The Kerala Story ಸಿನಿಮಾ ಬಗ್ಗೆ ರಾಜಕೀಯ ಪಕ್ಷಗಳು ಹೇಳುತ್ತಿರುವುದೇನು?

ಕೇರಳ ಸ್ಟೋರಿ ಸಿನಿಮಾ

ಕೇರಳ ಸ್ಟೋರಿ ಸಿನಿಮಾ

Film News: ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಕೂಡ ಹಾಕಿದೆ.

  • Share this:

ವಿವಾದಗಳಿಂದಲೇ ಸಾಕಷ್ಟು ಸುದ್ದಿ ಮಾಡುತ್ತಿರುವ ದಿ ಕೇರಳ (The Kerala Story) ಸ್ಟೋರಿ ಸಿನಿಮಾ ಕೆಲ ಕಡೆ ಹೊರತುಪಡಿಸಿ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕಾಲೇಜಿಗೆ ಹೋಗುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರು ಐಸಿಸ್ ಉಗ್ರ ಸಂಘಟನೆಗೆ ಸೇರಿದ್ದು ಹೇಗೆ? ಕೇರಳ ರಾಜ್ಯದಲ್ಲಿ ಮಹಿಳೆಯರ ಬಲವಂತದ ಮತಾಂತರದ ಸುತ್ತ ಕಥೆ ಸಾಗುತ್ತದೆ. ಟೀಸರ್ ರಿಲೀಸ್‌ (Teaser Release) ಆದಾಗಿನಿಂದಲೂ ವಿವಾದದಲ್ಲಿರುವ ಈ ಸಿನಿಮಾದಲ್ಲಿ ಬಹುಭಾಷಾ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಕೂಡ ಹಾಕಿದೆ.


ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಕೆಲ ರಾಜ್ಯಗಳು ಚಿತ್ರ ಪ್ರದರ್ಶನ ಮುಂದುವರೆಸಲು ಸಾಧ್ಯವಿಲ್ಲ ಎಂದು ಹೇಳುತ್ತಿವೆ. ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ.


ಟೀಸರ್ ಹಾಗೂ ಟ್ರೈಲರ್‌ನಲ್ಲಿ ಕೇರಳದ ಸುಮಾರು 32 ಸಾವಿರ ಮಂದಿ ಇಸ್ಲಾಂಗೆ ಮತಾಂತರಗೊಂಡಿದ್ದು, ಭಯೋತ್ಪಾದನೆ ಸಂಘಟನೆ ಸೇರಿಕೊಂಡಿದ್ದಾರೆಂದು ಆರೋಪ ಮಾಡಲಾಗಿದೆ. ಹೀಗಾಗಿ ಕೇರಳದಲ್ಲಿ ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.


ದಿ ಕೇರಳ ಸ್ಟೋರಿ ಮತ್ತು ರಾಜಕೀಯ


ಸದ್ಯ ಈ ಸಿನಿಮಾ ರಾಜಕೀಯದ ಜೊತೆ ಸಹ ನಂಟು ಪಡೆಯುತ್ತಿದೆ. ರಾಜಕೀಯ ವಲಯ ಕೂಡ ಈ ಚಿತ್ರದಿಂದ ಬಿಸಿ ಏರುತ್ತಿದೆ. ಕಾಂಗ್ರೆಸ್‌ ಮತ್ತು ಕೇರಳ ರಾಜಕೀಯ ಪಕ್ಷಗಳು ಚಿತ್ರಕ್ಕೆ ವ್ಯಾಪಕ ವಿಎಓಧ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿ ಪಕ್ಷ ಬೆಂಬಲ ವ್ಯಕ್ತ ಪಡಿಸುತ್ತಿದೆ.


ಚಿತ್ರದ ಪರ ಬಿಜೆಪಿ ಬ್ಯಾಟಿಂಗ್


"ಸಿನಿಮಾ ವಿರೋಧಿಸುತ್ತಿರುವವರು ನಿಷೇಧಿತ PFI ಮತ್ತು ISIS ಬೆಂಬಲಿಗರು"


ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಭಾನುವಾರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇರಳ ಸ್ಟೋರಿ ಚಿತ್ರವನ್ನು ವಿರೋಧಿಸುತ್ತಿರುವವರು ನಿಷೇಧಿತ PFI ಮತ್ತು ಭಯೋತ್ಪಾದಕ ಸಂಘಟನೆ ISIS ನ ಬೆಂಬಲಿಗರು ಎಂದು ಹೇಳಿದ್ದಾರೆ.


ಗುರುಗ್ರಾಮ್‌ನಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಠಾಕೂರ್, ಭಯೋತ್ಪಾದಕ ಗುಂಪು ಪಿಎಫ್‌ಐ ಮತ್ತು ಐಸಿಸ್‌ನ ಅಜೆಂಡಾವನ್ನು ಬೆಂಬಲಿಸುವವರು ಮಾತ್ರ ಚಿತ್ರವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.


ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಭಯೋತ್ಪಾದನೆಗೆ ಬಲವಂತಪಡಿಸುವ ಪಿತೂರಿಯನ್ನು "ದಿ ಕೇರಳ ಸ್ಟೋರಿ" ಸಿನಿಮಾ ಬಹಿರಂಗಪಡಿಸಿದೆ ಎಂದು ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಭಾಷಣದಲ್ಲಿ ಚಿತ್ರದ ಪ್ರಸ್ತಾಪ ಮಾಡಿದ ಪ್ರಧಾನಿ


ಇನ್ನು ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಿದ್ದಾರೆ. ರಾಜ್ಯಕ್ಕೆ ಮೊನ್ನೆ ಆಗಮಿಸಿದ್ದ ಮೋದಿ ತಮ್ಮ ಭಾಷಣದಲ್ಲಿ ಚಲನಚಿತ್ರವನ್ನು ಪ್ರಸ್ತಾಪಿಸಿದರು ಮತ್ತು ಸಿನಿಮಾ ಸಮಾಜದಲ್ಲಿ ಭಯೋತ್ಪಾದನೆಯ ಪರಿಣಾಮಗಳನ್ನು ಬಹಿರಂಗಪಡಿಸಲು ಪ್ರಯತ್ನಿಸಿದೆ ಎಂದರು.


‘ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಆತಂಕವಾದದ ಮತ್ತೊಂದು ಮುಖವನ್ನು ಪರಿಚಯಿಸಲಾಗಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಆದರೆ, ಕಾಂಗ್ರೆಸ್ ಪಕ್ಷ ಈ ಕುರಿತು ಮಾತನಾಡದೇ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಆತಂಕವಾದದ ಪರವಾಗಿಯೇ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷವು ಈಗ ಚಲನಚಿತ್ರವನ್ನು ನಿಷೇಧಿಸಲು ಮತ್ತು ಭಯೋತ್ಪಾದಕ ಅಂಶಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತಿದೆ" ಎಂದರು.


ದಕ್ಷಿಣ ರಾಜ್ಯದಿಂದ ಐಸಿಸ್ ನೇಮಕಾತಿ ವಿವಾದ ಸಾಧ್ಯವಿಲ್ಲ ಎಂದು ಹೇಳಿರುವ ಬಿಜೆಪಿ ಚಿತ್ರದ ಬೆಂಬಲಕ್ಕೆ ನಿಂತಿದೆ. “ಕೇರಳದಲ್ಲಿ ಐಸಿಸ್ ಮಹತ್ವದ ಅಸ್ತಿತ್ವವನ್ನು ಹೊಂದಿದೆ. ನೀವು ರಾಜ್ಯದಿಂದ ಐಸಿಸ್ ನೇಮಕಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ" ಎಂದು ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಹೇಳಿದ್ದಾರೆ


ಮಧ್ಯಪ್ರದೇಶದಲ್ಲಿ ಸಿನಿಮಾ ತೆರಿಗೆ ಮುಕ್ತ


ಮಧ್ಯಪ್ರದೇಶವು ರಾಜ್ಯದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿದೆ, ಆದರೆ ಉತ್ತರ ಪ್ರದೇಶದ ಸಚಿವ ಬ್ರಜೇಶ್ ಪಾಠಕ್ ಅವರು ರಾಜ್ಯದಲ್ಲಿ ಇದೇ ರೀತಿಯ ಸ್ಥಾನಮಾನವನ್ನು ನೀಡುವ ಯಾವುದೇ ಪ್ರಸ್ತಾಪವನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಮೋದಿಯವರ 'ಡಬಲ್ ಇಂಜಿನ್ ಸರ್ಕಾರ', ಬದಲಾಯಿಸಿತಾ ರಾಜ್ಯ ರಾಜಕೀಯದ ಲೆಕ್ಕಾಚಾರ?


ತಮಿಳುನಾಡಲ್ಲಿ ಚಿತ್ರ ಪ್ರದರ್ಶನ ರದ್ದು


ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮತ್ತು ಕಳಪೆ ಸಾರ್ವಜನಿಕ ಪ್ರತಿಕ್ರಿಯೆ ಕಾರಣದಿಂದ ತಮಿಳುನಾಡಿನಾದ್ಯಂತ ಮಲ್ಟಿಪ್ಲೆಕ್ಸ್‌ಗಳು ವಿವಾದಾತ್ಮಕ ಚಿತ್ರದ ಪ್ರದರ್ಶನವನ್ನು ಭಾನುವಾರದಿಂದ ರದ್ದುಗೊಳಿಸಿವೆ. ಅನೇಕ ಥಿಯೇಟರ್‌ ಮಾಲೀಕರು ಚಿತ್ರ ಪ್ರದರ್ಶನ ಮುಂದುವರೆಸಲು ಸಾಧ್ಯವಿಲ್ಲ ಎಂದಿದ್ದಾರೆ.


ಸಿನಿಮಾ ವಿರುದ್ಧ ಕಾಂಗ್ರೆಸ್ ನಾಯಕರ ಬಿರುಸಿನ ವಾಗ್ದಾಳಿ


ಆಡಳಿತಾರೂಢ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸೇರಿದಂತೆ ಕೇರಳದ ರಾಜಕೀಯ ಪಕ್ಷಗಳು ಚಲನಚಿತ್ರ ವಿರುದ್ಧ ವಾಗ್ದಳಿ ನಡೆಸುತ್ತಿವೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಸಿನಿಮಾ ಬಗ್ಗೆ ಕಿಡಿ ಕಾರಿದ್ದು, "ಚಿತ್ರದ ನಿರ್ಮಾಪಕರು ರಾಜ್ಯದ ವಾಸ್ತವತೆಯನ್ನು ಉತ್ಪ್ರೇಕ್ಷೆ ಮತ್ತು ವಿರೂಪ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಕೇರಳದಲ್ಲಿ 32,000 ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಸಾಬೀತುಪಡಿಸುವ ಯಾರಿಗಾದರೂ 1 ಕೋಟಿ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ಟ್ವೀಟ್ ಮಾಡಿದ್ದಾರೆ.


ಚಿತ್ರ ತಂಡ ಹೇಳೋದೇನು?


ಚಿತ್ರ ನಿರ್ಮಾಪಕರು ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶೇಷ ಸಂದರ್ಶನವೊಂದರಲ್ಲಿ, ನಟಿ ಅದಾ ಶರ್ಮಾ, ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಿರ್ಮಾಪಕ ವಿಪುಲ್ ಷಾ ಎಲ್ಲರೂ ಈ ಚಿತ್ರವು "ಇಡೀ ಮುಸ್ಲಿಂ ಸಮುದಾಯಕ್ಕಿಂತ ಹೆಚ್ಚಾಗಿ ಭಯೋತ್ಪಾದಕರನ್ನು ಗುರಿಯಾಗಿಸುತ್ತದೆ" ಎಂದು ಒಪ್ಪಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.


ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ವಿಪುಲ್ ಶಾ ಅವರು, “ನಾವು ಸಂಖ್ಯೆಗಳ ಬಗ್ಗೆ ಚರ್ಚೆಗೆ ಬರಲು ಬಯಸುವುದಿಲ್ಲ, ನಾವು ಸಮಸ್ಯೆಯ ಬಗ್ಗೆ ಮಾತನಾಡಲು ಬಯಸುತ್ತೇವೆ. ಕೇರಳ ಮತ್ತು ಭಾರತದಲ್ಲಿ ನಡೆಯುತ್ತಿರುವ ಮಾನವ ದುರಂತವನ್ನು ನಾವು ಗಮನಕ್ಕೆ ತರಲು ಬಯಸುತ್ತೇವೆ" ಎಂದಿದ್ದಾರೆ.


ದಿ ಕೇರಳ ಸ್ಟೋರಿ; ಸಿನಿಮಾದ ಸುತ್ತಲಿನ ವಿವಾದವೇನು?


'ದಿ ಕೇರಳ ಸ್ಟೋರಿ' ಸಿನಿಮಾಗೆ ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಅದಾ ಶರ್ಮಾ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ವಿಜಯ್​ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: ಈ ಬಾರಿಯ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದ ಪ್ರಭಾವ ಎಷ್ಟು?


* ಕೇರಳ ರಾಜ್ಯದಲ್ಲಿ ಮಹಿಳೆಯರ ಬಲವಂತದ ಮತಾಂತರ ಮತ್ತು ಮೂಲಭೂತೀಕರಣ ಮೇಲೆ ಬೆಳಕು ಚೆಲ್ಲುವ ಈ ಸಿನಿಮಾ ಅದರ ವಸ್ತು ವಿಷಯದಿಂದಲೇ ಭಾರಿ ವಿವಾದಕ್ಕೆ ಈಡಾಗಿದೆ.


ಸಿನಿಮಾ ವರದಿಯ ಪ್ರಕಾರ ಕೇರಳದಲ್ಲಿ ಸರಿಸುಮಾರು 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ. ಭಯೋತ್ಪಾದಕ ಗುಂಪು ಅನೇಕರನ್ನು ಐಸಿಸ್ ಆಳ್ವಿಕೆಯ ಸಿರಿಯಾಕ್ಕೆ ಕರೆದುಕೊಂಡು ಹೋಗಿದೆ ಎಂದು ಸಿನಿಮಾ ವಿವರಿಸಿದೆ.


* ಸಿನಿಮಾದ ಈ ಕಥೆಗೆ ಪರ-ವಿರೋಧ ಎರಡೂ ವ್ಯಕ್ತವಾಗುತ್ತಿದೆ. ಮೊದಲಿಗೆ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ "ಕೆಟ್ಟ ದ್ವೇಷಪೂರಿತ ಭಾಷಣ" ಮತ್ತು "ಆಡಿಯೋ- ವಿಡಿಯೋ ಪ್ರಾಪಗಾಂಡ" ಆಧಾರದ ಮೇಲೆ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.


ಆದರೆ ಸುಪ್ರೀಂ ಕೋರ್ಟ್ ಮನವಿಯನ್ನು ಪರಿಗಣಿಸಲು ನಿರಾಕರಿಸಿತು ಮತ್ತು ಪೀಠವು "ದ್ವೇಷದ ಭಾಷಣಗಳಲ್ಲಿ ವೈವಿಧ್ಯತೆಗಳಿವೆ. ಈ ಚಿತ್ರವು ಸೆನ್ಸಾರ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಜೊತೆಗೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದಿದೆ" ಎಂದು ಅಭಿಪ್ರಾಯ ಪಟ್ಟಿತು.




* ಅತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಚಿತ್ರದ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಿನಿಮಾ "ಸಂಘ ಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನ" ಎಂದು ಆಕ್ರೋಶ ಹೊರಹಾಕಿದ್ದರು.


* ಸಿನಿಮಾ ಟ್ರೇಲರ್‌ಗೆ ಬಂದ ಟೀಕೆಗಳ ನಂತರ, ಯೂಟ್ಯೂಬ್‌ನಲ್ಲಿ ಚಿತ್ರದ ಟೀಸರ್ ಆರಂಭದಲ್ಲಿ "ಕೇರಳದಲ್ಲಿ 32,000 ಹೆಣ್ಣುಮಕ್ಕಳ ಹೃದಯವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು" ಎಂದು ಇದದ್ದು, ನಂತರ "ಕೇರಳದ ಮೂವರು ಯುವತಿಯರ ನೈಜ ಕಥೆಗಳು" ಎಂದು ಬದಲಾಯಿತು.
ಒಟ್ಟಾರೆ ಸಿನಿಮಾವು ರಾಜಕೀಯ ವಲಯ ಸೇರಿ ದೇಶವನ್ನು ಒಮ್ಮೆ ನಡುಗಿಸುತ್ತಿದೆ ಎನ್ನಬಹುದು.

First published: