Baby Hill: ಏನಿದು ಬೇಬಿ ಬೆಟ್ಟದ ವಿವಾದ? ಸರ್ಕಾರದ ವಿರುದ್ಧ ರಾಜಮಾತೆ ಮುನಿಸೇಕೆ?

ಟ್ರಯಲ್ ಬ್ಲಾಸ್ಟ್ಗೆ ಖುದ್ದು ಪ್ರಮೋದಾ ದೇವಿ ಒಡೆಯರ್ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಬೇಬಿ ಬೆಟ್ಟದ ವಿಶೇಷತೆ ಏನು? ಇಲ್ಲಿ ಟ್ರಯಲ್ ಬ್ಲಾಸ್ಟ್ಗೆ ರಾಜಮಾತೆ ವಿರೋಧವೇಕೆ? ಸರ್ಕಾರದ ವಿರುದ್ದ ಪ್ರಮೋದಾದೇವಿ ಒಡೆಯರ್ ಮಾಡುತ್ತಿರುವ ಆರೋಪಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ರಾಜಮಾತೆ ವಿರೋಧ

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ರಾಜಮಾತೆ ವಿರೋಧ

  • Share this:
ಮಂಡ್ಯ (Mandya) ಜಿಲ್ಲೆಯ ಪಾಂಡವಪುರ (Pandavapur) ತಾಲೂಕಿನಲ್ಲಿರುವ ಬೇಬಿ ಬೆಟ್ಟ (Baby Betta) ಎಂಬ ವಿಶಿಷ್ಟ ಸ್ಥಳ ಸುದ್ದಿಯಲ್ಲಿದೆ. ಒಂದು ಗಣಿಗಾರಿಕೆ (Mining) ಸಂಬಂಧ ತಜ್ಞರಿಂದ ಅಲ್ಲಿ ಟ್ರಯಲ್ ಬ್ಲಾಸ್ಟ್ (Trial Blast) ನಡೆಸೋದಕ್ಕೆ ಸಿದ್ಧತೆ ನಡೆದಿದ್ದಾಗ ಸುದ್ದಿಯಾಗಿತ್ತು. ಅದರೊಂದಿಗೆ ಆ ಟ್ರಯಲ್ ಬ್ಲಾಸ್ಟ್‌ಗೆ ಮೈಸೂರು ಸಂಸ್ಥಾನದ (Mysore Kingdom) ರಾಜಮಾತೆ ಪ್ರಮೋದಾ ದೇವಿ ಒಡೆಯರ್ (Rajamate Pramodadevi Wodeyar) ವಿರೋಧ ವ್ಯಕ್ತಪಡಿಸಿದ ಮೇಲೆ ಬೇಬಿ ಬೆಟ್ಟದ ವಿಚಾರ ಮತ್ತೆ ಮುನ್ನೆಲೆಗೆ ಬಂತು. ಹೌದು ಬೇಬಿ ಬೆಟ್ಟ (Baby Hill) ಎನ್ನುವುದು  ಸುಮಾರು 1,623 ಎಕರೆಯಷ್ಟು ವಿಸ್ತಾರಕ್ಕೆ ಹರಡಿರುವ ಗುಡ್ಡಗಾಡು ಪ್ರದೇಶ. ಇಲ್ಲಿ ಅತ್ಯಮೂಲ್ಯ ಸಸ್ಯಸಂಪತ್ತು, ಕಲ್ಲುಬಂಡೆಗಳ ರಾಶಿ, ಕೆಲ ಅಪರೂಪದ ಜೀವ ಸಂಪತ್ತು ಇತ್ತು. ಆದರೂ ಇಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಇದೀಗ ಗಣಿಗಾರಿಕೆಗೆ ಬ್ರೇಕ್ ಬಿದ್ದಿದ್ದು, ಮತ್ತೆ ಗಣಿಗಾರಿಕೆ ಪ್ರಾರಂಭಿಸಲು ಅವಕಾಶ ನೀಡುವಂತೆ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿ, ತಜ್ಞರಿಂದ ವರದಿ ಪಡೆಯಲು ಸರ್ಕಾರ ಯೋಜನೆ ರೂಪಿಸಿತ್ತು. ಈ ಟ್ರಯಲ್ ಬ್ಲಾಸ್ಟ್‌ಗೆ ಖುದ್ದು ಪ್ರಮೋದಾ ದೇವಿ ಒಡೆಯರ್ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಬೇಬಿ ಬೆಟ್ಟದ ವಿಶೇಷತೆ ಏನು? ಇಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ರಾಜಮಾತೆ ವಿರೋಧವೇಕೆ? ಸರ್ಕಾರದ ವಿರುದ್ದ ಪ್ರಮೋದಾದೇವಿ ಒಡೆಯರ್ ಮಾಡುತ್ತಿರುವ ಆರೋಪಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಬೇಬಿ ಬೆಟ್ಟ ಎಲ್ಲಿದೆ?

ಬೇಬಿ ಬೆಟ್ಟ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದಿಂದ 4 ಮೈಲಿಗಳ ದೂರದಲ್ಲೇ ಬೇಬಿಬೆಟ್ಟವಿದೆ. ವಿಸ್ತಾರವಾಗಿ ಹರಡಿಕೊಂಡಿರುವ ಗುಡ್ಡಗಾಡು ಪ್ರದೇಶ. ಇದಕ್ಕೆ ಐತಿಹಾಸಕ ಹಿನ್ನೆಲೆಯೂ ಇದೆ. ಇದರ ವ್ಯಾಪ್ತಿಯಲ್ಲಿ ಶ್ರೀ ರಾಮಯೋಗೀಶ್ವರ ಮಠ ಸೇರಿದಂತೆ ಕೆಲ ದೇಗುಲ, ಧಾರ್ಮಿಕ ಸ್ಥಳಗಳೂ ಇವೆ. ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳ ಆವಾಸಸ್ಥಾವವಾಗಿದೆ. ಸುಮಾರು 1,623 ಎಕರೆಯಷ್ಟು ವಿಸ್ತಾರಕ್ಕೆ ಹರಡಿಕೊಂಡಿದೆ ಎನ್ನಲಾಗಿದೆ.

ಬೇಬಿ ಬೆಟ್ಟದ ಪುರಾಣದ ಕಥೆ

ಬಹಳ ಹಿಂದೆ, ಪೂರ್ವದಲ್ಲಿ, ಡಂಬಾಸುರನೆಂಬ ರಕ್ಕಸನಿದ್ದನಂತೆ. ಸುತ್ತಮುತ್ತಲ ಗ್ರಾಮದವರಿಗೆ ಆತ ಬಹಳ ಪೀಡೆಕೊಡುತ್ತಿದ್ದ. ಬೆಟ್ಟದ ಗುಹೆಯೊಂದರಲ್ಲಿ ವಾಸಿಸುತ್ತಿದ್ದ ಆ ರಾಕ್ಷಸ, ಮಗುವಿನ ರೂಪತಾಳಿ ಜನರು ಅದನ್ನು ಎತ್ತಿಕೊಂಡಕೂಡಲೇ, ವಿರಾಟರೂಪಧರಿಸಿ, ಅವರನ್ನು ತಿನ್ನುತ್ತಿದ್ದನಂತೆ. ಭಯಭೀತರಾದ ಅಲ್ಲಿನ ಜನ ಶ್ರೀಮನ್ನಾರಾಯಣನ ಮೊರೆಹೋದರಂತೆ. ನಾರಾಯಣ ಡಂಬಾಸುರನನ್ನು ಸಂಹರಿಸಲು, ಮಹಾಲಕ್ಷ್ಮಿಯನ್ನು ಕಳಿಸಿದನಂತೆ. ಬೆಟ್ಟದ ಬಳಿಗೆ ಲಕ್ಷ್ಮೀದೇವಿಯು ಬಂದಾಗ, ರಾಕ್ಷಸನು ಮಗುವಿನರೂಪದಲ್ಲಿ ಕಾಣಿಸಿಕೊಂಡನಂತೆ. ಮಗುವನ್ನು ಎತ್ತಿ ಸಂತೈಸಲು ಹೋದ ಲಕ್ಷ್ಮಿಯನ್ನು ಕೊಲ್ಲಲು ಮುಂದಾದನು. ಇಬ್ಬರನಡುವೆ ಘೋರ ಕಾಳಗನಡೆಯಿತು. ಆಗ ಲಕ್ಷ್ಮಿಯು, ದುರ್ಗೆಯ ರೂಪಧಾರಣೆ ಮಾಡಿ, ತ್ರಿಶೂಲದಿಂದ ಅವನನ್ನು ಸಂಹರಿಸಿದಳಂತೆ.

ಇದನ್ನೂ ಓದಿ: Trial Blast: ಏನಿದು ಟ್ರಯಲ್ ಬ್ಲಾಸ್ಟ್? ಕೆಆರ್‌ಎಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಶುರುವಾಗಿದ್ದೇಕೆ?

ಐತಿಹಾಸಿಕವಾಗಿಯೂ ಮಹತ್ವ ಪಡೆದ ಸ್ಥಳ

ಬ್ರಿಟಿಷರ ಕಾಲದಲ್ಲಿ ತಮ್ಮ ಯುದ್ಧಸಾಮಗ್ರಿಗಳನ್ನು ಶೇಖರಿಸಿಡಲು ಬೇಬಿಬೆಟ್ಟದ ಮೇಲಿನ ಜಾಗವನ್ನು ಉಪಯೋಗಿಸುತ್ತಿದ್ದರಂತೆ. ಹಾಗೆಯೇ ಅವರಿಗೆ ಬೇಬಿ ಬೆಟ್ಟದ ಮಹಾತ್ಮ್ಯೆಯ ವಿವರಗಳು ತಿಳಿದವು. ಸಣ್ಣಮಗುವಿನ ಮತ್ವವನ್ನು ಅರಿತು, ಅವರೇ ಬೇಬಿ ಬೆಟ್ಟದ ಹೆಸರನ್ನು ಬೇಬಿ ಹಿಲ್ಸ್ ಎಂದು ಪುನರ್ ನಾಮಕರಣಮಾಡಿದರಂತೆ. ಬೇಬಿಬೆಟ್ಟದ ಹೆಸರನ್ನು ತಮ್ಮ ಗೆಝೆಟಿಯರ್‌ನಲ್ಲಿ ಮುದ್ರಿಸಿದರಂತೆ. ಹೀಗೆ ಬೇಬಿಬೆಟ್ಟದ ಹೆಸರು ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಯಿತು.

ದನದ ಜಾತ್ರೆ ವಿಶೇಷ

ವಸಂತಾಗಮನ ಸಂಭ್ರಮದೊಡನೆಯೇ ಜಾತ್ರೆಗಳ ಪ್ರಾರಂಭವಾಗುತ್ತದೆ. ಇದೇ ತರಹ, ಬೇಬಿಬೆಟ್ಟದಲ್ಲೂ ಮಹಾಶಿವರಾತ್ರಿಯಾದ ಒಡನೆಯೇ ಜಾತ್ರೆ ನಡೆದು ಬರುವ ಸಂಪ್ರದಾಯವಿದೆ. ಮುಖ್ಯವಾಗಿ ಇಲ್ಲಿ ನಡೆಯುವುದು ದನಗಳ ಜಾತ್ರೆ. ಇದು ಭಾರೀ ವಿಶೇಷತೆ ಪಡೆದಿದೆ. ಮುಮ್ಮಡಿ ಕೃಷ್ಣರಾಜ ಅರಸರಆಳ್ವಿಕೆಯಲ್ಲಿ, ಆರಂಭವಾದ ಜಾತ್ರೆ, ಸ್ವಲ್ಪಕಾಲ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಿಂತಿತ್ತು.

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ

ಬೇಬಿ ಬೆಟ್ಟದಲ್ಲಿ ಈ ಹಿಂದೆ ನಿರಂತರವಾಗಿ ಗಣಿಗಾರಿಕೆ ಮಾಡಲಾಗುತ್ತಿತ್ತು. 2018ರ ಸೆಪ್ಟೆಂಬರ್ 25ನೇ ತಾರೀಖು ಮಧ್ಯಾಹ್ನ ಸರಿ ಸುಮಾರು 2 ಗಂಟೆ ಸಮಯದಲ್ಲಿ ಮಂಡ್ಯದ ಬೇಬಿ ಬೆಟ್ಟ ಸೇರಿದಂತೆ  ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಶಬ್ದವಾಗಿತ್ತು. ಸುಮಾರು ಅರ್ಧ ಗಂಟೆಗಳ ಅವಧಿಯಲ್ಲಿ ಬ್ಯಾಕ್ ಟು ಬ್ಯಾಕ್ ಶಬ್ದವಾಗಿದ್ದು, ಮಂಡ್ಯ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಭೂಕಂಪವೋ, ಉಗ್ರಗಾಮಿಗಳು ಬಾಂಬ್ ಸ್ಫೋಟಿಸಿದ್ರೋ, ಇನ್ನೇನೋ ಅನಾಹುತವಾಯ್ತೋ ಅಂತ ಕಂಗೆಟ್ಟಿದ್ದರು.

ಇದು ಗಣಿಗಾರಿಕೆ ಎಫೆಕ್ಟ್ ಎಂದಿದ್ದ ತಜ್ಞರು

ಬಳಿಕ ಕೆಆರ್‌ಎಸ್‌ ಅಣೆಕಟ್ಟು ಸುರಕ್ಷತಾ ಸಮಿತಿಯು ನೈಸರ್ಗಿಕ ವಿಕೋಪ ತಡೆ ಸಮಿತಿ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿತ್ತು. ಈ ವೇಳೆ ಇದು ಗಣಿಗಾರಿಕೆ ಎಫೆಕ್ಟ್ ಅಂತ ತಜ್ಞರು ವರದಿ ನೀಡಿದ್ದರು. ಇದರಿಂದಾಗಿ ಕೆಆರ್‌ಎಸ್‌ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಇದರಿಂತ ಕೆಆರ್‌ಎಸ್‌ಗೆ ಹಾನಿಯಾಗಬಹುದು ಅಂತ ಎಚ್ಚರಿಕೆಯನ್ನೂ ನೀಡಿತ್ತು. ಇದಾದ ಬಳಿಕ ಕೆಆರ್‌ಎಸ್‌ ಸುತ್ತಮುತ್ತಲ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗಿತ್ತು.

ಮತ್ತೆ ಗಣಿಗಾರಿಕೆ ನಡೆಸಲು ಟ್ರಯಲ್ ಬ್ಲಾಸ್ಟ್

ಇದೀಗ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡುವಂತೆ ಗಣಿಮಾಲೀಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಮತ್ತೊಂದೆಡೆ ಗಣಿಗಾರಿಕೆಗೆ ಅವಕಾಶ ನೀಡದಂತೆ ರೈತರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ರೈತರು ಮತ್ತು ಗಣಿ ಮಾಲೀಕರ ಮಧ್ಯೆ ಸಿಲುಕಿರುವ ರಾಜ್ಯ ಸರ್ಕಾರ ಇದರ ಸತ್ಯಾಸತ್ಯತೆ ಪರೀಕ್ಷಿಸಲು ಟ್ರಯಲ್ ಬ್ಲಾಸ್ಟ್ ನಡೆಸಲು ತೀರ್ಮಾನಿಸಿದೆ. ಇದಕ್ಕಾಗಿ ಜಾರ್ಖಂಡ್‌ನ ಧನಾಬಾದ್‌ನಿಂದ ತಜ್ಞರು ಹಾಗೂ ವಿಜ್ಞಾನಿಗಳನ್ನು ಕರೆಸಿತ್ತು. ಆದರೆ ಇದಕ್ಕೂ ಬಾರೀ ವಿರೋಧ ವ್ಯಕ್ತವಾಗಿದೆ.

ಪ್ರಮೋದಾ ದೇವಿ ಒಡೆಯರ್ ಕಿಡಿ ಕಿಡಿ

ಟ್ರಯಲ್ ಬ್ಲಾಸ್ಟ್ ನಡೆಸದಂತೆ ಮೈಸೂರಿನ ರಾಜವಂಶಸ್ಥೆ ಪ್ರಮೋದಾದೇವಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಾವೇನೂ ಯಾರದೋ ಆಸ್ತಿ ಕಬಳಿಸಲು ಹೊರಟ್ಟಿದ್ದೇವೆ ಎಂಬ ರೀತಿ ಸರ್ಕಾರ ಯೋಚಿಸುತ್ತಿವೆ. ಇದು ನಮಗೆ ಸರ್ಕಾರಗಳು ಕೊಡುತ್ತಿರುವ ಕಿರುಕುಳ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಟ್ರಯಲ್ ಬ್ಲಾಸ್ಟ್ ನಡೆಸದಂತೆ ಮನವಿ

ಟ್ರಯಲ್ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಪ್ರಮೋದಾದೇವಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಬೇಬಿ ಬೆಟ್ಟದ 1600 ಎಕರೆ ಪ್ರದೇಶ, ರಾಜಮನೆತನಕ್ಕೆ ಸೇರಿದೆ. ಹಾಗಿ ಟ್ರಯಲ್ ಬ್ಲಾಸ್ಟ್ ನಡೆಸಬಾರದು ಅಂತ ಮನವಿ ಮಾಡಿದ್ದಾರೆ.

ಪ್ರಮೋದಾದೇವಿ ಒಡೆಯರ್ ವಾದವೇನು?

ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬರುವ ಮುನ್ನ ಮೈಸೂರು ಸಾಮ್ರಾಜ್ಯ ಇತ್ತು. 1950ರಲ್ಲಿ ಭಾರತ ಸರ್ಕಾರದೊಂದಿಗೆ ರಾಜ್ಯವನ್ನು ವಿಲೀನ ಮಾಡಲಾಯಿತು. ಆಗ  ಖಾಸಗಿ ಆಸ್ತಿಯನ್ನು ಘೋಷಿಸಿಕೊಂಡು ಉಳಿದ ಆಸ್ತಿಗಳನ್ನು ವಿಲೀನಗೊಳಿಸುವಂತೆ ಸೂಚಿಸಲಾಯಿತು. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತು. ರಾಜವಂಶದವರು ಖಾಸಗಿ ಆಸ್ತಿ ಎಂದು ಘೋಷಿಸಿಕೊಂಡ 'ಆಸ್ತಿ ಪಟ್ಟಿ'ಯನ್ನು 1951ರಲ್ಲಿ ಸರ್ಕಾರಿ ಆದೇಶದ ಮೂಲಕವೂ ಖಾತ್ರಿಪಡಿಸಲಾಯಿತು ಅಂತ ಪ್ರಮೋದಾ ದೇವಿ ಹೇಳಿದ್ದಾರೆ.

ಗೋಮಾಳದ ಭೂಮಿಯಾಗಿತ್ತಾ ಬೇಬಿ ಬೆಟ್ಟ?

ಬೇಬಿ ಬೆಟ್ಟ ಹಿಂದೆ ಅಮೃತ ಕಾವಲ್ ಆಗಿತ್ತು. ಕೃಷಿ ಮಾಡಲೂ ಯೋಗ್ಯವಲ್ಲದ ಭೂಮಿಯಾದ್ದರಿಂದ ಬಹುವರ್ಷ ಹಾಗೆಯೇ ಇತ್ತು. ಸುಮಾರು 1623 ಎಕರೆ ಜಾಗ ನಮ್ಮ ಖಾಸಗಿ ಆಸ್ತಿ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಆಡಳಿತ ನಡೆಸುವವರಿಗೂ ಗೊತ್ತಿದೆ. ಹೀಗಿದ್ದರೂ ಮಂಡ್ಯ ಜಿಲ್ಲಾಡಳಿತ ಬಿ ಖರಾಬು ಎಂದು ಘೋಷಿಸಿತು. ಆದರೆ. ಬಿ ಖರಾಬು ರದ್ದುಪಡಿಸಿ ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಮೂರ್ನಾಲ್ಕು ವರ್ಷಗಳ ಹಿಂದೆಯೇ ನಾನು ಪತ್ರ ಬರೆದಿದ್ದೆ. ಇದುವರೆಗೂ ಸ್ಪಂದಿಸಿಲ್ಲ. ಈಗ ಆರ್.ಟಿ.ಸಿ.ಯಲ್ಲಿ ಏನಂದು ನಮೂದಾಗಿದೆ ಎಂಬುದು ಗೊತ್ತಿಲ್ಲ. ಆದರೆ ಕೈಬರಹದ ಆರ್‌.ಟಿ.ಸಿ. ಮತ್ತು 1951ರಲ್ಲಿ ಹೊರಡಿಸಿದ ಆಸ್ತಿ ಪಟ್ಟಿಯಲ್ಲಿ ಸದರಿ ಆಸ್ತಿ ನಮ್ಮದು ಎಂಬುದು ಉಲ್ಲೇಖವಾಗಿದೆ ಅಂತ ಅವರು ಹೇಳಿದ್ದಾರೆ.

ಬೇಬಿ ಬೆಟ್ಟದಲ್ಲೇ ಟ್ರಯಲ್ ಬ್ಲಾಸ್ಟ್ ಯಾಕೆ?

ಬೇಬಿ ಬೆಟ್ಟದಲ್ಲೇ ಟ್ರಯಲ್ ಬ್ಲಾಸ್ಟ್ ಮಾಡಬೇಕು ಎಂಬ ಔಚಿತ್ಯ ಏನಿದೆ ಅಂತ ರಾಜಮಾತೆ ಪ್ರಶ್ನಿಸಿದ್ದಾರೆ. ಬೇಬಿ ಬೆಟ್ಟ ಬಿಟ್ಟು ಬೇರಾವುದೇ ಸರ್ಕಾರಿ ಜಾಗದಲ್ಲಿ ಟ್ರಯಲ್ ಮಾಡಬಹುದಿತ್ತು. ಎಷ್ಟು ದೂರದವರೆಗೆ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಕಂಡುಕೊಳ್ಳಬಹುದಿತ್ತು. ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ. ನಮ್ಮ ಆಸ್ತಿಯಲ್ಲಿ ಯಾರೋ ಬಂದು ಹೇಗೆ ಬ್ಲಾಸ್ಟ್ ಮಾಡಲು ಸಾಧ್ಯ ? ಟ್ರಯಲ್‌ ಮಾಡುವುದಕ್ಕೂ ಕನಿಷ್ಠ ಅನುಮತಿಯನ್ನೂ ಕೇಳಿಲ್ಲ ಅಂತ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Air Pollution: ಈ ಪಟ್ಟಣಕ್ಕೆ ಏನಾಗಿದೆ? ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವೇನು?

ಕಾನೂನು ಹೋರಾಟದ ನಿರ್ಧಾರ

ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂಬುದಕ್ಕೆ ಸರ್ಕಾರ ಮತ್ತು ನಮ್ಮಲ್ಲಿ ದಾಖಲೆಗಳಿವೆ. ಅಧಿಕಾರಿಗಳು ನಮಗೆ ಖಾತೆ ಮಾಡಿಕೊಡುವ ಬದಲು ಬಿ ಖರಾಬು ಎಂದು ನಮೂದಿಸಿದ್ದಾರೆ. ಕಂಪ್ಯೂಟರ್‌ ಆರ್.ಟಿ.ಸಿ.ಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಕಾನೂನು ಹೋರಾಟ ಮಾಡಿದರೆ ಸರ್ವೇ ನಂ. 4 ಆದೇಶವೇ ಬೇಬಿ ಬೆಟ್ಟಕ್ಕೂ ಅನ್ವಯ ಆಗಲಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಶೀರ್ಘದಲ್ಲೇ ತೀರ್ಮಾನ ಕೈಗೊಳ್ಳಲಿದ್ದೇನೆ.  ವ್ಯಾಜ್ಯ, ಹೋರಾಟದಿಂದಾಗಿ ನನಗೆ ಕಾನೂನು ಜ್ಞಾನ ಬಂದು ಬಿಟ್ಟಿದೆ ಅಂತ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
Published by:Annappa Achari
First published: