Explained: ಕೊರತೆ ಮೂಲಕ ಚರ್ಚೆಯಲ್ಲಿರುವ ಕಲ್ಲಿದ್ದಲು ಎಂದರೇನು? ಅಭಾವ ಸೃಷ್ಟಿಯಾಗಲು ಕಾರಣವೇನು?

Thermal power plant ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ 153.669 ಮಿ.ಯೂನಿಟ್‌  ವಿದ್ಯುತ್‌ ಬೇಡಿಕೆ ಇದೆ. ಆದರೆ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವ ಕಾರಣ ರಾಯಚೂರು, ಬಳ್ಳಾರಿ ಮತ್ತು ಯರಮರಸ್‌ನ 13 ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ 6 ಘಟಕಗಳನ್ನು ಮಾತ್ರ ಚಾಲನೆಯಲ್ಲಿಡಲಾಗಿದೆ.

ಕೋಲ್.

ಕೋಲ್.

  • Share this:
ದೇಶದೆಲ್ಲೆಡೆ ಕಲ್ಲಿದ್ದಲು (Coal) ಅಭಾವ ತಲೆದೋರಿದೆ. ಇದಕ್ಕೆ ನಾನಾ ಹಲವು ಕಾರಣಗಳಿವೆ. ಒಂದು ವೇಳೆ ಕಲ್ಲಿದ್ದಲು ಕೊರತೆಯಾದರೆ, ಅದರಿಂದ ದೇಶದ ಮೇಲೆ ಮತ್ತಷ್ಟು ಅನಾನುಕೂಲ ಪರಿಣಾಮ ಬೀರಲಿದೆ. ಮುಖ್ಯವಾಗಿ ಇಡೀ ದೇಶದ ಜನರು ದಿನದ ಬಹುತೇಕ ಸಮಯವನ್ನು ಕತ್ತಲೆಯಲ್ಲಿ ಕಳೆಯಬೇಕಾದ ಅನಿವಾರ್ಯತೆ ಎದುರಾಗಬಹುದು. ಮುಖ್ಯವಾಗಿ ಕಲ್ಲಿದ್ದಲನ್ನು ಉಷ್ಣ ವಿದ್ಯುತ್ ಸ್ಥಾವರಳಲ್ಲಿ (Thermal power plant) ಬಳಸಿಕೊಂಡು ವಿದ್ಯುತ್ (Power Production) ತಯಾರಿಸಲಾಗುತ್ತದೆ. ದೇಶದಲ್ಲಿ ಬಹುತೇಕ ಭಾಗ ವಿದ್ಯುತ್ ತಯಾರಾಗುವುದು ಈ ಉಷ್ಣ ವಿದ್ಯುತ್ ಸ್ಥಾವರಗಳಿಂದಲೇ. ಹೀಗಾಗಿ ಕಲ್ಲಿದ್ದಲು ಅತ್ಯಗತ್ಯ ಅನಿವಾರ್ಯ ವಸ್ತುಗಳಲ್ಲಿ ಒಂದಾಗಿದೆ. ಹಾಗಾದರೆ ಈ ಕಲ್ಲಿದ್ದಲು ಅಂದರೇನು? ಕಲ್ಲಿದ್ದಲು ಕೊರತೆ ಉಂಟಾಗಲು ಕಾರಣವೇನು ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕಲ್ಲಿದ್ದಲು ಎಂದರೇನು?

ಸಸ್ಯ ಪದಾರ್ಥಗಳು ಸಹಸ್ರಾರು ವರ್ಷ ಭೂ ಗರ್ಭದಲ್ಲಿ ಹೂತುಹೋಗಿ, ಕೊಳೆತು, ಅನೇಕ ಭೌತ ಜೈವ ರಾಸಾಯನಿಕ ಪರಿವರ್ತನೆಗಳನ್ನು ಹೊಂದಿ ಉತ್ಪನ್ನವಾಗುವ, ಒತ್ತಾದ ಪದರವಿರುವ ಇಂಗಾಲದ ವಸ್ತುವೇ ಕಲ್ಲಿದ್ದಲು. ಮುಖ್ಯವಾದ ಖನಿಜೇಂಧನಗಳಲ್ಲಿ ಇದು ಒಂದು. ಉಷ್ಣಶಕ್ತಿಗೆ ಒಂದು ಪ್ರಧಾನ ಮೂಲ. ಪ್ರಪಂಚದಲ್ಲಿನ ಶಕ್ತಿಯ ಉತ್ಪನ್ನದಲ್ಲಿ ಸುಮಾರು ಅರ್ಧದಷ್ಟು ಕಲ್ಲಿದ್ದಲಿನಿಂದಲೇ ಆಗುವುದು. ಆದ್ದರಿಂದ ಇದನ್ನು ಕೈಗಾರಿಕೆಯ ಬೆನ್ನುಮೂಳೆ ಎನ್ನುವುದುಂಟು. ಕೋಕ್ ಕುಲುಮೆಯಂತ್ರಗಳಲ್ಲಿಯೂ ಅನಿಲ ಕಾರ್ಖಾನೆಗಳಲ್ಲಿಯೂ ಕಲ್ಲಿದ್ದಲೇ ಮೂಲ ಕಚ್ಚಾ ಸಾಮಗ್ರಿ.

ಕಲ್ಲಿದ್ದಲು ಉಂಟಾಗುವ ಬಗೆ?

ನಿಸರ್ಗದಲ್ಲಿ ಕಲ್ಲಿದ್ದಲು ಉಂಟಾಗುವ ಬಗೆಯಲ್ಲಿ ಎರಡು ಸ್ಪಷ್ಟ ಹಂತಗಳನ್ನು ಗುರುತಿಸಲಾಗಿದೆ. ಮೊದಲಿನದು ಜೀವರಾಸಾಯನಿಕ ಪ್ರಕ್ರಿಯೆ (ಹ್ಯೂಮಿಫಿಕೇಶನ್ ಪ್ರೋಸೆಸ್). ಪ್ರಾಚೀನ ಕಾಲದಲ್ಲಿ ಸರೋವರಗಳ ಸುತ್ತಮುತ್ತ, ಜೌಗುಪ್ರದೇಶಗಳಲ್ಲಿ, ಕಣಿವೆಗಳಲ್ಲಿ ವಿಫುಲವಾಗಿ ಬೆಳೆದಿದ್ದ ಮರಗಳು ಬಿದ್ದು ಕೊಳೆತು ಏಕಾಣುಜೀವಿಗಳ ನಿರಂತರ ಕ್ರಿಯೆಯಿಂದ ಶಿಥಿಲವಾಗಿ ವಿಘಟನೆಗೊಂಡುವು. ಇದರ ಪರಿಣಾಮ ಸಸ್ಯಗಳಲ್ಲಿದ್ದ ಪ್ರೋಟೀನುಗಳು, ಕೊಬ್ಬುಗಳು, ಕಾರ್ಬೊಹೈಡ್ರೇಟುಗಳು ಮುಂತಾದ ರಾಸಾಯನಿಕ ವಸ್ತುಗಳು ರಾಸಾಯನಿಕ ಕ್ರಿಯೆಗಳಿಗೆ ಒಳಗಾಗಿ ಸಾರಜನಕದಿಂದ ತುಂಬಿರುವ ಕೆಲವು ಕಪ್ಪು ಬಣ್ಣದ ಹ್ಯೂಮಿನ ವಸ್ತುಗಳಾಗಿ ಪರಿವರ್ತನೆಗೊಂಡವು. ಇವು ಸೂಕ್ಷ್ಮತಂತುಗಳಿಂದ ಕೂಡಿದ ಪುಡಿಮಾಡಬಹುದಾದ ಕಪ್ಪು ಬಣ್ಣದ ಸರಂಧ್ರಕ ವಸ್ತುಗಳು, ಪೀಟ್ ಅಥವಾ ಸಸ್ಯಾಂಗಾರ ಎಂದು ಇವುಗಳ ಹೆಸರು. ಸಸ್ಯಗಳ ಮೂಲ ರಚನೆಯನ್ನು ಸಸ್ಯಾಂಗಾರದ ಮೇಲೆ ಚೆನ್ನಾಗಿ ಗುರುತಿಸಬಹುದು.

ಕಲ್ಲಿದ್ದಲು ಕೊರತೆಗೆ ಕಾರಣಗಳೇನು?

ಭಾರೀ ಮಳೆ

ಈ ಬಾರಿಯ ಮುಂಗಾರು ದೀರ್ಘವಾಗಿದೆ. ಛತ್ತೀಸ್​ಗಢ, ಜಾರ್ಖಂಡ್​ನಲ್ಲಿ ಬಹುತೇಕ ಕಲ್ಲಿದ್ದಲು ಗಣಿಗಳು ಜಲಾವೃತವಾಗಿ ಕಲ್ಲಿದ್ದಲ್ಲನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಮುಂಗಾರಿನ ಅವಧಿಯಲ್ಲಿ ಎಷ್ಟೋ ದಿನ ಕಲ್ಲಿದ್ದಲು ಗಣಿಗಳು ಕಾರ್ಯನಿರ್ವಹಿಸುವುದಿಲ್ಲ. ಆ ಅವಧಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸಿಲ್ಲ. ಆದರೆ, ಅದೇ ಅವಧಿಯಲ್ಲಿ ಕಲ್ಲಿದ್ದಲು ಗಣಿಗಳು ಕಾರ್ಯಾರಂಭ ಮಾಡದೆ ಇದ್ದ ಕಾರಣ ಕಲ್ಲಿದ್ದಲು ಪೂರೈಕೆ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಹೀಗಾಗಿ ಕಲ್ಲಿದ್ದಲು ಕೊರತೆಯಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದ ಬೇಡಿಕೆ ಮತ್ತು ಬೆಲೆ

ಜಾಗತಿಕ ಮಟ್ಟದಲ್ಲೂ ಕಲ್ಲಿದ್ದಲಿನ ಸಮಸ್ಯೆ ಉಂಟಾಗಿದೆ. ಚೀನಾ, ಆಫ್ರಿಕಾ, ಮತ್ತು ದಕ್ಷಿಣ ಅಮೆರಿಕದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಹಲವು ದೇಶಗಳಿಗೆ ಕಲ್ಲಿದ್ದಿಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತವೂ ಕಲ್ಲಿದ್ದಲನ್ನು ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಕಲ್ಲಿದ್ದಲಿನ ಕೊರತೆ ಇರುವ ಕಾರಣ ಭಾರತಕ್ಕೂ ಕಲ್ಲಿದ್ದಲು ಆಮದು ಆಗುವಲ್ಲಿ ವ್ಯತ್ಯಯವಾಗಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಬೆಲೆ ಹೆಚ್ಚಳವಾಗಿದೆ. ಪ್ರತಿ ಟನ್‌ ಕಲ್ಲಿದ್ದಲಿಗೆ 60ರಿಂದ 190 ರೂ. ಹೆಚ್ಚಾಗಿದೆ. ಈ ಕಾರಣಗಳಿಂದ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿವೆ. 15-20 ದಿನ ಸ್ಥಗಿತವಾಗಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಉತ್ಪಾದನೆ ಕಡಿಮೆಯಾದ್ದರಿಂದ ದೇಶಾದ್ಯಂತ ಕಲ್ಲಿದ್ದಲು ಕೊರತೆ ಆಗಿದೆ. ನಿನ್ನೆ 1.94 ಮಿಲಿಯನ್ ಟನ್‌ ಕಲ್ಲಿದ್ದಲು ಪೂರೈಕೆಯಾಗಿದೆ.

ರಾಜ್ಯದ ಕಲ್ಲಿದ್ದಲು ಉಪಯೋಗ ಹಾಗೂ ಪ್ರಸ್ತುತ ಸ್ಥಿತಿ ಏನು?ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ 153.669 ಮಿ.ಯೂನಿಟ್‌  ವಿದ್ಯುತ್‌ ಬೇಡಿಕೆ ಇದೆ. ಆದರೆ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವ ಕಾರಣ ರಾಯಚೂರು, ಬಳ್ಳಾರಿ ಮತ್ತು ಯರಮರಸ್‌ನ 13 ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ 6 ಘಟಕಗಳನ್ನು ಮಾತ್ರ ಚಾಲನೆಯಲ್ಲಿಡಲಾಗಿದೆ. ಈ ಘಟಕಗಳಿಂದ 37.920 ಮಿ.ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಜಲ ವಿದ್ಯುತ್‌ ಸ್ಥಾವರಗಳಿಂದ 37.050 ಮಿ.ಯೂನಿಟ್‌, ಸೋಲಾರ್‌, ಪವನ, ಅನಿಲ ವಿದ್ಯುದಾಗಾರಗಳಿಂದ 0.1154 ಮಿ.ಯೂ. ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಖಾಸಗಿ ವಿದ್ಯುದಾಗರಗಳು ಮತ್ತು ಕೇಂದ್ರದ ಗ್ರಿಡ್‌ನಿಂದ ಸುಮಾರು 81.585 ಮಿ.ಯೂ. ವಿದ್ಯುತ್‌ ಪೂರೈಕೆಯಾಗುತ್ತಿದೆ.

ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದಲು ವಿವರ

ಬಳ್ಳಾರಿ ಉಷ್ಣಸ್ಥಾವರಕ್ಕೆ ನಿತ್ಯ 25  ಸಾವಿರ ಟನ್ ಕಲ್ಲಿದಲು ಬೇಕು‌. ಆದರೆ ಸದ್ಯ ಪ್ರತಿದಿನ 8ರಿಂದ 10 ಸಾವಿರ ಟನ್ ಬರುತ್ತಿದೆ. ಬಳ್ಳಾರಿಗೆ ಸೋಮವಾರ ಮೂರು ರ್ಯಾಕ್ ಕಲ್ಲಿದಲು ಬಂದಿದೆ. ಅಂದರೆ ಸುಮಾರು 12 ಸಾವಿರ ಟನ್ ನಷ್ಟು ಕಲ್ಲಿದ್ದಲು ಬಂದಿದೆ. ರಾಯಚೂರು ಉಷ್ಣಸ್ಥಾವರಕ್ಕೂ ಪ್ರತಿನಿತ್ಯ 35 ಸಾವಿರ ಟನ್ ಕಲ್ಲಿದ್ದಲು ಬೇಕು. ಆದರೆ ಇಲ್ಲಿಗೆ ಕೇವಲ ಸುಮಾರು 8 ಸಾವಿರ ಟನ್ ನಷ್ಟು ಬಂದಿದೆ. ಯರಮರಸ್ ಉಷ್ಣಸ್ಥಾವರಕ್ಕೆ 24 ಸಾವಿರ ಟನ್ ಕಲ್ಲಿದ್ದಲು ಪ್ರತಿನಿತ್ಯ ಬೇಕು. ಆದರೆ ಸೋಮವಾರ ಸುಮಾರು 8 ಟನ್ ನಷ್ಟು ಕಲ್ಲಿದ್ದಲು ಬಂದಿದೆ. ಪ್ರತಿನಿತ್ಯ ಈ ಮೂರು ಉಷ್ಣ ಸ್ಥಾವರಗಳಿಗೂ ಸುಮಾರು 20 ರಿಂದ 24 ರಷ್ಟು ರ್ಯಾಕ್ ಗಳು ಬರುತ್ತಿತ್ತು. ಆದರೆ ಈಗ ಮೂರು ಸ್ಥಾವರಗಳಿಂದ ಪ್ರತಿನಿತ್ಯ ಸುಮಾರು ‍7 ರಿಂದ 10 ರಷ್ಟು ರ್ಯಾಕ್ ಗಳು ಮಾತ್ರ ಬರುತ್ತಿದೆ.‌

ವರದಿ: ರಮೇಶ್ ಹಂಡ್ರಂಗಿ
Published by:HR Ramesh
First published: