ಮೇ 26 ಅಂದರೆ ಇವತ್ತು ದೇಶದ ಕೆಲವೆಡೆ ಸೇರಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಅಲ್ಲದೆ, ಚಂದ್ರನು ಭೂಮಿಗೆ ಹತ್ತಿರ ಬರಲಿದ್ದು, ಈ ಹಿನ್ನೆಲೆ ಹುಣ್ಣಿಮೆ ಚಂದ್ರ ''ಸೂಪರ್‌ಮೂನ್'' ಆಗಿ ಕಾಣಿಸುತ್ತದೆ. ಜನವರಿ 2019ರ ನಂತರ ನಡೆಯುತ್ತಿರುವ ಮೊದಲ ಸಂಪೂರ್ಣ ಚಂದ್ರಗ್ರಹಣ ಹಾಗೂ ಈ ವರ್ಷದ ಮೊದಲ ಗ್ರಹಣ ಇಂದು ಗೋಚರಿಸಲಿದೆ. ಗಮನಾರ್ಹವಾಗಿ, ಸೂಪರ್‌ಮೂನ್ ಮತ್ತು ಸಂಪೂರ್ಣ ಚಂದ್ರಗ್ರಹಣವು ಸುಮಾರು ಆರು ವರ್ಷಗಳಲ್ಲಿ ಒಟ್ಟಿಗೆ ಸಂಭವಿಸಿಲ್ಲ ಎನ್ನುವುದು ಸಹ ಈ ದಿನದ ವಿಶೇಷ. ಭೂಗೋಳದ ಈ ಕೌತುಕಕ್ಕೆ ಹಲವು ವಿಜ್ಞಾನಿಗಳು ಹಾಗೂ ಹಲವು ಜನರು ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ.
ಸೂಪರ್‌ಮೂನ್ ಎಂದರೇನು..?
ಚಂದ್ರನ ಕಕ್ಷೆಯು ಭೂಮಿಗೆ ಹತ್ತಿರದಲ್ಲಿದ್ದಾಗ ಅದೇ ಸಮಯದಲ್ಲಿ ಪೂರ್ಣ ಚಂದಿರ ಅಥವಾ ಹುಣ್ಣಿಮೆ ಚಂದ್ರ ಇದ್ದಾಗ ಸೂಪರ್‌ಮೂನ್ ಸಂಭವಿಸುತ್ತದೆ ಎಂದು ನಾಸಾ ಹೇಳುತ್ತದೆ.
ಚಂದ್ರನು ಭೂಮಿಯನ್ನು ಪರಿಭ್ರಮಿಸುತ್ತಿದ್ದಂತೆ, ಇವೆರಡರ ನಡುವಿನ ಅಂತರವು ಕನಿಷ್ಠವಾಗಿದ್ದಾಗ (ಸರಾಸರಿ ದೂರವು ಭೂಮಿಯಿಂದ 360,000 ಕಿ.ಮೀ ದೂರದಲ್ಲಿರುವಾಗ ಪೆರಿಗೀ ಎಂದು ಕರೆಯಲಾಗುತ್ತದೆ) ಮತ್ತು ದೂರವು ಹೆಚ್ಚು ಇರುವ ಸಮಯ ( ಭೂಮಿಯಿಂದ ಸುಮಾರು 405,000 ಕಿ.ಮೀ ದೂರದಲ್ಲಿರುವಾಗ ಅಪೊಗೀ ಎಂದು ಕರೆಯಲಾಗುತ್ತದೆ).
ಇಲ್ಲಿ, ಭೂಮಿ ಮತ್ತು ಚಂದ್ರನ ನಡುವಿನ ಅಂತರವು ಕನಿಷ್ಠವಾಗಿದ್ದಾಗ ಹಾಗೂ ಹುಣ್ಣಿಮೆ ಕಾಣಿಸಿಕೊಂಡಾಗ, ಅದು ಪ್ರಕಾಶಮಾನವಾಗಿ ಕಾಣುತ್ತದೆ. ಮಾತ್ರವಲ್ಲದೆ ಅದು ಸಾಮಾನ್ಯ ಹುಣ್ಣಿಮೆಗಿಂತ ದೊಡ್ಡದಾಗಿದೆ. ಸೂಪರ್‌ಮೂನ್ ಎಂಬ ಪದವನ್ನು 1979 ರಲ್ಲಿ ಜ್ಯೋತಿಷಿ ರಿಚರ್ಡ್ ನೊಲ್ಲೆ ರಚಿಸಿದರು ಎಂದು ನಾಸಾ ಹೇಳುತ್ತದೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ, 2 - 4 ಹುಣ್ಣಿಮೆ ಸೂಪರ್‌ಮೂನ್‌ಗಳು ಮತ್ತು 2 - 4 ಆಮಾವಾಸ್ಯೆ ಸೂಪರ್‌ಮೂನ್‌ಗಳು (New Supermoon) ಇರಬಹುದು.
ಒಂದು ತಿಂಗಳ ಹಿಂದೆ ಏಪ್ರಿಲ್ 26 ರಂದು ಮತ್ತೊಂದು ಹುಣ್ಣಿಮೆ ಇತ್ತು, ಆದರೆ ಮೇ 26 ರಂದು ಸಾಕ್ಷಿಯಾಗಲಿರುವ ಸೂಪರ್‌ಮೂನ್ ಶೇಕಡಾ 0.04 ರಷ್ಟು ಅಂತರದಿಂದ ಭೂಮಿಗೆ ಹತ್ತಿರವಾಗಲಿದೆ.
ಹಾಗಾದರೆ, ಮೇ 26 ರಂದು ಏನಾಗುತ್ತದೆ..?
ಮೇ 26ರಂದು ಒಂದೇ ಸಮಯದಲ್ಲಿ ಆಕಾಶದಲ್ಲಿ ಎರಡು ಘಟನೆಗಳು ನಡೆಯಲಿವೆ. ಒಂದು ಸೂಪರ್‌ಮೂನ್ ಮತ್ತು ಇನ್ನೊಂದು ಚಂದ್ರ ಗ್ರಹಣ, ಇದು ಚಂದ್ರ ಮತ್ತು ಸೂರ್ಯ ಭೂಮಿಯ ಎದುರು ಬದಿಗಳಲ್ಲಿರುವಾಗ ಸಂಭವಿಸುತ್ತದೆ. ಸಂಪೂರ್ಣ ಚಂದ್ರಗ್ರಹಣದಿಂದಾಗಿ ಚಂದ್ರ ಕೂಡ ಕೆಂಪು ಬಣ್ಣದ್ದಾಗಿ ಕಾಣಿಸುತ್ತದೆ. ಏಕೆಂದರೆ ಭೂಮಿಯು ಸೂರ್ಯನಿಂದ ಕೆಲವು ಬೆಳಕನ್ನು ಚಂದ್ರನನ್ನು ತಲುಪದಂತೆ ತಡೆಯುತ್ತದೆ ಮತ್ತು ಭೂಮಿಯ ವಾತಾವರಣವು ಬೆಳಕನ್ನು ಶೋಧಿಸುವಾಗ, ಅದು “ನಮ್ಮ ಗ್ರಹದ ನೆರಳಿನ ಅಂಚನ್ನು” ಮೃದುಗೊಳಿಸುತ್ತದೆ ಹಾಗೂ “ಚಂದ್ರನಿಗೆ ಆಳವಾದ, ಗುಲಾಬಿ ಹೊಳಪನ್ನು ನೀಡುತ್ತದೆ.”
ಬುಧವಾರ ಬೆಳಗ್ಗೆ, ಚಂದ್ರನು ಭೂಮಿಯ ವಿರುದ್ಧ ದಿಕ್ಕಿನಲ್ಲಿರುತ್ತಾನೆ ಮತ್ತು ಬೆಳಗ್ಗೆ 6: 13 ಕ್ಕೆ ಸೆಂಟ್ರಲ್ ಡೇಲೈಟ್ ಟೈಮ್ (ಸಿಡಿಟಿ) ಯಲ್ಲಿ ಸಂಪೂರ್ಣವಾಗಿ ಪ್ರಕಾಶಿಸಲ್ಪಡುತ್ತದೆ. ಅಂದರೆ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ (ಐಎಸ್‌ಟಿ)ನಲ್ಲಿ ಈ ವೇಳೆ ಸಂಜೆ 4 ಗಂಟೆ ಆಗಿರುತ್ತದೆ. ಆಕಾಶವು ಸ್ಪಷ್ಟವಾಗಿದ್ದರೆ, ಮೋಡ ಕವಿಯದಿದ್ದರೆ ಪ್ರಪಂಚಾದ್ಯಂತದ ವೀಕ್ಷಕರಿಗೆ ರಾತ್ರಿಯಿಡೀ ಸೂಪರ್‌ಮೂನ್ ವೀಕ್ಷಿಸಲು ಸಾಧ್ಯವಾಗುತ್ತದೆ. ಇದು ತಡರಾತ್ರಿಯಲ್ಲಿ ಹಾಗೂ ಬೆಳಗ್ಗಿನ ಜಾವದ ಸಮಯದಲ್ಲಿ ಸಹ ದೊಡ್ಡದಾಗಿ ಗೋಚರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ