Explained; Privilege Motion, ಹಕ್ಕುಚ್ಯುತಿ ಎಂದರೇನು? ಶಾಸಕರು, ಸಂಸದರಿಗೆ ನೀಡಲಾದ ಈ ಹಕ್ಕಿನ ಮಹತ್ವವೇನು?

ಸಂಸತ್ತು ಮತ್ತು ಶಾಸನಸಭೆಗಳಿಗೆ ಹಕ್ಕುಚ್ಯುತಿ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸಿ ಶಿಕ್ಷೆ ನೀಡುವ ಪರಮಾಧಿಕಾರ ನೀಡಲಾಗಿದೆ. ಇದನ್ನು ಯಾವುದೇ ನ್ಯಾಯಾಲಯದಲ್ಲು ಪ್ರಶ್ನೆ ಮಾಡುವಂತಿಲ್ಲ. ಆದರೆ, ಸದನ ತೆಗೆದುಕೊಂಡ ನಿರ್ಧಾರ ನ್ಯಾಯಸಮ್ಮತವಾಗಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲನೆ ನಡೆಸಬಹುದು.

ಸಂಸತ್ ಭವನ

ಸಂಸತ್ ಭವನ

 • Share this:
  ಇಂದು ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರು ಪರಿಷತ್ ಸಚಿವಾಲಯದ ಕಾರ್ಯದರ್ಶಿ ಹಾಗೂ ಸಭಾಪತಿ ವಿರುದ್ಧ ಹಕ್ಕುಚ್ಯುತಿ (Privilege Motion) ಮಂಡಿಸಿದ್ದರು. ವಿಧಾನ ಪರಿಷತ್ ಸಭಾಂಗಣದ ಪಕ್ಕದಲ್ಲಿ ಹಲವು ವರ್ಷದಿಂದ ಇದ್ದ ಶೌಚಾಲಯವನ್ನು ಉಪಹಾರ ಗೃಹವಾಗಿ ಮಾರ್ಪಡಿಸಿದ್ದರಿಂದ ಹಲವರಿಗೆ ಸಮಸ್ಯೆಯಾಗಿದೆ, ಉಪಹಾರ ಗೃಹ ಸ್ಥಳಾಂತರಿಸಿ ಶೌಚಾಲಯ ನಿರ್ಮಾಣಕ್ಕೆ ಹಿಂದೆ ಭರವಸೆ ನೀಡಲಾಗಿತ್ತು ಆದರೆ ಅದನ್ನು ಜಾರಿಗೆ ತರದೆ ಸದನಕ್ಕೆ ಅಗೌರವ ತರಲಾಗಿದೆ ಎಂದು ಆರೋಪಿಸಿ ಪರಿಷತ್ ಸಚಿವಾಲಾಯ ಕಾರ್ಯದರ್ಶಿ ಮತ್ತು ಸಭಾನಾಯಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು. ಕಾಂಗ್ರೆಸ್ ಮಂಡಿಸಿದ ಹಕ್ಕುಚ್ಯುತಿ ನಿಲುವಳಿ ಕುರಿತು ವಿಧಾನ ಪರಿಷತ್ ಕಾರ್ಯಕಲಾಪ ಮತ್ತು ನಿಯಮಾವಳಿ ನಿಯಮ174 ರ ಅಡಿ ಹಕ್ಕುಚ್ಯುತಿ ಪ್ರಸ್ತಾವನೆ ನಿರಾಕರಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

  ಸಾಕಷ್ಟು ಸಂದರ್ಭದಲ್ಲಿ ಶಾಸಕರು, ಸಂಸದರು ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದನ್ನು ನಾವು ಕೇಳಿದ್ದೇವೆ. ಹಾಗಾದರೆ ಹಕ್ಕುಚ್ಯುತಿ ಎಂದರೇನು? ಏಕೆ ಅದನ್ನು ಮಂಡಿಸುತ್ತಾರೆ? ಎಂಬ ಇತ್ಯಾದಿ ಅನುಮಾನಗಳು ಹಲವರಿಗೆ ಇದೆ. ಹಕ್ಕುಚ್ಯುತಿಯ ಬಗ್ಗೆ ಸಂಪೂರ್ಣ ಇಲ್ಲಿದೆ ನೋಡಿ.

  ಹಕ್ಕುಚ್ಯುತಿ ಎಂದರೇನು?

  ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಹಕ್ಕು ರಕ್ಷಣೆಗಾಗಿ ಸಂವಿಧಾನದಲ್ಲಿ ಹಕ್ಕುಚ್ಯುತಿ ಅವಕಾಶ ನೀಡಲಾಗಿದೆ. ತಮ್ಮ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಬೇಕಾದ ಒಂದು ವಿಶೇಷ ಹಕ್ಕನ್ನು ಹಕ್ಕುಚ್ಯುತಿ ಎಂದು ಕರೆಯಬಹುದು. ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಿ ಎಂದು ಈ ಹಕ್ಕನ್ನು ಜನಪ್ರತಿನಿಧಿಗಳಿಗೆ ಸಂವಿಧಾನದಲ್ಲಿ ನೀಡಲಾಗಿದೆ. ಸಂಸದರು ಮತ್ತು ಶಾಸಕರು ಸಂವಿಧಾನ ನೀಡಿರುವ ಈ ಹಕ್ಕನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿಯೂ ಹೊಂದಿರುತ್ತಾರೆ.

  ಲೋಕಸಭೆಯ ರೂಲ್ ಬುಕ್ ಚಾಪ್ಟರ್ 20ರ ರೂಲ್ ನಂಬರ್ 222ರ ಪ್ರಕಾರ ಲೋಕಸಭಾ ಸದಸ್ಯರಿಗೆ, ರಾಜ್ಯಸಭೆಯ ರೂಲ್ ಬುಕ್ 16ರ 187ನೇ ನಿಯಮದ ಪ್ರಕಾರ ರಾಜ್ಯಸಭೆ ಸದಸ್ಯರಿಗೆ ಹಕ್ಕುಚ್ಯುತಿ ಮಂಡನೆ ಮಾಡಲು ಅವಕಾಶ ನೀಡಲಾಗಿದೆ. ಸಂಸದರು, ಶಾಸಕರ ಹಕ್ಕುಗಳನ್ನು ಮತ್ತು ಅವರಿಗೆ ಸಂವಿಧಾನ ನೀಡಿರುವ ರಕ್ಷಣಾ ವ್ಯವಸ್ಥೆಯನ್ನು ಯಾರಾದರೂ ಉಲ್ಲಂಘನೆ ಮಾಡಿದರೆ ಅಂತಹದ್ದನ್ನು ಹಕ್ಕುಚ್ಯುತಿ ಎಂದು ಹೇಳಲಾಗುತ್ತದೆ. ಇಂತಹ ಪ್ರಕರಣದಲ್ಲಿ ಸಂಸತ್ತು ಮತ್ತು ಶಾಸನ ಸಭೆಯ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲೂ ಸಹ ಅವಕಾಶವಿದೆ.

  ಹಕ್ಕುಚ್ಯುತಿ ಮಂಡನೆ ಪ್ರಕ್ರಿಯೆ ಹೇಗೆ?

  ಯಾವುದೇ ಸದನದಲ್ಲಿ ಜನಪ್ರತಿನಿಧಿ ಹಕ್ಕುಚ್ಯುತಿ ಮಂಡನೆ ಮಾಡಬೇಕಾದರೆ ಸಭಾನಾಯಕರ ಒಪ್ಪಿಗೆ ಬೇಕು. ಹಕ್ಕುಚ್ಯುತಿ ಮಂಡಿಸುವ ಮೊದಲು ನೋಟಿಸ್ ನೀಡಬೇಕಾಗುತ್ತದೆ. ಈ ನೋಟಿಸ್ ಅನ್ನು ಸದನದಲ್ಲಿಯೇ ನೀಡಬೇಕು. ಮತ್ತು ಹಕ್ಕುಚ್ಯುತಿ ಮಂಡಿಸುವ ಸದಸ್ಯರು ನಾಯಕರಿಗೆ ಕಲಾಪದ ದಿನದ 10 ಗಂಟೆಯೊಳಗೆ ಮಾಹಿತಿ ನೀಡಬೇಕು. ಸಭಾನಾಯಕರು ಹಕ್ಕುಚ್ಯುತಿ ಮಂಡನೆಯ ಬಗ್ಗೆ ಮೊದಲ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದನ್ನು ಮಂಡಿಸಬಹುದೇ ಅಥವಾ ಹೆಚ್ಚಿನ ತನಿಖೆಗಾಗಿ ಹಕ್ಕು ಬಾದ್ಯತಾ ಸಮಿತಿಗೆ ನೀಡಬೇಕೇ? ಎಂದು ಸಭಾ ನಾಯಕರು ಮೊದಲು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಾಕಷ್ಟು ಹಕ್ಕುಚ್ಯುತಿಗಳು ಸಭಾನಾಯಕರ ಸಮ್ಮುಖದಲ್ಲಿಯೇ ವಜಾಗೊಳ್ಳುತ್ತವೆ. ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸುವುದು ತೀರಾ ಅಪರೂಪ.

  ಸಭಾ ನಾಯಕರು ಸದನದಲ್ಲಿ ಇರುವ ಪಕ್ಷಗಳ ಬಲಾಬಲ ನೋಡಿಕೊಂಡು 15 ಸದಸ್ಯರ ಹಕ್ಕು ಬಾಧ್ಯತಾ ಸಮಿತಿ ರಚನೆ ಮಾಡುತ್ತಾರೆ. ಈ ಸಮಿತಿ ಪ್ರಕರಣ ವಿಚಾರಣೆ ನಡೆಸಿ ವರದಿ ನೀಡುತ್ತದೆ. ಈ ವರದಿಯನ್ನು ಸದನದಲ್ಲಿ ಮಂಡಿಸಲಾಗುತ್ತದೆ. ಚರ್ಚೆ ನಡೆಸಿದ ಬಳಿಕ ಸಭಾ ನಾಯಕರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ.

  ಇದನ್ನು ಓದಿ: Privilege Motion: ಸದನದ ನಿರ್ಧಾರ ಜಾರಿಗೆ ತರದೆ ಅಗೌರವ ತೋರಲಾಗಿದೆ ಎಂದು ಸಭಾಪತಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಪ್ರತಾಪ ಚಂದ್ರ ಶೆಟ್ಟಿ!

  ಸದನದ ಪರಮಾಧಿಕಾರ ಪ್ರಶ್ನೆ ಮಾಡುವಂತಿಲ್ಲ

  ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಸದನಕ್ಕೆ ಯಾವುದೇ ಸದಸ್ಯರು ತಪ್ಪು ಮಾಹಿತಿ ನೀಡಿದರೆ, ಗೌರವ ಮತ್ತು ಅಧಿಕಾರದ ಬಗ್ಗೆ ತಿರಸ್ಕಾರ ತೋರಿದರೆ, ನಿಂದಿಸಿದರೆ ಹಕ್ಕುಚ್ಯುತಿ ಮಂಡಿಸಬಹುದಾಗಿದೆ. ಹಕ್ಕುಚ್ಯುತಿ ನಿರ್ಣಯವನ್ನು ಯಾವುದೇ ವ್ಯಕ್ತಿ, ಸದನದ ಇತರೆ ಸದಸ್ಯರು ಹೊರಗಿನ ವ್ಯಕ್ತಿಗಳ, ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಮಂಡಿಸಬಹುದಾಗಿದೆ. ಹಕ್ಕು ಬಾಧ್ಯತಾ ಸಮಿತಿಯ ವರದಿಯಲ್ಲಿ ತಪ್ಪು ಸಾಬೀತಾದರೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಸಹ ನೀಡಲಾಗಿದೆ. ಜನಪ್ರತಿನಿಧಿಗಳ ಹಕ್ಕನ್ನು ಉಲ್ಲಂಘಿಸಿದ ಅಥವಾ ಅವರನ್ನು ನಿಂದಿಸಿದ ಹೊರಗಿನ ವ್ಯಕ್ತಿಯನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕುವ, ಗಂಭೀರ ಪ್ರಕರಣಗಳಾದರೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಹಕ್ಕುಚ್ಯುತಿಯಲ್ಲಿ ನೀಡಲಾಗಿದೆ. ಒಂದು ವೇಳೆ ಸದನದ ಸದಸ್ಯರು ತಪ್ಪು ಮಾಡಿದರೆ ಬಹಿಷ್ಕಾರ ಹಾಕಲಾಗುತ್ತದೆ.  ಸಂಸತ್ತು ಮತ್ತು ಶಾಸನಸಭೆಗಳಿಗೆ ಹಕ್ಕುಚ್ಯುತಿ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸಿ ಶಿಕ್ಷೆ ನೀಡುವ ಪರಮಾಧಿಕಾರ ನೀಡಲಾಗಿದೆ. ಇದನ್ನು ಯಾವುದೇ ನ್ಯಾಯಾಲಯದಲ್ಲು ಪ್ರಶ್ನೆ ಮಾಡುವಂತಿಲ್ಲ. ಆದರೆ, ಸದನ ತೆಗೆದುಕೊಂಡ ನಿರ್ಧಾರ ನ್ಯಾಯಸಮ್ಮತವಾಗಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲನೆ ನಡೆಸಬಹುದು.
  Published by:HR Ramesh
  First published: