Explained: Paxlovid ಎಂದರೇನು? WHO ಏಕೆ ಇದನ್ನು ಕೊರೋನಾ ರೋಗಿಗಳಿಗೆ ಶಿಫಾರಸ್ಸು ಮಾಡುತ್ತಿದೆ ಗೊತ್ತಾ?

ವಿಶ್ವ ಆರೋಗ್ಯ ಸಂಸ್ಥೆ (WHO)ಯು ಇನ್ನೂ ಲಸಿಕೆ ಪಡೆಯದ, ವಯಸ್ಸಾದ ಹಾಗೂ ಹೆಚ್ಚಿನ ಪ್ರತಿರೋಧಕ ಶಕ್ತಿ ಹೊಂದಿರದ ಆದರೆ ಕೋವಿಡ್‌ನಂತಹ ರೋಗಕ್ಕೆ ಒಳಪಡಬಹುದಾದ ತೀವ್ರ ಸಾಧ್ಯತೆಯುಳ್ಳ ರೋಗಿಗಳಿಗೆ ಫೈಜರ್‌ನ ಮೌಖಿಕ ಆಂಟಿವೈರಲ್ ಡ್ರಗ್ ಪ್ಯಾಕ್ಸ್‌ಲೋವಿಡ್ ಅನ್ನು "ಬಲವಾಗಿ ಶಿಫಾರಸ್ಸು ಮಾಡಲಾಗಿದೆ" ಎಂದು ಹೇಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವ ಆರೋಗ್ಯ ಸಂಸ್ಥೆ (WHO) ಯು ಇನ್ನೂ ಲಸಿಕೆ ಪಡೆಯದ, ವಯಸ್ಸಾದ ಹಾಗೂ ಹೆಚ್ಚಿನ ಪ್ರತಿರೋಧಕ ಶಕ್ತಿ ಹೊಂದಿರದ ಆದರೆ ಕೋವಿಡ್‌ನಂತಹ (Covid 19) ರೋಗಕ್ಕೆ ಒಳಪಡಬಹುದಾದ ತೀವ್ರ ಸಾಧ್ಯತೆಯುಳ್ಳ ರೋಗಿಗಳಿಗೆ ಫೈಜರ್‌ನ (Pfizer) ಮೌಖಿಕ ಆಂಟಿವೈರಲ್ ಡ್ರಗ್ ಪ್ಯಾಕ್ಸ್‌ಕೋವಿಡ್ ಅನ್ನು "ಬಲವಾಗಿ ಶಿಫಾರಸ್ಸು ಮಾಡಲಾಗಿದೆ" ಎಂದು ಹೇಳಿದೆ. 3,078 ರೋಗಿಗಳನ್ನು ಒಳಗೊಂಡ ಎರಡು ಯಾದೃಚ್ಛಿಕವಾಗಿ ನಡೆಸಲಾದ ನಿಯಂತ್ರಿತ ಪ್ರಯೋಗಗಳಿಂದ ಹೊಸ ಡೇಟಾವನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಈ ಶಿಫಾರಸ್ಸನ್ನು ಮಾಡಲಾಗಿದೆ. ಇದರ ಚಿಕಿತ್ಸೆಯನ್ನು ಪಡೆದ ನಂತರ ಆಸ್ಪತ್ರೆಗೆ ದಾಖಲಾಗುವ ಅಪಾಯವು 85% ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂದರೆ ಈ ಚಿಕಿತ್ಸೆಯ ಬಳಿಕ ಹೆಚ್ಚಿನ ಅಪಾಯದ ಗುಂಪಿನಲ್ಲಿ (10% ಕ್ಕಿಂತ ಹೆಚ್ಚು ಆಸ್ಪತ್ರೆಗೆ ದಾಖಲಾಗಬೇಕಾದ ಅಪಾಯ), ಪ್ರತಿ 1,000 ರೋಗಿಗಳ ಪೈಕಿ 84 ರೋಗಿಗಳು ಆಸ್ಪತ್ರೆಗೆ ದಾಖಲಾಗದಂತೆ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಏನಿದು ಔಷಧ..?:

ಪ್ಯಾಕ್ಸ್ಲೋವಿಡ್ ಔಷಧಿಯು ಪ್ರಮುಖವಾಗಿ ನಿರ್ಮಾಟ್ರೆಲ್ವಿರ್ ಮಾತ್ರೆಗಳು ಮತ್ತು ರಿಟೊನಾವಿರ್ ಮಾತ್ರೆಗಳನ್ನು ಒಳಗೊಂಡಿದೆ. ಇವು ಸರಳವಾಗಿ ಬಾಯಿಯ ಮೂಲಕ ಸೇವಿಸುವ ಮಾತ್ರೆಗಳು. ಕಳೆದ ವರ್ಷ ಡಿಸೆಂಬರ್‌ನಲ್ಲಿ USFDA ಯಿಂದ ತುರ್ತು ಬಳಕೆಗೆ ಅಧಿಕಾರವನ್ನು ಪಡೆದುಕೊಂಡಿದೆ.

ನಿರ್ಮಾಟ್ರೆಲ್ವಿರ್ ಮುಖ್ಯವಾಗಿ ಪ್ರೋಟೀಸ್ ಎಂಬ ವೈರಲ್ ಕಿಣ್ವವನ್ನು ಪ್ರತಿಬಂಧಿಸುವ ಮೂಲಕ ಆತಿಥೇಯ ಜೀವಕೋಶದೊಳಗೆ ವೈರಾಣು ತನ್ನನ್ನು ತಾನೇ ಪುನರಾವರ್ತಿಸಿಕೊಳ್ಳಲು ಸಾಧ್ಯವಾಗದಂತೆ ಮಾಡುತ್ತದೆ. ಇನ್ನು ರಿಟೊನವಿರ್ ಎಂಬ ಮಾತ್ರೆಯು ದೇಹದಲ್ಲಿ ನಿರ್ಮಾಟ್ರೆಲ್ವಿರ್ ಕರಗಿ ಹೋಗುವುದನ್ನು ನಿಧಾನಗೊಳಿಸುವ ಮೂಲಕ ಅದು ದೇಹದಲ್ಲಿ ಹೆಚ್ಚು ಕಾಲ ಉಳಿಯುವಂತೆ ಸಹಕರಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Explained: ಪದೇ ಪದೇ ಬದಲಾಗುವ ಕೆಲಸದ ಶಿಫ್ಟ್ ತರಬಲ್ಲದು ಆಪತ್ತು! ಹೊಸ ಅಧ್ಯಯನ ಹೇಳುವುದೇನು ನೋಡಿ

ನಿರ್ಮಾಟ್ರೆಲ್ವಿರ್‌ನಂತಹ ಔಷಧವು ಲಸಿಕೆಗಳ ಮೇಲೆ ಪ್ರಯೋಜನವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ, ಏಕೆಂದರೆ ಇದು ಸಾಮಾನ್ಯವಾಗಿ ಲಸಿಕೆಗಳು ದಾಳಿ ಮಾಡುವ ಸ್ಪೈಕ್ ಪ್ರೋಟೀನ್‌ ವೈರಾಣುಗಳ ಬದಲು ಅದಿನ್ನೂ ಸ್ಪೈಕ್ ಪ್ರೋಟೀನ್‌ಗಳಂತೆ ರೂಪಾಂತರಗೊಳ್ಳದೆ ಇರುವ ಸಂದರ್ಭದಲ್ಲಿ ವೈರಸ್‌ನಲ್ಲಿನ ದುರ್ಬಲತೆಯ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ಹಾಗಾಗಿ, ಈ ಔಷಧವು ಎಲ್ಲಾ ರೂಪಾಂತರಗಳ ವಿರುದ್ಧ ಪರಿಣಾಮಕಾರಿ ಅಸ್ತ್ರವಾಗಿದೆ. ಹಾಗೆ ನೋಡಿದರೆ ಓಮಿಕ್ರಾನ್ ಅಲೆಯು ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ, ಲಸಿಕೆಗಳು ಸೋಂಕನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ತೋರಿಸಿದೆ, ಆದರೂ ಗಂಭೀರವಾದ ಅನಾರೋಗ್ಯ ಮತ್ತು ಸಾವುಗಳನ್ನು ತಡೆದಿವೆ.

ಮೂರು ಮಾತ್ರೆಗಳಾಗಿ ಸೇವಿಸಬೇಕು:

ವಿಶ್ವ ಆರೋಗ್ಯ ಸಂಸ್ಥೆ ಸದ್ಯ ಈ ಔಷಧಿಯ ಬಗ್ಗೆ ನೀಡಿರುವ ಹೇಳಿಕೆಗಿಂತ ಮುಂಚೆಯೇ ಕೊರೋನಾ ವೈರಸ್ ವಿರುದ್ಧದ ಯುದ್ಧದಲ್ಲಿ ನಾಟಕೀಯ ಹೊಸ ಪ್ರಯೋಜನವನ್ನು ಒದಗಿಸಿದ ಅದ್ಭುತ ಔಷಧವಾಗಿ ಇದನ್ನು ನೋಡಲಾಗಿದೆ. ಅಲ್ಲದೆ, ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್‌ನಿಂದ ತಯಾರಿಸಲ್ಪಟ್ಟ ಎರಡನೇ ಓರಲ್ ಕೋವಿಡ್ -19 ಔಷಧವಾದ ಮೊಲ್ನುಪಿರಾವಿರ್ ಕೂಡ ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಫ್‌ಡಿಎನಿಂದ ಬಳಕೆಯ ಅಧಿಕಾರವನ್ನು ಪಡೆದುಕೊಂಡಿತ್ತು, ಆದರೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಅದು ಕಡಿಮೆ ಪರಿಣಾಮಕಾರಿತ್ವವನ್ನು ತೋರಿಸಿತ್ತು.

ಪ್ಯಾಕ್ಸ್‌ಕ್ಲೋವಿಡ್‌ ಅನ್ನು ಮೂರು ಮಾತ್ರೆಗಳಾಗಿ ನಿರ್ವಹಿಸಲಾಗುತ್ತದೆ - ಎರಡು ನಿರ್ಮಾಟ್ರೆಲ್ವಿರ್ ಮತ್ತು ಒಂದು ರಿಟೋನವಿರ್ - ಐದು ದಿನಗಳವರೆಗೆ ದಿನಕ್ಕೆ ಎರಡು ಬಾರಿ ಮೌಖಿಕವಾಗಿ, ಅಂದರೆ ಒಟ್ಟು 30 ಮಾತ್ರೆಗಳನ್ನು ಇದರ ಚಿಕಿತ್ಸಾ ಪ್ರಕ್ರಿಯೆಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. USFDA ಪ್ಯಾಕ್ಸ್ಲೋವಿಡ್ ಅನ್ನು ಸತತ ಐದು ದಿನಗಳವರೆಗೆ ಮಾತ್ರ ಬಳಸಲು ಅಧಿಕೃತಗೊಳಿಸಿತು.

ಉತ್ತಮ ಪ್ರತಿಕ್ರಿಯೆ ವ್ಯಕ್ತ:

ಪ್ಯಾಕ್ಸ್‌ಲೋವಿಡ್‌ಗಾಗಿನ EUA ಕ್ಲಿನಿಕಲ್ ಡೇಟಾವನ್ನು ಆಧರಿಸಿದ್ದು, ಇದರಲ್ಲಿ ಪ್ಲೇಸ್‌ಬೊ ಗುಂಪಿಗೆ ಹೋಲಿಸಿದರೆ ರೋಗಲಕ್ಷಣಗಳು ಪ್ರಾರಂಭವಾದ ಮೂರು ದಿನಗಳಲ್ಲಿ 89 ಪ್ರತಿಶತದಷ್ಟು ಆಸ್ಪತ್ರೆಗೆ ಅಥವಾ ಸಾವಿನ ಅಪಾಯವನ್ನು ಕಡಿಮೆ ಮಾಡಿರುವುದಾಗಿಯೂ ಹಾಗೂ ರೋಗಲಕ್ಷಣಗಳು ಪ್ರಾರಂಭವಾದ ಐದು ದಿನಗಳಲ್ಲಿ 88 ಪ್ರತಿಶತದಷ್ಟು ಕಡಿಮೆಯಾಗಿರುವುದೂ ಕಂಡುಬಂದಿದೆ.

ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಕೋವಿಡ್ -19 ನೊಂದಿಗೆ ಪೂರಕ ಆಮ್ಲಜನಕದ ಅಗತ್ಯವಿಲ್ಲದ ಮತ್ತು ತೀವ್ರವಾದ ಕಾಯಿಲೆಗೆ ಮುನ್ನಡೆಯುವ ಅಪಾಯವನ್ನು ಹೊಂದಿರುವ ವಯಸ್ಕರಿಗೆ ಚಿಕಿತ್ಸೆ ನೀಡಲು ಪ್ಯಾಕ್ಸ್ಲೋವಿಡ್ ಅನ್ನು ಬಳಸಬಹುದು ಎಂದು ಸಲಹೆ ನೀಡಿದೆ.

ಜನರಿಕ್ ಆವೃತ್ತಿಗಳು:

ಕಳೆದ ವರ್ಷ ನವೆಂಬರ್ 16 ರಂದು, ಅರ್ಹ ಜನರಿಕ್ ಔಷಧ ತಯಾರಕರಿಗೆ ಉಪ-ಪರವಾನಗಿಗಳನ್ನು ನೀಡುವ ಮೂಲಕ ಔಷಧದ ಉತ್ಪಾದನೆ ಮತ್ತು ವಿತರಣೆಯನ್ನು ಸುಗಮಗೊಳಿಸುವ ಪ್ಯಾಕ್ಸ್‌ಲೋವಿಡ್‌ಗಾಗಿ ಸ್ವಯಂಪ್ರೇರಿತ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಫೈಜರ್ ಘೋಷಿಸಿತ್ತು.

ವಿಶ್ವಸಂಸ್ಥೆಯ ಬೆಂಬಲಿತ ಸಾರ್ವಜನಿಕ ಆರೋಗ್ಯ ಸಂಸ್ಥೆ ಮೆಡಿಸಿನ್ಸ್ ಪೇಟೆಂಟ್ ಪೂಲ್ (MPP) ನೊಂದಿಗೆ ಫೈಜರ್‌ನ ಪರವಾನಗಿ ಒಪ್ಪಂದವು ವಿಶ್ವದ ಜನಸಂಖ್ಯೆಯ ಸರಿಸುಮಾರು 53% ರಷ್ಟು ಒಳಗೊಂಡಿರುವ ಭಾರತ ಸೇರಿ 95 ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ಔಷಧಿಗಳ ಪೂರೈಕೆಯನ್ನು ಸಕ್ರಿಯಗೊಳಿಸಲು ಉದ್ದೇಶಿಸಿದೆ.

ತರುವಾಯ, ಈ ವರ್ಷ ಮಾರ್ಚ್ 17 ರಂದು, ಎಂಪಿಪಿ ನಿರ್ಮಾಟ್ರೆಲ್ವಿರ್‌ನ ಜನರಿಕ್ ಆವೃತ್ತಿಯನ್ನು ತಯಾರಿಸಲು 35 ಕಂಪನಿಗಳೊಂದಿಗೆ ಒಪ್ಪಂದಗಳ ಸಹಿ ಹಾಕಿದೆ ಎಂದು ಘೋಷಿಸಿತು, ಇದನ್ನು ಕಡಿಮೆ ಪ್ರಮಾಣದ ರಿಟೊನಾವಿರ್‌ನೊಂದಿಗೆ ಸಂಯೋಜಿಸಿ 95 ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸರಬರಾಜು ಮಾಡಬಹುದಾಗಿದೆ. ಈ ಔಷಧಿಯ ಉತ್ಪಾದನೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ 6 ಕಂಪನಿಗಳು ಔಷಧಕ್ಕೆ ಬೇಕಾದ ಕಚ್ಚಾ ಪದಾರ್ಥವನ್ನು ಉತ್ಪಾದಿಸುತ್ತವೆ, ಒಂಬತ್ತು ಔಷಧ ಉತ್ಪನ್ನವನ್ನು ಉತ್ಪಾದಿಸುತ್ತವೆ ಮತ್ತು ಮಿಕ್ಕ ಕಂಪನಿಗಳು ಎರಡನ್ನೂ ಮಾಡುತ್ತವೆ ಎಂದು ಎಂಪಿಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕಂಪನಿಗಳು ಭಾರತ ಸೇರಿದಂತೆ ಬಾಂಗ್ಲಾದೇಶ, ಬ್ರೆಜಿಲ್, ಚೀನಾ, ಡೊಮಿನಿಕನ್ ರಿಪಬ್ಲಿಕ್, ಜೋರ್ಡಾನ್, ಇಸ್ರೇಲ್, ಮೆಕ್ಸಿಕೋ, ಪಾಕಿಸ್ತಾನ, ಸೆರ್ಬಿಯಾ, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ವಿಯೆಟ್ನಾಂನಲ್ಲಿವೆ.

ಜಿನೀವಾ ಮೂಲದ ಯುನಿಟೈಡ್ ಹಣ ಹೂಡಲಾದ ಎಂಪಿಪಿ, ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ಜೀವ ಉಳಿಸುವ ಔಷಧಿಗಳ ಪ್ರವೇಶವನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತಿದೆ. ಇದು ಸದ್ಯ ನಾಗರಿಕ ಸಮಾಜ, ಸರ್ಕಾರಗಳು, ಅಂತರಾಷ್ಟ್ರೀಯ ಸಂಸ್ಥೆಗಳು, ಉದ್ಯಮ, ರೋಗಿಗಳ ಗುಂಪುಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಎಂಪಿಪಿ ಪಾಲುದಾರರು ಅಗತ್ಯ ಔಷಧಿಗಳಿಗೆ ಆದ್ಯತೆ ನೀಡಲು ಮತ್ತು ಪರವಾನಗಿ ನೀಡಲು ಹಾಗೂ ಸಾರ್ವತ್ರಿಕ ಉತ್ಪಾದನೆ, ಹೊಸ ಸೂತ್ರೀಕರಣಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ.

ಇದನ್ನೂ ಓದಿ: Exam Stress: ಪರೀಕ್ಷೆಯ ಸಮಯದಲ್ಲಿ ಆರೋಗ್ಯ ಏಕೆ ಕೈಕೊಡುತ್ತೆ? ಪರೀಕ್ಷೆ ವೇಳೆ ಆರೋಗ್ಯವಾಗಿರಲು ಇಲ್ಲಿವೆ ಸಲಹೆಗಳು!

ಭಾರತದಲ್ಲಿ ಔಷಧ:

ಎಂಪಿಪಿ ಈ ಮೂಲಕ ಉಪ-ಪರವಾನಗಿ ನೀಡುವ ಒಪ್ಪಂದಗಳಿಗೆ ಸಹಿ ಹಾಕಿರುವ 35 ಕಂಪನಿಗಳಲ್ಲಿ 19 ಕಂಪನಿಗಳು ಭಾರತೀಯ ಮೂಲದ್ದಾಗಿವೆ ಮತ್ತು ಅವು ಬೆಂಗಳೂರು ಮೂಲದ ಬಯೋಕಾನ್ ಲಿಮಿಟೆಡ್‌ನಂತಹ ಔಷಧ ತಯಾರಕ ಸಂಸ್ಥೆ ಮುಂಬೈ ಮೂಲದ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್, ಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಸಿಪ್ಲಾ; ಅಹಮದಾಬಾದ್ ಪ್ರಧಾನ ಕಛೇರಿಯನ್ನು ಹೊಂದಿರುವ ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್; ಹೈದರಾಬಾದ್‌ನ ಹೆಟೆರೊ ಡ್ರಗ್ಸ್ ಮತ್ತು ಲಾರಸ್ ಲ್ಯಾಬ್ಸ್; ಮತ್ತು ಪುಣೆಯ ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಗಳಾಗಿವೆ.

ಹೆಟೆರೊ ಕಂಪನಿಯಿಂದ ತಯಾರಿತ ಈ ಔಷಧವು ಮೆಡಿಕಲ್ ಶಾಪ್ ಗಳಲ್ಲಿ ಶೀಘ್ರದಲ್ಲಿ ಲಭ್ಯವಾಗಬಹುದೆಂದು ವರದಿಯಾಗಿದ್ದರೂ, ಆ ಬಗ್ಗೆ ಯಾವುದೇ ದೃಢೀಕರಣವಿಲ್ಲ.

ಆದರೂ ತನ್ನ ಏಪ್ರಿಲ್ 22 ರ ಹೇಳಿಕೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಪ್ಯಾಕ್ಸ್ಲೋವಿಡ್ ಚಿಕಿತ್ಸೆ ಲಭ್ಯತೆಗೆ ಸಂಬಂಧಿಸಿದಂತೆ ಈ ಹಿಂದಿನಂತೆ ಕೋವಿಡ್ ಲಸಿಕೆಗಳನ್ನು ಒದಗಿಸುವ ವಿಷಯದಲ್ಲಿ ಉಂಟಾದಂತೆ ಕಡಿಮೆ ಮತ್ತು ಮಧ್ಯಮ - ಆದಾಯದ ದೇಶಗಳು "ಸರದಿಯ ಕೊನೆಗೆ" ತಳ್ಳಲ್ಪಡಬಹುದೆಂಬ ವಿಚಾರ ಹೊರಹಾಕಿ ಇದು "ಅತ್ಯಂತ ಕಾಳಜಿ" ಯ ಸಂಗತಿ ಎಂದು ಹೇಳಿದೆ. ಎಂಪಿಪಿಯೊಂದಿಗಿನ ಫೈಜರ್‌ನ ಪರವಾನಗಿ ಒಪ್ಪಂದವು ಔಷಧಿಯ ಜೆನೆರಿಕ್ ಉತ್ಪಾದನೆಯಿಂದ ಪ್ರಯೋಜನ ಪಡೆಯಬಹುದಾದ ದೇಶಗಳ ಸಂಖ್ಯೆಯನ್ನು ಸೀಮಿತಗೊಳಿಸಿದೆ ಎಂದು ಹೇಳಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಅಮೆರಿಕದಲ್ಲಿ ಒತ್ತು:

ಬೈಡೆನ್ ಆಡಳಿತವು ಪ್ಯಾಕ್ಸ್‌ಲೋವಿಡ್‌ನಂತಹ ಮೌಖಿಕ ಆ್ಯಂಟಿವೈರಲ್ ಚಿಕಿತ್ಸೆಗಳು ಲಭ್ಯವಿರುವ ಸ್ಥಳಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಶ್ವೇತಭವನ ಮಂಗಳವಾರ ತಿಳಿಸಿದೆ.

ಪ್ರಸ್ತುತ, ಮಾತ್ರೆಗಳನ್ನು ಪಡೆಯಲು ಔಷಧಾಲಯಗಳು ರಾಜ್ಯಗಳ ಮೇಲೆ ಅವಲಂಬಿತವಾಗಿವೆ. ಸರ್ಕಾರವು ಚಿಕಿತ್ಸೆಗಳನ್ನು ಆಯ್ದ ಔಷಧಾಲಯಗಳಿಗೆ ಹಾಗೂ ನೇರವಾಗಿ ರಾಜ್ಯಗಳು ಮತ್ತು ಸಮುದಾಯ ಕೇಂದ್ರಗಳಿಗೆ ಕಳುಹಿಸುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ, ಚಿಕಿತ್ಸೆಗಳು ಸುಮಾರು 20,000 ಸ್ಥಳಗಳಲ್ಲಿ ಲಭ್ಯವಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

ಆಡಳಿತವು ಈಗ ಅವರ ನೇರ ವಿತರಣೆಯನ್ನು 30,000 ಕ್ಕೂ ಹೆಚ್ಚು ಸ್ಥಳಗಳಿಗೆ ಹೆಚ್ಚಿಸಲು ಮತ್ತು ಮುಂಬರುವ ವಾರಗಳಲ್ಲಿ 40,000 ಪ್ರದೇಶಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ವರದಿಯು ಹೇಳಿದೆ.

ಸಂಕೀರ್ಣವಾದ ಅರ್ಹತಾ ಅಗತ್ಯತೆಗಳು, ಕಡಿಮೆಯಾದ ಪರೀಕ್ಷೆ ಮತ್ತು ಔಷಧದ ಪರಸ್ಪರ ಕ್ರಿಯೆಗಳ ಸಂಭಾವ್ಯತೆಯಿಂದಾಗಿ ಪ್ಯಾಕ್ಸ್ಲೋವಿಡ್ ಔಷಧಿಗೆ ಬೇಡಿಕೆಯು ಅನಿರೀಕ್ಷಿತವಾಗಿ ಕಡಿಮೆಯಾಗಿದೆ. ಯುಎಸ್ ಒಂದು ಕೋರ್ಸ್‌ಗೆ ಸುಮಾರು 530 ಡಾಲರ್ ದರದಲ್ಲಿ 20 ಮಿಲಿಯನ್ ಮಾತ್ರೆಗಳನ್ನು ಖರೀದಿಸಲು ಒಪ್ಪಿಕೊಂಡಿದೆ ಮತ್ತು ಫೈಜರ್ ಏಪ್ರಿಲ್ ಅಂತ್ಯದ ವೇಳೆಗೆ ಅಮೆರಿಕದ ಬಳಕೆಗಾಗಿ ಮೀಸಲಿಟ್ಟ 3.5 ಮಿಲಿಯನ್ ಕೋರ್ಸ್‌ಗಳನ್ನು ತಯಾರಿಸುವ ವೇಗದಲ್ಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Published by:shrikrishna bhat
First published: