• Home
  • »
  • News
  • »
  • explained
  • »
  • Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!

Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಬಿಯಾನ

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಬಿಯಾನ

ಸಮುದ್ರ ಮತ್ತು ಬೆಟ್ಟಗುಡ್ಡಗಳನ್ನು ಹೊಂದಿರುವ, ಶೇಕಡಾ 70ರಷ್ಟು ಅರಣ್ಯವನ್ನೇ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲವೂ ಇದೆ. ಆದರೆ ಎಮರ್ಜೆನ್ಸಿ ಆಸ್ಪತ್ರೆಯೊಂದನ್ನು ಬಿಟ್ಟು! ಸಂಸದರು, ಶಾಸಕರು ಎಲ್ಲಾ ಇದ್ದಾರೆ, ಮಾಜಿ ಸಚಿವರು, ಹಾಲಿ ಸಚಿವರು, ಮಾಜಿ ಕೇಂದ್ರ ಸಚಿವರು ಎಲ್ಲರೂ ಇಲ್ಲಿಯವರೇ, ಆದರೂ ಇಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ! ಹೀಗಾಗಿ ಆಯುಷ್ಯ ಗಟ್ಟಿ ಇದ್ದರೆ ಮಣಿಪಾಲದವರೆಗೆ ಪ್ರಯಾಣ, ಇಲ್ಲದವರಿಗೆ ಟೋಲ್‌ಗೇಟೇ ಲಾಸ್ಟ್ ಸ್ಟಾಪ್!

ಮುಂದೆ ಓದಿ ...
  • Share this:

ಉತ್ತರ ಕನ್ನಡ (Uttara Kannada)… ರಾಜ್ಯದ ಮೂರು ಕರಾವಳಿ ಜಿಲ್ಲೆಗಳಲ್ಲಿ (Coastal District) ಇದೂ ಒಂದು, ಮಲೆನಾಡು (Malenadu) ಜಿಲ್ಲೆಯೂ ಹೌದು, ಬಯಲು ಸೀಮೆ ಜಿಲ್ಲೆಯಲ್ಲೂ ಇದರ ಹೆಸರಿದೆ. 11 ತಾಲೂಕುಗಳನ್ನು ಒಳಗೊಂಡ, ವಿಸ್ತೀರ್ಣದಲ್ಲೂ ದೊಡ್ಡದಾದ ಜಿಲ್ಲೆ. ವನ್ಯಸಿರಿಯನ್ನು, ಸಮುದ್ರದ ಮೊರೆತವನ್ನು ಒಟ್ಟೊಟ್ಟಿಗೆ ಕೇಳಿಬರುವ ಜಿಲ್ಲೆ. “ಒಂದು ಬದಿ ಸಹ್ಯಾದಿ, ಒಂದು ಬದಿ ಕಡಲು.. ನಡುಮಧ್ಯದಲಿ ಅಡಿಕೆ ತೆಂಗುಗಳ ಮಡಿಲು.. ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ… ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ…” ಅಂತ ಹೆಮ್ಮೆಯಿಂದ ಹಾಡಿದ್ದಾರೆ ಚುಟುಕು ಬ್ರಹ್ಮ ದಿನಕರ ದೇಸಾಯಿ (Dinakar Desai). ಹೌದು, ಸಮುದ್ರ (Sea) ಮತ್ತು ಬೆಟ್ಟಗುಡ್ಡಗಳನ್ನು (Mountain) ಹೊಂದಿರುವ, ಶೇಕಡಾ 70ರಷ್ಟು ಅರಣ್ಯವನ್ನೇ (Forest) ಹೊಂದಿರುವ ಉತ್ತರ ಕನ್ನಡದಲ್ಲಿ ಎಲ್ಲವೂ ಇದೆ. ಆದರೆ ಎಮರ್ಜೆನ್ಸಿ ಆಸ್ಪತ್ರೆಯೊಂದನ್ನು (Emergency Hospital) ಬಿಟ್ಟು! ಹೌದು, ಉತ್ತರ ಕನ್ನಡ ಜಿಲ್ಲೆಗೊಂದು ಸುಸಜ್ಜಿತ ಎಮರ್ಜೆನ್ಸಿ ಆಸ್ಪತ್ರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವುದು ಬಹು ವರ್ಷಗಳ ಕೂಗು. ಇದೀಗ ಈ ಕೂಗು ಮತ್ತೆ ಜೋರಾಗಿದೆ. ಅದಕ್ಕೆ ಕಾರಣ ಇಲ್ಲಿ ದಿನ ನಿತ್ಯ ನಡೆಯುವ ಅಪಘಾತಗಳು (Accidents), ಜೊತೆಗೆ ಸೂಕ್ತ ಚಿಕಿತ್ಸೆ (Treatment) ಸಿಗದೇ ರೋಗಿ ಸಾಯುತ್ತಿರುವ ನಿದರ್ಶನಗಳು.


ಉತ್ತರ ಕನ್ನಡದಲ್ಲಿ ನಿತ್ಯ ಅಪಘಾತ!


ಉತ್ತರ ಕನ್ನಡ ಜಿಲ್ಲೆ ಘಟ್ಟಗಳನ್ನು ಒಳಗೊಂಡಿದೆ. ಹೀಗಾಗಿ ಮಳೆಗಾಲದಲ್ಲಿ ಗುಡ್ಡ ಕುಸಿತದಂತ ಪ್ರಕರಣಗಳು ನಡೆಯುತ್ತಿರುತ್ತವೆ. ಬೆಟ್ಟದ ಇಳಿಜಾರಿನಲ್ಲೋ, ತಗ್ಗು ಪ್ರದೇಶದಲ್ಲೋ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಅಸಮರ್ಪಕವಾದ, ಅವೈಜ್ಞಾನಿಕವಾದ ರಸ್ತೆಗಳು, ಪದೇ ಪದೇ ನಡೆಯುವ ರಸ್ತೆ ಕಾಮಗಾರಿಗಳು ಅಪಘಾತಕ್ಕೆ ಇನ್ನೊಂದು ಕಾರಣ.ಹೆಚ್ಚಾಗುತ್ತಲೇ ಇದೆ ಸಾವಿನ ಸಂಖ್ಯೆ


ಇಲ್ಲಿ ಅಪಘಾತಗಳಾದಾಗ ರೋಗಿ ಸ್ಥಳದಲ್ಲೇ ಸಾಯುತ್ತಾನೆ. ಬದುಕುಳಿದವರು ದೂರದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆಯುತ್ತಾರೆ. 2018ರ ಮೇ ತಿಂಗಳಿನಿಂದ 2019ರ ಏಪ್ರಿಲ್‌ವರೆಗೆ ಜಿಲ್ಲೆಯ ವಿವಿಧೆಡೆ 1,103 ಅಪಘಾತಗಳಾಗಿವೆ. ಇವುಗಳಲ್ಲಿ ಪೈಕಿ 239 ಮಂದಿ ಮೃತಪಟ್ಟಿದ್ದಾರೆ. 522 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 1,331 ಮಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನುತ್ತವೆ ವರದಿಗಳು. ಇನ್ನು 2021ರಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಗಾಯಗೊಂಡಿದ್ದಾರೆ.ನಿಧಾನಕ್ಕೆ ಚಲಿಸಿ, ಅಪಘಾತವಾದರೆ ಇಲ್ಲಿ ಆಸ್ಪತ್ರೆಗಳಿಲ್ಲ!


ಹೌದು, ಇದು ಉತ್ತರ ಕನ್ನಡ ಜಿಲ್ಲೆಯ ದುಸ್ಥಿತಿ. ಇಲ್ಲಿ ಯಾವುದೇ ಅತ್ಯುತ್ತಮ ಆಸ್ಪತ್ರೆಗಳು ಇಲ್ಲ. ಕಾರವಾರದ ವೈದ್ಯಕೀಯ ಕಾಲೇಜಿನ ಬಳಿ ಟ್ರಾಮಾ ಸೆಂಟರ್ ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪಸ್ತಾವ ಸಲ್ಲಿಕೆಯಾಗಿದೆ. ಇದಕ್ಕಾಗಿ ಜಾಗ ಪರಿಶೀಲನೆಯೂ ನಡೆದಿದೆ. ಆದರೆ, ಈವರೆಗೂ ಕೇಂದ್ರ ಸರ್ಕಾರದಿಂದ ಪರವಾನಗಿ ದೊರೆತಿಲ್ಲ. ಅದು ಯಾವಾಗ ದೊರೆಯುತ್ತದೋ ದೇವರಿಗೆ ಗೊತ್ತು. ಅಲ್ಲಿವರೆಗೆ ಪ್ರತಿ ನಿತ್ಯ ಅಪಘಾತದಲ್ಲಿ ಗಾಯಗೊಳ್ಳುವವರು ಪಕ್ಕದ ಜಿಲ್ಲೆಗಳಿಗೆ ಹೋಗಲೇಬೇಕಾದ ಹೀನಾಯ ಪರಿಸ್ಥಿತಿ ಇಲ್ಲಿದೆ.


ಇದನ್ನೂ ಓದಿ: Kasturi Rangan Report: ಏನಿದು ಕಸ್ತೂರಿ ರಂಗನ್ ವರದಿ? ಅಂಥದ್ದೇನಿದೆ ಅದರಲ್ಲಿ?


ಮಣಿಪಾಲ, ಮಂಗಳೂರು, ಗೋವಾ, ಹುಬ್ಬಳ್ಳಿ, ಬೆಳಗಾವಿ!


ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಹೀಗಾಗಿ ಪಕ್ಕದ ಜಿಲ್ಲೆ ಹಾಗೂ ಪಕ್ಕದ ರಾಜ್ಯಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಕಾರವಾರ, ಅಂಕೋಲಾ ಇತ್ಯಾದಿ ತಾಲೂಕಿನಲ್ಲಿ ಅಪಘಾತವಾದರೆ ಪಕ್ಕದ ರಾಜ್ಯ ಗೋವಾದ ಪಣಜಿಗೆ ಹೋಗುತ್ತಾರೆ. ಇತ್ತ ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಅಪಘಾತವಾದರೆ 150 ಕಿಲೋ ಮೀಟರ್ ದೂರದ ಮಣಿಪಾಲಕ್ಕೋ, 200 ಕಿಲೋ ಮೀಟರ್ ದೂರದ ಮಂಗಳೂರಿಗೋ ಹೋಗಬೇಕು. ಅತ್ತ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಹಳಿಯಾಳ ಇತ್ಯಾದಿಗಳಲ್ಲಿ ಅಪಘಾತವಾದರೆ 103 ಕಿಲೋ ಮೀಟರ್ ದೂರದ ಹುಬ್ಬಳ್ಳಿಗೋ, 200 ಕಿಲೋ ಮೀಟರ್ ದೂರದ ಬೆಳಗಾವಿಗೋ ಹೋಗಬೇಕು.


ಆಸ್ಪತ್ರೆಗೆ ಹೋಗುವಾಗಲೇ ಹೋಗಿದೆ ಹಲವರ ಪ್ರಾಣ


ಪಕ್ಕದ ಜಿಲ್ಲೆಯ ಸುಸಜ್ಜಿತ ಆಸ್ಪತ್ರೆಗಳು 100 ಕಿಲೋ ಮೀಟರ್‌ಗಿಂತ ಕಡಿಮೆಯೇನಿಲ್ಲ. ಹೀಗಾಗಿ ಅಲ್ಲಿಗೆ ಹೋಗುವುದು ಸುಲಭಕ್ಕೆ ಸಾಧ್ಯವಿಲ್ಲ., ಹೀಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅದೆಷ್ಟೋ ಜನರ ಪ್ರಾಣ ಹಾರಿಹೋಗಿದೆ ಎನ್ನುವುದು ಕಟು ಸತ್ಯ.


ಎಲ್ಲರೂ ಇಲ್ಲಿಯವರೇ!


ಅಂದಹಾಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲದೇ ಇರಬಹುದು. ಆದರೆ ರಾಜಕೀಯದಲ್ಲಿ ಉತ್ತರ ಕನ್ನಡದ ರಾಜಕಾರಣಿಗಳದ್ದೇ ಪಾರಮ್ಯ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಈಗಿನ ಉಪ ರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ್, ಮಾಜಿ ಕೇಂದ್ರ ಸಚಿವರೂ ಆಗಿರುವ ಸಂಸದ ಅನಂತ್ ಕುಮಾರ್ ಹೆಗಡೆ, ಕಾಂಗ್ರೆಸ್ ಹಿರಿಯ ನಾಯಕ, ಹಲವು ಕಾಲ ಮಂತ್ರಿಯಾಗಿದ್ದ ಆರ್‌ವಿ ದೇಶಪಾಂಡೆ ಎಲ್ಲರೂ ಉತ್ತರ ಕನ್ನಡವರೇ.


ರಾಜಕೀಯ ಇಚ್ಛಾಶಕ್ತಿಯ ಕೊರತೆ


ಇಲ್ಲಿನ ರಾಜಕಾರಣಿಗಳು ರಾಜಕಾರಣದಲ್ಲಿ ಹೆಸರು ಮಾಡಿದವರು. ಆದರೆ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಕೂಗು ಮಾತ್ರ ಅವರಿಗೆ ಕೇಳುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸಬೇಕು ಎಂಬ ಪ್ರಯತ್ನವೂ ನಡೆಯದಿರೋದು ಅಲ್ಲಿನ ಜನರ ದುರಾದೃಷ್ಟವೇ ಸರಿ.


ಉತ್ತರ ಕನ್ನಡ ಜಿಲ್ಲಾ ಜನರಿಂದ ಅಭಿಯಾನ


ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎನ್ನುವು ಕೂಗು ಅದೇಷ್ಟೋ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಅದು ಬರೀ ಕೂಗಾಗೇ ಇತ್ತು. ಇದಾದ ಬಳಿಕ 2019ರಲ್ಲಿ ಇದು ದೊಡ್ಡ ಮಟ್ಟದಲ್ಲಿ ಮೊಳಗಿ, ಆನ್‌ಲೈನ್‌ನಲ್ಲಿ ಬಹುದೊಡ್ಡ ಅಭಿಯಾನವಾಗಿತ್ತು.


ಭರವಸೆ ನೀಡುವ ಮುಖ್ಯಮಂತ್ರಿಗಳು


ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಚ್‌ಡಿ ಕುಮಾರಸ್ವಾಮಿ, ಬಿಎಸ್‌ ಯಡಿಯೂರಪ್ಪ ಇವರೆಲ್ಲ ಆಸ್ಪತ್ರೆ ಕಟ್ಟಿಸುವ ಭರವಸೆ ನೀಡಿದ್ದರು. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸೌಜನ್ಯದ ಮಾತನ್ನಾಡಿದ್ದರು. ಆದರೆ ಅವೆಲ್ಲ ಇದುವರೆಗೂ ಈಡೇರಿಲ್ಲ ಎನ್ನುವುದು ವಿಪರ್ಯಾಸ.


ಇದನ್ನೂ ಓದಿ: Margaret Alva: ನೆಹರೂ ಕುಟುಂಬದ ಆಪ್ತೆ ಮಾರ್ಗರೇಟ್ ಆಳ್ವಾ! ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಪರಿಚಯ ಇಲ್ಲಿದೆ


 ಈಗ ಮತ್ತೆ ಶುರುವಾಗಿದೆ ಆಸ್ಪತ್ರೆ ಬೇಕೆಂಬ ಬೇಡಿಕೆ


ಇದೀಗ ಮೊನ್ನೆ ಶಿರೂರು ಬಳಿ ನಡೆದ ಆ್ಯಂಬುಲೆನ್ಸ್ ಅಪಘಾತ ಉತ್ತರ ಕನ್ನಡ ಜನರ ಮನಸ್ಸನ್ನು ಕಲಕಿದೆ, ಕೆರಳಿಸಿದೆ. ನಮ್ಮ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಬೇಕೆ ಬೇಕು ಎಂಬ ಅಭಿಯಾನ ಮತ್ತೆ ಶುರುವಾಗಿದೆ. ಅದು ಈಡೇರುವುದು ಯಾವಾಗ ಎನ್ನುವುದು ‘ಅನಂತ’ ರಹಸ್ಯ. ಅಲ್ಲಿವರೆಗೂ ಜಿಲ್ಲೆಯ ಜನರು ಅಪಘಾತವಾಗದಿರಲಿ ಅಂತ ‘ವಿಶ್ವೇಶ್ವರ’ನ್ನು ಬೇಡಿಕೊಳ್ಳಬೇಕು. ಅಪಘಾತವಾದರೆ ಮಣಿಪಾಲ ಆಸ್ಪತ್ರೆಗೆ ಹೋಗುವವರೆಗಾದರೂ ಜೀವ ಉಳಿಯಲಿ ಅಂತ ‘ಶಿವ’.. ‘ರಾಮ’ ಅಂತ ಜಪ ಮಾಡಬೇಕು!

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು