HOME » NEWS » Explained » VACCINE PASSPORT WHAT IS VACCINE PASSPORT WHY YOU NEED IT FOR INTERNATIONAL TRAVEL NOW STG SCT

Explained: ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎಂದರೇನು?; ವಿದೇಶ ಪ್ರಯಾಣಕ್ಕೆ ಇದ್ಯಾಕೆ ಬೇಕು?

Vaccine Passport: ಕೋವಿಡ್ ಸೋಂಕು ಹರಡದಂತೆ ವ್ಯಾಕ್ಸಿನೇಷನ್ ಮಾಡಿಸಿಕೊಂಡಿರುವುದಕ್ಕೆ ನೀಡುವ ಒಂದು ಡಿಜಿಟಲ್ ದಾಖಲೆಯೇ ವ್ಯಾಕ್ಸಿನ್ ಪಾಸ್‌ಪೋರ್ಟ್‌.‌ ಕೋವಿಡ್ ಅನ್ನು ನಿಯಂತ್ರಿಸುವ ಸಲುವಾಗಿ ಈ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಪರಿಚಯಿಸುವುದಕ್ಕೆ ಅನೇಕ ದೇಶಗಳು ಮುಂದಾಗಿವೆ.

news18-kannada
Updated:March 12, 2021, 8:10 AM IST
Explained: ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎಂದರೇನು?; ವಿದೇಶ ಪ್ರಯಾಣಕ್ಕೆ ಇದ್ಯಾಕೆ ಬೇಕು?
ಸಾಂದರ್ಭಿಕ ಚಿತ್ರ.
  • Share this:
ಕೊರೋನಾ ವೈರಸ್‌ನಿಂದ ಇಡೀ ಜಗತ್ತಿನ ಚಿತ್ರಣವೇ ಬದಲಾದಂತಾಗಿದೆ. ಅನೇಕ ಉದ್ಯಮಗಳು ಕೊರೋನಾ ಹೊಡೆತಕ್ಕೆ ನೆಲಕಚ್ಚಿದವು. ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡು ಕಷ್ಟಕ್ಕೀಡಾದರು. ಹೀಗೆ ಕೊರೋನಾ ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡಿದೆ. ಆದರೆ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಲೇಬೇಕಿದೆ. ಇನ್ನು ವಿದೇಶ ಪ್ರಯಾಣ ಕೈಗೊಳ್ಳುವವರಂತೂ ಈ ಕುರಿತು ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ. ಈಗಾಗಲೇ ಅನೇಕ ರಾಷ್ಟ್ರಗಳು ವಿದೇಶ ಪ್ರಯಾಣಕ್ಕೆ ಷರತ್ತುಬದ್ಧ ಅನುಮತಿಯನ್ನು ನೀಡಿವೆ. ಆದರೆ ಇದೀಗ ಕೊರೋನಾ ಹರಡುವಿಕೆ ನಿಯಂತ್ರಣಕ್ಕೆ ಮತ್ತೊಂದು ಹೊಸ ನಿಯಮ ಜಾರಿಗೆ ಬರುತ್ತಿದೆ. ಅದುವೇ ವ್ಯಾಕ್ಸಿನ್ ಪಾಸ್‌ಪೋರ್ಟ್ ಎನ್ನುವ ಡಿಜಿಟಲ್ ದಾಖಲೆ.

ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎಂದರೇನು?:

ಒಂದು ವೇಳೆ ವಿದೇಶಕ್ಕೆ ವಿಮಾನದಲ್ಲಿ ಸಂಚರಿಸಬೇಕಾದರೆ ಅನೇಕ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಇದೀಗ ಸ್ಥಳೀಯ ಸರ್ಕಾರದಿಂದ ಕೋವಿಡ್ ವ್ಯಾಕ್ಸಿನ್ ಅನ್ನು ಪಡೆಯಬೇಕಾಗುತ್ತದೆ. ಹೀಗೆ ಕೋವಿಡ್ ಸೋಂಕು ಹರಡದಂತೆ ವ್ಯಾಕ್ಸಿನೇಷನ್ ಮಾಡಿಸಿಕೊಂಡಿರುವುದಕ್ಕೆ ನೀಡುವ ಒಂದು ಡಿಜಿಟಲ್ ದಾಖಲೆಯೇ ವ್ಯಾಕ್ಸಿನ್ ಪಾಸ್‌ಪೋರ್ಟ್‌.‌ ಕೋವಿಡ್ ಅನ್ನು ನಿಯಂತ್ರಿಸುವ ಸಲುವಾಗಿ ಈ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಪರಿಚಯಿಸುವುದಕ್ಕೆ ಅನೇಕ ದೇಶಗಳು ಮುಂದಾಗಿವೆ. ಇನ್ನು ಕೆಲವು ದೇಶಗಳಲ್ಲಿ ಈಗಾಗಲೇ ಇದು ಜಾರಿಗೆ ಬಂದಿದೆ. ಹಾಗಾದರೆ ಈ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ವಾಕ್ಸಿನ್ ಪಾಸ್‌ಪೋರ್ಟ್‌ ಅನ್ನು ಪರಿಚಯಿಸುವ ಮೂಲಕ ಕಳೆದ ತಿಂಗಳು ಇಸ್ರೇಲ್ ದೊಡ್ಡ ನಿರ್ಧಾರ ಕೈಗೊಂಡಿತು. ಈ ಮೂಲಕ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ತಪ್ಪಿಸಲು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃ‍ಷ್ಟಿಯಿಂದ ವ್ಯಾಕ್ಸಿನ್‌ ಪಾಸ್‌ಪೋರ್ಟ್‌ ಅನ್ನು ಕಡ್ಡಾಯ ಮಾಡಿದೆ. ಕೋವಿಡ್‌ ಹರಡದಂತೆ ತಡೆಗಟ್ಟಲು ಲಸಿಕೆ ಹಾಕಿಸಿಕೊಂಡ ಬಗ್ಗೆ ಖಾತ್ರಿಯಾಗಿ ಡಿಜಿಟಲ್ ರೂಪದಲ್ಲಿ ಈ ವ್ಯಾಕ್ಸಿನ್ ಪಾಸ್‌ಪೋರ್ಟ್ ನೀಡಲಾಗುತ್ತದೆ.

ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಕೆಲವು ವ್ಯಾಕ್ಸಿನ್ ಬಂದ ಮೇಲೆ ಇತ್ತೀಚೆಗೆ ಜನ ಜೀವನ ಸಾಮಾನ್ಯ ಸ್ಥಿತಿಯತ್ತ ಹೊರಳುತ್ತಿದೆ. ಕೋವಿಡ್‌ 19 ಬಗ್ಗೆ ಮೊದಲಿದ್ದ ಭಯ ಕೊಂಚ ಮಟ್ಟಿಗೆ ದೂರವಾಗುತ್ತಿದೆ. ಆದರೂ ಅಂತಾರಾಷ್ಟ್ರೀಯ ಸುರಕ್ಷತಾ ದೃಷ್ಟಿಯಿಂದ ಇಸ್ರೇಲ್‌ ವ್ಯಾಕ್ಸಿನ್‌ ಪಾಸ್‌ಪೋರ್ಟ್ ಅನ್ನು ಕಡ್ಡಾಯ ಮಾಡಿದೆ. ಇದು ಕೇವಲ ವಿದೇಶಿ ಪ್ರಯಾಣಕ್ಕೆ ಅಷ್ಟೇ ಅಲ್ಲದೇ, ದೇಶದ ರೆಸ್ಟೋರೆಂಟ್‌ಗಳು, ಜಿಮ್‌ಗಳು ಮತ್ತು ಹೋಟೆಲ್‌ಗಳಂತಹ ಸೌಲಭ್ಯಗಳನ್ನು ಬಳಸಿಕೊಳ್ಳಲು ಹಾಗೂ ದೊಡ್ಡ ಕೂಟಗಳಲ್ಲಿ ಭಾಗವಹಿಸಲು ಈ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಅನುವು ಮಾಡಿಕೊಡುತ್ತದೆ.

ಕೊರೋನಾ ವೈರಸ್ ಹರಡುವುದಕ್ಕೆ ಮುಂಚೆಯೇ ಹಲವಾರು ದೇಶಗಳಲ್ಲಿ ವ್ಯಾಕ್ಸಿನೇಷನ್ ದಾಖಲೆಯನ್ನು ತೋರಿಸುವುದು ಅಗತ್ಯವಾಗಿತ್ತು. ಹಳದಿ ಜ್ವರದಂತಹ ಖಾಯಿಲೆಗೆ ಪ್ರಯಾಣಿಕರು ಕಡ್ಡಾಯವಾಗಿ ವ್ಯಾಕ್ಸಿನೇಷನ್ ದಾಖಲೆಯನ್ನು ತೆಗೆದುಕೊಂಡೇ ಹೋಗಬೇಕಿತ್ತು. ಇದರ ಆಧಾರದ ಮೇಲೆ ಇದೀಗ ಕೋವಿಡ್ 19 ತಡೆಗಟ್ಟಲು ಈ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಜಾರಿಗೆ ಬರುತ್ತಿದೆ. ಈ ಮೊದಲು ಆಫ್ರಿಕನ್ ದೇಶಗಳಿಂದ ಅಮೆರಿಕ ಹಾಗೂ ಭಾರತಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರು ಹಳದಿ ಜ್ವರದಂತಹ ರೋಗಗಳಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ ಎನ್ನುವುದಕ್ಕೆ ಪುರಾವೆಗಳನ್ನು ಸಲ್ಲಿಸಬೇಕಾಗಿತ್ತು. ಅದೇ ಥರ ಇದೀಗ ವ್ಯಾಕ್ಸಿನ್ ಪಾಸ್‌ಪೋರ್ಟ್.

ಇದನ್ನೂ ಓದಿ: ಮುಂಬೈನ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ 14 ವರ್ಷಗಳ ನಂತರ‌ ಮರಳಿ ಸಿಕ್ಕಿತು!; ಹೇಗೆ ಅಂತೀರಾ?ಕೊರೋನಾ ಹರಡಬಾರದು ಎನ್ನುವ ಮುಂಜಾಗರೂಕತೆಯ ದೃಷ್ಟಿಯಿಂದ ವ್ಯಾಕ್ಸಿನ್ ಹಾಕಿಸಿಕೊಂಡಿರುವುದನ್ನು ಖಾತ್ರಿ ಪಡಿಸಲು ನೀಡುವ ಡಿಜಿಟಲ್ ದಾಖಲೆಯೇ ಈ ವ್ಯಾಕ್ಸಿನ್ ಪಾಸ್‌ಪೋರ್ಟ್‌. ಈ ದಾಖಲೆ ಮೂಲಕ ವ್ಯಕ್ತಿಯು ಕೋವಿಡ್‌ 19 ನಿಂದ ಸುರಕ್ಷಿತವಾಗಿದ್ದಾನೆ, ಅಲ್ಲದೇ ಯಾವುದೇ ಕೋವಿಡ್ ಲಕ್ಷಣಗಳಿಲ್ಲ ಎನ್ನುವುದನ್ನು ಇದು ಸಾಬೀತು ಮಾಡುತ್ತದೆ.

ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಪ್ರಯಾಣಕ್ಕೆ ವ್ಯಾಕ್ಸಿನೇಷನ್‌ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ನಡೆದಿದೆ. ಇನ್ನು ಕೆಲವು ದೇಶಗಳು ಕ್ವಾರಂಟೈನ್ ಮಾನದಂಡಗಳನ್ನು ಪಾಲನೆ ಮಾಡಲು ವ್ಯಾಕ್ಸಿನ್ ಪಾಸ್‌ಪೋರ್ಟ್‌ ಅನ್ನು ಕಡ್ಡಾಯ ಮಾಡುತ್ತಿವೆ. ಆದರೆ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಇನ್ನೂ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಡಬೇಕಿದೆ.

ಇಸ್ರೇಲ್ ಸರ್ಕಾರವು ಹೊರಡಿಸಿದ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಜೊತೆಗೆ, ಹಲವಾರು ಅಂತರಾಷ್ಟ್ರೀಯ ಸಂಘಗಳು ಮತ್ತು ಲಾಭರಹಿತಗಳು ಸಂಸ್ಥೆಗಳು ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ತಮ್ಮದೇ ಆದ ವ್ಯಾಕ್ಸಿನ್ ಪಾಸ್‌ಪೋರ್ಟ್‌ ರೀತಿಯ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿವೆ.

ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುವ ಜಾಗತಿಕ ವ್ಯಾಪಾರ ಸಂಸ್ಥೆ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯು 'ಐಎಟಿಎ ಟ್ರಾವೆಲ್ ಪಾಸ್' ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ವಿಮಾನಯಾನ ಮಾಡುವವರಿಗೆ ವ್ಯಾಕ್ಸಿನೇಷನ್ ತೆಗೆದುಕೊಂಡ ಪುರಾವೆ ಆಗಿ ಬಳಸಲಾಗುತ್ತದೆ. ವಾಯುಯಾನ ಉದ್ಯಮದವರಿಗೆ ಇದು ಸಹಾಯಕವಾಗುತ್ತದೆ.

ಇನ್ನು ಮತ್ತೊಂದು ಕಡೆ ಕಾಮನ್‌ಪಾಸ್ ಎಂಬ ಅಪ್ಲಿಕೇಶನ್ ಕೂಡ ತಯಾರಾಗುತ್ತಿದೆ. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ವಿಶ್ವ ಆರ್ಥಿಕ ವೇದಿಕೆ ಮತ್ತು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ದೊಡ್ಡ ಒಕ್ಕೂಟ ಸಹಕಾರ ನೀಡುತ್ತಿವೆ. ಇದು ಕೋವಿಡ್ 19 ವ್ಯಾಕ್ಸಿನೇಶನ್ ಮಾಹಿತಿ ಹಾಗೂ ವಿದೇಶಗಳಲ್ಲಿ ಪ್ರವೇಶ ಪಡೆಯಲು ಅಗತ್ಯ ಮಾಹಿತಿಯ ದಾಖಲೆಯಾಗಿ ಪ್ರಯಾಣಿಕರಿಗೆ ಸಹಕಾರಿ ಆಗಲಿದೆ.

ದಿ ವಾಷಿಂಗ್ಟನ್ ಪೋಸ್ಟ್‌ನ ವರದಿಯ ಪ್ರಕಾರ, ಕಳೆದ ಡಿಸೆಂಬರ್‌ನಿಂದಲೇ ಅಂತಾರಾಷ್ಟ್ರೀಯ ಪ್ರಯಾಣಿಕರು ಕೆಲವು ಆಯ್ದ ವಿಮಾನಗಳಲ್ಲಿ ಪ್ರಯಾಣ ಬೆಳೆಸುವಾಗ ಪರಿಶೀಲನೆಗಾಗಿ ಈ ಕಾಮನ್‌ಪಾಸ್ ಅನ್ನು ಬಳಸುತ್ತಿದ್ದಾರಂತೆ. ಹೌದು, ಯುನೈಟೆಡ್ ಏರ್‌ಲೈನ್ಸ್, ಜೆಟ್‌ಬ್ಲೂ ಏರ್‌ಲೈನ್ಸ್, ಲುಫ್ಥಾನ್ಸ, ಸ್ವಿಸ್ ಇಂಟರ್‌ನ್ಯಾಷನಲ್ ಮತ್ತು ವರ್ಜಿನ್ ಅಂಟ್ಲಾಟಿಕ್ ಈ ವಿಮಾನಗಳಲ್ಲಿ ಈಗಾಗಲೇ ಕಾಮನ್‌ಪಾಸ್‌ ಬಳಕೆಯಲ್ಲಿದೆ. ಡಿಸೆಂಬರ್‌ಗಿಂತಲೂ ಮೊದಲೇ ಲಂಡನ್, ನ್ಯೂಯಾರ್ಕ್, ಹಾಂಗ್ ಕಾಂಗ್ ಮತ್ತು ಸಿಂಗಾಪುರಗಳಲ್ಲಿ ಈ ಕಾಮನ್ ಪಾಸ್‌ ಟ್ರೈಲ್ ಮಾಡಲಾಗಿತ್ತು.

ವ್ಯಾಕ್ಸಿನ್ ಪಾಸ್‌ಪೋರ್ಟ್‌ ಒಂದು ಕಡೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಗೊಳಿಸಿದರೆ, ಮತ್ತೊಂದು ಕಡೆ ಪ್ರವಾಸೋದ್ಯಮ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಪ್ರಯೋಜನ ತರಲಿದೆ. ಪ್ರವಾಸೋದ್ಯಮ ಸಾಂಕ್ರಾಮಿಕ ರೋಗ ಕೊರೋನಾದಿಂದ ಭಾರೀ ನಷ್ಟಕ್ಕೆ ಈಡಾಗಿದೆ. ಅಲ್ಲದೇ ಅಂತರಾಷ್ಟ್ರೀಯ ವಿಮಾನ ಸಂಸ್ಥೆಗಳು ಭಾರೀ ನಷ್ಟವನ್ನು ಅನುಭವಿಸಿವೆ. ಹೀಗಾಗಿ ವ್ಯಾಕ್ಸಿನ್ ಪಾಸ್‌ಪೋರ್ಟ್‌ನಿಂದ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೂ ಪ್ರಯೋಜನವನ್ನು ಪಡೆಯಲಿವೆ. ಈ ಮೂಲಕ ನಷ್ಟಕ್ಕೊಳಗಾದ ವಿಮಾನಯಾನ ಉದ್ಯಮ ಚೇತರಿಕೆ ಕಂಡುಕೊಳ್ಳುವ ಉದ್ದೇಶವೂ ಈ ವ್ಯಾಕ್ಸಿನ್ ಪಾಸ್‌ಪೋರ್ಟ್ ಹಿಂದೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಂತಾರಾಷ್ಟ್ರೀಯ ಪ್ರಯಾಣವನ್ನು ಸುರಕ್ಷಿತ ರೀತಿಯಲ್ಲಿ ಕೈಗೊಳ್ಳುವುದು ಅಗತ್ಯ. ಇದಕ್ಕೆ ಅನೇಕ ದೇಶಗಳು ತಮ್ಮದೇಯಾದ ನೀತಿ ನಿಯಮಗಳನ್ನು ರೂಪಿಸಿವೆ. ಆದರೆ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಈ ವ್ಯಾಕ್ಸಿನೇಷನ್ ದಾಖಲೆಯ ಅಗತ್ಯತೆಯ ವಿರುದ್ಧ ಕಳೆದ ತಿಂಗಳು ವಿಶ್ವಸಂಸ್ಥೆ ಬ್ಯಾಟಿಂಗ್ ಮಾಡಿತ್ತು. "ಪ್ರಸ್ತುತ ಸಮಯದಲ್ಲಿ, ಪ್ರಯಾಣಿಕರ ಅಂತರಾಷ್ಟ್ರೀಯ ವಿಮಾನಯಾನಕ್ಕೆ ಕೋವಿಡ್ -19 ವ್ಯಾಕ್ಸಿನೇಷನ್ ದಾಖಲೆ ಕಡ್ಡಾಯ ಮಾಡಬಾರದು ಎನ್ನುವುದು ವಿಶ್ವಸಂಸ್ಥೆಯ ನಿಲುವಾಗಿದೆ. ವ್ಯಾಕ್ಸಿನೇಷನ್ ಕುರಿತು ಇನ್ನೂ ಕೆಲವು ಗೊಂದಲಗಳು ಬಗೆಹರಿದಿಲ್ಲ. ಅಲ್ಲದೇ ಇದರಿಂದ ಕೊರೋನಾ ಎಷ್ಟರ ಮಟ್ಟಿಗೆ ಕಡಿಮೆ ಆಗುತ್ತದೆ ಎನ್ನುವುದು ಇನ್ನೂ ಖಾತ್ರಿ ಇಲ್ಲ," ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಅಲ್ಲದೇ, "ವ್ಯಾಕ್ಸಿನ್‌ಗಳ ಸರಬರಾಜು ಸಹ ಅಗತ್ಯವಿದ್ದಷ್ಟು ಇಲ್ಲದ ಕಾರಣ, ಇದು ಪ್ರಯಾಣಿಕರಿಗೆ ಸಮಸ್ಯೆ ಆಗಬಹುದು. ಮತ್ತೊಂದು ಕಡೆ ಆದ್ಯತೆಯ ಜನರಿಗೆ ಈ ವ್ಯಾಕ್ಸಿನ್‌ಗಳ ಅಸಮರ್ಪಕ ಪೂರೈಕೆಗೂ ಇದು ಕಾರಣವಾಗಬಹುದು," ಎಂದು ವಿಶ್ವಸಂಸ್ಥೆ ತನ್ನ ಅಸಮ್ಮತಿ ಸೂಚಿಸಿತ್ತು. ಇದರ ಜೊತೆಗೆ ಅನೇಕರು ಈ ಡಿಜಿಟಲ್ ದಾಖಲೆಯಿಂದ ತಮ್ಮ ಪ್ರೈವಸಿಗೆ ಧಕ್ಕೆ ಆಗಬಹುದು. ಎಲ್ಲ ಚಲನವಲನಗಳನ್ನು ಟ್ರ್ಯಾಕ್ ಮಾಡಬಹುದಾದ ಸಾಧ್ಯತೆ ಇದೆ ಎಂದು ಕೆಲವು ಪ್ರಯಾಣಿಕರು ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಅದೇನೆ ಇದ್ದರೂ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಅನ್ನು ಇದೀಗ ಕಡ್ಡಾಯ ಎನ್ನಲಾಗುತ್ತಿದೆ.
Published by: Sushma Chakre
First published: March 12, 2021, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories