ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Delhi DCM Manish Sisodia) ಅವರನ್ನು ಕೇಂದ್ರೀಯ ತನಿಖಾ ದಳ (CBI) ಸುಮಾರು ಎಂಟು ಗಂಟೆಗಳ ವಿಚಾರಣೆಯ ನಂತರ ಈಗ ಹಿಂಪಡೆದಿರುವ ದೆಹಲಿಯ ಮದ್ಯ ನೀತಿಯಲ್ಲಿನ (Excise Policy Scam) ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಿದೆ. ಬೆಗ್ಗೆಯಿಂದಲೇ ಅವರನ್ನು ಕೇಂದ್ರ ಸಂಸ್ಥೆ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಅರೆಸ್ಟ್ ಮಾಡಿದೆ. ಅಬಕಾರಿ ನೀತಿಯ ವಿವಿಧ ಅಂಶಗಳು, ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ದಿನೇಶ್ ಅರೋರಾ (Dinesh Arora) ಮತ್ತು ಇತರ ಆರೋಪಿಗಳ ಜೊತೆಗಿನ ಆಪಾದಿತ ಸಂಬಂಧ ಮತ್ತು ಇತರರ ಪೈಕಿ ಅನೇಕ ಫೋನ್‌ಗಳಿಂದ ಸಂದೇಶ ವಿನಿಮಯದ ವಿವರಗಳ ಬಗ್ಗೆ ಸಿಸೋಡಿಯಾ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಮನೀಶ್ ಸಿಸೋಡಿಯಾ ತನಿಖೆಗೆ ಸಹಕರಿಸಿಲ್ಲ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.
ನಿರ್ಣಾಯಕ ಅಂಶಗಳ ಬಗ್ಗೆ ಅಧಿಕಾರಿಗಳು ಕೇಳಿದ ಸ್ಪಷ್ಟೀಕರಣವನ್ನು ಮನೀಶ್ ಸಿಸೋಡಿಯಾ ನೀಡಿಲ್ಲ. ಮತ್ತು ವ್ಯತಿರಿಕ್ತ ಸಾಕ್ಷ್ಯಗಳನ್ನು ಮುಂದೆಯಿಟ್ಟರೂ ತನಿಖೆಗೆ ಸಹಕರಿಸಲಿಲ್ಲ. ಆದ್ದರಿಂದ ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಸಿಸೋಡಿಯಾ ಬಂಧನ.. ಕೇಂದ್ರದ ವಿರುದ್ಧ ಆಪ್ ಪಕ್ಷದವರ ಆಕ್ರೋಶ
ಸಿಸೋಡಿಯಾ ಬಂಧನದ ನಂತರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು " ಸಿಸೋಡಿಯಾ ನಿರಪರಾಧಿ, ಇದು ಒಂದು ಕೊಳಕು ರಾಜಕೀಯ" ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮನೀಶ್ ಬಂಧನ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ, ಅವರಿಗೆ ಎಲ್ಲವೂ ಅರ್ಥವಾಗುತ್ತಿದೆ. ಇದಕ್ಕೆ ಜನ ಸ್ಪಂದಿಸುತ್ತಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Liquor Policy Case: ಅಬಕಾರಿ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಡಿಸಿಎಂಗೆ ಸಿಬಿಐನಿಂದ ಸಮನ್ಸ್
ಸಿಸೋಡಿಯಾ ಬಂಧನಕ್ಕೆ ಪ್ರತಿಕ್ರಿಯಿಸಿದ, ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಸೌರಭ್ ಭಾರದ್ವಾಜ್, “ಸಿಬಿಐ ಸಂಪೂರ್ಣವಾಗಿ ಕೇಂದ್ರದ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಮನೀಶ್ ಸಿಸೋಡಿಯಾ ಅವರನ್ನು ಬಂಧಿಸುತ್ತಾರೆ ಎಂದು ನಮಗೆ ಮೊದಲೇ ತಿಳಿದಿತ್ತು ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಮನೀಶ್ ಸಿಸೋಡಿಯಾ ಬಂಧನ: ದೆಹಲಿಯ ಆಪಾದಿತ ಮದ್ಯ ಹಗರಣವೇನು?
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಈ ಮಹತ್ವದ ಘಟನೆಗಳು ಜುಲೈ 2022 ರಲ್ಲಿ ಪ್ರಾರಂಭವಾಯಿತು. 2022ರ ಜುಲೈ 22ರಂದು, ಎಲ್‌ಜಿ ವಿಕೆ ಸಕ್ಸೇನಾ ಅವರು ಹೊಸ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಆಪಾದಿತ ನಿಯಮ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ಮದ್ಯದ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡಲಾಗಿದೆ ಎಂದು ದೆಹಲಿಯ ಮುಖ್ಯ ಕಾರ್ಯದರ್ಶಿಯ ವರದಿ ಹೇಳಿತ್ತು. ಆಪಾದಿತ ಅಕ್ರಮಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಎಲ್‌ಜಿ ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು. ಚಿಲ್ಲರೆ ಮದ್ಯದ ಪರವಾನಗಿಗಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 'ಕಾರ್ಟೆಲೈಸೇಶನ್' ಬಗ್ಗೆ ದೂರು ನೀಡಲಾಗಿದೆ.
ಮನೀಶ್ ಸಿಸೋಡಿಯಾ ಬಂಧನ: ಸಿಬಿಐ FIR ಪಟ್ಟಿಯಲ್ಲಿ ಯಾರೆಲ್ಲರ ಹೆಸರಿದೆ?
ದೆಹಲಿಯ ಅಬಕಾರಿ ನೀತಿ 2021-2022ಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಎಫ್‌ಐಆರ್‌ನಲ್ಲಿ 15 ವ್ಯಕ್ತಿಗಳನ್ನು ಹೆಸರನ್ನು ಉಲ್ಲೇಖಿಸಿದ್ದು, ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಸಿಸೋಡಿಯಾ ಹೆಸರು ಕೇಳಿ ಬಂದಿತ್ತು. ಎಲ್-ಜಿ ಕಚೇರಿಯಿಂದ ನೀಡಲಾದ ಜ್ಞಾಪಕ ಪತ್ರದಲ್ಲಿ ಆರೋಪಗಳನ್ನು ಉಲ್ಲೇಖಿಸಿ ಎಫ್‌ಐಆರ್‌ನಲ್ಲಿ ಸಿಸೋಡಿಯಾ ಸೇರಿ ವಿಜಯ್ ನಾಯರ್, ಮನರಂಜನಾ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಮಾಜಿ ಸಿಇಒ, ಓನ್ಲಿ ಮಚ್ ಲೌಡರ್; ಮನೋಜ್ ರೈ, ವೈನ್ ಮತ್ತು ಸ್ಪಿರಿಟ್ಸ್ ದೈತ್ಯ ಪೆರ್ನಾಡ್ ರಿಕಾರ್ಡ್‌ನ ಮಾಜಿ ಉದ್ಯೋಗಿ; ಅಮನ್‌ದೀಪ್ ಧಾಲ್, ಬ್ರಿಂಡ್ಕೊ ಸ್ಪಿರಿಟ್ಸ್‌ನ ಮಾಲೀಕ; ಮತ್ತು ಇಂಡೋಸ್ಪಿರಿಟ್‌ನ ಮಾಲೀಕ ಸಮೀರ್ ಮಹೇಂದ್ರು ಅವರು ಹೆಸರು ಇದೆ. ಆಗಸ್ಟ್ 2022 ರಲ್ಲೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತು.
FIRನಲ್ಲಿ ಸಿಬಿಐ "ಕೆಲವು L-1 ಪರವಾನಗಿ ಹೊಂದಿರುವವರು ಸಾರ್ವಜನಿಕ ಸೇವಕರಿಗೆ ಅನಗತ್ಯ ಹಣದ ಲಾಭವಾಗಿ ಹಣವನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಚಿಲ್ಲರೆ ಮಾರಾಟಗಾರರಿಗೆ ಕ್ರೆಡಿಟ್ ನೋಟ್‌ಗಳನ್ನು ನೀಡುತ್ತಿದ್ದಾರೆ" ಎಂದು ಆರೋಪಿಸಿದೆ.
ಅವ್ಯವಹಾರಕ್ಕೆ ಕಾರಣವಾಗಿತ್ತು ರದ್ದಾದ ಹೊಸ ಅಬಕಾರಿ ನೀತಿ
ಜುಲೈ 31ರಂದು ಹೊಸ ಅಬಕಾರಿ ನೀತಿ ರದ್ದು ಆಮ್ ಆದ್ಮಿ ಪಕ್ಷದ (ಎಎಪಿ) ಮಹತ್ವಾಕಾಂಕ್ಷೆಯ ದೆಹಲಿ ಅಬಕಾರಿ ನೀತಿಯನ್ನು 31 ಜುಲೈ 2022 ರಂದು ರದ್ದುಗೊಳಿಸಲಾಗಿತ್ತು. ಹೊಸ ನೀತಿಯನ್ನು ರದ್ದುಗೊಳಿಸಿದ ನಂತರ, ದೆಹಲಿ ಸರ್ಕಾರವು ನವೆಂಬರ್ 17, 2020 ರ ಮೊದಲು ಜಾರಿಗೆ ತಂದ ಹಳೆಯ ಅಬಕಾರಿ ಆಡಳಿತವನ್ನು ಮರಳಿ ತರಲು ನಿರ್ಧರಿಸಿತ್ತು. ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಈ ನೀತಿಯಲ್ಲಿ ಸಾವಿರಾರು ಕೋಟಿ ರೂ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ. ಇದರಲ್ಲಿ ದಿಲ್ಲಿ ಸರ್ಕಾರದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮಾತ್ರವಲ್ಲದೆ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗಳು ಕೆ ಕವಿತಾ ಮತ್ತು ಅವರ ಆಪ್ತರ ಹೆಸರು ಕೂಡ ಇದೆ.
ಇದನ್ನೂ ಓದಿ: Manish Sisodia Arrest: ದೆಹಲಿ ಡಿಸಿಎಂಗೆ ‘ಮದ್ಯ’ದ ಕುತ್ತು, ಸಿಬಿಐನಿಂದ ಮನೀಶ್ ಸಿಸೋಡಿಯಾ ಅರೆಸ್ಟ್
ಅಬಕಾರಿ ನೀತಿ ಜಾರಿಯಾದ ತಕ್ಷಣ ಇಡಿ ಮತ್ತು ಸಿಬಿಐ ಉಪ ಮುಖ್ಯಮಂತ್ರಿ ಮನೆ ಸೇರಿದಂತೆ ದೇಶದ ವಿವಿಧೆಡೆ ಹಲವು ಬಾರಿ ದಾಳಿ ನಡೆಸಿದ್ದವು.
ನೀತಿಯನ್ನು ಜಾರಿಗೊಳಿಸುವ ಮೊದಲು, ಈ ವರ್ಷದ ಏಪ್ರಿಲ್‌ನಲ್ಲಿ ನೇಮಕಗೊಂಡ ಮುಖ್ಯ ಕಾರ್ಯದರ್ಶಿ ಕುಮಾರ್ ಪ್ರಸ್ತಾವನೆಯನ್ನು ಪರಿಶೀಲಿಸಿ ಹೊಸ ನೀತಿಯಲ್ಲಿ ಕಾರ್ಯವಿಧಾನದ ಲೋಪಗಳು ಮತ್ತು ಅಕ್ರಮಗಳು ಇರುವುದನ್ನು ಹೈಲೈಟ್ ಮಾಡಿದರು.
ಇಒಡಬ್ಲ್ಯೂಗೆ ಮಾಹಿತಿ ನೀಡಿ ತನಿಖೆಗೆ ಸೂಚಿಸಿದ್ದ ಮುಖ್ಯ ಕಾರ್ಯದರ್ಶಿ ಕುಮಾರ್
ಜುಲೈ 8, 2022 ರಂದು, ಕುಮಾರ್ ಅವರು ಅಬಕಾರಿ ಇಲಾಖೆಯ ಮುಖ್ಯಸ್ಥರಾದ ಸಿಸೋಡಿಯಾ ಅವರಿಗೆ ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೇಳುವ ವರದಿಯನ್ನು ಕಳುಹಿಸಿದರು. ವರದಿಯ ಪ್ರತಿಯನ್ನು ಅದೇ ದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಲ್-ಜಿ ಸಕ್ಸೇನಾ ಅವರಿಗೆ ಕಳುಹಿಸಿದರು. ಮದ್ಯದ ವ್ಯಾಪಾರದಲ್ಲಿ ಆಪಾದಿತ ಅಕ್ರಮಗಳು, ಕಾರ್ಟೆಲೈಸೇಶನ್ ಮತ್ತು ಏಕಸ್ವಾಮ್ಯದ ಬಗ್ಗೆ ಮುಖ್ಯ ಕಾರ್ಯದರ್ಶಿ ಕುಮಾರ್ ಇಒಡಬ್ಲ್ಯೂಗೆ ಮಾಹಿತಿ ನೀಡಿದರು ಮತ್ತು ತನಿಖೆಗೆ ಸೂಚಿಸಿದರು.
EOW ತನಿಖೆ ಬಹಿರಂಗಪಡಿಸಿದ್ದೇನು?
ಜುಲೈ 11-12 ರ ರಾತ್ರಿಯ ಸಭೆ ಸೇರಿದಂತೆ ಜುಲೈ 2022 ರಲ್ಲಿ 15 ದಿನಗಳ ಕಾಲ ನಡೆದ ಅಬಕಾರಿ ಇಲಾಖೆಯ ಸಭೆಗಳ ಡಿಜಿಟಲ್ ವೀಡಿಯೊ ರೆಕಾರ್ಡಿಂಗ್‌ಗಳನ್ನು (DVR) EOW ಸಂಗ್ರಹಿಸಿದೆ. ಹೊಸ ಅಬಕಾರಿ ನೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ ಕಂಪನಿಗಳಿಗೆ ಮದ್ಯದ ಪರವಾನಗಿಗಳನ್ನು ಅಕ್ರಮವಾಗಿ ವಿತರಿಸಿದ ಬಗ್ಗೆ ವಿವರಗಳನ್ನು ಕೋರಿ EOW ಅಬಕಾರಿ ಇಲಾಖೆಯ ಸಹಾಯಕ ಆಯುಕ್ತರಿಗೆ ನೋಟಿಸ್ ಕೂಡ ಜಾರಿಗೊಳಿಸಿತು.
ಇದನ್ನೂ ಓದಿ: Manish Sisodia: ದೆಹಲಿ ಅಬಕಾರಿ ನೀತಿ ಪ್ರಕರಣ ಮನೀಶ್ ಸಿಸೋಡಿಯಾ ಮನೆ ಸೇರಿ 21 ಕಡೆ ಸಿಬಿಐ ದಾಳಿ
ಮುಖ್ಯ ಕಾರ್ಯದರ್ಶಿ ಬಿಡುಗಡೆ ಮಾಡಿದ ವರದಿ ಏನು ಹೇಳಿದೆ?
ಎಲ್-ಜಿ ಮತ್ತು ಸಿಎಂಗೆ ಸಲ್ಲಿಸಿದ ವರದಿಯ ಪ್ರಕಾರ, ಸಿಸೋಡಿಯಾ ಅವರು ಎಲ್-ಜಿಯ ಅನುಮೋದನೆಯಿಲ್ಲದೆ ಅಬಕಾರಿ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಈಗಾಗಲೇ ಜಾರಿಗೆ ತಂದಿರುವ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದರೆ, ಅಬಕಾರಿ ಇಲಾಖೆಯು ಅವುಗಳನ್ನು ಸಂಪುಟದ ಮುಂದೆ ಇರಿಸಬೇಕು ಮತ್ತು ಅಂತಿಮ ಅನುಮೋದನೆಗಾಗಿ ಎಲ್-ಜಿಗೆ ರವಾನಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಬಿನೆಟ್ ಮತ್ತು ಎಲ್-ಜಿಯ ಅನುಮೋದನೆಯಿಲ್ಲದೆ ಮಾಡಿದ ಯಾವುದೇ ಬದಲಾವಣೆಗಳು ಕಾನೂನುಬಾಹಿರ ಮತ್ತು ದೆಹಲಿ ಅಬಕಾರಿ ನಿಯಮಗಳು, 2010 ಮತ್ತು ವ್ಯವಹಾರದ ನಿಯಮಗಳು, 1993 ರ ಉಲ್ಲಂಘನೆಯಾಗಿದೆ ಎಂದು ವರದಿ ತಿಳಿಸಿದೆ.
ವಿದೇಶಿ ಮದ್ಯದ ದರಗಳನ್ನು ಪರಿಷ್ಕರಿಸುವ ಮೂಲಕ ಮತ್ತು ಪ್ರತಿ ಬಿಯರ್‌ನ ಆಮದು ಪಾಸ್ ಶುಲ್ಕವನ್ನು 50 ರೂ.ಗಳನ್ನು ತೆಗೆದುಹಾಕುವ ಮೂಲಕ ಸಿಸೋಡಿಯಾ ಮದ್ಯದ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡಿದ್ದಾರೆ ಎಂದು ವರದಿ ಆರೋಪಿಸಿದೆ. ಜೊತೆಗೆ ವಿದೇಶಿ ಮದ್ಯ ಮತ್ತು ಬಿಯರ್ ಚಿಲ್ಲರೆ ವ್ಯಾಪಾರಕ್ಕಾಗಿ ಇದು ಅಗ್ಗವಾಗಿದೆ, ಇದು ರಾಜ್ಯದ ಬೊಕ್ಕಸದ ಕಾರಣವಾಯಿತು ಎಂದು ವರದಿಯು ಗಮನಿಸಿದೆ.
ಸರ್ಕಾರವು ಲೈಸೆನ್ಸ್‌ದಾರರಿಗೆ ರಿಯಾಯಿತಿಗಳನ್ನು ನೀಡಲು ಮತ್ತು ಸರ್ಕಾರವು ನಿಗದಿಪಡಿಸಿದ MRP ಯಲ್ಲಿ ಮಾರಾಟ ಮಾಡುವ ಬದಲು ತಮ್ಮದೇ ಆದ ಬೆಲೆಗಳನ್ನು ನಿಗದಿಪಡಿಸಲು ಅನುವು ಮಾಡಿಕೊಡುವಂತಹ ನಿಯಮಗಳನ್ನು ಸಹ ಹೊಂದಿಕೊಳ್ಳುವಂತೆ ಮಾಡಿದೆ. ಇದರ ನಂತರ, ಮಾರಾಟಗಾರರಿಂದ ರಿಯಾಯಿತಿಗಳನ್ನು ನೀಡಲಾಯಿತು. ಆದರೆ ಪ್ರತಿಪಕ್ಷಗಳ ಪ್ರತಿಭಟನೆಯ ನಂತರ, ಅಬಕಾರಿ ಇಲಾಖೆ ಸ್ವಲ್ಪ ಸಮಯದವರೆಗೆ ರಿಯಾಯಿತಿಯನ್ನು ಹಿಂತೆಗೆದುಕೊಂಡಿತು. ಹೊಸ ಅಬಕಾರಿ ನೀತಿ 2021-22 ಜಾರಿಯಾದ ನಂತರ, ಸರ್ಕಾರದ ಆದಾಯವು 27 ಪ್ರತಿಶತದಷ್ಟು ಹೆಚ್ಚಾಗುವ ಮೂಲಕ ಸುಮಾರು 8,900 ಕೋಟಿ ರೂ. ಲಾಭ ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ