Explained: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್! ಶುರುವಾಗಿದ್ದು ಹೇಗೆ, ಬಂದು ನಿಂತಿದ್ದೆಲ್ಲಿಗೆ?

ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ಟ್ವಿಟ್ ವಾರ್ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಿದ್ರೆ ಅಜಯ್‌ ದೇವಗನ್ ಹಾಗೂ ಸುದೀಪ್ ಮಧ್ಯೆ ಸಮರಕ್ಕೆ ಕಾರಣ ಏನು? ಮೊದಲು ವಿವಾದ ಉಂಟಾಗಿದ್ದು ಹೇಗೆ? ವಿವಾದ ಪ್ರಾರಂಭವಾದಾಗಿನಿಂದ ಈವರೆಗೆ ಏನೇನು ಆಗಿದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಸುದೀಪ್-ಅಜಯ್‌ ದೇವಗನ್ ಟ್ವೀಟ್ ವಾರ್ (ಚಿತ್ರಕೃಪೆ: Internet)

ಸುದೀಪ್-ಅಜಯ್‌ ದೇವಗನ್ ಟ್ವೀಟ್ ವಾರ್ (ಚಿತ್ರಕೃಪೆ: Internet)

  • Share this:
ಒಬ್ಬರು ‘ಸ್ಯಾಂಡಲ್‌ವುಡ್‌ನ ಸಿಂಗಂ’ (Sandalwood Singam), ಇನ್ನೊಬ್ಬರು ‘ಬಾಲಿವುಡ್‌ನ ಸಿಂಗಂ’ (Bollywood Singam).. ಈ ಇಬ್ಬರು ‘ಸಿಂಗಂ’ಗಳ ಮಧ್ಯೆ ಇದೀಗ ಟ್ವಿಟರ್‌ನಲ್ಲಿ (Twitter) ದೊಡ್ಡ ವಾರೇ (War) ನಡೆದಿದೆ. ಅದು ‘ಹಿಂದಿ ಭಾಷೆ’ಯ (Hindi Language) ವಿಚಾರಕ್ಕೆ. ಹೌದು ಸ್ಯಾಂಡಲ್‌ವುಡ್ ಸಿಂಗ್‌, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಹಾಗೂ ಬಾಲಿವುಡ್‌ ಸಿಂಗಂ ಅಜಯ್ ದೇವಗನ್‌ (Ajay Devgan) ನಡುವೆ ‘ಹಿಂದಿ ರಾಷ್ಟ್ರಭಾಷೆ’ (National Language) ಎಂಬ ವಿಚಾರಕ್ಕೆ ಟ್ವಿಟ್ಟರ್‌ನಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಇದಕ್ಕೆ ಎರಡೂ ಕಡೆ ಬೆಂಬಲಿಗರು ಭಾರೀ ಕಾಮೆಂಟ್ (Comment) ಮಾಡಿದ್ದಾರೆ. ಇತ್ತ ಕಿಚ್ಚನ ಬೆಂಬಲಕ್ಕೆ ಸೌತ್‌ ಇಂಡಿಯಾ ಸಿನಿಮಾದ (South India Cinema) ಗಣ್ಯರ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ನಟಿ ರಮ್ಯಾ, ಆಶಿಕಾ ರಂಗನಾಥ್, ನಟ ನಿನಾಸಂ ಸತೀಶ್, ಮೇಘನಾ ಗಾಂವ್ಕರ್ ಸೇರಿದಂತೆ ಹಲವರು ನಿಂತಿದ್ದಾರೆ. ಈ ಟ್ವಿಟ್ ವಾರ್ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಿದ್ರೆ ಅಜಯ್‌ ದೇವಗನ್ ಹಾಗೂ ಸುದೀಪ್ ಮಧ್ಯೆ ಸಮರಕ್ಕೆ ಕಾರಣ ಏನು? ಮೊದಲು ವಿವಾದ ಉಂಟಾಗಿದ್ದು ಹೇಗೆ? ವಿವಾದ ಪ್ರಾರಂಭವಾದಾಗಿನಿಂದ ಈವರೆಗೆ ಏನೇನು ಆಗಿದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಅಜಯ್‌ ದೇವಗನ್, ಕಿಚ್ಚ ಸುದೀಪ್ ‘ಹಿಂದಿ’ ವಾರ್!

ಇತ್ತೀಚಿಗೆ ಸ್ಯಾಂಡಲ್​ ವುಡ್ ನಟ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಹಿಂದಿ ಭಾಷೆಯ ಬಗ್ಗೆ ಮಾತನಾಡಿದ್ದರು. ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ರಾಷ್ಟ್ರೀಯ ಭಾಷೆಯಾಗಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಇದೇ ವಿಚಾರಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವಿಟರ್‌ನಲ್ಲಿ ಪ್ರತ್ರಿಕ್ರಿಯೆ ನೀಡಿದ್ದರು. ಇದಕ್ಕೆ ಮತ್ತೆ ಕಿಚ್ಚ ಸುದೀಪ್ ರೀ ಟ್ವೀಟ್ ಮಾಡಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್ ಆಗಿದೆ. ಹಿಂದಿ ಪರ-ವಿರೋಧದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

ಹಿಂದಿ ಭಾಷೆ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್, ಹಿಂದಿ ರಾಷ್ಟ್ರಭಾಷೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದರು. ಕೆಜಿಎಫ್‌ ಚಾಪ್ಟರ್ 2 ಸಿನಿಮಾದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದ ಕಿಚ್ಚ, “ಕನ್ನಡ ಸಿನಿಮಾ ಹಾಗೂ ಸೌತ್ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಹಿಟ್ ಆಗುತ್ತಿದೆ. ಆದರೆ ಹಿಂದಿ ಸಿನಿಮಾಗಳು ಸೌತ್‌ನಲ್ಲಿ ಯಶಸ್ಸು ಪಡೆಯಲು ಹೆಣಗಾಡುತ್ತಿವೆ. ಸೌತ್‌ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿವೆ, ಆದರೆ ಹಿಂದಿ ಸಿನಿಮಾಗಳು ತಮಿಳು, ತೆಲುಗಿನಲ್ಲಿ ಡಬ್‌ ಆಗುತ್ತಿದೆ. ಹೀಗಾಗಿ ಹಿಂದಿ ಇನ್ನು ಮುಂದೆ ರಾಷ್ಟ್ರಭಾಷೆಯಲ್ಲ” ಅಂತ ಹೇಳಿದ್ದರು.

ಇದನ್ನೂ ಓದಿ: Kiccha Sudeep Tweet: ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದ ಕಿಚ್ಚನ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಏನಿದು ಹೊಸ ವಿವಾದ?

 ಕಿಚ್ಚನ ಹೇಳಿಕೆಗೆ ಅಜಯ್ ದೇವಗನ್ ಪ್ರತಿಕ್ರಿಯೆ

ಸುದೀಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟ ಅಜಯ್ ದೇವಗನ್, “ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವೇ? ಅಲ್ಲ ಎಂದಾದರೆ ನೀವು ನಿಮ್ಮ ಮಾತೃಭಾಷೆಯ ಚಲನಚಿತ್ರಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡಿ, ಬಿಡುಗಡೆ ಮಾಡುತ್ತೀರಿ? ಅಂತ ಪ್ರಶ್ನಿಸಿದ್ದರು. ಅಲ್ಲದೇ, “ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರೀಯ ಭಾಷೆಯಾಗಿತ್ತು, ಮತ್ತು ಯಾವಾಗಲೂ ಅದು ರಾಷ್ಟ್ರ ಭಾಷೆಯಾಗಿಯೇ ಇರುತ್ತದೆ. ಜನ ಗಣ ಮನ…” ಅಂತ ಟ್ವೀಟ್ ಮಾಡಿದ್ದರು.



ಅಜಯ್‌ ದೇವಗನ್ ಟ್ವೀಟ್‌ಗೆ ಸುದೀಪ ಪ್ರತಿಕ್ರಿಯೆ

ಇನ್ನು ಅಜಯ್ ದೇವಗನ್ ಟ್ವೀಟ್‌ಗೆ ಕಿಚ್ಚ ಸುದೀಪ್ ಉತ್ತರಿಸಿದ್ದರು. “ನಾನು ಯಾವ ಸಂದರ್ಭದಲ್ಲಿ, ಯಾವ ಅರ್ಥದಲ್ಲಿ ಹೇಳಿದ್ದೇನೆ ಎನ್ನುವುದರ ಬಗ್ಗೆ ನೀವು ಅಪಾರ್ಥ ಮಾಡಿಕೊಂಡಿದ್ದೀರಿ. ಯಾವುದೇ ವಿವಾದ, ಚರ್ಚೆ ಹುಟ್ಟು ಹಾಕುವ, ನೋಯಿಸುವ ಉದ್ದೇಶ ನನಗಿಲ್ಲ. ಆದಷ್ಟು ಬೇಗ ನಿಮ್ಮನ್ನು ಭೇಟಿ ಆಗಿ ಈ ವಿಚಾರವನ್ನು ಸ್ಪಷ್ಟಪಡಿಸುವೆ ಎಂದು ಟ್ವೀಟ್​ ಮಾಡಿದ್ರು.

“ನಾವು ಎಲ್ಲ ಭಾಷೆಯನ್ನು ಗೌರವಿಸುತ್ತೇವೆ, ಪ್ರೀತಿಸುತ್ತೇವೆ”

ಇನ್ನೊಂದು ಟ್ವೀಟ್ ಮಾಡಿದ ಸುದೀಪ್, “ಅಜಯ್ ದೇವಗನ್ ಸರ್, ನೀವು ಹಿಂದಿಯಲ್ಲಿ ಕಳುಹಿಸಿದ ಟೆಕ್ಸ್ಟ್ ನನಗೆ ಅರ್ಥವಾಯಿತು. ಆದರೆ ನಾನು ಕನ್ನಡದಲ್ಲಿ ಟೈಪ್ ಮಾಡಿದ್ದರೆ ನಿಮಗೆ ಅರ್ಥವಾಗುತ್ತಿತ್ತೇ? ನಾವು ಹಿಂದಿ ಕಲಿತಿದ್ದೇವೆ ಮತ್ತು ನಾವು ಎಲ್ಲಾ ಭಾಷೆಯನ್ನೂ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್? ನಾನು ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ. ಶೀಘ್ರವೇ ನಿಮ್ಮನ್ನು ಭೇಟಿಯಾದಾಗ ಈ ಬಗ್ಗೆ ಮಾತನಾಡೋಣ” ಅಂತ ಹೇಳಿದ್ರು.

ಕೊನೆಗೂ ಮೆತ್ತಗಾದ ಅಜಯ್ ದೇವಗನ್!

ಕಿಚ್ಚ ಸುದೀಪ್ ಇಷ್ಟು ವಿವರಣೆ ನೀಡಿದ ಬಳಿಕ ಅಜಯ್ ದೇವಗನ್ ಮೆತ್ತಗಾದಂತೆ ಕಂಡರು. ಬಳಿಕ ಸುದೀಪ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಜಯ್ ದೇವಗನ್, ನೀವು ನನ್ನ ಸ್ನೇಹಿತ, ಈ ವಿಚಾರವನ್ನು ಇಲ್ಲಿಗೆ ಬಿಟ್ಟಿದ್ದಕ್ಕೆ ಧನ್ಯವಾದಗಳು. ತಪ್ಪು ತಿಳುವಳಿಕೆಯಿಂದ ಹೀಗಾಯ್ತು. ಚಿತ್ರರಂಗ ಒಂದಾಗಬೇಕು, ನಾವು ಎಲ್ಲರನ್ನೂ ಗೌರವಿಸುತ್ತೇವೆ” ಅಂತ ವಿವಾದಕ್ಕೆ ಇತಿಶ್ರೀ ಹಾಡಿದ್ರು.

ಕಿಚ್ಟನ ಬೆನ್ನಿಗೆ ನಿಂತ ಕನ್ನಡಿಗರು, ಗಣ್ಯರು

ಕಿಚ್ಚ ಸುದೀಪ್‌ ಟ್ವೀಟ್‌ಗೆ ಕನ್ನಡ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಜನಸಾಮಾನ್ಯರು ಬೆಂಬಲ ಸೂಚಿಸಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ, ನಟಿ ರಮ್ಯಾ, ಆಶಿಕಾ ರಂಗನಾಥ್, ಮೇಘನಾ ಗಾಂವ್ಕರ್, ನಟ ನಿನಾಸಂ ಸತೀಶ್ ಸೇರಿದಂತೆ ಹಲವರು ಕಿಚ್ಚನ ಟ್ವೀಟ್‌ಗೆ ರೀಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ರು.

“ಹಿಂದಿ ಎಂದಿಗೂ ರಾಷ್ಟ್ರಭಾಷೆಯಲ್ಲ” ಎಂದ ಸಿದ್ದರಾಮಯ್ಯ

 ಸುದೀಪ್ ಹಾಗೂ ಅಜಯ್ ದೇವಗನ್ ಟ್ವೀಟ್‌ ವಾರ್‌ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ಹಿಂದಿ ಎಂದಿಗೂ ಮತ್ತು ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ. ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಯು ಅದರ ಜನರು ಹೆಮ್ಮೆಪಡಲು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ನಾನು ಕನ್ನಡಿಗ ಎಂದು ಹೆಮ್ಮೆಪಡುತ್ತೇನೆ" ಎಂದು ಟ್ವೀಟ್ ಮಾಡಿದ್ದರು.

“ನಮ್ಮ ಸಿನಿಮಾಗಳನ್ನೂ ನೀವು ನೋಡಿ” ಎಂದ ರಮ್ಯಾ

ಇನ್ನು ನಟಿ ರಮ್ಯಾ ದಿವ್ಯಸ್ಪಂದನ ಮಾತನಾಡಿ, “ಇಲ್ಲ, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ಅಜ್ಞಾನ ನನಗೆ ವಿಸ್ಮಯ ಮೂಡಿಸಿದೆ. ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಆರ್‌ನಂತಹ ಚಲನಚಿತ್ರಗಳು ಹಿಂದಿಯಲ್ಲೂ ಯಶಸ್ವಿಯಾಗಿದೆ. ಕಲೆಗೆ ಯಾವುದೇ ಭಾಷೆಯ ತಡೆ ಇಲ್ಲ. ನಿಮ್ಮ ಚಲನಚಿತ್ರಗಳನ್ನು ನಾವು ಆನಂದಿಸಿದಂತೆ ದಯವಿಟ್ಟು ನಮ್ಮ ಚಲನಚಿತ್ರಗಳನ್ನು ಆನಂದಿಸಿ, ಹಿಂದಿ ಹೇರಿಕೆ ನಿಲ್ಲಲಿ” ಅಂತ ಖಾರವಾಗಿ ಟ್ವೀಟ್ ಮಾಡಿದ್ದಾರೆ.



ಅಜಯ್‌ ದೇವಗನ್ ವಿರುದ್ಧ ಕನ್ನಡಿಗರ ಆಕ್ರೋಶ

ಬಾಲಿವುಡ್​ ನಟನ ಈ ಮಾತಿಗೆ ಅನೇಕ ಕನ್ನಡಿಗರು ಕೂಡ ಸಿಡಿದೆದ್ದಿದ್ದಾರೆ. “ಹಿಂದಿ ರಾಜ್ಯಗಳ ಜನರು ಇಲ್ಲಿ ಕೆಲಸ ಅರಸಿ ಬರುತ್ತಾರೆ. ನಾವು ಎಂದಿಗೂ ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಅವರ ಮೇಲೆ ಹೇರುವುದಿಲ್ಲ. ಅವರ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿ ರಾಜ್ಯಗಳ ಈ ಜನರು ನಾವು ಅವರ ಭಾಷೆಯಲ್ಲಿ ಮಾತನಾಡಬೇಕೆಂದು ನಿರೀಕ್ಷಿಸುತ್ತಾರೆ. ಅವರು ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಗೌರವಿಸುವುದಿಲ್ಲ” ಅಂತ ಕಿಡಿಕಾರಿದ್ದಾರೆ.

“ಹಿಂದಿಯನ್ನು ರಾಷ್ಟ್ರ ಭಾಷೆ ಅಂತ ಕರೆಯಲು ಆಗುವುದಿಲ್ಲ”

ಮತ್ತೊಬ್ಬರು ಈ ಬಗ್ಗೆ ಕಾಮೆಂಟ್ ಮಾಡಿ, “ಹಿಂದಿ ನಿಮ್ಮ ಮಾತೃಭಾಷೆಯಾಗಿರಬಹುದು ಸರ್. ನಾನು ಅದನ್ನು ಗೌರವಿಸುತ್ತೇನೆ. ಆದರೆ ಪ್ರತಿ ಭಾರತೀಯ ನಾಗರಿಕರ ಭಾಷೆ ಹಿಂದಿ ಅಲ್ಲ. ಹಾಗಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಭಾರತವು ವೈವಿಧ್ಯಮಯ ದೇಶವಾಗಿದ್ದು, ಭಾರತದ ವಿವಿಧ ಭಾಗದಲ್ಲಿ ಮಾತನಾಡುವ ಸಾಕಷ್ಟು ಭಾಷೆಗಳಿವೆ” ಅಂತ ಹೇಳಿದ್ದಾರೆ.

ಇದನ್ನೂ ಓದಿ: Ajay Devgan​ ವಿರುದ್ಧ ಸಿಡಿದೆದ್ದ ಕನ್ನಡಿಗರು; ಬಾಲಿವುಡ್​ ನಟನಿಗೆ ಸಿದ್ದರಾಮಯ್ಯ ತಿರುಗೇಟು

ಟ್ವಿಟರ್‌ನಲ್ಲಿ ಟ್ರೆಂಡ್ ಆದ ಚರ್ಚೆ

ಇನ್ನು ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿಚಾರದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಯಾಯಿತು. ಕೆಲವರು ಅಜಯ್‌ ದೇವಗನ್ ಪರ ನಿಂತರೆ, ಇನ್ನು ಕೆಲವರು ಕಿಚ್ಚ ಸುದೀಪ್ ಪರ ನಿಂತರು. ಹಿಂದಿ ರಾಷ್ಟ್ರಭಾಷೆ ಹೌದು, ಅಲ್ಲವೋ ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದು, ಟ್ವಿಟರ್‌ನಲ್ಲಿ ಅದೇ ಟ್ರೆಂಡ್ ಆಯ್ತು.

ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಗೆ ಈಗಾಗಲೇ 56 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಗಳು ಬಂದಿದ್ದರೆ, 12,300ಕ್ಕಿಂತ ರೀಟ್ವೀಟ್ ಹಾಗೂ19 ಸಾವಿರಕ್ಕಿಂತ ಹೆಚ್ಚು ಕೋಟ್ ಟ್ವೀಟ್ ಗಳಾಗಿವೆ. ಆ ಮೂಲಕ ಸುದೀಪ್ ಅವರೆ ಈವರೆಗಿನ ಅತ್ಯಂತ ಪ್ರಖ್ಯಾತ ಟ್ವೀಟ್ ಇದು ಎನಿಸಿತು.
Published by:Annappa Achari
First published: