ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ಈರುಳ್ಳಿ, ಟೊಮಾಟೊ ಮತ್ತಿತರ ತರಕಾರಿ ಬೆಲೆಗಳು ಗಗನಕ್ಕೇರಿವೆ. ಯಾಕೆ ಆಗಾಗ ಈರುಳ್ಳಿ ಬೆಲೆ ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ನೆಲ ಕಚ್ಚುತ್ತದೆ? ಈಗ ಈರುಳ್ಳಿ ಮತ್ತು ಟೊಮಾಟೊ ಬೆಲೆ ಹೆಚ್ಚಾಗಲು ಕಾರಣವೇನು? ಈ ಎಲ್ಲದಕ್ಕೂ ನೇರ ಹೊಣೆ ಇಂಧನ ಬೆಲೆ ಏರಿಕೆ, ಜೊತೆಗೆ ಈ ಬಾರಿ ಮುಂಗಾರು ಅಂತ್ಯವಾದರೂ ನಿಲ್ಲದ ಮಳೆ. ಸಾಮಾನ್ಯವಾಗಿ ಈ ವೇಳೆಗೆಲ್ಲಾ ಮಳೆರಾಯ ಮುಂಗಾರಿನ ಕೆಲಸ ಮುಗಿಸಿ ಸುಮ್ಮನಾಗುತ್ತಿದ್ದ. ಆದರೆ ಈ ಬಾರಿ ಇನ್ನೂ ಮಳೆ ಸುರಿಯುತ್ತಲೇ ಇದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಈ ಬಾರಿಯ ಅತೀವೃಷ್ಟಿಯಿಂದ ಈರುಳ್ಳಿ ಬೆಳೆ ನಷ್ಟವಾಗಿದೆ. ಇದೇ ಕಾರಣಕ್ಕೆ ಬೇಡಿಕೆಗೆ ತಕ್ಕಷ್ಟು ಇಳುವರಿ ಇಲ್ಲದೇ, ಬೆಲೆ ಏರಿಕೆಯಾಗುತ್ತಿದೆ. ಟೊಮಾಟೊ ಬೆಳೆಯದ್ದೂ ಇದೇ ಕತೆ.
ಕಣ್ಣೀರು ತರಿಸಲು ಸಿದ್ಧವಾದ ಈರುಳ್ಳಿ:
ಸಾಮಾನ್ಯವಾಗಿ ಮನೆಯಲ್ಲಿ ಯಾವ ತರಕಾರಿ ಇಲ್ಲದಿದ್ದರೂ ನಡೆಯುತ್ತದೆ, ಆದರೆ ಈರುಳ್ಳಿ ಇಲ್ಲ ಎಂದರೆ ಅಡುಗೆ ಅಸಾಧ್ಯ ಎಂಬ ಮಟ್ಟಿಗೆ ನಾವು ಈರುಳ್ಳಿಯ ಮೇಲೆ ಅವಲಂಬಿತರಾಗಿದ್ದೇವೆ. ಈರುಳ್ಳಿ ಬೆಲೆ ನೂರು ರೂಪಾಯಿ ಆದರೂ ಜನ ಖರೀದಿಸುತ್ತಾರೆ. ಕಳೆದ ವರ್ಷ ಈರುಳ್ಳಿ ಬೆಲೆ ನಷ್ಟವಾದ ಕಾರಣ, ಮೊದಲ ಬಾರಿಗೆ ಈಜಿಪ್ಟ್ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಯಿತು. ಭಾರತದಲ್ಲಿ ಬೆಳೆದ ಈರುಳ್ಳಿಯನ್ನು ಕೊಳ್ಳಲು ಸಾಧ್ಯವೇ ಇಲ್ಲ ಎಂಬಷ್ಟು ಬೆಲೆ ಏರಿಕೆಯಾಗಿತ್ತು. ಇದೇ ಕಾರಣಕ್ಕೆ ತಿನ್ನಲು ರುಚಿಯೇ ಇಲ್ಲದ ಈರುಳ್ಳಿ ಆಮದು ಮಾಡಿಕೊಳ್ಳಲಾಯ್ತು. ಅದರ ಬೆಲೆಯೂ ಅಗತ್ಯಕ್ಕಿಂತ ಹೆಚ್ಚೇ ಇದ್ದರೂ ಜನ ಅನಿವಾರ್ಯವಾಗಿ ಖರೀದಿಸಿದರು.
ಈ ಬಾರಿಯೂ ಈರುಳ್ಳಿ ಬೆಲೆ ಏರಿಕೆ ಆರಂಭವಾಗಿದೆ. ಮಳೆ (Monsoon Rain) ಇನ್ನೂ ಮುಂದುವರೆದರೆ ಮತ್ತೆ ನೂರರ ಗಡಿ ಮುಟ್ಟುವ ಸಾಧ್ಯತೆಯೂ ಇದೆ. ಒಂದೆಡೆ ಅತೀವೃಷ್ಟಿಯಿಂದ ಬೆಳೆ ಹಾನಿ ಇನ್ನೊಂದೆಡೆ ಗಗನಕ್ಕೇರುತ್ತಿರುವ ತೈಲಬೆಲೆ. ಈ ಎರಡರ ಜುಗಲ್ಬಂದಿಯಲ್ಲಿ ಈರುಳ್ಳಿ ಮತ್ತು ಟೊಮಾಟೊ ಬೆಲೆ ದಿನದಿಂದ ದಿನ ಹೆಚ್ಚಾಗುತ್ತಿದೆ.
ಪೆಟ್ರೋಲ್ - ಡೀಸೆಲ್ ಪೆಟ್ಟು (Petrol and Diesel Price):
ಪೆಟ್ರೋಲ್ ಬೆಲೆ (Petrol Price) ಸುಮಾರು 110 ಆಗಿದ್ದರೆ ಡೀಸೆಲ್ ಕೂಡ 100ರ ಗಡಿ ಮುಟ್ಟಿದೆ. ಇಂಧನ ಬೆಲೆ ಹೆಚ್ಚಾದರೆ ದಿನಬಳಕೆ ವಸ್ತುಗಳು, ತರಕಾರಿ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಇಂಧನ ಬೆಲೆ ಪ್ರತಿಯೊಂದು ವಸ್ತುವಿಗೂ ನೇರವಾಗಿ ಕನೆಕ್ಟ್ ಆಗಿದೆ. ಟ್ರಾನ್ಸ್ಪೋರ್ಟೇಷನ್ ವೆಚ್ಚ ನಿಂತಿರುವುದೇ ತೈಲಬೆಲೆ ಮೇಲೆ. ಅದರಲ್ಲೂ Diesel ಬೆಲೆ 100ರ ಗಡಿ ದಾಟಿರುವುದು, ಟ್ರಾನ್ಸ್ಪೋರ್ಟೇಷನ್ ವೆಚ್ಚ ಇಮ್ಮಡಿಯಾಗುವಂತೆ ಮಾಡಿದೆ.
ಪ್ರತಿಯೊಂದು ವಸ್ತು ಅಥವಾ ತರಕಾರಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಎಷ್ಟು ವೆಚ್ಚ ಹಿಡಿಯುತ್ತದೆ ಎಂಬುದರ ಮೇಲೆ ಅದರ ಅಂತಿಮ ಬೆಲೆ ನಿಗದಿಯಾಗುತ್ತದೆ. ಒಂದು ಕೆಜಿ ಈರುಳ್ಳಿ ರೈತ ಬೆಳೆದ ಜಮೀನಿನಿಂದ ಮಾರುಕಟ್ಟೆ ಸೇರಲು ಎಷ್ಟು ರೂಪಾಯಿ ಹಿಡಿಯುತ್ತದೆ ಎಂಬುದರ ಮೇಲೆ ಅದರ ಬೆಲೆ ನಿರ್ಧರಿತವಾಗುತ್ತದೆ.
ಇದನ್ನೂ ಓದಿ: ವಾಸ್ತವದ ಬಗ್ಗೆ ಮಾತನಾಡದ ಪ್ರಧಾನಿಗಳು ಮೌನೇಂದ್ರ ಮೋದಿ ಎಂದು ಹೆಸರು ಬದಲಿಸಿಕೊಳ್ಳಲಿ: ಕಾಂಗ್ರೆಸ್
ಈ ಹಿಂದೆ ಒಂದು ಟನ್ ಈರುಳ್ಳಿ ಸಾಗಿಸುವ ವೆಚ್ಚ 1000 ರೂ ಆಗಿದ್ದರೆ, ಈಗ 5000 ರೂ ಆಗಿದೆ. 70 ರೂ ಇದ್ದ ಡೀಸೆಲ್ ಬೆಲೆ 100ರ ಗಡಿ ದಾಟಿದೆ. ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆಗೆ ಏನೇ ಸಬೂಬು ಹೇಳಿದರೂ, ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಇದು ನೇರ ಪೆಟ್ಟು ಕೊಟ್ಟಿದೆ.
ಇದನ್ನೂ ಓದಿ: Explained: ದಕ್ಷಿಣ ಕೇರಳದಲ್ಲಿ ಭಾರೀ ಮಳೆ ಮತ್ತು ಭೂಕುಸಿತಕ್ಕೆ ಕಾರಣವೇನು ಗೊತ್ತಾ..? ವಿವರ ಇಲ್ಲಿದೆ
ಹೋಲ್ಸೇಲ್ ಮಾರುಕಟ್ಟೆಯಲ್ಲೇ ಕೆಲವೆಡೆ ಈರುಳ್ಳಿ ಬೆಲೆ 45 ಮತ್ತು ಟೊಮಾಟೊ ಬೆಲೆ 40 ಮುಟ್ಟಿದೆ. ಭಾನುವಾರ ಬೆಂಗಳೂರು, ಚೆನ್ನೈ, ಕೋಲ್ಕತಾ, ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ರೀಟೆಲ್ ಬೆಲೆ ಈರುಳ್ಳಿ 50 ರಿಂದ 55 ಆಗಿದ್ದರೆ ಟೊಮಾಟೊ ಬೆಲೆ 45-50 ಆಗಿದೆ. ತಜ್ಞರ ಪ್ರಕಾರ ಇನ್ನೊಂದು ವಾರದಲ್ಲಿ ಈರುಳ್ಳಿ ಬೆಲೆ ನೂರರ ಗಡಿ ದಾಟಲಿದೆ ಮತ್ತು ಟೊಮಾಟೊ ಬೆಲೆ ಸುಮಾರು 80ಕ್ಕೇರಲಿದೆ. ಈರುಳ್ಳಿ ಬೆಲೆ ಏರಿಕೆಯಿಂದ ಮತ್ತೆ ಜನ ತೊಂದರೆ ಅನುಭವಿಸಲು ಆರಂಭಿಸಿದ್ದಾರೆ, ಈಗಲಾದರೂ ಇಂಧನ ಬೆಲೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ