• Home
  • »
  • News
  • »
  • explained
  • »
  • India@75: ಇವರೇ ನೋಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 7 ವಿದೇಶಿಯರು

India@75: ಇವರೇ ನೋಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 7 ವಿದೇಶಿಯರು

ಸ್ವಾತಂತ್ರ್ಯ ದಿನಾಚರಣೆ 2022

ಸ್ವಾತಂತ್ರ್ಯ ದಿನಾಚರಣೆ 2022

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಹಸ್ರಾರು ಭಾರತಾಂಬೆಯ ವೀರ ಪುತ್ರರ ಬಗ್ಗೆ ನಮಗೆ ತಿಳಿದೇ ಇದೆ. ಅವರೆಲ್ಲರೂ ಭಾರತ ದೇಶದಲ್ಲಿ ಹುಟ್ಟಿ ತಮ್ಮದೇ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವುದು ಸಹಜ. ಅನೇಕ ಭಾರತೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು. ಈ ಎಲ್ಲ ಶೌರ್ಯದ ಕಥೆಗಳ ನಡುವೆ, 7 ವಿದೇಶಿಯರು ನಮ್ಮ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಆ ದಿಟ್ಟ ಮತ್ತು ನಿಸ್ವಾರ್ಥ 7 ವಿದೇಶಿಗರ ಬಗ್ಗೆ ತಿಳ್ಕೊಳ್ಳಿ

ಮುಂದೆ ಓದಿ ...
  • Share this:

ಭಾರತದ (India) ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಹಸ್ರಾರು ಭಾರತಾಂಬೆಯ ವೀರ ಪುತ್ರರ ಬಗ್ಗೆ ನಮಗೆ ತಿಳಿದೇ ಇದೆ. ಅವರೆಲ್ಲರೂ ಭಾರತ ದೇಶದಲ್ಲಿ ಹುಟ್ಟಿ ತಮ್ಮದೇ ನಾಡಿನ ಸ್ವಾತಂತ್ರ್ಯಕ್ಕಾಗಿ (Independence) ಹೋರಾಡಿರುವುದು ಸಹಜ. ಅನೇಕ ಭಾರತೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು. ಈ ಎಲ್ಲ ಶೌರ್ಯದ ಕಥೆಗಳ (Story) ನಡುವೆ, 7 ವಿದೇಶಿಯರು ನಮ್ಮ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಭಾರತೀಯರಾದ (Indians) ನಾವು ಅವರ ಗುಣಗಾನವನ್ನು ಮಾಡದಿದ್ದರೆ ನಿಜಕ್ಕೂ ಅದು ಅತ್ಯಂತ ದುಖಃಕರ ಸಂಗತಿ ಎಂದು ನಾವು ಭಾವಿಸುತ್ತೇವೆ.


ಆ ದಿಟ್ಟ ಮತ್ತು ನಿಸ್ವಾರ್ಥ 7 ವಿದೇಶಿಗರು ಯಾರು?
ಆ ದಿಟ್ಟ ಮತ್ತು ನಿಸ್ವಾರ್ಥ 7 ವಿದೇಶಿಗರೆಂದರೆ - ಒಬ್ಬ ವ್ಯಕ್ತಿ ಐರಿಶ್, ನಾಲ್ವರು ಬ್ರಿಟಿಷರು ಮತ್ತು ಇಬ್ಬರು ಅಮೇರಿಕನ್‌ ನಿವಾಸಿಗಳಾಗಿದ್ದಾರೆ. ಅವರು ಸ್ವಾತ್ರಂತ್ರ್ಯ ಸಂಗ್ರಾಮದ ಕಾಲದಲ್ಲಿ ಭಾರತವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅವರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನಾವಿಂದು ನಿಮಗೆ ನೀಡಲಿದ್ದೇವೆ. ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ.


ನಮ್ಮ ದೇಶದಲ್ಲಿ ಹುಟ್ಟಿ ಬೆಳೆದು ನಮ್ಮ ದೇಶಕ್ಕೆ ಮೋಸ ಮಾಡಿದ ವಂಚನೆಕಾರರ ನಡುವೆ ಬೇರೆ ದೇಶದ ಹೋರಾಟಗಳನ್ನು ತಮ್ಮದೆಂದು ಸ್ವೀಕರಿಸಬೇಕೆಂದರೆ ಅವರೆಷ್ಟು ನಿಸ್ವಾರ್ಥ ಜೀವಿಗಳು ಎಂಬುದು ನಮಗೆ ಅರ್ಥವಾಗುತ್ತದೆ. ಭಾರತ ದೇಶವನ್ನು ನಮ್ಮ ದೇಶವೇ ಎಂದುಕೊಳ್ಳುತ್ತಾರೆ ಎಂದರೆ ಅವರಿಗೆ ನಮ್ಮ ಭಾರತ ದೇಶದ ಮೇಲೆ ಎಷ್ಟೊಂದು ಪ್ರೀತಿ, ಅಭಿಮಾನ ಇರಬೇಕು ಎಂದು ನಾವೇ ತಿಳಿದುಕೊಳ್ಳಬೇಕಾಗಿದೆ. ಇಂತಹ ವ್ಯಕ್ತಿಗಳು ಹಿಂದೆ ಇದ್ದರೂ ಎಂದು ನಮ್ಮ ಇತಿಹಾಸ ಆಗಾಗ ನಮ್ಮನ್ನು ನೆನಪಿಸುತ್ತಲೇ ಇರುತ್ತದೆ. ಕೆಲವರು ದೂರದ ದೇಶಗಳಲ್ಲಿ ಯುದ್ಧ ಮಾಡಲು ಸಜ್ಜಾದರೆ, ಇನ್ನು ಕೆಲವರು ಅಹಿಂಸೆಯ ಮಾರ್ಗವನ್ನು ಹಿಡಿದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.


ʼRebels against the Raj: Western Fighters for India's Freedomʼ 
ಭಾರತ ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂತಸದ ಕ್ಷಣದ ಅಂಗವಾಗಿ, ಈ ಶುಭ ಕ್ಷಣವನ್ನು ಮತ್ತಷ್ಟು ಮೌಲ್ಯಯುತವಾಗಿಸಲು, ನಮ್ಮ ದೇಶದ ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹಾ ಅವರು ತಮ್ಮ ʼRebels against the Raj: Western Fighters for India's Freedomʼ ಎಂಬ ಪುಸ್ತಕದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲಿಸಿದ 7 ವಿದೇಶಿ ವೀರರ ಕಥೆಯನ್ನು ಈ ಪುಸ್ತಕದಲ್ಲಿ ಮತ್ತೆ ಜೀವಂತಗೊಳಿಸಿದ್ದಾರೆ.


ಇದನ್ನೂ ಓದಿ: Independence Day 2022: ಗೂಗಲ್‌ನಿಂದ 'ಇಂಡಿಯಾ ಕಿ ಉಡಾನ್‌' ಲಾಂಚ್! ಏನಿದು ಗೊತ್ತಾ ಹೊಸ ಯೋಜನೆ?


ಈ ಪುಸ್ತಕದಲ್ಲಿ ಈ ಹಿಂದೆ ಮಹಾತ್ಮ ಗಾಂಧೀಜಿಯವರು ಹೇಳಿದ ಮಾತನ್ನು ರಾಮಚಂದ್ರ ಗುಹಾ ಅವರು “ಯಾವ ವಿದೇಶಿ ವ್ಯಕ್ತಿ ಸ್ಥಳೀಯ ಜನರೊಂದಿಗೆ ಸಕ್ಕರೆ ಹಾಲಿನಂತೆ ಬೆರೆಯುತ್ತಾನೋ ಅಂತಹ ವ್ಯಕ್ತಿ ಅರ್ಹ ವಿದೇಶಿ ವ್ಯಕ್ತಿ ಎಂದು ನಮ್ಮ ಭಾರತ ದೇಶದ ಜನರು ಅಂತಹ ವ್ಯಕ್ತಿಯನ್ನು ಒಪ್ಪಿಕೊಳ್ಳುತ್ತಾರೆ” ಬರೆದಿದ್ದಾರೆ.


ಈ ವಿದೇಶಿಗರು ಭಾರತದ ಇತಿಹಾಸದಲ್ಲಿ ಎಷ್ಟು ಬೇರೂರಿದ್ದಾರೆಂದರೆ, ಅವರ ಹೆಸರಿನ ಹೆಗ್ಗುರುತುಗಳು ಸಹ ನಮ್ಮ ದೇಶದ ಪ್ರಮುಖ ರಸ್ತೆ, ಉದ್ಯಾವನದಲ್ಲಿ ಕಾಣ ಸಿಗುವಷ್ಟು ಅವರು ನಮ್ಮಲ್ಲಿ ಹಾಸುಹೊಕ್ಕಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ವಿದೇಶಿ ಹೋರಾಟಗಾರರ ಉಪಸ್ಥಿತಿಯನ್ನು ಕಡೆಗಣಿಸಲಾಗುವುದಿಲ್ಲ. ಏಕೆಂದರೆ ಅವರು ಬ್ರಿಟನ್‌ನ ಆತ್ಮಸಾಕ್ಷಿಯನ್ನು ಕೆದಕಿ ಕೇಳುತ್ತಿದ್ದರು. ನೀವು ಮಾಡುತ್ತಿರುವುದು ಅಪರಾಧ ಎಂದು ಸೂಚಿಸುವ ಕಾರ್ಯವನ್ನು ಮಾಡುತ್ತಲೇ ಇದ್ದರು.


ಈಗ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ 7 ವಿದೇಶಿಯರ ಬಗ್ಗೆ ತಿಳಿಯೋಣ:
1. ಆನ್ನಿ ಬೆಸೆಂಟ್
ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಸಿದ್ಧ ವಿದೇಶಿ ಹೋರಾಟಗಾರರಲ್ಲಿ ಇವರು ಹೆಸರೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ಆನ್ನಿ ಬೆಸೆಂಟ್‌ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಜನಪ್ರಿಯ ವಿದೇಶಿಗರಲ್ಲಿ ಒಬ್ಬರಾಗಿದ್ದಾರೆ. ಐರಿಶ್ ದೇಶದ ಬೆಸೆಂಟ್ ಅವರು 1893 ರಲ್ಲಿ ಭಾರತಕ್ಕೆ ಬಂದರು. ಈ ವರ್ಷ ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾಕ್ಕೆ ಆಕೆಯ ಥಿಯಾಸಫಿ ಸಂಸ್ಥೆ ಬಗ್ಗೆ ತಿಳಿಯುವ ಕಾರಣ ಅಲ್ಲಿಗೆ ಅವರು ತೆರಳಿದ ವರ್ಷವಾಗಿತ್ತು. ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಬರುವ ಮೊದಲು ಬೆಸೆಂಟ್‌ ಅವರು ಬಾಲಕಿಯರ ಶಾಲೆಗಳು ಮತ್ತು ಪ್ರಮುಖ ವಿಶ್ವವಿದ್ಯಾಲಯವಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.


ಆನ್ನಿ ಬೆಸೆಂಟ್


ಆನ್ನಿ ಬೆಸೆಂಟ್‌ ಅವರು ಐರಿಶ್ ಅನುಭವದ ಮಾದರಿಯಲ್ಲಿ ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು ಮತ್ತು 1917 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯಾದರು. ಸ್ವಾತಂತ್ರ್ಯ ಹೋರಾಟದ ವರ್ಷಗಳಲ್ಲಿ, ಬೆಸೆಂಟ್ ಮತ್ತು ಗಾಂಧಿಯವರು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಗಾಗ ಇವರಿಬ್ಬರು ಗಾಢ ಚರ್ಚೆ ಮಾಡುತ್ತಿದ್ದರು.


ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ತಮ್ಮ ಪುಸ್ತಕದಲ್ಲಿ, "ಆನ್ನಿ ಬೆಸೆಂಟ್‌ ಅವರು ಭಾರತೀಯರಾಗಲು ಒಮ್ಮೆ ಮಾತ್ರ ನಿರ್ಧಾರ ಮಾಡಿದ್ದರು. ಆದರೆ ನಂತರದಲ್ಲಿ ಅವರು ಸಂಪೂರ್ಣವಾಗಿ ಎಲ್ಲಾ ರೀತಿಯಲ್ಲಿಯೂ ಭಾರತೀಯರಾಗಿಬಿಟ್ಟರು" ಎಂದು ಬರೆದಿದ್ದಾರೆ. ದಿ ಟೈಮ್ಸ್ ಆಫ್ ಲಂಡನ್‌ನ ಸಂಪಾದಕರಾದ ಜೆಫ್ರಿ ಡಾಸನ್, ಅನ್ನಿ ಬೆಸೆಂಟ್‌ರನ್ನು "ಅಬ್ಸ್ಟ್ರೆಪರಸ್ ಓಲ್ಡ್ ಹ್ಯಾರಿಡಾನ್" ಎಂದು ಬಣ್ಣಿಸಿದರು. ಭಾರತ ಸರ್ಕಾರದ ಗೃಹ ಸದಸ್ಯರಾದ ಸರ್ ರಿಚರ್ಡ್ ಕ್ರಾಡಾಕ್ ಅವರು ಆನ್ನಿ ಬೆಸೆಂಟ್‌ ಅವರನ್ನು "ಉತ್ಸಾಹದ ಬಯಕೆಯಿಂದ ಪ್ರಭಾವಿತರಾದ ಓಲ್ಡ್‌ ಲೇಡಿ" ಎಂದು ಉಲ್ಲೇಖಿಸಿದ್ದಾರೆ.


2. ಮೇಡ್ಲೀನ್ ಸ್ಲೇಡ್
ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದ ವಿದೇಶಿಯರ ಬಗ್ಗೆ ಮಾತನಾಡುವಾಗ, ಮೇಡ್ಲೀನ್ ಸ್ಲೇಡ್ ಅನ್ನು ನಿರ್ಲಕ್ಷಿಸಲಾಗುವುದಿಲ್ಲ. ಇವರು ಬ್ರಿಟಿಷ್ ಅಡ್ಮಿರಲ್‌ನ ಮಗಳು ಆಗಿದ್ದರು. ಇವರು ಒಂದು ಫ್ರೆಂಚ್ ಕಾದಂಬರಿಕಾರ ಮತ್ತು ಪ್ರಬಂಧಕಾರ ರೊಮೈನ್ ರೋಲ್ಯಾಂಡ್ ಅವರ 1924 ರ ಗಾಂಧಿ ಜೀವನ ಚರಿತ್ರೆಯನ್ನು ಓದಿದಾಗ ಇವರ ಜೀವನವು ಊಹಿಸಲಾಗದ ತಿರುವು ಪಡೆದುಕೊಂಡಿತು. ಆ ಪುಸ್ತಕದಲ್ಲಿ ಅವರು, ಗಾಂಧಿಯನ್ನು 20 ನೇ ಶತಮಾನದ ಶ್ರೇಷ್ಠ ವ್ಯಕ್ತಿತ್ವ ಎಂದು ಬಣ್ಣಿಸಿದ್ದರು.


ಮೇಡ್ಲೀನ್ ಸ್ಲೇಡ್


ಸ್ಲೇಡ್ ಅವರು ಗಾಂಧಿಯ ಅಹಿಂಸೆಯ ತತ್ವಗಳಿಂದ ಅಪಾರವಾಗಿ ಪ್ರಭಾವಿತರಾದರು. ಆಗ ತಾವೇ ಸ್ವತಃ ಗಾಂಧಿಯನ್ನು ಸಂಪರ್ಕಿಸಿದರು. ಗಾಂಧಿಯ ಶಿಷ್ಯರಾಗಲು ಮತ್ತು ಸಬರಮತಿ ಆಶ್ರಮದಲ್ಲಿ ವಾಸಿಸಲು ಗಾಂಧಿಯ ಅಪ್ಪಣೆಯನ್ನು ಕೇಳಿದರು. ಆಗ ಗಾಂಧಿ ನಿಮ್ಮ ಆಗಮನ ನಮಗೆ ಅತ್ಯಂತ ಸಂತಸ ಎಂದು ಹೇಳಿದ್ದರು. ಇವರು ನವೆಂಬರ್ 1925 ರಲ್ಲಿ ಭಾರತವನ್ನು ತಲುಪಿದರು ಮತ್ತು ಮುಂದಿನ 34 ವರ್ಷಗಳ ಕಾಲ ಭಾರತವನ್ನೆ ತಮ್ಮ ಮನೆಯನ್ನಾಗಿ ಮಾಡಿಕೊಂಡರು.


ಇದನ್ನೂ ಓದಿ:  Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ


1932-33ರಲ್ಲಿ ನಾಗರಿಕ ಅಸಹಕಾರದ ಸಮಯದಲ್ಲಿ, ಭಾರತದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಬಗ್ಗೆ ಯುರೋಪ್ ಮತ್ತು ಅಮೆರಿಕಕ್ಕೆ ಮಾಹಿತಿ ಸರಬರಾಜು ಮಾಡಿದ ಆರೋಪದ ಮೇಲೆ ಆಕೆಯನ್ನು ಅನೇಕ ಬಾರಿ ಬಂಧಿಸಲಾಯಿತು. 1981ರಲ್ಲಿ, ಆಕೆಯ ಮರಣದ ಒಂದು ವರ್ಷದ ಮೊದಲು, ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಆಗಿರುವ ಭಾರತ ಸರ್ಕಾರವು ಅವರಿಗೆ ಪದ್ಮವಿಭೂಷಣ ಪದಕವನ್ನು ನೀಡಿತ್ತು. ಇದು ಅವರಿಗೆ ಸಂದ ನಿಜವಾದ ಗೌರವ ಆಗಿದೆ.


3. ಸ್ಯಾಮ್ಯುಯೆಲ್ ಸ್ಟೋಕ್ಸ್
ಶ್ರೀಮಂತ ಕ್ವೇಕರ್ ಕುಟುಂಬದಲ್ಲಿ ಜನಿಸಿದ ಅಮೇರಿಕನ್, ಸ್ಯಾಮ್ಯುಯೆಲ್ ಇವಾನ್ಸ್ ಸ್ಟೋಕ್ಸ್ 1904 ರಲ್ಲಿ ಭಾರತಕ್ಕೆ ಬಂದರು. ಏಪ್ರಿಲ್ 1919 ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕ್ರೂರತೆಯು ಅವರನ್ನು ಸ್ವಾತಂತ್ರ್ಯ ಚಳುವಳಿಗೆ ಬರುವಂತೆ ಪ್ರೇರೆಪಿಸಿತು. ಸ್ಟೋಕ್ಸ್ ಮಹಾತ್ಮಾ ಗಾಂಧಿಯವರೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿದ್ದರು ಮತ್ತು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಅವರು ದೇಶದ್ರೋಹಕ್ಕಾಗಿ ಆರು ತಿಂಗಳ ಕಾಲ ಲಾಹೋರ್ ಜೈಲಿನಲ್ಲಿದ್ದರು ಮತ್ತು ಜಾಮೀನು ಅನ್ನು ನಿರಾಕರಿಸಿದರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿನಲ್ಲಿದ್ದ ಏಕೈಕ ಅಮೆರಿಕನ್ ಎಂದರೆ ಅದು ಇವರಾಗಿದ್ದರು.


ಸ್ಯಾಮ್ಯುಯೆಲ್ ಸ್ಟೋಕ್ಸ್


ಸ್ಟೋಕ್ಸ್ ಅವರ ಮೊಮ್ಮಗಳು ಆಶಾ ಶರ್ಮಾ ಅವರು ಪುಸ್ತಕವೊಂದರಲ್ಲಿ “ಆ ಕಾಲದಲ್ಲಿ ಯುರೋಪಿಯನ್ನರಿಗೆ ಪ್ರತ್ಯೇಕ ವಾರ್ಡ್ ಮತ್ತು ಭಾರತೀಯರಿಗೆ ಪ್ರತ್ಯೇಕ ವಾರ್ಡ್ ಇತ್ತು ಎಂದು ನಿಮಗೆ ತಿಳಿದಿದೆ. ಆದರೆ ನಮ್ಮ ಅಜ್ಜ 'ನನಗೆ ಯಾವುದೇ ವಿಶೇಷ ವಾರ್ಡ್‌ಗಳ ಅಗತ್ಯವಿಲ್ಲ. ನಾನು ಭಾರತೀಯʼ ಎಂದು ಹೇಳಿದ್ದರು. ಅವರು ಲಾಹೋರ್‌ನಲ್ಲಿ ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು ಮತ್ತು ಇದು ಅವರ ಜೀವನದ ಒಂದು ಪ್ರಮುಖ ಅಂಶವಾಗಿದೆ ಎಂದು ನಾನು ಭಾವಿಸುತ್ತೇನೆ “ ಎಂದು ಬರೆದಿದ್ದಾರೆ.


ಅವರು ಖಾದಿ ಧರಿಸುತ್ತಿದ್ದರು. ಭಾರತೀಯ ಮಹಿಳೆಯನ್ನು ವಿವಾಹವಾದರು, ಸಂಸ್ಕೃತ ಕಲಿತರು, ಹಿಂದೂ ಆಗಿ ಸತ್ಯಾನಂದ ಎಂದು ಮರುನಾಮಕರಣ ಮಾಡಿಕೊಂಡರು.


4. ಬಿ.ಜಿ.ಹಾರ್ನಿಮನ್
ಇಂದು, ಹಾರ್ನಿಮನ್ ಹೆಸರು ಹೇಳಿದಾಗ ದಕ್ಷಿಣ ಮುಂಬೈಯಲ್ಲಿ ಇರುವ ಉದ್ಯಾನವನ ಮಾತ್ರ ನೆನಪಾಗುತ್ತದೆ. ಈ ಉದ್ಯಾನವನಕ್ಕೆ ಇವರ ಪೂರ್ತಿ ಹೆಸರು ಬೆಂಜಮಿನ್ ಗೈ ಹಾರ್ನಿಮನ್ ಎಂದು ನಾಮಕರಣ ಮಾಡಲಾಗಿದೆ. ಇವರು ಬಾಂಬೆ ಕ್ರಾನಿಕಲ್‌ನ ಹಾಸ್ಯದ ಪತ್ರಿಕೆ ಸಂಪಾದಕ ಆಗಿದ್ದರು.


ಬಿ.ಜಿ.ಹಾರ್ನಿಮನ್


1919 ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ವರದಿಯ ಕುರಿತಾದ ಬ್ರಿಟಿಷರ ಗ್ಯಾಗ್ ಆದೇಶವನ್ನು ಧಿಕ್ಕರಿಸಿದ ದಿಟ್ಟ ವ್ಯಕ್ತಿ ಹಾರ್ನಿಮನ್. ಅವರು ಲಾಲಾ ಗೋವರ್ಧನ್ ದಾಸ್ ಅವರ ಪ್ರತ್ಯಕ್ಷದರ್ಶಿ ಸಾಕ್ಷಿಯನ್ನು ತೆಗೆದುಕೊಂಡು, ಏಪ್ರಿಲ್ 13 ರ ಸಂಜೆ ಸಂಭವಿಸಿದ ಭೀಕರತೆಯನ್ನು ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡೇ ಅವರ ಅಪ್ಪಣೆ ಪಡೆದು ಪ್ರಕಟಿಸಿದ್ದರು. ಲಂಡನ್ ಮೂಲದ ದಿನಪತ್ರಿಕೆ ದಿ ಡೈಲಿ ಹೆರಾಲ್ಡ್‌ನಲ್ಲಿ ಪ್ರಕಟವಾದ ಹತ್ಯಾಕಾಂಡದಿಂದ ಆಘಾತಕಾರಿ ಫೋಟೋಗಳನ್ನು ಹೊರಕ್ಕೆ ಸಾಗಿಸುವಲ್ಲಿ ಹಾರ್ನಿಮನ್ ಯಶಸ್ವಿಯಾದರು, ಇದು ಅಂತರರಾಷ್ಟ್ರೀಯ ಕೋಲಾಹಲಕ್ಕೆ ಕಾರಣವಾಯಿತು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಬದಲಾಯಿಸಿತು.


ಇದನ್ನೂ ಓದಿ:  National Flag: ಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ? ಬಿಜೆಪಿ ಎಂಪಿಯ ಹೇಳಿಕೆಯಿಂದ ವಿವಾದ


ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹಂಟರ್ ಕಮಿಟಿ ಡೈಯರ್‌ಗೆ ಕ್ಲೀನ್ ಚಿಟ್ ನೀಡಿದಾಗ, ಹಾರ್ನಿಮನ್ ಕೋಪದಿಂದ, “ಇಲ್ಲಿ ಬ್ರಿಟಿಷ್ ಜನರಲ್ ಅನ್ನು ಸಮರ್ಥಿಸಿಕೊಳ್ಳಲಾಗಿದೆ. ಇದನ್ನು ನಿರಾಯುಧ ಮತ್ತು ಸಂಪೂರ್ಣವಾಗಿ ರಕ್ಷಣೆಯಿಲ್ಲದ ಜನರ ಒಂದು ದೊಡ್ಡ ಗುಂಪಿಗೆ ಮತ್ತು ಯಾವುದೇ ಎಚ್ಚರಿಕೆ ಅಥವಾ ಆದೇಶವಿಲ್ಲದೆ ಚದುರಿಸಲು, ಅವರ ಮದ್ದುಗುಂಡುಗಳು ಖಾಲಿಯಾಗುವವರೆಗೂ ಅವರನ್ನು ಹೊಡೆದುರುಳಿಸಲಾಯಿತು ಮತ್ತು ನಂತರ ವೈದ್ಯಕೀಯ ಸಹಾಯವಿಲ್ಲದೆ ಅವರನ್ನು ದೂರ ಕರೆದುಕೊಂಡು ಹೋದರು” ಎಂದು ಬರೆದಿದ್ದಾರೆ. ಹಾರ್ನಿಮನ್ ಅವರು ಪ್ರೆಸ್ ಅಸೋಸಿಯೇಶನ್ ಆಫ್ ಇಂಡಿಯಾವನ್ನು ಸಹ ಸ್ಥಾಪಿಸಿದರು.


5. ಫಿಲಿಪ್ ಸ್ಪ್ರಾಟ್
ಇಂಗ್ಲಿಷ್ ಪೋಷಕರಿಗೆ ಜನಿಸಿದ ಫಿಲಿಪ್ ಸ್ಪ್ರಾಟ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕಮ್ಯುನಿಸ್ಟ್ ಆಗಿದ್ದು, 1926 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸ್ಥಾಪನೆಯ ಆರಂಭಿಕ ಹಂತದಲ್ಲಿ ವರದಿ ಮಾಡಲು ಭಾರತಕ್ಕೆ ಬಂದರು.


ಫಿಲಿಪ್ ಸ್ಪ್ರಾಟ್


ಅವರು ಭಾರತದಲ್ಲಿ ಕಾರ್ಮಿಕ ವರ್ಗವನ್ನು ಸಂಘಟಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದರು. 1927 ರಲ್ಲಿ, 'ಭಾರತ ಮತ್ತು ಚೀನಾ' ಎಂಬ ಶೀರ್ಷಿಕೆಯ ಕರಪತ್ರವನ್ನು ಬರೆದಿದ್ದಕ್ಕಾಗಿ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು. ಈ ಪ್ರಕರಣದಿಂದ ಅವರನ್ನು ಪಾರು ಮಾಡಿದ್ದು ನಮ್ಮ ದೇಶದ ಧೀಮಂತ ವ್ಯಕ್ತಿ ಬಿ.ಆರ್.ಅಂಬೇಡ್ಕರ್ ಎಂಬುಂದು ಮತ್ತೊಂದು ವಿಶೇಷ.


1929 ರಲ್ಲಿ ಕಾರ್ಮಿಕರ ಮುಷ್ಕರಗಳ ಸರಣಿಯನ್ನು ಆಯೋಜಿಸಿದ್ದಕ್ಕಾಗಿ ಸುಮಾರು 30 ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸದಸ್ಯರು, ಕಾಂಗ್ರೆಸ್ ಸದಸ್ಯರು ಮತ್ತು ಇತರರನ್ನು ಬಂಧಿಸಿದ ಕುಖ್ಯಾತ ಮೀರತ್ ಪಿತೂರಿ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಸ್ಪ್ರಾಟ್ ಇಂದು ಹೆಚ್ಚು ನೆನಪಿನಲ್ಲಿ ಉಳಿಯುತ್ತಾರೆ. ಸ್ಪ್ರಾಟ್‌ಗೆ ಮೂಲತಃ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು, ಆದರೆ ಅವರ ಶಿಕ್ಷೆಯನ್ನು ಎರಡು ವರ್ಷಗಳವರೆಗೆ ಕಡಿಮೆಗೊಳಿಸಲಾಯಿತು ಮತ್ತು 1934 ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.


6. ಕ್ಯಾಥರೀನ್ ಮೇರಿ ಹೈಲೆಮನ್
ಮಹಾತ್ಮಾ ಗಾಂಧಿಯವರ ಇನ್ನೊಬ್ಬ ದತ್ತುಪುತ್ರಿ ಎಂದು ಕರೆಯಲ್ಪಡುವ ಕ್ಯಾಥರೀನ್, ನಂತರ ಸರಳಾ ಎಂದು ಮರು ನಾಮಕರಣ ಮಾಡಿಕೊಂಡರು. 1930ರ ದಶಕದ ಆರಂಭದಲ್ಲಿ ಉದಯಪುರದ ಶಾಲೆಯಲ್ಲಿ ಕಲಿಸಲು ಭಾರತಕ್ಕೆ ಬಂದರು.


ಕ್ಯಾಥರೀನ್ ಮೇರಿ ಹೈಲೆಮನ್


1940ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಗಾಂಧಿಯವರಿಂದ ಪ್ರೇರಿತರಾದ ಅವರು ಎರಡು ಬಾರಿ ಜೈಲುವಾಸವನ್ನು ಅನುಭವಿಸಿದರು. ಜೈಲಿನಿಂದ ಬಿಡುಗಡೆ ಆದ ನಂತರದ ವರ್ಷಗಳಲ್ಲಿ, ಅವರು ಕೌಸಾನಿಯಲ್ಲಿ ಕಸ್ತೂರ ಬಾ ಮಹಿಳಾ ಉತ್ಥಾನ ಮಂಡಲವನ್ನು ಸ್ಥಾಪಿಸಿದರು, ಇದು ಉತ್ತರ ಪ್ರದೇಶದ ಕುಮಾವೂನ್, ಗರ್ವಾಲ್ ಮತ್ತು ಇತರ ಪರ್ವತ ಜಿಲ್ಲೆಗಳ ಬಡ, ಅಜ್ಞಾನ, ಹಿಂದುಳಿದ ಮತ್ತು ತುಳಿತಕ್ಕೊಳಗಾದ ಮಹಿಳೆಯರಿಗೆ ಸಹಾಯ ಮಾಡಲು ಪಣ ತೊಟ್ಟ ಸಂಸ್ಥೆ ಆಗಿದೆ.


ಶಾಲೆಯಲ್ಲಿ ಅವರ ವಿದ್ಯಾರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದರು ಮತ್ತು ಕೆಲವರು ಭಾರತದ ಅತ್ಯಂತ ಪ್ರಸಿದ್ಧ ಪರಿಸರ ಪ್ರತಿಭಟನೆಯಾದ ಚಿಪ್ಕೋ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ ಇವರು 1982 ರಲ್ಲಿ ನಿಧನರಾದರು, ಆದರೆ ಅವರ ಬೋಧನೆಗಳು ಮತ್ತು ಅವರ ಪರಂಪರೆ ಇನ್ನು ಭಾರತೀಯರಲ್ಲಿ ಜೀವಂತವಾಗಿದೆ.


7. ರಾಲ್ಫ್ ರಿಚರ್ಡ್ ಕೀಥಾನ್
ರಾಲ್ಫ್ ರಿಚರ್ಡ್ ಅಥವಾ ಆರ್‌. ಆರ್‌ ಕೀಥಾನ್ ಅವರ ಹೆಸರು ಹೆಚ್ಚಿನ ಜನರಿಗೆ ತಿಳಿದಿರುವ ಹೆಸರಲ್ಲ. ಆದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅವರು ಮಾಡಿದ ಕಾರ್ಯಗಳು ಇಂದಿಗೂ ನೆನಪಿನಲ್ಲಿ ಉಳಿಯುವಂತವು.


ರಾಲ್ಫ್ ರಿಚರ್ಡ್ ಕೀಥಾನ್


ಮೂಲತಃ ಅಮೆರಿಕದ ಮಿನ್ನೇಸೋಟದ ಫೇರ್‌ಮಾಂಟ್‌ನಿಂದ, ಕೀಥಾನ್ 1920ರ ದಶಕದಲ್ಲಿ ಮಿಷನರಿಯಾಗಿ ಭಾರತಕ್ಕೆ ಬಂದರು. ಅವರು ಗಾಂಧಿಯವರಿಂದ ಪ್ರೇರಿತರಾಗಿ ಬೆಳೆದರು ಮತ್ತು ಖಾದಿಯನ್ನು ಸಹ ಅಳವಡಿಸಿಕೊಂಡರು.ಅವರು ಭೂಸುಧಾರಣೆ, ಸುಸ್ಥಿರ ಕೃಷಿ ಮತ್ತು ಜಾತಿ ಮತ್ತು ಲಿಂಗ ವ್ಯತ್ಯಾಸಗಳ ನಿರ್ಮೂಲನೆಗೆ ಹೊಸ ಯೋಜನೆಗಳನ್ನು ತರಬೇಕೆಂದು ಬಹಳಷ್ಟು ಪ್ರಯತ್ನ ಪಟ್ಟರು.


ಇದನ್ನೂ ಓದಿ: Independence Day 2022: ಬೀದರ್‌ನಲ್ಲಿ ಈಗ ಸ್ವಾತಂತ್ರ್ಯದ ರಂಗು, ತ್ರಿವರ್ಣ ಬೆಳಕಿನಿಂದ ಕೋಟೆಗೆ ಮೆರುಗು!


ಅವರು ಮಾರ್ಟಿನ್ ಲೂಥರ್ ಕಿಂಗ್ ಅವರೊಂದಿಗೆ ಸಂಕ್ಷಿಪ್ತವಾಗಿ ಪತ್ರವ್ಯವಹಾರ ಮಾಡುತ್ತಿದ್ದರು. ಬಡ ಜನರ ಜೀವನದ ಬಗ್ಗೆ ಅನೇಕ ವಿಷಯಗಳ ಬಗ್ಗೆ ಆಗಾಗ ಪತ್ರದ ಮೂಲಕ ಚರ್ಚೆ ನಡೆಸುತ್ತಿದ್ದರು. ಅವರು ತಮ್ಮ ಜೀವನದ ಬಹುಪಾಲು ತಮಿಳುನಾಡು ರಾಜ್ಯದಲ್ಲಿ ಕೆಲಸ ಮಾಡಿದರು. ಅವರು ನಂತರ ತಮಿಳುನಾಡಿನಲ್ಲಿ 1984 ರಲ್ಲಿ ನಿಧನರಾದರು.


ಕೊನೆಯದಾಗಿ ಇವರು ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಸೇವೆ ಅಪಾರ ಎಂದು ನೆನೆಯುತ್ತಾ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Published by:Ashwini Prabhu
First published: