ನಿಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್ (Smartphones ) ಉಡುಗೊರೆ ನೀಡುವ ಕುರಿತು ನೀವೆನಾದ್ರೂ ಯೋಚಿಸುತ್ತಿದ್ದೀರಾ? ಆ ರೀತಿ ಏನಾದ್ರೂ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಲೇಖನವನ್ನು ನೀವು ಒಮ್ಮೆ ಒದಲೇಬೇಕಾದ ಅಗತ್ಯ ಖಂಡಿತವಿದೆ. ಹಾಗಿದ್ರೆ ಮುಂದೆ ಓದಿ. ಉತ್ತಮ ನಿರ್ಧಾರ ತೆಗೆದುಕೊಳ್ಳಿ. ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ, ಪ್ರಾಯೋಗಿಕ ಮತ್ತು ಅರಿವಿನ ಬೆಳವಣಿಗೆಯ ಮೇಲೆ ಮೊಬೈಲ್ ಅಥವಾ ಕಂಪ್ಯೂಟರ್ (Computer) ಹೇಗೆ ಪರಿಣಾಮ ಬೀರುತ್ತಿದೆ. ಇದರಿಂದ ಉಂಟಾಗುವ ತೊಂದರೆಗಳೇನು ಎಂಬುದರ ಮೇಲೆ ವಿಶೇಷ ಸಂಶೋಧನೆಯೊಂದು ನಡೆದಿದೆ. ಸಾಮಾನ್ಯವಾಗಿ ಮಕ್ಕಳು (Children) ತಮ್ಮ ಸುತ್ತಲಿನ ಪರಿಸರದಿಂದ ಮತ್ತು ಹಿರಿಯರ, ವಿಶೇಷವಾಗಿ ಪೋಷಕರ ವರ್ತನೆಯಿಂದ ಹಲವು ವಿಷಯಗಳನ್ನು ಕಲಿಯುತ್ತಾರೆ.
ಆದರೆ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಕ್ಕಳನ್ನು ಸುತ್ತಮುತ್ತಲಿನ ಪರಿಸರದಿಂದ ದೂರವಿರಿಸುತ್ತಿದೆ. ಅದರ ಜೊತೆ ಅವರ ಚಟುವಟಿಕೆಗಳು ಮತ್ತು ನಡವಳಿಕೆಯು ತಾವೇನು ನೋಡಿದ್ದೇವೆ ಎಂಬುದರಿಂದ ಪ್ರೇರಿತವಾಗಲು ಪ್ರಾರಂಭವಾಗುತ್ತದೆ.
ಸಾಮಾನ್ಯವಾಗಿ ಹೇಳುವುದಾದರೆ, ಒಂದು ಮಗು ವರ್ಚುವಲ್ ವರ್ಲ್ಡ್ ಸ್ಕ್ರೀನ್ ಮುಂದೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದರೆ, ಅವನ ಕ್ರೀಡೆ, ವ್ಯಾಯಾಮ, ಜನರನ್ನು ಭೇಟಿಯಾಗುವುದು, ಜೀವನದಲ್ಲಿ ಮಾತನಾಡುವ ಮತ್ತು ಕಲಿಯುವ ಕೌಶಲ್ಯಗಳನ್ನು ಕಡಿಮೆ ಮಾಡುತ್ತದೆ.
ಇದರಿಂದ ಅದರ ಒಟ್ಟಾರೆ ಬೆಳವಣಿಗೆ ಪ್ರಭಾವಿತವಾಗಿದೆ. ಇದು ಹೇಗೆ ಪರಿಣಾಮ ಬೀರುತ್ತದೆ? ಎಂಬುದರ ಕುರಿತು ಯುಎಸ್ ಮೂಲದ ಎನ್‌ಜಿಒ ಸಂಸ್ಥೆ ಅಧ್ಯಯನವೊಂದನ್ನು ಪ್ರಕಟಿಸಿದೆ. ಅದರಲ್ಲಿ ಏನೆಲ್ಲ ವಿಷಯಗಳು ಇವೆ ಎಂಬುದನ್ನು ಈಗ ತಿಳಿಯೋಣ.
ಸ್ಮಾರ್ಟ್‌ಪೋನ್ ಬಳಕೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸಿರುವ ಯುಸ್ ಮೂಲದ ಎನ್‌ಜಿಒ ಸಂಸ್ಥೆ
ಇತ್ತಿಚೀನ ಮಕ್ಕಳು ಹೆಚ್ಚೆ ಎಂಬಂತೆ ಎಲ್ಲದಕ್ಕೂ ಮೊಬೈಲ್ ಬಳಕೆಯನ್ನು ರೂಢಿ ಮಾಡಿಕೊಂಡಿದ್ದಾರೆ. ಸ್ಮಾರ್ಟ್‌ಪೋನ್‌ನ ಅತಿಯಾದ ಬಳಕೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಯುಎಸ್ ಮೂಲದ ಎನ್‌ಜಿಒ ಸಂಸ್ಥೆಯಾದ ಸ್ಯಾಪಿಯನ್ ಲ್ಯಾಬ್ಸ್ ನಡೆಸಿದ ಅಧ್ಯಯನವು ಪ್ರಸ್ತುತ ಪಡಿಸಿದ ವಿಷಯವೆಂದ್ರೆ ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಬಳಕೆ ಮಾಡುವ ಮಕ್ಕಳ ಮನಸ್ಥಿತಿಗಿಂತ, ವಯಸ್ಕರಾದ ನಂತರ ಮೊಬೈಲ್ ಅನ್ನು ಬಳಕೆ ಮಾಡುವ ಮಕ್ಕಳ ಮಾನಸಿಕ ಆರೋಗ್ಯ ವಯಸ್ಕರಂತೆ ಉತ್ತಮವಾಗಿರುತ್ತದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ
ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್ ಪಡೆಯುವ ಮಹಿಳೆಯರು ತಮ್ಮ ಪುರುಷ ಸಹವರ್ತಿಗಳಿಗಿಂತ ಹೆಚ್ಚು ಪ್ರತಿಕೂಲ ಪರಿಣಾಮ ಬೀರುತ್ತಾರೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.
ಈ ಅಧ್ಯಯನವನ್ನು ಹೇಗೆ ನಡೆಸಲಾಯಿತು, ಅದರಲ್ಲಿನ ಪ್ರಮುಖ ಸಂಶೋಧನೆಗಳು ಯಾವುವು ಮತ್ತು ಅವುಗಳ ಅರ್ಥವೇನು? ಎಂಬುದನ್ನು ನಾವಿಲ್ಲಿ ನೋಡೋಣ..
ಈ ಅಧ್ಯಯನವನ್ನು ಹೇಗೆ ನಡೆಸಲಾಗಿದೆ?
‘ಏಜ್ ಆಫ್ ಫಸ್ಟ್ ಸ್ಮಾರ್ಟ್‌ಫೋನ್ ಆಂಡ್ ಮೆಂಟಲ್ ವೆಲ್-ಬಿಯಿಂಗ್ ಔಟ್‌ಕಮ್ಸ್ʼ ಎಂಬ ಶೀರ್ಷಿಕೆಯ ಅಧ್ಯಯನವನ್ನು ಮೇ 14 ಭಾನುವಾರದಂದು ಪ್ರಕಟಿಸಲಾಗಿದೆ. ಈ ವರ್ಷ ಆರಂಭವಾದ ಜನವರಿಯಿಂದ ಏಪ್ರಿಲ್‌ವರೆಗೆ 40 ಕ್ಕೂ ಹೆಚ್ಚು ದೇಶಗಳಿಂದ 18 ರಿಂದ 24 ವರ್ಷ ವಯಸ್ಸಿನ 27,969 ವಯಸ್ಕರಿಂದ ಡೇಟಾವನ್ನು ಸಂಗ್ರಹಿಸಲಾಗಿದೆ. ಈ ಅಧ್ಯಯನವು ಈ ಡೇಟಾವನ್ನು ಕೂಲಂಕೂಷವಾಗಿ ಪರಿಶೀಲಿಸಿದೆ. ಇನ್ನೊಂದು ಇಂಟ್ರೆಸ್ಟಿಂಗ್ ಮಾಹಿತಿಯೆಂದ್ರೆ ಈ ವಯಸ್ಕರಲ್ಲಿ ಸುಮಾರು 4,000 ಜನರು ಭಾರತದಿಂದ ಬಂದವರು.
ಈ ಅಧ್ಯಯನದ ಕುರಿತು ಸುದ್ದಿ ಮಾಧ್ಯಮಗಳೇನು ಹೇಳುತ್ತಿವೆ?
ಈ ಅಧ್ಯಯನದ ಕುರಿತು ಇಂಗ್ಲಿಷ್ ಡೆಲಿ ನ್ಯೂಸ್ ಪೇಪರ್ ಆದ ಇಂಡಿಯನ್ ಎಕ್ಸ್‌ಪ್ರೆಸ್ ಹೇಳುವಂತೆ “ ಈ ಸಂಶೋಧನೆಯು ಗ್ಲೋಬಲ್ ಮೈಂಡ್ ಪ್ರಾಜೆಕ್ಟ್‌ನ ಒಂದು ಭಾಗವಾಗಿದೆ, ಇದು ಜಾಗತಿಕ ಮಾನಸಿಕ ಯೋಗಕ್ಷೇಮದ ಕುರಿತು ನಡೆಯುತ್ತಿರುವ ಒಂದು ವಿಶಿಷ್ಟ ಸಮೀಕ್ಷೆಯಾಗಿದೆ. ಇದನ್ನು "ಮಾನವ ಮನಸ್ಸನ್ನು ಅರ್ಥಮಾಡಿಕೊಳ್ಳಲು ಮತ್ತು ಸಕ್ರಿಯಗೊಳಿಸಲು ಆರಂಭಿಸಲಾಗಿದೆ” ಎಂದು ಈ ಅಧ್ಯಯನವನ್ನು ನಡೆಸಿದ ಸ್ಯಾಪಿಯನ್ ಲ್ಯಾಬ್ಸ್ ತಿಳಿಸಿದೆ” ಎಂದು ವರದಿ ಮಾಡಿದೆ.
ಸುದ್ದಿ ಮಾಧ್ಯಮ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, “ಈ ಅಧ್ಯಯನಕ್ಕೆ ಬೇಕಾದ ಡೇಟಾವನ್ನು ಸ್ವಯಂಸೇವಕರಿಂದ ತರಿಸಿಕೊಳ್ಳಲಾಗಿದೆ. ಈ ಡೇಟಾದಲ್ಲಿ ಒಟ್ಟು 47 ಅಂಶಗಳು ಇವೆ. ಈ 47 ಅಂಶಗಳನ್ನು ಒಳಗೊಂಡಿರುವ ಮೌಲ್ಯಮಾಪನದ ಮೂಲಕ ಅಧ್ಯಯನದ ಡೇಟಾವನ್ನು ಸಂಗ್ರಹಿಸಲಾಗಿದೆ.
"ಜೀವನಕ್ಕೆ ಪ್ರಭಾವ ಬೀರುವ ಪ್ರಮಾಣದಲ್ಲಿ ವ್ಯಾಪಕ ಶ್ರೇಣಿಯ ರೋಗಲಕ್ಷಣಗಳು ಮತ್ತು ಮಾನಸಿಕ ಸಾಮರ್ಥ್ಯಗಳ ಒಟ್ಟಾರೆ ಸ್ಕೋರ್ ಅನ್ನು ಒದಗಿಸುವ ಸಂಯೋಜನೆಯನ್ನು -ಮಾನಸಿಕ ಆರೋಗ್ಯ ಕ್ವಾಟಿಯೆಂಟ್ ಅಥವಾ MHQ ಎಂದು ಕರೆಯಲಾಗುತ್ತದೆ” ಎಂದು ಹೇಳಿದೆ.
ಹಿಂದೂಸ್ತಾನ್ ಟೈಮ್ಸ್ ಏನ್ ಹೇಳ್ತಿದೆ? ನೋಡಿ
“ಪ್ರತಿ ಅಂಶದ ಈ ಸ್ಕೋರ್‌ಗಳು ಮತ್ತು ರೇಟಿಂಗ್‌ಗಳನ್ನು ಮೊದಲ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಹೊಂದಿರುವ ಮಕ್ಕಳ ವಯಸ್ಸಿನ ಮೇಲೆ ಈ ವರದಿಯನ್ನು ಹೋಲಿಕೆ ಮಾಡಲಾಗಿದೆ” ಎಂದು ಹಿಂದೂಸ್ತಾನ್ ಟೈಮ್ಸ್ (HT) ವರದಿ ಮಾಡಿದೆ.
ಇದರ ಕುರಿತು ಇರುವ ಸಂಶೋಧನೆಗಳು ಯಾವುವು?
ಕೆಲವು ಅಧ್ಯಯನದ ಪ್ರಕಾರ, “ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ 18-24 ವಯಸ್ಸಿನ ಯುವಕರು "ಕಳಪೆ ಮಾನಸಿಕ ಆರೋಗ್ಯ" ಹೊಂದಿದ್ದಾರೆ. ಇದರೊಂದಿಗೆ ಹುಡುಗರಿಗಿಂತ ಹುಡುಗಿಯರೆ ಹೆಚ್ಚು ಪ್ರಭಾವಿತರಾಗಿದ್ದಾರೆ” ಎಂದು ಹೇಳುತ್ತಿವೆ.
ಇದನ್ನೂ ಓದಿ: ಕ್ರಿಕೆಟಿಗ ಶಾರುಖ್ ಖಾನ್ ಅವರ ವೃತ್ತಿ ಜೀವನ ಹೇಗಿರಲಿದೆ?
ಆರನೇ ವಯಸ್ಸಿನಲ್ಲಿ ತಮ್ಮ ಮೊದಲ ಸ್ಮಾರ್ಟ್‌ಫೋನ್ ಅನ್ನು ಹೊಂದಿದ ಶೇಕಡಾ 74 ರಷ್ಟು ಹುಡುಗಿಯರು ಅನೇಕ ರೀತಿಯ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಕಂಡುಬಂದಿದೆ. ಅಧ್ಯಯನದಲ್ಲಿ ನೀಡಿದ ಅಂಕಗಳನ್ನು ನೋಡುವುದಾದ್ರೆ, ಅವರ ಅಂಕಗಳು "ಡಿಸ್‌ಸ್ಟ್ರೆಸ್ಡ್" ಅಥವಾ "ಸ್ಟ್ರಗಲಿಂಗ್” ಎಂಬ ವಿಷಯಗಳು MHQ ವ್ಯಾಪ್ತಿಯೊಳಗೆ ಬರುತ್ತವೆ ಎಂದು ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.
ತಮ್ಮ 10 ನೇ ವಯಸ್ಸಿನಲ್ಲಿ ಮೊದಲ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ ಶೇಕಡಾ 61 ರಷ್ಟು ಹುಡುಗಿಯರು ಅನೇಕ ರೀತಿಯ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ತಮ್ಮ 18 ನೇ ವಯಸ್ಸಿನಲ್ಲಿ ಮೊದಲ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ ಶೇಕಡಾ 46 ರಷ್ಟು ಹುಡುಗಿಯರು ಅನೇಕ ರೀತಿಯ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದು ಕಂಡುಬಂದಿದೆ.
ಹುಡುಗರ ವಿಷಯದಲ್ಲಿ ಈ ಅಧ್ಯಯನವನ್ನು ನೋಡುವುದಾದ್ರೆ, ತಮ್ಮ 6 ನೇ ವಯಸ್ಸಿನಲ್ಲಿ ಮೊದಲ ಸ್ಮಾರ್ಟ್‌ಫೋನ್ ಅನ್ನು ಹೊಂದಿದ ಹುಡುಗರು ಶೇಕಡಾ 42 ರಷ್ಟು ಹುಡುಗರು "ಡಿಸ್‌ಸ್ಟ್ರೆಸ್ಡ್" ಅಥವಾ "ಸ್ಟ್ರಗಲಿಂಗ್” ಎಂಬ ಮಾನಸಿಕ ಸ್ಥಿತಿಯನ್ನು ಹೊಂದಿರುವುದು ಕಂಡುಬಂದಿದೆ. ತಮ್ಮ 18 ನೇ ವಯಸ್ಸಿನಲ್ಲಿ ಮೊಬೈಲ್ ಹೊಂದಿದ ಹುಡುಗರು ಶೇಕಡಾ 36 ರಷ್ಟು ಹುಡುಗರಲ್ಲಿ ಈ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದಾಗ, ಅವರು “ಸಾಮಾಜಿಕವಾಗಿ ಹೇಗಿರಬೇಕು, ಅವರ ಆತ್ಮ ವಿಶ್ವಾಸ ಮತ್ತು ಇತರರೊಂದಿಗೆ ಪಾಸಿಟಿವ್ ಆಗಿ ಹೇಗೆ ವರ್ತಿಸಬೇಕು ಎಂಬಂತಹ ಹಲವು ಸಾಮರ್ಥ್ಯಗಳಂತಹ ವಿವಿಧ ಅಂಶಗಳ ಬಗ್ಗೆ ಅಷ್ಟೊಂದು ತಿಳುವಳಿಕೆ ಹೊಂದಿರುವುದಿಲ್ಲ. ಆದರೆ ಒಂದು ಹಂತದಲ್ಲಿ ಮೊಬೈಲ್ ಬಳಕೆ ಇವೆಲ್ಲವುಗಲ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡುತ್ತದೆ” ಎಂದು ಅಧ್ಯಯನವು ಕಂಡುಹಿಡಿದಿದೆ.
ಈ ಅಧ್ಯಯನದ ಫಲಿತಾಂಶಗಳೇನು ಹೇಳುತ್ತಿವೆ?
“ಈ ಅಧ್ಯಯನದ ಫಲಿತಾಂಶಗಳು ದಕ್ಷಿಣ ಏಷ್ಯಾ ಸೇರಿದಂತೆ ಇತರ ದೇಶಗಳಲ್ಲಿ ಸ್ಥಿರವಾಗಿವೆ. ಭಾರತದಲ್ಲೂ ಅಷ್ಟೆ ಫಲಿತಾಂಶ ಸ್ಥಿರವಾಗಿದೆ. ಆತ್ಮಹತ್ಯಾ ಆಲೋಚನೆಗಳಂತಹ ಸಮಸ್ಯೆಗಳು, ಇತರರ ಮೇಲೆ ಮಾಡುವ ಆಕ್ರಮಣಶೀಲತೆ ಧೋರಣೆಯ ಭಾವನೆಗಳು, ಭ್ರಮೆಗಳು ಒಂದೊಮ್ಮೆ ಹೆಚ್ಚಿರುತ್ತವೆ ಅಥವಾ ಕಡಿಮೆಯಿರುತ್ತವೆ. ಚಿಕ್ಕ ವಯಸ್ಸಿನಲ್ಲಿ ಮೊಬೈಲ್ ಬಳಸುವ ಮಕ್ಕಳಿಗಿಂತ ಹದಿ ಹರೆಯ ಮಕ್ಕಳಲ್ಲಿ ಈ ಭಾವನೆಗಳು ಕಡಿಮೆ ಎಂದು ಅಧ್ಯಯನಗಳ ಫಲಿತಾಂಶಗಳು ಹೇಳುತ್ತಿವೆ” ಎಂದು ಅಧ್ಯಯನದ ಸಂಶೋಧಕರು ಹಿಂದೂಸ್ತಾನ್ ಟೈಮ್ಸ್‌ಗೆ ಹೇಳಿದ್ದಾರೆ.
ಅಧ್ಯಯನದ ಫಲಿತಾಂಶಗಳ ಕುರಿತು ಸೇಪಿಯನ್ ಲ್ಯಾಬ್ಸ್ ಸಂಸ್ಥಾಪಕ ಹೇಳಿರುವುದೇನು?
ಈ ಅಧ್ಯಯನ ಫಲಿತಾಂಶಗಳ ಕುರಿತು ಸೇಪಿಯನ್ ಲ್ಯಾಬ್ಸ್ ಸಂಸ್ಥಾಪಕ ಡಾ. ತಾರಾ ತ್ಯಾಗರಾಜನ್ ಅವರು “ಮಕ್ಕಳೇ, ನಿಮ್ಮ ಫೋನ್ ಅನ್ನು ನಿಮ್ಮ ಸೂಕ್ತ ವಯಸ್ಸಿಗಿಂತ ಮೊದಲೇ ಹೊಂದುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಇದಾದ ನಂತರ ವಯಸ್ಕರಾದಾಗ ಹೆಚ್ಚು ಮಾನಸಿಕ ಆರೋಗ್ಯ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಆತ್ಮಹತ್ಯಾ ಆಲೋಚನೆಗಳು, ಆಕ್ರಮಣಶೀಲತೆಯ ಭಾವನೆಗಳು ಮತ್ತು ಭ್ರಮೆಗಳಲ್ಲಿ ಬದುಕುವುದು, ಒಟ್ಟಾರೆಯಾಗಿ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ ” ಎಂದಿದ್ದಾರೆ.
ಈ ಅಧ್ಯಯನ ಏಕೆ ಬಹಳ ಮುಖ್ಯ?
ಡಾ. ತ್ಯಾಗರಾಜನ್ ಅವರ ಪ್ರಕಾರ, "ಬಾಲ್ಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡದ ಮಕ್ಕಳಲ್ಲಿ ಮಾನಸಿಕ ಆರೋಗ್ಯದಲ್ಲಿ ದೀರ್ಘಾವಧಿಯ ಸುಧಾರಣೆಗಳನ್ನು ನಾವು ಕಾಣಬಹುದಾಗಿದೆ ಎಂದು ಈ ಸಂಶೋಧನೆಗಳು ಸೂಚಿಸುತ್ತವೆ" ಎಂದಿದ್ದಾರೆ.
"ನಾವು ಇದರ ಬಗ್ಗೆ ಅಧ್ಯಯನ ಮಾಡುವುದನ್ನು ಮುಂದುವರಿಸಬೇಕಾಗಿದೆ. ಡಿಜಿಟಲ್ ಯುಗದಲ್ಲಿ ಆರೋಗ್ಯಕರ ಮಾನಸಿಕ ಬೆಳವಣಿಗೆಯನ್ನು ಬೆಂಬಲಿಸುವ ಪರಿಣಾಮಕಾರಿ ನೀತಿಗಳು ಮತ್ತು ಪ್ರಮಾಣಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಬೇಕಿರುವುದು ಮುಖ್ಯವಾಗಿದೆ" ಎಂದು ನರವಿಜ್ಞಾನಿಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಉಲ್ಲೇಖಿಸಿದ್ದಾರೆ.
“ಭಾರತಕ್ಕೂ ಈ ಅಧ್ಯಯನ ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಇಲ್ಲಿ 10-14 ವಯಸ್ಸಿನ ಶೇಕಡಾ 83 ರಷ್ಟು ಮಕ್ಕಳು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಶೇಕಡಾ 76 ರಷ್ಟಕ್ಕಿಂತ ಹೆಚ್ಚಾಗಿದೆ” ಎಂದು ಕಳೆದ ವರ್ಷದ ಮ್ಯಾಕ್‌ಅಫೀಯ ಗ್ಲೋಬಲ್ ಕನೆಕ್ಟೆಡ್ ಫ್ಯಾಮಿಲಿ ಅಧ್ಯಯನವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರತದ ಸೇಪಿಯನ್ ಲ್ಯಾಬ್ಸ್ ಸೆಂಟರ್‌ನ ನಿರ್ದೇಶಕರು ಹೇಳುವುದೇನು?
ಹ್ಯೂಮನ್ ಬ್ರೈನ್ ಅಂಡ್ ಮೈಂಡ್, ಭಾರತದ ಸೇಪಿಯನ್ ಲ್ಯಾಬ್ಸ್ ಸೆಂಟರ್‌ನ ನಿರ್ದೇಶಕರಾದ ಶೈಲೆಂದರ್ ಸ್ವಾಮಿನಾಥನ್ ಅವರು “ಮಕ್ಕಳ ಮಾನಸಿಕ ಆರೋಗ್ಯದ ಫಲಿತಾಂಶಗಳ ಮೇಲೆ ಪ್ರಭಾವ ಬೀರುವಲ್ಲಿ ತಂತ್ರಜ್ಞಾನದ ಪಾತ್ರ ಬಹಳ ಮುಖ್ಯವಾಗಿದೆ. ನಮ್ಮ ತಿಳುವಳಿಕೆಯನ್ನು ರೂಪಿಸುವಲ್ಲಿ ಈ ವರದಿಯು ನಿರ್ಣಾಯಕ ಕೊಡುಗೆಯನ್ನು ನೀಡುತ್ತದೆ” ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿದ್ದಾರೆ.
ಒಟ್ಟಾರೆಯಾಗಿ, ಸ್ಮಾರ್ಟ್‌ಪೋನ್ ಬಳಕೆಯನ್ನು ಮಕ್ಕಳು ಎಷ್ಟನೇ ವಯಸ್ಸಿಗೆ ಬಳಸುತ್ತಾರೆ ಮತ್ತು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎಂಬುದರ ಕುರಿತು ಅವರ ಮಾನಸಿಕ ಆರೋಗ್ಯ ನಿಂತಿರುತ್ತದೆ ಎಂದು ಈ ಅಧ್ಯಯನಗಳೆಲ್ಲ ತಿಳಿಸಿವೆ. ನೀವು ಪೋಷಕರು ಆಗಿದ್ರೆ, ಮಕ್ಕಳಿಗೆ ಮೊಬೈಲ್ ಕೊಡುವ ಮುಂಚೆ ಒಂದು ಕ್ಷಣ ಯೋಚಿಸಿ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ