• ಹೋಂ
  • »
  • ನ್ಯೂಸ್
  • »
  • Explained
  • »
  • HDK-Brahmin CM Controversy: ಬ್ರಾಹ್ಮಣರನ್ನು ಅಪಮಾನಿಸಿದರಾ ಎಚ್‌ಡಿಕೆ? ಏನಿದು 'ಬ್ರಾಹ್ಮಣ ಸಿಎಂ' ವಿವಾದ?

HDK-Brahmin CM Controversy: ಬ್ರಾಹ್ಮಣರನ್ನು ಅಪಮಾನಿಸಿದರಾ ಎಚ್‌ಡಿಕೆ? ಏನಿದು 'ಬ್ರಾಹ್ಮಣ ಸಿಎಂ' ವಿವಾದ?

ಎಚ್‌ಡಿಕೆ-ಪ್ರಹ್ಲಾದ್ ಜೋಶಿ (ಸಂಗ್ರಹ ಚಿತ್ರ)

ಎಚ್‌ಡಿಕೆ-ಪ್ರಹ್ಲಾದ್ ಜೋಶಿ (ಸಂಗ್ರಹ ಚಿತ್ರ)

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಎಚ್‌ಡಿ ಕುಮಾರಸ್ವಾಮಿ, "ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದವರನ್ನು ಸಿಎಂ ಮಾಡುವ ಹುನ್ನಾರ ನಡೆಯುತ್ತಿದೆ" ಎಂದಿದ್ದರು. ಇದೇ ಹೇಳಿಕೆಯೇ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹಾಗಾದರೆ ಎಚ್‌ಡಿಕೆ ಹೇಳಿದ್ದೇನು? ಪ್ರಹ್ಲಾದ್ ಜೋಶಿ ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ದೇಕೆ? ಎಚ್‌ಡಿಕೆ ಹೇಳಿಕೆ ವಿವಾದವಾಗಿದ್ದೇಕೆ? ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿರುವುದೇಕೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ..

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Karnataka, India
  • Share this:

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (Karnataka assembly election) ಘೋಷಣೆಯಾಗುವ ಮುನ್ನವೇ ರಾಜಕೀಯ ಪಕ್ಷಗಳ ಸಮರ ತಾರಕಕ್ಕೇರಿದೆ. ಕಾಂಗ್ರೆಸ್ (Congress), ಬಿಜೆಪಿ (BJP), ಜೆಡಿಎಸ್ (JDS) ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಅದು ಕೆಲವೊಮ್ಮೆ ವೈಯಕ್ತಿಕ ಟೀಕೆಗೂ, ಜಾತಿ, ಧರ್ಮ, ಸಮುದಾಯಗಳ ದೂಷಣೆಗೂ ಒಳಗಾಗುತ್ತಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಕೊಟ್ಟ ಒಂದು ಹೇಳಿಕೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರನ್ನು ಉದ್ದೇಶಿಸಿ ಮಾತನಾಡಿದ್ದ ಎಚ್‌ಡಿ ಕುಮಾರಸ್ವಾಮಿ, “ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದವರನ್ನು ಸಿಎಂ ಮಾಡುವ ಹುನ್ನಾರ ನಡೆಯುತ್ತಿದೆ” ಎಂದಿದ್ದರು. ಇದೇ ಹೇಳಿಕೆಯೇ ಇದೀಗ ಭಾರೀ ವಿವಾದಕ್ಕೆ (Controversy) ಕಾರಣವಾಗಿದೆ. “ಜಾತ್ಯಾತೀತ ಪಕ್ಷ ಅಂತ ಹೆಸರಿಟ್ಟುಕೊಂಡ ಜೆಡಿಎಸ್‌ ನಾಯಕ (JDS Leader) ಹೀಗೆ ಮತ್ತೊಂದು ಜಾತಿ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ” ಅಂತ ಬ್ರಾಹ್ಮಣ ಸಮುದಾಯ (Brahmins Community) ಆಕ್ರೋಶ ವ್ಯಕ್ತಪಡಿಸಿದೆ. ಮಂತ್ರಾಲಯ ಮಠದ ಸ್ವಾಮೀಜಿ (Mantralaya Math Swamiji) ಸೇರಿದಂತೆ ಹಲವು ಬ್ರಾಹ್ಮಣ ಮಠಗಳ ಸ್ವಾಮೀಜಿಗಳು ಎಚ್‌ಡಿಕೆ ಹೇಳಿಕೆ ವಿರೋಧಿಸಿದ್ದಾರೆ. ಇನ್ನು ತಮ್ಮ ಹೇಳಿಕೆಗೆ ಎಚ್‌ಡಿಕೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಹಾಗಾದರೆ ಎಚ್‌ಡಿಕೆ ಹೇಳಿದ್ದೇನು? ಪ್ರಹ್ಲಾದ್ ಜೋಶಿ ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ದೇಕೆ? ಎಚ್‌ಡಿಕೆ ಹೇಳಿಕೆ ವಿವಾದವಾಗಿದ್ದೇಕೆ? ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿರುವುದೇಕೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…


ಪಂಚರತ್ನ ಯಾತ್ರೆಯನ್ನು ಟೀಕಿಸಿದ್ದ ಪ್ರಹ್ಲಾದ್ ಜೋಶಿ


ಜೆಡಿಎಸ್‌ ಎಚ್‌ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಅಂತ ರ್ಯಾಲಿ ನಡೆಸುತ್ತಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆದಿದೆ. ಈ ಯಾತ್ರೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದರು.



“ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಅಂತ ಹೆಸರಿಡಿ”


ಇದೇ ಫೆಬ್ರವರಿ 4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಪಂಚರತ್ನ ಯಾತ್ರೆಗೆ ನವಗ್ರಹ ಯಾತ್ರೆ ಎಂದು ಹೆಸರಿಡಬೇಕು ಎಂದಿದ್ದರು. ಡಿಎಸ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರದ್ದೇ ದರ್ಬಾರ್ ಆಗಿದೆ. ಅವರ ಕುಟುಂಬದ 9 ಜನ ರಾಜಕಾರಣದಲ್ಲಿದ್ದಾರೆ. ಹಾಗಾಗಿ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಎನ್ನುವ ಬದಲಾಗಿ ನವಗ್ರಹ ಯಾತ್ರೆ ಎಂದು ಹೆಸರಿಡುವುದು ಸೂಕ್ತ ಅಂತ ವ್ಯಂಗ್ಯವಾಡಿದ್ದರು. ಜೆಡಿಎಸ್‌ ನಾಯಕರನ ಕುಟುಂಬದಲ್ಲೇ ಎಲ್ಲವೂ ಸರಿಯಿಲ್ಲ, ಅವರ ಮನೆಯಲ್ಲೇ ಬಡಿದಾಟ ಇದೆ. ಇಂತವರು ರಾಜ್ಯ ಉದ್ಧಾರ ಮಾಡುತ್ತಾರಾ? ಕುಟುಂಬದಲ್ಲೇ ಒಗ್ಗಟ್ಟು ಮೂಡಿಸಲು ಇವರಿಗೆ ಆಗಿಲ್ಲ. ಇಂತವರು ರಾಜ್ಯಕ್ಕೆ ಏನು ಮಾಡಲು ಸಾಧ್ಯ ಎಂದು ಟೀಕಿಸಿದ್ದರು.


ಇದನ್ನೂ ಓದಿ: E20 Fuel: ಏನಿದು ಇ-20 ಇಂಧನ? ಇದರಿಂದ ವಾಹನ ಸವಾರರಿಗೆ ಏನು ಲಾಭ?


ಪ್ರಹ್ಲಾದ್ ಜೋಶಿ ವಿರುದ್ಧ ಎಚ್‌ಡಿಕೆ ಕಿಡಿಕಿಡಿ


ಇನ್ನು ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ್ದ ಎಚ್‌ಡಿ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ ಹಳೆ ಕರ್ನಾಟಕ ಭಾಗದ ಬ್ರಾಹ್ಮಣರಂತೆ ಒಳ್ಳೆಯ ಸಂಸ್ಕೃತಿಯವರಲ್ಲ. ಶೃಂಗೇರಿ ಮಠವನ್ನು ಧ್ವಂಸ ಮಾಡಿದ ಹಾಗೂ ಮಹಾತ್ಮ ಗಾಂಧಿಯನ್ನು ಕೊಂದ ವಂಶಕ್ಕೆ ಸೇರಿದ ಬ್ರಾಹ್ಮಣರು ಅವರು. ಮುಂದಿನ ಚುನಾವಣೆಯ ಬಳಿಕ ಪ್ರಹ್ಲಾದ ಜೋಶಿಯನ್ನು ಕರ್ನಾಟಕದ ಸಿಎಂ ಮಾಡುವ ಹುನ್ನಾರ ಆರ್‌ಎಸ್‌ಎಎಸ್ ನಡೆಸುತ್ತಿದೆ. ಆ ಕಾರಣಕ್ಕಾಗಿ ಅವರು ನಮ್ಮ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ ಅಂತ ಎಚ್‌ಡಿಕೆ ಹೇಳಿದ್ದರು.


“ಬ್ರಾಹ್ಮಣರನ್ನು ಸಿಎಂ ಮಾಡುವ ಹುನ್ನಾರ”


ಇನ್ನು ಈ ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್‌ಡಿಕೆ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಪ್ರಹ್ಲಾದ್ ಜೋಶಿಯವರನ್ನು ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ. ಪ್ರಹ್ಲಾದ ಜೋಷಿ ಅವರು ನಮ್ಮ ದಕ್ಷಿಣ ಕರ್ನಾಟಕ ಭಾಗದ ಬ್ರಾಹ್ಮಣರಲ್ಲ. ಶೃಂಗೇರಿಯ ಮಠವನ್ನು ಧ್ವಂಸ ಮಾಡಿದ ಬ್ರಾಹ್ಮಣ ವರ್ಗಕ್ಕೆ ಪ್ರಹ್ಲಾದ್​ ಜೋಶಿ ಸೇರುತ್ತಾರೆ. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು. ನಮ್ಮ ಹಳೆ ಮೈಸೂರು ಭಾಗದ ಬ್ರಾಹ್ಮಣರು ಸರ್ವ ಜನ ಸುಖಿನೋ ಭವಂತು ಎನ್ನುತ್ತಾರೆ. ನಾವು ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತೇವೆ. ಆದರೆ ಇವರು ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದ ಬ್ರಾಹ್ಮಣರು. ದೇಶಭಕ್ತಿ ಹೆಸರಿನಲ್ಲಿ ದೇಶವನ್ನು ಒಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದ ಬ್ರಾಹ್ಮಣ ಸಮುದಾಯ ಅಂತ ಪುನರುಚ್ಚರಿಸಿದ್ದರು.


ಎಚ್‌ಡಿಕೆ ಹೇಳಿಕೆಗೆ ಬಿಜೆಪಿ ನಾಯಕರ ಕಿಡಿಕಿಡಿ


ಎಚ್‌ಡಿಕೆ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಎಚ್‌ಡಿಕೆ ರಾಜ್ಯದ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಅಂತ ಆರೋಪಿಸಿದ್ದರು. ಬ್ರಾಹ್ಮಣ ಸಮುದಾಯದವರು ಸಿಎಂ ಆದರೆ ತಪ್ಪೇನು ಅಂತ ಪ್ರಶ್ನಿಸಿದ್ದರು. ಪ್ರಹ್ಲಾದ್ ಜೋಶಿ ಸಿಎಂ ಆಗಲು ಸಮರ್ಥ ವ್ಯಕ್ತಿ ಅಂತ ತಿರುಗೇಟು ನೀಡಿದ್ದರು.


ಎಚ್‌ಡಿಕೆ ಹೇಳಿಕೆಗೆ ಸ್ವಾಮೀಜಿಗಳು ಕಿಡಿಕಿಡಿ


ಇನ್ನು ಎಚ್‌ಡಿಕೆ ಹೇಳಿಕೆಯನ್ನು ಬ್ರಾಹ್ಮಣ ಸಮುದಾಯಗಳ ಮಠಾಧೀಶರು ತೀವ್ರವಾಗಿ ಖಂಡಿಸಿದ್ದಾರೆ. ಬ್ರಾಹ್ಮಣರೇಕೆ ಮುಖ್ಯಮಂತ್ರಿಯಾಗಬಾರದು ಅಂತ ಉಡುಪಿಯ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ. ಬ್ರಾಹ್ಮಣರು ಭಾರತದ ಪ್ರಜೆಗಳಲ್ಲವೇ ಅಂತ ಕೇಳಿರುವ ಶ್ರೀಗಳು, ಬ್ರಾಹ್ಮಣರ ಕುರಿತು ಪ್ರತಿ ಚುನಾವಣೆ ಸಂದರ್ಭದಲ್ಲಿ ಮಾತನಾಡುವುದು ಅಭ್ಯಾಸವಾಗಿದೆ ಅಂತ ಕಿಡಿಕಾರಿದ್ದಾರೆ.


ಮಂತ್ರಾಲಯ ಶ್ರೀಗಳಿಂದಲೂ ವಿರೋಧ


ಅತ್ತ ಮಂತ್ರಾಲಯ ಮಠಾಧೀಶ ಸುಬುದೇಂದ್ರ ಶ್ರೀಗಳು ಮಾತನಾಡಿ, ಸಂವಿಧಾನದ ಪ್ರಕಾರ ಯಾರು ಬೇಕಿದ್ದರೂ ಸಿಎಂ ಆಗಬಹುದು. ಯಾರೋ ಕುಳಿತುಕೊಂಡು ಇಂಥವರೇ ಸಿಎಂ ಆಗ್ಬೇಕು, ಆಗ್ಬಾರ್ದು ಅಂದ್ರೆ ಅದು ಡಿಕ್ಟೇಟರ್‌ಶಿಪ್ ಆಗುತ್ತೆ. ನಾವೆಲ್ಲ ಭಾರತೀಯರು ಒಂದೇ ಎಂಬ ಉದಾತ್ತ ಭಾವನೆ ಬೆಳೆಸಿಕೊಂಡು ಮುಂದುವರಿದರೆ ದೇಶದ ಅಭಿವೃದ್ದಿ ಆಗುತ್ತದೆ ಎಂದಿದ್ದಾರೆ.


“ನಾನು ವಿರೋಧಿಸಿದ್ದು ಪ್ರಹ್ಲಾದ್ ಜೋಶಿಯವರನ್ನು”


ಇನ್ನು ವಿವಾದ ತಾರಕಕ್ಕೇರುತ್ತಿದ್ದಂತೆ ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಅವರು, ಇನ್ನು ಬ್ರಾಹ್ಮಣ, ದಲಿತ ಯಾವುದೇ ಸಮಾಜಕ್ಕೆ ಅವಮಾನ ಮಾಡುವ ಹಿನ್ನೆಲೆಯಿಂದ ನಾನು ಬಂದಿಲ್ಲ ಅಂತ ಎಚ್‌ಡಿಕೆ ಹೇಳಿದ್ರು. ಈ ದೇಶದಲ್ಲಿ ಯಾರು ಬೇಕಾದರೂ ಸಿಎಂ, ಶಾಸಕರು ಆಗಬಹುದು ಬ್ರಾಹ್ಮಣರು ಸಿಎಂ ಆದರೆ ನಾನೂ ಬೆಂಬಲಿಸುತ್ತೇನೆ ಅಂತ ಹೇಳಿದ್ದಾರೆ. ನಾನು ಪ್ರಹ್ಲಾದ ಜೋಶಿಯವರನ್ನು ವಿರೋಧಿಸಿದ್ದೇನೆಯೇ ವಿನಃ ಬ್ರಾಹ್ಮಣ ಸಮುದಾಯದವರನ್ನು ವಿರೋಧಿಸಿಲ್ಲ, ನನ್ನ ಮಾತಿಗೆ ನಾನು ಈಗಲೂ ಬದ್ದ ಎಂದಿದ್ದಾರೆ.




ಬಿಜೆಪಿಗೆ ಬಿಸಿತುಪ್ಪವಾಗುತ್ತಾ ಎಚ್‌ಡಿಕೆ ಹೇಳಿಕೆ?


ಎಚ್‌ಡಿಕೆಯವರೇನೋ ಬ್ರಾಹ್ಮಣ ಸಿಎಂ ವಿಚಾರವನ್ನೂ, ಪ್ರಹ್ಲಾದ್ ಜೋಶಿ ಹೆಸರನ್ನು ಎಳೆದು ತಂದಿದ್ದಾರೆ. ಆದರೆ ಎಚ್‌ಡಿಕೆ ಹೇಳಿಕೆ ವಿರೋಧಿಸಿರುವ ಬಿಜಪಿ ನಾಯಕರು ನಾವು ಬ್ರಾಹ್ಮಣ ಸಿಎಂ ವಿಚಾರ ಅಥವಾ ಪ್ರಹ್ಲಾದ್ ಜೋಶಿಯವರೇ ಸಿಎಂ ಅಭ್ಯರ್ಥಿ ಎನ್ನುವ ಬಗ್ಗೆ ಏನೂ ಮಾತನಾಡುತ್ತಿಲ್ಲ. ಇತ್ತ ಎಚ್‌ಡಿಕೆ ಹೇಳಿಕೆಯಿಂದ ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು ಎಂಬ ಚರ್ಚೆ ಶುರುವಾಗಿದೆ. ಅತ್ತ ರಾಜಕೀಯದಲ್ಲಿ ಅನುಭವ ಇರುವ ಪ್ರಹ್ಲಾದ್ ಜೋಶಿ ಸಿಎಂ ಸ್ಥಾನಕ್ಕೆ ಸಮರ್ಥರು ಅಂತಾನೂ ಅವರ ಬೆಂಬಲಿಗರು, ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಇವೆಲ್ಲ ಬಿಜೆಪಿಗೆ ಬಿಸಿತುಪ್ಪವಾಗುವುದರಲ್ಲಿ ಡೌಟೇ ಇಲ್ಲ!

Published by:Annappa Achari
First published: