ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಆರಂಭಿಸಿ ದಶಕವೇ ಕಳೆದಿದೆ. ಆದರೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಅದಕ್ಕೆ ಕಾರಣ ತಮಿಳುನಾಡಿನ ತಗಾದೆ. ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬಂದರೆ ತಮಿಳುನಾಡಿಗೆ ಮತ್ತು ಅಲ್ಲಿನ ರೈತರಿಗೆ ಅನ್ಯಾಯವಾಗಲಿದೆ. ತಮಿಳುನಾಡಿನ ಪಾಲಿನ ನೀರಿಗೆ ಕುತ್ತಾಗಲಿದೆ ಎಂಬುದು ನೆರೆ ರಾಜ್ಯದ ವಾದ ಇದೇ ಕಾರಣಕ್ಕೆ ತಮಿಳುನಾಡು ಸರ್ಕಾರ ಕಳೆದ ಒಂದು ದಶಕಗಳಿಂದ ಯೋಜನೆಯ ವಿರುದ್ಧ ದ್ವನಿ ಎತ್ತುತ್ತಿದೆ. ಈಗ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ಇಂದು ತಮಿಳುನಾಡು ಸರ್ಕಾರ ಅಲ್ಲಿನ ಸರ್ವ ಪಕ್ಷಗಳ ಸಭೆ ಕರೆದಿದೆ.
ಇದೇ ಜುಲೈ 7ರಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದಾರೆ. ಭೇಟಿ ವೇಳೆ "ಯೋಜನೆ ಬಗೆಗಿನ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೆ ಯೋಜನೆಗೆ ಅನುಮತಿ ಕೊಡಬೇಡಿ. ಕರ್ನಾಟಕ ತರಾತುರಿಯಲ್ಲಿ ಯೋಜನೆ ಆರಂಭಿಸುತ್ತಿದೆ. ಈ ಯೋಜನೆ ಆರಂಭವಾದರೆ ಎರಡೂ ರಾಜ್ಯಗಳ ಗಡಿಯಲ್ಲಿ ಮತ್ತೆ ಸಮಸ್ಯೆ ಉಲ್ಬಣವಾಗುತ್ತದೆ. ತಮಿಳುನಾಡಿನ ರೈತರಿಗೆ ಅನ್ಯಾಯವಾಗಲಿದೆ" ಎಂದು ದೂರು ನೀಡಿದ್ದರು ಎನ್ನಲಾಗಿದೆ.
ಕರ್ನಾಟಕ ಮತ್ತು ತಮಿಳುನಾಡಿಗೆ ಕಾವೇರಿ ನೀರನ್ನು ನ್ಯಾಯಯುತವಾಗಿ ಹಂಚಲೆಂದೇ ಕೇಂದ್ರ ಸರ್ಕಾರ ದಶಕಗಳ ಹಿಂದೆಯೇ ಕಾವೇರಿ ಟ್ರಿಬ್ಯುನಲ್ ಸ್ಥಾಪಿಸಿದೆ. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಕಾವೇರಿ ನೀರು ಹಂಚಿಕೆ ಸಂಬಂಧ ತಮ್ಮ ಎಲ್ಲಾ ವ್ಯಾಜ್ಯಗಳನ್ನೂ ಬಗೆಹರಿಸಿಕೊಳ್ಳುವುದು ಇಲ್ಲೆ. ಇದೀಗ ಮೇಕೆದಾಟು ವಿಚಾರವೂ ಇದೇ ಟ್ರಿಬ್ಯುನಲ್ ಮುಂದೆ ಇದೆ. ಆದರೆ, ದೇಶದಲ್ಲಿ ನದಿ ನೀರು ಹಂಚಿಕೆ ಸಂಬಂಧ ಕಿತ್ತಾಟ ನಡೆಸುತ್ತಿರುವುದು ಕೇವಲ ಈ ಎರಡು ರಾಜ್ಯಗಳು ಮಾತ್ರವಲ್ಲ. ಬದಲಾಗಿ ಎಲ್ಲಾ ರಾಜ್ಯಗಳ ನಡುವೆಯೂ ಈ ರೀತಿಯ ವ್ಯಾಜ್ಯ ಇದ್ದೇ ಇದೆ. ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾಕಷ್ಟು ಹಿಂಸಾಚಾರಗಳು ಸಂಭವಿಸಿದಂತೆ, ಬೇರೆ ರಾಜ್ಯಗಳಲ್ಲೂ ಸಹ ಇಂತಹ ಸೂಕ್ಷ್ಮ ಜಲವಿವಾದಗಳು ಅಸ್ತಿತ್ವದಲ್ಲಿವೆ. ಆ ಕುರಿತು ಸಂಕ್ಷಿಪ್ತ ಮಾಹಿತಿ ಮಾಹಿತಿ ಇಲ್ಲಿದೆ.
ನರ್ಮದಾ ನದಿ ವಿವಾದ:
ನರ್ಮದಾ ನದಿ ನೀರಿನ ಹಂಚಿಕೆ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವಿನ ವ್ಯಾಜ್ಯವಾಗಿದೆ. ಮಧ್ಯಪ್ರದೇಶದ ಅಮರ್ಕಾಂತಕ್ನಲ್ಲಿ ಹುಟ್ಟಿ ಹರಿಯುವ ಈ ನದಿಯ ಉದ್ದ 1,300 ಕಿ.ಮೀ. ಮತ್ತು ನದಿಪಾತ್ರ 98,796 ಚದರ ಕಿ.ಮೀ. ಇದೆ. ನರ್ಮದಾ ನದಿ ವಿವಾದವು ಮಹಾರಾಷ್ಟ್ರ, ಗುಜರಾತ್ ಮಾತ್ರವಲ್ಲದೇ ಮಧ್ಯಪ್ರದೇಶಕ್ಕೂ ಸಹ ಸಂಬಂಧಿಸಿದೆ. ಸರ್ದಾರ್ ಸರೋವರ್ ಅಣೆಕಟ್ಟು ನರ್ಮದಾ ನದಿಯ ಮೇಲೆ ಕಟ್ಟಲ್ಪಟ್ಟಿದೆ.
1956ರ ಅಂತರರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ, ಕೇಂದ್ರ ಸರ್ಕಾರವು ನರ್ಮದಾ ಜಲ ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಿತು. ನ್ಯಾಯಮೂರ್ತಿ ವಿ. ರಾಮಸ್ವಾಮಿ ಅಧ್ಯಕ್ಷರಾಗಿದ್ದರು. ರಾಮಸ್ವಾಮಿ ನ್ಯಾಯಾಧೀಕರಣ ಡಿಸೆಂಬರ್ 7, 1979 ರಂದು ತೀರ್ಪು ನೀಡಿತು. ಇದು ಸಹ ಇನ್ನೂ ವಿವಾದಾತ್ಮಕವಾಗಿದೆ.
ಯಮುನಾ ನದಿ ವಿವಾದ:
ಯಮುನಾ ನದಿ ನೀರಿನ ವಿವಾದವು ತುಂಬಾ ಹಳೆಯದು. ಇದು ಒಟ್ಟು ಐದು ರಾಜ್ಯಗಳಿಗೆ ಸಂಬಂಧಿಸಿದೆ. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲಪ್ರದೇಶ ರಾಜ್ಯಗಳನ್ನು ಸಂಪರ್ಕಿಸುತ್ತದೆ. 1954 ರಲ್ಲಿ ಮೊದಲನೆಯದಾಗಿ ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ನಡುವೆ ಯಮುನಾ ನದಿ ಒಪ್ಪಂದವಾಯಿತು.
ಯಮುನಾ ನದಿಯಲ್ಲಿ ಹರಿಯಾಣದ ಪಾಲು ಶೇ. 77 ರಷ್ಟು ಮತ್ತು ಉತ್ತರ ಪ್ರದೇಶದ ಪಾಲು ಶೇ.23 ರಷ್ಟಿತ್ತು. ರಾಜಸ್ಥಾನ, ದೆಹಲಿ ಮತ್ತು ಹಿಮಾಚಲಪ್ರದೇಶದ ಉಲ್ಲೇಖಗಳು ಬಂದಿಲ್ಲ. ಈ ರಾಜ್ಯಗಳು ತಮ್ಮ ಪಾಲಿನ ಬೇಡಿಕೆಗಾಗಿ ತೀವ್ರ ವಿವಾದವನ್ನು ಪ್ರಾರಂಭಿಸಿವೆ.
ಸೋನಾ ನದಿ ವಿವಾದ:
ಸೋನಾ ನದಿ ನೀರಿನ ವಿವಾದವು ಮೂರು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ಇದೆ. 1973 ರಲ್ಲಿ, ಸೋನಾ ಮತ್ತು ರಿಹಂದ್ ನದಿಗಳ ನಡುವಿನ ನೀರಿನ ವಿವಾದವನ್ನು ಪರಿಹರಿಸಲು ಬನ್ಸಾಗರ್ ಒಪ್ಪಂದವನ್ನುಮಾಡಿಕೊಳ್ಳಲಾಯಿತು.
ಆರಂಭದಿಂದಲೂ ಈ ಒಪ್ಪಂದವನ್ನು ಸರಿಯಾಗಿ ಜಾರಿಗೊಳಿಸಿಲ್ಲ ಎಂದು ಬಿಹಾರ ಆರೋಪಿಸಿದೆ. ಈ ಒಪ್ಪಂದದ ಪ್ರಕಾರ, ರಿಹಾಂಡ್ ನದಿಯ ಸಂಪೂರ್ಣ ನೀರನ್ನು ಬಿಹಾರಕ್ಕೆ ಹಂಚಲಾಗಿತ್ತು. ಆದರೆ ಎನ್ಟಿಪಿಸಿ ಮತ್ತು ಉತ್ತರ ಪ್ರದೇಶ ಸರಕಾರವು ಬಿಹಾರ್ ನದಿಯ ಹಿಂಭಾಗದ ಜಲಾಶಯದಿಂದ ನೀರು ಬಳಸುತ್ತಿವೆ.
ಕೃಷ್ಣಾ ನದಿ ವಿವಾದ:
ಕೃಷ್ಣಾ ನದಿ ನೀರು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ವಿವಾದಕ್ಕೆ ಕಾರಣವಾಗಿದೆ. ಈ ನದಿಯು ಮಹಾಬಲೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರದ ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ನಡುವೆ ಹಾಗೂ ಕರ್ನಾಟಕ, ದಕ್ಷಿಣ ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಕೃಷ್ಣಾ ನದಿಯು ಕರ್ನಾಟಕದ 60 ಪ್ರತಿಶತದಷ್ಟು 3 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.
ಈ ನದಿಯ ವಿವಾದವನ್ನು ಪರಿಹರಿಸಲು, 1969 ರಲ್ಲಿ ಬಚ್ಚವತ್ ಟ್ರಿಬ್ಯೂನಲ್ ಸ್ಥಾಪನೆಯಾಯಿತು. ಅದು 1976 ರಲ್ಲಿ ತೀರ್ಪು ನೀಡಿತು. ಈ ತೀರ್ಪಿನಲ್ಲಿ ಕರ್ನಾಟಕ 700 ಬಿಲಿಯನ್ ಕ್ಯೂಸೆಕ್, ಆಂಧ್ರ ಪ್ರದೇಶ 800 ಬಿಲಿಯನ್ ಕ್ಯೂಸೆಕ್ ಮತ್ತು ಮಹಾರಾಷ್ಟ್ರ 560 ಬಿಲಿಯನ್ ಕ್ಯೂಸೆಕ್ ನೀರನ್ನು ಬಳಸಲು ಅನುಮತಿ ನೀಡಿತು.
ಗೋದಾವರಿ ನದಿ ನೀರಿನ ವಿವಾದ:
ಗೋದಾವರಿ ಭಾರತದ ದೊಡ್ಡ ನದಿ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಹುಟ್ಟುತ್ತದೆ. ಅದರ ಉದ್ದ 1,465 ಕಿ.ಮೀ . ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಒಡಿಶಾ ಮತ್ತು ಆಂಧ್ರಪ್ರದೇಶದ ನಡುವೆ ಗೋದಾವರಿ ನೀರಿಗಾಗಿ ಸಾಕಷ್ಟು ವಿವಾದಗಳಾಗಿವೆ. ಇದನ್ನು ಪರಿಹರಿಸಲು, ಏಪ್ರಿಲ್ 1969 ರಲ್ಲಿ ಸರ್ಕಾರ ಸಮಿತಿಯು ರಚನೆಯಾಯಿತು. ಈ ಸಂದರ್ಭದಲ್ಲಿ, ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದರೂ, ಗೋದಾವರಿ ನದಿ ನೀರಿನ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ.
ಇದನ್ನೂ ಓದಿ: ಮೇಕೆದಾಟು ಯೋಜನೆ ವಿರುದ್ಧ ಕೇಂದ್ರದ ಮೇಲೆ ಒತ್ತಡ ಹೇರಲು ಇಂದು ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ
ಸಟ್ಲೇಜ್-ರಾವಿ- ವ್ಯಾಸ ನದಿ ವಿವಾದ:
ಪಂಜಾಬ್ನಲ್ಲಿ ನದಿ ನೀರಿನ ವಿವಾದದ ವಿಷಯ ಇತ್ತು. ನವೆಂಬರ್ 1966 ರಲ್ಲಿ ಪಂಜಾಬ್ನ ಒಂದು ಭಾಗವನ್ನು ಪ್ರತ್ಯೇಕಿಸಿ ಹೊಸ ರಾಜ್ಯ ಹರಿಯಾಣವನ್ನು ಸ್ಥಾಪಿಸಲಾಯಿತು. ಸಟ್ಲೆಜ್, ರಾವಿ ಮತ್ತು ವ್ಯಾಸ ನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದ ವಿವಾದವು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವೆ ನಡೆಯುತ್ತಿದೆ.
- ಮಹಾನದಿ ನೀರಿನ ವಿವಾದ - ಗುಜರಾತ್, ರಾಜಸ್ಥಾನ ಮತ್ತು ಮಧ್ಯ ಪ್ರದೇಶ
- ಕರ್ಮನಾಶ ನದಿ ನೀರಿನ ವಿವಾದ - ಉತ್ತರ ಪ್ರದೇಶ ಮತ್ತು ಬಿಹಾರ
- ಬರಾಕ್ ನದಿ ನೀರಿನ ವಿವಾದ - ಅಸ್ಸಾಂ ಮತ್ತು ಮಣಿಪುರ
- ಅಲಿಯಾರ್ ಮತ್ತು ಭವಾನಿ ನದಿಯ ನೀರಿನ ವಿವಾದಗಳು - ತಮಿಳುನಾಡು ಮತ್ತು ಕೇರಳ
- ತುಂಗಭದ್ರ ನದಿ ನೀರಿನ ವಿವಾದ - ಆಂಧ್ರಪ್ರದೇಶ ಮತ್ತು ಕರ್ನಾಟಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ