• Home
  • »
  • News
  • »
  • explained
  • »
  • Explained: ಅಜಾನ್​ಗೆ ನೃತ್ಯ ಮಾಡಿದವರಲ್ಲಿ ಹಿಂದೂ ಮಕ್ಕಳು, ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಮತ್ತೊಂದು ವಿವಾದ

Explained: ಅಜಾನ್​ಗೆ ನೃತ್ಯ ಮಾಡಿದವರಲ್ಲಿ ಹಿಂದೂ ಮಕ್ಕಳು, ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಮತ್ತೊಂದು ವಿವಾದ

ಅಜಾನ್​ಗೆ ಮಕ್ಕಳಿಂದ ನೃತ್ಯ

ಅಜಾನ್​ಗೆ ಮಕ್ಕಳಿಂದ ನೃತ್ಯ

ಕ್ರೀಡಾಕೂಟದಲ್ಲಿ ಪುಟಾಣಿಗಳು ಮಾಡಿದ ಡಾನ್ಸ್​ ಒಂದು ಮತ್ತೆ ಎರಡು ಕೋಮುಗಳ ನಡುವೆ ವಿಷಬೀಜ ಬಿತ್ತಿದೆ. ಇನ್ನು ಈ ವಿವಾದವೂ ಕರಾವಳಿ ಜಿಲ್ಲೆ ಉಡುಪಿಯಲ್ಲೇ ಜನ್ಮ ಪಡೆದಿದೆ ಎಂಬುವುದು ಉಲ್ಲೇಖನೀಯ.

  • Share this:

2022ರಲ್ಲಿ ಕರ್ನಾಟಕದಲ್ಲಿ ಹಿಂದೂ, ಮುಸ್ಲಿಂ ವಿಚಾರ ಪದೇ ಪದೇ ಸದ್ದು ಮಾಡುತ್ತಲೇ ಇತ್ತು. ವರ್ಷದಾರಂಭದಲ್ಲಿ ಉಡುಪಿಯ ಕಾಲೇಜಿನಲ್ಲಿ ಹುಟ್ಟಿಕೊಂಡ ಹಿಜಾಬ್, ಕೇಸರಿ ಶಾಲು ವಿಚಾರ ನೋಡ ನೋಡುತ್ತಿದ್ದಂತೆಯೇ ಇಡೀ ದೇಶಾದ್ಯಂತ ವ್ಯಾಪಿಸಿತ್ತು. ಈ ವಿಚಾರ ಇನ್ನೂ ಸುಪ್ರೀಂ ಅಂಗಳದಲ್ಲಿದೆ. ಇದಾದ ಬಳಿಕ ನಡೆದ ಹತ್ಯೆ ಹಾಗೂ ಲವ್ ಜಿಹಾದ್ ಪ್ರಕರಣಗಳು ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದವು. ಆದರೀಗ ಈ ವಿಚಾರಗಳು ತಣ್ಣಗಾಗುವ ಹೊತ್ತಿನಲ್ಲೇ ಕ್ರೀಡಾಕೂಟದಲ್ಲಿ ಪುಟಾಣಿಗಳು ಮಾಡಿದ ಡಾನ್ಸ್​ ಒಂದು ಮತ್ತೆ ಎರಡು ಕೋಮುಗಳ ನಡುವೆ ವಿಷಬೀಜ ಬಿತ್ತಿದೆ. ಇನ್ನು ಈ ವಿವಾದವೂ ಕರಾವಳಿ ಜಿಲ್ಲೆ ಉಡುಪಿಯಲ್ಲೇ ಜನ್ಮ ಪಡೆದಿದೆ ಎಂಬುವುದು ಉಲ್ಲೇಖನೀಯ.


ಅಜಾನ್​ಗೆ ಹಿಂದೂ ಮಕ್ಕಳಿಂದ ನೃತ್ಯ: ಹೀಗಿದೆ ಪ್ರಕರಣದ ವಿವರ


ಉಡುಪಿಯ ಶಂಕರನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಉದ್ಘಾಟನಾ ಕಾರ್ಯಕ್ರಮದ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಮಾಡಿಸಲಾಗಿತ್ತು. ಆದರೆ ಮಕ್ಕಳು ಮಾಡಿದ ಸ್ವಾಗತ ನೃತ್ಯದ ಹಾಡಿನಲ್ಲಿ 30 ಸೆಕೆಂಡ್​ ಅಜಾನ್​ ಬಳಸಲಾಗಿದೆ. ಆದರೆ ಅಜಾನ್​ಗೆ ವಿದ್ಯಾರ್ಥಿಗಳು ನೃತ್ಯ ಮಾಡುತ್ತಿದ್ದಂತೆ ವೇದಿಕೆಯಲ್ಲಿ ಆಸೀನರಾಗಿದ್ದ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಕಲ್ಗದ್ದೆ ಇದನ್ನು ಖಂಡಿಸಿದ್ದಾರೆ. ಆದರೆ ಈ ಸ್ವಾಗತ ನೃತ್ಯದಲ್ಲಿ ಕೋಮು ಸೌಹಾರ್ದತೆ ಸಾರುವ ನಿಟ್ಟಿನಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಹಾಡುಗಳನ್ನು ಬಳಸಲಾಗಿತ್ತು ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: Hijab Row: ಹಿಜಾಬ್ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ; ದೂರು ದಾಖಲು


ಯಾವೆಲ್ಲಾ ಹಾಡುಗಳನ್ನು ಹಾಕಲಾಗಿತ್ತು?


ಮೊದಲು ಹಿಂದೂ ಧರ್ಮದ ಪ್ರಾರ್ಥನೆಯನ್ನು ಧ್ವನಿವರ್ದಕಗಳ ಮೂಲಕ ಮೊಳಗಿಸಲಾಗಿದ್ದು, ಇದಕ್ಕೆ ಮಕ್ಕಳು ನೃತ್ಯ ಮಾಡಿದ್ದರು. ಬಳಿಕ ಕ್ರೈಸ್ತ ಧರ್ಮದ ಚರ್ಚ್ ಗಂಟೆಯ ಶಬ್ದವನ್ನು ಮೊಳಗಿಸಲಾಗಿದ್ದು ಅದಕ್ಕೆ ಮಕ್ಕಳು ಕೈ ಮುಗಿದು ನಮಸ್ಕರಿಸಿ ನಿಂತಿದ್ದರು. ಕೊನೆಯದಾಗಿ ಅಜಾನ್ ಮೊಳಗಿಸಲಾಗಿತ್ತು. ಈ ವೇಳೆ ಸ್ವಾಗತ ನೃತ್ಯದಲ್ಲಿ ಭಾಗಿಯಾಗಿದ್ದ ಎಲ್ಲಾ ವಿದ್ಯಾರ್ಥಿಗಳೂ ಅಜಾನ್ ಗೆ ನೃತ್ಯ ಮಾಡಿದ್ದರು. ಆದರೆ ಅಜಾನ್ ಗೆ ನೃತ್ಯ ಮಾಡಲು ಹಿಂದೂ ವಿದ್ಯಾರ್ಥಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.


ಹಿಂದೂ ಸಂಘಟನೆಗಳಿಂದ ಪ್ರತಿಭಟನೆಯ ವಾರ್ನಿಂಗ್


ಆದರೆ ಈ ವಿಚಾರ ಕಾಡ್ಗಿಚ್ಚಿನಂತೆ ವ್ಯಾಪಿಸಿದ್ದು, ಮಕ್ಕಳಿಂದ ಅಜಾನ್​ಗೆ ನೃತ್ಯ ಮಾಡಿಸಿದ್ದನ್ನು ಅನೇಕರು ಖಂಡಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಶಾಲೆಯತ್ತ ಧಾವಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಈ ಸಂಬಂಧ ಆಡಳಿತ ಮಂಡಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಕ್ಷಮೆ ಕೇಳದಿದ್ದಲ್ಲಿ ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ವಿಚಾರ ಗಂಭೀರವಾಗಬಹುದೆಂದು ಅರಿತ ಶಾಲಾ ಮಂಡಳಿ ಈ ವಿಷಯ ಸಂಬಂಧ ದೀರ್ಘ ಸಮಯದವರೆಗೆ ಚರ್ಚೆ ನಡೆಸಿಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.


ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿದ್ದೇನು?


ಕ್ರೀಡಾಕೂಟದಲ್ಲಿ ನಡೆದ ಸ್ವಾಗತ ನೃತ್ಯದಲ್ಲಿ ಮಕ್ಕಳು 30 ಸೆಕೆಂಡ್ ಅಜಾನ್​ಗೆ ಹೆಜ್ಜೆ ಹಾಕಿದ್ದಾರೆ. ಇದಾದ ನಂತರ ಬೈಬಲ್ ಮತ್ತು ಹಿಂದೂ ಶ್ಲೋಕಗಳಿಗೂ ಮಕ್ಕಳು ನೃತ್ಯ ಪ್ರಸ್ತುತಪಡಿಸಿದ್ದಾರೆ. ಈ ಮೂಲಕ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ. ಒಂದು ವೇಳೆ ಈ ಘಟನೆಯಿಂದ ನಿಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಗಿದ್ರೆ ನಾವು ಕ್ಷಮೆ ಕೇಳುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿದ್ದರು.


ಪ್ರಮೋದ್ ಮುತಾಲಿಕ್ ಗುಡುಗು


ಈ ವಿಚಾರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ರವರ ಹೇಳಿಕೆ ಭಾರೀ ಸದ್ದು ಮಾಡಿದೆ. ವಿವಾದದ ಬಗ್ಗೆ ಮಾತನಾಡುತ್ತಾ 'ಅಜಾನ್, ನೃತ್ಯ ಹಾಗೂ ಶಾಲೆಗೆ ಸಂಬಂಧವೇ ಇಲ್ಲ. ಅನಾವಶ್ಯಕವಾಗಿ ಕೋಮು ಭಾವನೆಯನ್ನು ಕೆರಳಿಸುವ ಕೆಲಸ‌ ನಡೆದಿದೆ. ಅದೂ ಕೂಡಾ ಹಿಂದೂ ವಿದ್ಯಾರ್ಥಿಗಳ ಕಡೆಯಿಂದ ನೃತ್ಯ ಮಾಡಿಸಿದ್ದಾರೆ, ಅಜಾನ್‌ನಲ್ಲಿ 'ಅಲ್ಲಾ' ಒಬ್ಬನೇ ದೇವರು, ಉಳಿದವರು ಕಾಫಿರ್ಗಳು ಎಂದು ಹೇಳಲಾಗುತ್ತದೆ. ಅಂತಹ ಸಂದೇಶವಿರುವ ಅಜಾನ್ ಪ್ರಾರ್ಥನೆ ಸ್ವಾಗತ ಗೀತೆ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿರುವ ಅವರು ಮುಸ್ಲಿಂ ಅಜಾನ್, ಕ್ರಿಶ್ಚಿಯನ್ ಶಾಲೆ, ಕುಣಿದಿದ್ದು ಹಿಂದು ಮಕ್ಕಳು ಹೀಗೆ ಒಂದಕ್ಕೆ ಒಂದು ಸಂಬಂಧ ಇಲ್ಲ'' ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.


pramod mutalik reacts on Azaan Dance Controversy mrq
ಪ್ರಮೋದ್ ಮುತಾಲಿಕ್


ಅಲ್ಲದೇ ಖಾಸಗಿ ಶಾಲೆ‌ ಇರಲಿ, ಯಾವುದೇ ಶಾಲೆ ಇರಲಿ, ಈ‌ ರೀತಿ ಆಗಬಾರದು. ಖಾಸಗಿ ಶಾಲೆ ಇದ್ದರೆ ಅವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಮಕ್ಕಳ ಮುಂದೆ ಏನು ಹೇಳಬೇಕು, ಹೇಳಬಾರದು ಎಂದು ಪ್ರಜ್ಞೆ ಇಲ್ಲದವರು. ಕ್ರಿಶ್ಚಿಯನ್ ಶಾಲೆಗಳಲ್ಲಿ ಬಳೆ ಹಾಕಬಾರದು, ಕುಂಕುಮ ಹಚ್ಚಬಾರದು ಎಂದು ನಮ್ಮ ಸಂಸ್ಕೃತಿಗೆ ಆಘಾತ ಮಾಡುವ ಸಂಗತಿ ನಡೆಯುತ್ತಿದೆ ಎಂದು ಕಿಡಿ ಕಾರಿದ್ದರು.


ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಹೆಚ್ಚುತ್ತಿವೆ ಕೋಮು ಸಾಮರಸ್ಯ ಕೆಡಿಸುವ ಪ್ರಕರಣಗಳು


ಇನ್ನು ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿರುವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಪ್ರತಿಯೊಂದು ವಿಚಾರವೂ ಕೋಮು ಸೌಹಾರ್ದತೆ ಕೆಡಿಸುತ್ತಿವೆ. ಸಾಮಾನ್ಯ ಎಂದು ಭಾಸವಾಗುವ ವಿಚಾರಗಳು ನೋಡ ನೋಡುತ್ತಿದ್ದಂತೆಯೇ ಕೋಮು ಬಣ್ಣ ಪಡೆದು ಬಹುದೊಡ್ಡ ವಿವಾದವನ್ನೇ ಹುಟ್ಟು ಹಾಕುತ್ತಿವೆ. ಹಿಜಾಬ್ ವರ್ಸಸ್​ ಕೇಸರಿ ಶಾಲು ಎಲ್ಲಕ್ಕಿಂತ ಮೊದಲು ಸದ್ದು ಮಾಡಿದ ಹಾಗೂ ದೇಶ, ವಿದೇಶದಲ್ಲೂ ಚರ್ಚೆಯಾದ ವಿಚಾರ.


Karnataka hijab ban Supreme Court deliver judgement
ಸಾಂದರ್ಭಿಕ ಚಿತ್ರ


ಉಡುಪಿಯ ಸರ್ಕಾರಿ ಶಾಲೆಯಲ್ಲಿ ಹುಟ್ಟಿಕೊಂಡ ಈ ಪ್ರಕರಣ ನೋಡ ನೋಡುತ್ತಿದ್ದಂತೆಯೇ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿ ವಿದ್ಯಾರ್ಥಿಗಳ ನಡುವೆ ಒಡಕು ಮೂಡಿಸಿತ್ತು. ತದ ನಂತರ ಇತರ ರಾಜ್ಯಗಳಿಗೂ ವ್ಯಾಪಿಸಿತ್ತು. ಬಳಿಕ ಸುಪ್ರೀಂ ಮೆಟ್ಟಿಲೇರಿದ ಈ ಪ್ರಕರಣ ಸದ್ಯ ವಿಸ್ಕೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಪ್ರಕರಣ ವಿದ್ಯಾರ್ಥಿಗಳನ್ನು ಜಾತಿ ಹೆಸರಿನಲ್ಲಿ ತಮ್ಮ ಸಹಪಾಠಿಗಳಿಂದ ದೂರ ಮಾಡಿದ್ದಲ್ಲದೇ, ಅನೇಕರ ಭವಿಷ್ಯವನ್ನೇ ಹಾಳು ಮಾಡಿದೆ.


ಕೋಮು ಸೌಹಾರ್ದತೆ ಮತ್ತಷ್ಟು ಕೆಡಿಸಿದ ಹಲಾಟಲ್​ ಕಟ್​ ಹಾಗೂ ವ್ಯಾಪಾರ ನಿರ್ಬಂಧ ವಿಚಾರ


ಆದರೆ ಹಿಜಾಬ್ ವರ್ಸಸ್​ ಕೇಸರಿ ಶಾಲಿನಿಂದ ಹುಟ್ಟಿಕೊಂಡ ಅಸಮಾಧಾನದ ಹೊಗೆ ಅಲ್ಲಿಗೇ ಆರದೆ ಇನ್ನಷ್ಟು ವಿವಾದಗಳಿಗೆ ನಾಂದಿ ಹಾಡಿತ್ತು. ಹೌದು ಈ ವಿವಾದದ ಬೆನ್ನಲ್ಲೇ ಹಿಂದೂಯೇತರ ವರ್ತಕರಿಗೆ ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ ಹೇರಲಾಯಿತು. ಅನೇಕ ಪ್ರಸಿದ್ಧ ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಡೆಸಲು ಅನುಮತಿ ನೀಡಿರಲಿಲ್ಲ. ಇದು ಕೋಮು ಸಾಮರಸ್ಯವನ್ನು ಮತ್ತಷ್ಟು ಕೆಡಿಸಿತ್ತು. ಇದರ ಬೆನ್ನಲ್ಲೇ ಹಲಾಲ್​ ಕಟ್​ ಹಾಗೂ ಜಟ್ಕಾ ಕಟ್​ ಮತ್ತೊಂದು ವಿವಾದ ಸೃಷ್ಟಿಸಿತ್ತು. ಹೌದು ಹಿಂದೂಗಳು ಹಲಾಲ್ ಮಾಂಸ ತಿನ್ನಬಾರದೆಂಬ ಆಗ್ರಹ ದಿನ ಬೆಳಗಾಗುವುದರಲ್ಲಿ ಹಬ್ಬಿಕೊಂಡಿತ್ತು. ಮುಸ್ಲಿಮರ ಮಾಂಸದ ಅಂಗಡಿಗಳಲ್ಲಿ ಸಿಗುವ ಮಾಂಸವು ‘ಹಲಾಲ್’ ಮಾಡಿದ ಮಾಂಸವಾಗಿದ್ದು, ಅದನ್ನು ಹಿಂದೂಗಳು ತಿನ್ನಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ಆರಂಭವಾಗಿತ್ತು. ಅಲ್ಲದೇ ಇದಕ್ಕೆ ಪರ್ಯಾಯವಾಗಿ ಹಿಂದೂಗಳಿಗೆಂದೇ ಜಟ್ಕಾ ಕಟ್ ಎಂಬುವುದನ್ನು ಪರಿಚಯಿಸಲಾಯಿತು.


Praveen Nettar Murder case Three Accused arrest mrq
ಪ್ರವೀಣ್ ನೆಟ್ಟಾರು


ಇದನ್ನೂ ಓದಿ:  Hijab Row: ಹಿಜಾಬ್ ಗಲಾಟೆಯಾದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಳ


ಶಾಂತಿ ನೆಲೆಸುವಷ್ಟರಲ್ಲಿ ನಡೆದ ಕೊಲೆ ಪ್ರಕರಣಗಳು


ಈ ವಿವಾದ ತಣಿಯುವಷ್ಟರಲ್ಲಿ ಕರಾವಳಿ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳು ಜನರನ್ನು ಮತ್ತಷ್ಟು ಕೆರಳಿಸಿತ್ತು. ಅದರಲ್ಲೂ ವಿಶೇಷವಾಗಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ರಾಜ್ಯವನ್ನೇ ಅಲುಗಾಡಿಸಿತ್ತು. ಈ ಪ್ರಕರಣ ಅದ್ಯಾವ ಮಟ್ಟಕ್ಕೆ ತಿರುಗಿತ್ತೆಂದರೆ ಈ ಹತ್ಯಾ ಪ್ರಕರಣದಿಂದ ಕೆರಳಿದ ಜನರು ತಮ್ಮ ಕ್ಷೇತ್ರದ ಸಂಸದರಿಗೇ ಬಹಿಷ್ಕಾರ ಹಾಕಿದ್ದರು. ಆದರೆ ಬಳಿಕ ನಡೆದ ಸಂಧಾನ ಹಾಗೂ ತನಿಖೆಯಿಂದ ಜನರ ಆಕ್ರೋಶ ಕೊಂಚ ಇಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಕರಾವಳಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಹರಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಧಾರ್ಮಿಕ ಹಾಡುಗಳಿಗೆ ನೃತ್ಯ ಮಾಡಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆಯಾದೆ. ಆದರೀಗ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಈ ಪ್ರಕರಣ ಬೇರೆಯದ್ದೇ ಹಾದಿ ಹಿಡಿದಿದೆ. ಈ ಪ್ರಕರಣ ಇಲ್ಲೇ ಶಮನವಾಗುತ್ತಾ ಅಥವಾ ಈ ಹಿಂದಿನ ಪ್ರಕರಣಗಳಂತೆ ಮತ್ತೊಂದು ಹೊಸ ವಿವಾದ ಹುಟ್ಟುಹಾಕುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.

Published by:Precilla Olivia Dias
First published: