ಭಾಷೆ ಹಾಗೂ ಸಂಸ್ಕೃತಿ (Language and Culture) ಪ್ರತಿಯೊಂದು ಜನಾಂಗದ ಜೀವಾಳವಾಗಿರುತ್ತದೆ. ಭಾಷೆ ಎಂಬುದು ಪ್ರತಿಯೊಂದು ಜನಾಂಗಕ್ಕೂ ಅಗತ್ಯಗತ್ಯವಾಗಿದ್ದು ಭಾಷೆ ಮರೆಯಾದರೆ ಜನಾಂಗವೂ ಕಣ್ಮರೆಯಾಗುತ್ತದೆ ಎಂಬುದು ಭಾಷಾ ತಜ್ಞರ ಹೇಳಿಕೆಯಾಗಿದೆ. ಜಾರ್ಖಂಡ್‌ನ (Jarkhand) ಆದಿವಾಸಿ ಜನಾಂಗದ ಭಾಷೆಯಾದ ಕುರುಖ್ ಅನ್ನು ಸಾರ್ವಜನಿಕಗೊಳಿಸಲು ಅದೇ ಸಮುದಾಯದ ವೈದ್ಯಾಧಿಕಾರಿ ನಾರಾಯಣ್ ಓರಾನ್ (Narayan Oraon) ಹೇಗೆ ಶ್ರಮಪಟ್ಟರು ಹಾಗೂ ಭಾಷೆಯನ್ನು ಪ್ರಚಾರಗೊಳಿಸಲು ಲಿಪಿಯನ್ನು ರಚಿಸಿ ಆದಿವಾಸಿಗಳ ಬೆಂಬಲಕ್ಕೆ ನಿಂತರು ಇದರೊಂದಿಗೆ ಜೆಫ್ರಿನಸ್ ಬಾಕ್ಸ್ಲಾ ಎಂಬ ಪಾದ್ರಿ ಸ್ಥಳೀಯ ಭಾಷೆಯಲ್ಲಿಯೇ ಮಕ್ಕಳು ಕಲಿಯಬೇಕೆಂಬ ನಿಟ್ಟಿನಲ್ಲಿ ಶಾಲೆಯನ್ನು ಆರಂಭಿಸಿದರು. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಕೆಳಗಿನ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪ್ರತ್ಯೇಕ ರಾಜ್ಯಕ್ಕಾಗಿ ಆಂದೋಲನ
ಬಿಹಾರದ ಭಾಗವೆನಿಸಿದ್ದ ಜಾರ್ಖಂಡ್ ಪ್ರತ್ಯೇಕ ರಾಜ್ಯ ಸ್ಥಾಪನೆಯಾಗಬೇಕೆಂಬ ಬೇಡಿಯನ್ನಿರಿಸಿಕೊಂಡು ಆಂದೋಲನ ನಡೆಸುತ್ತಿದ್ದ ಸಮಯವಾಗಿತ್ತು. ಈ ಪ್ರದೇಶದ ಆದಿವಾಸಿ ಸಮುದಾಯದವರು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ತಾರತಮ್ಯವನ್ನು ದೀರ್ಘಕಾಲ ಅನುಭವಿಸಿದ್ದರು ಹಾಗೂ ತಮ್ಮ ಹಕ್ಕುಗಳನ್ನು ಸಂರಕ್ಷಿಸುವ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇಟ್ಟಿದ್ದರು.
ಈ ಆದಿವಾಸಿ ಸಮುದಾಯಕ್ಕೆ ಸೇರಿದ ನಾರಾಯಣ್ ಓರಾನ್ ಎಂಬ ಯುವ ಆದಿವಾಸಿ ವೈದ್ಯರು ಈ ಪರಿಸ್ಥಿತಿ ಬದಲಾಗಬೇಕೆಂಬ ಪಣ ತೊಟ್ಟರು. ಏಕೆಂದರೆ ಅವರು ಕೂಡ ತಾರತಮ್ಯದ ಶೋಷಣೆಯನ್ನು ಅನುಭವಿಸಿದ್ದರು ಬಿಹಾರದ ದರ್ಭಾಂಗ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಅವರನ್ನು ಸಹಪಾಠಿಗಳು ಜಂಗ್ಲಿ (ಕಾಡು ಮನುಷ್ಯ) ಎಂದು ಕರೆಯುತ್ತಿದ್ದರು.
ಆದಿವಾಸಿ ಸಮಾಜದ ವಿದ್ಯಾವಂತ ವಿದ್ಯಾರ್ಥಿ ನಾಯಕರು ಜಾರ್ಖಂಡ್ ಚಳವಳಿಯ ಮುಂಚೂಣಿಯಲ್ಲಿದ್ದರು. ಅವರಲ್ಲಿ ಓರಾನ್‌ನ ಸ್ನೇಹಿತ ಭಗತ್ ಕೂಡ ಒಬ್ಬರು. ತಮ್ಮ ಚಳುವಳಿ ಪ್ರಬಲ ಹಾಗೂ ಪರಿಣಾಮ ಬೀರುವಂತಿರಬೇಕು ಎಂದಾದಲ್ಲಿ ಭಾಷೆ ಹಾಗೂ ಸಂಸ್ಕೃತಿ ಗಟ್ಟಿಯಾಗಿರಬೇಕು ಎಂಬುದನ್ನು ನಾರಾಯಣ್ ಹಾಗೂ ಭಗತ್ ಮನಗಂಡರು ಹಾಗಾಗಿ ಆದಿವಾಸಿ ಸಮುದಾಯದ ಭಾಷೆ ಓರಾನ್ (ಕುರುಖ್) ಅನ್ನು ಅಭಿವೃದ್ಧಿಪಡಿಸುವ ಪಣ ತೊಟ್ಟರು.
ಇದನ್ನೂ ಓದಿ: ಏನಿದು ರಾಜ್ಯ 7ನೇ ವೇತನ ಆಯೋಗ? ಇದರಿಂದ ಸರ್ಕಾರಿ ನೌಕರರಿಗೆ ಆಗುವ ಅನುಕೂಲಗಳೇನು?
ಆದಿವಾಸಿ ಭಾಷೆಯಲ್ಲಿ ಮುದ್ರಿತಗೊಂಡಿಲ್ಲ
ದರ್ಭಾಂಗ ವೈದ್ಯಕೀಯ ಆಸ್ಪತ್ರೆಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾಗ, ರೂಪಾಯಿ ನೋಟುಗಳು ಮತ್ತು ಗರ್ಭನಿರೋಧಕ ಮಾತ್ರೆಗಳ ಪ್ಯಾಕೆಟ್‌ಗಳ ಮೇಲೆ ವಿವಿಧ ಲಿಪಿಗಳಲ್ಲಿ ಪಠ್ಯವನ್ನು ಬರೆಯಲಾಗಿದೆ ಎಂಬುದು ನಾರಾಯಣ್ ಗಮನಕ್ಕೆ ಬಂದಿತು. ಇದರಿಂದ ಸ್ಥಳೀಯರಿಗೆ ಇದರ ಬಗ್ಗೆ ಮಾಹಿತಿ ಪಡೆಯಲು ಕಷ್ಟ ಎಂಬುದನ್ನು ಅವರು ಮನಗಂಡರು.
ಆದಿವಾಸಿ ಭಾಷೆಗಳು ಜ್ಞಾನದ ಸಂಪತ್ತನ್ನು ಹೊಂದಿವೆ ಮತ್ತು ಇತರ ಸಾಮಾನ್ಯವಾಗಿ ಬಳಸುವ ಭಾಷೆಗಳಂತೆ ಗುರುತಿಸಲು ಅರ್ಹವಾಗಿವೆ ಎಂದು ನಾರಾಯಣ್ ನಂಬಿದ್ದರು. ಸಮುದಾಯದ ಸದಸ್ಯರೊಂದಿಗೆ ಚರ್ಚಿಸಿ ತಾವೇ ತಯಾರಿಸಿದ ಸ್ಕ್ರಿಪ್ಟ್‌ಗೆ ಟೋಲಾಂಗ್ ಸಿಕಿ ಎಂಬ ಹೆಸರನ್ನಿರಿಸಿದರು. ಟೋಲಾಂಗ್ ಎಂಬ ಪದವು ಪ್ರದೇಶದ ಆದಿವಾಸಿ ಸಮುದಾಯಗಳ ಪುರುಷರು ಧರಿಸುವ ಸಾಂಪ್ರದಾಯಿಕ ಉಡುಪನ್ನು ಸೂಚಿಸುತ್ತದೆ ಓರಾನ್ ವರ್ಣಮಾಲೆಯ ವಿನ್ಯಾಸವು ಉಡುಪನ್ನು ಸುತ್ತುವ ಶೈಲಿಗಳಿಂದ ಪ್ರೇರಿತವಾಗಿದೆ ಎಂಬುದು ನಾರಾಯಣ್ ಹೇಳಿಕೆಯಾಗಿದೆ.
ಕುರುಖ್ ಭಾಷೆಯ ಅಧಿಕೃತ ಲಿಪಿ ಎಂಬ ಮನ್ನಣೆ
ಈ ಸಂದರ್ಭದಲ್ಲಿಯೇ ಸರಕಾರಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಾರಾಯಣ್ ಓರಾನ್ ಆದಿವಾಸಿ ಸಮುದಾಯದ ಭಾಷಾ ಸ್ಕ್ರಿಪ್ಟ್‌ಗಾಗಿ ಹಗಲಿರುಳು ಶ್ರಮಿಸಿದರು. ಒಂದು ದಶಕದ ನಂತರ ಸ್ಕ್ರಿಪ್ಟ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು ಹಾಗೂ 2003 ರಲ್ಲಿ ಜಾರ್ಖಂಡ್ ಸರಕಾರವು ಇದನ್ನು ಕುರುಖ್ ಭಾಷೆಯ ಅಧಿಕೃತ ಲಿಪಿ ಎಂಬ ಮನ್ನಣೆಯನ್ನು ನೀಡಿತು.
ಈ ಸಾಧನೆಯು ಕುರುಖ್ ಸಂಸ್ಕೃತಿಯ ಇತಿಹಾಸದಲ್ಲಿ ನಾರಾಯಣ್ ಓರಾನ್‌ನನ್ನು ನಿರ್ಣಾಯಕ ವ್ಯಕ್ತಿಯಾಗಿ ಗುರುತಿಸಿದೆ.
ಹೆಚ್ಚಿನ ಆದಿವಾಸಿಗಳು ತಮ್ಮ ಸಾಂಸ್ಕೃತಿಕ ಗುರುತಿನಿಂದ ವಂಚನೆಗೆ ಒಳಗಾಗಿದ್ದಾರೆ ಎಂದು ಹೇಳಿರುವ ನಾರಾಯಣ್ ಓರಾನ್, ಅವರಿಗೆ ತಮ್ಮ ಮಾತೃಭಾಷೆಯನ್ನು ಗುರುತಿಸಲಾಗುತ್ತಿಲ್ಲ ಹಾಗೂ ತಮ್ಮದೇ ಸ್ವಂತ ಲಿಪಿಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ಸ್ವತಂತ್ರ ಮತ್ತು ಮುಕ್ತ ಆದಿವಾಸಿ ವ್ಯಕ್ತಿ ಮತ್ತು ಸಮುದಾಯವಾಗಲು, ಅವರು ತಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ತಮ್ಮದೇ ಆದ ಲಿಪಿ ಮತ್ತು ಭಾಷೆಯನ್ನು ಹೊಂದಿರಬೇಕು ಎಂಬುದು ನಾರಾಯಣ್ ಅಭಿಮತವಾಗಿದೆ.
ಶಾಲೆ ಕೂಡ ಆರಂಭವಾಯಿತು
ಒರಾನ್ ತನ್ನ ಲಿಪಿಯನ್ನು ಜಗತ್ತಿಗೆ ಬಿಡುಗಡೆ ಮಾಡಿದ ಅದೇ ಸಮಯದಲ್ಲಿ, ಗುಮ್ಲಾ ಜಿಲ್ಲೆಯ ಒಳಭಾಗದಲ್ಲಿ, ಬಘಿಟೋಲಿ ಎಂಬ ಹಳ್ಳಿಯಲ್ಲಿ, ಕುರುಖ್ ಪಾದ್ರಿಯಾದ ಫಾದರ್ ಜೆಫಿರಿನಸ್ ಬಾಕ್ಸ್ಲಾ ತನ್ನ ಸಮುದಾಯಕ್ಕಾಗಿ ಒಂದು ಸಣ್ಣ ಮಣ್ಣಿನ ಗುಡಿಸಲಿನಲ್ಲಿ 15 ವಿದ್ಯಾರ್ಥಿಗಳೊಂದಿಗೆ ಹಾಗೂ ಒಬ್ಬರು ಶಿಕ್ಷಕರೊಂದಿಗೆ ಶಾಲೆಯನ್ನು ಆರಂಭಿಸಿದರು. ಸ್ಥಾಪಿಸುವ ಮೊದಲು, ಅವರು ಹತ್ತಿರದ 22 ಹಳ್ಳಿಗಳ ಹಿರಿಯರನ್ನು ಕರೆದು ಶಾಲೆಯ ಬಗ್ಗೆ ಚರ್ಚಿಸಿದರು. ಮಕ್ಕಳು ಸ್ಥಳೀಯ ಭಾಷೆಯಲ್ಲಿ ಪಾಠ ಪ್ರವಚನಗಳನ್ನು ಕಲಿಯಬೇಕೆಂಬ ಇಚ್ಛೆಯನ್ನು ಬಕ್ಸ್ಲಾ ಹೊಂದಿದ್ದರು. ಪ್ರತ್ಯೇಕ ರಾಜ್ಯಕ್ಕಾಗಿ ಆಂದೋಲನವು ಕಾರ್ಯರೂಪಕ್ಕೆ ಬರುವ ಮೊದಲೇ, ಜಾರ್ಖಂಡ್‌ನಲ್ಲಿ ಆದಿವಾಸಿಗಳು ತಾರತಮ್ಯ ಮತ್ತು ಶೋಷಣೆಯ ವಿರುದ್ಧ ದನಿಎತ್ತಿದ್ದರು.
ಸ್ವಾತಂತ್ರ್ಯದ ಕೇವಲ ಒಂದು ವರ್ಷದ ನಂತರ, ಆದಿವಾಸಿ ನಾಯಕ ಜೈಪಾಲ್ ಸಿಂಗ್ ಮುಂಡಾ ಸಾರ್ವಜನಿಕ ಭಾಷಣದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ ಆದಿವಾಸಿಗಳಿಗೆ ಸರಿಯಾದ ಹಕ್ಕು ನೀಡದೇ ತಾರತಮ್ಯವೆಸಗುತ್ತಾರೆ ಎಂದು ಆಪಾದಿಸಿದ್ದಾರೆ. ಜನರು ಸಾಮಾನ್ಯವಾಗಿ ಆದಿವಾಸಿಗಳ ಬಗ್ಗೆ ಎಷ್ಟು ಅಜ್ಞಾನ ಹೊಂದಿದ್ದಾರೆಂದರೆ ಅವರು ತಮ್ಮ ಸಂಸ್ಕೃತಿ ಮತ್ತು ಭಾಷೆಗಳು ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ಆಪಾದಿಸಿದ್ದಾರೆ.
ಈ ಸಮುದಾಯಗಳ ಮೇಲೆ ಪ್ರಬಲ ಭಾಷೆಗಳನ್ನು ಹೇರುವುದರ ವಿರುದ್ಧವೂ ಎಚ್ಚರಿಕೆ ನೀಡಿದರು. ಮೂಲನಿವಾಸಿಗಳ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಯೋಗ್ಯವಾಗಿಲ್ಲ ಎಂದು ಹೇಳಲಾಗುತ್ತದೆ ಮತ್ತು ಮೂಲನಿವಾಸಿಗಳ ಪ್ರದೇಶಗಳಲ್ಲಿ ಬೋಧನಾ ಮಾಧ್ಯಮವು ರಾಷ್ಟ್ರಭಾಷಾ ಆಗಿರಬೇಕು ಎಂದು ಹೇಳಲಾಗುತ್ತದೆ ಎಂದು ತಿಳಿಸಿದರು.
ಭಾಷೆಯ ಮೂಲಕ ಅಲ್ಲಿನ ಪ್ರದೇಶದ ಪರಿಚಯ ಸಾಧ್ಯವಾಗುತ್ತದೆ
ಸಂವಿಧಾನ ಸಭೆಯ ಚರ್ಚೆಗಳಲ್ಲಿ ಮುಂಡಾ ಅವರು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಮುಂಡರಿ, ಓರಾನ್ ಮತ್ತು ಗೊಂಡಿ ಭಾಷೆಗಳನ್ನು ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಸೇರಿಸಲು ಸಹ ವಾದ ಮಂಡಿಸಿದ್ದರು. ಆದಿವಾಸಿ ಭಾಷೆ ಹಾಗೂ ಸಂಸ್ಕೃತಿ ಮರೆಯಾಗುತ್ತದೆ ಎಂಬ ಭಯ ಈ ಸಮುದಾಯಕ್ಕಿದೆ. ನಮ್ಮ ಕುರಿತಾದ ವಿವರಗಳು ಹೊರಜಗತ್ತಿಗೆ ತಿಳಿಯುವುದು ಅಲ್ಲಿನ ಸ್ಥಳೀಯ ಭಾಷೆಯ ಮೂಲಕ ಎಂಬುದು ಅಳಿವಿನಂಚಿನಲ್ಲಿರುವ ಸ್ಥಳೀಯ ಭಾಷೆಗಳು ಮತ್ತು ಸಂಸ್ಕೃತಿಯ ಕೇಂದ್ರದ ನಿರ್ದೇಶಕ ಡಾ.ಅಭಯ್ ಮಿಂಜ್ ಮಾತಾಗಿದೆ. ಒಂದು ಭಾಷೆ ಸತ್ತರೆ ಅದರೊಂದಿಗೆ ಅಲ್ಲಿನ ಜನರೂ ಮರಣಿಸುತ್ತಾರೆ (ಯಾವುದೇ ವಿವರ ದೊರೆಯುವುದಿಲ್ಲ) ಎಂಬುದು ಮಿಂಜ್ ಹೇಳಿಕೆಯಾಗಿದೆ.
ಕನಿಷ್ಠ 1800 ರ ದಶಕದ ಅಂತ್ಯದಿಂದ, ಆದಿವಾಸಿ ಭಾಷೆಗಳನ್ನು ಬರೆಯಲಾಗಿದೆ, ಮುದ್ರಿಸಲಾಗುತ್ತದೆ ಮತ್ತು ದೇವನಾಗರಿ ಲಿಪಿ ಅಥವಾ ಇತರ ಪ್ರಾದೇಶಿಕ ಭಾಷೆಗಳ ಲಿಪಿಗಳನ್ನು ಬಳಸಿ ಕಲಿಸಲಾಗುತ್ತದೆ. ಆದರೆ ಅನೇಕ ಆದಿವಾಸಿಗಳು ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಭಾಷೆಗಳಿಗೆ ತಮ್ಮದೇ ಆದ ಲಿಪಿಯನ್ನು ಹೊಂದಿರುವುದು ಅಗತ್ಯವೆಂದು ಭಾವಿಸುತ್ತಾರೆ.
ಭಾಷೆಗೆ ಸ್ಕ್ರಿಪ್ಟ್ ಸಿದ್ಧಪಡಿಸಲು ಶ್ರಮಿಸಿದ ನಾರಾಯಣ್ ಓರಾನ್
ದ್ರಾವಿಡ ಭಾಷೆಯಾದ ಕುರುಖ್ ಅನ್ನು ದೇವನಾಗರಿಯಂತಹ ಇಂಡೋ-ಆರ್ಯನ್ ಲಿಪಿಗಳನ್ನು ಬಳಸಿ ಬರೆಯಬಾರದು ಎಂದು ಓರಾನ್ ವಾದಿಸಿದರು, ಏಕೆಂದರೆ ಇಂಡೋ-ಆರ್ಯನ್ ಕುಟುಂಬದವರೊಂದಿಗೆ ಆದಿವಾಸಿ ಭಾಷೆಗಳ ಪರಸ್ಪರ ಕ್ರಿಯೆಯು ಆದಿವಾಸಿ ಭಾಷೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಾರಾಯಣ್ ಓರಾನ್ ವಾದವಾಗಿದೆ.
ಒರಾನ್ ಗ್ರಾಮೀಣ ಪ್ರದೇಶಗಳಲ್ಲಿನ ಸಮುದಾಯದ ಸದಸ್ಯರು ಮತ್ತು ಡಾ ಫ್ರಾನ್ಸಿಸ್ ಎಕ್ಕಾ ಮತ್ತು ಡಾ ರಾಮ್ ದಯಾಳ್ ಮುಂಡಾ ಅವರಂತಹ ವೃತ್ತಿಪರ ಭಾಷಾಶಾಸ್ತ್ರಜ್ಞರನ್ನು ಒಳಗೊಂಡಂತೆ ಪ್ರಮುಖ ಆದಿವಾಸಿ ಬುದ್ಧಿಜೀವಿಗಳಿಂದ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆದರು. ಭಾಷೆಯ ಮೇಲೆ ಬಲವಾದ ಹಿಡಿತವನ್ನು ಹೊಂದಿರುವ ಹಳ್ಳಿಗಳಲ್ಲಿನ ಸಮುದಾಯದ ಸದಸ್ಯರಿಂದ ವಿವರವಾದ ಪ್ರತಿಕ್ರಿಯೆ ಓರಾನ್‌ಗೆ ಪ್ರಯೋಜನವನ್ನೊದಗಿಸಿತು. ಮೊದಲಿಗೆ ಅವರು ಸ್ಕ್ರಿಪ್ಟ್‌ನಲ್ಲಿ "ನ್ಯಾ" ಶಬ್ದವನ್ನು ಸೇರಿಸಿರಲಿಲ್ಲ ಎಂದು ಅವರು ತಿಳಿಸಿದರು. ಸ್ಕ್ರಿಪ್ಟ್ ಅನ್ನು ಹಳ್ಳಿಗರಿಗೆ ತೋರಿಸಿದಾಗ, ಅವರು ಧ್ವನಿಯನ್ನು ಬಳಸಿದ ಸಾಂಪ್ರದಾಯಿಕ ಹಾಡುಗಳನ್ನು ಅವರಿಗೆ ಹಾಡಿದರು ಮತ್ತು ಅದನ್ನು ಲಿಪಿಯಲ್ಲಿ ಪ್ರತಿನಿಧಿಸಬೇಕು ಎಂದು ಅವರಿಗೆ ಪ್ರದರ್ಶಿಸಿದರು.
ಚಿಹ್ನೆಗಳು ಮತ್ತು ಮಾದರಿಗಳಿಂದ ಸ್ಫೂರ್ತಿ
ಭಾಷೆಯನ್ನು ಮಾತನಾಡದ ಸಮುದಾಯದ ಸದಸ್ಯರು ಸಹ ನೀಡಲು ಉಪಯುಕ್ತ ಸಲಹೆಗಳನ್ನು ನೀಡಿದ್ದರು ಎಂದು ಓರಾನ್ ತಿಳಿಸುತ್ತಾರೆ. ಲಿಪಿಯು ಕುರುಖ್ ಸಮಾಜ ಮತ್ತು ಸಂಸ್ಕೃತಿಯ ಪ್ರತಿನಿಧಿಯಾಗಿರಬೇಕು ಎಂದು ಭಾಷಾಶಾಸ್ತ್ರಜ್ಞರು ಓರಾನ್‌ಗೆ ಸಲಹೆ ನೀಡಿದರು. ಸೈಂದಾ ಎಂಬ ಸಣ್ಣ ಹಳ್ಳಿಯಲ್ಲಿ ಬೆಳೆದ ಓರಾನ್, ಕುರುಖ್ ಸಮಾಜದಲ್ಲಿ ಅವರು ಗಮನಿಸಿದ ಚಿಹ್ನೆಗಳು ಮತ್ತು ಮಾದರಿಗಳಿಂದ ಸ್ಫೂರ್ತಿ ಪಡೆದರು.
ಮೇ 15, 1999 ರಂದು, ಹಲವಾರು ಕಾರ್ಯಾಗಾರಗಳು ಮತ್ತು ಸಾರ್ವಜನಿಕ ಸಮಾಲೋಚನೆಗಳ ನಂತರ, ರಾಂಚಿಯಲ್ಲಿ ಪತ್ರಿಕಾಗೋಷ್ಠಿಯ ಮೂಲಕ ಸಾರ್ವಜನಿಕ ಬಳಕೆಗಾಗಿ ಟೋಲಾಂಗ್ ಸಿಕಿ ಲಿಪಿಯನ್ನು ಬಿಡುಗಡೆ ಮಾಡಲಾಯಿತು. ಇಬ್ಬರು ಮಾಜಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ ರಾಮ್ ದಯಾಳ್ ಮುಂಡಾ ಮತ್ತು ಡಾ ಇಂದೂ ಧನ್ ಓರಾನ್ ಅವರನ್ನು ಬೆಂಬಲಿಸಲು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು ಎಂಬುದನ್ನು ಓರಾನ್ ನೆನಪಿಸಿಕೊಳ್ಳುತ್ತಾರೆ. ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಹೆಚ್ಚು ಸುಗಮವಾಗಿ ಕಲಿತು ಉತ್ತಮ ಶೈಕ್ಷಣಿಕ ಸಾಧನೆ ಮಾಡುತ್ತಾರೆ ಎಂಬುದು ಓರಾನ್ ಹಾಗೂ ಬಕ್ಸ್ಲಾ ಮಾತಾಗಿದೆ. ನಿಮ್ಮ ಮಾತೃಭಾಷೆಯಲ್ಲಿ ವಿಷಯಗಳನ್ನು ಗ್ರಹಿಸುವುದು ಇತರ ಭಾಷೆಗಳಿಗಿಂತ ಸುಲಭ ಎಂಬುದು ಅವರ ಹೇಳಿಕೆಯಾಗಿದೆ.
ಈ ದೃಷ್ಟಿಕೋನವು 2020 ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮತ್ತು ಹಿಂದಿನ ವರ್ಷಗಳ ನೀತಿಗಳಲ್ಲಿ ಪ್ರತಿಧ್ವನಿಸುತ್ತದೆ, ಇದು ಮಕ್ಕಳಿಗೆ ಕನಿಷ್ಠ 5 ನೇ ತರಗತಿಯವರೆಗೆ ಮತ್ತು ಸಾಧ್ಯವಾದರೆ, ನಂತರವೂ ಅವರ ಮಾತೃಭಾಷೆಯಲ್ಲಿ ಕಲಿಸಲು ಶಿಫಾರಸು ಮಾಡುತ್ತದೆ ಎಂಬುದು ನಾರಾಯಣ್ ಓರಾನ್ ಹೇಳಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ