• Home
  • »
  • News
  • »
  • explained
  • »
  • Suicide Thoughts: ಆತ್ಯಹತ್ಯೆ ಮತ್ತು ಅಂಥಾ ಆಲೋಚನೆಗಳು: ಸಹಾಯ ಯಾರಿಗೆ, ಎಲ್ಲಿ ಮತ್ತು ಹೇಗೆ ಪಡೆಯಬೇಕು?

Suicide Thoughts: ಆತ್ಯಹತ್ಯೆ ಮತ್ತು ಅಂಥಾ ಆಲೋಚನೆಗಳು: ಸಹಾಯ ಯಾರಿಗೆ, ಎಲ್ಲಿ ಮತ್ತು ಹೇಗೆ ಪಡೆಯಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚಿನ ಸಂದರ್ಭಗಳಲ್ಲಿ ಆತ್ಮಹತ್ಯೆಯನ್ನು ತಡೆಯಬಹುದು. ಖಿನ್ನತೆ, ಆತ್ಮಹತ್ಯೆಯ ಕುರಿತಾದ ಆಲೋಚನೆಗಳು, ಮಾನಸಿಕ ಒತ್ತಡ, ಭಯ ಎಲ್ಲವನ್ನೂ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು. ಬಹಳ ತಡವಾಗುವ ಮುನ್ನ ಮಾನಸಿಕ ತಜ್ಞರನ್ನು ಕಾಣುವುದು ಮುಖ್ಯ. ಎಲ್ಲರೂ ಒಟ್ಟಾಗಿದ್ದಾಗ ಅನೇಕ ಜೀವಗಳನ್ನು ಉಳಿಸಬಹುದು. ಈ ಕುರಿತು ನಾವೆಲ್ಲರೂ ತಿಳಿದಿರಬೇಕಾದ, ಸ್ವಲ್ಪ ಗಮನ ಹರಿಸಬೇಕಾದ ಕೆಲ ವಿಚಾರಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ಆತ್ಮಹತ್ಯೆಯ ಆಲೋಚನೆಗಳು ಅಥವಾ ಸಂದರ್ಭಗಳು ಕೋವಿಡ್ ನಂತರ ಅನೇಕರನ್ನು ಕಾಡುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಆತ್ಮಹತ್ಯೆಯನ್ನು ತಡೆಯಬಹುದು. ಖಿನ್ನತೆ, ಆತ್ಮಹತ್ಯೆಯ ಕುರಿತಾದ ಆಲೋಚನೆಗಳು, ಮಾನಸಿಕ ಒತ್ತಡ, ಭಯ ಎಲ್ಲವನ್ನೂ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು. ಬಹಳ ತಡವಾಗುವ ಮುನ್ನ ಮಾನಸಿಕ ತಜ್ಞರನ್ನು ಕಾಣುವುದು ಮುಖ್ಯ. ಎಲ್ಲರೂ ಒಟ್ಟಾಗಿದ್ದಾಗ ಅನೇಕ ಜೀವಗಳನ್ನು ಉಳಿಸಬಹುದು. ಈ ಕುರಿತು ನಾವೆಲ್ಲರೂ ತಿಳಿದಿರಬೇಕಾದ, ಸ್ವಲ್ಪ ಗಮನ ಹರಿಸಬೇಕಾದ ಕೆಲ ವಿಚಾರಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.


ಯಾರಾದ್ರೂ ಮಾನಸಿಕವಾಗಿ ಜರ್ಝರಿತರಾಗಿದ್ದಾರೆ ಎಂದು ಹೇಗೆ ತಿಳಿಯುತ್ತದೆ?


ಬೆಳಗಾದರೆ ಏಳೋದೇ ಬೇಡ ಎನಿಸುವುದು, ನಾನು ಎದ್ದು ಏನು ಮಾಡಿದ್ರೂ ಅದರಿಂದ ಯಾರಿಗೆ ಏನೂ ಪ್ರಯೋಜನವಿಲ್ಲ ಎನಿಸುವುದು. ಇಡೀ ಪ್ರಪಂಚವೇ ದುಃಖದಲ್ಲಿದೆ, ಇದನ್ನು ನಾನಂತೂ ಬದಲಾಯಿಸೋಕೆ ಸಾಧ್ಯವಿಲ್ಲ ಎಂದುಕೊಳ್ಳುವುದು. ಇಂಥಾ ಬದುಕನ್ನು ಬದುಕಬೇಕಾ ಎನಿಸುತ್ತಿದೆಯಾ? ಹಾಗಾದರೆ ನೀವು ಅದೇ ದಾರಿಯಲ್ಲಿ ಸಾಗುತ್ತಿದ್ದೀರಿ ಎಂದರ್ಥ.


ಆತ್ಮಹತ್ಯೆಯ ಲಕ್ಷಣಗಳು ಯಾವುವು?


ಸದಾ ಚಟುವಟಿಕೆಯಿಂದ ಎಲ್ಲರೊಂದಿಗೆ ಮಾತನಾಡುತ್ತಾ ಇರುವ ವ್ಯಕ್ತಿ ಧಿಡೀರನೆ ಮೌನಿಯಾಗಿಬಿಟ್ಟರೆ, ಇತ್ತೀಚೆಗೆ ಬಹುಪಾಲು ಬೇಸರದಿಂದ ಇರುವಂತೆ ಕಂಡರೆ ಅವರ ಮೇಲೆ ಒಂದು ಕಣ್ಣಿರಲಿ. ಊಟ, ನಿದ್ದೆ ಯಾವುದರಲ್ಲೂ ಅವರಿಗೆ ಆಸಕ್ತಿಯೇ ಇಲ್ಲದಂತಾಗುತ್ತದೆ. ತಾವು ಮಾತು ಕಡಿಮೆ ಮಾಡುವುದು ಮಾತ್ರವಲ್ಲ, ತನ್ನ ಸುತ್ತಲಿನ ಪ್ರಪಂಚದಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆಯೂ ಅವರಿಗೆ ಗಮನ ಇರುವುದಿಲ್ಲ.


ಯಾರಲ್ಲಿಯಾದರೂ ಆತ್ಮಹತ್ಯೆಯ ಲಕ್ಷಣಗಳು ಕಂಡುಬಂದರೆ ಕೂಡಲೇ ಏನು ಮಾಡಬೇಕು?


ಮೊಟ್ಟಮೊದಲನೆಯದಾಗಿ ಮಾನಸಿಕ ಸಹಾಯವಾಣಿಗೆ ಕರೆಮಾಡಿ ಆ ವ್ಯಕ್ತಿಯ ಲಕ್ಷಣಗಳನ್ನು ವಿವರಿಸಿ. ಯಾವ ಸಂಖ್ಯೆಯೂ ನೆನಪಾಗದಿದ್ದರೆ ಕೇಂದ್ರ ಸರ್ಕಾರದ 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಿದರೂ ಆಗುತ್ತದೆ. ವಿವರಗಳನ್ನು ಪಡೆದ ನಂತರ ಅವರು ಸೂಕ್ತ ಮಾನಸಿಕ ತಜ್ಞರನ್ನು ಸಂಪರ್ಕಿಸುತ್ತಾರೆ ಮತ್ತು ಏನು ಮಾಡಬಹುದು ಎಂದು ತಿಳಿಸುತ್ತಾರೆ. ಈ ಎಲ್ಲಾ ಸಹಾಯ ಬರುವ ತನಕ ವ್ಯಕ್ತಿಯೊಂದಿಗೆ ಮಾತನಾಡುತ್ತಿರಿ, ಅವರ ಸಮಸ್ಯೆಗಳಿಗೆ ಎಲ್ಲರೂ ಒಟ್ಟಾಗಿ ಪರಿಹಾರ ಹುಡುಕಬಹುದು, ಅವರು ಒಬ್ಬಂಟಿಯಲ್ಲ ಎಂದು ತಿಳಿಸುತ್ತಿರಿ.


ಸಾಮಾನ್ಯವಾಗಿ ತೊಂದರೆಯಲ್ಲಿರುವವರು ಏನು ಮಾತನಾಡುತ್ತಾರೆ?


ನಾನು ಸಾಯುವುದೇ ಉತ್ತಮ. ನಾನು ಸತ್ತರೆ ನನ್ನ ಮನೆಯವರ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ..ಈ ವಾಕ್ಯಗಳು ಬೇಸರ ಅಥವಾ ಕೋಪದಲ್ಲಿ ಆಡಿದ ಮಾತುಗಳಂತೆ ಕಾಣಬಹುದು. ಆದರೆ ಇವು ಆತ್ಮಹತ್ಯೆಯ ಲಕ್ಷಣಗಳೂ ಕೂಡಾ ಆಗಿರಬಹುದು ಎನ್ನುತ್ತಾರೆ ವೈದ್ಯರು. ಆತಂಕ, ಹತಾಶೆ, ಖಿನ್ನತೆ ಇವೆಲ್ಲವೂ ಯಾವ ಸಂದರ್ಭದಲ್ಲಿ ಬೇಕಾದರೂ ಆತ್ಮಹತ್ಯೆಗೆ ಪ್ರಚೋದಿಸಬಹುದು.


ತಾನು ಸಾಯುತ್ತೇನೆ ಎನ್ನುವವರು ಸುಮ್ಮನೇ ಹೇಳುತ್ತಿರುತ್ತಾರಾ?


ಖಂಡಿತಾ ಇಲ್ಲ. ಸಾಯುವವರು ಹೇಳಿ ಸಾಯೋದಿಲ್ಲ ಎನ್ನುವುದು ದೊಡ್ಡ ಮಿಥ್ಯೆ. ಮಾನಸಿಕ ತಜ್ಞರು ಹೇಳುವಂತೆ ತಮ್ಮೊಳಗೆ ಆತ್ಮಹತ್ಯೆಯ ಆಲೋಚನೆಯನ್ನು ನಿರಂತರವಾಗಿ ಪೋಷಿಸುತ್ತಿರುವವರೇ ಹೆಚ್ಚಾಗಿ ಇಂಥಾ ಮಾತುಗಳನ್ನಾಡುತ್ತಾರೆ. ಹಾಗಾಗಿ ಈ ಮಾತುಗಳನ್ನು ನಿರ್ಲಕ್ಷಿಸಬೇಡಿ. ಒಂದು ಆಪ್ತ ಸಮಾಲೋಚನೆ ಮತ್ತು ಕೆಲ ಔಷಧಗಳಿಂದ ಒಂದು ಜೀವವನ್ನು ಉಳಿಸಬಹುದಾಗಿದೆ.


ಆತ್ಮಹತ್ಯೆಯ ಆಲೋಚನೆಗಳು, ಖಿನ್ನತೆ, ಆತಂಕ ಇಂಥಾ ಯಾವುದೇ ಮಾನಸಿಕ ಸಮಸ್ಯೆ ಇದ್ದರೂ ಕೆಲವೊಂದಷ್ಟು ಸಹಾಯವಾಣಿಗಳಿಗೆ ಕರೆ ಮಾಡಿ ನೀವು ಸಮಾಧಾನ ಪಡೆಯಬಹುದು. ಅಂಥಾ ಕೆಲವು ಉಪಯುಕ್ತ ಸಹಾಯವಾಣಿಗಳ ಸಂಖ್ಯೆಗಳು ಇಲ್ಲಿದೆ. ಈ ಎಲ್ಲಾ ಸಹಾಯವಾಣಿಗಳಲ್ಲಿ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಆದ್ದರಿಂದ ನಿರ್ಭೀತರಾಗಿ ಸಹಾಯ ಪಡೆದುಕೊಳ್ಳಬಹುದು:


ನಿಮ್ಹಾನ್ಸ್


ಬೆಂಗಳೂರಿನ ನಿಮ್ಹಾನ್ಸ್ ಉಚಿತವಾಗಿ ಮಾನಸಿಕ ಆರೋಗ್ಯಕ್ಕೆ ಅವಶ್ಯಕ ಬೆಂಬಲ ಮತ್ತು ಸಲಹೆಗಳನ್ನು ನೀಡುತ್ತದೆ. ತಜ್ಞ ಮಾನಸಿಕ ತಜ್ಞರು, ಆಪ್ತ ಸಮಾಲೋಚಕರು ಅಲ್ಲಿದ್ದು ದಿನದ 24 ಗಂಟೆಗಳೂ, ವಾರದ ಎಲ್ಲಾ ದಿನಗಳಲ್ಲೂ ದೂರವಾಣಿ ಸಂಖ್ಯೆಗಳಲ್ಲಿ ಲಭ್ಯವಿರುತ್ತಾರೆ. ನಿಮ್ಹಾನ್ಸ್ ಇಡೀ ಭಾರತ ದೇಶದ ಅತ್ಯಂತ sಮರ್ಪಕ ಮಾನಸಿಕ ಆರೋಗ್ಯ ಸಹಾಯ ಸಂಸ್ಥೆ.


080-46110007


nimhans.ac.in/pssmhs-helpline


ಐ-ಕಾಲ್


ತರಬೇತಿ ಪಡೆದ ಸ್ವಸಹಾಯಕರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಾರೆ. ಸೋಮವಾರದಿಂದ ಶನಿವಾರದವರಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರಗೆ ಈ ದೂರವಾಣಿ ಸಂಖ್ಯೆಯಲ್ಲಿ ಸಹಾಯ ದೊರೆಯುತ್ತದೆ.


9152987821


http://icallhelpline.org/


ಸುಮೈತ್ರಿ


ಖಿನ್ನತೆ ಅಥವಾ ಆತ್ಮಹತ್ಯೆ ಆಲೋಚನೆಗಳಿರುವ ವ್ಯಕ್ತಿಗಳಿಗೆ ಶೀಘ್ರ ಸಹಾಯ ನೀಡುವ ಸಂಸ್ಥೆ ಸುಮೈತ್ರಿ. ತರಬೇತಿ ಪಡೆದ ಸಿಬ್ಬಂದಿ ದೂರವಾಣಿಯ ಮೂಲಕವೇ ಕೌನ್ಸಲಿಂಗ್ ಮಾಡುತ್ತಾರೆ. ವಾರದ ಎಲ್ಲಾ ದಿನಗಳು ಮmಧ್ಯಾಹ್ನ 2 ರಿಂದ ಸಂಜೆ 6.30ರವರಗೆ ಇಲ್ಲಿಗೆ ಕರೆ ಮಾಡಬಹುದು.


011-23389090 / 9315767849


sumaitri.net


ಸ್ನೇಹಾ


ಜೀವನದ ಬಗ್ಗೆ ಜಿಗುಪ್ಸೆ ಹೊಂದಿದಂತಿರುವ ವ್ಯಕ್ತಿಗಳಿಗೆ ಸೂಕ್ತ ಮಾನಸಿಕ ಸಹಾಯ ನೀಡುವ ಸಂಸ್ಥೆ ಸ್ನೇಹ. ಬೆಳಗ್ಗೆ 10ರಿಂದ ರಾತ್ರಿ 10ರವರಗೆ ವಾರದ ಎಲ್ಲಾ ದಿನಗಳಲ್ಲೂ ಇವರನ್ನು ಸಂಪರ್ಕಿಸಬಹುದು. ಈಮೇಲ್ ಮೂಲಕವೂ ಸಂಪರ್ಕ ಸಾಧ್ಯವಿದೆ.


044-24640050, 044-24640060


snehaindia.org/new


ಫೋರ್ಟಿಸ್ ಸ್ಟ್ರೆಸ್ ಸಹಾಯವಾಣಿ


ಫೋರ್ಟಿಸ್ ಆಸ್ಪತ್ರೆ ನಡೆಸುವ ಈ ಸಹಾಯವಾಣಿಯು ದಿನದ 24 ಗಂಟೆಗಳು ಮತ್ತು ವಾರದ ಎಲ್ಲಾ ದಿನಗಳೂ ಲಭ್ಯವಿದೆ. ಸುಮಾರು 15 ಭಾಷೆಗಳಲ್ಲಿ ಈ ಸೇವೆ ಲಭ್ಯವಿದ್ದು ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಖಲಾಗಲು ಅಥವಾ ಹೆಚ್ಚಿನ ಚಿಕಿತ್ಸೆ ಪಡೆಯಲೂ ಇವರು ಸಹಾಯ ಮಾಡುತ್ತಾರೆ.


+91 8376804102


ಈ ಎಲ್ಲಾ ಸಂಖ್ಯೆಗಳು ನಿಮ್ಮ ಗುರುತನ್ನು ಕೇಳುವುದಿಲ್ಲ. ಹಾಗಾಗಿ ನಿಮಗೇ ಸಹಾಯ ಬೇಕಿದ್ದರೆ ಅಥವಾ ನಿಮಗೆ ತಿಳಿದಿರುವ ಇನ್ಯಾರಿಗೇ ಅಗತ್ಯವಿದ್ದರೂ ನಿರ್ಭೀತವಾಗಿ ಇವರನ್ನು ಸಂಪರ್ಕಿಸಬಹುದಾಗಿದೆ. ಮನಸ್ಸು ಅರಳಿದ್ದರೆ ಮಾತ್ರ ಬದುಕು ಭದ್ರವಾಗಿರುತ್ತದೆ.

Published by:Soumya KN
First published: