ಸೋನಮ್ ವಾಂಗ್ಚುಕ್ (Sonam Wangchuk) ಬಗ್ಗೆ ಬಹುತೇಕರಿಗೆ ತಿಳಿದಿರುತ್ತದೆ. ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ (Bollywood blockbuster movie ) ‘3 ಈಡಿಯಟ್ಸ್’ಗೆ (3 Idiots) ಸ್ಫೂರ್ತಿಯಾಗಿದ್ದ ಲಡಾಖ್ನ ಸಾಮಾಜಿಕ ಸುಧಾರಣಾವಾದಿ ಸೋನಮ್ ವಾಂಗ್ಚುಕ್, ಇಂಜಿನಿಯರ್, ಸಂಶೋಧಕ ಮತ್ತು ಶಿಕ್ಷಣತಜ್ಞ ಮತ್ತು ಶಾಲಾ ಶಿಕ್ಷಣದಲ್ಲಿ ಹೊಸತನವನ್ನು ತಂದ ಹೆಮ್ಮೆಯ ವ್ಯಕ್ತಿ. ಪ್ರಸ್ತುತ ಲಡಾಖ್‌ನಲ್ಲಿ ಎಲ್ಲವೂ ಸರಿಯಿಲ್ಲ, ಹಿಮಗಡ್ಡೆಗಳು ಅಳಿವಿನಂಚಿನಲ್ಲಿದ್ದು ಕೇಂದ್ರಾಡಳಿತ ಪ್ರದೇಶ ಲಡಾಖ್ (Ladak) ಸುರಕ್ಷತೆ ಮತ್ತು ರಕ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಎಲ್ಲದರ ಬಗ್ಗೆ ರಕ್ಷಣೆ ಕ್ರಮ ಕೈಗೊಳ್ಳಿ ಎಂದು ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ (hunger strike) ನಡೆಸುತ್ತಿದ್ದಾರೆ.
18,000 ಅಡಿ ಎತ್ತರ, 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸತ್ಯಾಗ್ರಹ!
ಜನವರಿ 26 ರಿಂದ ಲಡಾಖ್‌ನಲ್ಲಿ ಐದು ದಿನಗಳ ಉಪವಾಸದಲ್ಲಿರುವ ಇವರು. 18,000 ಅಡಿ ಎತ್ತರದ 40 ಡಿಗ್ರಿ ಸೆಲ್ಸಿಯಸ್ ಇರುವ ಖರ್ದುಂಗ್ಲಾ ಪಾಸ್‌ನಲ್ಲಿ ಐದು ದಿನಗಳ ಉಪವಾಸದಲ್ಲಿ ಕುಳಿತುಕೊಳ್ಳುವುದಾಗಿ ಈ ಹಿಂದೆ ತಿಳಿಸಿದ್ದರು. ಈಗ ತಮ್ಮ ಉಪವಾಸ ಹೋರಾಟವನ್ನು ಮುಂದುವರೆಸಿದ್ದು, ಲಡಾಖ್ ಅನ್ನು ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ನಾವು ಭೂಮಿಗೆ ಒಂದಿಲ್ಲೊಂದು ಅಪಾಯಗಳನ್ನು ಸೃಷ್ಟಿಸುತ್ತಲೇ ಹೋದರೆ ಈ ಹಿಮಗಡ್ಡೆಗಳು ಇನ್ನು ಮುಂದೆ ಇರುವುದಿಲ್ಲ ಎಂಬದನ್ನು ಎಲ್ಲರಿಗೂ ಮನದಟ್ಟು ಮಾಡಲು ನಾನು ಮೈನಸ್ 40 ಡಿಗ್ರಿ ತಾಪಮಾನದಲ್ಲಿ ಖರ್ದುಂಗ್ಲಾ ಪಾಸ್‌ನಲ್ಲಿ ಈ 5 ದಿನಗಳ ದೀರ್ಘ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಲಡಾಖ್‌ನಲ್ಲಿ ವಾಂಗ್ಚುಕ್ ಉಪವಾಸ ಕೈಗೊಂಡಿರುವುದೇಕೆ?
ಲಡಾಖ್‌ನ ಸೂಕ್ಷ್ಮ, ದುರ್ಬಲ ಪರಿಸರ ವ್ಯವಸ್ಥೆ, ಅಲ್ಲಿನ ನೀರ್ಗಲ್ಲುಗಳು ನಾಶವಾಗುತ್ತಿವೆ. ಅವುಗಳನ್ನು ಸಂವಿಧಾನದ 6ನೇ ಪರಿಚ್ಛೇದದ ಅಡಿ ಪ್ರಧಾನಿ ಅವರು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಖರ್ದುಂಗ್ಲಾ ಪಾಸ್‌ಗೆ ಪ್ರವೇಶಿಸಲು ನನಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಲಡಾಕ್ ಸುರಕ್ಷತೆ ಬಗ್ಗೆ ಚಿತ್ತ ಹರಿಸುವಂತೆ ಮೋದಿಗೆ ಮನವಿ
ಮಿಲಿಟರಿ ದೃಷ್ಟಿಕೋನದಿಂದ, ಲಡಾಖ್ ಅತ್ಯಗತ್ಯ ಮತ್ತು ಕಾರ್ಗಿಲ್ ಮತ್ತು ಇತರ ಸಂಘರ್ಷಗಳಲ್ಲಿ ಪಾತ್ರವನ್ನು ವಹಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಪೊರೇಟ್ ವಿಸ್ತರಣೆಯ ಸಂಭಾವ್ಯತೆಯ ಬಗ್ಗೆ ವಾಂಗ್ಚುಕ್ ಆತಂಕ ವ್ಯಕ್ತಪಡಿಸಿದ್ದಾರೆ, ಇದು ಈಗಾಗಲೇ ನೀರಿನಂತಹ ಸಂಪನ್ಮೂಲಗಳ ತೀವ್ರ ಕೊರತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಗಣಿಗಾರಿಕೆ ಮತ್ತು ಇತರ ಹೋಲಿಸಬಹುದಾದ ಚಟುವಟಿಕೆಗಳು ಹಿಮನದಿಗಳು ಕರಗಲು ಕಾರಣವಾಗಬಹುದು. ಹೀಗಾಗಿ ಲಡಾಕ್ ಅನ್ನು ರಕ್ಷಿಸುವ ಹೊಣೆ ಸರ್ಕಾರದ್ದು, ಮೋದಿ ಅವರು ಈ ಬಗ್ಗೆ ಕೂಡಲೇ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಗಂಭೀರ ಸಮಸ್ಯೆಯಲ್ಲಿ ಸಿಲುಕಿದೆ ಲಡಾಖ್- ವಾಂಗ್ಚುಕ್
ವಾಂಗ್ಚುಕ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ 13 ನಿಮಿಷಗಳ ಸುದೀರ್ಘ ವಿಡಿಯೊದಲ್ಲಿ, ಅವರು ಲಡಾಖ್ ಅನ್ನು ರಕ್ಷಿಸಲು ಸಹಾಯ ಮಾಡಲು ದೇಶದ ಮತ್ತು ಪ್ರಪಂಚದ ಜನರಿಗೆ ಮನವಿ ಮಾಡಿದರು. "ಭೂಮಿಯ "ಮೂರನೇ ಧ್ರುವ" ಎಂದೂ ಕರೆಯಲ್ಪಡುವ ಲಡಾಖ್ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ.ಈ ವಿಷಯವನ್ನು ಈ ಹಿಂದೆ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗಿದೆ. ಭಾರತೀಯ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಈ ದುರ್ಬಲವಾದ ಪರಿಸರ ವ್ಯವಸ್ಥೆಯನ್ನು ಮಧ್ಯಸ್ಥಿಕೆ ವಹಿಸಲು ಮತ್ತು ರಕ್ಷಿಸಲು ಅವರು ಭಾರತದ ಪ್ರಧಾನಿಗೆ ಮನವಿ ಮಾಡುತ್ತಿದ್ದೇನೆ ಎಂದು ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
"ಹಿಮನದಿಗಳು ವೇಗವಾಗಿ ಕರಗುತ್ತಿವೆ"
ಪ್ರಾಚೀನ ಪರ್ವತ ಪ್ರದೇಶದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ಮತ್ತು ಚಟುವಟಿಕೆಯ ಅಭಿವೃದ್ಧಿಯು ಹಿಮನದಿಗಳು ವೇಗವಾಗಿ ಕರಗಲು ಕಾರಣವಾಗುತ್ತಿದೆ ಮತ್ತು ಇದುವರೆಗೆ ಈ ಪ್ರದೇಶದಲ್ಲಿ ಮೂರನೇ ಎರಡರಷ್ಟು ಹಿಮನದಿಗಳು ಕರಗಿವೆ ಮತ್ತು ಇದು ಜಲಸಂಪನ್ಮೂಲಗಳ ಸವಕಳಿಗೆ ಕಾರಣವಾಗುತ್ತದೆ ಎಂದು ವಾಂಗ್ಚ್ಕ್ ಹೇಳಿದರು.
ಇದನ್ನೂ ಓದಿ: Budget Halwa: ಬಜೆಟ್‌ಗೂ ಮುನ್ನ ಹಲ್ವಾ ತಯಾರಿಸುವುದೇಕೆ? ಸಿಹಿ ತಿಂದ ಸಿಬ್ಬಂದಿಗೆ ನಿರ್ಬಂಧ ವಿಧಿಸುವುದೇಕೆ?
ಹಿಮಾಲಯ ಪ್ರದೇಶಗಳನ್ನು ಕೈಗಾರಿಕಾ ಶೋಷಣೆಯಿಂದ ರಕ್ಷಿಸಲು ಮನವಿ
ಇದಲ್ಲದೆ, ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಅವರು, ಲಡಾಖ್ ಮತ್ತು ಇತರ ಹಿಮಾಲಯ ಪ್ರದೇಶಗಳನ್ನು “ಕೈಗಾರಿಕಾ ಶೋಷಣೆ” ಯಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು. ಇದು ಜನರ ಜೀವನ ಮತ್ತು ಉದ್ಯೋಗವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ ವಾಂಗ್‌ಚುಕ್. ಈ ಕೈಗಾರಿಕಾ ಶೋಷಣೆಯಿಂದ ಲಡಾಖ್ ಮತ್ತು ಇತರ ಹಿಮಾಲಯ ಪ್ರದೇಶಗಳಿಗೆ ರಕ್ಷಣೆ ನೀಡುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ. ಯಾಕೆಂದರೆ ಇದು ಜನರ ಜೀವನ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಯೂನಿಯನ್ ಪ್ರದೇಶಕ್ಕಾಗಿ ತಮ್ಮ 70 ವರ್ಷಗಳ ಹಿಂದಿನ ಬೇಡಿಕೆಯನ್ನು ಆಲಿಸಿದ ಸರ್ಕಾರ ಈ ಬೇಡಿಕೆಯತ್ತ ಏಕೆ ಗಮನ ಹರಿಸುತ್ತಿಲ್ಲ ಎಂದು ಲಡಾಖ್ ಜನರು ಗೊಂದಲಕ್ಕೊಳಗಾಗಿದ್ದಾರೆ ಎಂದು ವಾಂಗ್ಚುಕ್ ತಮ್ಮ 13 ನಿಮಿಷಗಳ ವೀಡಿಯೊದಲ್ಲಿ ಹೇಳಿದ್ದಾರೆ.
ಸೋನಮ್ ವಾಂಗ್ಚುಕ್ ಯಾರು?
1966 ರಲ್ಲಿ ಜನಿಸಿದ ಸೋನಮ್ ವಾಂಗ್ಚುಕ್ ಅವರು ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್, ಲಡಾಖ್ (HIAL) ನ ನಿರ್ದೇಶಕರಾಗಿದ್ದಾರೆ. ಅವರು 2018 ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದರು. 2009 ರ ಹಿಂದಿ ಚಲನಚಿತ್ರ '3 ಈಡಿಯಟ್ಸ್' ನಲ್ಲಿ ಅಮೀರ್ ಖಾನ್ ಅವರು ಬರೆದ ಫುನ್ಸುಖ್ ವಾಂಗ್ಡು ಅವರ ಕಾಲ್ಪನಿಕ ಪಾತ್ರದ ಸ್ಪೂರ್ತಿ ಕೂಡ ಇವರೇ.
ಲಡಾಕಿ ಮಕ್ಕಳಿಗೆ SECMOL ಸ್ಥಾಪನೆ
ಲಡಾಖ್ ಮೂಲದ ಇಂಜಿನಿಯರ್ ಶಿಕ್ಷಣದಲ್ಲಿ ನಾವೀನ್ಯತೆಯನ್ನು ಹೊರತರುವಲ್ಲಿ ಹೆಸರುವಾಸಿಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಂದೋಲನ ಲಡಾಖ್ (SECMOL)ನಲ್ಲಿ ಇವರ ಪಾತ್ರ ದೊಡ್ಡದು. ಲಡಾಕಿ ಮಕ್ಕಳು ಮತ್ತು ಯುವಕರನ್ನು ಬೆಂಬಲಿಸುವ ಉದ್ದೇಶದಿಂದ ಅವರು 1988 ರಲ್ಲಿ SECMOL ಅನ್ನು ಸ್ಥಾಪಿಸಿದರು ಮತ್ತು ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವಿಶೇಷ ಎಂದರೆ ಇವರು ನಡೆಸುವ ಕ್ಯಾಂಪಸ್‌ನಲ್ಲಿ ಸೌರಶಕ್ತಿಯಿಂದಲೇ ಎಲ್ಲವೂ ನಡೆಯುತ್ತದೆ. ಅಡುಗೆ, ಬೆಳಕು ಅಥವಾ ಬಿಸಿಮಾಡಲು ಯಾವುದೇ ಪಳೆಯುಳಿಕೆ ಇಂಧನಗಳನ್ನು ಇಲ್ಲಿ ಬಳಸುವುದಿಲ್ಲ.
ಹಲವು ಆವಿಷ್ಕಾರಗಳ ರೂವಾರಿ
1994ರಲ್ಲಿ, ಸರ್ಕಾರಿ ಶಾಲೆಗಳ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ವಾಂಗ್ಚುಕ್ ಆಪರೇಷನ್ ನ್ಯೂ ಹೋಪ್ ಅನ್ನು ಪ್ರಾರಂಭಿಸಿದರು. ಲಡಾಖ್ ಚಳಿಗಾಲದಲ್ಲಿ ಅಸಾಧಾರಣ ತಾಪಮಾನವನ್ನು ಕಾಯ್ದುಕೊಳ್ಳಲು ಮಣ್ಣಿನಿಂದ ಮಾಡಿದ ಕಡಿಮೆ ವೆಚ್ಚದ ಸೌರ ತಾಪನ ಕಟ್ಟಡಗಳನ್ನು ವಿನ್ಯಾಸಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪರ್ವತ ಪ್ರದೇಶಗಳಲ್ಲಿ ಎದುರಿಸುತ್ತಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಐಸ್ ಸ್ತೂಪವು ಇವರ ಮತ್ತೊಂದು ಆವಿಷ್ಕಾರವಾಗಿದೆ. 2021 ರಲ್ಲಿ, ಅವರು ಲಡಾಖ್ ಪ್ರದೇಶದ ಸಿಯಾಚಿನ್ ಮತ್ತು ಗಾಲ್ವಾನ್ ಕಣಿವೆಯಂತಹ ಅತ್ಯಂತ ಶೀತ ಸ್ಥಳಗಳಲ್ಲಿ ಸೇನಾ ಸಿಬ್ಬಂದಿ ಬಳಸಬಹುದಾದ ಪರಿಸರ ಸ್ನೇಹಿ ಸೌರ ಬಿಸಿ ಟೆಂಟ್ ಅನ್ನು ಸಹ ನಿರ್ಮಿಸಿದರು.
ಇದನ್ನೂ ಓದಿ: Padma Awards: ಪದ್ಮ ಪ್ರಶಸ್ತಿಗಳು ಏಕೆ ಶ್ರೇಷ್ಠ? ಈ ಅವಾರ್ಡ್‌ಗೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?
ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಸೋನಮ್ ವಾಂಗ್ಚುಕ್
ಇಷ್ಟೆಲ್ಲಾ ಆವಿಷ್ಕಾರ, ಸಾಮಾಜಮುಖಿ ಕೆಲಸಗಳನ್ನು ಗುರುತಿಸಿ ಸೋನಮ್ ವಾಂಗ್ಚುಕ್ ಅವರಿಗೆ ನವೆಂಬರ್ 2022 ರಲ್ಲಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಏಳನೇ ಡಾ ಪೌಲೋಸ್ ಮಾರ್ ಗ್ರೆಗೋರಿಯೊಸ್ ಪ್ರಶಸ್ತಿಯನ್ನು ನೀಡಿದರು. ದೆಹಲಿ ಧರ್ಮಪ್ರಾಂತ್ಯದ ಮೊದಲ ಮೆಟ್ರೋಪಾಲಿಟನ್ ಮತ್ತು ಖ್ಯಾತ ತತ್ವಜ್ಞಾನಿ ಡಾ.ಪೌಲೋಸ್ ಮಾರ್ ಗ್ರೆಗೋರಿಯೋಸ್ ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ