Explainer: ಬ್ಲ್ಯಾಕ್‌ ಬಾಕ್ಸ್‌ ಎಂದರೇನು? ವಿಮಾನ ಅಪಘಾತವನ್ನು ಈ ಪೆಟ್ಟಿಗೆ ಹೇಗೆ ಸಂಗ್ರಹಿಸುತ್ತೆ?

ಕಪ್ಪು ಪೆಟ್ಟಿಗೆಗಳಿಗೆ ಆ ಅಡ್ಡ ಹೆಸರು ಹೇಗೆ ಬಂದಿದೆ ಎಂಬುದು ಖಚಿತವಾಗಿಲ್ಲ. ಆದರೆ, ವಿಮಾನಯಾನ ಅಪಘಾತ ಸಂಭವಿಸಿದಾಗಲೆಲ್ಲಾ ತನಿಖಾಧಿಕಾರಿಗಳು ಉತ್ತರಕ್ಕಾಗಿ ರೆಕಾರ್ಡರ್‌ಗಳ ಅನ್ವೇಷಣೆಯಲ್ಲಿ ತೊಡಗುತ್ತಾರೆ.

ಬ್ಲಾಕ್ ಬಾಕ್ಸ್ ಕಪ್ಪು ಬಣ್ಣದಲ್ಲಿರಲ್ಲ

ಬ್ಲಾಕ್ ಬಾಕ್ಸ್ ಕಪ್ಪು ಬಣ್ಣದಲ್ಲಿರಲ್ಲ

  • Share this:
ಇತ್ತೀಚೆಗೆ ಚೀನಾದಲ್ಲಿ (China) ವಿಮಾನ ಪತನ (Flight Crash)  ಬಹಳ ದೊಡ್ಡ ಸುದ್ದಿಯಾಗಿತ್ತು. ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಬೋಯಿಂಗ್ (Boeing) 737-800 ಮಾರ್ಚ್ 21 ರಂದು ಮಧ್ಯಾಹ್ನ ಆಕಾಶದಿಂದ ಇದ್ದಕ್ಕಿದ್ದಂತೆ ನೆಲಕ್ಕೆ ಉರುಳಿತ್ತು. ಕೇವಲ ಒಂದು ನಿಮಿಷದಲ್ಲಿ 29,100 ಅಡಿಗಳಿಂದ 7,850 ಅಡಿಗಳಿಗೆ ಲಂಬವಾಗಿ ಧುಮುಕಿ ವಿಮಾನ ಪತನವಾಗಿದೆ ಎಂದು ಈ ಅವಘಡದ ಬಗ್ಗೆ ಫ್ಲೈಟ್‌ರಾಡಾರ್ 24 ಡೇಟಾ ಹೇಳುತ್ತದೆ. ಅಲ್ಲದೆ, ಸಾಮಾನ್ಯವಾಗಿ "ಬ್ಲ್ಯಾಕ್ ಬಾಕ್ಸ್" (Black Box) ಎಂದು ಕರೆಯಲ್ಪಡುವ ಫ್ಲೈಟ್ ರೆಕಾರ್ಡರ್, ಚೀನಾ ಈಸ್ಟರ್ನ್ MU5735 ನಿಂದ ಕಂಡುಬಂದಿದೆ ಎಂದು ಚೀನಾದ ವಾಯುಯಾನ ಪ್ರಾಧಿಕಾರವು ಬುಧವಾರ (ಮಾರ್ಚ್ 23) ಮಾಹಿತಿ ನೀಡಿದೆ.

ಹಾಗಾದ್ರೆ, ಈ ಬ್ಲ್ಯಾಕ್‌ ಬಾಕ್ಸ್‌ ಅಂದರೇನು ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆ, ಅನುಮಾನ ಮೂಡಬಹುದು. ಈ ಲೇಖನದಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅಥವಾ ಕಪ್ಪು ಪೆಟ್ಟಿಗೆಯ ಬಗ್ಗೆ ವಿವರಿಸಲಾಗಿದೆ.

ಮಾಹಿತಿ ಸಂಗ್ರಹಿಸುತ್ತವೆ..
ಇವುಗಳು ರೆಕಾರ್ಡರ್‌ಗಳನ್ನು ಒಳಗೊಂಡಿರುವ ಎರಡು ದೊಡ್ಡ ಲೋಹದ ಪೆಟ್ಟಿಗೆಗಳಾಗಿದ್ದು, ಹೆಚ್ಚಿನ ವಿಮಾನಗಳಲ್ಲಿ ಒಂದನ್ನು ಮುಂಭಾಗದಲ್ಲಿ ಮತ್ತು ಇನ್ನೊಂದು ಹಿಂಭಾಗದಲ್ಲಿ ಇರಿಸಬೇಕಾಗುತ್ತದೆ. ಈ ರೆಕಾರ್ಡರ್‌ಗಳು ವಿಮಾನ ಹಾರಾಟದ ಬಗ್ಗೆ ಮಾಹಿತಿಯನ್ನು ದಾಖಲಿಸುತ್ತವೆ ಮತ್ತು ವಿಮಾನ ಅಪಘಾತಕ್ಕೆ ಕಾರಣವಾಗುವ ಘಟನೆಗಳನ್ನು ಪುನರ್‌ನಿರ್ಮಿಸಲು ಸಹಾಯ ಮಾಡುತ್ತದೆ.

ಹೇಗೆ ಕೆಲಸ ಮಾಡುತ್ತವೆ?
ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ರೇಡಿಯೋ ಟ್ರಾನ್ಸ್‌ಮಿಷನ್‌ಗಳು ಮತ್ತು ಕಾಕ್‌ಪಿಟ್‌ನಲ್ಲಿ ಇತರ ಶಬ್ದಗಳನ್ನು ರೆಕಾರ್ಡ್ ಮಾಡುತ್ತದೆ. ಉದಾಹರಣೆಗೆ ಪೈಲಟ್‌ಗಳ ನಡುವಿನ ಸಂಭಾಷಣೆಗಳು ಮತ್ತು ಎಂಜಿನ್ ಶಬ್ದಗಳನ್ನು ದಾಖಲಿಸುತ್ತದೆ.

ಫ್ಲೈಟ್ ಡೇಟಾ ರೆಕಾರ್ಡರ್ (FDR) ಎತ್ತರ, ವಾಯುವೇಗ, ಹಾರಾಟದ ಶಿರೋನಾಮೆ, ಲಂಬ ವೇಗವರ್ಧನೆ, ಪಿಚ್, ರೋಲ್, ಆಟೋಪೈಲಟ್ ಸ್ಥಿತಿ ಇತ್ಯಾದಿಗಳಂತಹ 80 ಕ್ಕೂ ಹೆಚ್ಚು ವಿವಿಧ ರೀತಿಯ ಮಾಹಿತಿಯನ್ನು ದಾಖಲಿಸುತ್ತದೆ.

ಭವಿಷ್ಯದಲ್ಲಿ ಅಪಘಾತ ಆಗಬಾರದು ನೋಡಿ..
ವಾಣಿಜ್ಯ ವಿಮಾನಗಳಲ್ಲಿ ಕಪ್ಪು ಪೆಟ್ಟಿಗೆಗಳು ಕಡ್ಡಾಯವಾಗಿದೆ. ಆದರೆ ವಿಮಾನದಲ್ಲಿ ಈ ಬ್ಲ್ಯಾಕ್‌ ಬಾಕ್ಸ್‌ಗಳ ಉದ್ದೇಶವು ಕಾನೂನು ಹೊಣೆಗಾರಿಕೆಯನ್ನು ಸ್ಥಾಪಿಸುವುದಲ್ಲ. ಅದರ ಬದಲಾಗಿ, ಅಪಘಾತದ ಕಾರಣಗಳನ್ನು ಗುರುತಿಸುವುದು ಮತ್ತು ಆದ್ದರಿಂದ ಭವಿಷ್ಯದಲ್ಲಿ ಇಂತಹ ಪ್ರತಿಕೂಲ ಘಟನೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಬ್ಲ್ಯಾಕ್‌ ಬಾಕ್ಸ್‌ ಕಿತ್ತಳೆ ಬಣ್ಣದಲ್ಲಿರುತ್ತದೆ..!
ವಿಮಾನದಲ್ಲಿ ಇರಿಸಿರುವ ಈ ಪೆಟ್ಟಿಗೆಗಳನ್ನು ಬ್ಲ್ಯಾಕ್‌ ಬಾಕ್ಸ್ ಎಂದು ಕರೆದರೂ ಸಹ ಇದು ಕಪ್ಪಗೆ ಇರುವುದಿಲ್ಲ. ಈ ಕಪ್ಪು ಪೆಟ್ಟಿಗೆಗಳು ಜ್ವಲಂತ, ಹೆಚ್ಚಿನ ಗೋಚರತೆಯ ಕಿತ್ತಳೆ ಬಣ್ಣದ್ದಾಗಿರುತ್ತವೆ. ಇದರಿಂದಾಗಿ ಕ್ರ್ಯಾಶ್ ಸೈಟ್‌ನಲ್ಲಿ ಅವುಗಳನ್ನು ಹುಡುಕುವ ಸಿಬ್ಬಂದಿಗಳು ಅವುಗಳನ್ನು ಹುಡುಕುವ ಅತ್ಯುತ್ತಮ ಅವಕಾಶವನ್ನು ಹೊಂದಿರುತ್ತಾರೆ.

ಈ ಹಿನ್ನೆಲೆ ಕಪ್ಪು ಪೆಟ್ಟಿಗೆಗಳಿಗೆ ಆ ಅಡ್ಡ ಹೆಸರು ಹೇಗೆ ಬಂದಿದೆ ಎಂಬುದು ಖಚಿತವಾಗಿಲ್ಲ. ಆದರೆ, ವಿಮಾನಯಾನ ಅಪಘಾತ ಸಂಭವಿಸಿದಾಗಲೆಲ್ಲಾ ತನಿಖಾಧಿಕಾರಿಗಳು ಉತ್ತರಕ್ಕಾಗಿ ರೆಕಾರ್ಡರ್‌ಗಳ ಅನ್ವೇಷಣೆಯಲ್ಲಿ ತೊಡಗುತ್ತಾರೆ.

ಕಪ್ಪು ಪೆಟ್ಟಿಗೆಗಳ ಬಳಕೆ ಆರಂಭವಾಗಿದ್ದು ಯಾವಾಗ?
ಕಪ್ಪು ಪೆಟ್ಟಿಗೆಗಳ ಬಳಕೆಯು 1950 ರ ದಶಕದಲ್ಲಿ ಆರಂಭಿಸಲಾಯಿತು ಎಂದು ಹೇಳಲಾಗಿದೆ. ವಿಮಾನ ಅಪಘಾತಗಳ ನಂತರ, ಅಪಘಾತಗಳಿಗೆ ನಿರ್ಣಾಯಕ ಕಾರಣವನ್ನು ತನಿಖಾಧಿಕಾರಿಗಳು ತಲುಪಲು ಸಾಧ್ಯವಾಗಲಿಲ್ಲ. ಆ ನಂತರ, ಡೇವಿಡ್ ವಾರೆನ್ ಎಂಬ ಆಸ್ಟ್ರೇಲಿಯಾದ ವಿಜ್ಞಾನಿ ಈ ಕಪ್ಪು ಪೆಟ್ಟಿಗೆಗಳನ್ನು ಆವಿಷ್ಕಾರ ಮಾಡಿದರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಕಪ್ಪು ಪೆಟ್ಟಿಗೆಗಳು ನಾಶವಾಗುವುದಿಲ್ಲವೇ?
ಬ್ಲ್ಯಾಕ್‌ ಬಾಕ್ಸ್‌ ಅನ್ನು ಅನ್ವೇಷಿಸಿದ ಆರಂಭಿಕ ದಿನಗಳಲ್ಲಿ ತಂತಿ ಅಥವಾ ಫಾಯಿಲ್‌ನಲ್ಲಿ ಸೀಮಿತ ಪ್ರಮಾಣದ ಡೇಟಾವನ್ನು ದಾಖಲಿಸಲಾಗುತ್ತಿತ್ತು. ಅದರ ನಂತರ ಮ್ಯಾಗ್ನೆಟಿಕ್ ಟೇಪ್ ಅನ್ನು ಬಳಸಲಾಯಿತು, ಮತ್ತು ಪ್ರಸ್ತುತ ಅಂದರೆ ಆಧುನಿಕ ಮಾಡೆಲ್‌ಗಳು ಘನ ಸ್ಥಿತಿಯ ಮೆಮೋರಿ ಚಿಪ್‌ಗಳನ್ನು ಹೊಂದಿರುತ್ತವೆ ಎಂದು ತಿಳಿದುಬಂದಿದೆ.

ಪ್ರತಿಯೊಂದು ರೆಕಾರ್ಡಿಂಗ್‌ ಸಾಧನಗಳು ಸುಮಾರು 4.5 ಕೆಜಿ ತೂಗುತ್ತದೆ. ಇದನ್ನು ಸಾಮಾನ್ಯವಾಗಿ ಉಕ್ಕು ಅಥವಾ ಟೈಟಾನಿಯಂನಂತಹ ಬಲವಾದ ಪದಾರ್ಥಗಳಿಂದ ತಯಾರಿಸಿದ ಘಟಕದೊಳಗೆ ಸಂಗ್ರಹಿಸಲಾಗುತ್ತದೆ ಮತ್ತು ತೀವ್ರ ಶಾಖ, ಶೀತ ಅಥವಾ ಆರ್ದ್ರತೆಯಿಂದ ಬೇರ್ಪಡಿಸಲಾಗುತ್ತದೆ. ಈ ಹಿನ್ನೆಲೆ ಈ ಸಾಧನಗಳು ಆಘಾತ, ಬೆಂಕಿ ಮತ್ತು ನೀರು ನಿರೋಧಕವಾಗಿದೆ.

ವಿಮಾಣದ ಹಿಂಬಾಗದಲ್ಲಿರುತ್ತವೆ..
ಇನ್ನು, ಎಫ್‌ಡಿಆರ್ ಅನ್ನು ವಿಮಾನದ ಹಿಂಬಾಗದ ತುದಿಯಲ್ಲಿರಿಸಲಾಗುತ್ತದೆ. ಏಕೆಂದರೆ ಅಲ್ಲಿ ಸಾಮಾನ್ಯವಾಗಿ ಅಪಘಾತದ ಪರಿಣಾಮವು ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆ ವಿಮಾನ ಸಂಪೂರ್ಣ ಧ್ವಂಸವಾದರೂ, ಸಾಮಾನ್ಯವಾಗಿ ಕಪ್ಪು ಪೆಟ್ಟಿಗೆಗಳಂತಹ ಭಾಗಗಳು ಮಾತ್ರ ದೊರೆಯುತ್ತದೆ ಎಂದು ಹೇಳಲಾಗಿದೆ. ಇದರಿಂದ, ಅವುಗಳು ಕ್ರ್ಯಾಶ್‌ಗೂ ಮೊದಲು ಏನಾಯಿತು ಮತ್ತು ಭವಿಷ್ಯದಲ್ಲಿ ವಿಮಾನ ಸುರಕ್ಷತೆಯನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತವೆ.

ಇದನ್ನೂ ಓದಿ: Explained: ಹೈಪರ್‌ಸಾನಿಕ್‌ ಕ್ಷಿಪಣಿಗಳು ಅಂದರೇನು? ರಷ್ಯಾ ಇದನ್ನು ಉಕ್ರೇನ್‌ನಲ್ಲಿ ಬಳಸುತ್ತಿರುವುದೇಕೆ?

2018 ರಲ್ಲಿ, ಲಯನ್ ಏರ್ ಫ್ಲೈಟ್ JT 610 ಇಂಡೋನೇಷ್ಯಾದಲ್ಲಿ ಎಷ್ಟು ಹಿಂಸಾತ್ಮಕವಾಗಿ ಅಪಘಾತಕ್ಕೀಡಾಯಿತು ಎಂದರೆ ಅದು ಫ್ಲೈಟ್ ಡೇಟಾ ರೆಕಾರ್ಡರ್‌ನ ಭಾಗವನ್ನು ಹರಿದು ಹಾಕಿತ್ತು. ಆದರೆ ಆಗಲೂ ಸಹ ನಿರ್ಣಾಯಕ ಮೆಮೋರಿ ಕೋರ್ ಉಳಿದುಕೊಂಡಿತ್ತು.

ಬ್ಲಾಕ್ ಬಾಕ್ಸ್​ನ್ನು ನಾಶಪಡಿಸಲು ಆಗೋದೇ ಇಲ್ವಾ?
ಆದರೂ ಕಪ್ಪು ಪೆಟ್ಟಿಗೆಗಳು ಸಹ ನಾಶವಾಗಬಹುದು. ಸೆಪ್ಟೆಂಬರ್ 11 ರ ಅಮೆರಿಕ ದಾಳಿಯಲ್ಲಿ ಭಯೋತ್ಪಾದಕರು ಹೈಜಾಕ್ ಮಾಡಿ ಪೆಂಟಗನ್‌ಗೆ ಅಪ್ಪಳಿಸಿದ ಬಳಿಕ ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ 77 ನಿಂದ ಎರಡೂ ಕಪ್ಪು ಪೆಟ್ಟಿಗೆಗಳನ್ನು ಮರುಪಡೆಯಲು ಸಾಧ್ಯವಾಯಿತು.

ಆದರೆ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ತುಂಬಾ ಹಾನಿಗೊಳಗಾಗಿತ್ತು. ತನಿಖಾ ವರದಿಯ ಪ್ರಕಾರ, ಆ ವಿಮಾನದಿಂದ ಯಾವುದೇ ಬಳಸಬಹುದಾದ ಆಡಿಯೋವನ್ನು ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.

ನೀರಿನೊಳಗೆ ಬಿದ್ದರೆ ಹೇಗೆ ಪತ್ತೆ ಹಚ್ಚುವುದು?
ಅನೇಕ ವಿಮಾನ ಪತನಗಳು ಸಮುದ್ರ ಸೇರಿ ನೀರಿನ ಸೆಲೆಯಲ್ಲಿ ಆಗುವ ಬಗ್ಗೆ ನೀವು ಸಾಕಷ್ಟು ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿರುತ್ತೀರಲ್ಲ. ಈ ಹಿನ್ನೆಲೆ, ಕಪ್ಪು ಪೆಟ್ಟಿಗೆಗಳನ್ನು ನೀರಿನೊಳಗೆ ಅಥವಾ ಸಮುದ್ರದ ತಳದಲ್ಲಿ ಬಿದ್ದರೆ ಅದನ್ನು ಕಂಡುಹಿಡಿಯುವಂತೆ ಮಾಡಲು, ಅವುಗಳು 30 ದಿನಗಳವರೆಗೆ ಅಲ್ಟ್ರಾಸೌಂಡ್ ಸಿಗ್ನಲ್‌ಗಳನ್ನು ಕಳುಹಿಸುವ ಬೀಕನ್‌ನೊಂದಿಗೆ ಸಜ್ಜುಗೊಂಡಿರುತ್ತವೆ.

ಡೇಟಾವನ್ನು ಹೇಗೆ ಹಿಂಪಡೆಯಲಾಗುತ್ತದೆ?
ಕಪ್ಪು ಪೆಟ್ಟಿಗೆಗಳಿಂದ ರಿಕವರ್‌ ಆದ ಡೇಟಾವನ್ನು ವಿಶ್ಲೇಷಿಸಲು ಸಾಮಾನ್ಯವಾಗಿ 10-15 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಮಧ್ಯೆ, ತನಿಖಾಧಿಕಾರಿಗಳು ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಯಿಂದ ಹೇಳಿಕೆ ಪಡೆಯುವುದು ಮತ್ತು ಎಟಿಸಿ ಹಾಗೂ ಪೈಲಟ್‌ಗಳ ನಡುವಿನ ಸಂಭಾಷಣೆಯ ರೆಕಾರ್ಡಿಂಗ್‌ಗಳಂತಹ ಇತರ ಸುಳಿವುಗಳಿಗಾಗಿಯೂ ನೋಡುತ್ತಾರೆ ಎಂದು ತಿಳಿದುಬಂದಿದೆ.

ಎಟಿಸಿ ಹಾಗೂ ಪೈಲಟ್‌ಗಳ ನಡುವಿನ ಸಂಭಾಷಣೆಯ ರೆಕಾರ್ಡಿಂಗ್‌ಗಳಿಂದ ಪ್ರಯೋಜನ?
ಒಂದು ವೇಳೆ, ಪೈಲಟ್‌ಗಳು ವಿಮಾನ ಪತನವಾಗುವ ಅಥವಾ ಅಪಘಾತವಾಗುವ ಬಗ್ಗೆ ಅಥವಾ ಅಂತಹ ಘಟನೆ ನಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯಾ ಎಂಬ ಬಗ್ಗೆ ಅವರಿಗೆ ಅರಿವಿದ್ಯಾ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದು. ಅಲ್ಲದೆ, ಒಂದು ವೇಳೆ ಪೈಲಟ್‌ಗಳಿಗೆ ಅರಿವಾಗಿದ್ದಲ್ಲಿ, ಅವರು ವಿಮಾನವನ್ನು ನಿಯಂತ್ರಿಸುವಲ್ಲಿ ಯಾವುದೇ ಸಮಸ್ಯೆಗಳನ್ನು ವರದಿ ಮಾಡಿದ್ದಾರೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:Explained: ಮನುಷ್ಯ ಬಳಸದ ಸಸ್ಯಗಳೇ ನಾಶವಾಗುತ್ತೆ! ಏನಿದು ಹೊಸ ಸಂಶೋಧನೆ?

ಮಧ್ಯಂತರ ವರದಿಗಳನ್ನು ಸುಮಾರು ಒಂದು ತಿಂಗಳ ನಂತರ ಪ್ರಕಟಿಸಲಾಗುತ್ತದೆ, ಆದರೆ ಅವುಗಳು ಸಾಮಾನ್ಯವಾಗಿ ಹೆಚ್ಚು ಮಾಹಿತಿಯನ್ನು ಹೊಂದಿರುವುದಿಲ್ಲ. ಏಕೆಂದರೆ, ಆಳವಾದ ತನಿಖೆಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬಹುಶಃ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
Published by:guruganesh bhat
First published: