Eidgah Maidan: ಈದ್ಗಾ ಮೈದಾನ ಎಂದರೇನು ಗೊತ್ತಾ? ಚಾಮರಾಜಪೇಟೆಯಲ್ಲಿ ವಿವಾದ ಉಂಟಾಗಿದ್ದೇಕೆ?

ಈದ್ಗಾ ಮೈದಾನ ಇತ್ತೀಚಿಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ ಆಟ ಆಡಲು, ಪ್ರಾರ್ಥನೆ ಸಲ್ಲಿಸಲು ನಮಗೂ ಅವಕಾಶ ನೀಡಿ ಅಂತ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಮೈದಾನವನ್ನು ಆಟದ ಮೈದಾನ ಅಂತ ಘೋಷಿಸಿತ್ತು. ಹಾಗಿದ್ರೆ ಈದ್ಗಾ ಮೈದಾನ ಎಂದರೇನು? ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದಕ್ಕೆ ಕಾರಣವಾದಿದ್ದೇಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಚಾಮರಾಜಪೇಟೆಯ ಈದ್ಗಾ ಮೈದಾನದ ಒಂದು ನೋಟ (ಚಿತ್ರಕೃಪೆ:  ದಿ ಹಿಂದೂಸ್ತಾನ್ ಗೆಜೆಟ್)

ಚಾಮರಾಜಪೇಟೆಯ ಈದ್ಗಾ ಮೈದಾನದ ಒಂದು ನೋಟ (ಚಿತ್ರಕೃಪೆ: ದಿ ಹಿಂದೂಸ್ತಾನ್ ಗೆಜೆಟ್)

  • News18
  • Last Updated :
  • Share this:
ಇಂದು ಬಕ್ರೀದ್ ಹಬ್ಬ (Bakrid festival), ಮುಸ್ಲಿಮರ (Muslim) ಪಾಲಿಗೆ ಈ ಹಬ್ಬ ತುಂಬಾ ಪವಿತ್ರವಾದುದು. ಹೀಗಾಗಿ ವಿಶ್ವದಾದ್ಯಂತ ಮುಸ್ಲಿಂ ಸಮುದಾಯದ (community) ಜನರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇಂದು ಬೆಂಗಳೂರಿನ (Bengaluru) ಚಾಮರಾಜಪೇಟೆಯ (Chamarajpet) ಈದ್ಗಾ ಮೈದಾನದಲ್ಲಿ (Eidgah Maidan) ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmad Khan) ಸೇರಿದಂತೆ ಮುಸ್ಲಿಂ ಸಮುದಾಯದ ಜನರು ಬಕ್ರೀದ್ ಹಿನ್ನೆಲೆಯಲ್ಲಿ ಪ್ರಾರ್ಥನೆ (Prayer) ಸಲ್ಲಿಸಿದ್ರು. ಇನ್ನು ಇದೇ ಈದ್ಗಾ ಮೈದಾನ ಇತ್ತೀಚಿಗೆ ಭಾರೀ ವಿವಾದಕ್ಕೆ (Controversy) ಕಾರಣವಾಗಿತ್ತು. ಇಲ್ಲಿ ಆಟ ಆಡಲು, ಪ್ರಾರ್ಥನೆ ಸಲ್ಲಿಸಲು ನಮಗೂ ಅವಕಾಶ ನೀಡಿ ಅಂತ ಹಿಂದೂ (Hindu) ಪರ ಸಂಘಟನೆಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ಈ ಮೈದಾನವನ್ನು ಆಟದ ಮೈದಾನ (Play Ground) ಅಂತ ಘೋಷಿಸಿತ್ತು. ಹಾಗಿದ್ರೆ ಈದ್ಗಾ ಮೈದಾನ ಎಂದರೇನು? ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದಕ್ಕೆ ಕಾರಣವಾದಿದ್ದೇಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಈದ್ಗಾ ಮೈದಾನ ಎಂದರೇನು?

 ಸಾಮಾನ್ಯ ಅರ್ಥದಲ್ಲಿ ಈದ್ಗಾ ಮೈದಾನ ಎಂದರೆ ಬಕ್ರೀದ್ ಹಾಗೂ ರಂಜಾನ್ ಈ ಎರಡು ಪ್ರಮುಖ ಮುಸ್ಲಿಂ ಹಬ್ಬಗಳಲ್ಲಿ ಸಾರ್ವಜನಿಕ ಪ್ರಾರ್ಥನೆಗಾಗಿ ನಿಗದಿಪಡಿಸಿರುವ ಪ್ರತ್ಯೇಕವಾದ ಸ್ಥಳವೇ ಈದ್ಗಾ ಮೈದಾನ. ಸಾಮಾನ್ಯವಾಗಿ ನಗರದ ಹೊರಗೆ ಅಥವಾ ಹೊರವಲಯದಲ್ಲಿರುವ ಮೈದಾನದಲ್ಲಿ ಇರುವ ಮೈದಾನವನ್ನು ಈದ್ಗಾ ಮೈದಾನ ಅಂತ ಗುರುತು ಮಾಡಲಾಗಿರುತ್ತದೆ. ಇದು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳವಾಗಿದ್ದು, ವರ್ಷದ 2 ಬಾರಿ ಮುಸ್ಲಿಮರ ವಿಶೇಷ ಹಬ್ಬದ ದಿನ ಹೊರತು ಪಡಿಸಿ, ವರ್ಷದ ಇತರ ಸಮಯಗಳಲ್ಲಿ ಪ್ರಾರ್ಥನೆಗೆ ಬಳಸಲಾಗುವುದಿಲ್ಲ.

ಚಾಮರಾಜಪೇಟೆ ಈದ್ಗಾ ಮೈದಾನದ ಇತಿಹಾಸ

ಹಲವು ದಶಕಗಳಿಂದ ಜಮೀನಿನ ವಿವಾದವಿದೆ.  ಹಿಂದೆ ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದಿಂದ 10 ಎಕರೆಗೂ ಹೆಚ್ಚು ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ಸ್ಮಶಾನಕ್ಕಾಗಿ ಹಾಗೂ ಈದ್ಗಾಗಾಗಿ ನೀಡಲಾಗಿತ್ತು. ಈದ್ಗಾ ಮುಸ್ಲಿಂ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕರ್ನಾಟಕ ವಕ್ಫ್ ಬೋರ್ಡ್ 1965 ರಲ್ಲಿ ಈದ್ಗಾ ಮೈದಾನವನ್ನು ತನ್ನ ವಶದಲ್ಲಿರುವಂತೆ ಗೆಜೆಟ್ ಮಾಡಿತು, ಇದನ್ನು ಸಿಎಂಎ ನಡೆಸುತ್ತದೆ.

ದಶಕಗಳ ಕಾನೂನು ಹೋರಾಟ

ದಶಕಗಳ ನಂತರ, ಸುದೀರ್ಘ ಕಾನೂನು ಹೋರಾಟ ನಡೆಯಿತು ಮತ್ತು 1964 ರಲ್ಲಿ, ಸುಪ್ರೀಂ ಕೋರ್ಟ್ ಈ ಭೂಮಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​(ಸಿಎಂಎ) ಗೆ ಸೇರಿದೆ ಎಂದು ಇತ್ಯರ್ಥಪಡಿಸಿತು. ನಂತರ ಈದ್ಗಾ ಮೈದಾನಕ್ಕೆ ಬದಲಿ ಜಾಗ ವ್ಯವಸ್ಥೆ ಮಾಡಲಾಯಿತು. ಬದಲಿ ಜಾಗವನ್ನು ಗೋರಿಪಾಳ್ಯದ ಬಡ ಈದ್ಗಾದಲ್ಲಿ ಕೊಟ್ಟಿದ್ದರು. ಮುಸ್ಲಿಂ ಸಮುದಾಯದವರು ಬಡ ಈದ್ಗಾ ಜಾಗವನ್ನು ಉಪಯೋಗಿಸುತ್ತಾರೆ. ಜೊತೆಗೆ ಇಲ್ಲಿರುವ ಚಾಮರಾಜಪೇಟೆ ಬಿಬಿಎಂಪಿ ಆಟದ ಮೈದಾನ (ಈದ್ಗಾ ಮೈದಾನ, ವಿವಾದಿತ ಜಾಗ) ವನ್ನು ಬಳಕೆ ಮಾಡಿಕೊಳ್ಳುತ್ತಿರುತ್ತಾರೆ ಎಂಬುದು ಈಗಿರುವ ಆರೋಪ.

ಇದನ್ನೂ ಓದಿ: Jamia Masjid Controversy: ಶ್ರೀರಂಗಪಟ್ಟಣದಲ್ಲಿರೋದು ಮಂದಿರವೋ, ಮಸೀದಿಯೋ? ಐತಿಹಾಸಿಕ ಸ್ಥಳ ಈಗ ವಿವಾದಿತ ಪ್ರದೇಶವಾಗಿದ್ದೇಕೆ?

ಹಸು, ಕುರಿ ಮೇಯಲು, ಆಟ ಆಡಲು ಬಳಕೆ

ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ ನಂತರ ವರ್ಷಗಳ ನಂತರ ಭೂಮಿಯ ಗಾತ್ರವು ಎರಡು ಎಕರೆ 10 ಗುಂಟೆಗಳಿಗೆ ಕುಗ್ಗಿತು. ಹಾಗಾಗಿ ಉಳಿದಿರುವುದು ಅಸ್ತಿತ್ವದಲ್ಲಿರುವ ಮಿನ್‌ಬಾರ್‌ನ ಮುಂದೆ ಈದ್ ಪ್ರಾರ್ಥನೆಗಾಗಿ ಭೂಮಿ ಮಾತ್ರ. ವರ್ಷದ ಉಳಿದ ಭಾಗಗಳಲ್ಲಿ, ನಗರವು ವೇಗವಾಗಿ ಬೆಳೆಯುತ್ತಿರುವ ಸ್ಥಳವನ್ನು ಸಾರ್ವಜನಿಕರು ಅನೇಕ ಉದ್ದೇಶಗಳಿಗಾಗಿ ಬಳಸುತ್ತಾರೆ - ಹಸು ಮೇಯಿಸುವುದರಿಂದ ಹಿಡಿದು ಮಕ್ಕಳು ಕ್ರೀಡೆಗಳನ್ನು ಆಡುತ್ತಾರೆ.

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ

ಚಾಮರಾಜಪೇಟೆಯ ಆಟದ ಮೈದಾನವನ್ನೇ ಆಗಿನಿಂದ ಈದ್ಗಾ ಮೈದಾನ ಎಂದು ಕರೆಯಲಾಗುತ್ತದೆಯಂತೆ. 1952ರಿಂದ ಈ ಮೈದಾನದ ವಿಚಾರವಾಗಿ ವಿವಾದ ಪ್ರಾರಂಭವಾಗಿದ್ದು, ಇದೀಗ ಮತ್ತೇ ಮುನ್ನೆಲೆಗೆ ಬಂದಿದೆ.

ವಿವಾದ ಆಗಿದ್ದು ಏಕೆ?

ಇದು ಅಧಿಕೃತವಾಗಿ ಈದ್ಗಾ ಮೈದಾನ ಅಲ್ಲ ಎನ್ನವುದು ಹಿಂದೂಪರ ಸಂಘಟನೆಗಳ ವಾದ. ಇದೇ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ 1952ರಲ್ಲಿ ಇದು ಮುಸ್ಲಿಮರಿಗೆ ಸೇರಿದ ಜಾಗ ಎಂದು ಅಬ್ದುಲ್ ವಾಜೀದ್ ಸಿವಿಲ್ ಕೋರ್ಟ್‍ನಲ್ಲಿ ದಾವೆ ಹೂಡ್ತಾರೆ. ಆದರೆ ಕೋರ್ಟ್‍ನಲ್ಲಿ ಇದು ವಸತಿ ಪ್ರದೇಶ ಆಗಿರುವುದರಿಂದ, ಈ ಈದ್ಗಾ ಮೈದಾನಕ್ಕೆ ಬದಲಿ ಜಾಗವನ್ನು ಕೊಟ್ಟಾಗಿದೆ. ಇದರಲ್ಲಿ ನಿಮಗೆ ಯಾವುದೇ ಹಕ್ಕಿಲ್ಲ ಎಂದು ಅರ್ಜಿ ವಜಾ ಆಗುತ್ತದೆ. 1962ರಲ್ಲಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಹಾಕಿದರೂ, ಮುಸ್ಲಿಮರಿಗೂ, ಈ ಜಾಗಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತೀರ್ಪು ನೀಡಿ 1964ರಲ್ಲಿ ವಜಾ ಆಗುತ್ತದೆ.

 ಹಿಂದೂಪರ ಸಂಘಟನೆಗಳ ವಿರೋಧ

ಇಲ್ಲಿ ಮುಸ್ಲಿಮರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ, ಈದ್ಗಾ ಮೈದಾನವನ್ನು ನೆಲಸಮ ಮಾಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಸಂಘದ ಅಧ್ಯಕ್ಷ ಎಸ್. ಭಾಸ್ಕರನ್ ಎಚ್ಚರಿಸಿದ್ದರು. ಕೋರ್ಟ್ ಆದೇಶವಿದ್ದರೂ ಧಾರ್ಮಿಕ ಆಚರಣೆಗೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ಮುಸ್ಲಿಂ ಸಮುದಾಯದವರು ಹಿಂದೂಗಳ ಧಾರ್ಮಿಕ ಆಚರಣೆಗೆ ವಿರೋಧಿಸುತ್ತಿಲ್ಲ. ಆದರೆ, ಕ್ಷೇತ್ರದ ಶಾಸಕರು ಪೊಲೀಸರ ಮೂಲಕ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಸ್ಥಳೀಯ ಶಾಸಕ ಜಮೀರ್ ವಿರುದ್ಧ ಕಿಡಿಕಾರಿದ್ದರು.

ನಮಗೂ ಅವಕಾಶ ಬೇಕು ಎಂದ ಹಿಂದೂ ಸಂಘಟನೆಗಳು

ಈಗಾಗಲೇ ಈದ್ಗಾ ಮೈದಾನ ಬಿಬಿಎಂಪಿಯ ಆಟದ ಮೈದಾನವಾಗಿದೆ. ಆದರೆ ಇಲ್ಲಿ ಸಾರ್ವಜನಿಕ ಚಟುವಟಿಕೆಗೆ ನಿಷೇಧ ಹೇರಿ, ಒಂದು ಸಮೂದಾಯಕ್ಕೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ ಎಂದು ಕೆಲ ಹಿಂದೂಪರ ಸಂಘಟನೆಗಳು ಧ್ವನಿ ಎತ್ತಿದ್ದವು.

ಈ ಬಗ್ಗೆ ಬಿಬಿಎಂಪಿ ದಾಖಲೆಗಳು ಹೇಳುವುದೇನು?

ಈದ್ಗಾ ಮೈದಾನ ಬಿಬಿಎಂಪಿಯ ಸ್ವತ್ತಾಗಿದ್ದು, ಆಟದ ಮೈದಾನ, ಪಿಐಡಿ ನಂ. 46-8-2 ಬಿಬಿಎಂಪಿ ಸ್ವತ್ತುಗಳಾಗಿವೆ. ಇದರ ಜೊತೆಗೆ ದರ್ಗಾ ಬಿಬಿಎಂಪಿ ಸ್ವತ್ತು ಎಂದು ದಾಖಲೆಯಲ್ಲಿದೆ. 2 ಎಕರೆಯಲ್ಲಿರುವ ಮೈದಾನದಲ್ಲಿ 941 ಚದರಡಿ ಈದ್ಗಾ ಗೋಡೆಯಿದೆ. 941 ಅಡಿ ದರ್ಗಾ ಇದ್ದು, ಉಳಿದದ್ದು ಬಿಬಿಎಂಪಿ ಸ್ವತ್ತಾಗಿದೆ ಅಂತ ಹೇಳಿದೆ ಎನ್ನಲಾಗಿದೆ. ಈ ಜಮೀನು ಬಿಬಿಎಂಪಿ ಪಶ್ಚಿಮ ವಿಭಾಗಕ್ಕೆ ಸೇರಿದ್ದು, 1964ರ ಎಸ್‌ಸಿ ತೀರ್ಪಿನ ಪ್ರಕಾರ, ಈದ್ ಪ್ರಾರ್ಥನೆ ಸಲ್ಲಿಸುವ ದಿನಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಉದ್ದೇಶಕ್ಕಾಗಿ ಮೈದಾನವನ್ನು ಬಳಸಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಇನ್ನು ವಿವಾದದಿಂದಾಗಿ ಇದೀಗ ಈದ್ಗಾ ಮೈದಾನ ಸೂಕ್ಷ್ಮ ಪ್ರದೇಶವಾಗಿ ಮಾರ್ಪಟ್ಟಿದೆ.

2 ದಿನ ಹೊರತು ಪಡಿಸಿ ಬೇರೆಯದಕ್ಕೆ ಅವಕಾಶವಿಲ್ಲ

ಈದ್ಗಾ ಮೈದಾನ ಅತಿಸೂಕ್ಷ್ಮ ಪ್ರದೇಶ ಆಗಿರೋದ್ರಿಂದ ಮುಸ್ಲಿಂ ಸಮುದಾಯದ ರಂಜಾನ್, ಬಕ್ರಿದ್ ಆಚರಣೆ ಹೊರತುಪಡಿಸಿ ಯಾವ ಧಾರ್ಮಿಕ ಆಚರಣೆಗಳಿಗೂ ಪೊಲೀಸರಿಂದ ಅವಕಾಶವಿಲ್ಲ. ಆರ್‌ಎಸ್‍ಎಸ್ ಪಥ ಸಂಚಲನ, ಧಾರ್ಮಿಕ ಆಚರಣೆಗಳು, ಇತರೆ ಕಾರ್ಯಕ್ರಮ ಮಾಡಲು ಹೊರಟಾಗ ಪೊಲೀಸರು ಠಾಣೆಯಿಂದ ಅವಕಾಶ ಕೊಟ್ಟಿರಲಿಲ್ಲ.

ಹೆಸರು ಬದಲಾವಣೆಗೆ ನಿರ್ಧಾರ?

ಈದ್ಗಾ ಮೈದಾನದ ಹೆಸರನ್ನು ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಎಂದು ಮರುನಾಮಕರಣ ಮಾಡಲು ನಾಗರಿಕರ ಒಕ್ಕೂಟ ನಿರ್ಧಾರ ಮಾಡಿದೆ. ಮೈಸೂರು ಸಂಸ್ಥಾನದ ನೆನಪಿಗೋಸ್ಕರ ಜಯಚಾಮರಾಜೇಂದ್ರ ಹೆಸರಿಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?

 ಹಿಂದೂ ಸಂಘಟನೆಗಳಿಂದ ಡೆಡ್‌ಲೈನ್

ಈದ್ಗಾ ಮೈದಾನ, ಸಾರ್ವಜನಿಕರ ಸ್ವತ್ತು. ಪಾಲಿಕೆಯ ಆಟದ ಮೈದಾನ. ಮುಸ್ಲಿಂ ಸ್ವತ್ತಲ್ಲ ಎಂದು ಮೊದಲಿಗೆ ವಿಶ್ವ ಸನಾತನ ಪರಿಷತ್ ಸಂಘ ಧ್ವನಿ ಎತ್ತಿತ್ತು. ಈದ್ಗಾ ಗೋಡೆಗೆ, ಮುಸ್ಲಿಂ ದರ್ಗಾ ಅಂತ ಖಾತೆ ಮಾಡಿಕೊಡಲಾಗಿದೆ. ಈ ಖಾತೆಯನ್ನು ಕ್ಯಾನ್ಸಲ್ ಮಾಡಿ. ಗೋಡೆಯನ್ನ ತೆರವು ಮಾಡಬೇಕು. ಸಾಂಸ್ಕೃತಿಕ, ಧಾರ್ಮಿಕ, ರಾಷ್ಟ್ರಿಯ ಆಚರಣೆ, ಆಟ, ಇತರೆ ಕಾರ್ಯಕ್ರಮಗಳು ಈ ಮೈದಾನದಲ್ಲಿ ನಡೆಯಬೇಕು. ಈದ್ಗಾ ಮೈದಾನದಲ್ಲಿ ಕುರಿ, ಮೇಕೆ ಮಾರಾಟ ನಿಲ್ಲಬೇಕು. ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ಮಧ್ಯಪ್ರವೇಶ ಮಾಡಿ, ಹಿಂದೂ ಆಚರಣೆಗಳಿಗೆ ಮೈದಾನದಲ್ಲಿ ಅವಕಾಶ ನೀಡದಿದ್ರೆ ಈದ್ಗಾ ಮೈದಾನವನ್ನ ನೆಲಸಮ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದೆ.
Published by:Annappa Achari
First published: