ಈ ಭೂಮಿ (Earth) ಮೇಲೆ ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು. ಒಬ್ಬೊಬ್ಬರಿಗೆ ಒಂದೊಂದು ಥರ ಸಾವು (Death) ಬರುತ್ತೆ. ಮನುಷ್ಯ (Humans) ಯಾವುದರಿಂದ ಬೇಕಾದರೂ ತಪ್ಪಿಸಿಕೊಳ್ಳಬಹುದು. ಆದರೆ ಸಾವಿನಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂಚೆಯಲ್ಲಾ ಒಬ್ಬ ವ್ಯಕ್ತಿ 100 ವರ್ಷಗಳವರೆಗೆ ಬದುಕುತ್ತಿದ್ದರು. ಆರೋಗ್ಯ ಸಮಸ್ಯೆ ಬಂದರೂ 80ಕ್ಕಂತೂ ಮೋಸ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮನುಷ್ಯ ಎಷ್ಟೇ ತನ್ನ ಆರೋಗ್ಯ ನೋಡಿಕೊಂಡರೂ 50 ದಾಟಲು ಕಷ್ಟವಾಗುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ? ಬದಲಾದ ಬದುಕುವ ರೀತಿ. ಮೊದಲೆಲ್ಲಾ ಪ್ರೀತಿ (Love) , ವಾತ್ಸಲ್ಯ (Affection) , ಮಮತೆಗೆ ಹೆಚ್ಚು ಹೊತ್ತು ನೀಡಲಾಗ್ತಿತ್ತು. ಈಗ ಬರೀ ದುಡ್ಡು, ಸಮಯಕ್ಕಷ್ಟೇ ಬೆಲೆ. ತಂದೆ-ತಾಯಿಗೆ ವಯಸ್ಸಾಗುತ್ತಿದ್ದಂತೆ ಅನಾಥಶ್ರಮಕ್ಕೂ ಇಲ್ಲ ಓಲ್ಡ್ ಏಜ್ ಹೋಮ್ (Old Age Home) ಗೆ ಸೇರಿಸಿ ಮಕ್ಕಳು ಕೈ ತೊಳೆದುಕೊಳ್ಳುತ್ತಿದ್ದಾರೆ.
ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಮುಂದೆ ಓದಿ!
ಇದನ್ನು ಬೇಕಾದ್ರೂ ಸಹಿಸಿಕೊಂಡು ಬಿಡಬಹುದು. ಈಗ ನಾವು ಇಲ್ಲಿ ಹೇಳ್ತಿರುವ ವಿಚಾರ ಕೇಳಿದ್ರೆ ನಿಮ್ಮ ಹೃದಯ ಒಂದು ಕ್ಷಣ ಬಡಿಯುವುದನ್ನೇ ನಿಲ್ಲಿಸಬಹುದು. ಯಾಕೆ ಅಂತೀರಾ? ಈ ಊರಿನಲ್ಲಿ ವಯಸ್ಸಾದ ಅಪ್ಪ-ಅಮ್ಮ ಇರಬಹುದು, ಇಲ್ಲ ಅಜ್ಜ-ಅಜ್ಜಿ ಇರಬಹುದು ಇವರನ್ನು ಮನೆಯವರೇ ಸಾಯಿಸ್ತಿದ್ದರಂತೆ. ಇದೇನಪ್ಪಾ ಅಂತ ಬಾಯಿ ಮೇಲೆ ಬೆರಳಿಡಬೇಡಿ. ಇಂಥದ್ದೊಂದು ಕೆಲಸ ನಿಜಕ್ಕೂ ಈ ಊರಿನಲ್ಲಿ ನಡೆಯುತ್ತಿತ್ತಂತೆ.
ಅಪ್ಪ-ಅಮ್ಮನನ್ನ ಮನೆಯವ್ರೇ ಕೊಲ್ತಿದ್ರಂತೆ!
ದಕ್ಷಿಣ ಭಾರತ ಅಂದ್ರೆ ತಮಿಳುನಾಡಿನ ಕೆಲವು ಹಳ್ಳಿಗಳಲ್ಲಿ ಈ ಕೆಟ್ಟ ಸಂಪ್ರಾದಯವೊಂದಿದೆಯಂತೆ. ಅದೇನಪ್ಪಾ ಅಂದ್ರೆ ಮನೆಯಲ್ಲಿ ಯಾರಾದರೂ ವಯಸ್ಸಾದವರೂ ಇದ್ದರೆ, ಅಥವಾ ಇವರಿಗೆ ಅವರನ್ನು ನೋಡಿಕೊಳ್ಳಲು ಆಗ್ತಿಲ್ಲ ಅಂತಾದ್ರೆ ಮನೆಯವರೇ ಅವರನ್ನು ನಯವಾಗಿ ಕೊಲ್ಲುತ್ತಿದ್ದರಂತೆ. ಹಾಸಿಗೆ ಹಿಡಿದಿರುವ ಹಿರಿಯರನ್ನು ಸಾಯಿಸಲು ಎಳನೀರು ಬಳಸುತ್ತಿದ್ದರು ಅನ್ನೋದು ನಿಮ್ಮನ್ನ ಶಾಕ್ಗೊಳಪಡಿಸಬಹುದು.
ಎಣ್ಣೆ, ಎಳನೀರು ಬಳಸಿ ಹತ್ಯೆ!?
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ವಯಸ್ಸಾದವರಿಗೆ ಬೆಳಗ್ಗೆ ಚೆನ್ನಾಗಿ ಎಣ್ಣೆ ಹಚ್ಚಿ, ನಂತರ ಅವರಿಗೆ ಹೊಟ್ಟೆ ತುಂಬಾ ಎಳನೀರು ಕುಡಿಸಿ ಸಾಯುವಂತೆ ಮಾಡುತ್ತಿದ್ದರಂತೆ. ಈ ಘೋರ ಸಂಪ್ರದಾಯ ಕೂಡ ಈಗ ಸಮಾಧಿಯಾಗಿದೆ.
'ತಲೈಕೂತಲ್' ಎಂಬ ಕೆಟ್ಟ ಸಂಪ್ರದಾಯ!
ಹೌದು, ಈ ಕೆಟ್ಟ ಸಂಪ್ರದಾಯದ ಹೆಸರು 'ತಲೈಕೂತಲ್'. ಹಾಸಿಗೆ ಹಿಡಿದ ವ್ಯಕ್ತಿಗೆ ಮುಂಜಾನೆ ಎಣ್ಣೆ ಸ್ನಾನವನ್ನು ಮಾಡಿಸಲಾಗ್ತಿತ್ತು. ಇದಾದ ಬಳಿಕ ಹೊಟ್ಟೆ ತುಂಬಾ ಎಳನೀರು ಕುಡಿಸುತ್ತಿದ್ದರು. ಹೀಗೆ ಮಾಡಿದರೆ ಮನುಷ್ಯನ ದೇಹ ಗಣನೀಯುವಾಗಿ ತಂಪಾಗುತ್ತಿತ್ತು. ಜ್ವರ ಬರುತ್ತಿತ್ತು, ಇನ್ನೂ ಕೆಲವರಿಗೆ ಚೋಕ್ ಆಗುತ್ತಿತ್ತಂತೆ. ಹೀಗೆ ಮಾಡಿದ ಎರಡು ದಿನಗಳಲ್ಲಿ ವಯಸ್ಸಾದವರು ಸಾಯುತ್ತಿದ್ದರಂತೆ. 2 ದಿನ ಸಮಯ ಇರುತ್ತಿತ್ತಲ್ಲ, ಆ ಸಮಯದಲ್ಲಿ ಸಂಬಂಧಿಕರಿಗೆ ಮಾಹಿತಿ ತಿಳಿಸಿ ಎಲ್ಲರನ್ನೂ ಸೇರಿಸುತ್ತಿದ್ದರಂತೆ.
ಮಣ್ಣಿನ ನೀರು ಕುಡಿಸುತ್ತಿದ್ದರಂತೆ!
ಕೆಲವರು ಎಣ್ಣೆ ಸ್ನಾನ ಮಾಡಿಸಿ ಎಳನೀರು ಕುಡಿಸಿದರೂ ಗಟ್ಟಿಯಾಗಿರುತ್ತಿದ್ದರು. ಈ ಸಮಯದಲ್ಲಿ ಮಣ್ಣಿನ ನೀರು ಕುಡಿಸುತ್ತಿದ್ದರಂತೆ. ಹೊಟ್ಟೆಯೊಳಗೆ ಹೊಕ್ಕಿ ಈ ಮಣ್ಣಿನ ನೀರು ಆ ಹಿರಿ ಜೀವಗಳನ್ನೇ ಬಲಿ ತೆಗೆದುಕೊಳ್ಳುತ್ತಿತ್ತಂತೆ. ಹೀಗೆ ಮನೆಯ ಹಿರಿ ಜೀವಗಳನ್ನ ಕೊಲ್ಲಬೇಕಾದರೆ ಮನೆಯ ಕಿರಿ ಸದಸ್ಯರ ಕ್ರೌರ್ಯವೆಷ್ಟಿರಬೇಡ ಅಂತ ಒಮ್ಮೆ ಯೋಚಿಸಿ.
ಸಂಬಂಧಿಕರೆಲ್ಲ ಸೇರಿ ಸಾವಿಗಾಗಿ ಮಾಡ್ತಿದ್ರಂತೆ ಜಪ!
ಎಣ್ಣೆ ಸ್ನಾನ ಮಾಡಿಸಿ, ಎಳನೀರು ಕುಡಿಯುವಂತೆ ಒತ್ತಾಯ ಮಾಡುತ್ತಿದ್ದರಂತೆ. ಇದಾದ ಬಳಿಕ ತುಳಸಿ ರಸ ಹಾಗೂ ಹಾಲು ಕೂಡ ಕುಡಿಸುತ್ತಿದ್ದರಂತೆ. ಸಂಬಂಧಿಕರೆಲ್ಲ ಹಿರಿಯರ ಮುಂದೆ ಕೂತು 'ಕಾಸಿ', 'ಕಾಸಿ' ಅಂತ ಜಪ ಮಾಡುತ್ತಿದ್ದರಂತೆ. ಆ ಹಿರಿಯ ಜೀವ ಮುಂದೆ ಕೂತಿದ್ದ ಸಂಬಂಧಿಕರನ್ನೆಲ್ಲ ನೋಡಿ ಖುಷಿ ಪಡಬೇಕೋ, ಇಲ್ಲ ನನ್ನನ್ನು ಕೊಲ್ಲಲು ಇವರೆಲ್ಲ ಸೇರಿದ್ದಾರಲ್ಲ ಅಂತ ದುಃಖ ಪಡಬೇಕೋ ತಿಳಿಯದೇ ಜೀವ ಬಿಡುತ್ತಿತ್ತು.
ಇಷ್ಟಕ್ಕೆ ನಿಲ್ಲದ 'ತಲೈಕೂತಲ್' ಕ್ರೌರ್ಯ!
ಇಷ್ಟಕ್ಕೆ ನಿಲ್ಲದ ಈ ಸಂಪ್ರದಾಯದ ಕ್ರೌರ್ಯ ಇಷ್ಟೆಲ್ಲಾ ಮಾಡಿಯೂ ಆ ಹಿರಿಯ ಜೀವ ಬದುಕಿಬಿಟ್ಟರೆ ಇವರೇ ಅವರ ಗಂಟಲಿಗೆ ಗಟ್ಟಿಯಾದ ಖಾರದ ತಿಂಡಿಯನ್ನು ತುರುಕುತ್ತಿದ್ದರಂತೆ. ಆ ಪದಾರ್ಥ ತಿನ್ನಲಾಗದೇ ಗಂಟಲಲ್ಲೇ ಸಿಕ್ಕಿಕೊಂಡು ಆ ಹಿರಿಯು ಜೀವ ಕೊನೆಯುಸಿರೆಳೆಯುತ್ತಿತ್ತಂತೆ.
ಈ ಬಗ್ಗೆ ವೈದ್ಯರು ಹೇಳೋದೇನು?
ಮಧುರೈನಲ್ಲಿರುವ ವಯೋವೃದ್ಧರು ಮತ್ತು ಖಾಸಗಿ ವೈದ್ಯರಾದ ಡಾ ಎನ್ ರಾಜಾ ಅವರ ಪ್ರಕಾರ, ಎಣ್ಣೆ ಸ್ನಾನದ ನಂತರ ಎಳನೀರು ಕುಡಿಯುವುದು ದೇಹದ ಉಷ್ಣತೆಯು ತೀರಾ ಕಡಿಮೆಯಾಗುತ್ತಂತೆ. ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆ 98.4 ಡಿಗ್ರಿ ಎಫ್ನಷ್ಟು ಇರುತ್ತೆ.
ಆದರೆ ಈ ರೀತಿ ಮಾಡಿದಾಗ ದೇಹದ ಉಷ್ಣತೆ 94 ಅಥವಾ 92 ಡಿಗ್ರಿ ಎಫ್ಗೆ ಇಳಿಯುತ್ತಂತೆ. ಅಸಮತೋಲನವನ್ನು ಉಂಟುಮಾಡುತ್ತದೆ, ಇದು ದೇಹದ ಚಯಾಪಚಯ ಕ್ರಿಯೆಯೊಂದಿಗೆ ಹಾನಿಯನ್ನುಂಟುಮಾಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ, ಇದು ಹೃದಯ ಸ್ತಂಭನಕ್ಕೂ ಕಾರಣವಾಗಬಹುದಂತೆ.
ಪ್ರಾಚೀನ ಕಾಲದ ಪದ್ದತಿಯಂತೆ!
ಇದು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲದ ಪ್ರಾಚೀನ ಪದ್ಧತಿಯಾಗಿದೆ. "ವಿರುದುನಗರ ಮತ್ತು ಮಧುರೈನ ಉಸಿಲಂಪಟ್ಟಿಯ ಹಳ್ಳಿಗಳಲ್ಲಿ ಜನರು ಇದನ್ನು ಮಾಡುವುದನ್ನು ನಾನು ಕೇಳಿದ್ದೇನೆ" ಎಂದು ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರದ ಪ್ರಾಧ್ಯಾಪಕ ತಿರುನೆಲ್ವೇಲಿ ಎನ್. ಕಣ್ಣನ್ ಹೇಳುತ್ತಾರೆ. ಈ ರೀತಿ ಮನುಷ್ಯ ಪ್ರಾಣ ಬಿಟ್ಟರೆ ಅದನ್ನು ಆಗಿನ ವೈದ್ಯರು ಸಹ ಸಹಜ ಸಾವು ಅಂತ ಘೋಷಿಸುತ್ತಿದ್ದರಂತೆ.
ಈ ಹಿಂದೆ ವಯಸ್ಸಾದ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವಾಗ ಅವರ ಮನೆಯವರು ಎಣ್ಣೆ ಸ್ನಾನ ಮಾಡಿಸಬಹುದೆ ಅಂತ ವೈದ್ಯರನ್ನು ಕೇಳುತ್ತಿದ್ದರಂತೆ. ಆಗ ವೈದ್ಯರಿಗೆ ಇವರು ತಲೈಕೂತಲ್ ಸಂಪ್ರದಾಯ ಮಾಡುತ್ತಾರೆ ಅಂತ ವೈದ್ಯರಿಗೆ ಗೊತ್ತಾಗುತ್ತಿತ್ತು ಅಂತ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2015ರವರೆಗೂ ಇತ್ತು ಈ ಅಮಾನುಷ ಸಂಪ್ರದಾಯ!
ಇನ್ನೂ ಈ ತಲೈಕೂತಲ್ ಸಂಪ್ರದಾಯ 2015ರವರೆಗೂ ಜೀವಂತವಾಗಿತ್ತಂತೆ. ಈಗಲೂ ಕೆಲವು ಹಳ್ಳಿಗಳಲ್ಲಿ ಈ ರೀತಿಯ ಸಂಪ್ರದಾಯದ ಮೊರೆ ಹೋಗುತ್ತಿದ್ದಾರೆ ಅಂತ ಕೆಲವರು ಹೇಳುತ್ತಿದ್ದಾರೆ ಆದರೆ ಯಾರೂ ಕೂಡ 2015ರ ನಂತರ ಈ ರೀತಿಯ ಕೃತ್ಯಗಳನ್ನು ಕಣ್ಣಾರೆ ಕಂಡಿಲ್ಲ.ಸಿಕ್ಕಿಬೀಳುವ ಭಯದಲ್ಲಿ ತಲೈಕೂತಲ್ ಅನ್ನು ಮುಚ್ಚಿಡಲಾಗಿದ್ದರೂ, ಇದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಚಲಿತವಾಗಿದೆ ಎಂದು ಕೆಲವರು ಹೇಳುತ್ತಾರೆ.
ತಮಗಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ್ದ ಅಪ್ಪ-ಅಮ್ಮನನ್ನು ಹೀಗೆ ಕ್ರೂರವಾಗಿ ಕೊಲ್ಲುವುದಕ್ಕೆ ನಿಜಕ್ಕೂ ಆ ಮಕ್ಕಳಿಗೆ ಹೇಗೆ ಮನಸ್ಸು ಬರುತ್ತಿತ್ತೋ. ಮಕ್ಕಳು ಚಿಕ್ಕವರಿದ್ದಾಗ ಎಡವಿ ಬಿದ್ದಾಗ ಆ ಅಪ್ಪ-ಅಮ್ಮ ಅದೆಷ್ಟು ನೊಂದುಕೊಂಡಿದ್ರೋ? ಆದರೆ ಅವರನ್ನು ಹೀಗೆ ತಮ್ಮ ಕೈಯಿಂದಲೇ ಕೊಲ್ಲುತ್ತಿದ್ದರು ಅನ್ನೋದನ್ನು ನಂಬೋದಿಕ್ಕೆ ನಿಜಕ್ಕೂ ಸಾಧ್ಯವಿಲ್ಲ.
ಇನ್ನೂ ಈ ತಲೈಕೂತಲ್ ಸಂಪ್ರದಾಯದ ಬಗ್ಗೆ ತಮಿಳು ಸಿನಿಮಾ ಕೂಡ ಬಂದಿದೆ. 2023ರಲ್ಲಿ ತಲೈಕೂತಲ್ ಎಂಬ ಹೆಸರಿನಲ್ಲೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸಂಪೂರ್ಣವಾಗಿ ತೋರಿಸದಿದ್ದರೂ ಒಂದು ಮಟ್ಟಕ್ಕೆ ಈ ಹೇಯ ಸಂಪ್ರದಾಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ