Explained: ಹೇಗಿದೆ ಭಾರತ-ಪಾಕ್ ಸಂಬಂಧ? ವಾಸ್ತವಿಕ ಅಂಶಗಳನ್ನು ವಿವರಿಸುವ ಪುಸ್ತಕವಿದು

ಪಾಕಿಸ್ತಾನದ ಆಂತರಿಕ ಪರಿಸ್ಥಿತಿಗಳ ಸಂಕೀರ್ಣವಾದ ಮುಖಗಳನ್ನು ತೋರಿಸುತ್ತದೆ ಶರತ್ ಸಭರ್ವಾಲ್ ಅವರ ಪುಸ್ತಕ "ಇಂಡಿಯಾಸ್ ಪಾಕಿಸ್ತಾನ್ ಕೊನಂಡ್ರಮ್". ಶರತ್ ಅವರು 1990ರ ಸಮಯವಲ್ಲದೆ, 2009 ರಿಂದ 2013ರವರೆಗೂ ಪಾಕಿಸ್ತಾನದಲ್ಲಿ ಭಾರತದ ಹೈ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದು ಪಾಕಿಸ್ತಾನ ಹಾಗೂ ಅಲ್ಲಿನ ಆಡಳಿತ ಶೈಲಿ ಮತ್ತು ರಾಜಕೀಯ ನಡೆಗಳನ್ನು ಬಹು ಹತ್ತಿರದಿಂದ ಗಮನಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪಾಕಿಸ್ತಾನ (Pakistan) ಸೇರಿದಂತೆ ಸ್ವಾತಂತ್ರ್ಯ (Independence) ದೊರೆಯುವ ಮುಂಚೆ ಎಲ್ಲವೂ ಅಖಂಡ ಭಾರತವೇ ಆಗಿತ್ತು. ಆದರೆ, ದುರದೃಷ್ಟವಶಾತ್ ನಮಗೆ ಸ್ವಾತಂತ್ರ್ಯ ಸಿಕ್ಕಿತೆಂಬ ಸಂತಸ ಒಂದು ಕಡೆಯಾದರೆ ನಮ್ಮ ಒಂದು ಅಂಗ ಕಿತ್ತಿ ಕಳಚಿ ಹೋದದ್ದು ಇನ್ನೊಂದೆಡೆ. ಹೀಗೆ ರೂಪಗೊಂಡ ಭಾರತದ್ದೇ (India) ಭಾಗ ಆಗಿದ್ದ ಇಂದಿನ ಪಾಕಿಸ್ತಾನ ತಾನು ರೂಪಗೊಂಡಾಗಿನಿಂದಲೂ ಭಾರತದ ಜೊತೆ ವೈರತ್ವವನ್ನು ಬುಸುಗುಟ್ಟುತ್ತಲೇ ಬರುತ್ತಿದೆ. ಈಗಾಗಲೇ ಕೆಲವು ಬಾರಿ ಎರಡೂ ದೇಶಗಳ ಮಧ್ಯೆ ಕಾಳಗಗಳು ನಡೆದಿದ್ದು ಪಾಕಿಸ್ತಾನ ಸೋಲಿನ ಪೆಟ್ಟು ತಿಂದಿದೆ. ಅಲ್ಲದೆ, ಈ ಸಂದರ್ಭದಲ್ಲಿ ಎರಡೂ ದೇಶಗಳು (Countries) ಸಾಕಷ್ಟು ಯೋಧರನ್ನು ಕಳೆದುಕೊಂಡಿರುವುದೂ ಸತ್ಯ. ಇಂದಿಗೂ ಪಾಕಿಸ್ತಾನ ಭಾರತಕ್ಕೆ ಹೇಗಾದರೂ ಮಾಡಿ ಪೆಟ್ಟು ನೀಡಲೇಬೇಕು ಎಂದು ಹಲ್ಲು ಕಡಿಯುತ್ತಿರುವುದು ಸುಳ್ಳಲ್ಲ.

ಕಂಗಾಲಾಗುವ ಹಂತಕ್ಕೆ ಬಂದು ತಲುಪಿದ್ಯಾ ಪಾಕ್?
ಇದು ಇಂದು ಅಥವಾ ನಿನ್ನೆಯ ವಿಷಯವಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ನಡೆಯುತ್ತ ಬಂದಿದೆ. ಹಿಂದೊಮ್ಮೆ ಅಮೆರಿಕದ ಬೆಂಬಲದಿಂದ ತನ್ನನ್ನು ತಾನೇ ಶಕ್ತಿಶಾಲಿ ಎಂದು ನಂಬಿ ನಡೆಯುತ್ತಿದ್ದ ಪಾಕಿಸ್ತಾನ ನಡೆದುಕೊಂಡು ಬಂದ ಹಾದಿ ಗಮನಿಸಿದರೆ ಅದು ಯಾವ ರೀತಿಯ ಆಂತರಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು ತನ್ನ ಕಾಲಿನ ಮೇಲೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಸದ್ಯದ ಪರಿಸ್ಥಿತಿಯಂತೂ ಪಾಕಿಸ್ತಾನಕ್ಕೆ ಹಿಂದೆಂದೂ ಬಂದಿರದ ಸ್ಥಿತಿಯಾಗಿದೆ. ಪರಮೋಚ್ಛ ಸ್ಥಿತಿಯಲ್ಲಿರುವ ರಾಜಕೀಯ ಅಸ್ಥಿರತೆ, ಆರ್ಥಿಕ ದಿವಾಳಿತನ, ಕರಗಿದ ವಿದೇಶಿ ಭಂಡಾರ, ಬೆಟ್ಟದಂತಾಗಿರುವ ಹಣದುಬ್ಬರ ಅಕ್ಷರಶಃ ಪಾಕಿಸ್ತಾನವನ್ನು ಕಂಗಾಲಾಗುವ ಹಂತಕ್ಕೆ ತಂದು ನಿಲ್ಲಿಸಿವೆ ಎಂದರೆ ತಪ್ಪಾಗಲಾರದು.

ಆತಂಕದ ಸ್ಥಿತಿಯಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಶಹಬಾಜ್ ಷರೀಫ್
ಈ ಮಧ್ಯೆ ಏಪ್ರಿಲ್ ನಲ್ಲಿ ವಿಶ್ವಾಸಮತದಿಂದ ಸೋತ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಅವರ ಬಳಿಕ ಪ್ರಧಾನಿ ಹುದ್ದೆ ಹಿಡಿದಿರುವ ಶಹಬಾಜ್ ಷರೀಫ್, ಈಗ ನಿಜಕ್ಕೂ ಆತಂಕದ ಸ್ಥಿತಿಯಲ್ಲಿ ಅಧಿಕಾರ ನಡೆಸುವಂತಾಗಿದೆ.

ಇದನ್ನೂ ಓದಿ: Independence Day 2022: ಹೇಗಿತ್ತು 1947ರಲ್ಲಿ ಮೊದಲ ಸ್ವಾತಂತ್ರ್ಯ ಹಬ್ಬ? ಫೋಟೋಗಳಲ್ಲಿ ನೋಡಿ ಅಂದಿನ ಸಂಭ್ರಮ!

ಒಂದೆಡೆ ಮಾಜಿ ಪ್ರಧಾನಿ ಪಾಕಿಸ್ತಾನದ ಸೈನ್ಯ ಹಾಗೂ ಆಡಳಿತದ ಮೇಲೆ ಪ್ರಖರವಾದ ಆರೋಪಗಳನ್ನು ಮಾಡುತ್ತಿದ್ದು ಹೆಚ್ಚಿನ ಜನರ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ. ದೇಶದ ಪರಿಸ್ಥಿತಿ ಸ್ವಲ್ಪವಾದರೂ ಸರಿ ಹೋಗಬೇಕೆಂದರೆ ಪಾಕಿಸ್ತಾನಕ್ಕೆ ಇರುವ ಅತ್ಯಲ್ಪ ಆಯ್ಕೆಗಳಲ್ಲಿ ಒಂದು ಭಾರತದೊಂದಿಗೆ ಮತ್ತೆ ವ್ಯಾಪಾರ-ವಹಿವಾಟುಗಳನ್ನು ಆರಂಭಿಸುವುದಾಗಿದೆ. ಆದರೆ, ಆ ನಿರ್ಧಾರವನ್ನು ಕೈಗೊಳ್ಳುವ ಧೈರ್ಯ ಮಾಡುವಂತಹ ಗಟ್ಟಿ ಗುಂಡಿಗೆ ಸದ್ಯಕ್ಕೆ ಸರ್ಕಾರಕ್ಕಿಲ್ಲ ಎಂದು ಭಾಸವಾಗುತ್ತಿದೆ.

ಅಲ್ಲದೆ, ಭಾರತವೂ ಸಹ ಈ ವಿಷಯದಲ್ಲಿ ಯಾವುದೇ ರೀತಿ ಮಾತುಕತೆಗೆ ಸಿದ್ಧವಾಗಿಲ್ಲ. ಅಷ್ಟಕ್ಕೂ ಇದರಿಂದ ನಷ್ಟವಾಗುತ್ತಿರುವುದು ಪಾಕಿಸ್ತಾನಕ್ಕೇ ಹೊರತು ಭಾರತಕ್ಕಲ್ಲ. ಇನ್ನೊಂದೆಡೆ ನವೆಂಬರ್ ತಿಂಗಳಿನಲ್ಲಿ ಪಾಕಿಸ್ತಾನ ಸೈನ್ಯದ ಪರಮ ನಾಯಕ ಮೇಜರ್ ಜನರಲ್ ಕಮರ್ ಬಾಜ್ವಾ ನಿವೃತ್ತಿಯಾಗುತ್ತಿದ್ದು ಆ ಸ್ಥಾನವನ್ನು ತುಂಬುವವರೇ ಮುಂದಿನ ಐದು ವರ್ಷಗಳ ರಾಜಕೀಯವನ್ನು ಬಹುಶಃ ನಿರ್ಧರಿಸುವ ತಾಕತ್ತು ಹೊಂದಿರುತ್ತಾರೆ ಎಂದು ಹೇಳಬಹುದು.

"ಇಂಡಿಯಾ'ಸ್ ಪಾಕಿಸ್ತಾನ್ ಕೊನಂಡ್ರಮ್" ಪುಸ್ತಕದಲ್ಲಿ ಏನಿದೆ?
ಇಂತಹ ಒಂದು ಸನ್ನಿವೇಶದಲ್ಲಿ ಪಾಕಿಸ್ತಾನ ದೇಶದ ಆಂತರಿಕ ಪರಿಸ್ಥಿತಿಗಳ ಸಂಕೀರ್ಣವಾದ ಮುಖಗಳನ್ನು ತೋರಿಸುತ್ತದೆ ಶರತ್ ಸಭರ್ವಾಲ್ ಅವರ ಪುಸ್ತಕ "ಇಂಡಿಯಾ'ಸ್ ಪಾಕಿಸ್ತಾನ್ ಕೊನಂಡ್ರಮ್". ಶರತ್ ಅವರು 1990ರ ಸಮಯವಲ್ಲದೆ, 2009 ರಿಂದ 2013ರವರೆಗೂ ಪಾಕಿಸ್ತಾನದಲ್ಲಿ ಭಾರತದ ಹೈ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದು ಪಾಕಿಸ್ತಾನ ಹಾಗೂ ಅಲ್ಲಿನ ಆಡಳಿತ ಶೈಲಿ ಮತ್ತು ರಾಜಕೀಯ ನಡೆಗಳನ್ನು ಬಹು ಹತ್ತಿರದಿಂದ ಗಮನಿಸಿದ್ದಾರೆ.

ಈ ಸಂದರ್ಭದಲ್ಲಿ ಶರತ್ ಅವರು "ಕೋಪದಿಂದ ಹುಟ್ಟಿದ ಮತ್ತು ರಾಷ್ಟ್ರೀಯ ಗೌರವದ ಬಗ್ಗೆ ತಪ್ಪು ಕಲ್ಪನೆಗಳನ್ನೇ ಹೊಂದಿರುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತವೆ" ಮತ್ತು "ಭೂಮಿಯ ವಾಸ್ತವಗಳನ್ನು ಒಪ್ಪಿಕೊಂಡು ಅದಕ್ಕನುಗುಣವಾಗಿ ಕೆಲಸ ಮಾಡುವುದು ಜಾಣತನವೇ ಹೊರತು ಪುಸಲಾಯನವಲ್ಲ" ಎಂಬುದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನೀತಿಯನ್ನು ಸವಿವರವಾಗಿ ತಮ್ಮ ಪುಸ್ತಕದಲ್ಲಿ ವಿವರಿಸುತ್ತಾರೆ.

ಆ ನೆಲದ ವಾಸ್ತವಗಳೇನು?
ಸಭರ್ವಾಲ್ ಅವುಗಳನ್ನು ಹೀಗೆ ವಿವರಿಸುತ್ತಾರೆ: ಹೌದು, ಪಾಕಿಸ್ತಾನವು ಅದರ ನಾಗರಿಕ-ಮಿಲಿಟರಿ ಅಸಮತೋಲನ ಮತ್ತು ಜಿಹಾದಿ/ಭಯೋತ್ಪಾದಕ ಗುಂಪುಗಳ ಬಳಕೆಯಿಂದಾಗಿ ನಿಷ್ಕ್ರಿಯ ರಾಜ್ಯವಾಗಿ ಹೋಗಿದೆ. ಆದರೆ, ಇದರರ್ಥ ಪಾಕಿಸ್ತಾನ ಉಳಿಯುವುದಿಲ್ಲ ಅಂತಲ್ಲ, ಆದರೆ, ಅದರ ವಿಘಟನೆಯ ಆಧಾರದ ಮೇಲೆ ಯಾವುದೇ ತಂತ್ರವು ದೋಷಪೂರಿತವಾಗಿರುತ್ತದೆ, ಪರಿಣಾಮ ಅದರಿಂದ ಉಂಟಾಗುವ ಅವ್ಯವಸ್ಥೆಯು ಆ ದೇಶದ ಗಡಿಗಳಲ್ಲಿ ನಿಲ್ಲುವುದಿಲ್ಲ. ಜೊತೆಗೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಸಹ ಈ ದೇಶ ಹೊಂದಿದೆ.

ಇದನ್ನೂ ಓದಿ:  Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ

ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ಸಂಪೂರ್ಣ ಯುದ್ಧವು ಉತ್ತಮ ಉಪಾಯವಲ್ಲ. ಅಲ್ಲದೆ, ಪಾಕಿಸ್ತಾನದ ಭಯೋತ್ಪಾದಕ ಯಂತ್ರವನ್ನು ("ಸರ್ಜಿಕಲ್ ಸ್ಟ್ರೈಕ್ಸ್", ಪುಲ್ವಾಮಾಕ್ಕೆ ಬಾಲಾಕೋಟ್) ತಡೆಯಲು ಭಾರತದ ಯುದ್ಧತಂತ್ರದ ಮಿಲಿಟರಿ ಆಯ್ಕೆಗಳು ತಾತ್ಕಾಲಿಕ ಪರಿಣಾಮವನ್ನು ಮಾತ್ರ ಬೀರಬಹುದು. ವ್ಯಾಪಾರ ಅಥವಾ ನೀರಿನ ಮೂಲಕ ಅದರ ವಿರುದ್ಧ ಕೆಲಸ ಮಾಡುವುದು ಸಮಂಜಸವಾಗಿಲ್ಲ - ಇಲ್ಲಿ ಮೊದಲ ಆಯ್ಕೆಯನ್ನು ಅವಲೋಕಿಸುವುದಾದರೆ, ದಾಳಿಗಳು (ಸರ್ಜಿಕಲ್ ಸ್ಟ್ರೈಕ್ಸ್) ತುಂಬಾ ಚಿಕ್ಕ ಮಟ್ಟದ್ದಾಗಿರುತ್ತವೆ, ಮತ್ತು ಎರಡನೆಯದನ್ನು ನೋಡಿದರೆ ಭಾರತಕ್ಕೆ ಅನಪೇಕ್ಷಿತ ಪರಿಣಾಮಗಳು ಉಂಟಾಗಬಹುದು. ಒಟ್ಟಿನಲ್ಲಿ, ಪಾಕಿಸ್ತಾನವು ಈಗ ಭಾರತಕ್ಕೆ ದೊಡ್ಡದಾಗಿರುವ ಚೀನಾ ಸಮಸ್ಯೆಯ ಭಾಗವಾದಂತಾಗಿದೆ.

ಪಾಕಿಸ್ತಾನದ ಬಗ್ಗೆ ಸಭರ್ವಾಲ್ ಏನೇನು ವಿವರಿಸಿದ್ದಾರೆ ನೋಡಿ 
ಸಭರ್ವಾಲ್ ಅವರು ಪುಸ್ತಕದಲ್ಲಿ, ಒಟ್ಟಾರೆ ಪ್ರದೇಶದ ಸಹ-ಸಮೃದ್ಧಿಗೆ ಒತ್ತು ನೀಡುವ ಪ್ರಾಯೋಗಿಕ ವಿಧಾನವನ್ನು ಹೆಚ್ಚು ಬೆಂಬಲಿಸಿದ್ದಾರೆ, ಅವರ ಪ್ರಕಾರ ಪಾಕಿಸ್ತಾನವು, ತಾನು ಭಾರತಕ್ಕೆ ಪೆಟ್ಟು ಕೊಡಬಲ್ಲೆ ಎಂಬ ಆಲೋಚನೆಯನ್ನು ಬಿಟ್ಟು ಆರ್ಥಿಕವಾಗಿ ತನ್ನನ್ನು ತಾನು ಉತ್ತಮಗೊಳಿಸಿಕೊಂಡು ಹೆಚ್ಚಿನ ಲಾಭಗಳಿಸಬಲ್ಲೆ ಎಂಬುದನ್ನು ಅರಿಯಬೇಕಾಗಿರುವುದು ಬಲು ಅವಶ್ಯಕವಾಗಿದೆ, ಆದರೆ ಈ ಸಾಕ್ಷಾತ್ಕಾರವು ದೇಶಕ್ಕೆ ಮೂಡಲು ಇನ್ನೂ ಸಮಯ ತೆಗೆದುಕೊಳ್ಳಬಹುದು ಎಂದು ಸಭರ್ವಾಲ್ ವಿವರಿಸುತ್ತಾರೆ.

ಕೇವಲ ಪಾಕಿಸ್ತಾನವಲ್ಲದೆ ಈ ವಿಷಯದಲ್ಲಿ ಭಾರತವೂ ತನ್ನಲ್ಲಿ ಕೆಲ ಕೆಲಸ ಮಾಡಬೇಕಾಗಿದೆ ಎನ್ನುವ ಸಭರ್ವಾಲ್ ಅವರು ಈ ಕುರಿತು ಸಲಹೆಯನ್ನು ನೀಡುತ್ತಾರೆ ಅದೇನೆಂದರೆ: ನೀವು ಪಾಕಿಸ್ತಾನದ ನಡವಳಿಕೆಯನ್ನು ಬದಲಾಯಿಸಲು ಬಯಸಿದರೆ, ಮೊದಲು ನಮ್ಮ ಮನೆಯಲ್ಲಿ ಎಲ್ಲವೂ ಸಮರ್ಪಕವಾಗಿ ನಿರ್ವಹಿಸಲ್ಪಡುತ್ತಿವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಇದರ ಅರ್ಥ, ಇದು ಕೇವಲ ಮಿಲಿಟರಿ ಶಕ್ತಿ ಮತ್ತು ಭಯೋತ್ಪಾದನಾ ಸಾಮರ್ಥ್ಯಗಳ ಬಗ್ಗೆ ವಿಚಾರ ಮಾಡುವುದಲ್ಲ. ಬದಲಾಗಿ ಇದು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಆಂತರಿಕ ಕೊರತೆಗಳನ್ನು ಕ್ರಮಬದ್ಧಗೊಳಿಸುವುದು, ಎಲ್ಲರೂ ಒಮ್ಮತ ಹೊಂದಿದ ವಿದೇಶಾಂಗ ನೀತಿ ಅನುಸರಿಸುವುದು ಆಗಿದೆ. ಈ ಮೂಲಕ ಭಾರತದ ಅಶಕ್ತತೆಯನ್ನು ಪಾಕಿಸ್ತಾನವು ತನ್ನ ಗಾಳವನ್ನಾಗಿ ಬಳಸುವಂತಹ ಅವಕಾಶಗಳನ್ನು ತಪ್ಪಿಸುವುದಾಗಿದೆ.

ಸಭರ್ವಾಲ್ ಅವರು ಬರೆದಿರುವ ಆಕರ್ಷಕವಾದ ಕಥೆ
ಆದರೆ ಸಭರ್ವಾಲ್ ಹೇಳುವ ಹೆಚ್ಚು ಆಕರ್ಷಕವಾದ ಕಥೆಯೆಂದರೆ, ಹೇಗೆ ಒಂದು ಸಮಯದಲ್ಲಿ, ಎರಡೂ ಪಕ್ಷಗಳು ಪರಸ್ಪರರಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತರ್ಕಬದ್ಧ ಆಯ್ಕೆಗಳನ್ನು ಮಾಡಲು ಸಮ್ಮತಿಸಿದ್ದವು ಎಂಬುದರ ಬಗ್ಗೆ. ಹೌದು, 2011 ಮತ್ತು 2012 ರ ನಡುವಿನ ವ್ಯಾಪಾರ ಮಾತುಕತೆಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಮ್ಮ ಭಿನ್ನಾಭಿಪ್ರಾಯಗಳನ್ನು ಪಕ್ಕಕಿಟ್ಟು ಆರ್ಥಿಕ ಬೆಳವಣಿಗೆಗಾಗಿ ವ್ಯಾಪಾರಕ್ಕೆಂದು ಮುಂದೆ ಬಂದಿದ್ದವು. ಇದನ್ನು ಸ್ಪಷ್ಟವಾಗಿ, ಕಳೆದ ವರ್ಷ ಇಮ್ರಾನ್ ಖಾನ್ ಸರ್ಕಾರವು ಮೊದಲಿಗೆ ಸಕ್ಕರೆ ಮತ್ತು ಹತ್ತಿಯ ಸೀಮಿತ ವ್ಯಾಪಾರಕ್ಕಾಗಿ ವಾಘಾ ಗಡಿಯನ್ನು ಪುನಃ ತೆರೆಯುವ ನಿರ್ಧಾರದೊಂದಿಗೆ ಹೋಲಿಸಬಹುದಾಗಿದೆ. ಈ ಸಂದರ್ಭದಲ್ಲೂ ಭಿನ್ನಾಭಿಪ್ರಾಯ ಇದ್ದೇ ಇತ್ತು. ಆದರೆ, ಸಹಮತವಾಗಲಿಲ್ಲ ಬದಲಾಗಿ ಇಮ್ರಾನ್ ಯು-ಟರ್ನ್ ತೆಗೆದುಕೊಂಡರು. ಇದರಿಂದ ಪರಿಸ್ಥಿತಿ ನಂತರ ಮತ್ತಷ್ಟು ಹದಗೆಡುವಂತಾಯಿತು.

ಈ ಪುಸ್ತಕದಲ್ಲಿ ಬೇರೆ ಯಾವೆಲ್ಲ ವಿಷಯಗಳಿವೆ
ಹೀಗೆ ಸಭರ್ವಾಲ್ ಅವರ ಈ ಪುಸ್ತಕವು ಸೇನೆ ಮತ್ತು ನಾಗರಿಕ-ಮಿಲಿಟರಿ ಅಸಮತೋಲನ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆ, ಬ್ಯಾಕ್‌ಚಾನಲ್ ಡಿಪ್ಲೋಮಸಿ ಪ್ರಕ್ರಿಯೆ ಹಾಗೂ ಭಾರತ-ಪಾಕಿಸ್ತಾನದ ಸಂಬಂಧದಲ್ಲಿನ ಪರಮಾಣು ಆಯಾಮ ಸೇರಿದಂತೆ ಪಾಕಿಸ್ತಾನದ ಆಂತರಿಕ ವಲಯದ ಹಲವು ಸಂಕೀರ್ಣಾಂಶಗಳಿರುವ ಘನ ಅಧ್ಯಾಯಗಳನ್ನು ಹೊಂದಿದೆ.

ಸಭರ್ವಾಲ್ ಅವರು ಕೆಲವು ವೈಯಕ್ತಿಕ ಘಟನೆಗಳನ್ನು ಸಹ ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಪಂಜಾಬಿ ಭಾರತೀಯನಾಗಿ, ಅವರು ಪಾಕಿಸ್ತಾನದ ಪ್ರಧಾನ ಜನಾಂಗೀಯ ಸಮುದಾಯ ಭಾಷೆಯನ್ನು ಮಾತನಾಡುತ್ತಿದ್ದರು ಮತ್ತು ಇದರಿಂದಾಗಿಯೇ ನವಾಜ್ ಷರೀಫ್ ಸೇರಿದಂತೆ ಅಲ್ಲಿನ ಹಲವು ರಾಜಕೀಯ ಗಣ್ಯರ ಜೊತೆ ಸುಲಭವಾದ ಬಾಂಧವ್ಯವನ್ನು ಹೊಂದುವಲ್ಲಿ ಅವರು ಯಶಸ್ವಿಯಾಗಿದ್ದರು.

ಇದನ್ನೂ ಓದಿ: Explained: ಸ್ವಾತಂತ್ರ್ಯ ಸಂಗ್ರಾಮದ ನೆನಪು; ಭಾರತ ಬಿಟ್ಟು ತೊಲಗಿ ಕ್ರಾಂತಿ ಹೇಗಿತ್ತು?

ಅಸಿಫ್ ಅವರ ಪ್ರತಿಸ್ಪರ್ಧಿ ನವಾಜ್ ಷರೀಫ್ ಚುನಾವಣೆಯಲ್ಲಿ ಗೆದ್ದ ನಂತರ ಸಭರ್ವಾಲ್ ಅವರು ಜುಲೈ 2013 ರಲ್ಲಿ ಅಂದಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಬೀಳ್ಕೊಡುಗೆ ಕೂಟಕ್ಕೆ ಆಹ್ವಾನಿಸಿದ್ದಾಗ, ಪಿಪಿಪಿ ನಾಯಕ ತಮಾಷೇಪೂರ್ವಕವಾಗಿ ಸಭರ್ವಾಲ್ ಅವರನ್ನು ಕುರಿತು "ತುಸ್ಸಿ ಅಪ್ನೆ ಯಾರ್ ನು ಪಿಎಂ ಬನಾ ಕೀ ಚಲ್ ಪಾಯೆ" ಎಂದು ಹೇಳಿದ್ದನ್ನು ಸಭರ್ವಾಲ್ ನೆನಪಿಸಿಕೊಳ್ಳುತ್ತಾರೆ. ಅಲ್ಲದೆ ಅವರು ತಮ್ಮ 80 ವರ್ಷದ ತಾಯಿಯನ್ನು ಲಾಹೋರ್‌ನಲ್ಲಿರುವ ಅವರ ಪುರಾತನ ಮನೆಗೆ ಭೇಟಿ ಮಾಡಿಸಲು ಕರೆದೊಯ್ದಾಗ ಆ ಮನೆಯ ಮಹಿಳೆ ಮತ್ತು ಸಭರ್ವಾಲ್ ಅವರ ತಾಯಿಯ ನಡುವಿನ ಸುಲಭ ಹಾಗೂ ನಿರರ್ಗಳವಾದ ಸಂಭಾಷಣೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ, ಅವರ ಪ್ರಕಾರ ಅದು ಹೇಗಿತ್ತೆಂದರೆ ಅವರಿಬ್ಬರೂ ಜೀವನದುದ್ದಕ್ಕೂ ಒಬ್ಬರಿಗೊಬ್ಬರು ಪರಸ್ಪರ ತಿಳಿದುಕೊಂಡಿದ್ದಾರೆನ್ನುವಂತಿತ್ತು ಎಂದು ಹೇಳುತ್ತಾರೆ.
Published by:Ashwini Prabhu
First published: