Coronavirus: ಮಕ್ಕಳನ್ನು ಶಾಲೆಗೆ ಕಳಿಸೋ ಮುನ್ನ Flu Vaccine ಹಾಕಿಸಿ ಕಳಿಸಿ ಎನ್ನುತ್ತಿವೆ ಶಾಲೆಗಳು, ನಿಜಕ್ಕೂ ಇದು ಅಗತ್ಯ ಇದೆಯಾ?

Flu Vaccine: ದೆಹಲಿಯ ಕೆಲ ಶಾಲೆಗಳು, ಬೆಂಗಳೂರಿನ ಅನೇಕ ಸ್ಪೋರ್ಟ್ಸ್ ಕ್ಲಬ್​ಗಳು ಮಕ್ಕಳಿಗೆ ಮಳೆಗಾಲಕ್ಕಿಂತ ಮುಂಚೆ ಫ್ಲೂ ವ್ಯಾಕ್ಸಿನ್ ಕೊಡಿಸಿಬಿಡಿ ಎಂದು ಪೋಷಕರಿಗೆ ಪತ್ರ ಬರೆದಿವೆ ಎನ್ನಲಾಗಿದೆ. ಆದರೆ ವೈದ್ಯರನ್ನು ಕೇಳದೆ ಮಕ್ಕಳಿಗೆ ವಿನಾಕಾರಣ ಲಸಿಕೆ ನೀಡಬಾರದು, ಇದರಿಂದ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Covid 19: ಕೋವಿಡ್ ಭಯ ಇನ್ನೂ ಹೋಗಿಲ್ಲ. ಸಾಲದ್ದಕ್ಕೆ ಶಾಲೆಗೆ ಹೋಗ್ಬೇಕಾ ಬೇಡ್ವಾ, ಶಾಲೆಗಳನ್ನು ತೆರೆಯಬೇಕಾ ಅಥವಾ ಇನ್ನೂ ಒಂದಷ್ಟು ಸಮಯ ಕಾದು ನೋಡ್ಬೇಕಾ ಎನ್ನುವ ಗೊಂದಲಗಳು ಇನ್ನೂ ಮುಂದುವರೆದಿದೆ. ಈ ಸಂದರ್ಭದಲ್ಲಿ ಲಾಕ್ ಡೌನ್ ಹಂತಹಂತವಾಗಿ ತೆರವಾಗ್ತಾ ಇರೋದ್ರಿಂದ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆರೆಯದೇ ಇದ್ದರೂ ಸ್ಪೋರ್ಟ್ಸ್ ಕ್ಲಬ್​ಗಳು, ಟ್ಯೂಶನ್​ ಗಳು, ಕೋಚಿಂಗ್ ಸೆಂಟರ್​ಗಳು ಕ್ರಮೇಣವಾಗಿ ಆರಂಭವಾಗುತ್ತಿವೆ. ಆದರೆ ಇಂದಲ್ಲಾ ನಾಳೆ ಶಾಲೆಗಳು ತೆರೆಯುವ ಬಗ್ಗ ಎಲ್ಲರಿಗೂ ಆಶಾಭಾವನೆಯಂತೂ ಇದ್ದೇ ಇದೆ. ಕೊರೊನಾ ಮೂರನೇ ಅಲೆ ಮಕ್ಕಳನ್ನೇ ಗುರಿಯಾಗಿಸುತ್ತದೆ ಎನ್ನುವ ಆತಂಕವೂ ಇರೋದ್ರಿಂದ ಈಗಿನಿಂದಲೇ ಮಕ್ಕಳನ್ನು ರೆಡಿ ಮಾಡೋಕೆ ಎಲ್ಲರೂ ಸಜ್ಜಾದಂತಿದೆ. ಇದರ ಒಂದು ಭಾಗವಾಗಿ ಎಲ್ಲೆಲ್ಲೂ ಕೇಳಿ ಬರ್ತಿರೋದು ಫ್ಲೂ ವ್ಯಾಕ್ಸಿನ್ ವಿಚಾರ.

ಫ್ಲೂ ಅಥವಾ Influenza ಇನ್​ಫ್ಲುಯೆನ್ಜಾ ಎನ್ನುವುದು ಒಂದು ಸಾಮಾನ್ಯ ಸೋಂಕು. ಜ್ವರ, ನೆಗಡಿ, ಕೆಮ್ಮು ಮುಂತಾದ ಲಕ್ಷಣಗಳೊಂದಿಗೆ ಎಲ್ಲರೂ ಒಂದಿಲ್ಲೊಂದು ಸಲ ಫ್ಲೂಗೆ ತುತ್ತಾಗಿರುತ್ತೇವೆ. ಆದರೆ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಫ್ಲೂ ಆರ್ಭಟ ಅಷ್ಟೊಂದು ಹೆಚ್ಚಿಲ್ಲ. ಇಲ್ಲಿನ ಜನರಿಗೆ ಫ್ಲೂ ವಿರುದ್ಧ ಹೋರಾಡುವಷ್ಟು ಶಕ್ತಿ ಅವರ ದೇಹದ ರೋಗನಿರೋಧಕ ವ್ಯವಸ್ಥೆಗೆ ಇರುತ್ತದೆ. ಹಾಗಾಗಿ ಪ್ರತೀ ವರ್ಷ ಅದಕ್ಕೊಂದು ಲಸಿಕೆ ತೆಗೆದುಕೊಳ್ಳುವ ಕ್ರಮ ಇಲ್ಲಿ ಇಲ್ಲ. ಆದ್ರೆ ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಫ್ಲೂ ಜನರ ಜೀವವನ್ನೇ ಬಲಿ ಪಡೆಯಬಲ್ಲ ಬಹು ದೊಡ್ಡ ಸೋಂಕು. ಹಾಗಾಗಿ ಅಲ್ಲಿನ ಜನ ಪ್ರತೀ ವರ್ಷ ತಪ್ಪದೇ ಫ್ಲೂ ವ್ಯಾಕ್ಸಿನ್ ಪಡೆಯುತ್ತಾರೆ.

ಇದನ್ನೂ ಓದಿ: 4 ಎಕರೆಯಲ್ಲಿ 55 ವೆರೈಟಿ ಬೆಳೆ ತೆಗೆದ ರೈತ, ಕೊರೊನಾ ಕಾಲದಲ್ಲೂ ಲಕ್ಷಾಂತರ ರೂಪಾಯಿ ಲಾಭ !

ಆದರೆ ಈಗ ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ. ಆದ್ದರಿಂದ ಅಲ್ಲಿಯವರೆಗಿನ ರಕ್ಷಣೆ ಎಂಬಂತೆ ಫ್ಲೂ ವ್ಯಾಕ್ಸಿನ್ ಕೊಡುವ ಕುರಿತು ಚರ್ಚೆ ಜೋರಾಗಿದೆ. ಎಷ್ಟರ ಮಟ್ಟಿಗೆ ಅಂದರೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಲ ಶಾಲೆಗಳು, ಬೆಂಗಳೂರಿನ ಅನೇಕ ಸ್ಪೋರ್ಟ್ಸ್ ಕ್ಲಬ್​ಗಳು ಮಕ್ಕಳಿಗೆ ಮಳೆಗಾಲಕ್ಕಿಂತ ಮುಂಚೆ ಫ್ಲೂ ವ್ಯಾಕ್ಸಿನ್ ಕೊಡಿಸಿಬಿಡಿ ಎಂದು ಪೋಷಕರಿಗೆ ಪತ್ರ ಬರೆದಿವೆ ಎನ್ನಲಾಗಿದೆ. ಫ್ಯೂ ವ್ಯಾಕ್ಸಿನ್ ಪಡೆದರೆ ಒಂದು ವರ್ಷದವರಗೆ ಮಗು ಫ್ಲೂ ಅಂದ್ರೆ ಜ್ವರ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಯಿಂದ ದೂರ ಇರುತ್ತದೆ. ಇದು ಕೊರೊನಾ ಸೋಂಕಿನ ಲಕ್ಷಣವೂ ಆಗಿರೋದ್ರಿಂದ ಅಷ್ಟರಮಟ್ಟಿಗೆ ಮಕ್ಕಳು ಆಸ್ಪತ್ರೆ ಸೇರುವುದನ್ನು ತಪ್ಪಿಸಿದಂತೆ ಆಗುತ್ತದೆ ಎನ್ನುವುದು ಶಾಲೆಗಳ ಲೆಕ್ಕಾಚಾರ.

ಆದ್ರೆ ವೈದ್ಯರು ಇದು ಖಂಡಿತಾ ಅವಶ್ಯಕವಲ್ಲ ಎನ್ನುತ್ತಾರೆ. ಫ್ಲೂ ವ್ಯಾಕ್ಸಿನ್ ನಮ್ಮ ದೇಶದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಮತ್ತು ಈಗಾಗಲೇ ಬೇರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರ ದೀರ್ಘಕಾಲದವರಗೆ ಫ್ಲೂ ವ್ಯಾಕ್ಸಿನ್ ನೀಡಲಾಗುತ್ತದೆ, ಅದು ಕೂಡಾ ವೈದ್ಯರು ಹೇಳಿದ ನಂತರ. ಆದರೆ ಇದ್ಯಾವುದರ ಬಗ್ಗೆ ಅರಿಯದ ಅನೇಕ ಪೋಷಕರು ಬೆಂಗಳೂರಿನ ನಾನಾ ಆಸ್ಪತ್ರೆಗಳ ಬಳಿ ಪ್ರತಿದಿನ ತಮ್ಮ ಮಕ್ಕಳನ್ನು ಕರೆದುಕೊಂಡು ಫ್ಲೂ ವ್ಯಾಕ್ಸಿನ್ ಕೊಡಿ ಎಂದು ಕೇಳುತ್ತಿದ್ದಾರಂತೆ. ಫ್ಲೂ ವ್ಯಾಕ್ಸಿನ್ ಕೋವಿಡ್ ನಿಂದ ಯಾವುದೇ ಕಾರಣಕ್ಕೂ ಮಕ್ಕಳನ್ನು ಕಾಪಾಡುವುದಿಲ್ಲ ಎಂದು ವೈದ್ಯರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅವಶ್ಯಕತೆ ಇಲ್ಲದಿದ್ದಾಗಲೂ ಲಸಿಕೆಗಳನ್ನು ಮಕ್ಕಳಿಗೆ ನೀಡೋದ್ರಿಂದ ನೈಸರ್ಗಿಕವಾಘಿ ಅವರಲ್ಲಿರುವ ರೋಗನಿರೋಧಕ ಶಕ್ತಿಗೆ ಕೆಲಸವೇ ಇಲ್ಲದಂತಾಗುತ್ತದೆ. ಹೀಗಾಗಬಾರದು, ಯಾವಾಗಲೂ ನಮ್ಮ ದೇಹ ತಾನಾಗೇ ಹೋರಾಡಲು ಸಾಧ್ಯವಾಗದ ಖಾಯಿಲೆಗಳು ಅಥವಾ ಪರಿಸ್ಥಿತಿಯಲ್ಲಿ ಮಾತ್ರ ಔಷಧ ಅಥವಾ ಲಸಿಕೆ ನೀಡಬೇಕು ಎನ್ನುತ್ತಾರೆ ವೈದ್ಯರು.

ಹಾಗಾಗಿ ಪೋಷಕರು ಗಾಬರಿ ಬೀಳದೆ ಮಕ್ಕಳಿಗೆ ಅನವಶ್ಯಕವಾಗಿ ಫ್ಲೂ ವ್ಯಾಕ್ಸಿನ್ ಕೊಡಿಸಲು ಮುಗಿಬೀಳಬೇಡಿ. ಮಳೆಗಾಲವೇ ಇರಲಿ ಅಥವಾ ಯಾವುದೇ ಋತು, ಯಾವುದೇ ಸೋಂಕಿರಲಿ ವೈದ್ಯರು ಹೇಳಿದ ಔಷಧಗಳನ್ನು ಮಾತ್ರ ನೀಡಿ.
Published by:Soumya KN
First published: