• Home
  • »
  • News
  • »
  • explained
  • »
  • Swami Shraddhanand Case: ಜೀವ ಇರುವಾಗಲೇ ಪತ್ನಿಯನ್ನು ಮಣ್ಣಲ್ಲಿ ಹೂಳಿದ ಪಾಪಿ! ಇದು ಸುಳ್ಳುಗಾರ ಸ್ವಾಮಿ ಶ್ರದ್ಧಾನಂದನ ಪಾಪದ ಕಥೆ!

Swami Shraddhanand Case: ಜೀವ ಇರುವಾಗಲೇ ಪತ್ನಿಯನ್ನು ಮಣ್ಣಲ್ಲಿ ಹೂಳಿದ ಪಾಪಿ! ಇದು ಸುಳ್ಳುಗಾರ ಸ್ವಾಮಿ ಶ್ರದ್ಧಾನಂದನ ಪಾಪದ ಕಥೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Swami Shraddhanand Case: ಇತ್ತೀಚಿಗಷ್ಟೆ ಪ್ರಕಟವಾಗಿರುವಂತೆ ಶ್ರದ್ಧಾನಂದನ ಕಥೆ ನಿಜಕ್ಕೂ ಕೆಲ ನಿಮಿಷ ನಿಮ್ಮನ್ನ ಎಂಥಹ ಜನ ಇರುತ್ತಾರೆ ಎಂದು ಯೋಚಿಸುವಂತೆ ಮಾಡುತ್ತದೆ ಎಂದರೆ ತಪ್ಪಲ್ಲ.  

  • Trending Desk
  • 4-MIN READ
  • Last Updated :
  • Share this:

ಆಸ್ತಿ, ಸಂಪತ್ತು (Property) ಎಂಬುದು ಎಂಥವರನ್ನೂ ಸಹ ವಂಚಕರಾಗುವಂತೆ, ಮಾಡಬಾರದ ಪಾಪಗಳನ್ನು ಮಾಡುವಂತೆ ಪ್ರಚೋದಿಸುತ್ತದೆ ಎಂದರೆ ತಪ್ಪಾಗಲಾರದು. ಈ ರೀತಿ ಆಸ್ತಿಗಾಗಿ ಹೆಂಡತಿಯನ್ನು ಕೊಂದ  1990 ರ ಸಮಯದಲ್ಲಿ ನಡೆದ  ಶ್ರದ್ಧಾನಂದ  (Swami Shraddhanand) ಎನ್ನುವವನ ಘಟನೆ ಇದಕ್ಕೆ ಉದಾಹರಣೆ ಎನ್ನಬಹುದು. ಅಲ್ಲದೆ ಇದರಿಂದ ಕಲಿಯಬೇಕಾದ ಪಾಠ (Lesson) ಒಂದೆಡೆಯಾದರೆ ಆಸ್ತಿಗಾಗಿ ಮನುಷ್ಯ ಎಷ್ಟು ಕೆಳ ಹಂತಕ್ಕೂ ಇಳಿಯಬಲ್ಲನೆಂಬ ಸತ್ಯ ಈ ಕಥೆಯಿಂದ ಗೊತ್ತಾಗುತ್ತದೆ. ಇತ್ತೀಚಿಗಷ್ಟೆ ಪ್ರಕಟವಾಗಿರುವಂತೆ ಶ್ರದ್ಧಾನಂದನ ಕಥೆ ನಿಜಕ್ಕೂ ಕೆಲ ನಿಮಿಷ ನಿಮ್ಮನ್ನ ಎಂಥಹ ಜನ ಇರುತ್ತಾರೆ ಎಂದು ಯೋಚಿಸುವಂತೆ ಮಾಡುತ್ತದೆ ಎಂದರೆ ತಪ್ಪಲ್ಲ.


ಮೇ 28, 1991 ರಂದು 81, ರಿಚ್ಮಂಡ್ ರಸ್ತೆ, ಬೆಂಗಳೂರಿನಲ್ಲಿರುವ ಮನೆಯೊಂದರ ಹಿಂಭಾಗದಲ್ಲಿ ಮೈಸೂರು ಸಂಸ್ಥಾನದ ದೀವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಶಕೀರಿ ನಮಾಜಿ ಅವರನ್ನು ಜೀವಂತ ಸ್ಥಿತಿಯಲ್ಲೇ ಮಣ್ಣಿನಲ್ಲಿ ಹೂಳಲಾಯಿತು. ಈ ಘನಘೋರ ಕೃತ್ಯ ಮಾಡಿದವರು ಬೇರಾರೂ ಅಲ್ಲ ಅವಳ ಪತಿಯಾದ ಸ್ವಾಮಿ ಶ್ರದ್ಧಾನಂದ.


ಬೆಳಗಿನ ಚಹಾದ ಸಮಯದಲ್ಲಿ, ಟೀಗೆ ಮತ್ತು  ಬರಿಸುವ ಔಷಧಿ ಸೇರಿಸಿ ಅದನ್ನು ತನ್ನ ಹೆಂಡತಿಗೆ ನೀಡಿದ್ದ ಶ್ರದ್ಧಾನಂದ ನಂತರ ಸಮಯ ಸಾಧಿಸಿ ಈ ಕುಕೃತ್ಯ ಎಸಗಿದ್ದ. ಇಷ್ಟಕ್ಕೆಲ್ಲ ಕಾರಣವಾಗಿದ್ದು ಶಕೀರಿ ಹೊಂದಿದ್ದ ಅಪಾರವಾದ ಆಸ್ತಿ. ಆ ಸಂಪತ್ತಿನ ಮೇಲೆ ಶ್ರದ್ಧಾನಂದನ ಕಣ್ಣು ಬಿದ್ದಿತ್ತು.


ಯಾರೀತ ಶ್ರದ್ಧಾನಂದ?


ಉತ್ತರ ಪ್ರದೇಶದ ರಾಂಪುರದ ಬೇಗಂ ಅವರ ಕುಟುಂಬದ ಜೊತೆಗೆ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದ ಸ್ವಲ್ಪ ಕುಳ್ಳಗಿದ್ದ ಆದರೆ ಉತ್ತಮ ದೇಹದಾರ್ಢ್ಯತೆ ಹೊಂದಿದ್ದ ಮುರಳಿ ಮನೋಹರ ಮಿಶ್ರಾ ಅಲಿಯಾಸ್ ಸ್ವಾಮಿ ಶ್ರದ್ದಾನಂದ ಬಹು ಬೇಗನೇ ಆ ಕುಟುಂಬದ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾದ. ಕಾನೂನು ಪದವಿ ಓದಿದ್ದ ಎನ್ನಲಾಗುವ ಶ್ರದ್ಧಾನಂದ ದಿನಗಳೆದಂತೆ ಬೇಗಂ ಅವರ ಕುಟುಂಬದ ಆಸ್ತಿ ತೆರಿಗೆ ಹಾಗೂ ವ್ಯವಹಾರಗಳ ನಿರ್ವಹಣೆ ಮಾಡುತ್ತಿದ್ದ. ಹೀಗಿರುವಾಗ ಕುಟುಂಬದ ಸಮಾರಂಭವೊಂದರಲ್ಲಿ ಬೆಂಗಳೂರಿನಿಂದ ಶಕೀರಿ ಬಂದಿದ್ದರು.


ಶಕೀರಿ ನಮಾಜಿ ಹಾಗೂ ಶ್ರದ್ಧಾನಂದ ಭೇಟಿ


ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾಗಿದ್ದ ಶಕೀರಿ ತಮ್ಮ ಕಸಿನ್ ಆಗಿದ್ದ ಹಾಗೂ ರಾಜತಾಂತ್ರಿಕ ಹುದ್ದೆಯಲ್ಲಿದ್ದ ಅಕ್ಬರ್ ಖಲೀಲಿ ಅವರನ್ನು ವಿವಾಹವಾಗಿದ್ದರು. ಹೀಗೆ ರಾಂಪುರದ ಸಮಾರಂಭಕ್ಕೆ ಬಂದಿದ್ದ ಶಕೀರಿ ಅವರು ಅಲ್ಲಿ ಮೊದಲ ಬಾರಿಗೆ ಶ್ರದ್ಧಾನಂದನನ್ನು ಭೇಟಿ ಆದರು. ಶಕೀರಿ ಅವರಿಗೆ ನಿಜವಾಗಿಯೂ ತಮ್ಮಲ್ಲಿರುವ ಆಸ್ತಿ-ಪಾಸ್ತಿಗಳ ನಿರ್ವಹಣೆಗಾಗಿ ಒಬ್ಬ ವಿಶ್ವಾಸಯುಕ್ತ ಹಾಗೂ ಬುದ್ಧಿವಂತನಾದ ವ್ಯಕ್ತಿಯ ಅವಶ್ಯಕತೆ ಇತ್ತು. ಅವರಿಗೆ ಶ್ರದ್ಧಾನಂದನ ಬಗ್ಗೆ ತಿಳಿದು ಆ ಬಗ್ಗೆ ವಿಚಾರಿಸಿದಾಗ ಶ್ರದ್ಧಾನಂದ ಅದಕ್ಕೊಪ್ಪಿ ಬೆಂಗಳೂರಿಗೆ ಕಾಲಿಟ್ಟ. ಈ ಮಧ್ಯೆ ಶಕೀರಿ ಗಂಡ ರಾಜತಾಂತ್ರಿಕನಾಗಿದ್ದುದರಿಂದ ಇರಾನಿನಲ್ಲಿ ವಾಸಿಸುತ್ತಿದ್ದರು.


ಎಲ್ಲವೂ ಅಂದುಕೊಂಡಂತೆಯೇ ಸಾಗಿತು


ಶಕೀರಿ ಅವರು ತಮ್ಮ ಕುಟುಂಬದಿಂದ ಹಾಗೂ ಮದುವೆಯಿಂದ ಬಂದಿದ್ದ ಅಪಾರ ಪ್ರಮಾಣದ ಸಂಪತ್ತನ್ನು ಹೊಂದಿದ್ದರು. ಈ ಬಗ್ಗೆ ತಿಳಿದಿದ್ದ ಶ್ರದ್ಧಾನಂದನಿಗೆ ತನ್ನದೇ ಆದ ಆಲೋಚನೆಗಳಿದ್ದವು. ಅದಕ್ಕಾಗಿ ಅವನು ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದ ಹಾಗೂ ಅದರಂತೆಯೇ ಎಲ್ಲವೂ ನಡೆಯಿತೆನ್ನಬಹುದು.


ಮೊದಲು ಬೆಂಗಳೂರಿಗೆ ಬಂದಿದ್ದ ಶ್ರದ್ಧಾನಂದ ಶಕೀರಿ ಅವರ ಬಂಗಲೆಯ ಆವರಣದಲ್ಲಿ ಮತ್ತೊಂದು ನಿವಾಸದಲ್ಲಿ ವಾಸಿಸುತ್ತಿದ್ದ. ದಿನಗಳೆದಂತೆ ಶ್ರದ್ಧಾನಂದ ಶಕೀರಿ ಅವರೊಂದಿಗೆ ಆತ್ಮೀಯನಾಗತೊಡಗಿದ. ಈ ಆತ್ಮೀಯತೆ ಎಷ್ಟೊಂದು ಬೆಳೆಯಿತೆಂದರೆ ಇಬ್ಬರೂ ದೈಹಿಕ ಸಂಬಂಧ ಹೊಂದುವಂತಾಯಿತು.


ಈ ಸಂದರ್ಭದಲ್ಲಿ ಶಕೀರಿ ಅವರ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಶ್ರದ್ಧಾನಂದ ನಿಭಾಯಿಸುತ್ತಿದ್ದ. ಇನ್ನು ಶ್ರದ್ಧಾನಂದ ಕೆಲವು ವಿಚಿತ್ರ ಶಕ್ತಿಗಳನ್ನು ಹೊಂದಿದ್ದ ಹಾಗೂ ಅದರ ಸಹಾಯದಿಂದಾಗಿ ಶಕೀರಿ ಅವರನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದ ಎಂಬ ಕಥೆಗಳೂ ಈ ವಿಷಯದಲ್ಲಿ ಕೇಳಿ ಬರುತ್ತವೆ.


ಶಕೀರಿ ವಿಚ್ಛೇದನ


1985 ರಲ್ಲಿ ಶಕೀರಿ ಅವರ ಪತಿ ಅಕ್ಬರ್ ಖಲೀಲಿ ಅವರು ಭಾರತಕ್ಕೆ ಮರಳಿದಾಗ, ಶ್ರದ್ಧಾನಂದನ ಪ್ರೀತಿಯಲ್ಲಿ ಬಿದ್ದಿದ್ದ ಶಕೀರಿ ತನ್ನ ಗಂಡನಿಗೆ ವಿಚ್ಛೇದನ ನೀಡಿದರು ಹಾಗೂ ಏಪ್ರಿಲ್ 17, 1986 ರಂದು ಶ್ರದ್ಧಾನಂದನನ್ನು ವಿವಾಹವಾದರು. ತದನಂತರ 1987 ರಲ್ಲಿ ಶ್ರದ್ಧಾನಂದ ತನ್ನ ಹೆಂಡತಿಯ ಪವರ್ ಆಫ್ ಅಟಾರ್ನಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ. ಇಲ್ಲಿ ಶಕೀರಿ ಪ್ರೀತಿಯ ಕೈವಶಳಾಗಿ ಶ್ರದ್ಧಾನಂದನನ್ನು ವರಿಸಿದ್ದರೆ ಶ್ರದ್ಧಾನಂದನು ಮಾತ್ರ ಅವಳ ಆಸ್ತಿಗಾಗಿ ಅವಳನ್ನು ಮದುವೆಯಾಗಿದ್ದ.


ಮುಂದೆ ದಿನಗಳೆದಂತೆ ಶಕೀರಿ ತನ್ನ ಹೆಣ್ಣುಮಕ್ಕಳು ಹಾಗೂ ತಾಯಿಯೊಂದಿಗೆ ಹತ್ತಿರವಾಗಿದ್ದಳು. ಇದೇ ಅಂಶವು ಶ್ರದ್ಧಾನಂದನಿಗೆ ಕಾಡತೊಡಗಿತ್ತು. ಇದು ಮುಂದೆ ಹೋದಂತೆ ಸತಿ-ಪತಿಗಳ ಮಧ್ಯೆ ಬಿರುಕುಂಟಾಗುವಂತೆ ಮಾಡಿತು. ಇದು ಯಾವ ಮಟ್ಟಿಗೆ ಹೆಚ್ಚಾಯಿತು ಎಂದರೆ ಕೊನೆಗೆ 1991 ರಲ್ಲಿ ಶ್ರದ್ಧಾನಂದ ತನ್ನ ಪತ್ನಿಯನ್ನು ಮುಗಿಸುವ ನಿರ್ಧಾರ ತೆಗೆದುಕೊಂಡ.


ಇದನ್ನೂ ಓದಿ: ಪ್ರಪಂಚದ ಅತ್ಯಂತ ದುಬಾರಿ ತರಕಾರಿ, ಬಂಗಾರಕ್ಕಿಂತಲೂ ಕಾಸ್ಟ್ಲಿ


ಯೋಜನೆ


ತನ್ನ ಯೋಜನೆಯಂತೆ ಮೊದಲಿಗೆ ಶ್ರದ್ಧಾನಂದ 2*7*2 ಅಡಿ ಅಳತೆಯ ಕಟ್ಟಿಗೆಯ ಪೆಟ್ಟಿಗೆಯೊಂದನ್ನು ತರಿಸಿದ. ಇದರಲ್ಲಿ ಹಳೆಯ ಹಾಗೂ ಮೌಲ್ಯಯುತ ವಸ್ತುಗಳನ್ನು, ಆಭರಣಗಳನ್ನು ಇಟ್ಟು ಸಂರಕ್ಷಿಸುವುದಾಗಿ ಹೇಳಿದ್ದ. ತದನಂತರ ಕೆಲವು ನೌಕರರನ್ನು ನೇಮಿಸಿಕೊಂಡು ತನ್ನ ಕೋಣೆಯ ಹಿಂಭಾಗದಲ್ಲಿ ನೀರಿನ ಟ್ಯಾಂಕ್ ಒಂದನ್ನು ನಿರ್ಮಿಸಬೇಕೆಂದು ಹೇಳಿ ಅಲ್ಲಿ ಗುಂಡಿ ತೆಗೆಸಿದ.


ಅಂದುಕೊಂಡಂತೆ ಬೆಳಗಿನ  ಚಹಾದ ಸಮಯದಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಶಕೀರಿಗೆ ಕೊಟ್ಟ. ನಿದ್ರೆಗೆ ಜಾರಿದ್ದ ಶಕೀರಿಯನ್ನು ಆಕೆ ಜೀವಂತವಿರುವ ಸ್ಥಿತಿಯಲ್ಲೇ ತಾನು ಈ ಹಿಂದೆ ತರಿಸಿದ್ದ ಪೆಟ್ಟಿಗೆಯಲ್ಲಿ ಹಾಕಿ ಅದನ್ನು ಅಗೆಸಿದ್ದ ಗುಂಡಿಯಲ್ಲಿ ಹಾಕಿ ಮುಚ್ಚಿ ಹಾಕಿದ.


ನಂತರ ಶಕೀರಿಯ ಎರಡನೆಯ ಮಗಳು ಸಬಾ ಕೇಳಿದಾಗಲೆಲ್ಲ ಶ್ರದ್ಧಾನಂದ ಸುಳ್ಳು ಕಥೆಗಳನ್ನು ಹೇಳತೊಡಗಿದ. ಇದರಿಂದ ಬೇಸತ್ತ ಸಬಾ ಕೊನೆಗೆ ಜೂನ್ 1992 ರಲ್ಲಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ತನ್ನ ತಾಯಿಯ ಕಾಣೆಯಾದ ದೂರನ್ನು ದಾಖಲಿಸಿದಳು. ಈ ಪ್ರಕರಣವನು ಠಾಣೆಯ ಕಾನ್ಸ್ ಟೇಬಲ್ ವೀರಯ್ಯ ಎಂಬುವವರು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಶಕೀರಿ ಮನೆಯಲ್ಲಿದ್ದ ನೌಕರರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಅವರಿಂದ ನಡೆದ ಕಥೆಯನ್ನೆಲ್ಲ ತಿಳಿದುಕೊಂಡರು.


ಅಂತಿಮವಾಗಿ ಶ್ರದ್ಧಾನಂದ ಅಪರಾಧಿ ಎಂದು ಸಾಬೀತಾಗಿ 2000 ರಲ್ಲಿ ಬೆಂಗಳೂರಿನ ಸೆಷನ್ ಕೋರ್ಟ್ ಅವರಿಗೆ ಮರಣದಂಡನೆಯ ಶಿಕ್ಷೆ ನೀಡಿತು. ನಂತರ 2005 ರಲ್ಲಿ ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿಯಿತು. ಕೊನೆಗೆ ಸುಪ್ರೀಮ್ ನ್ಯಾಯಾಲಯ ಶ್ರದ್ಧಾನಂದನ ಮರಣದಂಡನೆಯನ್ನು ರದ್ದುಪಡಿಸಿ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತು. ಆ ನಂತರ ಶ್ರದ್ಧಾನಂದನ ಮನವಿಯ ಮೆರೆಗೆ 2011 ರಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಶ್ರದ್ಧಾನಂದನನ್ನು ಅವನ ತವರು ರಾಜ್ಯ ಮಧ್ಯ ಪ್ರದೇಶದ ಸಾಗರ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.


ಇದನ್ನೂ ಓದಿ: ಹಿಮಗಟ್ಟಿದ ಜಲಪಾತದ ಅದ್ಭುತ ನೋಟ ಇದು, ಕ್ಯಾಮೆರಾದಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ


ಸದ್ಯ 83 ವರ್ಷದವನಾಗಿರುವ ಶ್ರದ್ಧಾನಂದ ಈಗಲೂ ಜೈಲಿನಲ್ಲಿ ತನ್ನ ಯೋಗ, ಪ್ರವಚನಗಳನ್ನು ಮುಂದುವರೆಸಿದ್ದು ಆರೋಗ್ಯವಂತನಾಗಿದ್ದಾನೆ. ಇತ್ತೀಚೆಗಷ್ಟೇ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಂಡಿದ್ದ ಅಪರಾಧಿಗಳಂತೆಯೇ ತನ್ನನ್ನು ಸಹ ಬಿಡುಗಡೆ ಮಾಡಬೇಕೆಂದು ಶ್ರದ್ಧಾನಂದನು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವುದರಿಂದ ಶ್ರದ್ಧಾನಂದನ ಕಥೆ ಮತ್ತೆ ಇತಿಹಾಸದ ಪುಟಗಳಿಂದ ಈಗ ಹೊರಬಂದು ಹರಿದಾಡುತ್ತಿದೆ.

Published by:Sandhya M
First published: