ಮಹಾರಾಷ್ಟ್ರದ ಚಂದ್ರಾಪುರ (Maharashtra) ಮತ್ತು ಗಡ್ಚಿರೋಲಿಯ ದಟ್ಟಕಾಡುಗಳು ಉತ್ತಮ ಗುಣಮಟ್ಟದ ತೇಗದ ಮರಗಳಿಗೆ (Teak Tree) ಪ್ರಸಿದ್ಧವಾಗಿವೆ. ಈ ಮರಗಳಿಗೆ ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಬೇಡಿಕೆ ಇದೆ ಎಂಬುದೇ ಈ ಮರಗಳಿರುವ ಮಹತ್ವವಾಗಿದೆ. ಇದೀಗ ಈ ಮರಗಳಿಗಿರುವ ಬೇಡಿಕೆ ಇನ್ನಷ್ಟು ಹೆಚ್ಚಲಿದ್ದು, ಅಯೋಧ್ಯೆಯಲ್ಲಿ (Ayodhya Ram Mandir) ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕಾಗಿ 1,885 ಘನ ಅಡಿಗಳಷ್ಟು ತೇಗದ ಮರವನ್ನು ಇಲ್ಲಿಂದಲೇ ಕಳುಹಿಸಲಾಗುತ್ತಿದೆ ಎಂಬುದೇ ವಿಶೇಷತೆಯಾಗಿದೆ.
ಸೆಂಟ್ರಲ್ ವಿಸ್ಟಾ ಯೋಜನೆಗೆ ಕೂಡ ಇಲ್ಲಿನ ಮರಗಳನ್ನೇ ಬಳಸಿಕೊಳ್ಳಲಾಗುತ್ತಿದೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ನಿರ್ಮಾಣಕ್ಕೂ ಈ ಅರಣ್ಯದ ತೇಗದ ಮರಗಳನ್ನೇ ಬಳಸಿಕೊಳ್ಳಲಾಗುತ್ತಿದೆ.
ಈ ಮರಗಳನ್ನೇ ದೇಶದ ಪ್ರಮುಖ ಯೋಜನೆಗಳಿಗೆ ಏಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಅಷ್ಟೇ ಬಲವಾದ ಕಾರಣ ಕೂಡ ಇದೆ. ಹಾಗಿದ್ರೆ ಅದು ಏನು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ಮರಗಳಿಗೆ ಗೆದ್ದಲು ದಾಳಿ ಮಾಡುವುದಿಲ್ಲ
ಕೇಂದ್ರ ಪ್ರಾಂತ್ಯದ ತೇಗದ ಮರವೆಂಬ ಹೆಸರನ್ನು ಈ ಅರಣ್ಯದಲ್ಲಿರುವ ತೇಗದ ಮರಗಳು ಪಡೆದುಕೊಂಡಿವೆ. ಗುಣಮಟ್ಟಕ್ಕೆ ಕೂಡ ಈ ಮರಗಳು ಪ್ರಸಿದ್ಧವಾಗಿವೆ. ಇದರಲ್ಲಿ ಎಣ್ಣೆಯ ಅಂಶ ಹೆಚ್ಚಿರುವುದರಿಂದ ಗೆದ್ದಲು ಈ ಮರಗಳ ಮೇಲೆ ದಾಳಿ ಮಾಡುವುದಿಲ್ಲ ಅಂತೆಯೇ ಎಣ್ಣೆಯ ಅಂಶ ತುಂಬಾ ಹೆಚ್ಚಿರುವುದರಿಂದ ನೂರಾರು ವರ್ಷಗಳವರೆಗೆ ಗೆದ್ದಲಿನ ದಾಳಿಯ ಸಾಧ್ಯತೆ ಇರುವುದಿಲ್ಲ. ಕನಿಷ್ಠ 500 ರಿಂದ 600 ವರ್ಷಗಳವರೆಗೆ, ಈ ಮರದ ಮೇಲೆ ಯಾವುದೇ ಗೆದ್ದಲು ದಾಳಿ ಮಾಡುವುದಿಲ್ಲ ಎಂದು ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮದ (ಎಫ್‌ಡಿಸಿಎಂ) ಸಹಾಯಕ ವ್ಯವಸ್ಥಾಪಕ ಗಣೇಶ್ ಮೋಟ್ಕರ್, ಬಲ್ಲರ್ಷಾ ತಿಳಿಸಿದ್ದಾರೆ.
ತೇಗದ ಮರದಿಂದ ತಯಾರಿಸುವ ಯಾವುದೇ ಪೀಠೋಪಕರಣದ ವಿನ್ಯಾಸ ತುಂಬಾ ನಯವಾಗಿದೆ ಹಾಗೂ ಉತ್ತಮವಾಗಿದೆ. ಬಣ್ಣ ಕಂದು ಬಣ್ಣವಾಗಿರುವುದರಿಂದ ಕಣ್ಣಿಗೆ ಕೂಡ ಹಿತವೆನಿಸುತ್ತದೆ. ನೋಡಲು ಸುಂದರವಾಗಿರುತ್ತದೆ ಅಂತೆಯೇ ಚಂದ್ರಾಪುರ ಮತ್ತು ಗಡ್ಚಿರೋಲಿಯಲ್ಲಿ ಕಂಡುಬರುವ ಈ ಒಂದು ಮರದಲ್ಲಿ ಈ ಗುಣಗಳು ಕಂಡುಬರುತ್ತವೆ ಎಂದು ತಿಳಿದವರು ಹೇಳಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಬಲ್ಲಾರಶಾ ಡಿಪೋದ ವಾರ್ಷಿಕ ವಹಿವಾಟು ರೂ. 165 ಕೋಟಿಯಾಗಿದ್ದು ಈಗ ಮತ್ತಷ್ಟು ಪ್ರಗತಿ ಕಾಣುತ್ತಿದೆ.
ಇಲ್ಲಿಯವರೆಗೆ, ಸೆಂಟ್ರಲ್ ವಿಸ್ಟಾ ಯೋಜನೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಸತಾರಾ ಸೈನಿಕ ಶಾಲೆ ಮತ್ತು ಡಿವೈ ಪಾಟೀಲ್ ಕ್ರೀಡಾ ಕ್ರೀಡಾಂಗಣ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಮರವನ್ನು ಬಳಸಲಾಗಿದೆ.
ಮಹಾರಾಷ್ಟ್ರದಿಂದ ಒಂದು ವಿಶೇಷ ಕೊಡುಗೆ
ಚಂದ್ರಾಪುರ ತೇಗದ ಮೊದಲ ರವಾನೆಯನ್ನು ಅಯೋಧ್ಯೆಗೆ ಕಳುಹಿಸುವ ಸಮಾರಂಭದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಮತ್ತು ಉತ್ತರ ಪ್ರದೇಶದ ಮೂವರು ಸಚಿವರು ಹಾಜರಿರುತ್ತಾರೆ. ಇನ್ನು ಮೇ ತಿಂಗಳಿನವರೆಗೆ ಹಲವು ಬ್ಯಾಚ್‌ಗಳಲ್ಲಿ ಮರಗಳನ್ನು ರವಾನೆ ಮಾಡಲಾಗುತ್ತದೆ ಎಂದು ಡಿಪೋ ತಿಳಿಸಿದೆ.
ರಾಮಮಂದಿರ ನಿರ್ಮಾಣಕ್ಕೆ ಮಹಾರಾಷ್ಟ್ರ ಅತ್ಯುನ್ನತ ಉಡುಗೊರೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಭಗವಾನ್ ರಾಮನಿಗೆ ಇದೊಂದು ವಿಶೇಷ ಉಡುಗೊರೆಯಾಗಿದೆ. ಇದು ರಾಮನಿಗೆ ಅಜ್ಜಿಮನೆಯ ಉಡುಗೊರೆಯಂತಿದೆ ಏಕೆಂದರೆ ರಾಮನ ತಾಯಿ ವಿದರ್ಭ ದೇಶದವರು. ಹಾಗಾಗಿ ನಮಗೆ ತುಂಬಾ ಹೆಮ್ಮೆ ಹಾಗೂ ಸಂತೋಷವಿದೆ ಎಂದು ಮಹಾರಾಷ್ಟ್ರ ಅರಣ್ಯ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಬಲ್ಲಾರಶಾ ಡಿಪೋದಲ್ಲಿ, ತೇಗದ ಮರದ ದಿಮ್ಮಿಗಳನ್ನು ಹಲವಾರು ಸ್ಥಳಗಳಲ್ಲಿ ಸುಂದರವಾಗಿ ಜೋಡಿಸಲಾಗಿದೆ. ಚಂದ್ರಾಪುರ ಮತ್ತು ಗಡ್ಚಿರೋಲಿಯ ಕಾಡುಗಳಿಂದ ಉತ್ತಮವಾದ ಮರವನ್ನು ಇಲ್ಲಿಗೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ತರಲಾಗುತ್ತದೆ ನಂತರ ಮರವನ್ನು ವರ್ಗೀಕರಿಸಲಾಗುತ್ತದೆ. ಗುಣಮಟ್ಟದಿಂದ ಇಲ್ಲಿನ ಮರಗಳಿಗೆ ಬೇಡಿಕೆ ಇದೆ ಎಂದು ಡಿಪೋ ಅಧಿಕಾರಿಗಳು ತಿಳಿಸುತ್ತಾರೆ.
ದೊಡ್ಡ ಯೋಜನೆಗಳಿಗೆ ಯಾವ ಮರವನ್ನು ಕಳುಹಿಸಲಾಗುತ್ತದೆ ಎಂಬುದನ್ನು ಹೇಗೆ ನಿರ್ಧರಿಸಲಾಗುತ್ತದೆ?
ಯೋಜನೆಗಳಿಗೆ ಮರಗಳನ್ನು ಆಯ್ಕೆಮಾಡುವ ಸಮಯದಲ್ಲಿ ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ಮೋತ್ಕರ್ ತಿಳಿಸುತ್ತಾರೆ. ಗಾತ್ರಗಳಲ್ಲಿ ವಿಭಿನ್ನತೆಯನ್ನು ಪರಿಗಣಿಸಲಾಗುತ್ತದೆ ಹಾಗೆಯೇ ಇನ್ನಿತರ ವಿಶೇಷತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬಣ್ಣಗಳ ಆಯ್ಕೆಯನ್ನು ತುಂಬಾ ಜಾಗರೂಕತೆಯಿಂದ ಮಾಡಲಾಗುತ್ತದೆ ಹಾಗೂ ಐದರಿಂದ ಆರು ಜನರ ತಂಡ ಈ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತದೆ ಎಂದು ಮೋತ್ಕರ್ ತಿಳಿಸಿದ್ದಾರೆ.
ದೇಶೀಯ ಮಾರುಕಟ್ಟೆ ಮತ್ತು ರಫ್ತಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಹಲವಾರು ಯೋಜನೆಗಳಿಗೆ ಮರಗಳನ್ನು ಸರಬರಾಜು ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ