Smartphone Addiction: ನಿಮ್ಮ ಮಗು ಮೊಬೈಲ್‌ಗೆ ಅಡಿಕ್ಟ್ ಆಗಿದೆಯಾ? ಈ ಚಟ ಸುಲಭವಾಗಿ ಬಿಡಿಸಲು ಇಲ್ಲಿವೆ 7 ಟಿಪ್ಸ್

ಇತ್ತೀಚೆಗಂತೂ ಈ ಮಕ್ಕಳಲ್ಲಿ ಮೊಬೈಲ್ ಗೀಳು ತುಂಬಾನೇ ಆಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು. ಶಾಲೆಗೆ ಹೋಗುವ ಮಕ್ಕಳಲ್ಲಿ ಮೊಬೈಲ್ ಬಳಸುವ ಮತ್ತು ನೋಡುವ ಚಟ ಕಡಿಮೆ ಆಗಿರಬಹುದು. ಆದರೆ ಮನೆಯಲ್ಲಿಯೇ ಇರುವ ಮಕ್ಕಳಲ್ಲಿ ಈ ಚಟ ತುಂಬಾನೇ ಆಗಿದೆ ಈ ಚಟವನ್ನು ದೂರ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮೊದಲೆಲ್ಲಾ ಈ ಚಿಕ್ಕ ಮಕ್ಕಳಿಗೆ (Children) ರಾತ್ರಿ ಚಂದಮಾಮನನ್ನು ತೋರಿಸುತ್ತಾ ಮತ್ತು ಬೆಳಿಗ್ಗೆ (Morning) ಆಟ ಆಡಿಸುತ್ತಾ ನಿಧಾನವಾಗಿ ತಾಯಂದಿರು (Mother) ಅವರ ಹಿಂದೆ ಮುಂದೆ ಓಡಾಡುತ್ತಾ ಊಟ ಮಾಡಿಸುತ್ತಿದ್ದರು. ಆದರೆ ಈಗ ಚಿಕ್ಕ ಮಕ್ಕಳು ಊಟ (Lunch) ಮಾಡಲು ಹಠ ಮಾಡುತ್ತಿವೆ ಎಂದರೆ ಕೈಗೆ ಮೊಬೈಲ್ ಫೋನ್ (Mobile Phone) ಕೊಟ್ಟು ಅದರಲ್ಲಿ ಚಿಣ್ಣರ ಹಾಡುಗಳನ್ನು ಹಾಕಿಕೊಟ್ಟು ತೋರಿಸುತ್ತಾ ಪೋಷಕರು (Parents) ಊಟ ಮಾಡಿಸುವ ಹಾಗೆ ಆಗಿದೆ. ಎಂದರೆ, ಈಗೆಲ್ಲಾ ಮಕ್ಕಳು ಕೈಗೆ ಮೊಬೈಲ್ ಫೋನ್ ಕೊಟ್ಟರೆ ಮಾತ್ರ ಅವು ಕಿರಿಕಿರಿ ಮಾಡುವುದಿಲ್ಲ ಎಂಬುವ ಮಾತನ್ನು ಪೋಷಕರು ಅರ್ಥ ಮಾಡಿಕೊಂಡಿದ್ದಾರೆ.

ಆದರೆ ಈ ಮೊಬೈಲ್ ಫೋನ್ ನೋಡುವುದು ಆ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಎಂತಹ ಒಂದು ಭಾರಿ ಪರಿಣಾಮ ಬೀರಬಹುದು ಎಂಬುದನ್ನು ಪೋಷಕರು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿರುವಂತಿಲ್ಲ ಎಂದು ಅನ್ನಿಸುತ್ತದೆ.

ಇತ್ತೀಚೆಗಂತೂ ಈ ಮಕ್ಕಳಲ್ಲಿ ಮೊಬೈಲ್ ಗೀಳು ತುಂಬಾನೇ ಆಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಶಾಲೆಗೆ ಹೋಗುವ ಮಕ್ಕಳಲ್ಲಿ ಮೊಬೈಲ್ ಬಳಸುವ ಮತ್ತು ನೋಡುವ ಚಟ ಕಡಿಮೆ ಆಗಿರಬಹುದು. ಆದರೆ ಮನೆಯಲ್ಲಿಯೇ ಇರುವ ಮಕ್ಕಳಲ್ಲಿ ಈ ಚಟ ತುಂಬಾನೇ ಆಗಿದೆ ಅಂತ ಹೇಳಬಹುದು. ಪೋಷಕರು ಸಹ ಅವರನ್ನು ಈ ಮೊಬೈಲ್ ಫೋನ್ ಚಟದಿಂದ ಹೊರತರಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಅವರಿಗೆ ಹೊರಗೆ ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ಆಟವಾಡಿಸಿಕೊಂಡು ಬರುವುದು, ಅವರನ್ನು ಸಂಜೆ ಸುತ್ತಾಡಲು ಕರೆದುಕೊಂಡು ಹೋಗುವುದು ಹೀಗೆ ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ ಎಂದು ಹೇಳಬಹುದು.

ಮೊಬೈಲ್ ಚಟ ಮಕ್ಕಳ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ಒಟ್ಟಾರೆಯಾಗಿ ಹೇಳುವುದಾದರೆ ಇಂದಿನ ಡಿಜಿಟಲ್ ಯುಗದಲ್ಲಿ, ಪೋಷಕರಿಗೆ ತಮ್ಮ ಮಕ್ಕಳನ್ನು ಮೊಬೈಲ್ ಪರದೆಯಿಂದ ದೂರವಿಡುವುದು ಸಾಕಷ್ಟು ಕಷ್ಟವಾಗಿರಬಹುದು. ಡಿಜಿಟಲ್ ತಂತ್ರಜ್ಞಾನದ ಸಾಮೀಪ್ಯವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪ್ರತಿ ಮನೆಯಲ್ಲೂ ಈಗ ಎರಡರಿಂದ ಮೂರು ಸ್ಮಾರ್ಟ್ ಫೋನ್ ಗಳಿರುತ್ತವೆ. ಆನ್‌ಲೈನ್ ಜಗತ್ತು ಅತ್ಯಂತ ವ್ಯಸನಕಾರಿಯಾಗಿದೆ ಮತ್ತು ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಎಚ್ ಟಿ ಲೈಫ್ ಸ್ಟೈಲ್ ಗೆ ನೀಡಿದ ಸಂದರ್ಶನದಲ್ಲಿ, ಡೆವಲಪ್ಮೆಂಟ್ ಸೈಕಾಲಜಿಸ್ಟ್ ಮತ್ತು ಹಾಪ್ಸ್ಕಾಚ್ ಚೈಲ್ಡ್ ಥೆರಪಿಯ ಸ್ಥಾಪಕ ಡಾ. ಅಂಗನಾ ನಂದಿ ಅವರು "ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ, ಅವರು ಸಾಕಷ್ಟು ವಿಭಿನ್ನ ವಿಷಯಗಳಿಗೆ ಒಡ್ಡಿಕೊಳ್ಳುತ್ತಾರೆ ಎಂಬುದು ನಿಮಗೆ ತಿಳಿದೇ ಇರುತ್ತದೆ. ಅದರಲ್ಲೂ ಈಗ ಅವರು ಈ ಸ್ಮಾರ್ಟ್‌ಫೋನ್ ಗಳ ಮತ್ತು ಟ್ಯಾಬ್ಲೆಟ್ ಗಳ ಮೇಲೆ ಅವಲಂಬಿತರಾಗಬಹುದು. ಇದು ಬರೀ ಮಕ್ಕಳಿಗೆ ಅಲ್ಲದೆ, ವಯಸ್ಕರಿಗೂ ಸಹ ಇದು ದೊಡ್ಡ ವ್ಯಸನವಾಗಿ ಬೆಳೆಯಬಹುದು. ಈ ಸಮಸ್ಯೆಯ ಬಗ್ಗೆ ಮತ್ತು ಮಕ್ಕಳು ಡಿಜಿಟಲ್ ವ್ಯಸನವನ್ನು ಬೆಳೆಸಿಕೊಳ್ಳುವುದನ್ನು ತಡೆಯಲು ನಾವು ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ನಾವು ತಿಳಿದಿರಬೇಕು. ಏಕೆಂದರೆ, ಅನೇಕ ಪೋಷಕರು ಆ ಮೊಬೈಲ್ ಅಭ್ಯಾಸ ಒಂದು ಚಟವಾಗಿ ಬೆಳೆಯುವವರೆಗೂ ಅದನ್ನು ಗಮನಿಸುವುದಿಲ್ಲ" ಎಂದು ಹೇಳುತ್ತಾರೆ.

ಇದನ್ನೂ ಓದಿ: Puberty And Girls: ಹೆಣ್ಣು ಮಕ್ಕಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳ ಬಗ್ಗೆ ತಜ್ಞರು ಹೇಳೋದೇನು? 

ಇದಲ್ಲದೆ, "ಸ್ಮಾರ್ಟ್‌ಫೋನ್ ಮೊಬೈಲ್ ವ್ಯಸನವು ನಿಮ್ಮ ಮಗುವಿನ ಮಾನಸಿಕ ಆರೋಗ್ಯ, ಸಾಮಾಜಿಕ ಸಂಬಂಧಗಳು, ಶಾಲಾ ಕಾರ್ಯಕ್ಷಮತೆ ಮತ್ತು ನಿದ್ರೆಯ ಅಭ್ಯಾಸಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಇದಕ್ಕೆ ಎಂದು ಪರಿಹಾರವೇ ಇಲ್ಲವೇ ಎಂದು ನೀವು ನಮಗೆ ಕೇಳಬಹುದು. ಒಳ್ಳೆಯ ಸುದ್ದಿಯೆಂದರೆ ನೀವು ನಿಮ್ಮ ಮಗುವಿನ ಸ್ಮಾರ್ಟ್‌ಫೋನ್ ಚಟವನ್ನು ಕೇವಲ ಕೆಲವು ಸರಳ ತಂತ್ರಗಳೊಂದಿಗೆ ಬಿಡಿಸಬಹುದು" ಎಂದು ಇವರು ಹೇಳುತ್ತಾರೆ.

1. ಮೊದಲಿಗೆ ಮಗುವಿನ ಮೊಬೈಲ್ ಚಟವನ್ನು ಅರ್ಥ ಮಾಡಿಕೊಳ್ಳಿ
ಮಕ್ಕಳು ಮೊಬೈಲ್ ಸಾಧನಗಳಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಎಂಬುದನ್ನು ಮೊದಲು ಪೋಷಕರಾದವರು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮಗು ಕೇವಲ ಮೊಬೈಲ್ ಫೋನ್ ಗಳೊಂದಿಗೆ ಆಟವಾಡುತ್ತಿದೆಯೇ? ಅಥವಾ ಅದು ಮನರಂಜನೆ ಅಥವಾ ಚಂಚಲತೆಯ ಮೂಲವಾಗಿ ಅವುಗಳನ್ನು ಬಳಸುತ್ತಿದೆಯೇ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

ಮಕ್ಕಳಲ್ಲಿ ಸ್ಮಾರ್ಟ್‌ಫೋನ್ ವ್ಯಸನದ ಒಂದು ಸ್ಪಷ್ಟ ಲಕ್ಷಣವೆಂದರೆ ಫೋನ್ ಅಥವಾ ಟ್ಯಾಬ್ಲೆಟ್ ನೀಡದಿದ್ದರೆ ಅಥವಾ ಸ್ವಲ್ಪ ಸಮಯದವೆರೆಗೆ ನೀಡಿ ಮತ್ತೆ ಅದನ್ನು ಕಸಿದುಕೊಂಡಾಗ ಅವುಗಳಿಗೆ ಬರುವ ಕೋಪವನ್ನು ಗಮನಿಸಿ. ಮಕ್ಕಳನ್ನು ಈ ಸ್ಮಾರ್ಟ್‌ಫೋನ್ ಚಟದಿಂದ ಹೊರ ತರುವಲ್ಲಿ ಅನುಸರಿಸಬಹುದಾದ ಮೊದಲ ಹಂತವೆಂದರೆ ರೋಗಲಕ್ಷಣವನ್ನು ಗುರುತಿಸುವುದು.

2. ಅತಿಯಾದ ಮೊಬೈಲ್ ಬಳಕೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು
ನಿಮ್ಮ ಮಗುವು ಪ್ರತಿ ಬಾರಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾಗಲೂ ಅದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುವುದು ಮತ್ತು ಅರ್ಥವಾಗುವಂತೆ ತಿಳಿಸುವುದು. ಅತಿಯಾದ ಮೊಬೈಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಮತ್ತು ಅವುಗಳ ಹಿಂದಿನ ಕಾರಣಗಳನ್ನು ವಿವರಿಸದೆ ನಿಯಮಗಳನ್ನು ಹೊಂದಿಸುವುದು ಇನ್ನೂ ಬೇರೆ ರೀತಿಯ ಪರಿಣಾಮಗಳನ್ನು ತಂದೊಡ್ಡಬಹುದು.

ಮೊಬೈಲ್ ಸ್ಕ್ರೀನ್-ಟೈಮ್ ನಿಯಮಗಳನ್ನು ಮನೆಯಲ್ಲಿ ಸೆಟ್ ಮಾಡುವ ಮೊದಲು, ನಿಮ್ಮ ಮಗುವಿಗೆ ಅವರು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಹೆಚ್ಚು ಸ್ಕ್ರೀನ್ ಸಮಯದ ನಕಾರಾತ್ಮಕ ಪರಿಣಾಮಗಳನ್ನು ವಿವರಿಸಿ.

3. ಮೊಬೈಲ್ ನೋಡುವ ಸಮಯದ ಮಿತಿಯನ್ನು ನಿಗದಿಪಡಿಸಿ
ನಿಮ್ಮ ಮಗುವು ಸ್ಮಾರ್ಟ್‌ಫೋನ್ ಅನ್ನು ಎಷ್ಟು ಸಮಯದವರೆಗೆ ಬಳಸಬಹುದು ಎಂಬುದರ ಮೇಲೆ ದೈನಂದಿನ ಮಿತಿಯನ್ನು ಪೋಷಕರಾದವರು ನಿಗದಿಪಡಿಸಬೇಕು. ದಿನಚರಿಯನ್ನು ಹೊಂದಿಸುವುದು ಮಕ್ಕಳನ್ನು ನಿಯಮಗಳಿಗೆ ಅಂಟಿಕೊಳ್ಳುವಂತೆ ಮಾಡಲು ಮತ್ತು ಚಿಕ್ಕ ಮಕ್ಕಳನ್ನು ಬೆಳೆಸಲು ಸಂಬಂಧಿಸಿದ ಕೆಲವು ಒತ್ತಡವನ್ನು ಕಡಿಮೆ ಮಾಡಲು ಒಂದು ಉತ್ತಮ ಕಾರ್ಯತಂತ್ರವಾಗಿದೆ ಎಂದು ಸಾಬೀತಾಗಿದೆ.

ಇದನ್ನೂ ಓದಿ: Breastfeeding Awareness Week: ಮಗುವಿಗೆ ಎದೆಹಾಲು ಕುಡಿಸುವುದು ಹೇಗೆ? ತಜ್ಞರು ಸಲಹೆ ನೀಡಿದ್ದಾರೆ ಓದಿ

18 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮೊಬೈಲ್ ಮುಟ್ಟಲು ಸಹ ಕೊಡಬೇಡಿ ಎಂದು ಸಲಹೆ ನೀಡಲಾಗುತ್ತದೆ. ಇನ್ನೂ 18 ರಿಂದ 24 ತಿಂಗಳ ನಡುವಿನ ಮಕ್ಕಳನ್ನು ಪೋಷಕರ ಮೇಲ್ವಿಚಾರಣೆಯಲ್ಲಿ ಉತ್ತಮ ಗುಣಮಟ್ಟದ ಮಕ್ಕಳ ಕಾರ್ಯಕ್ರಮಗಳಿಗೆ ಸಂಕ್ಷಿಪ್ತವಾಗಿ ಒಡ್ಡಿಕೊಳ್ಳಬಹುದು. 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಸಮಯ ಮೊಬೈಲ್ ನೋಡಲು ನೀಡಬೇಡಿ. 6 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ, ಇತರ ಚಟುವಟಿಕೆಗಳು ಮತ್ತು ಆರೋಗ್ಯಕರ ನಿದ್ರೆಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಮಗುವಿಗೆ ಸಾಕಷ್ಟು ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳುವಾಗ ಪೋಷಕರು ಸೂಕ್ತ ಸಮಯದ ಮಿತಿಯನ್ನು ನಿರ್ಧರಿಸಬಹುದು.

4. ಮನೆಯಲ್ಲಿ ಡಿಜಿಟಲ್ ಮುಕ್ತ ವಲಯಗಳನ್ನು ನಿರ್ಮಿಸಿ
ನಿಮ್ಮ ಮಗುವು ನಿದ್ರೆಗೆ ಜಾರಿದಾಗ ಅವನ ಅಥವಾ ಅವಳ ಮಲಗುವ ಕೋಣೆಯಲ್ಲಿ ಫೋನ್ ಅನ್ನು ಇಡದಿರಲು ಪ್ರಯತ್ನಿಸಿ. ಇದು ಮಲಗುವ ಸಮಯವನ್ನು ಹಾಳು ಮಾಡುತ್ತದೆ ಮತ್ತು ಅಸಮರ್ಪಕ ನಿದ್ರೆಯ ಮಾದರಿಗಳಿಗೆ ಕಾರಣವಾಗಬಹುದು, ಇದು ನಿಮ್ಮ ಮಗುವಿನ ಒಟ್ಟಾರೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರುತ್ತದೆ.

ನಿಗದಿತ ಮಲಗುವ ಸಮಯದ ಅನುಪಸ್ಥಿತಿಯಲ್ಲಿಯೂ ಸಹ, ನಿಮ್ಮ ಮಗು ಕತ್ತಲಾದ ನಂತರ ಮೊಬೈಲ್ ಸ್ಕ್ರೀನ್ ಅನ್ನು ದಿಟ್ಟಿಸಲು ಹೆಚ್ಚಿನ ಸಮಯವನ್ನು ಕಳೆಯುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಹೆಚ್ಚುವರಿಯಾಗಿ, ಊಟದ ಸಮಯ, ಮನೆ ಕೆಲಸದ ಸಮಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕೈಗೆ ನೀಡಲೇಬೇಡಿ.

5. ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ
ನಿಮ್ಮ ಮಗುವು ಹೊರಗೆ ಆಡಲು ಅಥವಾ ಇತರ ದೈಹಿಕ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸಿ. ಮನೆಯಲ್ಲಿಯೇ ಇದ್ದರೆ ಅವುಗಳ ದೃಷ್ಟಿ ಈ ತಂತ್ರಜ್ಞಾನದ ಮೇಲೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಆದ್ದರಿಂದ ಇವುಗಳಿಂದ ನಿಮ್ಮ ಮಗುವನ್ನು ದೂರವಿಡಲು ಮತ್ತು ಮೊಬೈಲ್ ನೋಡುವುದರಲ್ಲಿಯೇ ಸಾಕಷ್ಟು ಸಮಯವನ್ನು ಕಳೆಯುತ್ತಿದೆ ಅಂತಾದಲ್ಲಿ ಮಕ್ಕಳೊಂದಿಗೆ ಸೇರಿಕೊಂಡು ಆಟವಾಡಿ. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವುಗಳನ್ನು ಪ್ರೋತ್ಸಾಹಿಸಿ.

6. ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ
ನಿಮ್ಮ ಮಗುವನ್ನು ಒಮ್ಮೆಲೇ ಮೊಬೈಲ್ ಚಟದಿಂದ ಬಿಡಿಸಿ ಬೇರೆ ಹೊಸ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡುವುದು ಸ್ವಲ್ಪ ಕಷ್ಟಕರವಾಗಿದ್ದರೂ ಸಹ ನೀವು ಮಾಡಲೇಬೇಕು. ದಿನದ ಒಂದು ಸಮಯವನ್ನು ಬೇರೆ ಬೇರೆ ಹೊಸ ರೀತಿಯ ಚಟುವಟಿಕೆಗಳಿಗಾಗಿ ಮೀಸಲಿಡಿ, ಈ ಅವಧಿಯಲ್ಲಿ ಯಾವುದೇ ಸ್ಮಾರ್ಟ್‌ಫೋನ್ ಗಳು ಮತ್ತು ಟ್ಯಾಬ್ಲೆಟ್ ಗಳನ್ನು ಬಳಸಲಾಗುವುದಿಲ್ಲ.

ಇದನ್ನೂ ಓದಿ: Baby Food: ನಿಮ್ಮ ಪುಟ್ಟ ಕಂದಮ್ಮಗಳಿಗೆ ಅನ್ನ ತಿನ್ನಿಸಬಹುದಾ? ಗೊಂದಲಕ್ಕೆ ಇಲ್ಲಿದೆ ಉತ್ತರ

ಸಾಧನವಿಲ್ಲದ ದಿನದಂದು, ಮನೆ ಕೆಲಸಗಳಲ್ಲಿ ಭಾಗವಹಿಸಲು, ಹೊಸ ಚಟುವಟಿಕೆಗಳನ್ನು ಕಲಿಯಲು ಅಥವಾ ಕಲೆಗಳು ಮತ್ತು ಕರಕುಶಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ.

7. ಪೋಷಕರು ಸಹ ಮಕ್ಕಳ ಮುಂದೆ ಹೆಚ್ಚು ಮೊಬೈಲ್ ಬಳಸಬಾರದು
ನಿಮ್ಮ ಮಗುವು ಮೊಬೈಲ್ ಸ್ಕ್ರೀನ್ ಸಮಯದ ನಿಯಮಗಳನ್ನು ಅನುಸರಿಸಬೇಕೆಂದು ನೀವು ನಿರೀಕ್ಷಿಸುವ ಮೊದಲು, ನೀವು ಸ್ವತಃ ಉತ್ತಮ ಉದಾಹರಣೆ ಆಗಿರಿ. ಮಕ್ಕಳು ತಾವು ಕೇಳುವುದಕ್ಕಿಂತ ಹೆಚ್ಚಾಗಿ ಅವರು ನೋಡುವುದರಿಂದ ಹೆಚ್ಚು ಕಲಿಯುತ್ತಾರೆ. ನಿಮ್ಮ ಸ್ವಂತ ಸ್ಮಾರ್ಟ್‌ಫೋನ್ ಬಳಕೆಯನ್ನು ಟ್ರ್ಯಾಕ್ ಮಾಡಿ ಮತ್ತು ನಿಮ್ಮ ಮಕ್ಕಳಿಗಾಗಿ ನೀವು ಮಾಡುವಂತಹ ನಿಯಮಗಳನ್ನೇ ನಿಮಗೂ ಹೊಂದಿಸಿಕೊಳ್ಳಿ.
Published by:Ashwini Prabhu
First published: