• Home
 • »
 • News
 • »
 • explained
 • »
 • ಭಾರತದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಆರಂಭವಾಗಿದ್ದು ಯಾವಾಗ..? ಸಾಬೂನಿನ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಆರಂಭವಾಗಿದ್ದು ಯಾವಾಗ..? ಸಾಬೂನಿನ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ

ಮೈಸೂರು ಸ್ಯಾಂಡಲ್ ಸೋಪ್

ಮೈಸೂರು ಸ್ಯಾಂಡಲ್ ಸೋಪ್

ಭಾರತ ಮತ್ತು ವಿದೇಶಗಳಲ್ಲಿ ಸಾಬೂನಿನ ಬೇಡಿಕೆಯು ಹೊಸ ದಾಖಲೆಗಳನ್ನು ಸೃಷ್ಟಿಸಿತು. ವಿದೇಶಿ ರಾಷ್ಟ್ರಗಳ ರಾಜಮನೆತನದ ಕುಟುಂಬಗಳು ಸಹ ಆರ್ಡರ್ ಮಾಡಲು ಆರಂಭಿಸಿದರು. ನಂತರ 1980 ರಲ್ಲಿ, ಕಂಪನಿ ಮತ್ತೊಂದು ಪ್ರಮುಖ ತಿರುವನ್ನು ಪಡೆದುಕೊಂಡಿತು

 • Share this:

  ಮೈಸೂರು ಸ್ಯಾಂಡಲ್ ಸಾಬೂನು ಯಾರಿಗೆ ಗೊತ್ತಿಲ್ಲ ಹೇಳಿ..? ಬರೀ ರಾಜ್ಯ, ದೇಶ ಮಾತ್ರವಲ್ಲ. ಜಗತ್ತಿನ ಹಲವು ದೇಶಗಳ ಜನರಿಗೂ ಚಿರಪರಿಚಿತ ಈ ಸೋಪುಗಳು. ಇದು ಕರ್ನಾಟಕ ಸರ್ಕಾರದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ತಯಾರಾಗುವ ಸಾಬೂನಿನ ಒಂದು ಬ್ರ್ಯಾಂಡ್. ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂದು ಪ್ರಸಿದ್ಧವಾಗಿದೆ. 'ಭಾರತದ ಭೌಗೋಳಿಕ ಸಂಕೇತ' (GI) ಅಡಿಯಲ್ಲಿ KSDL ಈ ಸಾಬೂನಿನ ಬ್ರ್ಯಾಂಡ್ ಹೆಸರು ಬಳಸಲು, ಗುಣಮಟ್ಟದ ಕಾಪಾಡುವಿಕೆಗೆ, ನಕಲು ತಡೆಯುವಿಕೆ ಮತ್ತು ಅನಧಿಕೃತ ಬಳಕೆ ತಡೆಯುವಿಕೆ ಮಾಡಲು ಹಕ್ಕುಸ್ವಾಮ್ಯವನ್ನೂ ಹೊಂದಿದೆ. ಈ ಸಾಬೂನಿನ ಇತಿಹಾಸ, ನಡೆದು ಬಂದ ಹಾದಿಯ ಬಗ್ಗೆ ಸಂಶೋಧನಾ ವಿದ್ವಾಂಸರಾದ ವರುಣ್ ಕೇಶವನ್ ವಿವರಿಸಿರುವುದು ಹೀಗೆ ನೋಡಿ..


  ಮೈಸೂರು ಸ್ಯಾಂಡಲ್ ಸಾಬೂನು ಆರಂಭವಾಗಿದ್ದು ಹೇಗೆ..?


  ಮೇ  1916 ರಲ್ಲಿ ಕೃಷ್ಣರಾಜ ಒಡೆಯರ್ IV (ಅಂದಿನ ಮೈಸೂರಿನ ಮಹಾರಾಜ) ಹಾಗೂ ಅಂದಿನ ಮೈಸೂರು ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಅಂದಿನ ಮೈಸೂರಿನ ದಿವಾನ್), ಶ್ರೀಗಂಧದ ಮರಕ್ಕಾಗಿ ಮೈಸೂರಿನಲ್ಲಿ ಸರ್ಕಾರಿ ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು ಸ್ಥಾಪಿಸಿದರು. ಮೈಸೂರು ಸಾಮ್ರಾಜ್ಯ ಆ ಸಮಯದಲ್ಲಿ ವಿಶ್ವದ ಅತಿದೊಡ್ಡ ಶ್ರೀಗಂಧದ ಉತ್ಪಾದಕವಾಗಿತ್ತು. ಆದರೆ, ಮೊದಲನೆಯ ಮಹಾಯುದ್ಧದ ನಂತರ ಶ್ರೀಗಂಧದ ರಫ್ತು ಮಾಡುವುದನ್ನು ನಿಲ್ಲಿಸಲಾಗಿದ್ದ ಕಾರಣ ರಾಶಿಯಾಗಿರುವ ಪರಿಮಳಯುಕ್ತ ಮರದ ಹೆಚ್ಚುವರಿ ದಾಸ್ತಾನುಗಳನ್ನು ಬಳಸಿಕೊಂಡು ತೈಲವನ್ನು ಹೊರತೆಗೆಯುವುದು ಶ್ರೀಗಂಧದ ಎಣ್ಣೆ ಕಾರ್ಖಾನೆಯ ಪ್ರಾಥಮಿಕ ಉದ್ದೇಶವಾಗಿತ್ತು. ಒಟ್ಟಾರೆ 105 ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ ಈ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ.


  ಶ್ರೀಗಂಧದ ಸೋಪ್ ತಯಾರಿಕೆಗೆ ಪ್ರಮುಖ ಪಾತ್ರ ವಹಿಸಿದವರು ಇವರೇ..!
  ಎರಡು ವರ್ಷಗಳ ನಂತರ, ಅಂದರೆ 1918 ರಲ್ಲಿ ಅಂದಿನ ಮೈಸೂರು ಮಹಾರಾಜರಿಗೆ ಅಪರೂಪದ ಶ್ರೀಗಂಧದ ಎಣ್ಣೆ ಸಾಬೂನುಗಳನ್ನು ಉಡುಗೊರೆಯಾಗಿ ನೀಡಲಾಯಿತು. ಬಳಿಕ ಜನಸಾಮಾನ್ಯರಿಗೆ ಇದೇ ರೀತಿಯ ಸಾಬೂನುಗಳನ್ನು ತಯಾರಿಸುವ ಕಲ್ಪನೆ ಮಹಾರಾಜರಿಗೆ ಬಂತು. ಅವರು ಅದನ್ನು ದಿವಾನರಾಗಿದ್ದ ವಿಶ್ವೇಶ್ವರಯ್ಯನೊಂದಿಗೆ ಹಂಚಿಕೊಂಡರು. ಕೈಗಾರಿಕಾ ಅಭಿವೃದ್ಧಿಯ ಅಗತ್ಯತೆಯ ಬಗ್ಗೆ ಅವರು ಕಂಡುಕೊಂಡರು. ಹಿಡಿದ ಕೆಲಸ ಬಿಡದ ಹಾಗೂ ಪರಿಪೂರ್ಣತೆಗೆ ಹೆಸರುವಾಸಿಯಾದ ವಿಶ್ವೇಶ್ವರಯ್ಯ ಅವರು ಸಾರ್ವಜನಿಕರಿಗೆ ಕೈಗೆಟುಕುವ ಉತ್ತಮ ಗುಣಮಟ್ಟದ ಸಾಬೂನು ತಯಾರಿಸಲು ಬಯಸಿದ್ದರು.


  ಆಗ, ಅವರು ಬಾಂಬೆಯಿಂದ (ಈಗಿನ ಮುಂಬೈ) ತಾಂತ್ರಿಕ ತಜ್ಞರನ್ನು ಆಹ್ವಾನಿಸಿದರು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಆವರಣದಲ್ಲಿ ಸಾಬೂನು ತಯಾರಿಸುವ ಪ್ರಯೋಗಗಳನ್ನು ಮಾಡಿದರು. ಮೈಸೂರಿನ ಮತ್ತೊಬ್ಬ ದಿವಾನ್ ಕೆ ಶೇಷಾದ್ರಿ ಅಯ್ಯರ್ ಅವರ ಪ್ರಯತ್ನದಿಂದಾಗಿಯೇ 1911 ರಲ್ಲಿ ಐಐಎಸ್ಸಿ ಸ್ಥಾಪಿಸಲಾಗಿತ್ತು ಎಂಬುದೂ ಸಹ ಗಮನಾರ್ಹ ಸಂಗತಿ. .


  ಐಐಎಸ್ಸಿಯಲ್ಲಿ ನಡೆಯುತ್ತಿದ್ದ ಸಂಶೋಧನೆಯಲ್ಲಿ ತೊಡಗಿದ್ದ ಪ್ರತಿಭೆಗಳ ಪೈಕಿ, ವಿಶ್ವೇಶ್ವರಯ್ಯನವರು ಸೋಸಲೆ ಗರಲಾಪುರಿ ಶಾಸ್ತ್ರಿ ಎಂಬ ತೀಕ್ಷ್ಣಮತಿ, ಯುವ ಕೈಗಾರಿಕಾ ರಸಾಯನಶಾಸ್ತ್ರಜ್ಞರನ್ನು ಗುರುತಿಸಿ ಸೋಪ್ ತಯಾರಿಸುವ ಬಗ್ಗೆ ಅವರ ಜ್ಞಾನವನ್ನು ಉತ್ತಮಗೊಳಿಸಲು ಅವರನ್ನು ಇಂಗ್ಲೆಂಡ್ಗೆ ಕಳುಹಿಸಿದರು. ಶ್ರಮಜೀವಿ ವಿಶ್ವೇಶ್ವರಯ್ಯನವರ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿಯನ್ನು ಸೋಪ್ ಶಾಸ್ತ್ರಿ ಎಂದೇ ಹಲವರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಅಗತ್ಯವಾದ ಜ್ಞಾನವನ್ನು ಪಡೆದ ನಂತರ ಮೈಸೂರಿಗೆ ಮರಳಿದ ಶಾಸ್ತ್ರಿಯನ್ನು ಕುತೂಹಲದಿಂದ ಕಾಯುತ್ತಿದ್ದರು ಮಹಾರಾಜರು ಮತ್ತು ದಿವಾನ್. ಈ ವೇಳೆ ಶುದ್ಧವಾದ ಶ್ರೀಗಂಧದ ಎಣ್ಣೆಯನ್ನು ಸಾಬೂನುಗಳಲ್ಲಿ ಸೇರಿಸುವ ವಿಧಾನವನ್ನು ಅವರು ಪ್ರಮಾಣೀಕರಿಸಿದ ನಂತರ, ಬೆಂಗಳೂರಿನ ಕೆ ಆರ್ ಸರ್ಕಲ್ ಬಳಿ ಸರ್ಕಾರಿ ಸೋಪ್ ಕಾರ್ಖಾನೆಯನ್ನು ಸ್ಥಾಪಿಸಲಾಯಿತು.


  ಸೋಪ್ ಕಾರ್ಖಾನೆ ಬೆಳೆದ ರೀತಿ..
  ಸರ್ಕಾರಿ ಸೋಪ್ ಕಾರ್ಖಾನೆ ಸ್ಥಾಪನೆಯಾದ ವರ್ಷವೇ ಸಾಬೂನು ತಯಾರಿಸುವ ಘಟಕಕ್ಕೆ ಶ್ರೀಗಂಧದ ಎಣ್ಣೆಯನ್ನು ಸ್ಥಿರವಾಗಿ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಮೈಸೂರಿನಲ್ಲಿ ಮತ್ತೊಂದು ತೈಲ ಹೊರತೆಗೆಯುವ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಇದೇ ರೀತಿ 1944 ರಲ್ಲಿ ಶಿವಮೊಗ್ಗದಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸಲಾಯಿತು. ಸಾಬೂನು ಮಾರುಕಟ್ಟೆಗೆ ಬಂದ ನಂತರ, ಅದು ಶೀಘ್ರವಾಗಿ ಸಾರ್ವಜನಿಕರಲ್ಲಿ ಜನಪ್ರಿಯವಾಯಿತು. ಅದು ಕೇವಲ ಮೈಸೂರು ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಫೇಮಸ್ ಆಯಿತು.


  ಆದರೆ, ಇಷ್ಟಕ್ಕೇ ಸುಮ್ಮನಾಗಲಿಲ್ಲ ಶಾಸ್ತ್ರಿಯವರು. ಡಿಸ್ಟಿಲ್ ಮಾಡಿದ ಶ್ರೀಗಂಧದ ಎಣ್ಣೆಯಿಂದ ಸುಗಂಧ ದ್ರವ್ಯವನ್ನೂ ರಚಿಸಿದರು. ನಂತರ, ಅವರು ಮೈಸೂರು ಸ್ಯಾಂಡಲ್ ಸೋಪ್ಗೆ ವಿಶಿಷ್ಟ ಆಕಾರ ಮತ್ತು ನವೀನ ಪ್ಯಾಕೇಜಿಂಗ್ ನೀಡಲು ನಿರ್ಧರಿಸಿದರು. ಆ ದಿನಗಳಲ್ಲಿ, ಸಾಬೂನುಗಳು ಸಾಮಾನ್ಯವಾಗಿ ಆಯತಾಕಾರದ ಆಕಾರದಲ್ಲಿರುತ್ತದ್ದವು ಮತ್ತು ತೆಳುವಾದ, ಹೊಳಪು ಮತ್ತು ಗಾಢ ಬಣ್ಣದ ಕಾಗದದಲ್ಲಿ ತುಂಬಿರುತ್ತಿತ್ತು. ಆದರೆ, ಉಳಿದ ಸಾಬೂನು ಬ್ರ್ಯಾಂಡ್ಗಳಿಗಿಂತ ವಿಭಿನ್ನವಾಗಿ ಎದ್ದು ಕಾಣುವಂತೆ ಮಾಡಲು, ಅವರು ಮಹತ್ವದ ಪ್ಯಾಕೇಜಿಂಗ್ ಕೆಲಸಕ್ಕೂ ಮುನ್ನ ಮೈಸೂರು ಸ್ಯಾಂಡಲ್ ಸೋಪ್ಗೆ ಅಂಡಾಕಾರದ ಆಕಾರವನ್ನು ನೀಡಿದರು.


  ಭಾರತೀಯರಿಗೆ ಆಭರಣಗಳ ಪ್ರೀತಿಯ ಬಗ್ಗೆ ಅರಿವಿದ್ದ ಶಾಸ್ತ್ರಿಯವರು, ಆಭರಣ ಬಾಕ್ಸ್ ಅಥವಾ ಕೇಸ್ ಅನ್ನು ಹೋಲುವ ಆಯತಾಕಾರದ ಪೆಟ್ಟಿಗೆಯನ್ನು ವಿನ್ಯಾಸಗೊಳಿಸಿದರು. ಅಲ್ಲದೆ, ಬಾಕ್ಸ್ನಲ್ಲಿ ಹೂವಿನ ಮುದ್ರಣಗಳು ಮತ್ತು ಎಚ್ಚರಿಕೆಯಿಂದ ಆಯ್ಕೆ ಮಾಡಿದ ಬಣ್ಣಗಳನ್ನು ತುಂಬಿದರು. ವಿನ್ಯಾಸದ ಮಧ್ಯಭಾಗದಲ್ಲಿ ಅವರು ಕಂಪನಿಗೆ ಅಸಾಮಾನ್ಯ ಲೋಗೋವನ್ನು ಆಯ್ಕೆ ಮಾಡಿದರು. ಅದೇ ಶರಭ (ಸ್ಥಳೀಯ ಜಾನಪದ ಕಥೆಗಳ ಪ್ರಕಾರ
  ಆನೆಯ ತಲೆ ಮತ್ತು ಸಿಂಹದ ದೇಹವನ್ನು ಹೊಂದಿರುವ ಪೌರಾಣಿಕ ಜೀವಿ). ರಾಜ್ಯದ ಶ್ರೀಮಂತ ಪರಂಪರೆಯನ್ನು ಸಂಕೇತಿಸಲು ಧೈರ್ಯ ಮತ್ತು ಬುದ್ಧಿವಂತಿಕೆಯ ಸಂಕೇತವಾದ ಆ ಲಾಂಛನವನ್ನು ರೂಪಿಸಿದ್ದರು ಸೋಪ್ ಶಾಸ್ತ್ರಿಗಳು.


  ನಂತರ ಜಾಹೀರಾತು ಕ್ಯಾಂಪೇನ್ಗಳ ಯುಗ ಆರಂಭವಾಗ್ತಿದ್ದಂತೆ, ಮೈಸೂರು ಸ್ಯಾಂಡಲ್ ಸೋಪ್ನ ಜಾಹೀರಾತಿಗೆ ದೇಶಾದ್ಯಂತ ಹಲವು ನಗರಗಳಲ್ಲಿ ನಿಯಾನ್ ಬಣ್ಣಗಳಲ್ಲಿ ರೋಮಾಂಚಕ ಸೈನ್ಬೋರ್ಡ್ಗಳನ್ನು ಹೊತ್ತೊಯ್ಯುವ ವ್ಯವಸ್ಥಿತ ಮತ್ತು ಯೋಜಿತ ಜಾಹೀರಾತು ಅಭಿಯಾನವನ್ನು ಅನುಸರಿಸಲಾಯಿತು. ಟ್ರ್ಯಾಮ್ ಟಿಕೆಟ್ಗಳಿಂದ ಹಿಡಿದು ಬೆಂಕಿ ಪೊಟ್ಟಣದವರೆಗೆ ಎಲ್ಲೆಡೆ ಮೈಸೂರು ಸ್ಯಾಂಡಲ್ ಸೋಪ್ಬಾಕ್ಸ್ನ ಚಿತ್ರಗಳು ಗಮನಾರ್ಹವಾಗಿವೆ. ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಸಾಬೂನು ಜಾಹೀರಾತು ಮಾಡಲು ಒಂಟೆ ಮೆರವಣಿಗೆ ಕೂಡ ನಡೆಯಿತು!


  Corona: ಮುಂಬೈನಿಂದ ಮತ್ತೆ ಯಾದಗಿರಿಗೆ ಕೊರೋನಾ ಕಂಟಕವಾಗುತ್ತಾ...?


  ವಿದೇಶಗಳಲ್ಲೂ ಶುರುವಾಯ್ತು ಮೈಸೂರು ಸ್ಯಾಂಡಲ್ ಸೋಪ್ ಹವಾ..!


  ಈ ರೀತಿ ವಿಭಿನ್ನವಾದ ಜಾಹೀರಾತು ಅಭಿಯಾನಗಳಿಂದ ಉತ್ತಮ ಫಲಿತಾಂಶ ದೊರಕಿದೆ. ಭಾರತ ಮತ್ತು ವಿದೇಶಗಳಲ್ಲಿ ಸಾಬೂನಿನ ಬೇಡಿಕೆಯು ಹೊಸ ದಾಖಲೆಗಳನ್ನು ಸೃಷ್ಟಿಸಿತು. ವಿದೇಶಿ ರಾಷ್ಟ್ರಗಳ ರಾಜಮನೆತನದ ಕುಟುಂಬಗಳು ಸಹ ಆರ್ಡರ್ ಮಾಡಲು ಆರಂಭಿಸಿದರು. ನಂತರ 1980 ರಲ್ಲಿ, ಕಂಪನಿ ಮತ್ತೊಂದು ಪ್ರಮುಖ ತಿರುವನ್ನು ಪಡೆದುಕೊಂಡಿತು. ಮೈಸೂರು ಮತ್ತು ಶಿವಮೊಗದಲ್ಲಿದ್ದ ತೈಲ ಹೊರತೆಗೆಯುವ ಘಟಕಗಳನ್ನು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ (ಕೆಎಸ್ಡಿಎಲ್) ಎಂಬ ಒಂದು ಕಂಪನಿಯಲ್ಲಿ ವಿಲೀನಗೊಳಿಸಲಾಯಿತು.


  90 ರ ದಶಕದ ಆರಂಭದಲ್ಲಿ ಬೇಡಿಕೆ ಕುಸಿತ


  1990 ರ ದಶಕದ ಆರಂಭದಲ್ಲಿ ಬಹುರಾಷ್ಟ್ರೀಯ ಸ್ಪರ್ಧೆ, ಬೇಡಿಕೆ ಕುಸಿತ ಮತ್ತು ಮಾರಾಟ ಹಾಗೂ ಉತ್ಪಾದನಾ ವಿಭಾಗಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಸರ್ಕಾರಿ ಸಂಸ್ಥೆಗೆ ಕಠಿಣ ಸಮಯ ಎದುರಾಯಿತು. ನಷ್ಟಗಳು ಹೆಚ್ಚಾಗಲು ಪ್ರಾರಂಭಿಸಿದಾಗ, ಇದಕ್ಕೆ ಬಿಐಎಫ್ಆರ್ (ಕೈಗಾರಿಕಾ ಮತ್ತು ಹಣಕಾಸು ಪುನರ್ನಿರ್ಮಾಣ ಮಂಡಳಿ) ಪುನರ್ವಸತಿ ಪ್ಯಾಕೇಜ್ ನೀಡಿತು ಮತ್ತು ಕೆಎಸ್ಡಿಎಲ್ ಎರಡೂ ಕೈಗಳಿಂದ ಜೀವಸೆಲೆ ಹಿಡಿಯಿತು. ಕಂಪನಿಯು ತನ್ನ ಕಾರ್ಯ ವಿಧಾನವನ್ನು ಸುವ್ಯವಸ್ಥಿತಗೊಳಿಸಿತು ಮತ್ತು ಶೀಘ್ರದಲ್ಲೇ ಅದು ಮತ್ತೆ ಲಾಭವನ್ನು ತೋರಿಸಲಾರಂಭಿಸಿತು. ವರ್ಷದಿಂದ ವರ್ಷ ಲಾಭ ಹೆಚ್ಚಾಗಿದ್ದು, ಶೀಘ್ರದಲ್ಲೇ ತನ್ನ ಎಲ್ಲಾ ನಷ್ಟಗಳನ್ನು ಅಳಿಸಿಹಾಕಿತು.


  ನಂತರ, 2003 ರ ಹೊತ್ತಿಗೆ ತನ್ನ ಸಂಪೂರ್ಣ ಸಾಲವನ್ನು ಬಿಐಎಫ್ಆರ್ಗೆ ಮರುಪಾವತಿಸಿತು. ಕಂಪನಿಯು ಇತರ ಸಾಬೂನುಗಳು, ಊದಿನ ಕಡ್ಡಿಗಳು, ಎಸೆನ್ಶಿಯಲ್ ತೈಲಗಳು, ಹ್ಯಾಂಡ್ ವಾಶ್, ಟಾಲ್ಕಮ್ ಪೌಡರ್ ಇತ್ಯಾದಿ ವೈವಿಧ್ಯಮಯ ಉತ್ಪನ್ನಗಳು ಯಶಸ್ವಿಯಾಗಿವೆ.


  ಮೈಸೂರು ಸ್ಯಾಂಡಲ್ ಸೋಪ್ ಸಕ್ಸಸ್ ಸ್ಟೋರಿ..!


  ಮೈಸೂರು ಸ್ಯಾಂಡಲ್ ಸೋಪ್ ಈಗಲೂ ಕಂಪನಿಯ ಪ್ರಮುಖ ಉತ್ಪನ್ನವಾಗಿಯೇ ಉಳಿದಿದೆ. 100% ಶುದ್ಧ ಶ್ರೀಗಂಧದ ಎಣ್ಣೆಯಿಂದ ತಯಾರಿಸಲ್ಪಟ್ಟ ವಿಶ್ವದ ಏಕೈಕ ಸಾಬೂನಾಗಿದೆ. (ಇತರ ನೈಸರ್ಗಿಕ ಸಾರಭೂತ ತೈಲಗಳಾದ ಪ್ಯಾಟ್ಚೌಲಿ, ವೆಟಿವರ್, ಕಿತ್ತಳೆ, ಜೆರೇನಿಯಂ ಮತ್ತು ಪಾಮ್ ರೋಸ್ ಗಳ ಸಾಬೂನು ಸಹ ದೊರಕುತ್ತದೆ. ) ಪ್ರಚಂಡವಾದ ಬ್ರ್ಯಾಂಡ್ನ ಹೆಸರು ಮತ್ತು ಸೋಪ್ಗೆ ಸಂಬಂಧಿಸಿದ ನಿಷ್ಠೆಯಿಂದಾಗಿ, ಇದು ಎನ್ಆರ್ಐಗಳಿಗೆ ಭೇಟಿ ನೀಡುವ ಶಾಪಿಂಗ್ ಪಟ್ಟಿಗಳಲ್ಲಿ ಅಮೂಲ್ಯವಾದ ಸ್ಥಾನವನ್ನು ಪಡೆಯುತ್ತದೆ.


  2006 ರಲ್ಲಿ ಇದಕ್ಕೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ನೀಡಲಾಯಿತು - ಇದರರ್ಥ ಯಾರಾದರೂ ಶ್ರೀಗಂಧದ ಸಾಬೂನು ತಯಾರಿಸಬಹುದು ಮತ್ತು ಮಾರಾಟ ಮಾಡಬಹುದು. ಆದರೆ ಕೆಎಸ್ಡಿಎಲ್ ಮಾತ್ರ ಇದನ್ನು ‘ಮೈಸೂರು ಸ್ಯಾಂಡಲ್ ವುಡ್’ಸೋಪ್ ಎಂದು ಹೇಳಿಕೊಳ್ಳಬಹುದು. ಕೆಎಸ್ಡಿಎಲ್ ಕರ್ನಾಟಕದ ಕೆಲವು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾಗಿದ್ದು, ಅದು ಸ್ಥಿರವಾದ ಲಾಭವನ್ನು ನೀಡುತ್ತದೆ.


  ಕಂಪನಿಯು 2015-16ರಲ್ಲಿ ತನ್ನ ಒಟ್ಟಾರೆ ಗರಿಷ್ಠ ಮಾರಾಟ ವಹಿವಾಟು (ಅಂದರೆ 476 ಕೋಟಿ) ನೋಂದಾಯಿಸಿದೆ. ಇದು ಈ ರಾಜ್ಯದ ಶ್ರೀಗಂಧದ ಪರಂಪರೆ ಮತ್ತು ಈ ಮಣ್ಣಿನ, ಅಂಡಾಕಾರದ ಸೋಪ್ನ ಯಶಸ್ಸು. ಇದೇ ರೀತಿ, ಕರ್ನಾಟಕದ ಚಲನಚಿತ್ರೋದ್ಯಮ ಕೂಡ ತನ್ನನ್ನು ಸ್ಯಾಂಡಲ್ವುಡ್ ಎಂದು ಕರೆದುಕೊಳ್ಳುತ್ತದೆ.


  ಇಂದು, ಮಾರುಕಟ್ಟೆಯಲ್ಲಿ ಬಹುಸಂಖ್ಯೆಯ ಬ್ರ್ಯಾಂಡೆಡ್ ಸಾಬೂನುಗಳಿವೆ. ಆದರೆ ಮೈಸೂರು ಸ್ಯಾಂಡಲ್ ಸೋಪ್ ಅವೆಲ್ಲವುಗಳಿಗಿಂತ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಶ್ರೀಗಂಧದ ಲಭ್ಯತೆ ಕ್ಷೀಣಿಸುತ್ತಿದ್ದರೂ ಅದರ ಉತ್ಪಾದನಾ ಅಂಕಿ ಅಂಶಗಳು ಹೆಚ್ಚುತ್ತಲೇ ಇವೆ. ಈ ಹಿನ್ನೆಲೆ ರೈತರಿಗೆ ಶ್ರೀಗಂಧದ ಮರ ಬೆಳೆಯಲು ಪ್ರೋತ್ಸಾಹ ನೀಡುತ್ತಿರುವ ಕೆಎಸ್ಡಿಎಲ್, ‘ಗ್ರೋ ಮೋರ್ ಸ್ಯಾಂಡಲ್ ವುಡ್’ಕಾರ್ಯಕ್ರಮವನ್ನು ನಡೆಸುತ್ತಿದೆ. ಇದು ಕೈಗೆಟುಕುವ ಶ್ರೀಗಂಧದ ಸಸಿಗಳನ್ನು ಖರೀದಿಸುವ ಖಾತರಿಯೊಂದಿಗೆ ಒದಗಿಸುತ್ತದೆ. ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶ್ರೀಗಂಧದ ತೈಲ ಹೊರತೆಗೆಯಲು ಗಂಧದ ಮರ ಹೊರ ತೆಗೆದ ಬಳಿಕ ಅದರ ಬದಲು ಮತ್ತೊಂದು ಶ್ರೀಗಂಧದ ಸಸಿಯನ್ನು ನೆಡುವ ಖಚಿತ ಭರವಸೆ ನೀಡುತ್ತದೆ. ಭರವಸೆಯಷ್ಟೇ ಅಲ್ಲ, ಈ ಕೆಲಸವನ್ನೂ ಮಾಡುತ್ತಿದೆ.


  ಮೈಸೂರು ಸ್ಯಾಂಡಲ್ ಸೋಪ್ನ ಈ ಯಶಸ್ಸಿನ ಕತೆ ಕೇವಲ ಭಾರತೀಯ ಪಿಎಸ್ಯುಗಳಿಗೆ ಮಾತ್ರವಲ್ಲದೆ ಇಡೀ ಎಫ್ಎಂಸಿಜಿ ವಲಯಕ್ಕೆ ಸ್ಫೂರ್ತಿಯಾಗಿದೆ.

  Published by:Latha CG
  First published: