿದ ಖ್ಯಾತ ಪತ್ರಕರ್ತ ಪಿ ಸಾಯಿನಾಥ್!

ಟ್ವಿಟರ್‌ನಲ್ಲಿ ಸಾಯಿನಾಥ್ ಏನು ಹೇಳಿದ್ದಾರೆ?

ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅವರು, ‘ಚಿತ್ರದುರ್ಗದ ಶ್ರೀ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಕುರಿತ ಮಾಧ್ಯಮ ವರದಿಗಳಿಂದ ನಾನು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು SC/ST ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ‘ ಎಂದು ಬರೆದಿದ್ದಾರೆ. ‘ಶ್ರೀ ಶರಣರನ್ನು ಹೈಸ್ಕೂಲ್ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿದೆ. ಮಕ್ಕಳ ಮೇಲಿನ ಇಂತಹ ಯಾವುದೇ ಅಪರಾಧಗಳನ್ನು ಖಂಡಿಸಲು ಯಾವುದೇ ಬಲವಾದ ಪದಗಳು ಸಿಗುತ್ತಿಲ್ಲ‘ ಎಂದಿದ್ದಾರೆ.
Published by:Annappa Achari
First published: