ಬೆಂಗಳೂರು: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಬೆಂಗಳೂರಲ್ಲಿ (Bengaluru) ಇ-20 ಇಂಧನವನ್ನು (E-20 Fuel) ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇ-20 ಇಂಧನ ಬಿಡುಗಡೆಗೊಳಿಸಿದ ನರೇಂದ್ರ ಮೋದಿ, ಗ್ರೀನ್ ಮೊಬಿಲಿಟಿ ರ್ಯಾಲಿಗೆ (Green Mobility Rally) ಚಾಲನೆ ನೀಡಿದ್ರು. ಹಸಿರು ಇಂಧನದಿಂದ (green fuel) ಇಂಧನ ತುಂಬಿದ ವಾಹನಗಳನ್ನು ಪ್ರದರ್ಶಿಸುವುದರ ಜೊತೆಗೆ, ಹಸಿರು ಇಂಧನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ರ್ಯಾಲಿ ನಡೆಯಿತು. ಅಂದಹಾಗೆ ಏನಿದು ಇ-20 ಇಂಧನ? ಇದರ ಲಾಭಗಳೇನು? ಭಾರತದ ವಾಹನ ಸವಾರರಿಗೆ ಇದರಿಂದ ಪ್ರಯೋಜನವಿದೆಯೇ? ಪರಿಸರ ಸಂರಕ್ಷಣೆಯಲ್ಲಿ ಇದರ ಪಾತ್ರವೇನು? ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಆಗಲಿದೆಯೇ? ನಿಮ್ಮ ಈ ಎಲ್ಲಾ ಪ್ರಶ್ನಿಗಳಿಗೆ ಉತ್ತರ ಇಲ್ಲಿದೆ…
ಏನಿದು ಇ-20 ಇಂಧನ?
20% ಎಥೆನಾಲ್ ಜೊತೆಗೆ ಪೆಟ್ರೋಲ್ ಸೇರಿಸಿ E20 ಇಂಧನವನ್ನು ಪರಿಚಯಿಸಲಾಗಿದೆ. ಅಂದರೆ ಇ-20 ಇಂಧನದಲ್ಲಿ ಶೇಕಡಾ 20 ಎಥೆನಾಲ್ ಮತ್ತು ಶೇಕಡಾ 80ರಷ್ಟು ಪೆಟ್ರೋಲ್ ಮಿಶ್ರಣ ಇರುತ್ತದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಥೆನಾಲ್ ಮಿಶ್ರಣ
E20 ಇಂಧನದ ಹೆಸರಿನಲ್ಲಿರುವ 20ರ ಸಂಖ್ಯೆಯು ಪೆಟ್ರೋಲ್ ಮಿಶ್ರಣದಲ್ಲಿ ಎಥೆನಾಲ್ ಪ್ರಮಾಣವನ್ನು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಸಂಖ್ಯೆ ಹೆಚ್ಚಾದಷ್ಟೂ ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚುತ್ತದೆ. ಭಾರತದ ಪ್ರಸ್ತುತ ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣವು ಶೇಕಡಾ 10 ರಷ್ಟಿದೆ, ಇದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಇದನ್ನೂ ಓದಿ: Bharat Jodo Yatra: ಸಕ್ಸಸ್ ಆಯ್ತಾ ಭಾರತ್ ಜೋಡೋ ಪಾದಯಾತ್ರೆ? ನಡಿಗೆಯಿಂದ ರಾಹುಲ್ 'ಕೈ'ಗೆ ಸಿಕ್ಕಿತಾ ಬೆಂ'ಬಲ'?
ಸಸ್ಯಜನ್ಯ ಮೂಲಗಳಿಂದ ತಯಾರಾಗುವ ಎಥೆನಾಲ್
ಎಥೆನಾಲ್ ಅನ್ನು ಸಸ್ಯಜನ್ಯಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ಅದಕ್ಕೆ ಯಾವುದೇ ರೀತಿಯ ಕಚ್ಚಾ ತೈಲದ ಅಗತ್ಯವಿಲ್ಲ. ಎಥೆನಾಲ್ ಅನ್ನು ಹೆಚ್ಚಾಗಿ ಜೋಳ ಮತ್ತು ಕಬ್ಬಿನಂತಹ ಬೆಳೆಗಳಿಂದ ಪಡೆಯಲಾಗುತ್ತದೆ. ಭಾರತವು ಈಗಾಗಲೇ ಗಣನೀಯ ಪ್ರಮಾಣದ ಧಾನ್ಯ ಮತ್ತು ಕಬ್ಬನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಎಲ್ಲಾ ರೀತಿಯ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಅನ್ನು ಬಳಸಲು ಸಾಧ್ಯವಾಗುವಂತೆ ಮಾಡಬಹುದು.
ಮಾಲಿನ್ಯ ಕಡಿಮೆ ಮಾಡಲು ಸಹಾಯಕ
ಎಥೆನಾಲ್ ತಯಾರಿಕೆಗೆ ಕಚ್ಚಾ ತೈಲದ ಅಗತ್ಯಲವಿಲ್ಲ. ಹೀಗಾಗಿ ಕಡಿಮೆ ಪರಿಸರ ಮಾಲಿನ್ಯದಿಂದಾಗಿ ಜೈವಿಕ ಇಂಧನವು ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬಳಸಿದರೆ, ಇದು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ ಸಾಧ್ಯತೆ
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಏಕೆಂದರೆ ಭಾರತದ ಇಂಧನ ಅಗತ್ಯತೆಗಳಲ್ಲಿ ಸುಮಾರು ಶೇಕಡಾ 85ರಷ್ಟು ಡೀಸೆಲ್, ಪೆಟ್ರೋಲ್ ವಿದೇಶಗಳಿಂದಲೇ ಪೂರೈಕೆಯಾಗುತ್ತಿದೆ. ಇದರ ಪರಿಣಾಮವಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ. ಆದರೆ ಇದೀಗ ಭಾರತದಲ್ಲಿ 20% ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಬಳಕೆಯು ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಪರಿಣಾಮ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.
ಕೃಷಿಗೂ ಪ್ರೋತಾಹ
20% ಎಥೆನಾಲ್ ಇಂಧನದ ಬಳಕೆಯು ಹೆಚ್ಚಾದಾಗ ಎಥೆನಾಲ್‌ಗೆ ಬೇಕಾದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಬಂದು, ಕೃಷಿಕರಿಗೆ ಲಾಭವಾಗಲಿದೆ. ಇದು ದೇಶದ ಕೃಷಿ ಉದ್ಯಮದ ಅಭಿವೃದ್ಧಿಗೂ ಕಾರಣವಾಗಲಿದೆ.
ಇ20 ಇಂಧನ ಬಳಸುವ ಕಾರುಗಳೇ ಇಲ್ಲವೇ?
E20 ಗ್ಯಾಸೋಲಿನ್‌ನಲ್ಲಿ ಚಲಿಸಬಹುದಾದ ಹೆಚ್ಚಿನ ಕಾರುಗಳು ಭಾರತದಲ್ಲಿ ಇಲ್ಲ. ಆದರೆ ಹ್ಯುಂಡೈ ಮೋಟಾರ್‌ನ ಕ್ರೆಟಾ, ವೆನ್ಯೂ ಮತ್ತು ಅಲ್ಕಾಜರ್ ಎಸ್‌ಯುವಿಗಳು 2023 ರ MY ಮಾದರಿ ವರ್ಷದಲ್ಲಿ E20 ಗ್ಯಾಸೋಲಿನ್‌ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಟಾಟಾ ಮೋಟಾರ್ಸ್ ಎರಡು ಹೊಸ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಳನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿತು. ಟಾಟಾ ತನ್ನ 4 ಮೀಟರ್‌ಗಿಂತಲೂ ಉದ್ದದ ವಾಹನಗಳು ಶೀಘ್ರದಲ್ಲೇ E20 ಇಂಧನ-ಹೊಂದಾಣಿಕೆಯ ಎಂಜಿನ್‌ಗಳನ್ನು ಹೊಂದಲಿದೆ ಎಂದು ಹೇಳಿದೆ. ಏಪ್ರಿಲ್ 2023 ರ ವೇಳೆಗೆ, ಮಹೀಂದ್ರಾ, ಮಾರುತಿ ಸುಜುಕಿ , ಕಿಯಾ ಮತ್ತು ಇತರರು ತಯಾರಿಸಿದ ವಾಹನಗಳಿಗೆ ಈ ಇಂಧನ ಬಳಸಬಹುದು ಎನ್ನಲಾಗುತ್ತಿದೆ.
ವಾಹನ ಸವಾರರಿಗೆ ಯಾವಾಗ ಸಿಗುತ್ತದೆ?
ಭಾರತದಲ್ಲಿ ಶೀಘ್ರದಲ್ಲೇ E20 ಇಂಧನವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎನ್ನಲಾಗುತ್ತದೆ.
(ಮಾಹಿತಿ: ವಿವಿಧ ಮೂಲಗಳಿಂದ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ