Jayalalitha-Shashikala Relationship: ತನ್ನ ಜೀವನ ಜಯಲಲಿತಾರೊಂದಿಗೆ ಹೇಗಿತ್ತು ಅಂತ ಕೊನೆಗೂ ಬಿಚ್ಚಿಟ್ಟ ಶಶಿಕಲಾ

ಜಯಲಲಿತಾ ನನ್ನನ್ನು ಬಿಟ್ಟು ಅರೆಕ್ಷಣವೂ ಇರುತ್ತಿರಲಿಲ್ಲ. ಹೊರಜಗತ್ತಿಗೆ ನಾವು ಬೇರ್ಪಟ್ಟಿದ್ದರೂ ನಾವು ಪರಸ್ಪರ ಮಾತನಾಡುತ್ತಿದ್ದೆವು. ನಾನು ಜೈಲಿನಲ್ಲಿದ್ದಾಗ ಒಮ್ಮೆ ಆರೋಗ್ಯ ಹದಗೆಟ್ಟಿತ್ತು. ಆ ಸಮಯದಲ್ಲಿ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು.

ಶಶಿಕಲಾ , ಜಯಲಲಿತಾ

ಶಶಿಕಲಾ , ಜಯಲಲಿತಾ

 • Share this:
  ತಮಿಳುನಾಡನ್ನು ಸರಿಸುಮಾರು ಹದಿನಾಲ್ಕು ವರ್ಷಗಳ ಅನಭಿಷಕ್ತವಾಗಿ ಆಳಿದ ಧೀಮಂತ ದಿಟ್ಟ ವ್ಯಕ್ತಿತ್ವದ ಹೆಣ್ಣುಮಗಳು ಜಯಲಲಿತಾ. ಎಂಜಿಆರ್ ನಿಧನದ ನಂತರ ಉತ್ತರಾಧಿಕಾರಿಯಾಗಿ ತಮಿಳುನಾಡಿನ ಚುಕ್ಕಾಣಿ ಹಿಡಿದ ಜಯಲಲಿತಾ ಆಡಳಿತ ನಡೆಸಿದರು. ಜೀವದ ಗೆಳತಿಯಾಗಿದ್ದ ಶಶಿಕಲಾ ಮಾತುಗಳಲ್ಲಿ ಜಯಲಲಿತಾ ಕುರಿತ ಮತ್ತಷ್ಟು ವಿವರಗಳನ್ನು, ರಾಜಕೀಯ ಏರಿಳಿತಗಳನ್ನು, ಶಶಿಕಲಾ ಅವರೊಂದಿಗಿನ ಒಡನಾಟ ಹೀಗೆ ಸಾಕಷ್ಟು ವಿಷಯಗಳನ್ನು ಲೇಖಕಿ ಲಕ್ಷ್ಮೀ ಸುಬ್ರಹ್ಮಣ್ಯನ್ ನೇರ ಸಂದರ್ಶನದ ಮೂಲಕ ಕಲೆಹಾಕಿದ್ದಾರೆ. ಹಾಗಿದ್ದರೆ ಶಶಿಕಲಾ ಕಂಡಂತೆ ಜಯಲಲಿತಾ ಜೀವನ ಹೇಗಿತ್ತು ಎಂಬುದನ್ನು ನೋಡೋಣ.

  ತಮಿಳುನಾಡು ಸಂಪೂರ್ಣವಾಗಿ ಲಾಕ್‌ಡೌನ್ ಕಪಿಮುಷ್ಟಿಯಲ್ಲಿದೆ. ಲೇಖಕಿ ಶಶಿಕಲಾರನ್ನು ಸಂದರ್ಶಿಸುವ ಸಲುವಾಗಿ ಬಂಗ್ಲೆಯ ಮುಂದೆ ನಿಂತಾಗ ಸೆಕ್ಯುರಿಟಿ ಗಾರ್ಡ್ ಶಶಿಕಲಾಗೆ ಇಂಟರ್‌ಕಾಮ್ ಮೂಲಕ ತಿಳಿಸಿದ್ದರು. ಭೇಟಿದಾರರ ಕೋಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಮ್‌ಜಿ ರಾಮಚಂದ್ರನ್ ಮತ್ತು ಜಯಲಲಿತಾ ಫೋಟೋಗಳನ್ನು ಗೋಡೆಗೆ ನೇತುಹಾಕಲಾಗಿತ್ತು. ಸ್ವಲ್ಪ ಸಮಯದಲ್ಲೇ ಶಶಿಕಲಾ ಲೇಖಕಿ ಇದ್ದ ಭೇಟಿದಾರರ ಕೊಠಡಿಯನ್ನು ಪ್ರವೇಶಿಸಿ ಮಾತಿಗೆ ಇಳಿದರು.

  ಜಯಲಲಿತಾ ಮತ್ತು ಶಶಿಕಲಾ ಸ್ನೇಹ ಇಂದು ನಿನ್ನೆಯದಲ್ಲ. ಜಯಲಲಿಯಾ ಬದುಕನ್ನು ಹತ್ತಿರದಿಂದ ಕಂಡವರು ಶಶಿಕಲಾ. ಜಯಲಲಿತಾ ಮರಣದ ನಂತರ ಶಶಿಕಲಾ ಸಾಮಾಜಿಕವಾಗಿ ರಾಜಕೀಯವಾಗಿ ಮರೆಯಾಗುತ್ತಾರೆಂದೇ ಹೆಚ್ಚಿನವರು ತಿಳಿದಿದ್ದರು. ಆದರೆ ಬೆಂಗಳೂರು ಜೈಲಿನಿಂದ ಬಿಡುಗಡೆಯಾದ ನಂತರ ರಾಜಕೀಯದಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು. ಆದರೆ ರಾಜಕೀಯದ ಎಲ್ಲಾ ಒಳಹೊರಗನ್ನು ತಿಳಿದುಕೊಂಡ ನಂತರ ಶಶಿಕಲಾ ಪುನರಾಗಮನಕ್ಕೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

  AIADMK ಪಕ್ಷದಲ್ಲಿ 33 ವರ್ಷಗಳಿಂದ ಇದ್ದು ಪಕ್ಷದ ಆಂತರ್ಯವನ್ನು ಚೆನ್ನಾಗಿ ತಿಳಿದುಕೊಂಡವರಾಗಿದ್ದಾರೆ. ರೈತ ಕುಟುಂಬದಿಂದ ಬಂದ ಶಶಿಕಲಾ ತಂಜವೂರಿನ ಮನ್ನಾರ್‌ಗುಡಿಯವರು. ಶಶಿಕಲಾ ರಾಜಕೀಯ ಸುದ್ದಿ ಕಲಾಪಗಳನ್ನು ಆಲಿಸುತ್ತಲೇ ಬೆಳೆದವರು. 1973 ರಲ್ಲಿ ನಟರಾಜನ್ ಅವರೊಂದಿಗೆ ವಿವಾಹವಾದ ನಂತರ ದಂಪತಿ ಚೆನ್ನೈಗೆ ಬಂದರು.

  ನಟರಾಜನ್ ತಮಿಳುನಾಡಿನ ಮಾಹಿತಿ ನಿರ್ದೇಶನಾಲಯ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ತುರ್ತು ಪರಿಸ್ಥಿತಿ ವೇಳೆ ಹಿಂದಿ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರ ಉದ್ಯೋಗ ಹೋಯಿತು. ಕುಟುಂಬ ನಿರ್ವಹಣೆಗಾಗಿ ಶಶಿಕಲಾ ವಿಡಿಯೋ ಬಾಡಿಗೆ ಶಾಪ್ ಆರಂಭಿಸಿದರು.

  ಎಮ್‌ಜಿಆರ್ ಆಡಳಿತಕ್ಕೆ ಬಂದ ನಂತರ ನಟರಾಜನ್ ಕಡಲೂರ್‌ನಲ್ಲಿರುವ ಜಿಲ್ಲಾ ಕಲೆಕ್ಟರ್ ಕಚೇರಿಯಲ್ಲಿ ಪಿಆರ್‌ಓ ಆಗಿ ಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ಜಯಲಲಿತಾ AIADMKಯ ಸೆಕ್ರೆಟರಿಯಾಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದೂಟದ ಯೋಜನೆಯನ್ನು ರಾಜ್ಯದ್ಯಂತ ಪ್ರಚಾರಪಡಿಸುವ ಸಲುವಾಗಿ ಜಯಲಲಿತಾ ಪ್ರವಾಸವನ್ನು ಕೈಗೊಂಡರು. ಈ ಸಮಯದಲ್ಲಿ ಎಮ್‌ಜಿಆರ್ ದಕ್ಷಿಣ ಆರ್ಕೋಟ್‌ನ ಜಿಲ್ಲಾ ಕಲೆಕ್ಟರ್ ವಿ ಚಂದ್ರಲೇಖ ರನ್ನು ಉತ್ತಮ ಮಾಧ್ಯಮ ಕವರೇಜ್ ಮಾಡುವುದಕ್ಕಾಗಿ ಯಾರಾದರೂ ಸಿಗುತ್ತಾರೆಯೇ ಎಂದು ಕೇಳಿದರು. ಆ ಸಮಯದಲ್ಲಿ ಚಂದ್ರಲೇಖ, ನಟರಾಜನ್‌ಗೆ ಈ ಜವಾಬ್ದಾರಿ ವಹಿಸಿದರು.

  ನಟರಾಜನ್ ತಮ್ಮ ಪತ್ನಿ ಶಶಿಕಲಾಗೆ ವಿಡಿಯೋ ಕವರೇಜ್ ಜವಬ್ದಾರಿಯನ್ನು ಹಸ್ತಾಂತರಿಸಿದರು. ಸುದೀರ್ಘ ಗೆಳೆತನಕ್ಕೆ ಈ ಸನ್ನಿವೇಶ ಸಾಕ್ಷಿಯಾಯಿತು. 1980ರಲ್ಲಿ ನಟರಾಜನ್ ಮತ್ತು ಶಶಿಕಲಾ ಪೋಯೆಸ್ ಗಾರ್ಡನ್‌ನಲ್ಲಿರುವ ಜಯಲಲಿತಾರ ವೇದಾ ನಿಲಯಕ್ಕೆ ತೆರಳಿದರು. ಎಮ್‌ಜಿಆರ್ ಮರಣದ ನಂತರ ಅವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.

  ಅಭಿವೃದ್ಧಿಯ ಮುನ್ನುಡಿಯೇ ದುಃಖ

  ಡಿಸೆಂಬರ್ 24, 1987 ರಂದು ಎಮ್‌ಜಿಆರ್ ನಿಧನರಾದಾಗ ಜಯಲಲಿತಾ ಶಶಿಕಲಾ ಜತೆಗೂಡಿ ರಾಮವರಮ್ ಗಾರ್ಡನ್ಸ್ ರೆಸಿಡೆನ್ಸಿಗೆ ಹೋದರು. ಈ ಸಮಯದಲ್ಲಿ ಶಶಿಕಲಾ ಅಲ್ಲಿನ ಸನ್ನಿವೇಶವನ್ನು ವಿವರಿಸುತ್ತಾರೆ. ಗೇಟ್ ಅನ್ನು ಮುಚ್ಚಲಾಗಿತ್ತು. ನಾವು ಗೇಟ್ ಅನ್ನು ತೆರೆಯಲು ಪ್ರಯತ್ನಿಸಿದೆವು. ಅಕ್ಕ ಅಳುತ್ತಿದ್ದರು. ಆದರೆ ಎಮ್‌ಜಿಆರ್ ಕುಟುಂಬ ಸದಸ್ಯರು ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಲು ಪ್ರಯತ್ನಿಸಿದರು. ಆದರೆ ನಾವು ಎಮ್‌ಜಿಆರ್ ಮೃತದೇಹವನ್ನು ನೋಡಬೇಕೆಂದು ಅಕ್ಕ ಪ್ರಯತ್ನಿಸಿದಾಗ ಅವರನ್ನು ಕೆಳಕ್ಕೆ ತಳ್ಳಲಾಯಿತು ಮತ್ತು ನಾವು ಅಲ್ಲಿಂದ ಮನೆಗೆ ಮರಳಬೇಕಾಯಿತು ಎಂದು ಶಶಿಕಲಾ ಹೇಳುತ್ತಾರೆ.

  ಜಯಲಲಿತಾ ತಮ್ಮ ಅಮ್ಮನ ಫೋಟೋದ ಮುಂದೆ ಅಳುತ್ತಾ 'ಇಂದು ನಾನು ಕಳೆದುಕೊಂಡೆ' ಎಂದು ರೋದಿಸುತ್ತಿದ್ದುದು ನನ್ನ ಕಣ್ಣಿಗೆ ಕಟ್ಟಿದಂತಿದೆ ಎಂದು ಶಶಿಕಲಾ ನೆನಪಿಸಿಕೊಂಡರು. ಏನೇ ಆಗಲಿ ಜಯಲಲಿತಾ ಅವರೊಂದಿಗೆ ಇರಲು ಶಶಿಕಲಾ ಆ ದಿನ ನಿರ್ಧರಿಸಿದರು.

  ಇದೇ ಸಮಯದಲ್ಲಿ ಪಕ್ಷವನ್ನು ಎರಡು ಹೋಳುಗಳಾಗಿ ಮಾಡಲಾಯಿತು. ಒಂದು ಭಾಗವನ್ನು ಜಯಲಲಿತಾ ಆಳಿದರೆ ಇನ್ನೊಂದು ಭಾಗವನ್ನು ಎಮ್‌ಜಿಆರ್ ಪತ್ನಿ ಜಾನಕಿ ಮುನ್ನಡೆಸಿದರು. ಜಯಲಲಿತಾ ತಮ್ಮದೇ ಪಾರ್ಟಿ ಕಚೇರಿಗಾಗಿ ಹುಡುಕಾಡುತ್ತಿದ್ದಾಗ ಆ ಸಮಯದಲ್ಲಿ ಶಶಿಕಲಾ ಮತ್ತು ನಟರಾಜನ್ ಅವರಿಗೆ ಬೆಂಬಲವನ್ನು ನೀಡಿದರು. ಪಾರ್ಟಿಯ ಹಕ್ಕನ್ನು ಕೈಬಿಡುವಂತೆ ಜಾನಕಿಯನ್ನು ವಿನಂತಿಸಲು ಶಶಿಕಲಾ ಮತ್ತು ನಟರಾಜನ್ ರಾಮವರಮ್‌ಗೆ ಪ್ರಯಾಣಿಸಿದರು.

  ಅಂತಿಮವಾಗಿ ಜಾನಕಿ ಪಕ್ಷದ ಜವಾಬ್ದಾರಿಯನ್ನು ಕೈಬಿಟ್ಟ ಬಗ್ಗೆ ದೂರದರ್ಶನದಲ್ಲಿ ಘೋಷಣೆಯನ್ನು ನೀಡಿದರು. ಹೀಗೆ ಜಯಲಲಿತಾ ಸಂಪೂರ್ಣವಾಗಿ AIADMK ನಾಯಕತ್ವವನ್ನು ವಹಿಸಿದರು. ಶಶಿಕಲಾ -ಜಯಲಲಿತಾ ಅವರ ಪೋಯೆಸ್ ಗಾರ್ಡನ್‌ ನಿವಾಸದಲ್ಲಿ 33 ವರ್ಷಗಳ ಕಾಲ ತಂಗಿದ್ದರೂ ಜಯಲಲಿತಾ ಅವರಿಲ್ಲದೆ ಎಲ್ಲಿಗೂ ಪ್ರಯಾಣ ಬೆಳೆಸಿರಲಿಲ್ಲ.

  ಇದನ್ನೂ ಓದಿ: ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು HDK ಯತ್ನಿಸಿದ್ದರು : ರಾಕ್​​ಲೈನ್​​ ಗಂಭೀರ ಆರೋಪ!

  ಶಶಿಕಲಾ ಜಯಲಲಿತಾ ಇಲ್ಲದೆ ಭೇಟಿಮಾಡುವ ಸ್ಥಳವೆಂದರೆ ಚೆನ್ನೈನಲ್ಲಿರುವ ಮಿಲನ್ ಜ್ಯೋತಿ ಶೋರೂಮ್‌ಗೆ ಮಾತ್ರ. ಇಲ್ಲಿ ಅವರು ಜಯಲಲಿತಾರ ಗಾಢ ಹಸಿರು ಬಣ್ಣದ ಸೀರೆಯನ್ನು ಖರೀದಿಸುತ್ತಿದ್ದರು. ಜಯಲಲಿತಾ ಎಂದಿಗೂ ದುಬಾರಿ ಚಿನ್ನಾಭರಣಗಳನ್ನು ಧರಿಸುತ್ತಿರಲಿಲ್ಲ. ಆಕೆ ಯಾವಾಗಲೂ ಸರಳವಾಗಿ ಇರಲು ಬಯಸುತ್ತಿದ್ದರು ಎಂಬುದು ಶಶಿಕಲಾ ಮಾತಾಗಿದೆ.

  ಜಯಲಲಿತಾರಿಗೆ ಫಿಲ್ಟರ್ ಕಾಫಿಯೆಂದರೆ ತುಂಬಾ ಇಷ್ಟವಾಗಿತ್ತು. ಅದೂ ಕೂಡ ತಟ್ಟೆ ಮತ್ತು ಲೋಟದಲ್ಲಿ ಕುಡಿಯುವುದೆಂದರೆ ಬಲು ಪ್ರೀತಿ. ಮನೆಯೂಟವೆಂದರೆ ತುಂಬಾ ಇಷ್ಟ. ಜಯಲಲಿತಾ ಬಳಿ 13 ನಾಯಿಗಳಿತ್ತು. ಹಾಗೆ, ಬೀಚ್‌ನಲ್ಲಿ ವಾಯುವಿಹಾರ ಮಾಡುವುದು ತುಂಬಾ ಮೆಚ್ಚಿನ ವಿಷಯವಾಗಿತ್ತು.

  ಸ್ನೇಹದಲ್ಲಿ ಬಿರುಕು

  ಶಶಿಕಲಾ ಮತ್ತು ಜಯಲಲಿತಾರ ಸ್ನೇಹದಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ಶಶಿಕಲಾರನ್ನು ಎರಡು ಬಾರಿ ಪಕ್ಷದಿಂದ ಕೈಬಿಡಲಾಯಿತು. ಜೂನ್ 1996 ಮತ್ತು 19997 ರ ನಡುವೆ ಪಕ್ಷದಿಂದ ವಜಾಗೊಳಿಸಲಾಯಿತು. ಇನ್ನೂ ಪರಿಹರಿಸಲಾಗದೇ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿರುವ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ಪ್ರಕರಣವೊಂದರಲ್ಲಿ ಶಶಿಕಲಾ ಜೈಲು ಸೇರಬೇಕಾಯಿತು. ಈ ಸಮಯದಲ್ಲಿ ಜಯಲಲಿತಾರನ್ನು ಬಂಧಿಸಲಾಯಿತು. ನಂತರ 45 ದಿನಗಳಲ್ಲಿ ಮಾಜಿ ಸಿಎಂ ಜೈಲಿನಿಂದ ಬಿಡುಗಡೆಯಾದರು. ಸುದ್ದಿಗೋಷ್ಠಿಯಲ್ಲಿ ಜಯಲಲಿತಾ, ಶಶಿಕಲಾ ಕುಟುಂಬವನ್ನು ದೂಷಿಸಿದರು ಮತ್ತು ಪೋಯೆಸ್ ಗಾರ್ಡನ್‌ನಿಂದ ಅವರನ್ನು ಹೊರಹಾಕಲಾಯಿತು.

  ಅಕ್ಕ ನನ್ನನ್ನು ಬಿಟ್ಟು ಅರೆಕ್ಷಣವೂ ಇರುತ್ತಿರಲಿಲ್ಲ. ಹೊರಜಗತ್ತಿಗೆ ನಾವು ಬೇರ್ಪಟ್ಟಿದ್ದರೂ ನಾವು ಪರಸ್ಪರ ಮಾತನಾಡುತ್ತಿದ್ದೆವು. ಶಶಿಕಲಾ ಜೈಲಿನಲ್ಲಿದ್ದಾಗ ಒಮ್ಮೆ ಅವರ ಆರೋಗ್ಯ ಹದಗೆಟ್ಟಿತ್ತು. ಆ ಸಮಯದಲ್ಲಿ ಜಯಲಲಿತಾ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು. ನನ್ನ ಆರೋಗ್ಯದ ಕಾಳಜಿ ವಹಿಸಿದ್ದರು ಎಂಬುದಾಗಿ ಶಶಿಕಲಾ ಬಹಿರಂಗಗೊಳಿಸಿದ್ದಾರೆ.

  ಮೋದಿಯವರು ಅಕ್ಕನಿಗೆ ಉತ್ತಮ ಸ್ನೇಹಿತರಾಗಿದ್ದರು. ಜಯಲಲಿತಾ ಚೆನ್ನೈನ ಆಸ್ಪತ್ರೆಯಲ್ಲಿ ಅನಾರೋಗ್ಯಪೀಡಿತರಾಗಿದ್ದಾಗ ಖುದ್ದು ಮೋದಿಯವರು ಬಂದು ಅಕ್ಕನನ್ನು ಭೇಟಿಯಾಗಿದ್ದರು. ಅಕ್ಕ ತೀರಿಹೋದಾಗ ನಾನು ಸಂಪೂರ್ಣವಾಗಿ ಧರಾಶಾಹಿಯಾಗಿದ್ದೆ ಎಂಬುದಾಗಿ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅಕ್ಕ ಆಸ್ಪತ್ರೆಯಲ್ಲಿದ್ದಾಗ ಅವರು ಮರಳಿ ಬರುತ್ತಾರೆ ಎಂಬ ಭರವಸೆಯಲ್ಲಿಯೇ ನಾನಿದ್ದೆ. ಆದರೆ ನಡೆದ ಸಂಗತಿಗಳೇ ಬೇರೆ ಎಂದು ಶಶಿಕಲಾ ದುಃಖಿತರಾದರು. ದೇವರನ್ನು ಹೆಚ್ಚು ನಂಬುತ್ತಿದ್ದ ಜಯಲಲಿತಾ ತಮ್ಮ ಪೆಟ್ಟಿಗೆಯಲ್ಲಿ ದೇವರ ಫೋಟೋಗಳನ್ನು, ಪೂಜಾ ಸಲಕರಣೆಗಳನ್ನು ಮರೆಯದೆ ಕೊಂಡೊಯ್ಯುತ್ತಿದ್ದರು ಎಂಬುದಾಗಿ ಶಶಿಕಲಾ ನೆನಪಿಸಿಕೊಳ್ಳುತ್ತಾರೆ.

  ಅಂತೂ ಇಂತೂ ಶಶಿಕಲಾ ರಾಜಕೀಯಕ್ಕೆ ಬರುವುದು ನಿಚ್ಚಳವಾಗಿದ್ದು ಜಯಲಲಿತಾ ಅವರೊಂದಿಗಿನ ಒಡನಾಟದಿಂದ ಶಶಿಕಲಾ ಕಲಿತದ್ದು ಸಾಕಷ್ಟಿದೆ. ಪಕ್ಷವನ್ನು ಮುನ್ನಡೆಸುವ ಎಲ್ಲಾ ನೈಪುಣ್ಯಗಳನ್ನು ಅವರು ಅರಿತಿದ್ದಾರೆ. ಜಯಲಲಿತಾರಂತೆಯೇ ಆಳ್ವಿಕೆ ನಡೆಸುತ್ತೇನೆ ಎಂಬುದು ಅವರ ದಿಟ್ಟತನವಾಗಿದೆ.
  Published by:Kavya V
  First published: