Vaccine Nationalism ಮೂಲಕ ತಪ್ಪು ಮಾಡಿತೇ ವಿಶ್ವ? Omicron ವಕ್ಕರಿಸುತ್ತಿದ್ದಂತೆ ಕಾಣುತ್ತಿರುವ ಸತ್ಯಗಳೇನು?

Explained: ಲಸಿಕೆಯು ಇತರ ದೇಶಗಳಿಗೆ ಲಭ್ಯವಾಗುವ ಮೊದಲು ಸರಕಾರಗಳು ತಮ್ಮ ಪ್ರಜೆಗಳಿಗೆ ಲಸಿಕೆಗಳನ್ನು ನೀಡಲು ಔಷಧಿ ತಯಾರಕರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಾಗ ಲಸಿಕೆ ರಾಷ್ಟ್ರೀಯತೆ ಉಂಟಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ದೈತ್ಯ ರಾಷ್ಟ್ರಗಳು ಜೊತೆಯಾಗಿ ಸೇರಿದಾಗ ಕೋವಿಡ್-19ನಂತಹ (Covid-19) ಮಾರಕ ರೋಗಗಳನ್ನು ಸೋಲಿಸಬಹುದು ಎಂಬುದಾಗಿ ಯುಎನ್ ಸೆಕ್ರೆಟರಿ ಜನರಲ್ ಆ್ಯಂಟೋನಿಯೊ ಗುಟೆರೆಸ್ (UN Secretary General António Guterres) ಮಾತುಗಳು ಸಾಂಕ್ರಾಮಿಕ (Pandemic) ರೋಗವು ಜಗತ್ತಿನ ಮೇಲೆ ಪರಿಣಾಮ ಬೀರಿದ 2 ವರ್ಷಗಳ ನಂತರ ನಿಜವಾಗುವ ಎಲ್ಲಾ ಲಕ್ಷಣಗಳನ್ನು ಪ್ರದರ್ಶಿಸುತ್ತಿದೆ. ಕೋವಿಡ್-19 ಸೋಂಕು ತನ್ನ ಹೊಸ ರೂಪಾಂತರಗಳೊಂದಿಗೆ ವಿಶ್ವವನ್ನು ಬೆದರಿಸುತ್ತಿದೆ. ಆದರೂ, ಕೊರೋನಾ ವೈರಸ್ ಲಸಿಕೆಗಳು ಭದ್ರ ಕವಚದಂತೆ ಕಾರ್ಯನಿರ್ವಹಿಸಲಿದೆ ಎಂಬ ಮಾತು ಸುಳ್ಳಲ್ಲ.

  ಹೊಸ ರೂಪಾಂತರಗಳನ್ನು ಮಟ್ಟ ಹಾಕಲು ಲಸಿಕೆ ಅತ್ಯಗತ್ಯ:

  ಹೌದು ಈ ಸಾಂಕ್ರಾಮಿಕ ರೋಗ ಸೋಲಿಸಲು ಲಸಿಕೆಗಳು ಅತ್ಯಗತ್ಯ. ಅದೇ ರೀತಿ ವೈರಸ್‌ನ ಹೊಸ ಹಾಗೂ ಕೆಟ್ಟ ರೂಪಾಂತರಗಳು ಹೊರಹೊಮ್ಮುವುದಿಲ್ಲ ಎಂಬುದನ್ನು ಖಚಿತಪಡಿಸಲು ಲಸಿಕೆಗಳು ಅನಿವಾರ್ಯವಾಗಿವೆ. ಡೆಲ್ಟಾ ರೂಪಾಂತರದ ಆಟಾಟೋಪ ಇನ್ನೂ ತಗ್ಗದೇ ಇದ್ದರೂ ಕೊರೋನಾದ ಇನ್ನೊಂದು ರೂಪಾಂತರ ಓಮಿಕ್ರಾನ್ ಹಿಂದಿನದಕ್ಕಿಂತ ಹೆಚ್ಚು ಕ್ಷಿಪ್ರವಾಗಿ ಹರಡುತ್ತದೆ ಎಂಬುದಾಗಿ ತಿಳಿದುಬಂದಿದೆ.

  ಲಸಿಕೆ ಹಾಕಿಸಿಕೊಳ್ಳದೇ ಇರುವುದು ವೈರಸ್ ರೂಪಾಂತರಗೊಳ್ಳಲು ಸಹಕಾರಿಯಾಗಿದ್ದು, ಲಸಿಕೆಗಳು ಅದರ ಸ್ಪೈಕ್ ಪ್ರೊಟೀನ್ ಅನ್ನು ನಿರ್ಬಂಧಿಸುತ್ತವೆ. ಲಸಿಕೆಗಳಿಲ್ಲದಿದ್ದರೆ ವೈರಸ್ ಮಾನವ ದೇಹದಲ್ಲಿ ತನ್ನ ಸಾವಿರಾರು ನಕಲುಗಳನ್ನು ಸೃಷ್ಟಿಸುತ್ತದೆ ಹಾಗೂ ಮಾನವ ಕೋಶವನ್ನು ಆವರಿಸುತ್ತದೆ. ಇವುಗಳು ಕಾಲಾನಂತರದಲ್ಲಿ ಸಂಗ್ರಹಗೊಂಡು ಹೊಸ ರೂಪಾಂತರಗಳು ಹೊರಹೊಮ್ಮಲು ಕಾರಣವಾಗುತ್ತವೆ. ಈ ಸನ್ನಿವೇಶದಲ್ಲಿ ಪ್ರಪಂಚದಾದ್ಯಂತ ಲಸಿಕೆ ನೀಡುವುದು ಅತ್ಯುತ್ತಮ ಸಲಹೆಯಾಗಿದ್ದು ಸಂಪೂರ್ಣ ಜನಸಂಖ್ಯೆಗೆ ಲಸಿಕೆ ನೀಡುವ ಗುರಿ ಹೊಂದಿರುವುದು ಅನಿವಾರ್ಯವಾಗಿದೆ.

  ಲಸಿಕೆಗಳನ್ನು ಶೇಖರಿಸುತ್ತಿರುವ ಶ್ರೀಮಂತ ರಾಷ್ಟ್ರಗಳು:

  ಈ ಎಲ್ಲಾ ಅಂಶಗಳ ನಡುವೆ ಇದೀಗ ಶ್ರೀಮಂತ ಹಾಗೂ ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಲಸಿಕೆಗಳನ್ನು ಸಂಗ್ರಹಿಸುತ್ತಿವೆ. ಇದರಿಂದ ಬಡ ರಾಷ್ಟ್ರಗಳಿಗೆ ಲಸಿಕೆ ಲಭ್ಯವಾಗುತ್ತಿಲ್ಲ ಮತ್ತು ಈ ಕಾರಣದಿಂದ ಹೊಸ ರೂಪಾಂತರಗಳು ಹುಟ್ಟಿಕೊಳ್ಳುತ್ತಿವೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿವೆ. ಲಸಿಕೆಯು ಇತರ ದೇಶಗಳಿಗೆ ಲಭ್ಯವಾಗುವ ಮೊದಲು ಸರಕಾರಗಳು ತಮ್ಮ ಪ್ರಜೆಗಳಿಗೆ ಲಸಿಕೆಗಳನ್ನು ನೀಡಲು ಔಷಧಿ ತಯಾರಕರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಾಗ ಲಸಿಕೆ ರಾಷ್ಟ್ರೀಯತೆ ಉಂಟಾಗುತ್ತದೆ.

  ಇದನ್ನೂ ಓದಿ: Omicron: ಕೋವಿಡ್ ರೂಪಾಂತರ ಓಮಿಕ್ರಾನ್ ಪ್ರಪಂಚಕ್ಕೆ ವರದಾನವಾಗಬಹುದು..! ತಜ್ಞರು ಹೀಗೆ ಹೇಳಿದ್ದೇಕೆ..?

  ಹಣ ಮಾಡುವ ದಂಧೆಯಾಗುತ್ತಿರುವ ಲಸಿಕೆ ಖರೀದಿ:

  ಹಾರ್ವರ್ಡ್ ಪೊಲಿಟಿಕಲ್ ರಿವ್ಯೂನಲ್ಲಿನ ವರದಿಯ ಪ್ರಕಾರ, US ಮೇ 2020ರ ವೇಳೆಗೆ ಆ್ಯಸ್ಟ್ರಾಜೆನಿಕಾಗೆ 1.2 ಶತಕೋಟಿ ಡಾಲರ್ ಹಣವನ್ನು ಪಾವತಿಸಿದ್ದು, ಲಸಿಕೆಯ 300 ಮಿಲಿಯನ್ ಡೋಸ್‌ಗಳ ವಿನಿಮಯದಲ್ಲಿ ತನ್ನ ಲಸಿಕೆ ಸಂಶೋಧನೆಯನ್ನು ವೇಗಗೊಳಿಸಿದೆ. ಇದೇ ರೀತಿಯ ಒಪ್ಪಂದವನ್ನು ಇಂಗ್ಲೆಂಡ್ ಕೂಡ ಮಾಡಿದ್ದು, ಇದೇ ರೀತಿಯ ಬಿಲಿಯನ್ ಡಾಲರ್ ಒಪ್ಪಂದಗಳನ್ನು ಜಪಾನ್, ಕೆನಡಾದಂತಹ ಶ್ರೀಮಂತ ರಾಷ್ಟ್ರಗಳು ಮಾಡಿಕೊಂಡಿವೆ. ಈ ವರ್ಷದ ಜನವರಿಯೊಳಗೆ 96% ಫೈಜರ್/ ಬಯೋಎನ್‌ಟೆಕ್ ಲಸಿಕೆಗಳು ಮತ್ತು ವರ್ಷದ ಅಂತ್ಯದ ವೇಳೆಗೆ ಉತ್ಪಾದಿಸಲು ಮಾಡರ್ನಾದ 100% ಡೋಸ್‌ಗಳನ್ನು ಈಗಾಗಲೇ ಖರೀದಿಸಲಾಗಿದೆ ಎಂದು ವರದಿಯು ಉಲ್ಲೇಖಿಸುತ್ತದೆ. ಇನ್ನು ಸಾಂಕ್ರಾಮಿಕವು ತನ್ನ ಉತ್ತುಂಗ ತಲುಪುವ ಮೊದಲು 16% ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳು ಲಭ್ಯವಿರುವ ಎಲ್ಲಾ ಲಸಿಕೆ ಡೋಸ್‌ಗಳ ಮೇಲೆ ಅರ್ಧದಷ್ಟು ಏಕಸ್ವಾಮ್ಯ ಹೊಂದಿವೆ ಎಂಬುದಾಗಿ ತಿಳಿಸಲಾಗಿದೆ.

  ಲಸಿಕೆ ವಂಚಿತ ಬಡರಾಷ್ಟ್ರಗಳು:

  ಈ ವರ್ಷದ ಆಗಸ್ಟ್‌ನಿಂದ ವಿಶ್ವಬ್ಯಾಂಕ್ ಮಾಹಿತಿಯ ಪ್ರಕಾರ, ಜಾಗತಿಕವಾಗಿ ನಾಲ್ಕು ಬಿಲಿಯನ್ ಲಸಿಕೆ ಡೋಸ್‌ಗಳನ್ನು ನಿರ್ವಹಿಸಲಾಗಿದೆ. ವಿಶ್ವದ ಜನಸಂಖ್ಯೆಯ 27.6% ಈ ಹಂತದಲ್ಲಿ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ. ಆದರೆ ಮಾಹಿತಿಯನ್ನು ದೇಶದ ಆದಾಯ ಗುಂಪುಗಳಿಂದ ವಿಭಜಿಸಿದರೆ, ಕಡಿಮೆ ಆದಾಯದ ದೇಶಗಳಲ್ಲಿ ವಾಸಿಸುವ 1.1% ಜನರು ಲಸಿಕೆಯ ಒಂದು ಡೋಸ್ ಸ್ವೀಕರಿಸಿದ್ದಾರೆ. ಜುಲೈ 28ರ ಹೊತ್ತಿಗೆ, ಇದುವರೆಗೆ ನಿರ್ವಹಿಸಲಾದ ಎಲ್ಲಾ ಡೋಸ್‌ಗಳಲ್ಲಿ 84% ಎಲ್ಲಾ ಉನ್ನತ ಮತ್ತು ಮಧ್ಯಮ-ಆದಾಯದ ದೇಶಗಳ ಜನರಿಗೆ ವಿತರಣೆಯಾಗಿದ್ದು, ಕಡಿಮೆ-ಆದಾಯದ ದೇಶಗಳಲ್ಲಿ ನಿರ್ವಹಿಸಲಾದ ಪ್ರಮಾಣಗಳ ಶೇಕಡಾವಾರು ಪ್ರಮಾಣ ನೋಡಿದರೆ, ಇದು ಆಘಾತಕಾರಿಯಾಗಿ 0.3%ಕ್ಕಿಂತಲೂ ಕಡಿಮೆ ಎಂಬುದಾಗಿ ವಿಶ್ವ ಬ್ಯಾಂಕ್‌ನ ಅಭಿವೃದ್ಧಿ ಪಾಡ್‌ಕ್ಯಾಸ್ಟ್ ವಿವರಿಸಿದೆ.

  ಲಸಿಕೆ ವರ್ಣಬೇಧ ನೀತಿ:

  ಇತ್ತೀಚೆಗೆ ಯುಎನ್ ಸಮಾವೇಶದಲ್ಲಿ ನಮೀಬಿಯಾದ ಅಧ್ಯಕ್ಷ ಹೇಗೆ ಜಿ ಗೆನ್‌ಗೋಬ್ ಪರಿಸ್ಥಿತಿ ತುಂಬಾ ವಿಷಮವಾಗಿದೆ ಎಂಬುದಾಗಿ ತಿಳಿಸಿದ್ದು ಲಸಿಕೆ ವರ್ಣಬೇಧ ನೀತಿ ಪರಿಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ದೇಶಗಳಲ್ಲಿ ಜನರು ಇನ್ನೂ ಲಸಿಕೆ ಪಡೆಯಬೇಕಾಗಿದ್ದು, ಇನ್ನು ಕೆಲವು ದೇಶಗಳಲ್ಲಿ ಲಸಿಕೆಯ ಒಂದನೇ ಡೋಸ್ ಅನ್ನು ಮಾತ್ರವೇ ಜನರು ಸ್ವೀಕರಿಸಿದ್ದು ಎರಡನೇ ಡೋಸ್‌ನ ತೀವ್ರ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

  ಲಸಿಕೆ ಶೇಖರಿಸಿದ ಶ್ರೀಮಂತ ದೇಶಗಳಲ್ಲಿ ನಿಲ್ಲದ ಕೊರೋನಾ ಪ್ರಾಬಲ್ಯ:

  ಲಸಿಕೆಯನ್ನು ಶೇಖರಿಸಿಟ್ಟುಕೊಂಡಿರುವ ಅಭಿವೃದ್ಧಿ ಹೊಂದಿದ ಜಗತ್ತಿಗೆ ಇದು ಸಹಾಯ ಮಾಡುವುದಿಲ್ಲ. ಏಕೆಂದರೆ ಬಡ ರಾಷ್ಟ್ರಗಳಲ್ಲಿ ಸಂಪೂರ್ಣ ಲಸಿಕೆಯನ್ನು ಅಲ್ಲಿನ ಪ್ರಜೆಗಳು ಪಡೆದುಕೊಳ್ಳದೇ ಇರುವುದರಿಂದ ಒಂದಿಲ್ಲೊಂದು ರೂಪದಲ್ಲಿ ವೈರಸ್ ತನ್ನ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುತ್ತಲೇ ಇರುತ್ತದೆ. ಅಂತೆಯೇ ಜನರು ಲಸಿಕೆ ಪಡೆಯಲು ಮುಂದಾಗದೇ ಇರುವುದೂ ಕೂಡ ರೂಪಾಂತರಗಳು ಹುಟ್ಟಿಕೊಳ್ಳಲು ಹಾಗೂ ವೈರಸ್ ಹರಡಲು ಕಾರಣವಾಗುತ್ತದೆ. ಇದಕ್ಕೆ ಸರಿಯಾದ ಉದಾಹರಣೆ ಎಂದರೆ ಯುರೋಪಿಯನ್ ದೇಶಗಳಲ್ಲಿ ಪ್ರಸ್ತುತ ರಾರಾಜಿಸುತ್ತಿರುವ ಕೋವಿಡ್‌ನ ಹೊಸ ಅಲೆಗಳಾಗಿವೆ. ಈ ರಾಷ್ಟ್ರಗಳಲ್ಲಿ ಲಸಿಕೆ ಲಭ್ಯತೆ ಇದ್ದರೂ ಅಲ್ಲಿನ ಜನರು ಲಸಿಕೆ ಸ್ವೀಕರಿಸಲು ಹಿಂಜರಿಯುತ್ತಿರುವುದರಿಂದ ಇದನ್ನು ಲಸಿಕೆ ಹಾಕಿಸದವರ ಸಾಂಕ್ರಾಮಿಕ ಎಂಬುದಾಗಿ ಹೇಳಬಹುದಾಗಿದೆ.

  ಇದನ್ನೂ ಓದಿ: Omicron: ಕೊರೋನಾದ ಹೊಸ ರೂಪಾಂತರ ಓಮಿಕ್ರಾನ್​ ಲಕ್ಷಣಗಳೇನು? ಏನೆಲ್ಲಾ ಎಚ್ಚರಿಕೆ ವಹಿಸಬೇಕು? ವೈದ್ಯರು ನೀಡಿದ್ದಾರೆ ಫುಲ್ ಡೀಟೆಲ್ಸ್

  ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡಲು WHOಯ COVAX ಉಪಕ್ರಮವು ತೀವ್ರವಾಗಿ ಕಡಿಮೆ ಹಣವನ್ನು ಹೊಂದಿದೆ ಮತ್ತು ವರದಿಗಳ ಪ್ರಕಾರ ಹಣವನ್ನು ತುರ್ತಾಗಿ ಒದಗಿಸದ ಹೊರತು ಮತ್ತು ಲಸಿಕೆ ಆದೇಶಗಳನ್ನು ನೀಡದ ಹೊರತು ಅಭಿವೃದ್ಧಿ ಹೊಂದುತ್ತಿರುವ ಪ್ರಪಂಚದ ಜನಸಂಖ್ಯೆಯ 20%ಕ್ಕಿಂತ ಹೆಚ್ಚು ಲಸಿಕೆ ಹಾಕಲು ಸಾಧ್ಯವಾಗುವುದಿಲ್ಲ.

  ರಾಷ್ಟ್ರಗಳು ಜೊತೆಯಾಗಿ ನಿಲ್ಲಬೇಕು:

  ಅಂತಾರಾಷ್ಟ್ರೀಯ ಕ್ರಮದ ಲಿವಿಂಗ್‌ಸ್ಟೋನ್ ಸೇವಾಯಾನದ ಯುಎನ್ ಇಂಡಿಪೆಂಡೆಂಟ್ ಎಕ್ಸ್‌ಪರ್ಟ್ (UN Independent Expert on international order Livingstone Sewanyana) ಪ್ರಕಾರ ಸಾಂಕ್ರಾಮಿಕವನ್ನು ಹೊಡೆದೋಡಿಸಲು ರಾಷ್ಟ್ರಗಳು ಬಹುಪಕ್ಷೀಯತೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಐಕಮತ್ಯವನ್ನು ಸಂಪೂರ್ಣವಾಗಿ ಮತ್ತು ನಿಸ್ಸಂದಿಗ್ಧವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ. ಸಾಂಕ್ರಾಮಿಕ ಮತ್ತು ಅದರ ರೂಪಾಂತರಗಳು ಪ್ರಪಂಚದ ಮೇಲೆ ವಿನಾಶವನ್ನುಂಟುಮಾಡುವುದನ್ನು ಮುಂದುವರಿಸುತ್ತಿರುವ ಈ ಸಂದರ್ಭದಲ್ಲಿಯೇ, ಸೇವಾಯಾನವು "ನವೀಕೃತ ಬಹುಪಕ್ಷೀಯತೆಯನ್ನು" ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ವಿಶ್ವಕ್ಕೆ ಸಾರಿ ಹೇಳಿದೆ.

  ಬೌದ್ಧಿಕ ಆಸ್ತಿ (IP) ಹಕ್ಕುಗಳ ಅಮಾನತುಗೊಳಿಸುವಿಕೆ:

  ಆರ್ಥಿಕವಾಗಿ ಸದೃಢವಾಗಿರುವ ರಾಷ್ಟ್ರಗಳು ಹಾಗೂ ಶ್ರೀಮಂತ ದೇಶಗಳಲ್ಲದೆ ಇತರ ರಾಷ್ಟ್ರಗಳೂ ಲಸಿಕೆಗಳನ್ನು ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ COVID-19 ಗೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅಮಾನತುಗೊಳಿಸುವಂತೆ ದಕ್ಷಿಣ ಆಫ್ರಿಕಾ ಮತ್ತು ಭಾರತವು ವಿಶ್ವ ವ್ಯಾಪಾರ ಸಂಸ್ಥೆಗೆ ದೀರ್ಘಕಾಲದಿಂದ ತಿಳಿಸುತ್ತಲೇ ಬಂದಿವೆ. ಇದಕ್ಕೆ ಔಷಧೀಯ ಉದ್ಯಮ ಸಂಸ್ಥೆಗಳು ಹಾಗೂ ಹೆಚ್ಚಿನ ಆದಾಯ ಹೊಂದಿರುವ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಕೋವಿಡ್-19 ಲಸಿಕೆಗಳು ಮತ್ತು ಸರಬರಾಜುಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಮನ್ನಾಕ್ಕಾಗಿ ಭಾರತವು ಮುಂದಿನ ವಾರ WTO ಸಭೆಯಲ್ಲಿ ಬೇಡಿಕೆಗಳನ್ನು ಮುಂದಿಡಲಿದೆ ಎಂಬುದಾಗಿ ವರದಿಗಳು ತಿಳಿಸಿವೆ.

  ವಸಾಹತುಶಾಹಿಯ ನಂತರದ ಜಗತ್ತಿನಲ್ಲಿ, ಐಪಿ ವ್ಯವಸ್ಥೆಯಲ್ಲಿನ ರಾಜಕೀಯ ಮತ್ತು ಸಾಮಾಜಿಕ ವರ್ತನೆಗಳು ವಸಾಹತುಶಾಹಿ ಶ್ರೇಷ್ಠತೆಗಿಂತ ಸಮಾನತೆ, ನ್ಯಾಯ ಮತ್ತು ಕಲ್ಯಾಣದ ಮಾನದಂಡಗಳಿಂದ ಮಾರ್ಗದರ್ಶಿಸಲ್ಪಡಬೇಕು ಎಂದು ತಜ್ಞರು ವಾದಿಸುತ್ತಾರೆ. ಸಂಶೋಧಕ ಮೈಕೆಲ್ ಬಿರ್ನ್‌ಹ್ಯಾಕ್ ಉಲ್ಲೇಖಿಸಿರುವಂತೆ ಅಪಾಯಕಾರಿ ಜಗತ್ತಿನಲ್ಲಿ ವಸಾಹತು ಶಾಹಿ ಆಡಳಿತದ ಮೇಲೆ ನಿಯಂತ್ರಣ ಅತ್ಯಗತ್ಯ ಎಂದು ತಿಳಿಸಿದ್ದಾರೆ. ವಸಾಹತು ಶಾಹಿ ವಿಧಾನಗಳಿಗೆ ಪರ್ಯಾಯ ವಿಧಾನ ಅನುಮತಿಸುವ ಅಗತ್ಯವಿದೆ ಎಂದು ಸಾರಿದ್ದಾರೆ.

  ಭಾರತದ ನಿಲುವೇನು?

  EU ದೇಶಗಳ ಲಸಿಕೆ ರಾಷ್ಟ್ರೀಯತೆಯು ದೇಶದ 2 ಮಾನದಂಡಗಳನ್ನು ಬಹಿರಂಗಪಡಿಸುತ್ತದೆ. ರಾಜ್ಯಗಳಲ್ಲಿ ಲಸಿಕೆ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಂಡು ಕೇಂದ್ರವು ವಾಣಿಜ್ಯ ರೀತಿಯಲ್ಲಿ ಲಸಿಕೆಗಳನ್ನು ಬೇರೆ ದೇಶಗಳಿಗೆ ರಫ್ತುಮಾಡುವ ಚಾಲನೆಯನ್ನು ಆರಂಭಿಸಿದೆ. ಆಪರೇಶನ್ ವ್ಯಾಕ್ಸಿನ್ ಮೈತ್ರಿ ಭಾಗವಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ. ರಾಜ್ಯಗಳಲ್ಲಿ ಸಾಕಷ್ಟು ಲಸಿಕೆಗಳ ಲಭ್ಯವಿರುವುದರಿಂದ 108 ಲಕ್ಷ ಡೋಸ್ ಕೋವ್ಯಾಕ್ಸಿನ್‌ ರಫ್ತುಮಾಡಲು ಭಾರತ್ ಬಯೋಟೆಕ್ ಕೇಂದ್ರದ ಒಪ್ಪಿಗೆ ಪಡೆದುಕೊಂಡಿದೆ ಎಂಬುದಾಗಿ CNN-News18 ಗೆ ಮಾಹಿತಿ ಲಭ್ಯವಾಗಿದೆ.

  ಕೋವ್ಯಾಕ್ಸಿನ್‌ ಅನ್ನು ಪೆರುಗ್ವೆ, ಬೋಟ್ಸ್ವಾನಾ, ವಿಯೆಟ್ನಾಂ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಕ್ಯಾಮರೂನ್ ಮತ್ತು ಯುಎಇ ಸೇರಿ 8 ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಕೋವಿಡ್ -19ಗೆ ಕಾರಣವಾಗುವ ವೈರಸ್‌ನ ಓಮಿಕ್ರಾನ್ ರೂಪಾಂತರವು ಕಂಡುಬಂದ 12 ದೇಶಗಳಲ್ಲಿ ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾ ಕೂಡ ಸೇರಿದೆ.
  Published by:Kavya V
  First published: