ಸದ್ಯ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ (Chief Minister), ಉಪ ಮುಖ್ಯಮಂತ್ರಿ (Deputy Chief Minister) ಹಾಗೂ ಹೊಸ ಸರ್ಕಾರದ (government) ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ (assembly election) ಸುಲಭವಾಗಿ ಗೆದ್ದ ಕಾಂಗ್ರೆಸ್, ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ವಿಚಾರಕ್ಕೆ ತಲೆಕೆಡಿಸಿಕೊಂಡಿತ್ತು. ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು, ಪಟ್ಟು ಹಿಡಿದು ಕುಳಿತಿದ್ದರು. ಹೈಕಮಾಂಡ್ ಮಾತಿಗೂ ಬಗ್ಗದೇ ಇಬ್ಬರೂ ನಾಯಕರು ಹಠ ಸಾಧಿಸಿದ್ದರು. ಕೊನೆಗೂ ಏನೋನೋ ಸರ್ಕಸ್ ಮಾಡಿ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಘೋಷಿಸಲಾಯ್ತು. ಡಿಕೆ ಶಿವಕುಮಾರ್‌ರನ್ನು ಉಪ ಮುಖ್ಯಮಂತ್ರಿ (DCM) ಮಾಡೋದಾಗಿ ಭರವಸೆ ನೀಡಲಾಯ್ತು. ಡಿಕೆ ಶಿವಕುಮಾರ್ ಏನೋ ಮೆತ್ತಗಾದಂತೆ ಕಂಡರೂ, ಅವರ ಆಪ್ತರಿಗೆ ಡಿಸಿಎಂ ಹುದ್ದೆ ತೃಪ್ತಿ ನೀಡಿದಂತಿಲ್ಲ. ಡಿಸಿಎಂ ಎನ್ನುವುದು ಅಧಿಕಾರವಿಲ್ಲದ ಅಲಂಕಾರಿಕ ಹುದ್ದೆ ಅಂತಿದ್ದಾರೆ. ಹಾಗಾದರೆ ಉಪ ಮುಖ್ಯಮಂತ್ರಿ ಸ್ಥಾನದ ಮಹತ್ವವೇನು? ಡಿಸಿಎಂ ಅಧಿಕಾರಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ…
ಡಿಸಿಎಂ ಎನ್ನುವುದು ಸಾಂವಿಧಾನಿಕ ಹುದ್ದೆಯಲ್ಲ!
ಉಪ ಮುಖ್ಯಮಂತ್ರಿ ಸ್ಥಾನ ತಾಂತ್ರಿಕವಾಗಿ ಸಾಂವಿಧಾನಿಕ ಹುದ್ದೆಯಲ್ಲ. ಇದು ಯಾವುದೇ ನಿರ್ದಿಷ್ಟ ಅಧಿಕಾರವನ್ನೂ ಹೊಂದಿಲ್ಲ. ಉಪಮುಖ್ಯಮಂತ್ರಿ ಸಾಮಾನ್ಯವಾಗಿ ಗೃಹಮಂತ್ರಿ ಅಥವಾ ಹಣಕಾಸು ಸಚಿವರಂತಹ ಪ್ರಮುಖ ಕ್ಯಾಬಿನೆಟ್ ಪೋರ್ಟ್ ಪೋಲಿಯೋವನ್ನು ಹೊಂದಿರುತ್ತಾರೆ. ಉಪಮುಖ್ಯಮಂತ್ರಿ ಸ್ಥಾನವನ್ನು ಸಮ್ಮಿಶ್ರ ಸರ್ಕಾರದೊಳಗೆ ರಾಜಕೀಯ ಸ್ಥಿರತೆ ಮತ್ತು ಬಲವನ್ನು ತರಲು ಸೃಷ್ಟಿಸಲಾಗುತ್ತದೆ.
ವಾಸ್ತವವಾಗಿ, ಉಪಮುಖ್ಯಮಂತ್ರಿ ಹುದ್ದೆಗೆ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವರಿಗಿಂತ ಹೆಚ್ಚಿನ ಮಹತ್ವವಿಲ್ಲ. ಉಪ ಮುಖ್ಯಮಂತ್ರಿಗೆ ಮತ್ತೊಂದು ಪ್ರಮುಖ ಇಲಾಖೆ ಜವಾಬ್ದಾರಿಯೂ ಇರುತ್ತದೆ. ಅದರ ಹೊರತಾಗಿ ಡಿಸಿಎಂ ಅಂತ ಬೇರೆ ಹೆಚ್ಚಿನ ಅಧಿಕಾರ ಇರುವುದಿಲ್ಲ.
ಇದನ್ನೂ ಓದಿ: Karnataka CM: ಮುಖ್ಯಮಂತ್ರಿಗಳ ಸಂಬಳ ಎಷ್ಟು? ಸಿಎಂ ಆಗಲು ಏನೆಲ್ಲಾ ಅರ್ಹತೆಗಳಿರಬೇಕು ಗೊತ್ತಾ?
ಅಧಿಕಾರಿಗಳ ವರ್ಗಾವಣೆಯಲ್ಲಿ ಇವರ ಪಾತ್ರವಿಲ್ಲ
ರಾಜ್ಯದಲ್ಲಿ 1ನೇ ವರ್ಗದ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ನ ಏಕೈಕ ಅಧಿಕಾರ ಮುಖ್ಯಮಂತ್ರಿಗಳ ಬಳಿ ಇರುತ್ತದೆ. ಈ ವಿಚಾರದಲ್ಲಿ ಉಪಮುಖ್ಯಮಂತ್ರಿ ಅವರ ಮಾತೇ ಇಲ್ಲ. ಸರ್ಕಾರದ ಇತರ ಕ್ಯಾಬಿನೆಟ್ ದರ್ಜೆಯ ಸಚಿವರು ಅನುಭವಿಸುವ ವೇತನ ಮತ್ತು ಸವಲತ್ತುಗಳನ್ನು ಉಪಮುಖ್ಯಮಂತ್ರಿ ಪಡೆಯುತ್ತಾರೆ. ಆದಾಗ್ಯೂ, ಅವರು ತೆರಿಗೆ-ಮುಕ್ತ ಪಾವತಿ ಮತ್ತು ಪ್ರಯೋಜನಗಳನ್ನು ಪಡೆಯಬಹುದು.
ಆಡಳಿತದ ವಿಷಯಗಳಲ್ಲಿ, ಮುಖ್ಯಮಂತ್ರಿಗಳಿಗೆ ಮೀಸಲಿಟ್ಟ ಕಡತಗಳನ್ನು ನೋಡಲು ಉಪಮುಖ್ಯಮಂತ್ರಿಗಳಿಗೆ ಯಾವುದೇ ಅಧಿಕಾರವಿಲ್ಲ. ವಾಸ್ತವವಾಗಿ, ಉಪಮುಖ್ಯಮಂತ್ರಿ ಅವರು ತನಗೆ ಹಂಚಿಕೆಯಾದ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಫೈಲ್‌ಗಳನ್ನು ಕ್ಲಿಯರೆನ್ಸ್‌ಗಾಗಿ ಮುಖ್ಯಮಂತ್ರಿಗೆ ರವಾನಿಸಬೇಕಾಗುತ್ತದೆ.
ಇತರೇ ಇಲಾಖೆಗಳಿಗೆ ನಿರ್ದೇಶನ ನೀಡುವಂತಿಲ್ಲ!
ಉಪಮುಖ್ಯಮಂತ್ರಿ ಸ್ವತಃ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಲು ಅಥವಾ ಮುಖ್ಯಮಂತ್ರಿಗಳು ತನಗೆ ನಿಗದಿಪಡಿಸಿದ ಇತರ ಇಲಾಖೆಗಳಿಗೆ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ. ಉಪಮುಖ್ಯಮಂತ್ರಿ, ಇತರ ಯಾವುದೇ ಸಚಿವರಂತೆ, ತಮ್ಮ ಇಲಾಖೆಗಳಿಗೆ ಮೀಸಲಿಟ್ಟ ಬಜೆಟ್‌ಗಿಂತ ಹೆಚ್ಚಿನ ವೆಚ್ಚಕ್ಕಾಗಿ ಮುಖ್ಯಮಂತ್ರಿಯಿಂದ ಕ್ಲಿಯರೆನ್ಸ್ ಪಡೆಯಬೇಕಾಗಿದೆ.
ಸರ್ಕಾರದಲ್ಲಿ ನಂಬರ್ 2ನೇ ಸ್ಥಾನವೇ?
ಉಪಮುಖ್ಯಮಂತ್ರಿಗಳು ರಾಜಕೀಯವಾಗಿ ಮಹತ್ವ ಪಡೆದಿದ್ದಾರೆ. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಇವರಿಗೆ ಮಹತ್ವವಿರುತ್ತದೆ. ಸಾಮಾನ್ಯವಾಗಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡ ನಾಯಕ ಸರ್ಕಾರದಲ್ಲಿ ನಂಬರ್ 2 ಅಂತ ಅಂದುಕೊಳ್ಳಲಾಗುತ್ತದೆ. ಇನ್ನು ಪ್ರಮಾಣವಚನ ಸ್ವೀಕಾರದಲ್ಲಿಯೂ ಸಹ, ಸಂವಿಧಾನ ಅಥವಾ ಪ್ರಮಾಣವಚನ ಸಮಾವೇಶವು ಉಪಮುಖ್ಯಮಂತ್ರಿಗೆ ಪ್ರತ್ಯೇಕ ಪ್ರಮಾಣವಚನವನ್ನು ಒದಗಿಸುವುದಿಲ್ಲ.
ಇದನ್ನೂ ಓದಿ: Congress Guarantee: ಕಾಂಗ್ರೆಸ್ ಭರವಸೆ ಈಡೇರೋದು ‘ಗ್ಯಾರಂಟಿ’ನಾ? ಕೊಟ್ಟ ಮಾತು ಉಳಿಸಿಕೊಳ್ಳಲು ಬೇಕು 62 ಸಾವಿರ ಕೋಟಿ!
ಡಿಸಿಎಂ ಸ್ಥಾನ ಸೃಷ್ಟಿಗೆ ವಿರೋಧ
ಇನ್ನು ಕರ್ನಾಟಕದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಗೆ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ವಿರೋಧ ವ್ಯಕ್ತಪಡಿಸಿದ್ದಾರೆ. ''ಉಪ ಮುಖ್ಯಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಅವಕಾಶವಿಲ್ಲದೇ ಇದ್ದರೂ ಸಹಿತ, ಪ್ರತಿಯೊಂದು ಸರ್ಕಾರಗಳಲ್ಲಿ ನೇಮಕ ಮಾಡಲಾಗುತ್ತಿದೆ. ಸಂವಿಧಾನದ ಅನುಚ್ಛೇಧ 163-164ರಲ್ಲಿ ಎಲ್ಲಿಯೂ ಉಪ-ಮುಖ್ಯಮಂತ್ರಿಗಳ ನೇಮಕಾತಿಯ ಬಗ್ಗೆ ಪ್ರಸ್ತಾಪ ಇರುವುದಿಲ್ಲ. ಹೀಗಾಗಿ ಈಗ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿರದ ಉಪ-ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಅವಕಾಶ ನೀಡಬಾರದು ಅಂತ ಅವರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ